ವೆಟಲ್ ಬರೆದ ಇತಿಹಾಸದಲ್ಲಿ ಸಣ್ಣ ಅಪಸ್ವರ!
ಭಾನುವಾರ ಹೊಸದಿಲ್ಲಿಯ ಬುದ್ಧ್ ಅಂತಾರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ...

ಭಾನುವಾರ ಹೊಸದಿಲ್ಲಿಯ ಬುದ್ಧ್ ಅಂತಾರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಇತಿಹಾಸದ ಒಂದು ಹೊಸ ಅಧ್ಯಾಯ ದಾಖಲಾಯಿತು. ಜರ್ಮನಿಯ ಸೆಬಾಸ್ಟಿಯನ್ ವೆಟಲ್ ಸತತ ಮೂರನೇ ಬಾರಿಗೆ ಇಲ್ಲಿ ಎಫ್-1 ರೇಸ್ ಗೆದ್ದದ್ದೇ ಅಲ್ಲದೆ ನಾಲ್ಕನೇ ಬಾರಿಗೆ ಚಾಂಪಿಯನ್ಶಿಪ್ ಅನ್ನು ಗೆದ್ದುಕೊಂಡರು. ಇನ್ನೂ 26ರ ವಯಸ್ಸು. ಅಷ್ಟರಲ್ಲಿಯೇ ನಾಲ್ಕು ಚಾಂಪಿಯನ್ಶಿಪ್ ಗೆದ್ದ ಹೆಗ್ಗಳಿಕೆ ಈತನದಾಯಿತು. ಇದಲ್ಲದೆ ಅತಿ ಕಿರಿಯ ಎಂಬ ಕೆಟಗರಿಯಲ್ಲಿ ವೆಟಲ್ ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದೂ ಆಯಿತು. ಇದೇನು ಸಾಮಾನ್ಯ ಸಾಧನೆ ಅಲ್ಲ. ಮೈ ಮನಸ್ಸಿನ ಮೇಲೆ ತೀವ್ರ ಒತ್ತಡ ಹೇರುವ, ಹೈರಾಣಾಗಿಸುವ ಈ ಎಫ್-1 ಕಾರುಗಳ ಚಾಲನೆ ನೋಡುಗರ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಚಾಲಕರನ್ನು ನಿತ್ರಾಣಗೊಳಿಸಿಬಿಡುತ್ತದೆ. ಬೆವರಿಳಿಸುವುದರ ಜೊತೆಗೆ ಪ್ರತಿ ರೇಸ್ ನಂತರ ಚಾಲಕರ ತೂಕವನ್ನು ಸರಾಸರಿ 3 ರಿಂದ 5 ಕೆಜಿವರೆಗೆ ಇಳಿಸುತ್ತದೆ. ಪರಿಶ್ರಮ ಮತ್ತು ಚಿತ್ತಕಾಠಿಣ್ಯ ಎಫ್-1ಗೆ ಸಮಾನಾರ್ಥ. ಇಲ್ಲಿ ಒಮ್ಮೆ, ಒಂದು ರೇಸ್ ಗೆಲ್ಲುವುದೇ ಸುಕೃತ. ಹಾಗಿದ್ದಾಗ ಮೇಲಿಂದ ಮೇಲೆ ಗೆಲ್ಲುವುದು ಎಂದರೆ ಅದು ಅತಿಶಯವೇ ಸರಿ. ಇನ್ನೂ ಈ ಋತುವಿಗೆ ಪರದೆ ಬಿದ್ದಿಲ್ಲ. ಮೂರು ರೇಸ್ ಬಾಕಿ ಇದೆ. ಅಷ್ಟರಲ್ಲಾಗಲೇ ವೆಟಲ್ ಚಾಂಪಿಯನ್ಶಿಪ್ ಗೆದ್ದಿರುವುದು ಸಾಮಾನ್ಯ ವಿಷಯವಲ್ಲ. ಅದರಲ್ಲೂ ಕಳೆದ ಐದಾರು ರೇಸ್ಗಳಲ್ಲಿ ಯಾರೂ ಈತನನ್ನು ಬಗ್ಗುಬಡಿಯಲಾಗಿಲ್ಲ. ಸೋಲಿಸುವ ಮಾತು ಹಾಗಿರಲಿ, ಕನಿಷ್ಟ ಈತನ ಸಮೀಪ ಬರಲೂ ಯಾರಿಗೂ ಸಾಧ್ಯವಾಗಿಲ್ಲ. ಈ ಸಾಲಿನ ಎಫ್-1 ಕ್ಯಾಲೆಂಡರ್ನ ಶನಿವಾರ ಮತ್ತು ಭಾನುವಾರಗಳಂದು ವೆಟಲ್ ಮುಂದು, ವೆಟಲ್ಗೆ ಜಯ ಎಂಬ ಶೀರ್ಷಿಕೆ ವಾಡಿಕೆಯಾಗಿ ಬಿಟ್ಟಿದೆ. ಬೆಲ್ಜಿಯಂ, ಇಟಲಿ, ಸಿಂಗಾಪುರ, ಕೊರಿಯಾ, ಜಪಾನ್ ಮತ್ತು ಭಾರತ. ಈ ಏಳು ಗ್ರಾಂಡ್ ಪ್ರೀಯಲ್ಲಿ ಉಳಿದವರಾರೂ ವೆಟಲ್ ಮುಂದೆ ಏಳಿಗೆ ಕಂಡಿಲ್ಲ. ವೆಟಲ್ನದ್ದು ಒಂದು ದಾರಿ (ಜಯದ ದಾರಿ) ಆದರೆ ಉಳಿದವರದ್ದೇ ಮತ್ತೊಂದು ದಾರಿ ಎಂಬಂತಾಗಿದೆ. ಈ ಉಳಿದವರೇನೂ ಸಾಮಾನ್ಯದವರಲ್ಲ. ಫರ್ನಾಂಡೊ ಅಲೋನ್ಸೊ ಲೂಯಿಸ್ ಹ್ಯಾಮಿಲ್ಟನ್, ಕಿಮಿ ರಾಯ್ಕೊನನ್ ಮುಂತಾದ ಮದಗಜಗಳೇ ಉಳಿದವರ ಪಾಳಯದಲ್ಲಿದ್ದಾರೆ. ಆದರೆ ವೆಟಲ್ ಇವರಾರಿಗೂ ನಿಲುಕಿಲ್ಲ. ಫಲಿತಾಂಶ ಎಷ್ಟರ ಮಟ್ಟಿಗೆ ಪೂರ್ವ ನಿರ್ಧಾರಿತವಾಗಿತ್ತೆಂದರೆ ವೆಟಲ್ ಕಾರು ಕೆಟ್ಟರೆ ಮಾತ್ರ ಜಯದ ವೇದಿಕೆಯಲ್ಲಿ ಮತ್ತೊಬ್ಬರನ್ನು ಕಾಣಲು ಸಾಧ್ಯ ಎಂಬಂತಾಗಿತ್ತು. ದಶಕದ ಹಿಂದೆ ಫೆರಾರಿ-ಶುಮಾಕರ್ ಜೋಡಿ ಕಾಲಿಟ್ಟಲ್ಲೆಲ್ಲ ಜಯದ ಹಾರ ಹಾಕಿಸಿಕೊಂಡಿದ್ದು ಬಿಟ್ಟರೆ ಆ ಪರಿಯ ಏಕಸ್ವಾಮ್ಯ ಕಂಡುಬಂದಿದ್ದು ಈಗಲೇ. ಈಗಾಗಲೇ ಈ ವರ್ಷದ ಚಾಂಪಿಯನ್ ಪಟ್ಟ ಅಲಂಕರಿಸಿರುವ ವೆಟಲ್ಗೂ ಸಮೀಪದ ಪ್ರತಿಸ್ಪರ್ಧಿ ಅಲೋನ್ಸೊಗೂ 115 ಅಂಕಗಳ ವ್ಯತ್ಯಾಸ. ಉಳಿದಿರುವ ಮೂರೂ ರೇಸ್ಗಳಲ್ಲಿ ವೆಟಲ್ ಒಂದೂ ಅಂಕ ಪಡೆಯದೆ, ಮೂರರಲ್ಲೂ ಅಲೋನ್ಸೊ ಗೆದ್ದರೆ, ಆಗಲೂ ಜಯದ ಅಂತರ 40 ಅಂಕ. ಯಾವುದೇ ದೃಷ್ಟಿಯಿಂದ ನೋಡಿದರೂ ಇದೊಂದು ಅಪೂರ್ವ ಸಾಧನೆಯೇ ಸರಿ.
ಆದರೆ..., ವೆಟಲ್ ನ ಸಾಧನೆಯಿಂದ ಮನಸ್ಸು ಗರಿಗೆದರಿಲ್ಲ. ಹೃದಯ ಹಾಡುತ್ತಿಲ್ಲ. ಒಂದು ರೀತಿಯ ಥ್ರಿಲ್ ಎನಿಸುತ್ತಿಲ್ಲ. ಸ್ಮೃತಿ ಪಟಲದಲ್ಲಿ ಹಲವಾರು ಚಿತ್ರಗಳು ಹಾದು ಹೋಗುತ್ತವೆ. 1990ರ ದಶಕದಲ್ಲಿ ಮಿಂಚುಹುಳುವಿನಂತೆ ಮಿಂಚಿ ಮಾಯವಾದ ಆಯರ್ಟನ್ ಸೆನ್ನಾನ ಚಾಲನಾ ಚಳಕ, ಅಲನ್ ಪ್ರಾಸ್ಟ್ ಜೊತೆಗಿನ ಆತನ ಜಿದ್ದಾಜಿದ್ದಿ, ತಾಂತ್ರಿಕ ಕೌಶಲ್ಯ ಮೀರಿದ ಎದೆಗಾರಿಕೆ, ವೇಗಕ್ಕೆ ಹೊಸ ಮಿತಿಗಳನ್ನು ಹಾಕಿದ ಆತನ ಛಾತಿ, ಎಫ್-1 ಟ್ರ್ಯಾಕ್ ಮೇಲೆಯೇ ಕೊನೆಗೊಂಡ ಆತನ ಬದುಕು, ಅದು ಸೃಷ್ಟಿಸಿದ ದಂತಕತೆ, ಎರಡು ದಶಕಗಳಾದರೂ ಮಾಸದ ಆತನ ಕೀರ್ತಿ ಪ್ರಭಾವಳಿ ನೆಮ್ಮದಿಗೆ ಕಿಚ್ಚಿಡುತ್ತದೆ. ಎಫ್-1 ಜಗತ್ತು ಸೆನ್ನಾ ಸಾವಿನ ಗುಂಗಿನಲ್ಲಿದ್ದಾಗಲೇ ಕಾಣಿಸಿಕೊಂಡ ಮೈಕೆಲ್ ಶುಮಾಕರ್ ಮತ್ತು ಆತನ ಅಸಾಮಾನ್ಯ ಸಾಧನೆಗಳು ಒಂದು ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಸೆನ್ನಾ ಬಲಿಯಾದ ವರ್ಷದಲ್ಲಿಯೇ ಸ್ಪೇನ್ ಜಿಪಿಯಲ್ಲಿ ಗೇರ್ ಬಾಕ್ಸ್ ಕೈಕೊಟ್ಟು ಐದನೇ ಗೇರಿನಲ್ಲಿಯೇ ಸಿಲುಕಿದ ಕಾರನ್ನು 40 ಸುತ್ತು (ಲ್ಯಾಪ್)ಸುತ್ತಿಸಿ ಜಯದ ಗುರಿ ಮುಟ್ಟಿದ ಶುಮಾಕರ್ ಮೂಡಿಸಿದ ವಿಸ್ಮಯದ ಪುಳಕ, 1995ರಲ್ಲಿ ಡೇಮನ್ ಹಿಲ್ ಜೊತೆಗಿನ ಆತನ ಯುಗಳ, ಪಿಟ್ಸ್ಟಾಪ್ ಪೆನಾಲ್ಟಿಯಿಂದ ಜರ್ರನೆ ಜಾರಿ ಎಲ್ಲರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಆತನ ಸಾಹಸ, ಸರಿಯುತ್ತಿದ್ದ ವೇಳೆಯಲ್ಲಿ ಅದಕ್ಕಾಗಿಯೇ ಇರುವ ಟೈರ್ಗಳ ಬದಲಿಗೆ ಒಣ ಟೈರ್ಗಳ ಮೇಲೆಯೇ ಸವಾರಿ ಮಾಡಿ ನೀಡಿದ ರೋಮಾಂಚನ, ಕಾರು ಯಾವುದೇ ಇರಲಿ ಎದುರಾಳಿಗಳನ್ನು ಬೆಪ್ಪು ಮಾಡಲು ಆತ ಅನುಸರಿಸುತ್ತಿದ್ದ ಪಿಟ್ಸ್ಟಾಪ್ ತಂತ್ರ, ಪೋಲ್ ಪೊಸಿಷನ್ ಇರಲಿ, ಬಿಡಲಿ ತಾನು ರೇಸ್ ಮಾಡುವುದೇ ಗೆಲ್ಲುವುದಕ್ಕಾಗಿ ಎಂಬ ಮನೋಭಾವ, ಓವರ್ಟೇಕ್ ಮಾಡುವ ವಿಷಯದಲ್ಲಿ ಆತ ತೋರುತ್ತಿದ್ದ ನೈಪುಣ್ಯತೆ, ಡೇವಿಡ್ ಕುಲ್ಪಾರ್ಡ್, ಜಾಕ್ ವಿಲಿನ್ಯೂ, ಮಿಕಾಹಕ್ಕಿನನ್ ಜೊತೆಗಿನ ಸಮಬಲದ, ಸಮ ಸಾಮರ್ಥ್ಯದ ಕಾರುಗಳ ನಡುವಿನ ತುರುಸಿನ ಕಾದಾಟ, ಫೆರಾರಿಗೆ ಬಂದ ಮೇಲಂತೂ ಆತ ರೂಢಿಸಿಕೊಂಡ ಕೌಶಲ್ಯದ ಮೇಲುಸ್ತರ ಎಫ್-1 ರೇಸ್ಗೆ ಹೊಸ ಭಾಷ್ಯವನ್ನೇ ಬರೆಯಿತು. ಶುಮಾಕರ್ಗೆ ಉತ್ತರಾಧಿಕಾರಿ ಎಂಬಂತೆ ಬಂದ, ಬಂದು ಎರಡು ಬಾರಿ ಚಾಂಪಿಯನ್ ಸಹ ಆದ ಅಲೋನ್ಸೊ ಅದೇ ಪರಂಪರೆ ಮುಂದುವರಿಸಿದ. ಎಫ್-1 ರೇಸಿಂಗ್ನಲ್ಲಿ ಚಾಲಕ ಎಷ್ಟೇ ಚಾಲಾಕಿ ಆಗಿದ್ದರೂ ಆತನ ಮಾತು ಕೇಳುವ ಕಾರೂ ಬೇಕು. ಅಲೋನ್ಸೊ ವಿಷಯದಲ್ಲಿ ಅದು ಅಷ್ಟರ ಮಟ್ಟಿಗೆ ಫಲಿಸಲಿಲ್ಲ. ಆದರೆ "ಇರುವುದ ಪ್ರಸಾದವೆಂದುಣ್ಣು ಒಣಗಿಸದೆ" ಎಂಬ ಕಗ್ಗದ ಮಾತಿನಂತೆ ಪ್ರತಿ ವರ್ಷದ ಪ್ರಯತ್ನದಲ್ಲಿ ಅಲೋನ್ಸೊ ಎಡವಲಿಲ್ಲ. ಕಳೆದ ವರ್ಷ ತನ್ನ ಕಾರಿನ ಇತಿಮಿತಿಯೊಳಗೆ ಕಡೆಯ ರೇಸ್ವರೆಗೂ ಚಾಂಪಿಯನ್ ಯಾರಾಗಬಹುದು ಎಂಬುದು ನಿರ್ಧಾರವಾಗದಂತೆ ನೋಡಿಕೊಂಡ ಅಲೋನ್ಸೊ ಕಡೆಗೆ ವೆಟಲ್ಗೆ ದಾರಿ ಮಾಡಿಕೊಟ್ಟಾಗ, ಇಬ್ಬರ ನಡುವೆ ಇದ್ದಿದ್ದು ಕೇವಲ 3 ಪಾಯಿಂಟ್ ಅಂತರ! ಅಷ್ಟೇಕೆ, ಈ ವರ್ಷದ ರೇಸ್ಗಳನ್ನೇ ಗಮನಿಸಿದರೆ ಐದು, ಎಂಟು, ಹನ್ನೊಂದು, ಹೀಗೆ ಗ್ರಿಡ್ನಲ್ಲಿ ಯಾವ ಸ್ಥಾನದಿಂದ ರೇಸ್ ಆರಂಭಿಸಿದರೂ ಎರಡು, ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟ ಪರಿ ಮರೆಯುವಂತೆಯೂ ಇಲ್ಲ. ಮೊದಲೇ ಹೇಳಿದಂತೆ ಈತನ ಮಾತು ಕೇಳುವ, ಸ್ಪಂದಿಸುವ ಕಾರು ಸಿಕ್ಕಿದ್ದರೆ ಈ ವರ್ಷದ ಅಂತಿಮ ಫಲಿತಾಂಶ ಇಷ್ಟು ಬೇಗ ಹೊರ ಬೀಳುತ್ತಿರಲಿಲ್ಲ. ಹಾಗಾದರೆ ಇದು ವೆಟಲ್ಗೆ ಸಂದ ಅರ್ಹ ಜಯವಲ್ಲವೇ? ಈ ಜಯದಲ್ಲಿ ಆತನಿಗಿಂತ ಈತನ ಕಾರೇ ಪ್ರಮುಖ ಪಾತ್ರ ವಹಿಸಿತೇ? ಖಂಡಿತ ವೆಟಲ್ ಉತ್ತಮ ಚಾಲಕ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಟೊರೊ ರೊಸೊ ಕಾರು ಚಲಾಯಿಸಿದಾಗಲೂ ಆತ ಜಯ ಸಾಧಿಸಿದ್ದ ಎಂಬುದನ್ನು ಮರೆಯುವಂತಿಲ್ಲ. ಆದರೆ ಈಗಿನ ರೆಡ್ಬುಲ್ ಕಾರಿನ ಮಾತೇ ಬೇರೆ. ಎತ್ತಿನ ಗಾಡಿಗಳ ಸ್ಪರ್ಧೆಯಲ್ಲಿ ಮೋಟಾರ್ ಚಾಲಿತ ಗಾಡಿಯನ್ನು ಓಡಿಸಿದಂತೆ. ಕೊರಿಯಾದಲ್ಲಿ ನಡೆದ ರೇಸ್ನ ವೇಳೆ ತಾಂತ್ರಿಕ ಕಾರಣಗಳಿಂದಾಗಿ ರೇಸ್ ಕೆಲ ಕಾಲ ಸ್ಥಗಿತಗೊಂಡಿತು. ಮತ್ತೆ ಆರಂಭವಾದಾಗ ಎಲ್ಲ ಕಾರುಗಳೂ ತಮ್ಮ ಗರಿಷ್ಠ ಸಾಮರ್ಥ್ಯಕ್ಕೆ ಮುನ್ನುಗ್ಗಿದವು. ಆದರೆ ಉಳಿದೆಲ್ಲ ಕಾರುಗಳಿಗಿಂತ ವೆಟಲ್ನ ರೆಡ್ಬುಲ್ ಎರಡು ಸೆಕೆಂಡ್ಗಳಷ್ಟು ಮುಂದಿತ್ತು. ಅಂದು ಹ್ಯಾಮಿಲ್ಟನ್ ಹೇಳಿದ್ದು "We think that is the true pace of the car. There is nothing you can really do about that kind of advantage'' (ಇದು ಆ ಕಾರಿನ ವೇಗ ವರ್ಧನೆಯ ನಿಜ ಪರಿಚಯ. ಇಂತಹ ಒಂದು ವರ ಇರುವ ಕಾರಿನ ಮುಂದೆ ನಾವು ಏನು ತಾನೇ ಮಾಡಲು ಸಾಧ್ಯ). ನಿಜ, ಎಫ್-1ನಲ್ಲಿ ಲಾಗಾಯ್ತಿನಿಂದಲೂ ಯಾವುದಾದರೂ ಒಂದು ತಂಡ, ಮೆಕ್ಲಾರೆನ್, ವಿಲಿಯನ್ಸ್, ಫೆರಾರಿ, ಬೆನೆಟನ್, ಈಗ ರೆಡ್ಬುಲ್ ಉಳಿದ ಕಾರುಗಳ ಮೇಲೆ ಸವಾರಿ ಮಾಡಿದ್ದಿದೆ. ಚಾಂಪಿಯನ್ಗಳನ್ನು ರೂಪಿಸಿದ್ದಿದೆ. ಆದರೆ ಈ ಪರಿಯ Advantage ಬೇರೆ ಯಾವ ಚಾಲಕರಿಗೂ ಸಿಕ್ಕಿರಲಿಲ್ಲ. ಕಾರುಗಳ ರಚನೆ ಮತ್ತು ತಾಂತ್ರಿಕ ಗುಣಮಟ್ಟದ ಬಗ್ಗೆ ಎಫ್-1 ಆಡಳಿತ ಒಟ್ಟಾರೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುತ್ತದೆ. ಅದರಡಿಯಲ್ಲಿ ಎಂಜಿನ್ಗಳನ್ನು Tweak (ತಿರುಚಲು) ಮಾಡಲು ತಂಡಗಳಿಗೆ ಅವಕಾಶವಿದೆ. ಈ ಕಳೆದ ಮೂರು ವರ್ಷಗಳಲ್ಲಿ ರೆಡ್ಬುಲ್ ಈ ಅವಕಾಶವನ್ನು ಧಾರಾಳವಾಗಿ ಬಳಸಿಕೊಂಡಿದೆ. ಇಷ್ಟಕ್ಕೂ ರೆಡ್ಬುಲ್ನ ಈ ಪಾರಮ್ಯದ ಹಿಂದಿರುವುದು ಏಡ್ರಿಯಾನ್ ನಿವೆ ಕೈಚಳಕ. ತಂಡದ ಬಾಸ್ ಹಾರ್ನರ್ ಮಾಜಿ ರೇಸರ್, ಆತನ ದೂರದೃಷ್ಟಿ, ವೆಟಲ್ನ ಸಲಹೆ ಮತ್ತು ಅಗತ್ಯತೆಗಳಿಗೆ ತಕ್ಕಂತೆ ಕಾರನ್ನು ರೂಪಿಸುವಲ್ಲಿ ನಿವೆ ಸಿದ್ಧಹಸ್ತ. ಎಫ್-1 ಕುಟುಂಬಕ್ಕೆ ನಿವೆ ಹೊಸಬರೇನೂ ಅಲ್ಲ. ಈ ಹಿಂದೆ ಪ್ರಾಸ್ಬ್, ಸೆನ್ನಾ ಮುಂತಾದ ಖ್ಯಾತ ನಾಮರ ಕಾರುಗಳ ರಚನೆಯಲ್ಲೂ ಈತನ ಪಾತ್ರವಿದೆ. ಇದೆಲ್ಲದರ ಪರಿಣಾಮ ಎಂದರೆ ಎಫ್-1ನಲ್ಲಿ ಎರಡು ವಿಧ ಇದೆ. ಒಂದು ಎಫ್-1 RB (Red bull), ಮತ್ತೊಂದು ಎಫ್-1 ಎಂದು ಸಾಮಾಜಿಕ ತಾಣಗಳಲ್ಲಿ ಜನ ಆಡಿಕೊಳ್ಳುವಂತಾಗಿದೆ. ಎಫ್-1 ಖಇಯಲ್ಲಿ ವೆಟಲ್ ಮತ್ತು ವೆಟಲ್ ಮಾತ್ರ. ಅದೇ ಎಫ್-1ನಲ್ಲಿ ಅಲೋನ್ಸೊ, ಹ್ಯಾಮಿಲ್ಟನ್, ರಾಯ್ಕೊನೆನ್ಗಳು ಗುದ್ದಾಡಬೇಕು. ಈ ಹಿಂದೆ ಫೆರಾರಿಯಲ್ಲಿ ಶುಮಾಕರ್ ಸತತ ಐದು ಬಾರಿ ಜಯಗಳಿಸಿರಲಿಲ್ಲವೆ? ಹಾಗೆಯೇ ವೆಟಲ್ ಮತ್ತು ರೆಡ್ಬುಲ್ ಜುಗಲ್ ಬಂದಿಯಲ್ಲವೇ ಎಂಬ ಪ್ರಶ್ನೆ ಸಹಜ. ಆದರೆ ಶುಮಾಕರ್ ಫೆರಾರಿಗೆ ಬರುವ ಮುನ್ನ ಅದಕ್ಕಿಂತ ಕೆಳಸ್ತರದ ಕಾರುಗಳನ್ನು ಓಡಿಸಿಯೂ ಚಾಂಪಿಯನ್ ಆಗಿದ್ದ ಎಂಬುದನ್ನು ಮರೆಯುವಂತಿಲ್ಲ. ಶುಮಾಕರ್ ಯಶಸ್ಸಿನ ಉಚ್ಛ್ರಾಯದಲ್ಲಿದ್ದಾಗಲೂ ಎಫ್-1 ರೇಸುಗಳಲ್ಲಿ ರೋಮಾಂಚನಕ್ಕೆ ಕೊರತೆ ಇರಲಿಲ್ಲ. ಏಕತಾನತೆಗೆ ಹೆಚ್ಚಿನ ಆಸ್ಪದ ಇರಲಿಲ್ಲ. ಆದರೆ ಈಗ ಅವೆರಡೂ ಕಾಣುತ್ತಿಲ್ಲ. ಅಲೋನ್ಸೊ ಎಷ್ಟೇ ಬಡಿದಾಡಿದರೂ ಅದು ಸಾಲದಾಗಿದೆ. ಅದಕ್ಕೆ ಇರಬೇಕು ವೆಟಲ್ನ ಯಶಸ್ಸಿಗೆ ಆತನನ್ನು ಅಭಿನಂದಿಸುತ್ತಲೇ ಅಲೋನ್ಸೊ ನಿಜಕ್ಕೂ ಅಪ್ರತಿಮ ಎಂದು ಹ್ಯಾಮಿಲ್ಟನ್ ಹೊಗಳಿರುವುದು.
ಎಫ್-1ನಲ್ಲಿ ಹಾಸು ಹೊಕ್ಕಾಗಿರುವ ಈ ಏಕತಾನತೆಯನ್ನು ಹೋಗಲಾಡಿಸಲು ಮತ್ತು ಎಲ್ಲರಿಗೂ ಸಮಾನ ವೇದಿಕೆ ಕಲ್ಪಿಸಲು ಮುಂದಿನ ವರ್ಷದಿಂದ ಕಾರುಗಳ ಎಂಜಿನ್ಗೆ ಸಂಬಂಧಿಸಿದಂತೆ ಏಕರೂಪತೆ ತರಲು ಎಫ್-1 ಆಡಳಿತ ತೀರ್ಮಾನಿಸಿದೆ. ಇದು ಯಾವುದೊ ಒಂದು ತಂಡದ ಪಾರಮ್ಯವನ್ನು ಮುರಿಯಲಿದೆ. ಜೊತೆಗೆ ರೇಸ್ಗೆ ರೋಮಾಂಚನವನ್ನು ಮರಳಿ ತರುವುದರಲ್ಲಿ ಸಂಶಯವೇ ಇಲ್ಲ. ಆಗ ಪೈಪೋಟಿಯ ಹರವು ವಿಸ್ತರಿಸಲಿದೆ. ವೆಟಲ್, ಅಲೋನ್ಸೊ, ಹ್ಯಾಮಿಲ್ಟನ್, ರಾಯ್ಕೊನನ್ ಸಮಬಲದ ಹೋರಾಟ ನಡೆಸಲು ಅನುವಾಗಲಿದೆ. ಏಕಚಕ್ರಾಧಿಪತ್ಯದ ಏಕತಾನತೆಗೆ ಸೂಕ್ತ ಪರ್ಯಾಯ ದೊರೆಯಲಿದೆ. ಆಗ ವೆಟಲ್ಗೆ ಜನರ ಹೀರೊ ಆಗುವ ಅವಕಾಶವೂ ತೆರೆದುಕೊಳ್ಳಲಿದೆ. ಇತಿಹಾಸದಲ್ಲಿ ವೆಟಲ್ ಸ್ಥಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಯಾವುದೇ ಹಂಗಿಲ್ಲದ ನಿಜವಾದ ಚಾಂಪಿಯನ್ ಎನಿಸಲು ವೆಟಲ್ ಇನ್ನಷ್ಟೇ ಶ್ರಮಿಸಬೇಕಿದೆ. ಅದಕ್ಕಾಗಿ ಮುಂದಿನ ವರ್ಷದವರೆಗೆ ನಾವೂ ಕಾಯಬೇಕಷ್ಟೇ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


