ಅಂಕಣಗಳು

ಅಸದ್ ಸದ್ದಡಗಿಸುವುದೇ ಅಮೆರಿಕ?

ಒಂದು ವರ್ಷದಲ್ಲಿ ಹೆಚ್ಚು ಕಡಿಮೆ 20 ಸಾವಿರ ಜನರ ಹತ್ಯೆ. ಒಂದೇ ದಿನ ವಿಷಾನಿಲ...

Published On :

ಒಂದು ವರ್ಷದಲ್ಲಿ ಹೆಚ್ಚು ಕಡಿಮೆ 20 ಸಾವಿರ ಜನರ ಹತ್ಯೆ. ಒಂದೇ ದಿನ ವಿಷಾನಿಲ ಉಣಿಸಿ 1300 ಜನರ ಪ್ರಾಣಹರಣ, ಲಕ್ಷಕ್ಕೂ ಹೆಚ್ಚು ಮಂದಿ ಪಲಾಯನ, ಖಂಡಿತ ಇದು ರಾಕ್ಷಸಪ್ರಭುತ್ವವೇ ಸರಿ. ಸಿರಿಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬೇರೆ ಯಾವುದೇ ರೀತಿಯಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಕಳೆದ 43 ವರ್ಷಗಳಿಂದ ಸಿರಿಯಾದ ಆಡಳಿತ ಒಂದೇ ಕುಟುಂಬದ ಕೈಯಲ್ಲಿದೆ.
ಭಾರತದಲ್ಲಿಯೂ ಕುಟುಂಬ ಪ್ರಭುತ್ವ ಇದೆ. ಆದರೆ ಕನಿಷ್ಟ ಪ್ರತಿ ಅವಧಿಗೆ ಒಮ್ಮೆ ಅದು ಜನರ ಬಳಿ ಬಂದು ಅಂಗೀಕಾರ ಹಾಕಿಸಿಕೊಳ್ಳಬೇಕು. ಆದರೆ ಸಿರಿಯಾದಲ್ಲಿ ಹಾಗಲ್ಲ. 1970ರಲ್ಲಿ ಹಫೀಜ್ ಅಲ್ ಅಸದ್ ಗದ್ದುಗೆ ಏರಿದಾಗಿನಿಂದ ಅವರ ಕುಟುಂಬದ ಹೊರತು ಬೇರೆ ಯಾರೂ ಅಧಿಕಾರ ಚಲಾಯಿಸಲು ಸಾಧ್ಯವಾಗಿಲ್ಲ. 2000ದಲ್ಲಿ ಹಫೀಜ್ ನಿಧನದ ನಂತರ ಆತನ ಎರಡನೇ ಪುತ್ರ ಬಶರ್ ಅಲ್ ಅಸದ್ ಅಧಿಕಾರದ ಚುಕ್ಕಾಣಿ ಹಿಡಿದಾಗ ಆತನಿಗೆ ಇನ್ನೂ 36ರ ವಯಸ್ಸು. ಪಾಶ್ಚಿಮಾತ್ಯ ದೇಶಗಳಲ್ಲಿ ಓದಿ ಸುಧಾರಣಾವಾದಿಯ ಸೋಗಿನಲ್ಲಿದ್ದ ಬಶರ್ ಸಿರಿಯಾಗೆ ಅಗತ್ಯವಾಗಿ ಬೇಕಿದ್ದ ಬದಲಾವಣೆಯ ಹರಿಕಾರ ಆಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಬದಲಾಗಿದ್ದೆಂದರೆ ಆ ದೇಶದ ಅಧ್ಯಕ್ಷರ ಹೆಸರಷ್ಟೆ!
ಅಯಾಚಿತವಾಗಿ ಬಂದ ಅಧಿಕಾರ ಯೋಗವನ್ನು ಸುಮಾರು ಒಂದು ದಶಕದ ಕಾಲ ಭೋಗಿಸಿದ ಬಶರ್ ಪಾಲಿನ ಕೆಟ್ಟ ದಿನಗಳು ಆರಂಭವಾಗಿದ್ದು 2011ರಲ್ಲಿ. ಉತ್ತರ ಆಫ್ರಿಕಾದ ಟುನೀಸಿಯಾದಲ್ಲಿ ರಾಜಕೀಯ ಪರ್ಯಾಯಕ್ಕಾಗಿ ಆರಂಭವಾದ ಜನದಂಗೆ ಅರಬ್‌ಸ್ಪ್ರಿಂಗ್ ಹೆಸರಿನಲ್ಲಿ ಅರಬ್ ರಾಷ್ಟ್ರಗಳಲ್ಲಿಯೂ ಕಾಲಿಟ್ಟಿತು. ಅದು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ದಶಕಗಳ ಕಾಲ ಸವಾಲೇ ಇಲ್ಲದೆ ನಿರಾತಂಕವಾಗಿ ಅಧಿಕಾರ ಚಲಾಯಿಸಿದ್ದ ಈಜಿಪ್ತ್‌ನ ಹೋಸ್ನಿ ಮುಬಾರಕ್‌ರನ್ನು ಮನೆಗಟ್ಟಿತು. ಇಷ್ಟಾದರೂ ಸಿರಿಯಾದಲ್ಲಿ ಜನರ ಆಕ್ರೋಶ ಇನ್ನೂ ಬೀದಿಗೆ ಬಂದಿರಲಿಲ್ಲ. ಆದರೆ 2011ರ ಫೆಬ್ರವರಿಯಲ್ಲಿ ಬದಲಾವಣೆಯ ಕನಸನ್ನು ಗೋಡೆ ಬರಹದಲ್ಲಿ ಬಿಂಬಿಸಿದ ಜನರ ಗುಂಪನ್ನು, (ಅದರಲ್ಲಿ ಹೆಚ್ಚಾಗಿ ಮಕ್ಕಳಿದ್ದರು.) ಒದ್ದು ಜೈಲಿಗಟ್ಟಿ ನಾನಾ ಪರಿ ಹಿಂಸಿಸಿ ಅದರಲ್ಲಿ ಕೆಲವರನ್ನು ಹತ್ಯೆ ಮಾಡಿದ ನಂತರವಷ್ಟೇ ಬಶರ್‌ಗೆ ಕೇಡುಗಾಲ ಆರಂಭವಾಗಿದ್ದು. ಈ ಒಂದು ಘಟನೆ ಬಶರ್ ವಿರೋಧಿಗಳನ್ನು ಕ್ಷಣಮಾತ್ರದಲ್ಲಿ ಒಂದಾಗಿಸಿತು. ಬೀದಿ ಬೀದಿಗಳಲ್ಲಿ ಬಂಡಾಯದ ಕಹಳೆ ಮೊಳಗಿತು. ನೌಕರಿ ಕೊಡು, ಅನ್ನ ಕೊಡು, ನೆಮ್ಮದಿಯ ಬದುಕು ಕೊಡು ಇಲ್ಲವೇ ಮನೆಗೆ ಹೊರಡು ಎಂದು ಜನ ಬಶರ್‌ಗೆ ನೇರವಾಗಿ ಸವಾಲೆಸೆದರು. ಟುನೀಸಿಯಾ, ಈಜಿಪ್ತ್‌ನಂತೆ ಇಲ್ಲಿಯೂ ತಮ್ಮ ಕೂಗಿಗೆ ಬೆಲೆ ಸಿಗುತದೆ ಎಂಬ ಆಶಾಭಾವ ಅವರಲ್ಲಿತ್ತು. ಆದರೆ ಸುಶಿಕ್ಷಿತನಾದ ಬಶರ್ ಮಾಡಿದ್ದಾದರೂ ಏನು? ಜನರನ್ನು ಶಿಕ್ಷಿಸಿದ್ದಾದರೂ ಹೇಗೆ?
ದಶಕಗಳಿಂದ ಜಾರಿಯಲ್ಲಿದ್ದ ಎಮರ್ಜೆನ್ಸಿ ಶಾಸನವನ್ನು ಜನರ ಕೋಪ ಶಮನ ಮಾಡಲು ರದ್ದು ಮಾಡಿದ ಬಶರ್ ಕೆಲವೇ ದಿನಗಳಲ್ಲಿ ನಿರ್ದಯವಾಗಿ ವಿರೋಧಿಗಳನ್ನು ಹಣಿಯಲು ಮುಂದಾದ. ಸಿರಿಯಾ ಹೇಳಿ ಕೇಳಿ ಸುನ್ನಿ ಮುಸ್ಲಿಮರ ಬಾಹುಳ್ಯ ಇರುವ ದೇಶ. ಅಂತಹ ದೇಶದ ಚುಕ್ಕಾಣಿ ಹಿಡಿದಿದ್ದ ಬಶರ್ ಕುಟುಂಬ ತೀರಾ ಅಲ್ಪಸಂಖ್ಯಾತರಾದ ಅಲಾವೈಟ್ (ಶಿಯಾಗಳ ಉಪ ಪಂಗಡ) ಸಮುದಾಯಕ್ಕೆ ಸೇರಿದ್ದಾಗಿತ್ತು. ಆರಂಭದಲ್ಲಿ ಜನರ ಸಹಜ ಸ್ಪಂದನದಂತೆ ಕಂಡ ಪ್ರತಿಭಟನೆ ನಂತರ ವಿರೋಧಿ ಬಣಗಳು ಮತ್ತು ಗೆರಿಲ್ಲಾ ಪಡೆಗಳ ಆಗಮನದೊಂದಿಗೆ ಬಲಶಾಲಿಯಾಗಿ ಪರಿವರ್ತನೆಗೊಂಡಿತು. ಈ ಬೆಳವಣಿಗೆಯ ಹಿಂದೆ ಪ್ರಭಾವಿ ಸುನ್ನಿ ಪಂಗಡದ ಕೈವಾಡ ಇರಬಹುದೆಂದು ಬೆದರಿದ ಬಶರ್ ತನ್ನ ಜನರ ಮೇಲೆಯೇ ಯುದ್ಧ ಸಾರಿದ. ವಿರೋಧಿಗಳನ್ನು ಹೊಸಕಿ ಹಾಕುವ ಭರದಲ್ಲಿ ಎಷ್ಟೊ ಮಂದಿ ಅಮಾಯಕರ ಮೇಲೆ ಬಾಂಬೆಸೆದ. ವಿರೋಧಿ ಪಡೆಗಳು ಬೀಡು ಬಿಟ್ಟಿದ್ದ ಪಟ್ಟಣಗಳು ನಿರ್ಜೀವಗೊಂಡವು. ಸತತ ಎರಡು ವರ್ಷದಿಂದ ನಡೆಯುತ್ತಿರುವ ಈ ಅಂತರ್ಯುದ್ಧದ ತುತ್ತ ತುದಿ ಎಂದರೆ ಕಳೆದೆರಡು ವಾರಗಳ ಹಿಂದೆ ಪ್ರತಿಭಟನಾಕಾರರ ಮೇಲೆ ನಡೆಸಿದ ವಿಷಾನಿಲ ಪ್ರಯೋಗ. ಇದೊಂದೇ ಕ್ರಮದಿಂದ ಬಶರ್‌ಗಿದ್ದ ಅಲ್ಪಸ್ವಲ್ಪ ಅನುಕಂಪವೂ ಮಾಯವಾಯಿತು.
ಇಷ್ಟಾದರೂ ಬಶರ್ ಅಧಿಕಾರದಲ್ಲಿ ಮುಂದುವರಿದಿದ್ದಾನೆ, ಸಿರಿಯಾದ ಅಮಾಯಕ ಜನ ಬಯಸಿದ ಬದಲಾವಣೆ ಗಗನಕುಸುಮವಾಗಿದೆ. ಇದಕ್ಕೆ ಕಾರಣ ನೆರೆಯ ಈಜಿಪ್ತ್‌ನಲ್ಲಿನ ಬೆಳವಣಿಗೆ. ಅಲ್ಲಿನ ತಹ್ರೀರ್ ಚೌಕದಲ್ಲಿ ದಿನಗಟ್ಟಲೇ ಪ್ರತಿಭಟಿಸಿದ, ಪ್ರಾಣತೆತ್ತ ಜನರ ಹಕ್ಕೊತ್ತಾಯದಂತೆ ಹೊಸ್ನಿ ಮುಬಾರಕ್ ಯುಗ ಅಂತ್ಯವಾಗಿ ಮುಸ್ಲಿಂ ಬ್ರದರ್‌ಹುಡ್ ಎಂಬ ಕಟ್ಟರ್‌ವಾದಿ ಸಂಘಟನೆ ಅಧಿಕಾರ ಪಡೆಯಿತಾದರೂ ನಂತರ ನಡೆದದ್ದೇನು? ಜನ ನಿರಂಕುಶ ಪ್ರಭುತ್ವದಿಂದ ಮುಕ್ತರಾದರೂ ಮೂಲಭೂತವಾದಿ ಪ್ರಭುತ್ವದ ದರ್ಪದಡಿ ಬಾಳಬೇಕಾಗಿ ಬಂತು. ಜನ ಬಲದಿಂದ ಅಧಿಕಾರಕ್ಕೆ ಬಂದ ಮುಸ್ಲಿಮ್ ಬ್ರದರ್‌ಹುಡ್ ಸಹ ಜನದ್ವೇಷಿ ಎಂಬುದು ಬಲುಬೇಗ ಸಾಬೀತಾಯಿತು. ಬದಲಾವಣೆಗೆ ತೆರೆದುಕೊಂಡ ಎರಡೇ ವರ್ಷಗಳಲ್ಲಿ ಈಜಿಪ್ತ್ ಮತ್ತೆ ಅತಂತ್ರವಾಯಿತು. ಪೂರಕವಾಗಿ ಸೆರೆಮನೆ ಸೇರಿದ್ದ ಮುಬಾರಕ್ ಬಿಡುಗಡೆಯೂ ಆಯಿತು. ಅಲ್ಲಿಗೆ ತಹ್ರೀರ್ ಚೌಕದ ಜನದಂಗೆ ಒಂದು ರೀತಿಯಲ್ಲಿ ವಿಫಲಕ್ರಾಂತಿಯಾಯಿತು. ಈ ಜನಾಂದೋಲನಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ ನೀಡಿದ್ದ ಅಮೆರಿಕ ಮುಂತಾದ ದೇಶಗಳೂ ಕೈಕಟ್ಟಿ ಕುಳಿತುಕೊಳ್ಳುವಂತಾಯಿತು. ಈ ಬೆಳವಣಿಗೆಯಿಂದ ಬಶರ್ ಇನ್ನಷ್ಟು ಭಂಡನಾದ. ಅದರ ಪರಿಣಾಮವೇ ವಿಷಾನಿಲ ಪ್ರಯೋಗ. ಮಾಧ್ಯಮ ವರದಿಗಳ ಪ್ರಕಾರ ಬಶರ್ ಬಳಿ ಒಂದು ಸಾವಿರ ಟನ್ನಿನಷ್ಟು ವಿಷಾನಿಲ ಸಂಗ್ರಹವಿದೆಯಂತೆ!
ಈಗ ಅಮೆರಿಕ ಸಹ ಬಶರ್ ವಿರುದ್ಧ ಹೂಂಕರಿಸಿದೆ. ಒಂದು ವೇಳೆ ನೆಚ್ಚಿನ ಬಂಟ ಬ್ರಿಟನ್ ಸಾಥ್ ನೀಡಿದ್ದರೆ ಈ ವೇಳೆಗಾಗಲೇ ಸಿರಿಯಾದ ಸೇನಾ ನೆಲಗಳ ಮೇಲೆ ಅಮೆರಿಕದ ಕ್ಷಿಪಣಿಗಳು ದಂಡಿಯಾಗಿ ಬಂದು ಬೀಳುತ್ತಿದ್ದವು. ಆದರೆ ಬ್ರಿಟನ್ ಹಿಂದೆ ಸರಿದಿದೆ. ಅಮೆರಿಕ ಇನ್ನೂ ನಿರ್ಧಾರ ಕೈಗೊಳ್ಳುವ ಹಂತದಲ್ಲಿದೆ. ಇದೇ ಅಪಘಾನಿಸ್ತಾನವೊ ಅಥವಾ ಇನ್ನಾವುದೋ ದುರ್ಬಲ ದೇಶವಾಗಿದ್ದರೆ ಈ ವೇಳೆಗೆ ಅಮೆರಿಕದ ಸೈನ್ಯ ಅಲ್ಲಿ ಬೀಡು ಬಿಡುತ್ತಿತ್ತು. ಆದರೆ ಸಿರಿಯಾ ವಿಷಯದಲ್ಲಿ ಏಕೆ ಕೊಂಚ ಹಿಂಜರಿಕೆ ತೋರುತ್ತಿದೆ? ಇದಕ್ಕೆ ಕಾರಣ ಇಲ್ಲದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯರಾದ ಚೀನಾ ಮತ್ತು ರಷ್ಯ ಮಿಲಿಟರಿ ಕಾರ್ಯಾಚರಣೆಗೆ ಪ್ರಬಲವಾದ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಸೇನಾ ಕಾರ್ಯಾಚರಣೆಗೆ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ಅಮೆರಿಕಕ್ಕೆ ಸಾಧ್ಯವಿಲ್ಲ. ಜೊತೆಗೆ ಈಜಿಪ್ತ್‌ನಲ್ಲಾದಂತೆ ಒಬ್ಬ ಸರ್ವಾಧಿಕಾರಿಯನ್ನು ಇಳಿಸಲು ಹೋಗಿ ಮತ್ತೊಬ್ಬ ಮೂಲಭೂತವಾದಿ ಸಂಘಟನೆಯ ಕೈಗೆ ಅಧಿಕಾರ ಹಸ್ತಾಂತರವಾಗುವುದು ಅಮೆರಿಕಕ್ಕೂ ಇಷ್ಟವಿದ್ದಂತಿಲ್ಲ. ಸಿರಿಯಾದಲ್ಲಿ ಬಶರ್ ವಿರುದ್ಧ ಎರಡು ವರ್ಷಗಳ ಸಂಘರ್ಷದಲ್ಲಿ ನೇರವಾಗಿ ಆತನ ವಿರುದ್ಧ ನಿಲ್ಲಬಲ್ಲ ನಾಯಕನಾಗಿ ಯಾರೂ ಗುರುತಿಸಿಕೊಂಡಿಲ್ಲ. ಹೀಗಾಗಿ ಬಶರ್‌ನನ್ನು ಏಕಾಏಕಿ ಕಿತ್ತೊಗೆದರೆ ಪರ್ಯಾಯ ಏನು ಎಂಬುದನ್ನು ಅಮೆರಿಕ ಇನ್ನು ಕಂಡುಕೊಂಡಿಲ್ಲ. ಅಮೆರಿಕದ ಈ ತಳಮಳ, ಗೊಂದಲ ಬಶರ್‌ಗೆ ಚೆನ್ನಾಗಿ ಗೊತ್ತಿದೆ. ಜೊತೆಗೆ ಇರಾನ್ ಚೀನಾ ಮತ್ತು ರಷ್ಯದ ಬೆಂಬಲ ಆತನಿಗಿದೆ.
ಇಷ್ಟಕ್ಕೂ ಈ ಮೂರು ದೇಶಗಳು ಏತಕ್ಕಾಗಿ ಬಶರ್‌ನ ಬೆನ್ನೆಲುಬಾಗಿ ನಿಂತಿವೆ? ಮೂರನೇ ಬಾರಿಗೆ ರಷ್ಯದ ಅಧ್ಯಕ್ಷರಾಗಿ ಪುಟಿನ್ ಆಯ್ಕೆಯಾದ ದಿನದಿಂದಲೂ ಅಮೆರಿಕ ಮತ್ತು ರಷ್ಯದ ಸಂಬಂಧ ಅಷ್ಟಕ್ಕಷ್ಟೆ ಎಂಬಂತಾಗಿದೆ. ಈ ಹಿಂದೆ ಮೆಡ್ವೆಡೆವ್ ಅಧ್ಯಕ್ಷರಾಗಿದ್ದಾಗ ಉಭಯ ದೇಶಗಳ ನಡುವೆ ಕುದುರಿದ್ದ ವಿಶ್ವಾಸದ ದಟ್ಟತೆ ಈಗ ಕಡಿಮೆಯಾದಂತಿದೆ. ಅಮೆರಿಕದ ರಕ್ಷಣಾ ವ್ಯವಹಾರಗಳ ಸೂಕ್ಷ್ಮ ವಿಷಯಗಳನ್ನು ಬಹಿರಂಗ ಮಾಡಿ ಭಾರೀ ಮುಜುಗರ ಉಂಟುಮಾಡಿದ್ದ ಸ್ನೋಡೆನ್‌ಗೆ ರಷ್ಯ ರಾಜಾಶ್ರಯ ನೀಡಿದ ನಂತರವಂತೂ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಅಮೆರಿಕದ ಯಾವುದೇ ಮಿಲಿಟರಿ ಕಾರ್ಯಾಚರಣೆಯನ್ನು ರಷ್ಯ ಸಂಶಯದ ದೃಷ್ಟಿಯಿಂದಲೇ ನೋಡಲಿದೆ. ಮೇಲಾಗಿ ಸೋವಿಯತ್ ಒಕ್ಕೂಟದ ಪತನದ ನಂತರ ವಿದೇಶದಲ್ಲಿ ರಷ್ಯದ ಏಕೈಕ ಸೇನಾ ನೆಲೆ ಇರುವುದು ಸಿರಿಯಾದಲ್ಲಿಯೇ. ಅಲ್ಲದೆ ಸಿರಿಯಾವು ರಷ್ಯದ ಅತ್ಯಂತ ನಂಬಿಕಸ್ತ ಶಸ್ತ್ರಾಸ್ತ್ರ ಆಮದು ದೇಶ. ಈ ಎರಡು ದೇಶಗಳ ನಡುವೆ ನಾಲ್ಕು ಶತಕೋಟಿ ಡಾಲರ್‌ಗೂ ಹೆಚ್ಚಿನ ವಹಿವಾಟು ನಡೆಯುತ್ತದೆ. ಅಮೆರಿಕದ ಮಧ್ಯಪ್ರವೇಶ ಮತ್ತು ಬಶರ್ ಬದಲಾವಣೆಯಿಂದ ಈ ಪ್ರದೇಶದಲ್ಲಿ ಸಹಜವಾಗಿಯೇ ರಷ್ಯದ ಪ್ರಭಾವ ಕುಗ್ಗಲಿದೆ. ಅಲ್ಲದೆ ರಕ್ಷಣೆಯ ವಿಚಾರದಲ್ಲಿಯೂ ಆಯಕಟ್ಟಿನ ಪ್ರದೇಶವಾಗಿರುವುದರಿಂದ ಅಮೆರಿಕವನ್ನು ಇಲ್ಲಿಂದ ಗಾವುದ ದೂರದಲ್ಲಿಡುವುದು ರಷ್ಯಕ್ಕೆ ಅತ್ಯವಶ್ಯ.
ಇನ್ನು ಇರಾನ್‌ಗಂತೂ ಸಿರಿಯಾ ಅತ್ಯಂತ ಆಯಕಟ್ಟಿನ ಗೆಳೆಯ. ಸುನ್ನಿ ಆಡಳಿತಗಳಿಂದ ಕೂಡಿರುವ ಅರಬ್ ದೇಶಗಳ ನಡುವೆ ತನ್ನ ಶಿಯಾ ಪಂಗಡದ ಅಧಿಕಾರದಲ್ಲಿರುವ ಸಿರಿಯಾವನ್ನು ಕಳೆದುಕೊಳ್ಳಲು ಇರಾನ್ ಸಿದ್ಧವಿಲ್ಲ. ಜೊತೆಗೆ ಇಸ್ರೇಲ್ ಅನ್ನು ಬೆದರಿಸಲು, ಲೆಬನಾನ್‌ನಲ್ಲಿ ಛೂ ಬಿಟ್ಟಿರುವ ಹೆಜ್ಬುಲ್ಲಾಗಳಿಗೆ ಇರಾನ್ ಶಸ್ತ್ರಾಸ್ತ್ರ ಪೂರೈಸುವುದೇ ಸಿರಿಯಾದ ಮೂಲಕ. ಹೀಗಿರುವಾಗ ಸಿರಿಯಾದಲ್ಲಿ ಪ್ರಭುತ್ವ ಬದಲಾದರೆ ಇರಾನ್‌ಗೆ ಗಂಡಾಂತರ ಖಚಿತ. ಯಾವುದೇ ಕಾರಣಕ್ಕೂ ಅಂತಹ ಪರಿಸ್ಥಿತಿ ಉದ್ಭವವಾಗುವುದನ್ನು ಇರಾನ್ ಎಂದಿಗೂ ಬಯಸುವುದಿಲ್ಲ. ಈ ಎರಡೂ ದೇಶಗಳಿಗೆ ಹೋಲಿಸಿದರೆ ಸಿರಿಯಾದಲ್ಲಿ ಚೀನಾದ ಆಸಕ್ತಿ ಕಡಿಮೆಯೇ. ಆದರೂ ಸಿರಿಯಾವು ಚೀನಾದ ಮೂರನೇ ಅತಿ ದೊಡ್ಡ ಆಮದು ಮಾರುಕಟ್ಟೆಯಾಗಿರುವುದರಿಂದ ವಾಣಿಜ್ಯ ಉದ್ದೇಶಗಳಿಗಾಗಿಯೇ ಚೀನಾ ಸಿರಿಯಾದಲ್ಲಿ ಯಾವುದೇ ಬಾಹ್ಯ ಮಿಲಿಟರಿ ಕಾರ್ಯಾಚರಣೆಗೆ ವಿರುದ್ಧವಾಗಿದೆ. ಇಷ್ಟಾದರೂ ಅಮೆರಿಕ ಪರಿಸ್ಥಿತಿಯನ್ನು ಮೂಕಪ್ರೇಕ್ಷಕನಂತೆ ನೋಡುತ್ತಾ ಕುಳಿತುಕೊಳ್ಳುವ ಸಾಧ್ಯತೆ ಕಡಿಮೆ. ಅಮೆರಿಕದ ಅಧ್ಯಕ್ಷರ ನಿರ್ಧಾರವನ್ನು ಅಲ್ಲಿನ ಸಂಸತ್ತು ಸಾರಾಸಗಟಾಗಿ ತಿರಸ್ಕರಿಸುವುದು ವಿರಳ. ಹೀಗಾಗಿ ಕೆಲವೇ ದಿನಗಳಲ್ಲಿ ಅಮೆರಿಕದ ಕ್ಷಿಪಣಿಗಳು ಸಿರಿಯಾವನ್ನು ಅಪ್ಪಳಿಸುವುದರಲ್ಲಿ ಅನುಮಾನ ಇಲ್ಲ. ಆದರೆ ಬಶರ್‌ಗೆ ಎಚ್ಚರಿಕೆ ನೀಡುವುದಷ್ಟಕ್ಕೇ ಈ ದಾಳಿ ಸೀಮಿತವಾಗುವುದೋ, ಇಲ್ಲ ಪ್ರಭುತ್ವ ಪಲ್ಲಟಕ್ಕೆ ಅಮೆರಿಕ ಮುಂದಾಗುವುದೋ ಎಂಬುದಷ್ಟೇ ಈಗಿರುವ ಪ್ರಶ್ನೆ.

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.