ದೇವರೇ, ಅಗಾಧ ನಿನ್ನ ಕರುಣೆಯ ಕಡಲು...
ಆ ಮಹಾನಗರದ ಸಂಘ ಸಂಸ್ಥೆಯವರು ಬಹಳ ದಿನಗಳಿಂದಲೂ ಸನ್ಮಾನ ಕಾರ್ಯಕ್ರಮಕ್ಕೆ...

ಆ ಮಹಾನಗರದ ಸಂಘ ಸಂಸ್ಥೆಯವರು ಬಹಳ ದಿನಗಳಿಂದಲೂ ಸನ್ಮಾನ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡುವಂತೆ ಡಾ. ಅಹಮದ್‌ರನ್ನು ಕೋರುತ್ತಲೇ ಇದ್ದರು. ಆದರೆ ಪ್ರತಿ ಬಾರಿಯೂ ಅಹಮದ್ ಆ ಕೋರಿಕೆಯನ್ನು ತಳ್ಳಿ ಹಾಕುತ್ತಲೇ ಬಂದಿದ್ದರು. ಆದರೆ ಈ ಬಾರಿ ಅದೇ ಮಹಾನಗರದಲ್ಲಿ ಒಂದು ಮೆಡಿಕಲ್ ಕಾನ್ಫರೆನ್ಸ್ ಏರ್ಪಾಡಾಗಿತ್ತು. ಅಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಲು ಹಾಗೂ ಸಮಾರೋಪ ಭಾಷಣ ಮಾಡಲು ಅಹಮದ್‌ಗೆ ಕರೆ ಬಂದಿತ್ತು. ಈ ಸಂದರ್ಭದಲ್ಲಿಯೇ ಡಾಕ್ಟರನ್ನು ಸನ್ಮಾನಿಸಲು ಸಂಘ ಸಂಸ್ಥೆಯವರು ಸಿದ್ಧತೆ ಮಾಡಿಕೊಂಡಿದ್ದರು.
ಸಮಾರಂಭದ ಹಿಂದಿನ ದಿನ ಡಾ. ಅಹಮದ್ ವಿಮಾನ ಹತ್ತಿದ. ಮರುದಿನ ತುಂಬ ವಿಶಿಷ್ಟ ಮಾಹಿತಿಗಳಿಂದ ಕೂಡಿರುವ ಪ್ರಬಂಧವನ್ನು ಹೇಗೆ ಮಂಡಿಸಬೇಕು, ಮಧ್ಯೆ ಮಧ್ಯೆ ಎದುರಾಗುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು, ತನ್ನ ಪ್ರಬಂಧ ವಿಶಿಷ್ಟವಾದುದು ಎಂದು ಹೇಗೆ ಸಮರ್ಥಿಸಿಕೊಳ್ಳಬೇಕು, ಆನಂತರದ ಸಮಾರೋಪ ಭಾಷಣದಲ್ಲಿ ಯಾವ್ಯಾವ ವಿಷಯ ಪ್ರಸ್ತಾಪಿಸಬೇಕು ಎಂದು ಪಾಯಿಂಟ್ಸ್ ಗುರುತು ಮಾಡಿಕೊಳ್ಳುತ್ತಿದ್ದ. ಆಗಲೇ ಗಗನಸಖಿ ತುಂಬ ಬೇಸರದ ದನಿಯಲ್ಲಿ ಹೇಳಿದಳು. 'ಪ್ರಿಯ ಪ್ರಯಾಣಿಕ ಬಂಧುಗಳೇ, ದಯವಿಟ್ಟು ಕ್ಷಮಿಸಿ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಹತ್ತಿರದಲ್ಲಿರುವ ಏರ್‌ಪೋರ್ಟ್‌ನಲ್ಲಿ ವಿಮಾನ ಇಳಿಯಲಿದೆ. ಈ ತೊಂದರೆಗಾಗಿ ವಿಷಾದಿಸುತ್ತೇವೆ. ದಯವಿಟ್ಟು ಸಹಕರಿಸಿ...'
ತೀರಾ ಆಕಸ್ಮಿಕವಾಗಿ ಎದುರಾದ ಈ ತೊಂದರೆಯಿಂದ ಡಾ. ಅಹಮದ್ ಕಂಗಾಲಾದ. ಮೆಡಿಕಲ್ ಕಾನ್ಫರೆನ್ಸ್ ಅವನ ಪಾಲಿಗೆ ಅತ್ಯಮೂಲ್ಯವಾಗಿತ್ತು. ಏನಾದರೂ ಸರಿ, ಕಾನ್ಫರೆನ್ಸ್‌ಗೆ ಹೋಗಲೇಬೇಕು ಎಂದು ನಿರ್ಧರಿಸಿದ ಆತ ವಿಮಾನ ನಿಲ್ದಾಣದಲ್ಲಿದ್ದ ಅಧಿಕಾರಿಗಳ ಬಳಿಗೆ ಹೋಗಿ ತನ್ನ ಸಂಕಟ ಹೇಳಿಕೊಂಡ. ತಕ್ಷಣಕ್ಕೆ ಇರುವ ಬೇರೊಂದು ವಿಮಾನಕ್ಕೆ ಟಿಕೆಟ್ ಕೊಡಿ ಪ್ಲೀಸ್ ಎಂದ. 'ಸಾರಿ ಸರ್. ಮುಂದಿನ 10 ಗಂಟೆಗಳವರೆಗೂ ನೀವು ತಿಳಿಸಿದ ಮಹಾನಗರಕ್ಕೆ ವಿಮಾನ ಸೌಲಭ್ಯ ಇಲ್ಲ. ಆದ್ರೆ ಸರ್, ನೀವು ಹೇಳಿದ ಮಹಾನಗರಕ್ಕೆ ಕಾರಲ್ಲಿ ಹೋಗಬಹುದು. ಐದೇ ಗಂಟೆಯಲ್ಲಿ ಆ ಜಾಗ ತಲುಪಬಹುದು. ಬ್ಯಾಡ್‌ಲಕ್. ಇವತ್ತು ಟ್ಯಾಕ್ಸಿ ಡ್ರೈವರ್‌ಗಳು ಮುಷ್ಕರ ಹೂಡಿದ್ದಾರೆ. ಸ್ವಲ್ಪ ಎಕ್ಸ್ ಟ್ರಾ ದುಡ್ಡು ಕಟ್ಟಿಸಿಕೊಂಡು, ನಿಮ್ಮ ಐಡೆಂಟಿಟಿ ತಿಳಿಸುವ ದಾಖಲೆಗಳ ಜೆರಾಕ್ಸ್ ತಗೊಂಡು ಬಾಡಿಗೆಗೆ ಕಾರ್ ದೊರಕಿಸುವ ವ್ಯವಸ್ಥೆ ಮಾಡಿಕೊಡ್ತೇವೆ ಸರ್...' ಎಂದರು.
ಏರ್‌ಪೋರ್ಟ್ ಅಧಿಕಾರಿಗಳ ಎಲ್ಲ ಷರತ್ತುಗಳಿಗೂ ಒಪ್ಪಿದ ಅಹಮದ್, ರೂಟ್ ಮ್ಯಾಪ್ ಜೊತೆಗಿಟ್ಟುಕೊಂಡು ಹೊರಟ. ದಾರಿಯ ಮಧ್ಯೆ ಸಿಗುವ ಯಾವುದಾದರೂ ಹೋಟೆಲಿನಲ್ಲಿ ಊಟ ಮಾಡಿ, ಬೇಗ ಆ ಮಹಾನಗರ ತಲುಪಬೇಕೆಂಬ ನಿರ್ಧಾರ ಅವನದಾಗಿತ್ತು. ಆತ ಅರ್ಧದಾರಿ ಪ್ರಯಾಣ ಮುಗಿಸಿದ್ದ. ಆಗಲೇ ಏಕಾಏಕಿ ವಾತಾವರಣ ಬದಲಾಯಿತು. ಇದ್ದಕ್ಕಿದ್ದಂತೆಯೇ ಬಿರುಗಾಳಿ ಆರಂಭವಾಯಿತು. ಅದರ ಹಿಂದೆಯೇ ಗುಡುಗು, ಮಿಂಚಿನಿಂದ ಕೂಡಿದ ಧಾರಾಕಾರ ಮಳೆ ಸುರಿಯಿತು. ಈ ಮಧ್ಯೆಯೂ ಪಟ್ಟು ಬಿಡದೆ ಡ್ರೈವ್ ಮಾಡುತ್ತಿದ್ದ ಡಾಕ್ಟರ್ ಅಹಮದ್, ಮಳೆಯ ಕಾರಣದಿಂದ ದಾರಿ ತಪ್ಪಿ ಬಿಟ್ಟ.
ಒಂದು ಕಡೆ ದಾರಿ ತಪ್ಪಿ ಎಲ್ಲ ಪ್ಲಾನ್ ಉಲ್ಟಾ ಆಯ್ತೆಂಬ ಸಂಕಟ, ಮತ್ತೊಂದೆಡೆ ಹಸಿವು, ಇಷ್ಟು ಸಾಲದೆಂಬಂತೆ ಜುರ್ರೋ ಎಂದು ಸುರಿವ ಮಳೆಯ ಮಧ್ಯೆ ಪ್ರಯಾಣ ಮುಂದುವರಿಸಲು ಸಾಧ್ಯವೇ ಇರಲಿಲ್ಲ. ಒಂದು ಕಡೆ ಕಾರ್ ನಿಲ್ಲಿಸಿದ ಅಹಮದ್, ಸುತ್ತಮುತ್ತ ಯಾವುದಾದರೂ ಮನೆಯಿದೆಯಾ ಎಂದು ಹುಡುಕಿದ. ಅವನ ಅದೃಷ್ಟಕ್ಕೆ ಅಲ್ಲೊಂದು ಹಳೆಯ ಒಂಟಿ ಮನೆ ಕಾಣಿಸಿತು. ಈತ ಅವಸರದಿಂದ ಹೋಗಿ ಬಾಗಿಲು ಬಡಿದ. ಕದ ತೆರೆದ ಅಜ್ಜಿಯೊಬ್ಬಳು, ಅನುಮಾನದಿಂದಲೇ -'ಒಳಗೆ ಬಾಪ್ಪಾ' ಎಂದಳು. ಈತ ಮತ್ತದೇ ಅವಸರದಿಂದ -'ಬೇರೆ ಊರಿಗೆ ಹೋಗ್ತಾ ಇದ್ದೆ. ಮಳೇಲಿ ದಾರಿ ತಪ್ಪಿದ್ದೀನಿ. ಇಲ್ಲಿಂದ ಒಂದು ಫೋನ್ ಮಾಡಬಹುದಾ?' ಎಂದು ಕೇಳಿದ.
'ಕ್ಷಮಿಸಪ್ಪಾ, ನಮ್ಮ ಮನೇಲಿ ಕರೆಂಟ್ ಆಗಲಿ, ಫೋನ್ ಆಗಲಿ ಇಲ್ಲ. ಅಷ್ಟೊಂದು ಅನುಕೂಲ ನನಗಿಲ್ಲ. ಮಳೇಲಿ ನೆನಕೊಂಡು ಬಂದಿದ್ದೀರ. ಟೀ ಕೊಡ್ತೇನೆ. ಸ್ವಲ್ಪ ತಿಂಡಿ ಕೊಡ್ತೇನೆ. ತಿಂದು ಹೋಗಿ' ಎಂದಳು ಅಜ್ಜಿ. ವಿಪರೀತ ಹಸಿವಾಗಿದ್ದರಿಂದ ಆಕೆಯ ಆಹ್ವಾನವನ್ನು ಡಾ. ಅಹಮದ್ ತಕ್ಷಣವೇ ಒಪ್ಪಿಕೊಂಡ. ಇಷ್ಟಾದರೂ, ನೀವು ಯಾರು, ಏನ್ಮಾಡ್ತಾ ಇದೀರ ಎಂದು ಆಕೆ ಕೇಳಲಿಲ್ಲ. ತನ್ನ ಪರಿಚಯವನ್ನು ಅಹಮದ್ ಕೂಡ ಹೇಳಿಕೊಳ್ಳಲಿಲ್ಲ. ಅವನ ಮುಂದೆ ಟೀ ಹಾಗೂ ತಿಂಡಿಯ ಪ್ಲೇಟ್ ಇಟ್ಟ ಆಕೆ, 'ನೀವು ತಗೋಳ್ತಾ ಇರಿ., ನಾನು ಪ್ರಾರ್ಥನೆ ಮುಗಿಸಿ ಬಂದು ಬಿಡ್ತೇನೆ' ಎಂದಳು.
ಆ ಮನೆಯ ಮೂಲೆಯಲ್ಲಿ ದೇವರ ಪಟವಿತ್ತು. ಅಜ್ಜಿ ತನ್ಮಯಳಾಗಿ ಪ್ರಾರ್ಥನೆಗೆ ಕೂತಳು. ಹೀಗೇ ಅರ್ಧ ಗಂಟೆ ಕಳೆಯಿತು. ಆಕೆಯ ಪ್ರಾರ್ಥನೆ ಮುಗಿಯಲೇ ಇಲ್ಲ. ಆ ವೇಳೆಗೆ ಅಹಮದ್ ಇಡೀ ಮನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ. ಮನೆಯ ಇನ್ನೊಂದು ಮೂಲೆಯಲ್ಲಿದ್ದ ತೊಟ್ಟಿಲಲ್ಲಿ ಮಗುವೊಂದು ನಿದ್ರಿಸುತ್ತಿತ್ತು. ಪ್ರಾರ್ಥನೆಗೆ ಕೂತಿದ್ದ ಅಜ್ಜಿ, ಆಗಾಗ್ಗೆ ಕೆನ್ನೆ ಒರೆಸಿಕೊಳ್ಳುತ್ತಿದ್ದಳು. ಓಹ್, ಅಜ್ಜಿಗೆ ಏನೋ ಕಷ್ಟ ಇರಬೇಕು. ಅದಕ್ಕೇ ದೇವರ ಮುಂದೆ ಕೂತು ಅಳುತ್ತಿದ್ದಾಳೆ. ಆಕೆಗೆ ಏನಾದರೂ ಸಹಾಯ ಮಾಡಿ ಹೋಗಿ ಬಿಡಬೇಕು ಅಂದುಕೊಂಡ ಅಹಮದ್. ಅದೇ ವೇಳೆಗೆ ಅಜ್ಜಿ, ಪ್ರಾರ್ಥನೆ ಮುಗಿಸಿ ಎದ್ದು ಬಂದಳು.
ಹೊರಗೆ ಮಳೆಯ ಅಬ್ಬರ ಕಡಿಮೆಯಾಗಿತ್ತು. ತಿಂಡಿ-ಟೀ ಎರಡೂ ಚೆನ್ನಾಗಿತ್ತು. ಥ್ಯಾಂಕ್ಸ್ ಎಂದ ಅಹಮದ್ ನಂತರ ನೇರವಾಗಿ ಕೇಳಿದ: 'ಅಜ್ಜೀ, ನಾನೂ ಗಮನಿಸಿದೆ. ಪ್ರಾರ್ಥನೆಗೆ ಕೂತಿದ್ದಾಗ ನೀನು ಮತ್ತೆ ಮತ್ತೆ ಅಳುತ್ತಿದ್ದೆಯಲ್ಲ ಯಾಕೆ? ಏನಾದ್ರೂ ಸಹಾಯ ಬೇಕಿದ್ರೆ ದಯವಿಟ್ಟು ಕೇಳು. ನನ್ನ ಕೈಲಾದದ್ದು ಮಾಡ್ತೇನೆ...
ಅಜ್ಜಿ ಸಂಕಟದಿಂದ ಹೇಳಿದಳು: 'ನನಗೆ ಯಾವ ಸಹಾಯವೂ ಬೇಡ ಕಣಪ್ಪಾ. ದೇವರು ನನ್ನ ಎಲ್ಲ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದಾನೆ. ಆದರೆ ಒಂದನ್ನು ಮಾತ್ರ ಈವರೆಗೂ ಕೇಳಿಸಿಕೊಂಡಿಲ್ಲ. ಅದು ನೆನಪಾದಗೆಲ್ಲ ಅಳು ಬರುತ್ತೆ. ಪ್ರಾರ್ಥನೆಯ ಸಮಯದಲ್ಲೇ ಅತ್ತು ಹಗುರಾಗ್ತೀನಿ...'
'ಅಂಥ ಕಷ್ಟ ಯಾವುದು ಅಂತ ಕೇಳಬಹುದಾ ಅಜ್ಜೀ...? ಅಹಮದ್ ಕುತೂಹಲದಿಂದ ಪ್ರಶ್ನಿಸಿದ. ಆಗ, ತೊಟ್ಟಿಲ ಕಡೆಗೆ ಕೈ ಮಾಡಿ ಅಜ್ಜಿ ಹೇಳಿದಳು: 'ಅಲ್ಲಿ ಮಲಗಿದೆಯಲ್ಲ, ಅದು ನನ್ನ ಮೊಮ್ಮಗು. ಅದರ ಅಪ್ಪ-ಅಮ್ಮ ನಾಲ್ಕು ತಿಂಗಳ ಹಿಂದೆ ಕಾರ್ ಆಕ್ಸಿಡೆಂಟ್‌ನಲ್ಲಿ ಸತ್ತು ಹೋದ್ರು. ಈ ಮಗೂಗೆ ದಿಕ್ಕು ದೆಸೆ ಅಂತ ಇರೋದು ನಾನೊಬ್ಳೇ. ನಮ್ಮ ದುರಾದೃಷ್ಟ ಎಂಥಾದ್ದು ಗೊತ್ತೇನಪ್ಪ? ಈ ಮಗೂಗೆ ಅದ್ಯಾವ್ದೋ ಕ್ಯಾನ್ಸರ್ ಅಂತೆ. ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚಿದೆಯಂತೆ. ಈ ಮಗೂಗೆ ಇರುವ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡೋದ್ರಲ್ಲಿ ಅದ್ಯಾರೋ ಅಹಮದ್ ಅನ್ನೋ ಡಾಕ್ಟರು, ಬಹಳ ದೂರದಲ್ಲಿ ಇದ್ದಾರಂತೆ. ಅವರನ್ನು ಭೇಟಿಯಾಗೋಕೆ ಒಮ್ಮೆ ಅವಕಾಶ ಮಾಡಿಕೊಡಪ್ಪಾ ಎಂದು ಪ್ರಾರ್ಥಿಸ್ತಾನೇ ಇದೀನಿ. ಆದ್ರೆ ಭಗವಂತ ನನ್ನ ಮೊರೆಯನ್ನು ಕೇಳಿಸಿಕೊಳ್ತಾನೇ ಇಲ್ಲ...'
ಅಜ್ಜಿಯ ಬಾಯಿಂದ ತನ್ನ ಹೆಸರು ಕೇಳಿದ ತಕ್ಷಣ ಡಾಕ್ಟರ್ ಅಹಮದ್‌ಗೆ ರೋಮಾಂಚನವಾಯಿತು. ಆತ ಮತ್ತೆ ಎಲ್ಲವನ್ನೂ ನೆನಪಿಸಿಕೊಂಡ. ವಿಮಾನ ಪ್ರಯಾಣ ಅರ್ಧಕ್ಕೇ ನಿಂತಿದ್ದು , ಕಾರ್‌ನಲ್ಲಿ ಅದು ಮುಂದುವರಿದದ್ದು, ಮಳೆಯ ನೆಪದಲ್ಲಿ ದಾರಿ ತಪ್ಪಿದ್ದು, ಸಂಘಟಕರಿಗೆ ಫೋನ್ ಮಾಡಲು ನಿರ್ಧರಿಸಿದಾಗಲೇ ಈ ಅಜ್ಜಿಯ ಮನೆ ಕಾಣಿಸಿದ್ದು... ಇದ್ಯಾವುದೂ ಆಕಸ್ಮಿಕವಲ್ಲ. ಇದೆಲ್ಲಾ ದೇವರ ಆಟ ಅಂದುಕೊಂಡ. ಮರುಕ್ಷಣವೇ ಅಜ್ಜಿಯ ಕೈ ಹಿಡಿದು ಕಣ್ಣಿಗೆ ಒತ್ತಿಕೊಂಡು-'ನೀವು ಹೇಳಿದ್ರಲ್ಲ ಅಜ್ಜೀ, ಆ ಡಾಕ್ಟರ್ ನಾನೇ' ಎಂದ. ನಂತರದ ಎರಡೇ ನಿಮಿಷದಲ್ಲಿ ಅದುವರೆಗೂ ನಡೆದದ್ದನ್ನೆಲ್ಲ ವಿವರಿಸಿ-'ಮಗೂಗೆ ಫ್ರೀಯಾಗಿ ಟ್ರೀಟ್‌ಮೆಂಟ್ ಕೊಡ್ತೇನೆ. ನಮ್ಮ ಆಸ್ಪತ್ರೆಗೇ ಹೋಗೋಣ. ಹೊರಗೆ ಕಾರ್ ಇದೆ. ನೀವು ರೆಡಿಯಾಗಿ' ಅಂದ.
ಎಲ್ಲವೂ ಒಂದು ಕನಸಿನಂತೆ ನಡೆದು ಹೋಗಿತ್ತು. ಮಗುವಿನೊಂದಿಗೆ ಹೊರಡುವ ಮುನ್ನ ದೇವರ ಮುಂದೆ ಕೂತ ಅಜ್ಜಿ ಗದ್ಗದಳಾಗಿ ಹೇಳಿದಳು: 'ಭಗವಂತಾ, ನಿನ್ನ ದಯೆ ದೊಡ್ಡದು. ನನ್ನ ಕಷ್ಟವನ್ನು ಎಷ್ಟು ಬೇಗ ಪರಿಹರಿಸಿಬಿಟ್ಟೆಯಲ್ಲ; ನಿಂಗೆ ಋಣಿ..'
---
ಅದು ದೇವಲೋಕದ ಪ್ರಾಂಗಣ. ಹೊಸ ಜೀವವೊಂದನ್ನು ಭೂಮಿಗೆ ಕಳಿಸಲು ಅಲ್ಲಿ ಸಿದ್ಧತೆ ನಡೆದಿತ್ತು. ದೇವದೂತರೆಲ್ಲ ತಮಗೆ ವಹಿಸಲಾಗಿದ್ದ ಕೆಲಸಗಳ ನಿರ್ವಹಣೆಯಲ್ಲಿ ಮಗ್ನರಾಗಿದ್ದರು. ಭೂಮಿಯಲ್ಲಿ ಅವತರಿಸಲು ಕ್ಷಣಗಣನೆ ಎದುರಿಸುತ್ತಿತ್ತಲ್ಲ; ಆ ಮಗುವಿನ ಸನಿಹದಲ್ಲೇ ದೇವರು ನಿಂತಿದ್ದ. ಆಗ ಇದ್ದಕ್ಕಿದಂತೆಯೇ ಆ ಮಗು ದೇವರನ್ನು ಕೇಳಿ ಬಿಟ್ಟಿತು: 'ಭಗವಂತಾ, ಈಗ ನನ್ನನ್ನು ಹೊಸದೊಂದು ಲೋಕಕ್ಕೆ ಕಳಿಸಲಾಗುವುದು ಎಂದು ಇಲ್ಲಿ ಇರುವವರೆಲ್ಲ ಮಾತಾಡ್ತಾ ಇದಾರೆ. ನಾನು ಇನ್ನೂ ಚಿಕ್ಕವನು. ನನಗೆ ಎದ್ದು ನಿಲ್ಲುವ ಶಕ್ತಿಯಿಲ್ಲ. ಇನ್ನೊಬ್ಬರ ಸಹಾಯವಿಲ್ಲದೆ ಕೂರುವುದಕ್ಕೂ ಆಗುವುದಿಲ್ಲ. ಇಂಥ ಅಸಹಾಯಕ ಪರಿಸ್ಥಿತಿಯಲ್ಲಿ ಪರಿಚಯವೇ ಇಲ್ಲದ ಜಾಗಕ್ಕೆ ಕಳಿಸಿಬಿಟ್ರೆ, ಅಲ್ಲಿ ನನ್ನನ್ನು ನೋಡಿಕೊಳ್ಳುವವರು ಯಾರು?' ದೇವರು ಒಮ್ಮೆ ಮಗುವಿನ ಹಣೆ ನೇವರಿಸಿ ಮುಗುಳ್ನಕ್ಕು ಹೇಳಿದ: 'ನೂರಾರು ದೇವತೆಗಳ ಪೈಕಿ, ಅತ್ಯಂತ ವಾತ್ಸಲ್ಯಮಯಿ ಅನ್ನಿಸಿದ ಒಬ್ಬಳು ದೇವತೆಯನ್ನು ಈಗಾಗ್ಲೇ ಆರಿಸಿದ್ದೀನಿ. ಆಕೆ ನಿನಗಾಗಿ ಕಾಯ್ತಾ ಇದಾಳೆ. ಆಕೆ ನಿನ್ನನ್ನು ತುಂಬಾ ಪ್ರೀತಿಯಿಂದ, ಎಚ್ಚರದಿಂದ ನೋಡಿಕೊಳ್ತಾಳೆ. ಪ್ರಾಮಿಸ್...'
'ಹಂ...ಹೌದಾ? ಸರಿ ಸರಿ... ನಂಗೊಂದು ಡೌಟು. ಏನ್ ಗೊತ್ತಾ? ಇಲ್ಲಿ, ಈ ದೇವಲೋಕದಲ್ಲಿ ನಂಗೆ ಏನಂದ್ರೆ ಏನೂ ಕೆಲಸವಿಲ್ಲ. ಯಾವಾಗ್ಲೂ ಮಧುರವಾದ ಹಾಡು ಕೇಳುತ್ತಾ, ಮನೋಹರವಾದ ಡ್ಯಾನ್ಸ್ ನೋಡ್ತಾ ನಾನಿಲ್ಲಿ ಹಾಯಾಗಿದೀನಿ. ಇಂಥದೇ ಖುಷಿ ನನಗೆ ಆ ಇನ್ನೊಂದು ಲೋಕದಲ್ಲೂ ಸಿಗುತ್ತಾ' ಮಗು ಅನುಮಾನದಿಂದ ಕೇಳಿತು.
'ನನ್ನ ಮಾತನ್ನು ನಂಬು ಮಗೂ. ನಿನ್ನನ್ನು ನೋಡಿಕೊಳ್ಳೋಕೆ ಅಂತ ಹುಡುಕಿದ್ದೀನಲ್ಲ; ಆ ದೇವತೆಗೆ ಕೂಡ ಹಾಡು, ಡ್ಯಾನ್ಸು ಎಲ್ಲಾ ಗೊತ್ತಿದೆ...' ದೇವರು ಉತ್ತರಿಸಿದ. ಆಗಲೂ ಮಗುವಿಗೆ ಸಮಾಧಾನವಾಗಲಿಲ್ಲ. ಅದು ಮತ್ತೆ ಪ್ರಶ್ನೆ ಹಾಕಿತು: 'ನಾನು ಈಗ ಹೋಗ್ತಿರೋದು ಬೇರೊಂದು ಲೋಕಕ್ಕೆ ತಾನೆ? ಅಲ್ಲಿನ ಜೀವಿಗಳು ಆಡುವ ಭಾಷೆಯ ಪರಿಚಯವೇ ನನಗಿಲ್ಲ. ಹೀಗಿರುವಾಗ ನಾನು ಅವರ ಜೊತೆ ಬದುಕುವುದು ಹೇಗೆ? ಭಾಷೆಯೇ ಗೊತ್ತಿಲ್ಲ ಅಂದ ಮೇಲೆ ಅವರೊಂದಿಗೆ ವ್ಯವಹರಿಸುವುದು ಹೇಗೆ?'
'ಅದಕ್ಕೂ ವ್ಯವಸ್ಥೆ ಮಾಡಿದೀನಿ ಕಂದಾ. ನಿನ್ನನ್ನು ನೋಡಿಕೊಳ್ತಾಳಲ್ಲ ದೇವತೆ? ಆಕೆ ನಿನಗೆ ಬಗೆಬಗೆಯ ಮಾತುಗಳನ್ನು ಕಲಿಸಿಕೊಡ್ತಾಳೆ. ಅವಳ ಸಹವಾಸದಲ್ಲಿ ಮೈಮರೆತರೆ, ಸುತ್ತಮುತ್ತ ಯಾರಿದಾರೆ ಅನ್ನೋದು ಕೂಡ ನಿಂಗೆ ಮರೆತು ಹೋಗುತ್ತೆ. ಗೊತ್ತಾ?' ದೇವರು ಅದೇ ಸಮಾಧಾನದ ದನಿಯಲ್ಲಿ ಹೇಳಿದ.
'ದೇವ್ರೆ ದೇವ್ರೆ, ಇನ್ನೊಂದ್ ವಿಷ್ಯ. ನಾನು ಹೊಸದೊಂದು ಲೋಕಕ್ಕೆ ಹೋಗಿ ಬಿಡ್ತೀನಲ್ಲ: ಅಲ್ಲಿದ್ದಾಗ ನಿನ್ನೊಂದಿಗೆ ಮಾತಾಡಬೇಕು ಅನ್ನಿಸಿದ್ರೆ ಏನು ಮಾಡ್ಲಿ?' ಮಗುವಿನ ಪ್ರಶ್ನಾವಳಿ ಮುಂದುವರಿಯಿತು.
'ಆ ದೇವತೆ ಇದಾಳಲ್ಲ ಕಂದಾ; ಆಕೆ ನಿನಗೆ ಎಲ್ಲವನ್ನೂ ಹೇಳಿಕೊಡ್ತಾಳೆ. ಪ್ರಾರ್ಥನೆಯ ಸಮಯದಲ್ಲಿ ಹೇಗೆ ಕೂತ್ಕೋಬೇಕು, ಹೇಗೆ ಪ್ರಾರ್ಥಿಸಬೇಕು, ಏನೆಂದು ಪ್ರಾರ್ಥಿಸಬೇಕು ಎಂಬುದನ್ನೆಲ್ಲ ಆಕೆ ಹೇಳಿಕೊಡ್ತಾಳೆ. ಅವಳು ಹೇಳಿದಂತೆ ನಡಕೊಂಡ್ರೆ, ನನ್ನೊಂದಿಗೆ ದಿನಾಲೂ ಮಾತಾಡಬಹುದು...' ದೇವರು ಮಗುವಿಗೆ ಭರವಸೆ ಕೊಟ್ಟ.
ಉಹುಂ. ಇಷ್ಟೆಲ್ಲ ಚರ್ಚೆಯ ನಂತರವೂ ಆ ಮಗುವಿಗೆ ಸಮಾಧಾನವಾಗಲಿಲ್ಲ. ಅದು ನಡುಗುವ ಸ್ವರದಲ್ಲಿ ಹೇಳಿತು: ಆದ್ರೂ ಭಗವಂತಾ, ನನಗೆ ಭೂಲೋಕಕ್ಕೆ ಹೋಗಲು ಸ್ವಲ್ಪವೂ ಇಷ್ಟವಿಲ್ಲ. ಅಲ್ಲಿ ಬಹಳ ಕೆಟ್ಟ ಜನ ಇದ್ದಾರಂತೆ. ಹಾಗಂತ ಮಾತಾಡೋದು ಎಷ್ಟೋ ಬಾರಿ ನನಗೂ ಕೇಳಿಸಿದೆ. ಆ ಕೇಡಿಗರು ನನಗೂ ಏನಾದ್ರೂ ತೊಂದ್ರೆ ಮಾಡಿದ್ರೆ ಗತಿಯೇನು? ಮೊದಲೇ ಹೇಳಿದಂತೆ ನನಗೆ ಎದ್ದು ನಿಲ್ಲುವುದಕ್ಕೂ ಶಕ್ತಿ ಇಲ್ಲ...
ಭಗವಂತ ಆಗಲೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಆತ ಹೇಳಿದ: 'ಭೂಲೋಕದಲ್ಲಿ ಕೆಟ್ಟ ಜನ ಇದ್ದಾರೆ ನಿಜ. ಆದರೆ ನಿನ್ನನ್ನು ನೋಡಿಕೊಳ್ಳಲು ಆಯ್ಕೆ ಮಾಡಿದೀನಲ್ಲ; ಆ ದೇವತೆ ಎಂಥವಳು ಗೊತ್ತಾ? ಸಂದರ್ಭ ಬಂದ್ರೆ ತನ್ನ ಜೀವವನ್ನು ಒತ್ತೆ ಇಟ್ಟಾದ್ರೂ ಆಕೆ ನಿನ್ನನ್ನು ಉಳಿಸಿಕೊಳ್ತಾಳೆ... ಗೊತ್ತಾಯ್ತಾ?'
'ಆದ್ರೂ ಭಗವಂತಾ, ತುಂಬಾ ಬೇಜಾರಾಗ್ತಿದೆ. ಮತ್ತೆ ನಾನು ನಿನ್ನ ದನಿಯನ್ನು ಕೇಳುವುದು ಹೇಗೆ? ನಿನ್ನನ್ನು ಕಾಣುವುದು ಹೇಗೆ? ಭೂಲೋಕದ ಜನರ ಮಧ್ಯೆ ಕಳೆದುಹೋಗಿ, ನಾನೇನಾದ್ರೂ ನಿನ್ನನ್ನು ಮರೆತೇ ಬಿಟ್ರೆ ಗತಿ ಏನು?' -ಮಗು ಅಳು ದನಿಯಲ್ಲಿ ಕೇಳಿತು.
ದೇವರು ನಿರ್ಧಾರದ ದನಿಯಲ್ಲಿ ಹೇಳಿದ; 'ಛೆ ಛೆ, ಹಾಗೆಲ್ಲ ಖಂಡಿತ ಆಗೋದಿಲ್ಲ. ನಿನ್ನನ್ನು ನೋಡಿಕೊಳ್ತಾ ಇರ್ತಾಳಲ್ಲ ದೇವತೆ? ಆಕೆ ಸದಾ ನನ್ನ ಬಗ್ಗೆ ಹೇಳ್ತಾನೇ ಇರ್ತಾಳೆ. ಭಗವಂತನನ್ನು ಹೇಗೆ ಪ್ರಾರ್ಥಿಸಬೇಕು? ಅವನೊಂದಿಗೆ ಏಕಾಂತದಲ್ಲಿ ಹೇಗೆ ಮಾತಾಡಬೇಕು? ಅವನನ್ನು ಮತ್ತೆ ಹೇಗೆ ಸೇರಬೇಕು ಎಂಬ ಗುಟ್ಟುಗಳೆಲ್ಲಾ ಅವಳಿಗೆ ಗೊತ್ತು. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಅವಳು ನನಗಿಂತ ಒಳ್ಳೆಯವಳು. ಅರ್ಥ ಮಾಡ್ಕೋ...' ಇಷ್ಟು ಹೇಳಿ ದೇವರು ಮೌನವಾದ. ಅದೇ ವೇಳೆಗೆ ಭೂಲೋಕದಿಂದ ಏಳೆಂಟು ದನಿಗಳು ಮಾತಾಡಿಕೊಂಡವು: 'ಮಗು ಹುಟ್ಟುವ ಸಮಯ ಹತ್ತಿರ ಬಂತು. ಅದನ್ನು ಸ್ವಾಗತಿಸಲು ಸಿದ್ಧರಾಗಿ...'
ಈ ಮಾತುಗಳನ್ನು ಕೇಳಿದ ನಂತರ, ತಾನು ಭೂಲೋಕಕ್ಕೆ ಹೋಗುವ ಕ್ಷಣ ಹತ್ತಿರಾಯ್ತು ಎಂಬ ಸತ್ಯ ಮಗುವಿಗೂ ಗೊತ್ತಾಯಿತು. ಬೀಳ್ಕೊಡುವ ಮುನ್ನ ಅದು ಗಾಬರಿಯಿಂದ ಕೇಳಿತು: 'ದೇವ್ರೇ, ನನ್ನನ್ನು ನೋಡಿಕೊಳ್ಳಲು ದೇವತೆ ಇದ್ದಾಳೆ ಅಂದೆಯಲ್ಲ: ಅವಳ ಹೆಸರೇನು ಅಂತಾನೇ ನೀನು ಹೇಳಲಿಲ್ಲವಲ್ಲ? ಬೇಗ ಹೇಳು. ನನ್ನ ರಕ್ಷಣೆಗಿರುವ ಆ ದೇವತೆಯ ಹೆಸರೇನು?'
ಭಗವಂತ ಮಂದಹಾಸದ ನಗೆಯೊಂದಿಗೆ ಉತ್ತರಿಸಿದ: ಮಗೂ, ಆ ದೇವತೆಯ ಹೆಸರು -ಅಮ್ಮ!'
---
ಕರುಳು ತಾಕುವಂತಿರುವ ಇವೆರಡೂ ಇಂಟರ್‌ನೆಟ್‌ನಿಂದ ಆಯ್ದುಕೊಂಡ ಕತೆಗಳು. ಈ ಎರಡೂ ಕತೆಗಳಿಗೆ ಹೊಂದುವಂತಿರುವ- 'ದೇವರೇ, ಅಗಾಧ ನಿನ್ನ ಕರುಣೆಯ ಕಡಲು...' ಎಂಬ ಶೀರ್ಷಿಕೆ ಪ್ರಸಿದ್ಧ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ಅವರ ಕವನದ ಸಾಲು.
- ಎ.ಆರ್. ಮಣಿಕಾಂತ್
armanikanth@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


