ಅಂಕಣಗಳು

ಮೋದಿ ತಡೆಯಲು ಪಕ್ಷದೊಳಗೇ ನಡೆಯುತ್ತಿದೆ ಪ್ರಯತ್ನ!

ಕಳೆದ ವಾರ 'ಡೆವಿಲ್ಸ್ ಅಡ್ವೋಕೇಟ್‌' ಸಂದರ್ಶನದಲ್ಲಿ ಅರುಣ್ ಶೌರಿಯವರು...

ಮೋದಿ ತಡೆಯಲು ಪಕ್ಷದೊಳಗೇ ನಡೆಯುತ್ತಿದೆ ಪ್ರಯತ್ನ!
Published On :

'A nation can survive its fools, and even the ambitious. But it cannot survive treason from within.' ಹಾಗಂತ ಕ್ರಿಸ್ತಪೂರ್ವದಲ್ಲೇ ರೋಮನ್ ದಾರ್ಶನಿಕ ಸಿಸೆರೋ ಹೇಳಿದ್ದ. ಆತನ ಮಾತಿನಲ್ಲಿ ಬರುವ "A nation" ಎನ್ನುವುದನ್ನು ತೆಗೆದು, "A Party" ಎಂದು ಹಾಕಿದರೆ ಅದು ಬಿಜೆಪಿಯೆಂಬ ರಾಷ್ಟ್ರೀಯ ಪಕ್ಷದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳಿಗೆ ಕನ್ನಡಿ ಹಿಡಿದಂತಾಗುತ್ತದೆ. ಏಕೆ ಹೀಗೆ ಹೇಳಬೇಕಾಗಿದೆಯೆಂದರೆ...
ಲಾಲ್‌ಕೃಷ್ಣ ಆಡ್ವಾಣಿ
ಸುಷ್ಮಾ ಸ್ವರಾಜ್
ಅನಂತ್‌ಕುಮಾರ್
ಅರುಣ್ ಜೇಟ್ಲಿ
ಈ ನಾಲ್ವರನ್ನು ಟ್ವಿಟ್ಟರ್‌ನಲ್ಲಿ 'ಡೆಲ್ಲಿ-4' ಎನ್ನುತ್ತಾರೆ. ಕಳೆದ ವಾರ 'ಡೆವಿಲ್ಸ್ ಅಡ್ವೋಕೇಟ್‌' ಸಂದರ್ಶನದಲ್ಲಿ ಅರುಣ್ ಶೌರಿಯವರು ಹೇಳಿದ "Stateless Leaders" (ರಾಜ್ಯ ರಹಿತ ರಾಜರು) ಮತ್ತಾರೂ ಅಲ್ಲ ಇವರೇ! ಈ ನಾಲ್ವರನ್ನೂ ಸದಾ ತೆಗಳುವ ವಿನೋದ್ ಶರ್ಮಾ (@vinod_sharma) ಎಂಬ ವ್ಯಕ್ತಿ ಟ್ವಿಟ್ಟರ್‌ನಲ್ಲಿದ್ದಾರೆ. ಬಹುಶಃ ವಿನೋದ್ ಶರ್ಮಾ ಕಳೆದ ಎರಡು ವರ್ಷಗಳಲ್ಲಿ ಇವರನ್ನು ಹಿಗ್ಗಾಮುಗ್ಗಾ ಜಾಡಿಸಿದಷ್ಟು ಯಾರೂ ಜಾಡಿಸಿಲ್ಲ. ಈ ಲೇಖನವನ್ನು ಬರೆಯುವ ವೇಳೆಯಲ್ಲೂ ಅವರು ಮಾಡಿರುವ ಟ್ವೀಟೊಂದನ್ನು ನೋಡಿ- If D4 actually succeeds in sabotaging Modi, then there will be nothing to choose between Cong & BJP, and no need to vote. Or tweet. ಟ್ವಿಟ್ಟರ್‌ನಲ್ಲಿರುವ ಬಿಜೆಪಿಯ ಕಟ್ಟಾ ಬೆಂಬಲಿಗರೂ ಬಹಳಷ್ಟು ಕಾಲ ವಿನೋದ್ ಶರ್ಮಾ ಅವರನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ಆಡ್ವಾಣಿ, ಅನಂತ್, ಅರುಣ್, ಸುಷ್ಮಾರಂಥ 'ದೇವದೇವತೆ'ಗಳನ್ನು ತೆಗಳುವ ಈತ ಡೆಲ್ಲಿ-4 ಬಗ್ಗೆ ಪೂರ್ವಾಗ್ರಹಪೀಡಿತನಾಗಿದ್ದಾನೆ ಎಂದೇ ಭಾವಿಸಿದ್ದರು.
ಆದರೆ...
ಇವತ್ತು ಬಿಜೆಪಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ, ಮಾಡುತ್ತಿರುವ ಪಿತೂರಿಗಳನ್ನು ಕಂಡಾಗ, ಕೊಡುತ್ತಿರುವ ಹೇಳಿಕೆಗಳನ್ನು ನೋಡಿದಾಗ ವಿನೋದ್ ಶರ್ಮಾ ಸತ್ಯವನ್ನೇ ಹೇಳುತ್ತಿದ್ದರು ಎಂದೆನಿಸುವುದಿಲ್ಲವೇ?
ಇಷ್ಟಕ್ಕೂ ಬಿಜೆಪಿಯಲ್ಲಿ ನಡೆಯುತ್ತಿರುವುದಾದರೂ ಏನು?
ಆಗಸ್ಟ್ 15ರಂದೇ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕಿತ್ತು, ಆದರೆ ಅಂದುಕೊಂಡಂತೆ ಆಗಲಿಲ್ಲ. ನಾಳೆ ಹಾಗೂ ನಾಡಿದ್ದು (ಸೆಪ್ಟೆಂಬರ್ 8, 9) ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವ ವಿಚಾರದಲ್ಲಿ ಮತ್ತೆ ಆರ್‌ಎಸ್‌ಎಸ್- ಬಿಜೆಪಿ ಉನ್ನತ ನಾಯಕರ ಸಭೆ ನಡೆಯಲಿದೆ. ಕಳೆದ ಆಗಸ್ಟ್ 1ರಂದೂ ಅಂಥದ್ದೇ ಸಭೆ ನಡೆದಿತ್ತು. ಆಗಲೂ ಪ್ರಯೋಜನವಾಗಿರಲಿಲ್ಲ. ನಾಳಿನ ಸಭೆಯಲ್ಲೂ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ವಿಚಾರದಲ್ಲಿ ಆರೆಸ್ಸೆಸ್ ಪಟ್ಟು ಹಿಡಿಯದಿದ್ದರೆ ನಿರ್ಣಯವಾಗುವುದು ಖಂಡಿತ ಕಷ್ಟ!
ಹಾಗಾದರೆ ಮೋದಿಯವರಿಗೆ ಅಡ್ಡಗಾಲು ಹಾಕುತ್ತಿರುವವರಾದರೂ ಯಾರು, ಯಾಕಾಗಿ?
ಮೊನ್ನೆ ಸೆಪ್ಟೆಂಬರ್ 3ರಂದು ಆಡ್ವಾಣಿ, ಸುಷ್ಮಾ ಸ್ವರಾಜ್‌ರನ್ನು ಭೇಟಿಯಾಗಿದ್ದ ಆರ್‌ಎಸ್‌ಎಸ್‌ನ ಎರಡನೇ ಅತಿ ಪ್ರಮುಖ ನಾಯಕರಾದ ಭಯ್ಯಾಜಿ ಜೋಶಿ, 'ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದನ್ನು ಇನ್ನೂ ವಿಳಂಬ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ. "2014ರ ಲೋಕಸಭೆ ಚುನಾವಣೆಗೆ ನಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡುವುದನ್ನು ಇನ್ನೂ ತಡ ಮಾಡಿದರೆ ಪಕ್ಷ 'ಹಿಟ್‌ವಿಕೆಟ್‌' ಆಗಲಿದೆ" ಎಂದು ಆಗಸ್ಟ್ 31ರಂದು ಹೇಳಿರುವ ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಪರೋಕ್ಷವಾಗಿ ಮೋದಿಯವರನ್ನು ಬೆಂಬಲಿಸಿದ್ದಾರೆ. ಆರ್‌ಎಸ್‌ಎಸ್-ಬಿಜೆಪಿ ನಡುವಿನ ಕೊಂಡಿಯಂತಿರುವ ಸುರೇಶ್ ಸೋನಿ, "ಮೋದಿಯವರನ್ನು ಟೀಕಿಸುವುದನ್ನು ಸಹಿಸಲಾಗದು. ಟೀಕಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗಸ್ಟ್ 17ರಂದು ಬಿಜೆಪಿಗೆ ಸೂಚಿಸಿದ್ದಾರೆ. ಹೀಗೆ ಸಂಘ ಹಾಗೂ ಪಕ್ಷದೊಳಗೇ ಮೋದಿಯವರ ಪರ ಅಲೆಯಿದ್ದರೂ ಪ್ರಧಾನಿ ಅಭ್ಯರ್ಥಿ ಎಂದು ಏಕೆ ಘೋಷಣೆ ಮಾಡುತ್ತಿಲ್ಲ ಗೊತ್ತಾ?!
Unholy Trinity!
ಅವರು ಮತ್ತಾರು ಅಲ್ಲ, ಆಡ್ವಾಣಿ-ಅನಂತ್‌ಕುಮಾರ್-ಸುಷ್ಮಾ ಸ್ವರಾಜ್! ಹಾಗಂತ ಹೇಳಲೇಬೇಕಾದ ಪ್ರಸಂಗ ಬಂದಿದೆ. ಕಳೆದ ಜುಲೈನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು ಪ್ರಚಾರಾಂದೋಲನ ಸಮಿತಿ ಮುಖ್ಯಸ್ಥರನ್ನಾಗಿ ಮಾಡುವುದು ನಿಶ್ಚಿತ ಎಂದು ಗೊತ್ತಾದ ಕೂಡಲೇ 'ಅನಾರೋಗ್ಯ'ದ ನೆಪ ಹೂಡಿ ಹಾಸಿಗೆ ಹಿಡಿದು, ಘೋಷಣೆಯಾದ ಕೂಡಲೇ ಮೇಲೆದ್ದು ರಾಜಿನಾಮೆ ಪತ್ರ ಬರೆದು ಮಾಧ್ಯಮಗಳಿಗೆ ಹರಿಬಿಟ್ಟಾಗಲೇ ಆಡ್ವಾಣಿಯವರಿಗೆ ಪಕ್ಷ ಹಾಗೂ ದೇಶದ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಮೇಲು ಎಂಬುದು ಜಗಜ್ಜಾಹೀರಾಗಿತ್ತು. ಸರಸಂಘ ಚಾಲಕರಾದ ಮೋಹನ್ ಭಾಗವತರ ಮಾತಿಗೆ ಬೆಲೆ ಕೊಟ್ಟು ರಾಜಿನಾಮೆ ವಾಪಸ್ ತೆಗೆದುಕೊಂಡ ನಂತರವಾದರೂ ಸ್ವಲ್ಪ ಸುಧಾರಿಸಬಹುದು ಎಂಬ ಆಶಾವಾದ ಚಿಗುರೊಡೆದಿತ್ತು. ಆದರೆ ಅದೆಲ್ಲ ಸುಳ್ಳು ಎಂಬುದು ಆಗಸ್ಟ್ 15ರಂದು ಮತ್ತೆ ಸಾಬೀತಾಯಿತು. ಅಂದು ಆಡ್ವಾಣಿ ನಡೆದುಕೊಂಡ ರೀತಿಯಾದರೂ ಹೇಗಿತ್ತು ಹೇಳಿ? ನರೇಂದ್ರ ಮೋದಿಯವರು ಪ್ರಧಾನಿಗೆ ಪ್ರತಿಯಾಗಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದರೆ ಅದು ತಪ್ಪೋ, ಸರಿಯೋ ಎಂದು ತೀರ್ಪು ಕೊಡಬೇಕಾದವರು ಜನ. ಅವರನ್ನು ಹೊರತಾಗಿ ಸುದ್ದಿ ಮಾಡುವುದಕ್ಕಾದರೂ ಟೀಕಿಸಬೇಕಾದವರು ವಿರೋಧ ಪಕ್ಷಗಳು. ಆದರೆ ಅಂಥ ಕೆಲಸ ಮಾಡಬೇಕಾದ ದರ್ದು ಆಡ್ವಾಣಿಗೇನಿತ್ತು? ಏಕಾಗಿ ಆಡ್ವಾಣಿ ಮೋದಿಯವರನ್ನು ಟೀಕಿಸಿದರು? ಕಳೆದ 65 ವರ್ಷಗಳಿಂದಲೂ ಸ್ವಾತಂತ್ರ್ಯ ದಿನದಂದು ಪ್ರಧಾನಿಗಳು ಕೆಂಪುಕೋಟೆ ಏರಿ ಸಾಂಪ್ರದಾಯಿಕ ಭಾಷಣ ಮಾಡುತ್ತಲೇ ಬಂದಿದ್ದರು. ಅದನ್ನು ದೇಶ ಕೇಳಿಸಿಕೊಂಡು, ವಿರೋಧ ಪಕ್ಷಗಳು ಸಹಿಸಿಕೊಂಡು ಬಂದಿದ್ದವು. ಇಂಥದ್ದೊಂದು ಸಂಪ್ರದಾಯ, ಶಿಷ್ಟಾಚಾರದಿಂದ ದೇಶಕ್ಕೇನಾದರೂ ಲಾಭವಾಯಿತೇ? ಅಥವಾ ಈ ಬಾರಿ ಮೋದಿಯವರು ಪ್ರಧಾನಿ ಭಾಷಣಕ್ಕೆ ಪ್ರತಿಯಾಗಿ ಮಾತನಾಡಿದ್ದರಿಂದ ಏನಾದರೂ ನಷ್ಟವಾಯಿತೇ? ಅಧ್ಯಕ್ಷನ ಸ್ವಾತಂತ್ರ್ಯ ದಿನದ ಭಾಷಣವನ್ನು ಪ್ರತಿಪಕ್ಷಗಳು ಅದೇ ದಿನ ಟೀಕಿಸುವ ವಾಡಿಕೆ ವಿಶ್ವದ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವವಾದ ಅಮೆರಿಕದಲ್ಲಿರುವಾಗ ಇದೇನೋ ಮಹಾಪರಾಧದಂತೆ ವರ್ತಿಸುವ ಅಗತ್ಯವೇನಿತ್ತು? ಅದಿರಲಿ, ಆ ರೀತಿ ಟೀಕೆ ಮಾಡುವ ಮೂಲಕ ಹೊರಗಿನವರಿಗೆ ಹಾಗೂ ಪಕ್ಷಕ್ಕೆ ಯಾವ ಸಂದೇಶವನ್ನು ಕೊಡಲು ಬಯಸಿದ್ದರು ಆಡ್ವಾಣಿ?
ಇದೆಲ್ಲ ಏನನ್ನು ಸೂಚಿಸುತ್ತದೆ? ಆಡ್ವಾಣಿಯವರ ಸಣ್ಣತನವನ್ನೇ ಅಲ್ಲವೇ?
ಈ ಘಟನೆಯ ಬೆನ್ನಲ್ಲೇ ನರೇಂದ್ರ ಮೋದಿಯವರ ಕಟ್ಟಾ ವಿರೋಧಿ ಹಾಗೂ ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಬರೆದ "Why Modi strikes a chord with the youth and not Rahul" ಎಂದು ಲೇಖನದ ಕೊನೆಯಲ್ಲಿ, "ನನ್ನ 18 ವರ್ಷದ ಮಗ ಮೊದಲ ಸಲದ ಮತದಾರ. ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಬಗ್ಗೆ ನಿನಗೇನನಿಸಿತು? ಸಂದರ್ಭ ಸೂಕ್ತವಾಗಿರಲಿಲ್ಲ ಅಲ್ಲವೆ? ಎಂದು ಕೇಳಿದಾಗ, ಸೂಕ್ತ ಸಂದರ್ಭವೋ ಅಲ್ಲವೋ ನನಗೆ ಗೊತ್ತಿಲ್ಲ, ಕನಿಷ್ಠ ಮೋದಿ ಮಾತನ್ನಾದರೂ ಆಡಿದರು! ಎಂದ ಹಾಗೂ ಅಲ್ಲೇ ನಿಜವಾದ ಕಥೆ ಅಡಗಿದೆ" ಎಂದಿದ್ದಾರೆ. ಈ ಸರಳ ಸತ್ಯವೂ ಬಿಜೆಪಿಯ ನಾಯಕಶಿಖಾಮಣಿಗೆ ಅರ್ಥವಾಗಿಲ್ಲವೆ?
ಬಹಳ ಬೇಸರದ ಸಂಗತಿಯೆಂದರೆ, 2014ರ ಚುನಾವಣೆಯಲ್ಲಿ ಬಿಜೆಪಿಗೆ 200 ಹಾಗೂ ಅದಕ್ಕೂ ಅಧಿಕ ಸೀಟುಗಳು ಬರುವುದು ಆಡ್ವಾಣಿ, ಸುಷ್ಮಾಗೇ ಬೇಕಿಲ್ಲ! ಅವರು ನಡೆದುಕೊಳ್ಳುತ್ತಿರುವ ರೀತಿಯ ಹಿಂದಿರುವ ಉದ್ದೇಶವೇ ಇದೇ ಆಗಿದೆ. ಏಕೆಂದರೆ 160-170ರೊಳಗೆ ನಿಂತರೆ ತಾನೇ ಪ್ರಧಾನಿಯಾಗಬಹುದು ಎಂದು ಆಡ್ವಾಣಿ ಹೊಂಚು ಹಾಕುತ್ತಿದ್ದಾರೆ. ಮೋದಿಯವರನ್ನು ತಡೆದರೆ ಆಡ್ವಾಣಿ ನಂತರ ತಾನು ಉತ್ತರಾಧಿಕಾರಿಯಾಗಬಹುದು ಎಂದು ಸುಷ್ಮಾ ಹವಣಿಸುತ್ತಿದ್ದಾರೆ. ಇನ್ನು ಆಡ್ವಾಣಿ ಪ್ರಧಾನಿಯಾದರಷ್ಟೇ ತನಗೆ ಚೆನ್ನಾಗಿ ಗಿಟ್ಟುವುದು ಎಂದು ಅನಂತ್‌ಕುಮಾರ್‌ಗೂ ಗೊತ್ತು. ಅದಕ್ಕಾಗಿಯೇ ಮೋದಿಯವರ ವಿರುದ್ಧ ಬಣ ಕಟ್ಟಿದ್ದಾರೆ.
ಬಿಜೆಪಿಗೆ ಇವರೆಲ್ಲ ನೀಡಿದ ಕೊಡುಗೆಯ ಹಳೇ ಕಥೆ ಬಿಡಿ, ಇವರೆಲ್ಲರ 'ಈಗಿನ' ಯೋಗ್ಯಾಯೋಗ್ಯತೆಯಾದರೂ ಏನು ಹೇಳಿ?
2009ರಲ್ಲೂ ಹಣದುಬ್ಬರ ಶೇ.20ರ ಆಸುಪಾಸಿನಲ್ಲಿತ್ತು. ಕಾಂಗ್ರೆಸ್ ಬಗ್ಗೆ ಜನರಲ್ಲಿ ಅಸಮಾಧಾನವಿತ್ತು. ವಾಜಪೇಯಿಯವರನ್ನು ಸೋಲಿಸಿದ್ದು ತಪ್ಪು ಎಂಬ ಬೇಸರ ಒಂದಷ್ಟು ಜನರಲ್ಲಿತ್ತು. ಜತೆಗೆ ಕಪ್ಪುಹಣದ ಬಗ್ಗೆ ದೇಶಾದ್ಯಂತ ಆಕ್ರೋಶವಿತ್ತು. ಅದರ ಲಾಭವನ್ನು ಬಿಜೆಪಿಗೆ ತಂದುಕೊಟ್ಟರೇ ಆಗಿನ ಪ್ರಧಾನಿ ಅಭ್ಯರ್ಥಿ ಲಾಲ್‌ಕೃಷ್ಣ ಆಡ್ವಾಣಿ? ಲಾಭದ ಮಾತು ಬಿಡಿ, 136 ಇದ್ದ ಬಿಜೆಪಿ ಸಂಸದರ ಸಂಖ್ಯೆ 2009ರಲ್ಲಿ 116ಕ್ಕಿಳಿಯಿತು! ಅವರು ಗೃಹ ಸಚಿವ ಹಾಗೂ ಉಪಪ್ರಧಾನಿಯಾಗಿದ್ದಾಗಿನ ಸಾಧನೆಯೂ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ, ಈಗಲೂ ಇಲ್ಲ. ಅಕ್ಷರಧಾಮ ಆಕ್ರಮಣ, ಸಂಸತ್ ಮೇಲೆ ದಾಳಿ, ಬಾಂಗ್ಲಾದೇಶದಿಂದ 16 ಬಿಎಸ್‌ಎಫ್ ಯೋಧರ ಹತ್ಯೆ, ಪೀಟರ್ ಬ್ಲೀಚ್ ಬಿಡುಗಡೆ, ಕಂದಹಾರ್ ವಿಮಾನ ಅಪಹರಣ ಇವೇ ಆಡ್ವಾಣಿಯವರ ಬಹುದೊಡ್ಡ ಕೊಡುಗೆಗಳು. ಆರು ವರ್ಷಗಳಲ್ಲಿ ಅವರೊಬ್ಬ ಒಳ್ಳೆಯ ಆಡಳಿತಗಾರ ಎಂದು ಎಂದೂ ಅನಿಸಲಿಲ್ಲ. ಇನ್ನು ಈ ಮಹಾನುಭಾವರು  ಪ್ರತಿಪಕ್ಷ ನಾಯಕರಾಗಿ ಕಳೆದ 9 ವರ್ಷಗಳಲ್ಲಿ ತೋರಿರುವ ಸಾಧನೆಯಾದರೂ ಏನು? ಹಾಲಿ ಸಂಸತ್ ಅಧಿವೇಶನವನ್ನೇ ತೆಗೆದುಕೊಳ್ಳಿ-ತಿಂಗಳ ಕೊನೆಯವರೆಗೂ ಸಂಸತ್ತಿನ ಕಲಾಪವನ್ನು ಹಾಳುಗೆಡವಿ, ಸದನವನ್ನು ಒತ್ತೆಯಾಗಿಟ್ಟುಕೊಂಡು ಅಧಿವೇಶನ ಕೊನೆಗೊಳ್ಳಲು ವಾರವಿದೆಯೆಂದಾಗ ಎಲ್ಲ ಬಿಲ್ಲುಗಳನ್ನೂ (ಮಸೂದೆ) ಕಾಂಗ್ರೆಸ್ ಪಾಸು ಮಾಡಿಕೊಳ್ಳಲು ಸಹಕರಿಸುತ್ತಿರುವ ಈ ಆಡ್ವಾಣಿ, ಸುಷ್ಮಾ, ಅನಂತ್, ಅರುಣ್ ಯಾರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ? ಇವರ ಇಂಥ ನಡತೆಯಿಂದ ಬಿಜೆಪಿಗೆ ಸಿಕ್ಕಿದ್ದು "Obstructionist", ಕಿರಿಕ್ ಪಾರ್ಟಿ ಎಂಬ ಕೆಟ್ಟ ಹೆಸರು, ದೇಶದ ಅರ್ಥವ್ಯವಸ್ಥೆಯನ್ನು ಒತ್ತೆಯಿಟ್ಟು, ತೆರಿಗೆದಾರರ ಹಣವನ್ನು ಪೋಲು ಮಾಡಿ ಆಹಾರ ಭದ್ರತೆ ಕಾಯಿದೆಗೆ ಅಂಗೀಕಾರ ಪಡೆದ ಕರಪ್ಟ್ ಕಾಂಗ್ರೆಸ್ಸಿಗೆ 'ಬಡವರ ಬಂಧು' ಎಂಬ ಪಟ್ಟ! ನೀನು ಹೊಡೆದಂಗೆ ಮಾಡು, ನಾನು ಅತ್ತಂಗೆ ಮಾಡ್ತೀನಿ ಎಂಬ ಕಳ್ಳಾಟ ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಗೂ ಕೇಂದ್ರ ಕಾಂಗ್ರೆಸ್ ನಡುವೆ ಸಂಸತ್ತಿನಲ್ಲಿ ನಡೆಯುತ್ತಿದೆ. ಈ ಬಗ್ಗೆ ಕಳೆದ ವಾರದ ಡೆವಿಲ್ಸ್ ಅಡ್ವೋಕೇಟ್‌ನಲ್ಲಿ ಪ್ರಶ್ನಿಸಿದಾಗ "We should recognise that what happens in Parliament is most often a drama. It is a well rehearsed, staged planned drama. You will shout, I will shout, the Speaker in 5 minutes will say ok adjourned till 12:30' ಎಂದಿದ್ದಾರೆ ಅರುಣ್ ಶೌರಿ. ಅವರು ಹೇಳಿದಂತೆ ಸಂಸತ್ತಿನಲ್ಲಿ ನಡೆಯುತ್ತಿರುವುದು ಬಿಜೆಪಿ ಕೇಂದ್ರ ನಾಯಕರು ಹಾಗೂ ಕಾಂಗ್ರೆಸಿಗರ ನಡುವಿನ ಡ್ರಾಮಾ ಅಷ್ಟೆ. ಇವತ್ತು ದೇಶದ ಜನ ಯಾಕಾಗಿ ಯಾವ ಬಿಜೆಪಿ ಕೇಂದ್ರ ನಾಯಕರ ಬಗ್ಗೆಯೂ ವಿಶ್ವಾಸ ಹೊಂದಿಲ್ಲ ಹಾಗೂ ನರೇಂದ್ರ ಮೋದಿಯವರಲ್ಲಿ ಮಾತ್ರ ನಿಷ್ಠೆ, ಸಮಗ್ರತೆ ಹಾಗೂ ಸಮರ್ಥತೆಯನ್ನು ಕಾಣುತ್ತಿದ್ದಾರೆ, ಅವರೇ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆಂದರೆ ಇದೇ ಕಾರಣಕ್ಕೆ.
ಅದಿರಲಿ, ರಾಬರ್ಟ್ ವಾದ್ರಾ ಭ್ರಷ್ಟಾಚಾರ ಪ್ರಕರಣ ಬಯಲಿಗೆ ಬಂದಾಗ ಸೋನಿಯಾ ಗಾಂಧಿಯವರನ್ನು ಟೀಕಿಸುವಂಥ ಸಣ್ಣ ಎದೆಗಾರಿಕೆಯನ್ನೂ ತೋರದ ಡೆಲ್ಲಿ-4ಗೆ ದೇಶವನ್ನು ಆಳುವ ಯೋಗ್ಯತೆ, ಪ್ರಾಮಾಣಿಕತೆ ಇದೆಯೇ? ಇವರು ಕಾಂಗ್ರೆಸ್ ವಿರುದ್ಧ ಒಂದು ಗಟ್ಟಿಯಾದ ಹೇಳಿಕೆ ಕೊಡಲಿ ನೋಡೋಣ? ಇವರ ಘನ ಕಾರ್ಯವನ್ನು ಸೋನಿಯಾ ಗಾಂಧಿ ಹೊರತೆಗೆಯುತ್ತಾರೆ! ರೆಡ್ಡಿಗಳಿಂದ, ಐಪಿಎಲ್‌ನಲ್ಲಿ ಯಾರ್ಯಾರು ಕಾಸು ತಿಂದಿದ್ದಾರೆ ಎಂಬುದನ್ನು ಬಿಚ್ಚಿಡುತ್ತಾರೆ. ಇನ್ನು ಆಡ್ವಾಣಿಯವರ ಮಗ ರಾಜ್ಯಕ್ಕೆ ಬರುತ್ತಿದ್ದುದ್ದೇ ಹಣ ಕೊಂಡೊಯ್ಯಲು ಎಂದು ಕೆಜೆಪಿಯ ಧನಂಜಯ್‌ಕುಮಾರ್ ಆರೋಪ ಮಾಡಿದಾಗ ರಾಜ್ಯ ಬಿಜೆಪಿ ಯಕಶ್ಚಿತ್ ನಾಯಕರು ಬೊಬ್ಬೆ ಹಾಕಿದರೇ ಹೊರತು ಸ್ವತಃ ಆಡ್ವಾಣಿಯವರು ಏಕೆ ಆರೋಪವನ್ನು ನಿರಾಕರಿಸಲಿಲ್ಲ ಹೇಳಿ? ಇವರಿಗೆ ತಾಕತ್ತಿದ್ದರೆ ದೇಶದ ದುಸ್ಥಿತಿಗೆ ಕಾರಣವಾಗಿರುವ ಸೋನಿಯಾ ಗಾಂಧಿಯವರನ್ನು ನರೇಂದ್ರ ಮೋದಿಯಂತೆ ಟೀಕಿಸಲಿ ನೋಡೋಣ? 2010ರ ಬಿಹಾರ ವಿಧಾನಸಭೆ ಚುನಾವಣೆ ವೇಳೆ 'ಮೋದಿಯವರೇಕೆ ಬಿಹಾರಕ್ಕೆ ಆಗಮಿಸುತ್ತಿಲ್ಲ' ಎಂದು ಪತ್ರಕರ್ತರು ಕೇಳಿದಾಗ 'ಮೋದಿ ಈಸ್ ನಾಟ್ ದಿ ಓನ್ಲಿ ಲೀಡರ್‌' ಎಂದಾಗಲೇ ಸುಷ್ಮಾ ಸ್ವರಾಜ್‌ರ ಸಣ್ಣತನ ಬಯಲಾಗಿದೆ. ಆಡ್ವಾಣಿಯವರ ಕಿವಿ ಚುಚ್ಚಿ ಚುಚ್ಚಿ ಕರ್ನಾಟಕ ಬಿಜೆಪಿಯನ್ನು ಹಾಳುಗೆಡವಿದ ಅನಂತ್ ಕುಮಾರರನ್ನು ಪ್ರತ್ಯೇಕವಾಗಿ ಗುಣಗಾನ ಮಾಡಬೇಕಿಲ್ಲ. ಈ ಅನಂತ್ ಕುಮಾರ್ ಹೇಗೆ ಯಡಿಯೂರಪ್ಪ ನವರು ಬಿಜೆಪಿ ತೊರೆಯುವಂತೆ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದರು ಎಂಬುದನ್ನು ಮೊನ್ನೆ ಗುರುವಾರ ಸಂಸತ್ತಿನಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಸ್ವತಃ ಬಣ್ಣಿಸಿದ್ದಾರೆ! ದಿಲ್ಲಿಯ ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ಅದರ ವರದಿ ನೋಡಿ...
ಇನ್ನು ಡೆಲ್ಲಿ-4ನಲ್ಲಿ ಒಬ್ಬರಾಗಿರುವ ಅರುಣ್ ಜೇಟ್ಲಿಯವರಲ್ಲಿ ಪ್ರಧಾನಿ ಸ್ಥಾನದ ಮಹತ್ವಾಕಾಂಕ್ಷೆಯಿದ್ದರೂ ಅವರೊಬ್ಬ ವ್ಯಾವಹಾರಿಕ ಮನುಷ್ಯ. ಪ್ರಪಂಚ ಜ್ಞಾನವಿದೆ. ಜನರ ಹಾಗೂ ಕಾರ್ಯಕರ್ತರ ನಾಡಿಮಿಡಿತ, ಪಕ್ಷದ ಭವಿಷ್ಯವನ್ನು ಅರ್ಥಮಾಡಿಕೊಂಡು ಮೋದಿಯವರ ಬೆಂಬಲಕ್ಕೆ ನಿಂತಿದ್ದಾರೆ.
ಆದರೆ ಉಳಿದ ಮೂವರು ಪಕ್ಷ ಹಾಗೂ ದೇಶವನ್ನು ಎತ್ತ ಕೊಂಡೊಯ್ಯಬೇಕೆಂದಿದ್ದಾರೆ? ಅವರು ಕೊಡುತ್ತಿರುವ ಕಾರಣಗಳಾದರೂ ಯಾವುವು ಗೊತ್ತೆ?
"ಇಲ್ಲ ಇಲ್ಲ ಈಗಲೇ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದು ಬೇಡ. ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆ ನಂತರ ನೋಡೋಣ. ಈಗಲೇ ಘೋಷಿಸಿದರೆ ಮುಸ್ಲಿಮರು ಪೋಲ್‌ರೈಸ್ ಅಥವಾ ಧ್ರುವೀಕರಣಗೊಳ್ಳುತ್ತಾರೆ. ಆದರಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು" ಎಂದು ಆಡ್ವಾಣಿ ಗ್ಯಾಂಗ್ ಕುಂಟು ನೆಪ ಹೇಳಲಾರಂಭಿಸಿದೆ! ನೀವೇ ಹೇಳಿ, ಮುಸ್ಲಿಮರು ಸ್ವತಂತ್ರ ಭಾರತದ ಯಾವ ಚುನಾವಣೆಯಲ್ಲಿ ಧ್ರುವೀಕರಣಗೊಂಡಿರಲಿಲ್ಲ, ಒಂದೇ ಪಕ್ಷದ ಪರವಾಗಿ ಮತ ಹಾಕಿರಲಿಲ್ಲ?! ಪ್ರತಿ ಚುನಾವಣೆಯಲ್ಲೂ ಮುಸ್ಲಿಮರು ಸಂಘಟಿತವಾಗಿಯೇ ಮತ ನೀಡುತ್ತಾರೆ. ಹಾಗಿರುವಾಗ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಪೋಲ್‌ರೈಸ್ ಆಗುತ್ತಾರೆ ಎಂಬುದರಲ್ಲಿ ಯಾವ ಹುರುಳಿದೆ? ಇದಕ್ಕೆ ಪ್ರತಿಯಾಗಿ, ಮೋದಿ ಪ್ರಧಾನಿ ಅಭ್ಯರ್ಥಿಯಾದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದುಗಳೂ ಧ್ರುವೀಕರಣಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಮೋದಿಯವರ ಅಭಿವೃದ್ಧಿ ಮಂತ್ರ ಇಂದು ಯುವಕರ ಎದೆಯ ಕದ ತಟ್ಟಿದೆ ಹಾಗೂ ಯುವ ಮತಗಳ ಧ್ರುವೀಕರಣವಾಗುತ್ತಿದೆ. ಅದನ್ನು ಎಲ್ಲ ಸಮೀಕ್ಷೆಗಳೂ ತೋರುತ್ತಿವೆ. ಮೊದಲೆಲ್ಲ ಭಯೋತ್ಪಾದನೆ, ಪ್ರತ್ಯೇಕತೆ, ದೇಶ ವಿರೋಧಿ ಚಟುವಟಿಕೆಯೆಂದರೆ ಕಾಶ್ಮೀರ-ಅಸ್ಸಾಂ-ನಾಗಾಲ್ಯಾಂಡ್ ಮುಂತಾದ ಗಡಿ ರಾಜ್ಯಗಳು ನೆನಪಾಗುತ್ತಿದ್ದವು. ಇಂದು ದೇಶದ ಮೂಲೆ ಮೂಲೆಗಳಲ್ಲೂ ಭಯೋತ್ಪಾದಕರನ್ನು, ದೇಶ ವಿರೋಧಿಗಳನ್ನು ಕಾಣಬಹುದು. ಹಾಗಾಗಿ ಆತಂಕಕಾರಿ ಬೆಳವಣಿಗೆಗಳು, ಅಪಾಯಗಳನ್ನು ಪತ್ರಿಕೆಗಳಲ್ಲಿ ಓದಬೇಕಿಲ್ಲ, ನಮ್ಮೆಲ್ಲರ  ಕಣ್ಣೆದುರಿಗೇ ಇವೆ. ಈ ಆತಂಕವನ್ನು ಹೋಗಲಾಡಿಸಬಲ್ಲ, ಭದ್ರತೆಯನ್ನು ಕೊಡಬಲ್ಲ ನಾಯಕತ್ವವನ್ನು ಜನ ಮೋದಿಯವರಲ್ಲಿ ಕಾಣುತ್ತಿದ್ದಾರೆ. ಈ ಅಂಶ ಕೂಡ ಮತ್ತೊಂದು ರೀತಿಯ ಮತ ಧ್ರುವೀಕರಣವನ್ನು ಬಿಜೆಪಿಗೆ ಕೊಡಬಲ್ಲದು. ಇದರ ಮುಂದೆ ಮೈನಾರಿಟಿ ಧ್ರುವೀಕರಣ ನಿಲ್ಲಲು ಸಾಧ್ಯವೆ? ಇವತ್ತು ದೇಶಾದ್ಯಂತ ಎದ್ದಿರುವ ಕಾಂಗ್ರೆಸ್ ವಿರೋಧಿ ಅಲೆ ಬಿಜೆಪಿ ಪರ ಬೀಸುತ್ತಿರುವುದಕ್ಕೆ ಅದರ (ಅಘೋಷಿತ) ಪ್ರಧಾನಿ ಅಭ್ಯರ್ಥಿ ನರೇಂದ್ರ ದಾಮೋದರದಾಸ್ ಮೋದಿ ಎಂಬ ಏಕಮಾತ್ರ ಕಾರಣಕ್ಕೆ. ಡಿಫೆನ್ಸ್ ಬಜೆಟ್, ಡಿಫೆನ್ಸ್ ಪ್ರೊಡಕ್ಷನ್, ಮ್ಯಾನ್ಯುಫ್ಯಾಕ್ಚರಿಂಗ್, ಅದರಿಂದ ಎಷ್ಟು ಜನಕ್ಕೆ ಕೆಲಸ ಸಿಗುತ್ತದೆ, ಟೀಚರ್ಸ್ ಎಕ್ಸ್ಪೋರ್ಟ್ ಇಂಥ ಭಾಷೆಯಲ್ಲಿ ಮೋದಿಯವರನ್ನು ಬಿಟ್ಟರೆ ಬೇರಾರಾದರೂ ಮಾತನಾಡಿದ್ದನ್ನು ನೋಡಿದ್ದೀರಾ? ಈ ಭಾಷೆಯಲ್ಲಿ ಆಡ್ವಾಣಿ, ಸುಷ್ಮಾ, ಅನಂತ್‌ಕುಮಾರ್ ಎಂದಾದರೂ ಮಾತನಾಡಿದ್ದನ್ನು ಕೇಳಿದ್ದೀರಾ? 'ಮೋದಿ ನಾಯಕತ್ವದಡಿ ಬಿಜೆಪಿ 230 ಸೀಟು ಗೆದ್ದರೂ ಆಶ್ಚರ್ಯವಿಲ್ಲ' ಎಂದು ಅರುಣ್ ಶೌರಿ ಹೇಳಿರುವುದು ಇದೇ ಕಾರಣಕ್ಕೆ.
ಅದನ್ನು ಅರ್ಥಮಾಡಿಕೊಂಡಿರುವ ಸಂಘ ಹಾಗೂ ಪಕ್ಷ ಆದಷ್ಟು ಬೇಗ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ಇಲ್ಲವಾದರೆ ಆಡ್ವಾಣಿ-ಅನಂತ್-ಸುಷ್ಮಾ ಕುತಂತ್ರಕ್ಕೆ ಪಕ್ಷ ಹಾಗೂ ದೇಶ ಬಲಿಯಾಗಬೇಕಾಗುತ್ತದೆ. ಇಷ್ಟಕ್ಕೂ ಸಿಸೆರೋ ಹೇಳಿದಂತೆ, ಬಾಹ್ಯ ಶತ್ರುಗಳಿಗಿಂತ ಒಳಗಿನ ದ್ರೋಹಿಗಳೇ ಅಪಾಯಕಾರಿ!

- ಪ್ರತಾಪ್ ಸಿಂಹ
mepratap@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.