ಮೋದಿ ಅಸ್ತ್ರ ಎದುರಿಸುವಲ್ಲಿ ಶಕ್ತಿಗುಂದಿರುವ ಕೈಪಾಳಯ
ವಿಧಾನಸಭೆ ಚುನಾವಣೆಯ ಕನವರಿಕೆ ಇನ್ನೂ ಮುಗಿದೇ ಇಲ್ಲ ಆಗಲೇ ಲೋಕಸಭೆ...

ವಿಧಾನಸಭೆ ಚುನಾವಣೆಯ ಕನವರಿಕೆ ಇನ್ನೂ ಮುಗಿದೇ ಇಲ್ಲ. ಆಗಲೇ ಲೋಕಸಭೆ ಚುನಾವಣೆಯ ಗುಂಗು ರಾಜಕೀಯ ಪಕ್ಷಗಳನ್ನು ಆವರಿಸಿಕೊಂಡಿದೆ.
ವಿಧಾನಸಭೆ ಚುನಾವಣೆ ಗೆಲುವಿನ ಖುಷಿಯಲ್ಲಿರುವ ಕಾಂಗ್ರೆಸ್, ಆ ಚುನಾವಣೆಯಲ್ಲಿ ಆದ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಲೋಕಸಭೆ ಚುನಾವಣೆಗೆ ನಿಧಾನವಾಗಿ ತಾಲೀಮು ಶುರು ಮಾಡಿದೆ. ಪಕ್ಷದ ಕಾರ್ಯಕಾರಿಣಿ ಸಭೆಗಳು, ಚರ್ಚೆ, ಸಮಾಲೋಚನೆಗಳು ಎಲ್ಲೆಡೆ ನಡೆಯುತ್ತಿವೆ. ಚುನಾವಣೆಗೆ ರಣತಂತ್ರ ರೂಪಿಸುವ ಕಾರ್ಯಕ್ಕೆ ಎಲ್ಲ ಪಕ್ಷಗಳೂ ಈಗಿನಿಂದಲೇ ಕೈ ಹಾಕುತ್ತಿವೆ. ಸಾಮಾನ್ಯವಾಗಿ ಚುನಾವಣೆ ಇನ್ನೇನು ಹತ್ತಿರದಲ್ಲಿದೆ ಎಂದಾಗ ಕಾವು ಏರುವುದು ಸಹಜವಾಗಿತ್ತು. ಆದರೆ, ಲೋಕಸಭೆಗೆ ಚುನಾವಣೆ ಯಾವಾಗ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಆದರೂ ಎಲ್ಲ ಪಕ್ಷಗಳೂ ಸಭೆ, ಸಮಾಲೋಚನೆ, ಸಂಘಟನೆ, ತಂತ್ರಗಾರಿಕೆ ಎಂಬಿತ್ಯಾದಿ ವಿಷಯಗಳಲ್ಲಿ ಮುಳುಗಿ ಹೋಗಿವೆ. ಕಾರಣ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಬಿಜೆಪಿ ಪ್ರಚಾರ ಅರಂಭಿಸಿರುವುದು. ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳಿಗೆ ಆವರಿಸಿರುವ ಭಯವೂ ನರೇಂದ್ರ ಮೋದಿ ಅವರದ್ದೇ. ಹೀಗಾಗಿ ಇನ್ನೇನು ಚುನಾವಣೆ ಬಂದೇಬಿಟ್ಟಿತು ಎಂಬರ್ಥದಲ್ಲಿ ಕಸರತ್ತಿಗೆ ಕೈ ಹಾಕಿವೆ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಥಳೀಯ ವಿಚಾರಗಳನ್ನೇ ಕೈಗೆತ್ತಿಕೊಂಡು ಲೋಕಸಭೆ ಚುನಾವಣೆ ಎದುರಿಸಬೇಕಾಗಿದೆ. ಪಕ್ಷ ಅಧಿಕಾರದಲ್ಲಿರುವುದರಿಂದ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ. ಅದರಲ್ಲೂ ಪಕ್ಷದಲ್ಲಿ ಕಾಲೆಳೆಯುವ ಮಂದಿಯೇ ತುಂಬಿ ಹೋಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ 20 ಸ್ಥಾನಗಳನ್ನಾದರೂ ಕಾಂಗ್ರೆಸ್‌ಗೆ ತಂದುಕೊಡಬೇಕು ಎಂಬ ಉಮೇದಿನಲ್ಲಿ ಜಿದ್ದಿಗೆ ಬಿದ್ದವರಂತೆ ರಾಜ್ಯವ್ಯಾಪಿ ಓಡಾಡುತ್ತಿದ್ದಾರೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಬಿಜೆಪಿಯ ನರೇಂದ್ರ ಮೋದಿ ಅಲೆಗೆ ಪ್ರತಿತಂತ್ರಗಳನ್ನು ಹೂಡಬೇಕಾದ ಸನ್ನಿವೇಶವೂ ನಿರ್ಮಾಣವಾಗಿದೆ.
ನರೇಂದ್ರ ಮೋದಿ ಅಲೆಯಲ್ಲಿ ತೇಲಾಡುತ್ತಿರುವ ಬಿಜೆಪಿಗೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಳಸಲು ಹೊಸ ಅಸ್ತ್ರಗಳು ಸಿಗುತ್ತಿವೆ. ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ಧೋರಣೆಗಳ ಜತೆಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಂತೆ ಕಾಂಗ್ರೆಸ್‌ನ ದ್ವಂದ್ವ ನಿಲವು ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಬಿಜೆಪಿಗೆ ಹತ್ತಿರವಾಗುತ್ತಿರುವುದು ಪಕ್ಷದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಎರಡೂ ಪಕ್ಷಗಳ ಮಧ್ಯೆ ಪ್ರಮುಖ ಪ್ರತಿಪಕ್ಷ ಜೆಡಿಎಸ್ ಕೂಡ ಚುನಾವಣೆಗೆ ಸಿದ್ಧವಾಗುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ಜತೆ ಸೇರಿ ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಬಿಜೆಪಿಯ ಮೋದಿ ಅಸ್ತ್ರಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಅಸ್ತ್ರವನ್ನು ಸಿದ್ಧಪಡಿಸಲು ಕಾಂಗ್ರೆಸ್ ಮುಂದಾಗಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಹಲವು ಹೊಸ ಕಾರ್ಯಕ್ರಮಗಳೊಂದಿಗೆ ಸಿದ್ದರಾಮಯ್ಯ ಅವರು ನೇರವಾಗಿ ವೋಟ್‌ಬ್ಯಾಂಕ್‌ಗೆ ಲಗ್ಗೆ ಇಟ್ಟರು. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಸಾಲ ಮನ್ನಾ... ಹೀಗೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಆದರೆ, ಬರುಬರುತ್ತಾ ಸಿದ್ದರಾಮಯ್ಯ ಅವರ ಆಡಳಿತ ಇಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಯಿತೇ ಹೊರತು ರಾಜ್ಯದ ಒಟ್ಟಾರೆ ಅಭಿವೃದ್ಧಿಯತ್ತ ಗಮನಹರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮೋದಿ ಅಸ್ತ್ರಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅಸ್ತ್ರವನ್ನು ಸಿದ್ಧಪಡಿಸುವ ಕಾಂಗ್ರೆಸ್ ಪ್ರಯತ್ನ ಯಶಸ್ಸು ಕಾಣಲಿಲ್ಲ. ಇದರ ಪರಿಣಾಮ ಕಾಂಗ್ರೆಸ್ ಮೋದಿ ಅಲೆಗೆ ಪ್ರತಿತಂತ್ರ ಹೂಡಲು ಹೊಸ ಆಲೋಚನೆಗಳತ್ತ ಹೊರಟಿದೆ. ಅದಿನ್ನೂ ಯೋಚನೆ, ಚರ್ಚೆ ಹಂತದಲ್ಲೇ ಇದ್ದು ಕಾರ್ಯರೂಪಕ್ಕೆ ಬರಲು ಇನ್ನಷ್ಟು ದಿನ ಕಾಯಲೇ ಬೇಕು.
ಇನ್ನು ಪಕ್ಷದಲ್ಲಿ ಎಲ್ಲವೂ ಸರಿಯಾಗಿ ಇಲ್ಲದೇ ಇರುವುದು ಕೂಡ ಕಾಂಗ್ರೆಸ್‌ಗೆ ಸಮಸ್ಯೆ ತಂದೊಡ್ಡಿದೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಗೆ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರದ ಸಚಿವರು ಪಾಲ್ಗೊಳ್ಳದೇ ಇರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಮೇಲ್ನೋಟಕ್ಕೆ ಎಲ್ಲರೂ ಒಗ್ಗಟ್ಟಿನಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೂ ಒಳಗೊಳಗೇ ಬೇಗುದಿ ಇರುವುದು ಸ್ಪಷ್ಟವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಒಂದೆಡೆಯಾದರೆ, ಹಳೆಯ ಕಾಂಗ್ರೆಸಿಗರು ಇನ್ನೊಂದೆಡೆ ಎನ್ನುವಂತಾಗಿದೆ. ಇದನ್ನು ಮೀರಿ ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನ ನಡೆದಿದೆ. ಸರ್ಕಾರ ಕೆಲಸ ಮಾಡದಿದ್ದರೆ ಕಿವಿ ಹಿಂಡಿ. ಆದರೆ, ಮುಖ್ಯಮಂತ್ರಿಯವರ ಕಾಲೆಳೆಯಲು ಹೋಗಬೇಡಿ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ಕೊಟ್ಟಿರುವುದೂ ಇದೇ ಕಾರಣಕ್ಕೆ. ಮಂತ್ರಿ ಸ್ಥಾನ ಸಿಗದವರು, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಿಗದವರೂ ಸಿಟ್ಟಾಗಿದ್ದಾರೆ. ಈ ಎಲ್ಲದರ ನಡುವೆಯೂಒಗ್ಗಟ್ಟು ಕಾಪಾಡುವ ನಿಟ್ಟಿನಲ್ಲಿ ನಾಯಕರು ಪ್ರಯತ್ನ ಮುಂದುವರಿಸಿದ್ದಾರೆ.
ಆದರೆ, ಬಿಜೆಪಿ ಪರಿಸ್ಥಿತಿ ಹಾಗಿಲ್ಲ. ಅಧಿಕಾರ ಇಲ್ಲದೇ ಇರುವುದರಿಂದ ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ ಸಿದ್ಧತೆ ಬಿಟ್ಟರೆ ಬೇರೆ ಕೆಲಸ ಇಲ್ಲ. ಹೀಗಾಗಿ ಲೋಕಸಭೆ ಚುನಾವಣೆ ವೇಳೆಗೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವತ್ತಲೇ ಗಮನ ಹರಿಸುತ್ತಿದೆ. ಇದಕ್ಕೆ ಮೋದಿ ಅಲೆಯ ನೆರವು ಸಿಗುತ್ತಿದೆ. ಇನ್ನೊಂದೆಡೆ ಬಿಜೆಪಿ ತೊರೆದು ಕೆಜೆಪಿ ಸಂಘಟಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಪರೋಕ್ಷವಾಗಿ ಪಕ್ಷ ಸಂಘಟನೆಗೆ ನೆರವಾಗುತ್ತಿದ್ದಾರೆ. ಅಂದರೆ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದಾಗಿ ಘೋಷಿಸಿ, ರಾಜ್ಯದಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಹೇಳಿ ಬಿಜೆಪಿಗೆ ಹತ್ತಿರವಾಗಿದ್ದಾರೆ. ಇನ್ನು ಬಿಜೆಪಿ ಒಳ ಪ್ರವೇಶಿಸುವುದೊಂದೇ ಬಾಕಿ ಉಳಿದಿರುವುದು.
ಇನ್ನೊಂದೆಡೆ ಈ ಹಿಂದೆ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಬಳಸಿದ್ದು ಅಕ್ರಮ ಗಣಿಗಾರಿಕೆ ಅಸ್ತ್ರವನ್ನು. ಬಳ್ಳಾರಿವರೆಗೆ ಪಾದಯಾತ್ರೆ, ರಾಜ್ಯಪಾಲರಿಗೆ ದೂರು, ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ನಡೆಸಿ ರಾಜ್ಯದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿತ್ತು. ಆದರೆ, ಈಗ ಇದೇ ಅಸ್ತ್ರವನ್ನು ಬಿಜೆಪಿ ಕೈಗೆ ಕೊಟ್ಟು ಹೊಡೆಸಿಕೊಳ್ಳುತ್ತಿದೆ. ಒಂದರ್ಥದಲ್ಲಿ ಕೋಲು ಕೊಟ್ಟು ಹೊಡೆಸಿಕೊಳ್ಳುವಂತಹ ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ.
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ವಾರ್ತಾ ಸಚಿವ ಸಂತೋಷ್ ಲಾಡ್ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಟ್ಟರೆ ಆರೋಪ ಒಪ್ಪಿಕೊಂಡಂತೆ ಆಗುತ್ತದೆ. ಹಾಗೆಯೇ ಮುಂದುವರಿಸಿದರೆ ಸಮರ್ಥಿಸಿಕೊಳ್ಳುವುದೂ ಕಷ್ಟ. ಹೀಗಾಗಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿ ಕಾಂಗ್ರೆಸ್ ಒದ್ದಾಡುತ್ತಿದೆ.
ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಅಕ್ರಮ ಗಣಿಗಾರಿಕೆ ಅಸ್ತ್ರವನ್ನು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಳಸುತ್ತಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಎಸ್. ಆರ್. ಹಿರೇಮಠ್ ಅವರು ಒಂದೊಂದೇ ದಾಖಲೆಗಳನ್ನು ಬಿಡುಗಡೆ ಮಾಡುತ್ತಾ ಸಂತೋಷ್ ಲಾಡ್ ಅವರ ನೆದ್ದೆಗೆಡಿಸಿದ್ದಾರೆ. ಒಂದು ರೀತಿಯಲ್ಲಿ ಅವರು ಕಾಂಗ್ರೆಸ್ ಮತ್ತು ಲಾಡ್ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ಬೀದಿರಂಪ ಮಾಡುತ್ತಾ ತನ್ನ ಶಕ್ತಿ ವೃದ್ಧಿಸಿಕೊಳ್ಳುವ ಕೆಲಸ ಮಾಡುತ್ತಿದೆ.
ಹಾಗೆಂದು ಅಕ್ರಮ ಗಣಿಗಾರಿಕೆ ವಿಚಾರ ಬಿಜೆಪಿಗೆ ಹೆಚ್ಚು ಲಾಭ ತಂದುಕೊಡುತ್ತದೆ ಎಂದು ಹೇಳುವಂತಿಲ್ಲ. ಸಂತೋಷ್ ಲಾಡ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟರೆ ಈ ವಿಚಾರ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ, ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರು ಜೈಲಿನಲ್ಲಿದ್ದಾರೆ. ಮತ್ತೊಂದೆಡೆ ಪಕ್ಷ ಸಂಘಟನೆ ದೃಷ್ಟಿಯಿಂದ ಬಿಜೆಪಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಇದೇ ವಿಚಾರ ಅಡ್ಡಿಯಾಗಿದೆ. ಬಿಜೆಪಿ ಜತೆ ವಿಲೀನವಾಗಲು ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಸಿದ್ಧವಾಗಿದೆ. ಆದರೆ, ಆ ಪಕ್ಷದ ಇಬ್ಬರು ಶಾಸಕರು ಅಕ್ರಮ ಅದಿರು ರಫ್ತು ವಿಚಾರದಲ್ಲಿ ಜೈಲು ಸೇರಿದ್ದಾರೆ. ಹೀಗಾಗಿ ಅಕ್ರಮ ಗಣಿಗಾರಿಕೆ ವಿಚಾರವನ್ನು ಕೇವಲ ಸಂತೋಷ್ ಲಾಡ್ ಪ್ರಕರಣಕ್ಕೆ ಮಾತ್ರ ಸೀಮಿತಗೊಳಿಸಿರುವ ಬಿಜೆಪಿ ಮೋದಿ ಅಲೆಯನ್ನೇ ಹೆಚ್ಚು ನೆಚ್ಚಿಕೊಂಡಿದೆ. ಜತೆಗೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಈ ಮೂಲಕ ಅಕ್ರಮ ಗಣಿಗಾರಿಕೆ ಅಸ್ತ್ರ ಇಲ್ಲದೇ ಇದ್ದರೂ ಕಾಂಗ್ರೆಸ್ ಎದುರಿಸಲು ಸಿದ್ಧವಾಗುತ್ತಿದೆ. ಇತ್ತೀಚೆಗೆ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಕಾಂಗ್ರೆಸ್ ವಿರುದ್ಧ ಅಕ್ರಮ ಗಣಿಗಾರಿಕೆಗಿಂತ ಇತರೆ ವಿಚಾರಗಳನ್ನೇ ಮುಂದಿಟ್ಟುಕೊಂಡು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ಇನ್ನು ಪ್ರಮುಖ ಪ್ರತಿಪಕ್ಷ ಜೆಡಿಎಸ್ ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆ ಸೋಲಿನಿಂದ ಹೊರಬರಲು ಯತ್ನಿಸುತ್ತಿದೆ. ರಾಜ್ಯದಲ್ಲಿ ಜೆಡಿಎಸ್‌ನ ಪ್ರಬಲ ಕೋಟೆ ಎಂದೇ ಪರಿಗಣಿತವಾಗಿದ್ದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಲೋಕಸಭೆ ಉಪ ಚುನಾವಣೆಯಲ್ಲಿ ಕೈಬಿಟ್ಟಿದ್ದರಿಂದ ಅದು ಚಿಂತೆಗೀಡಾಗಿತ್ತು. ಇದೀಗ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜೆಡಿಎಸ್ ಪ್ರಮುಖವಾಗಿ ಕಾಂಗ್ರೆಸ್ ಪಕ್ಷವನ್ನೇ ತನ್ನ ಪ್ರಮುಖ ರಾಜಕೀಯ ವಿರೋಧಿ ಎಂದು ಪರಿಗಣಿಸಿ ಹೋರಾಟಕ್ಕಿಳಿದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅತಿವೃಷ್ಟಿ, ಅನಾವೃಷ್ಟಿಯಿಂದ ಆಗಿರುವ ಸಮಸ್ಯೆಗಳಿಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ಆಗಿರುವ ವಿಳಂಬ, ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಕಾಲುಬಾಯಿ ಜ್ವರ ಪರಿಹಾರಕ್ಕೆ ಸರ್ಕಾರ ವಿಳಂಬ ಮಾಡಿರುವುದು... ಹೀಗೆ ಸರ್ಕಾರದ ಆಡಳಿತ ವೈಖರಿಯನ್ನೇ ಅಸ್ತ್ರವಾಗಿಟ್ಟುಕೊಂಡು ಅದು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದೆ.
ಇನ್ನೊಂದೆಡೆ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗದೊಂದಿಗೆ ಗುರುತಿಸಿಕೊಳ್ಳಲು ನಿರ್ಧರಿಸಿರುವ ಜೆಡಿಎಸ್, ರಾಜ್ಯದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಎಡಪಕ್ಷಗಳ ನೆರವು ಪಡೆಯುವ ಕೆಲಸಕ್ಕೂ ಕೈಹಾಕಿದೆ. ಈ ಮೂಲಕ ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕಳೆದುಕೊಂಡಿರುವ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಮುಂದಾಗಿದೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಎರಡು ಮನಸ್ಸಿನಲ್ಲಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡು ತೃತೀಯ ರಂಗಕ್ಕೆ ಬೆಂಬಲ ನೀಡುವಾಸೆ ಅವರದ್ದು. ಆದರೆ, ಪಕ್ಷದ ಮುಖಂಡರು, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವಂತೆ ನೋಡಿಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಗೌಡರು ಯಾವುದನ್ನು ಆಯ್ಕೆ ಮಾಡಿಕೊಳ್ಳುವರೋ ನೋಡಬೇಕು. ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ತಾಲೀಮು ಚುನಾವಣೆಯ ನೆರಳು ಸ್ಪಷ್ಟವಾಗಿ ಕಾಣುವ ಮೊದಲೇ ರಾಜ್ಯ ರಾಜಕೀಯ ಮತ್ತೊಂದು ಅಧ್ಯಾಯದತ್ತ ಹೊರಳುವಂತೆ ಮಾಡಿದೆ.
ಲಗೋರಿ: ಬಾಳು ತಪ್ಪಿದ ಬಳಿಕ ಬಳೆ ಯೋಚನೆ ಮಾಡಿದರೆ ಫಲವಿಲ್ಲ ಎಂಬಂತೆ ಸಮಯ ಮೀರಿದ ಬಳಿಕ ಮಾಡಿದ ಕೆಲಸ ನಿಷ್ಪ್ರಯೋಜಕ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


