ಬುಸ್ಸು ಬುಸ್ಸು ಅಂತೈತೆ ನ್ಯಾಸ್ನಲ್ ಟ್ರಾವಲ್ಸ್ ಬಸ್ಸು
ನಮುಸ್ಕಾರ ಜಮೀರಪ್ಪ, ಇದೇನು ನೀವು ಬಸ್ಸು ವೋಡಿಸ್ಕಂಡು ಬಂದಿದ್ದೀರ.
'ನಮುಸ್ಕಾರ ಜಮೀರಪ್ಪ, ಇದೇನು ನೀವು ಬಸ್ಸು ವೋಡಿಸ್ಕಂಡು ಬಂದಿದ್ದೀರ. ಡೈವರ್ರು ಇಲ್ವಾ ? ಏನಾಗದೆ ನಿಮ್ ಬಸ್ಗೆ. ಕೆಟ್ಟೋಗದಾ ?' ಅಂತ ಮೈಲಾರಿ ಕೇಳ್ದ.
'ನನ್ ಲೈಫೇ ಕೆಟ್ಟು ಎಕ್ಕುಟ್ಟೋಗದೆ ಬಸ್ಸು ಏನು ಮಹಾ ಅಂತೀನಿ'
ಅಂದ್ರು ಜಮೀರಪ್ಪ.
ಮೈಲಾರಿ ಎಲ್ಗೋ ಯರ್ರಾಬಿರ್ರಿ ವೊಂಟಿದ್ದ. ಅಮಾಸೆ ಅಡ್ಡ ಸಿಕ್ಬುಟ್ಟು 'ಲೇ ಮೈಲಾರಿ ಎಲ್ಲಿಗ್ಲಾ ವೊಂಟೆ ?' ಅಂತ ಕೇಳ್ದ. 'ಸಣ್ ಕೆಲ್ಸ ಇತ್ತು ಕಣ್ಲಾ, ಅದುಕ್ಕೆ ಅಮೆರಿಕಕ್ಕೆ ವೋಯ್ತಾಯಿದ್ದೀನಿ ಬತ್ತೀಯ ?' ಅಂದ ಮೈಲಾರಿ. 'ಅಮಾಸೆಗೆ ಸಿಟ್ಟು ಹತ್ತೋಯ್ತು. ಲೇ ಮೈಲಾರಿ ಅಲ್ಲಿ ನನ್ ಬಾಮೈದ ಮದ್ದೂರು ವಡೆ ಅಂಗ್ಡಿ ಮಡಗೌನೆ. ಅವುನ್ನ ಕೇಳ್ದೆ ಅಂತೇಳು' ಅಂದ.
'ಇನ್ನೇನ್ಲ, ವೋಗೋ ವೊತ್ನಾಗೆ, ಅಡ್ಡ ಹಾಕ್ಬುಟ್ಟು, ಎಲ್ಗೆ, ಏನು ? ಅಂತ ಕೇಳುದ್ರೆ ವುರೀತದೋ ಇಲ್ವೋ. ಏನಿಲ್ಲ, ಸಿಎಂ ಸಿದ್ರಾಮಣ್ಣೋರು ಕಾಲು ಎಳ್ಯಕ್ಕೆ ವೋಬೇಡಿ, ಬೇಕಾದ್ರೆ ಸರ್ಕಾರುದ್ದು ಕಿವಿ ಹಿಂಡ್ಕಳಿ ಅಂತ ಸೆಂಟ್ರಲ್ ಮಂತ್ರಿ ಖರ್ಗೆ ಸಾಹೇಬ್ರು ಯೋಳವ್ರೆ. ಅದುಕ್ಕೆ ಕಿವಿ ಹಿಂಡ್ಬುಟ್ಟು ಬರಾಣ ಅಂತ ವೋಯ್ತಾಯಿದ್ದೀನಿ' ಅಂತ ಯೋಳ್ದ ಮೈಲಾರಿ.
'ಲೇ ಅವ್ರು ಯೋಳಿರಾದು ಕೈ ಪಕ್ಸುದೋರ್ಗೆ. ನಿಂಗಲ್ಲ ತಿಳೀತಾ ?. ನೀನೇನರ ಕಿವಿ ಹಿಂಡಕ್ಕೆ ವೋದ್ರೆ ಸೊಂಟ ಮುರ್ದು ಕಳುಸ್ತರೆ ಅಷ್ಟೇಯ ವೋಗೋಗು' ಅಂತಂದ ಅಮಾಸೆ.
'ವೋಗ್ಲಿ ಬುಡಪ್ಪ ಬೈಟು ಕಾಪಿ ಹಾಕ್ಕಂಡು ಬರಾವ ಬಾರ್ಲಾ' ಅಂತೇಳಿ ಅಮಾಸೆನ ಕರ್ಕಂಡು ಮೈಲಾರಿ ವೊಂಟ. ದಾರಿನಾಗೆ ನ್ಯಾಸ್ನಲ್ ಟ್ರಾವಲ್ಸು ಬಸ್ಸು ಕೆಟ್ಟೋಗಿ ನಿಂತಿತ್ತು. ಎಂಎಲ್‌ಎ ಜಮೀರು ರಿಪೇರಿ ಮಾಡ್ಕಂಡು ಕುಂತಿದ್ರು.
'ನಮುಸ್ಕಾರ ಜಮೀರಪ್ಪ, ಇದೇನು ನೀವು ಬಸ್ಸು ವೋಡಿಸ್ಕಂಡು ಬಂದಿದ್ದೀರ. ಡೈವರ್ರು ಇಲ್ವಾ ? ಏನಾಗದೆ ನಿಮ್ ಬಸ್ಗೆ. ಕೆಟ್ಟೋಗದಾ ?' ಅಂತ ಮೈಲಾರಿ ಕೇಳ್ದ. 'ನನ್ ಲೈಫೇ ಕೆಟ್ಟು ಎಕ್ಕುಟ್ಟೋಗದೆ ಬಸ್ಸು ಏನು ಮಹಾ ಅಂತೀನಿ' ಅಂದ್ರು ಜಮೀರಪ್ಪ.
'ಇದೇನು ಸಿವಾ ಹಿಂಗಂತೀರಿ ? ದ್ಯಾವೇಗೌಡ್ರು ಪಾರ್ಟಿನಾಗಿ ಬೋ ಪಸಂದಾಗಿ ಇದ್ದೀರಿ. ಕೆಟ್ಟೋಗೋ ಮಾತು ಯಾಕೆ ಬುಡಿ. ಅಲ್ಲ ನೀವು ಕುಮಾರಣ್ಣುನ್ನ ಬುಟ್ಟು ಕೈ ಪಕ್ಸುಕ್ಕೆ ವೊಂಟೋಯ್ತೀರಿ ಅಂತ ಎಲ್ಲಾರೂವೆ ಯೋಳ್ತಾವ್ರೆ. ಅದ್ಯಾಕೆ ? ನೀವಿಬ್ರೂ ಏನರ ಟೂ ಬುಟ್ಕಂಬುಟ್ಟಿದ್ದೀರ ಹೆಂಗೆ ? ಏನರ ಯೋಳಿ, ನಿಮ್ ಜೋಡಿ ಭಲೇ ಐನಾತಿ ಜೋಡಿ ಬುಡಿ. ಸುಮ್ಕೆ ಪಾರ್ಟಿನಾಗೆ ಇದ್ದೋಗಿ, ಯಾಕೆ ಬುಟ್ಟು ವೋಯ್ತೀರಿ' ಅಂದ ಮೈಲಾರಿ.
ಮೈಲಾರಿ ಮಾತು ಕೇಳಿ ಜಮೀರಪ್ಪ ಬುಸ್ಸು ಬುಸ್ಸು ಅಂತ ಬಸ್ನಂಗೆ ಬುಸುಗುಡಕ್ಕೆ ಸುರು ಮಾಡುದ್ರು. 'ಏನ್ಲಾ ಮಾಡ್ಲಿ ದ್ಯಾವೇಗೌಡ್ರು ಪಕ್ಸುದಾಗೆ ಇದ್ಕಂಡು. ಎಲ್ಲಾರೂವೆ ಸೇರ್ಕಂಡು ನನ್ನುನ್ನ ಮುಂಡಾಮೋಚುದ್ರು. ಇಲ್ಲೇ ಇದ್ರೆ ಮೈಮ್ಯಾಗಿರೋ ಬಟ್ಟೆನೂವೆ ವುಳ್ಯಂಗಿಲ್ಲ'.
'ಅದುಕ್ಕೆ ಕೈ ಪಕ್ಸುಕ್ಕೆ ವೋಗಾವ ಅಂತ ಕಾಯ್ತಾ ಇದ್ದೀನಿ. ಆ ಪಕ್ಸುದೋರು ಸೇರುಸ್ಕಳಂಗಿಲ್ಲ, ಬುಡಂಗಿಲ್ಲ. ಸ್ಯಾನೆ ಬ್ಯಾಸ್ರ ಆಗೋಗದೆ. ಬ್ಯಾಸ್ರ ಕಳ್ಯಕ್ಕೆ ಅಂತೇಳಿ ನಾನೇ ಬಸ್ರು ವೋಡಿಸ್ಕಂಡು ಬಂದೆ. ಮಗಂದು ಕೆಟ್ಟೋಯ್ತು. ನಸೀಬು ವುಲ್ಟಾ ಆಗೋದ್ರೆ ಬಸ್ಸೂ ಕೆಟ್ಟೋಯ್ತದೆ, ತಲೆನೂವೆ ಕೆಟ್ಟು ಕೆರ ಹಿಡ್ದೋಯ್ತದೆ ಅಲ್ವಾ ?' ಅಂತೇಳಿ ಜಮೀರಪ್ಪ ವೊಂಟೇ ವೋದ್ರು.
ಅವ್ರು ಹಂಗೆ ವೋಯ್ತಾಯಿದ್ದಂಗೆ ಮಾಜಿ ಮಂತ್ರಿ ಬಸನಗೌಡ ಯತ್ನಾಳ್ರು ಬಂದ್ರು. 'ವೋ, ನಮುಸ್ಕಾರ ನಾಯಕರ್ಗೆ, ಅಂದಂಗೆ ಯಾವ್ ಪಾರ್ಟಿನಾಗೆ ಇದ್ದೀರಿ ?' ಅಂತ ಮೈಲಾರಿ ಕೇಳ್ದ. 'ವೋಡ್ಕಬೇಕು ನಾನು ನಂದೇ ತಕ್ಕಂಡು' ಅಂದ್ರು ಯತ್ನಾಳ್ರು.
'ಆಯ್ಯೋ ತಪ್ಪೇನಾದ್ರೂವೆ ಮಾತಾಡುದ್ನ ಸಿವನೇ ? ಅದ್ಯಾಕೆ ಹಿಂಗೆ ಮಾತಾಡ್ತೀರಿ ?' ಅಂದ ಮೈಲಾರಿ. 'ನಾನು ಯಾವ್ ಪಾರ್ಟಿನಾಗೆ ಇದ್ದೀನಿ ಅನ್ನೋದು ನಂಗೇ ಮರ್ತೋಗದೆ' ಅಂದ್ರು ಯತ್ನಾಳ್ರು. 'ನೀವು ದ್ಯಾವೇಗೌಡ್ರು ಪಕ್ಸುದಾಗೆ ಇದ್ದೀರಲ್ವ. ಪಾರ್ಟಿ ಬುಟ್ಟು ವೋಯ್ತೀರಂತೆ ಯಾಕೆ ?' ಅಂತ ಮೈಲಾರಿ ಕೇಳ್ದ.
'ಅಲ್ಲಲೇ ಮೈಲಾರಿ, ನಾನು ಗೌಡ್ರು ಪಾರ್ಟಿನಾಗೆ ಇದ್ದೀನಿ ಅಂತ ಯಾರುಗ್ಲಾ ಗೊತ್ತು ? ನಂಗೇ ಗೊತ್ತಿಲ್ಲ' ಅಂದ್ರು ಯತ್ನಾಳ್ರು. 'ಇದೇನು ಹಿಂಗಂತೀರಿ ? ನೀವು ಸ್ಟೇಟು ಲೀಡ್ರು ನೀವಿರಾದು ಯಾರ್ಗೂ ತಿಳ್ಯಾಕಿಲ್ವಾ ?' ಅಂತ ಮೈಲಾರಿ ಕೇಳ್ದ.
'ಸುಮ್ಕೆ ಇದ್ರೆ ಏನ್ಲಾ ಬಂತು ಭಾಗ್ಯ. ಎಲ್ಲಾನೂವೆ ಅವ್ರು ಅವ್ರೇ ಸೇರ್ಕಂಡು ಮಾಡ್ಕತರೆ. ತಾಳ, ತಂಬೂರಿ ಎಲ್ಲಾ ಅವ್ರೇ ಮಡಿಕ್ಕಂಡವ್ರೆ. ಕಿಸ್ಯಕ್ಕೆ ನಂಗೆ ಅಲ್ಲಿ ಏನೂವೆ ಇಲ್ಲ. ಅದುಕ್ಕೆ ಕಮ್ಲ ಪಕ್ಸುಕ್ಕೆ ವೋಯ್ತಾಯಿದ್ದೀನಿ' ಅಂದ್ರು ಯತ್ನಾಳ್ರು.
'ಈ ಅವ್ತಾರುಕ್ಕೆ ಕಮ್ಲ ಪಕ್ಸ ಬುಟ್ಟು ಯಾಕೆ ವೋಬೇಕಾಯಿತ್ತು ಯೋಳಿ ?' ಅಂದ ಮೈಲಾರಿ. 'ಆವಾಗ ಅಲ್ಲಿ ವುಸ್ರು ಕಟ್ಟೋ ವಾತಾವರಣ ಇತ್ತು. ಈವಾಗ ಇಲ್ಲಿ ವುಸ್ರು ಕಟ್ತಾ ಐತೆ' ಅದುಕ್ಕೆ ಅಂತೇಳಿ ಯತ್ನಾಳ್ರು ವೊಂಟ್ರು. 'ಮನೆಗೋಗಿ ಆಕ್ಸಿಜನ್ ತಕ್ಕಳಿ' ಅಂತೇಳಿ ಮೈಲಾರಿ, ಆಮಾಸೆ ಕಾಪಿ ಕುಡ್ಯಕ್ಕೆ ವೋದ್ರು.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

