ಅಂಕಣಗಳು

ಭಾರತ- ರಷ್ಯಾ ಭಾಯ್ ಭಾಯ್ ಆಗಿ ಉಳಿಯಲಿವೆಯೇ?

ಸಿಂಗ್ ರದ್ದು ಅಮೆರಿಕದೊಂದಿಗಿನ ಭಾರತದ ಸಂಬಂಧ ಸುಧಾರಣೆಯ ವಿಷಯದಲ್ಲಿ ಮಾತ್ರ..

Published On :

ಮನಮೋಹನ್ ಸಿಂಗ್ ಅವರು ಬೇರಿನ್ಯಾವುದೇ ವಿಷಯದ ಬಗ್ಗೆ ಗಟ್ಟಿ ನಿಲುವು ತಾಳಿ ಮಾತನಾಡಿದ್ದನ್ನು ನಾವು ನೋಡಿಲ್ಲವಾದರೂ, ಅಮೆರಿಕದೊಂದಿಗಿನ ಭಾರತದ ಸಂಬಂಧ ಸುಧಾರಣೆಯ ವಿಷಯದಲ್ಲಿ ಮಾತ್ರ ಅವರದ್ದು ಖಚಿತ ನಿಲುವು. ಅವರು ಆ ವಿಷಯದಲ್ಲಿ ಎಷ್ಟೊಂದು ಯಶಸ್ಸು ಗಳಿಸಿದರೆಂದರೆ, ಇಂದು ಏಷ್ಯಾ-ಪೆಸಿಫಿಕ್ ವೇದಿಕೆಯಲ್ಲಿ ಭಾರತ ಮತ್ತು ಅಮೆರಿಕವನ್ನು ಆಪ್ತ ಸ್ನೇಹಿತರು ಎಂದೇ ನೋಡಲಾಗುತ್ತಿದೆ. ಈ ಗೆಳೆತನದಿಂದಾಗಿ ಅಮೆರಿಕಕ್ಕಂತೂ ಭರಪೂರು ಲಾಭವಾಗಿದೆ. ಆದರೆ ಇದರಿಂದ ಭಾರತಕ್ಕೆ ದೊರೆತದ್ದೇನು? ಭಾರತದ ಪರಮ ಶತ್ರುವಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತಿದೆ. ಪಾಕಿಸ್ತಾನಕ್ಕೆ ಆರ್ಥಿಕ ಬೆಂಬಲವನ್ನೂ ಕೊಡುತ್ತಿರುವುದಲ್ಲದೆ, ಕಾಶ್ಮೀರದ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂಬ ಆ ದೇಶದ ಕರೆಗೂ ಕಿವಿಗೊಡುತ್ತಿದೆ!
ಚಿಂತೆಗೀಡುಮಾಡುತ್ತಿರುವ ವಿಷಯವೆಂದರೆ, ಭಾರತ ಅಮೆರಿಕದೊಂದಿಗೆ ಹತ್ತಿರವಾಗುವ ಮೂಲಕ ಎಲ್ಲಿ ತನ್ನ ಬಹುಕಾಲದ ಸ್ನೇಹಿತನಾದ ರಷ್ಯಾ ಮತ್ತು ಮಹತ್ವಾಕಾಂಕ್ಷಿಯಾದ ನೆರೆ ರಾಷ್ಟ್ರ ಚೀನಾದೊಂದಿಗೆ ಸಂಬಂಧಕೆಡಿಸಿಕೊಳ್ಳುತ್ತದೋ ಎನ್ನುವುದು. ಏಕೆಂದರೆ ಇವೆರಡೂ ರಾಷ್ಟ್ರಗಳೊಂದಿಗೆ ಹತ್ತಿರವಾಗುವ ಅಗತ್ಯ ಭಾರತಕ್ಕೆ ಹಿಂದೆಂದಿಗಿಂತಲೂ ಈಗ ಅಧಿಕವಿದೆ. ಹಲವಾರು ದೇಶಗಳನ್ನು ಸುತ್ತಿರುವ ನಮ್ಮ ಪ್ರಧಾನಿಗಳು ಈ ಬಾರಿ ರಷ್ಯಾ ಮತ್ತು ಚೀನಾ ಪ್ರವಾಸವನ್ನು ಒಂದೇ ಬೀಸಿನಲ್ಲಿ ಮುಗಿಸಿಬಂದಿದ್ದಾರೆ. ಅಲ್ಲಿ ಅವರಿಗೆ ಸಿಕ್ಕ ಸ್ವಾಗತವೇನೋ ಅದ್ಧೂರಿಯಾಗಿತ್ತು. ಆದರೆ ಕೆಲವು ನಿಷ್ಠುರ ಸತ್ಯಗಳನ್ನು ನಾವು ಕಡೆಗಣಿಸುವ ಹಾಗಿಲ್ಲ. ಒಂದೆಡೆ ರಷ್ಯಾ ಭಾರತ ಸಾಗುತ್ತಿರುವ ದಾರಿಯನ್ನು ನೋಡಿ ಗೊಂದಲಗೊಂಡಿದ್ದರೆ, ಇನ್ನೊಂದೆಡೆ ಚೀನಾ, ತನ್ನನ್ನು ಎಲ್ಲೆಡೆಯಿಂದಲೂ ಸುತ್ತುವರಿಯಬೇಕು ಎನ್ನುವ ಅಮೆರಿಕದ ಯೋಜನೆಯ ಅಂಗವಿದು ಎಂದು ಭಾರತದ ನಡೆಯನ್ನು ಅನುಮಾನದಿಂದ ನೋಡುತ್ತಿದೆ. ಇನ್ನು ಅಮೆರಿಕದ ವಿಷಯಕ್ಕೆ ಬಂದರೆ, ಅದಕ್ಕೇನಿದ್ದರೂ ಭಾರತದಿಂದ ಬೇಕಿರುವುದು ಲಾಭವಷ್ಟೆ(ವ್ಯಾಪಾರದ ದೃಷ್ಟಿಯಿಂದ ಇತ್ಯಾದಿ). ಹಾಗಾಗಿ ಹೇಗೆ ನೋಡಿದರೂ ಭಾರತವೇ ನಷ್ಟ ಅನುಭವಿಸುತ್ತಿರುವುದು. ಒಂದು ವೇಳೆ ಭಾರತವೇನಾದರೂ ರಷ್ಯಾದೊಂದಿಗೆ ಸಂಬಂಧ ಕಳದುಕೊಂಡರೆ ಅನೇಕ ಗಂಭೀರ ಸಮಸ್ಯೆಗಳು ನಮಗೆದುರಾಗಬಹುದು. ಸ್ವಾತಂತ್ರ್ಯಾ ನಂತರ ನಮ್ಮ ದೇಶದ ಅತಿ ದೊಡ್ಡ ಯುದ್ಧೋಪಕರಣಗಳ ಪೂರೈಕೆದಾರ ರಷ್ಯಾ. ನಮ್ಮನಾಡಿನಿಂದ ಎದ್ದುಹೋದ ಸರ್ವಾಧಿಕಾರಿ ಇಂಗ್ಲೆಂಡಿನವರಾಗಲಿ ಅಥವಾ ಅಂದಿನ ಅತ್ಯಂತ ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದ ಅಮೆರಿಕ ಆಗಲೀ ಹೊಸ ರಾಷ್ಟ್ರಕ್ಕೆ(ಭಾರತಕ್ಕೆ) ಒಂದಿನಿತೂ ಸಹಾಯ ಮಾಡಲಿಲ್ಲ. ಆದರೆ ಸೋವಿಯತ್ ಒಕ್ಕೂಟ ಮಾತ್ರ ಎಲ್ಲಾ ರೀತಿಯಿಂದಲೂ ಭಾರತದ ಮಾಂಸ ಖಂಡಗಳು ಬಲಿಷ್ಠವಾಗುವುದಕ್ಕೆ ಸಹಾಯ ಮಾಡಿತು.
ಇಷ್ಟೇ ಅಲ್ಲದೆ ರಷ್ಯಾ ತನ್ನ ಮಿಲಿಟರಿ ತಂತ್ರಜ್ಞಾನದ ಪ್ರಮುಖ ಸೂತ್ರಗಳನ್ನು ಭಾರತದೊಂದಿಗೆ ಮೊದಲಿನಿಂದಲೂ ಹಂಚಿಕೊಳ್ಳುತ್ತಾ ಬಂದಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತ ಮತ್ತು ರಷ್ಯಾ ಜಂಟಿಯಾಗಿ ಭಾಗವಹಿಸಿ ಅತ್ಯಾಧುನಿಕ ಯುದ್ಧವಿಮಾನಗಳನ್ನು ಮತ್ತು ಬಹು ಉಪಯೋಗಿ ಟ್ರಾನ್ಸ್‌ಪೋರ್ಟ್ ಜೆಟ್‌ಗಳನ್ನು ತಯಾರು ಮಾಡಿವೆ. ಬ್ರಹ್ಮೋಸ್ ಮಿಸೈಲ್, ಟಿ-90 ಟ್ಯಾಂಕ್ ಮತ್ತು ಸುಖೋಯ್ ಯುದ್ಧ ವಿಮಾನಗಳು ನಮ್ಮ ನಡುವಿನ ಸಂಬಂಧದ ಪ್ರತೀಕಗಳಾಗಿ ಮಿಂಚುತ್ತಿವೆ. ಇದೆಲ್ಲ ನಡೆದದ್ದು, ಅಮೆರಿಕ ನಮಗೆ ಯಾವುದೇ ರೀತಿಯ ತಂತ್ರಜ್ಞಾನ ಸಹಕಾರ ನೀಡಲು ಒಪ್ಪಿಗೆ ನೀಡದ ಸಂದರ್ಭದಲ್ಲಿಯೇ! ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಕ್ರಯೋಜೆನಿಕ್ ಇಂಜಿನ್‌ಗಳ ಬಗ್ಗೆ ಮಾಹಿತಿ ಅಥವಾ ಸಹಕಾರ ನೀಡಲು ಸಹ ಅಮೆರಿಕ ನಿರಾಕರಿಸಿತ್ತು!
ಹಾಗಂತ ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳಲ್ಲಿ ಯಾವುದೇ ಅಡ್ಡಿಗಳು ಎದುರಾಗಲಿಲ್ಲ ಎಂದಲ್ಲ. ಗೋರ್ಶಕೋವ್-ವಿಕ್ರಮಾದಿತ್ಯ ಯೋಜನೆಯ ವಿಳಂಬದಿಂದಾಗಿ, ಒಟ್ಟು ಖರ್ಚು 2013ರ ವೇಳೆಗೆ 974 ಮಿಲಿಯನ್ ಡಾಲರ್‌ಗಳಿಂದ 2.34 ಬಿಲಿಯನ್ ಡಾಲರ್‌ಗಳನ್ನು ತಲುಪಿತು. ಇನ್ನು ಕೂಡಂಕುಳಂ ಯೋಜನೆಯ ವಿರುದ್ಧ ಭಾರತದಲ್ಲಿ ಪ್ರತಿಭಟನೆಗಳು ನಡೆದಿದ್ದಕ್ಕಾಗಿ, 3 ಮತ್ತು 4ನೇ ಘಟಕದ ಕುರಿತು ಎರಡೂ ದೇಶಗಳ ನಡುವೆ ಆಗಬೇಕಿದ್ದ ಒಪ್ಪಂದ ಮುರಿದು ಬಿದ್ದಿತು. ಇತ್ತೀಚೆಗೆ ಮನಮೋಹನ್ ಸಿಂಗ್ ಅವರು ಈ ಕುರಿತು ರಷ್ಯಾದ ಮನವೊಲಿಸಲು ಪ್ರಯತ್ನಿಸಿದರಾದರೂ ಅದು ಸಫಲವಾಗಲಿಲ್ಲ. ಆದರೆ ರಷ್ಯಾ ಕಷ್ಟಕಾಲದಲ್ಲಿ ಭಾರತಕ್ಕೆ ನೀಡಿದ ಬೆಂಬಲವನ್ನು ಪರಿಗಣಿಸಿದಾಗ, ಈ ವಿದ್ಯಮಾನಗಳೆಲ್ಲ ಅಷ್ಟೇನೂ ಗಂಭೀರವೆಂದು ಅನಿಸುವುದಿಲ್ಲ. ಇಂದಿನ ದಿನಗಳಲ್ಲಿ ಸ್ಯಾಟಲೈಟ್ ನ್ಯಾವಿಗೇಶನ್ ಸಹಾಯವಿಲ್ಲದೆ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುವುದೇ ಸಾಧ್ಯವಿಲ್ಲವೇನೋ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ಇಂಥ ವಿಷಯಗಳಲ್ಲೆಲ್ಲ ಭಾರತಕ್ಕೆ ಎಂದೂ ಸಹಾಯ ಮಾಡಿಲ್ಲ, ಮಾಡುತ್ತದೆ ಎನ್ನುವ ಯಾವ ನಂಬಿಕೆಯೂ ಇಲ್ಲ. ಆದರೆ ರಷ್ಯಾ ಮಾತ್ರ 2011ರಲ್ಲಿ ತನ್ನ ಗ್ಲೋನಾಸ್ ವ್ಯವಸ್ಥೆಯಿಂದ ಸಹಾಯ ತೆಗೆದುಕೊಳ್ಳಲು ಭಾರತಕ್ಕೆ ಅನುಮತಿ ನೀಡಿತು. ಇನ್ನು ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ತಜಕಿಸ್ತಾನದ ಭಾಗಗಳಲ್ಲಿ ಇಂದು ಭಾರತದ ಮಿಲಿಟರಿ ಏನಾದರೂ ಇದೆಯೆಂದರೆ ಅದು ಕೇವಲ ರಷ್ಯಾದ ಸಹಾಯದಿಂದ ಮಾತ್ರ ಎನ್ನುವುದನ್ನು ನಾವು ಮರೆಯಬಾರದು.
ಇನ್ನೊಂದೆಡೆ, ಜಗತ್ತಿನ ಅತಿ ಬಲಾಢ್ಯ ರಾಷ್ಟ್ರವಾಗಬೇಕು ಎನ್ನುವ ಕನಸಿನೊಂದಿಗೆ ಓಡುತ್ತಿರುವ ಚೀನಾ, ಭಾರತ ಸಮಸ್ಯೆಗಳಿಂದ ನರಳುತ್ತಲೇ ಇದ್ದರೆ ಚೆನ್ನ ಎಂದು ಭಾವಿಸುತ್ತದೆ. ಹಿಮಾಲಯಗಳಲ್ಲಿ ಅದು ತನ್ನ ಸೇನೆಯನ್ನು ಹೆಚ್ಚಿಸಿರುವುದು, ಪಾಕಿಸ್ತಾನಕ್ಕೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತಿರುವುದು, ಶ್ರೀಲಂಕಾದೊಂದಿಗೆ ಸಂಬಂಧ ಬೆಳೆಸುತ್ತಿರುವುದೆಲ್ಲ ಇದೇ ಕಾರಣಕ್ಕಾಗಿಯೇ. ತನ್ನ ಈ ಗುರಿಯಲ್ಲಿ ಅದು ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿದೆ. ಆದರೆ ಚೀನಾದ ಈ ಮಹತ್ವಾಕಾಂಕ್ಷಿ ಗುಣದಿಂದ ರಷ್ಯಾ ಕೂಡ ತೊಂದರೆ ಅನುಭವಿಸುತ್ತಿದೆ. ಸೈಬೀರಿಯನ್ ಪ್ರಾಂತ್ಯಕ್ಕೆ ಸಾಗರೋಪಾದಿಯಲ್ಲಿ ಚೀನಿಯರು ಗುಳೆಹೋಗುತ್ತಿದ್ದಾರೆ. ಭಾರತ ಈ ವಿಷಯವನ್ನು ಎತ್ತಿ ಹಿಡಿದು ರಷ್ಯಾ ಮತ್ತು ಜಪಾನ್‌ನೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಂಡು ಲಾಭಮಾಡಿಕೊಳ್ಳಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ಇನ್ನೊಂದೆಡೆ ಚೀನಾ ಶಾಂಘಾಯ್ ಕೋ-ಆಪರೇಷನ್ ಮೂಲಕ ರಷ್ಯಾದ ಮಿಲಿಟರಿಯೊಂದಿಗೆ ಹತ್ತಿರವಾಗುತ್ತಲಿದೆ. ದಿನೇ ದಿನೇ ಹೊಸ ಎಚ್ಚರಿಕೆಯ ಸಂದೇಶಗಳು ದೆಹಲಿಗೆ ಬಂದು ತಲುಪುತ್ತಲೇ ಇವೆ. ಆದರೆ ಆ ಸಂದೇಶಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ನಾಯಕತ್ವ ನಮ್ಮಲ್ಲಿಲ್ಲ ಎನ್ನುವುದೇ ವಿಪರ್ಯಾಸ.

- ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.