ಅಂಕಣಗಳು

ಮಂಡೇಲ ಹದಿನೆಂಟು ವರ್ಷ ಕಳೆದ ಆ ಜೈಲು ಕೋಣೆಯ ಮುಂದೆ ನಿಂತಾಗ!

'ದಕ್ಷಿಣ ಆಫ್ರಿಕಾದಲ್ಲಿ ಹತ್ತು ದಿನ ಓಡಾಡಿದಿರಲ್ಲ, ನಿಮ್ಮ ಮನಸ್ಸಿಗೆ ತೀರಾ ನಾಟಿದ, ತುಂಬಾ...

ಮಂಡೇಲ ಹದಿನೆಂಟು ವರ್ಷ ಕಳೆದ ಆ ಜೈಲು ಕೋಣೆಯ ಮುಂದೆ ನಿಂತಾಗ!
Published On :

'ದಕ್ಷಿಣ ಆಫ್ರಿಕಾದಲ್ಲಿ ಹತ್ತು ದಿನ ಓಡಾಡಿದಿರಲ್ಲ, ನಿಮ್ಮ ಮನಸ್ಸಿಗೆ ತೀರಾ ನಾಟಿದ, ತುಂಬಾ ಇಷ್ಟವಾದ ಸಂಗತಿ, ಸ್ಥಳ, ಅನುಭವ ಯಾವುದು?' ಎಂದು ಸ್ನೇಹಿತರೊಬ್ಬರು ಕೇಳಿದರು. 'ಅಲ್ಲಿ ನೋಡಿದ್ದೆಲ್ಲ ಹೊಸತು ಪ್ರತಿ ದೃಶ್ಯವೂ ನವನವೀನ, ಪ್ರತಿಕ್ಷಣವೂ ತಾಜಾ. ಅವೆಲ್ಲವನ್ನೂ ಕಣ್ಣೊಳಗೆ, ಮನಸ್ಸಿನೊಳಗೆ ತುಂಬಿಕೊಂಡಿರುವಾಗ, ಆ ಪೈಕಿ ಒಂದನ್ನೋ, ಎರಡನ್ನೋ ಹೆಕ್ಕಿ, ಇದೇ ಅದು ಎಂದು ಹೇಳುವುದು ಬಹಳ ಕಷ್ಟ. ಹಾಗೆ ಮಾಡುವುದು ನನ್ನ ಪ್ರವಾಸಕ್ಕೆ ಅಪಚಾರ ಎಸಗಿದಂತೆ' ಎಂದೆ. ಆದರೂ ಸ್ನೇಹಿತ ಬಿಡಲಿಲ್ಲ. 'ನೀವು ಹೇಳೋದನ್ನ ಒಪ್ಪಿದೆ. ಆದರೂ ಪ್ರತಿ ಪ್ರವಾಸದಲ್ಲೂ ನಮ್ಮ ಕೈ ಜಗ್ಗುವ, ಮನಸ್ಸು ಕಲಕುವ, ಹೃದಯಕ್ಕೆ ನಾಟುವ ಒಂದೆರಡು ಅನುಭವಗಳಾದರೂ ದಕ್ಕುತ್ತವೆ. ಅಂಥವನ್ನು ಹೇಳಬಹುದಲ್ಲ?' ಎಂದ. ಆಗ ನನ್ನ ಸ್ನೇಹಿತ ನನ್ನ ಕೆಲಸವನ್ನು ತುಸು ಸ್ಪಷ್ಟಪಡಿಸಿದ್ದ. ಆಫ್ರಿಕಾದ ಕಾಡುಗಳು, ಕೇಪ್‌ಟೌನ್‌ನ ಸುಂದರ ಕಡಲ ಕಿನಾರೆ, ವಾಸ್ಕೋಡಗಾಮ ಕಾಲಿಟ್ಟ ಆಫ್ರಿಕಾ ಖಂಡದ ಕೊನೆಯ ತುದಿ ಕೇಪ್ ಆಫ್ ಗುಡ್‌ಹೋಪ್, ರುದ್ರ ರಮಣೀಯ ಜಗತ್ತಿನ ಏಳು ನೈಸರ್ಗಿಕ ಅಚ್ಚರಿಗಳಲ್ಲೊಂದಾದ ಟೇಬಲ್ ಮೌಂಟನ್, ಖಾಸಗಿ ವನ್ಯಧಾಮದಲ್ಲಿ ಮಾರುದ್ದ ಸನಿಹದಲ್ಲಿ ರಾಜಾರೋಷವಾಗಿ ತಿರುಗಾಡುವ ಸಿಂಹ, ಆನೆ, ಚಿರತೆ, ಘೇಂಡಾಮೃಗ, ಕಾಡೆಮ್ಮೆ, ಜಿರಾಫೆ, ಜೀಬ್ರಾ, ಡರ್ಬನ್‌ನಲ್ಲಿ ಮಹಾತ್ಮ ಗಾಂಧಿ ನೆಲೆಸಿದ ಮನೆ... ಹೀಗೆ ಪ್ರತಿಯೊಂದು ಭೇಟಿ, ದೃಶ್ಯವೂ ಸ್ಮರಣೀಯವೇ. ಹಾಗೆಂದು ಹೇಳಿದರೂ ಸ್ನೇಹಿತ, 'ಅವೆಲ್ಲ ಸರಿ. ಆದರೆ ಶಾಶ್ವತ ಮನಸ್ಸಿನಲ್ಲಿ ಉಳಿಯುವ ಅನುಭವ ಆಗಲಿಲ್ಲವಾ?' ಎಂದ.  ಒಂದು ಕ್ಷಣದ ಮೌನದ ಬಳಿಕ ಹೇಳಿದೆ.
'ನೆಲ್ಸನ್ ಮಂಡೇಲ ಹದಿನೆಂಟು ವರ್ಷಗಳ ಕಾಲ ಉಳಿದ ಸೆರೆಮನೆಗೆ ಭೇಟಿ ನೀಡಿದ್ದು. ಇಡೀ ಪ್ರವಾಸದ most striking moment ಅಂದ್ರೆ ಅದೇ ನನ್ನ ಪಾಲಿಗೆ. ಈಗಲೂ ನನಗೆ ಮಂಡೇಲ, ಆ ಸೆರೆಮನೆ, ಅಲ್ಲಿನ ಕರ್ಣಕಠೋರ ಮೌನ ವಿಪರೀತವಾಗಿ ಕಾಡುತ್ತಿದೆ. ಬಹುಶಃ ಆ ಜೈಲಿಗೆ ಭೇಟಿ ಕೊಡದಿದ್ದಿದ್ದರೆ ದಕ್ಷಿಣ ಆಫ್ರಿಕಾ ಪ್ರವಾಸ ಒಂದು ಮಾಮೂಲಿ ಟೂರ್ ಆಗಿಬಿಡುತ್ತಿತ್ತೇನೋ' ಎಂದೆ.
ಆ ದಿನ ಬೆಳಗ್ಗೆ ಕೇಪ್‌ಟೌನ್‌ನ ಟೇಬಲ್ ಮೌಂಟನ್ ಏರಿದ್ದೆವು. ಮೂರು ದಿನಗಳಿಂದ ಆ ನಯನ ಮನೋಹರ ಪರ್ವತ ಹವಾಮಾನ ವೈಪರೀತ್ಯದಿಂದ ಮೋಡಗಳಿಂದ ಆವರಿಸಿಕೊಂಡಿತ್ತು. ನಮ್ಮ ಗೈಡ್ ನಾಳೆ, ನಾಳೆ ಎಂದು ಮುಂದೂಡುತ್ತಲೇ ಇದ್ದ. ಅಲ್ಲಿ ಉಳಿಯಲು ಇನ್ನು ಒಂದು ದಿನವಷ್ಟೇ ಉಳಿದಿತ್ತು. ಆದರೆ ಸೂರ್ಯ ನಮ್ಮ ಸಲುವಾಗಿಯೇ ಮೋಡ ಸರಿಸಿ ಹೊರಬಂದಂತೆ ಟೇಬಲ್ ಮೌಂಟನ್ ಮೇಲೆ ವಿರಾಜಮಾನನಾಗಿದ್ದ. ಅಲ್ಲಿ ನಿಂತುಕೊಂಡರೆ ಇಡೀ ಕೇಪ್‌ಟೌನ್ ಅಂಗಾತ ಮಲಗಿದ ದೃಶ್ಯ ಎಂಥವನಲ್ಲಾದರೂ ಪುಳಕ ಹುಟ್ಟಿಸುವಂತಿತ್ತು. ನಮ್ಮ ಟೂರ್‌ಗೈಡ್ ಟೇಬಲ್ ಮೌಂಟನ್‌ನಿಂದ ಸುತ್ತಲೂ ಚಾಚಿರುವ ಸಮುದ್ರವನ್ನು ತೋರಿಸುತ್ತಾ, 'ಅಲ್ಲೊಂದು ಪುಟ್ಟ ದ್ವೀಪ ಕಾಣುತ್ತಲ್ಲಾ, ಅದೇ ರಾಬೆನ್ ಐಲ್ಯಾಂಡ್. ಅಲ್ಲಿನ ಜೈಲಿನಲ್ಲಿಯೇ ನೆಲ್ಸನ್ ಮಂಡೇಲ ಹದಿನೆಂಟು ವರ್ಷ ಕಳೆದಿದ್ದು. ಸಾಯಂಕಾಲ ನಿಮ್ಮನ್ನೆಲ್ಲ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ' ಎಂದು ನನ್ನೊಳಗೊಂದು ನಿರೀಕ್ಷೆ, ತವಕದ ಮಹಾಸಾಗರದ ಅಲೆಯನ್ನೆಬ್ಬಿಸಿದ. ಆ ಪರ್ವತದಿಂದ ರಾಬೆನ್ ಐಲ್ಯಾಂಡ್ ನೀಲಿ ಸಮುದ್ರದಲ್ಲಿ ಹಸುರು ಎಲೆಯೊಂದು ತೇಲುತ್ತಿರುವಷ್ಟು ಪುಟ್ಟದಾಗಿ ಕಾಣುತ್ತಿತ್ತು.
ಮಧ್ಯಾಹ್ನ ಮೂರು ಗಂಟೆಗೆ ರಾಬೆನ್ ಐಲ್ಯಾಂಡ್‌ಗೆ ಹೋಗಲು ಹಡಗಿನಲ್ಲಿ ಕುಳಿತಿದ್ದೆವು . ರಾಬೆನ್ ಐಲ್ಯಾಂಡ್ ಕೇಪ್ ಟೌನ್‌ನಿಂದ ಸುಮಾರು ಹದಿಮೂರು ಕಿಮೀ ದೂರದಲ್ಲಿರುವ ಅತ್ಯಂತ ಸುಂದರ, ಅಂಗೈಯಗಲದ ದ್ವೀಪ. ಮೂರು ಕಿಮೀ ಉದ್ದ ಹಾಗೂ ಎರಡು ಕಿಮೀ ಅಗಲದ ಈ ದ್ವೀಪವನ್ನು ಸಮುದ್ರದ ಅಲೆಗಳು ನುಂಗಿಹಾಕದಿರುವುದೇ ಆಶ್ಚರ್ಯ. ನಿಸರ್ಗದ ಎಲ್ಲಾ ಸೌಂದರ್ಯಗಳನ್ನು ಹೊದ್ದುಕೊಂಡಿರುವ ಈ ರಾಬೆನ್ ಐಲ್ಯಾಂಡ್ ಹದಿನೆಂಟು ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ಪ್ರಭುತ್ವದ ವರ್ಣಭೇದ ನೀತಿಯ ವಿರುದ್ಧ ಸಮರ ಸಾರಿ ರಾಜಕೀಯ ಕೈದಿಯಾದ ನೆಲ್ಸನ್ ಮಂಡೇಲ ಅವರ ಪಡಖಾನೆ ಹಾಗೂ ಬಂದೀಖಾನೆಯಾಗಿತ್ತು. ನೆಲ್ಸನ್ ಮಂಡೇಲ ಅವರನ್ನು ಅಲ್ಲಿನ ಸರ್ಕಾರ ಇಪ್ಪತ್ತೇಳು ವರ್ಷಗಳ ಕಾಲ ಬಂಧನದಲ್ಲಿಟ್ಟಿದ್ದರೆ, ಆ ಪೈಕಿ ಅವರು ಹದಿನೆಂಟು ವರ್ಷವನ್ನು ಈ ದ್ವೀಪದಲ್ಲಿಯೇ ಕಳೆದರು.
ಹಾಗೆ ನೋಡಿದರೆ ಈ ದ್ವೀಪ ಶಾಪಗ್ರಸ್ತ ತಾಣ. ಶಿಕ್ಷೆಗೊಳಗಾದವರು, ಮರಣದಂಡನೆಗೊಳಗಾದವರು, ಸಮಾಜದಿಂದ ಬಹಿಷ್ಕೃತರಾದವರು, ಲೋಕ ನಿಂದಿತರು, ಸಾಂಕ್ರಾಮಿಕ ರೋಗ ಪೀಡಿತರ ನೆಲೆ ಈ ದ್ವೀಪ. ಅಲ್ಲಿಗೆ ಕಣ್ತಪ್ಪಿಸಿ ಹೋಗುವುದು ಸುಲಭವಂತೂ ಅಲ್ಲವೇ ಅಲ್ಲ. ಅದರಲ್ಲೂ ಅಲ್ಲಿರುವ ಸೆರೆಮನೆಯನ್ನು ಭೇದಿಸಿ, ಸಮುದ್ರವನ್ನು ಈಜಿ ಕೇಪ್‌ಟೌನ್ ಸೇರುವುದು ಆಗದ ಮಾತು. ಈ ಕಾರಣದಿಂದ ತನಗೆ ಆಗದವರನ್ನು ಸುರಕ್ಷಿತವಾಗಿ ಅಲ್ಲಿನ ಸರ್ಕಾರ ಇಡಲು ಬಯಸಿದರೆ ಅದು ರಾಬೆನ್ ಐಲ್ಯಾಂಡ್‌ನಲ್ಲಿ.
ವರ್ಣಭೇದ ನೀತಿ ವಿರೋಧಿಸಿ ಸರ್ಕಾರದ ವಿರುದ್ಧ ಬಂಡಾಯವೆದ್ದು, ಇಡೀ ದೇಶದಲ್ಲಿ ಕ್ರಾಂತಿಯ ಕಹಳೆ ಊದಿದ, ನೆಲ್ಸನ್ ಮಂಡೇಲರನ್ನು ರಾಜಕೀಯ ಕೈದಿಯೆಂದು ಸುರಕ್ಷಿತವಾಗಿ ಬಂಧಿಸಿಡಬೇಕೆಂದು ನಿರ್ಧರಿಸಿದಾಗ ತಕ್ಷಣ ನೆನಪಾದದ್ದೇ ರಾಬೆನ್ ಐಲ್ಯಾಂಡ್. ಮಂಡೇಲಾರನ್ನು ಊರೊಳಗೆ ಇಟ್ಟುಕೊಳ್ಳುವುದು ಅಪಾಯ ಹಾಗೂ ಅಸುರಕ್ಷಿತವೆಂಬುದು ಅಲ್ಲಿನ ಸರ್ಕಾರಕ್ಕೆ ಮನದಟ್ಟಾಗಿತ್ತು. ಊರೊಳಗಿನ ಜೈಲಿನಲ್ಲಿ ಎಂಥ ಭದ್ರತೆಯಲ್ಲಿಟ್ಟುಕೊಂಡರೂ, ಗೌಪ್ಯ ಸಂದೇಶ ಮಂಡೇಲಗೆ ತಲುಪುವುದು ಸಾಧ್ಯವಿತ್ತು. ಅಲ್ಲದೇ ಜೈಲಿನೊಳಗಿನಿಂದ ಮಂಡೇಲ ಜನರನ್ನು ಪ್ರಚೋದಿಸುವ ಸಾಧ್ಯತೆಯೂ ಇತ್ತು. ಇವ್ಯಾವ ಗೊಡವೆಯೇ ಬೇಡ ಎಂದು ಅಲ್ಲಿನ ಸರ್ಕಾರ ಅವರನ್ನು ರಾಬೆನ್ ಐಲ್ಯಾಂಡ್‌ನಲ್ಲಿರುವ ಜೈಲಿನಲ್ಲಿಡಲು ನಿರ್ಧರಿಸಿತು.
ಅಂದು ಹಡಗಿನಿಂದಿಳಿದು ರಾಬೆನ್ ಐಲ್ಯಾಂಡ್‌ನಲ್ಲಿ ಕಾಲಿಟ್ಟಾಗ ಸಣ್ಣ ರೋಮಾಂಚನ. ಇಡೀ ಜಗತ್ತಿಗೆ ಆ ಹದಿನೆಂಟು ವರ್ಷಗಳ ನಿಗೂಢವಾಗಿದ್ದ ತಾಣ ಇದೇನಾ? ಜಲಚರಗಳ ಹೊರತಾಗಿ ಮನುಷ್ಯ ಮಾತ್ರದವರ್ಯಾರೂ ಸುಳಿಯದ ಈ ನೀರಗುಡ್ಡೆಯಲ್ಲಿ ಆ 'ಮಹಾಪುರುಷ' ಅಷ್ಟೊಂದು ವರ್ಷಗಳನ್ನು ಮೌನವಾಗಿ ಕಳೆದಿದ್ದಾದರೂ ಹೇಗೆ? ಈ ಕರಿನೀರ ಶಿಕ್ಷೆ ಅದೆಷ್ಟು ಭೀಕರ? ನನ್ನ ಮಂಡೆ ತುಂಬಾ ಮಂಡೇಲ... ಮಂಡೇಲ!
ಈ ನಿರ್ಜನ ದ್ವೀಪದಲ್ಲಿ ನಿಧಾನವಾಗಿ ಕ್ರಮಿಸುತ್ತಿದ್ದಂತೆ ಚಂದಮಾಮದ ಬೇತಾಳನ ಕಥೆಯಲ್ಲಿ ಬರುವ ಪಾಳು ಬಿದ್ದ ನಗರಿಯ ನೆನಪುಗಳು ಪದೇ ಪದೆ ಮುಕುರಿಕೊಳ್ಳುತ್ತಿದ್ದವು . ಬಸ್ಸಿನಲ್ಲಿ ಕುಳಿತು ಹತ್ತು ನಿಮಿಷ ಕ್ರಮಿಸಿದರೆ ದ್ವೀಪದ ಇನ್ನೊಂದು ತುದಿ ಬಂತು. ಅಲ್ಲಿಳಿದು ಹತ್ತು ಹೆಜ್ಜೆ ಹಾಕುತ್ತಿದ್ದಂತೆ ಎತ್ತರದ ಗೋಡೆಗಳು, ಗೋಡೆಗಳ ತುದಿಗೆ ಸುತ್ತಿಕೊಂಡ ತಂತಿ ಸುರುಳಿಗಳು, ಅದರೊಳಗೆ ಬೆಚ್ಚಗೆ ಅಡಗಿಕೊಂಡ ಜೈಲಿನ ಕೋಣೆಗಳು ತೆರೆದುಕೊಳ್ಳುತ್ತಾ ಹೋದವು. ಇದಿ ಅಮಿನ್ ಬಡಕಲಾದರೆ ಹೇಗೆ ಕಾಣಬಹುದೋ, ಹಾಗೆ ಕಾಣುತ್ತಿದ್ದ ಜೈಲಿನ ದೇಖರೇಖೆಗಳನ್ನು ನೋಡಿಕೊಳ್ಳುವ ಕರಿಯ ವಾರ್ಡ್‌ನ್ ನಮ್ಮನ್ನು ಸರಿಯಾಗಿ ಐವತ್ತು ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದ್ದ.
ಜೈಲಿನ ಒಂದೊಂದು ಕೋಣೆ, ಹಜಾರ, ಮಗ್ಗಲುಗಳನ್ನು ಪರಿಚಯಿಸುತ್ತಾ, "ಐವತ್ತು ವರ್ಷಗಳ ಹಿಂದೆ, ಮೇ 27, 1963ರಂದು ನೆಲ್ಸನ್ ಮಂಡೇಲ ಅವರನ್ನು ಇದೇ ಕೋಣೆಯೊಳಗೆ ಬಂಧಿಸಿಡಲಾಯಿತು. ಮುಂದಿನ ಹದಿನೆಂಟು ವರ್ಷ ಅವರು ಇದೇ ಕೋಣೆಯಲ್ಲಿದ್ದರು. ಇದೇ ಅವರ ಪಾಲಿನ ಜಗತ್ತು ಆಗಿತ್ತು' ಎಂದ. ನಾನು ಸ್ತಂಭೀಭೂತನಾಗಿದ್ದೆ. ಮಂಡೇಲ ಅವರನ್ನು ಬಂಧಿಸಿಟ್ಟ ಜೈಲು ಕೋಣೆಯೊಳಗೆಲ್ಲ ನನ್ನ ಕಣ್ಣಿನಿಂದ ಟಾರ್ಚ್ ಲೈಟ್ ಬಿಟ್ಟೆ.
ಅದು ಬರೀ ಆರು ಅಡಿ ಅಗಲ, ಏಳು ಅಡಿ ಉದ್ದದ ಒಟ್ಟು ನಲವತ್ತೆರಡು ಚದರ ಅಡಿ ವಿಸ್ತೀರ್ಣದ ಪುಟ್ಟ ಕೋಣೆ. ಅದಕ್ಕೊಂದು ಕಿಟಕಿ, ಕಂಬಿಗಳಿರುವ ಬಾಗಿಲು. ಕೋಣೆಯೊಳಗೆ ಜಜ್ಜಿ ಹೋದ ತಾಟು, ಒಂದು ಬಕೀಟು, ಪ್ಲಾಸ್ಟಿಕ್ ಚೊಂಬು, ಒಂದು ಚಮಚ, ಹಾಸಿಕೊಳ್ಳಲು ಕಂಬಳಿ, ಹೊದೆಯಲು ಚಾದರ, ಅದನ್ನು ಬಿಟ್ಟರೆ ಆ ಕೋಣೆಯಲ್ಲಿ ಬೇರೇನಾದರೂ ಇದ್ದರೆ ಅದು ನೆಲ್ಸನ್ ಮಂಡೇಲ ಮಾತ್ರ. ಇದನ್ನೇ ಮಂಡೇಲ Conversation with Myself ಎಂಬ ಪುಸ್ತಕದಲ್ಲಿ 'ಆ ಕೋಣೆಯೊಳಗೆ ಪುಣ್ಯವಶಾತ್ ಇಬ್ಬರು ಕೈದಿಗಳಿದ್ದರು. ಒಬ್ಬನ ಹೆಸರು ನೆಲ್ಸನ್ ಹಾಗೂ ಮತ್ತೊಬ್ಬ ಮಂಡೇಲ' ಎಂದು ತಮಾಷೆಯಾಗಿ, ಮಾರ್ಮಿಕವಾಗಿ ಹೇಳಿದ್ದಾರೆ. ಆ ಜೈಲಿನಲ್ಲಿ ಎ,ಬಿ,ಸಿ,ಡಿ,ಇ ಎಂಬ ಐದು ಬ್ಲಾಕ್‌ಗಳಿವೆ. ಮಂಡೇಲ ಅವರನ್ನು 'ಸಿ' ಬ್ಲಾಕ್‌ನ ಐದನೇ ನಂಬರ್ ಕೋಣೆಯೊಳಗೆ ಇರಿಸಲಾಗಿತ್ತು.
ಆ ಕೋಣೆ ಮುಂದೆ ಎರಡು ನಿಮಿಷ ನಿಂತು ಸುಮ್ಮನೆ ಧೇನಿಸಿದೆ. ಅಲ್ಲಿ ಅರ್ಧ ಗಂಟೆ ಕಳೆಯುವುದು ಸಹ ಸಾಧ್ಯವಿರಲಿಲ್ಲ. ಅಲ್ಲಿ ಒಂದೋ ಮಲಗಬೇಕು ಅಥವಾ ನಿಂತಿರಬೇಕು. ಓಡಾಡಲು ಸಾಧ್ಯವಿರಲಿಲ್ಲ. ಅಜಾನುಬಾಹು ಮಂಡೇಲ ಅವರು ಬಿಡುಬೀಸಾಗಿ ಕೈ ಕಾಲುಗಳನ್ನು ಚಾಚಿಕೊಳ್ಳಲು ಸಾಧ್ಯವೇ ಇರಲಿಲ್ಲ. ಅಲ್ಲದೇ ಆ ಜೈಲು ಕೋಣೆಯೊಳಗೆ ಖಾಸಗಿಯಾಗಿ, ಗೌಪ್ಯವಾಗಿ ಒಂದು ಕ್ಷಣ ಸಹ ಕಳೆಯಲು ಸಾಧ್ಯವಿರಲಿಲ್ಲ. ಕಂಬಿಗಳು ಎಲ್ಲವನ್ನೂ ಬೆತ್ತಲೆಗೊಳಿಸುತ್ತಿದ್ದವು. ಆ ಪುಟ್ಟ ಕಿಟಕಿಯೊಂದೇ ಹೊರಜಗತ್ತಿನ ಅಸ್ತಿತ್ವವನ್ನು ಹೇಳುವ ಮಹಾದ್ವಾರ. ಅದು ಬಿಟ್ಟರೆ ಗಾಢ ಮೌನ, ಕಗ್ಗತ್ತಲು. ಸಮುದ್ರದ ಅಲೆಗಳು ಬೀಸಿ ತರುವ ಕೊರೆಯುವ ತಂಗಾಳಿ, ಕರಗಿದ ಮಂಜುಗಡ್ಡೆ ನೀರನ್ನು ಮುಖಕ್ಕೆರಚುವಂಥ ತಂಪಿನ ಸೋಂಕು, ರಾತ್ರಿಯಾಗುತ್ತಿದ್ದಂತೆ ಎಲುಬು ಕೊರೆಯುವ ಚಳಿ, ಹೊದಿಯಲು ತೆಳುಪಂಚೆಯಂಥ ಚಾದರ, ಕಂಬಳಿಯನ್ನೇನಾದರೂ ಹೊದ್ದರೆ ನೆಲವೇ ಹಾಸಿಗೆ.
   'ಒಂದು ದಿನ ಅಲ್ಲ... ಎರಡು ದಿನ ಅಲ್ಲ... ಮಂಡೇಲ ಹದಿನೆಂಟು ವರ್ಷ ಆ ಕೋಣೆಯೊಳಗೆ ಕಳೆದರು!' ಎಂದ. ವಾರ್ಡನ್ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ತಿಳಿಯದೇ ಜೈಲಿನ ಗೋಡೆಯಂತಾಗಿದ್ದೆ.
  ಪ್ರತಿ ದಿನ ಬೆಳಗ್ಗೆ ಐದು ಗಂಟೆಗೆ ಮಂಡೇಲ ಏಳಬೇಕಾಗಿತ್ತು. ಕೋಣೆ, ಸ್ನಾನಗೃಹಗಳನ್ನು ಸ್ವಚ್ಛಗೊಳಿಸಿ ಉಪಾಹಾರ ಸೇವಿಸಿ, ಏಳು ಗಂಟೆಗೆ ರಾಬೆನ್ ಐಲ್ಯಾಂಡಿನ ಒಂದು ಮಗ್ಗುಲಲ್ಲಿರುವ ಸುಣ್ಣದ ಕಲ್ಲಿನ ಕ್ವಾರಿಯಲ್ಲಿ ಅಧಿಕಾರಿಗಳು ಹೇಳುವ ಕೆಲಸ ಮಾಡಬೇಕಾಗುತ್ತಿತ್ತು. ಮಣ್ಣನ್ನು ಅಗೆಯುವ, ಭಾರ ಹೊರುವ, ಸುಣ್ಣದ ಕಲ್ಲನ್ನು ಸಾಗಿಸುವ...ಹೀಗೆ ಜೈಲು ಅಧಿಕಾರಿಗಳು ಹೇಳುವ ಕೆಲಸಗಳನ್ನೆಲ್ಲ ಮಾಡಬೇಕಾಗುತ್ತಿತ್ತು. ಮಧ್ಯಾಹ್ನ ಒಂದು ತಾಸು ಬಿಡುವು . ಪುನಃ ಸುಣ್ಣದ ಕಲ್ಲಿನ ಕ್ವಾರಿಯಲ್ಲಿ ಭಾರ ಹೊರುವ ಕೆಲಸ. ಸಾಯಂಕಾಲ ಐದು ಗಂಟೆಯಾಗುತ್ತಿದ್ದಂತೆ ಕೋಣೆಯೊಳಗೆ ಸೇರಿಕೊಂಡರೆ ಕತ್ತಲೊಳಗೆ ಕರಗಿ ಹೋಗುತ್ತಿದ್ದರು ಮಂಡೇಲ. ಸಹಕೈದಿಗಳೊಂದಿಗೆ ಮಾತಾಡಲು, ಬೆರೆಯಲು ಅವಕಾಶವಿರಲಿಲ್ಲ. ಬರೆಯಲು ಕಾಗದ, ಪೆನ್ನು ಹಾಗೂ ಓದಲು ಪುಸ್ತಕವನ್ನು ಸಹ ಕೊಡುತ್ತಿರಲಿಲ್ಲ. ಗುಬ್ಬಚ್ಚಿ ಗೂಡಿನಂಥ ಕೋಣೆಯೊಳಗೆ ಶೂನ್ಯವನ್ನು ದಿಟ್ಟಿಸುತ್ತಾ ಸುಮ್ಮನೆ ಸಮಯ ಕಳೆಯಬೇಕು. ಗಂಟೆ ಎಷ್ಟು, ಯಾವ ವಾರ, ದಿನಾಂಕವೇನು, ಯಾವ ಇಸವಿ ಎಂಬುದು ಸಹ ಗೊತ್ತಾಗುತ್ತಿರಲಿಲ್ಲ. ತಮ್ಮ ಆತ್ಮಕತೆ 'Long walk to Freedom' ನಲ್ಲಿ ಮಂಡೇಲ ಈ ಎಲ್ಲ ಸಂಗತಿಗಳನ್ನು ಬರೆದುಕೊಂಡಿದ್ದಾರೆ. ಜೈಲಿನಲ್ಲಿ ಸಹ ವರ್ಣಭೇದ ನೀತಿಯ ಬಿಸಿ ಎಷ್ಟು ಪ್ರಖರವಾಗಿತ್ತೆಂದರೆ ಮಂಡೇಲ ಸಹಿತ ಎಲ್ಲ ಕರಿಯ ಕೈದಿಗಳಿಗೆ ಕಂದು ಬಣ್ಣದ ಸಕ್ಕರೆ (ಬ್ರೌನ್ ಶುಗರ್) ಕೊಟ್ಟರೆ, ಬಿಳಿಯ ಕೈದಿಗಳಿಗೆ ಮಾಮಾಲು ಬಿಳಿ ಸಕ್ಕರೆ ಕೊಟ್ಟು ಹಂಗಿಸುತ್ತಿದ್ದರು.
ಸುಣ್ಣದಕಲ್ಲಿನ ಕ್ವಾರಿಯಲ್ಲಿ ಪ್ರತಿದಿನ ಐದು ಗಂಟೆಗಳ ಕಾಲ ಕೆಲಸ ಮಾಡಿ ಮಂಡೇಲ ಸುಸ್ತಾಗಿ ಹೋಗಿದ್ದರು. ಸುಣ್ಣದ ಕಲ್ಲಿನ ಬಿಳಿಹೊಳಪು, ಬಿಸಿಲಿನ ಬಿಳಿ ಕಿರಣ ಹಾಗೂ ಸಮುದ್ರದ ಬಿಳಿ ಪ್ರತಿಫಲನಗಳಿಂದ ಮಂಡೇಲ ಬಿಳಿ ಅಂದ್ರೆ ಬೆಚ್ಚಿ ಬೀಳುತ್ತಿದ್ದರು. ಸಾಯಂಕಾಲವಾಗುತ್ತಿದ್ದಂತೆ ಕತ್ತಲ ಹೊಡೆತ. ಇಪ್ಪತ್ತೇಳು ವರ್ಷಗಳ ಜೈಲು ವಾಸ ಮುಗಿಸಿ ಹೊರಬಂದಾಗ ನೂರಾರು ಪತ್ರಿಕಾ ಛಾಯಾಗ್ರಾಹಕರು ಒಂದೇ ಸಮನೆ ಕೆಮರಾ ಕ್ಲಿಕ್ಕಿಸಿದಾಗ ಹೊರಬಿದ್ದ ಫ್ಲ್ಯಾಷ್‌ಲೈಟ್ ನೋಡಿ ಬೆಚ್ಚಿ ಬಿದ್ದ ಮಂಡೇಲ, 'ದಯವಿಟ್ಟು ಫ್ಲ್ಯಾಷ್ ಬಳಸಬೇಡಿ' ಎಂದು ಮನವಿ ಮಾಡಿಕೊಂಡಿದ್ದರು. ಅತಿ ಕತ್ತಲು ಹಾಗೂ ಬೆಳಕು ಅವರ ಕಣ್ಣಿನ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿತ್ತು. ಅತಿಯಾದ ಕತ್ತಲ ಬದುಕಿನಿಂದ ಅವರು ಬೆಳಕನ್ನು ದ್ವೇಷಿಸುವ ಮನೋವ್ಯಾಕುಲಕ್ಕೊಳಗಾಗಿದ್ದರು.
ಅಷ್ಟೇ ಅಲ್ಲ. ರಾಬೆನ್ ಐಲ್ಯಾಂಡಿನ ಜೈಲಿನಲ್ಲಿದ್ದಾಗ ಮಂಡೇಲ ಅವರಿಗೆ ಹಲವು ಕಟ್ಟುಪಾಡುಗಳನ್ನು ವಿಧಿಸಲಾಗಿತ್ತು. ವರ್ಷಕ್ಕೆ ಒಬ್ಬ ವ್ಯಕ್ತಿ ಮಾತ್ರ ಅವರನ್ನು ಅರ್ಧ ಗಂಟೆ ಅವಧಿಗೆ ಭೇಟಿ ಮಾಡಬಹುದಿತ್ತು. ಆರು ತಿಂಗಳಿಗೆ ಒಂದು ಪತ್ರವನ್ನು ಅವರು ಬರೆಯಬಹುದಿತ್ತು ಹಾಗೂ ಸ್ವೀಕರಿಸಬಹುದಾಗಿತ್ತು. ಅದನ್ನು ಸೆನ್ಸಾರ್ ಮಾಡಿಯೇ ಕಳಿಸುತ್ತಿದ್ದರು ಹಾಗೂ ಅವರಿಗೆ ತಲುಪಿಸುತ್ತಿದ್ದರು. ಜೈಲಿನಲ್ಲಿ ಅವರೊಂದಿಗೆ ಯಾರೂ ಮಾತಾಡಕೂಡದು, ಭೇಟಿಯಾಗಕೂಡದೆಂದು ಕಟ್ಟಪ್ಪಣೆ ವಿಧಿಸಲಾಗಿತ್ತು.
ಅಂದಾಜಿನ ಪ್ರಕಾರ, ಮಂಡೇಲ ಹುಚ್ಚರಾಗಬೇಕಿತ್ತು! ಉದ್ದೇಶವೂ ಅದೇ ಆಗಿತ್ತು. ಆದರೆ ಆ ಜೈಲು ಕೋಣೆ ಅವರನ್ನು ಧೀಮಂತ ವ್ಯಕ್ತಿಯಾಗಿ ಪರಿವರ್ತಿಸಿತು. ಆ ಮೂಲಕವೇ ಅವರು ಮಹಾನ್ ಮಾನವತಾವಾದಿಯಾದರು, ಮಹಾಪುರುಷರಾದರು! 'Conversation with Myself' ಪುಸ್ತಕ ಆರಂಭವಾಗುವ ಸಾಲಿನಲ್ಲಿ ಮಂಡೇಲ ಇದನ್ನೇ ಹೇಳುತ್ತಾರೆ -'The cell is an ideal place to learn to know yourself. I met my true self in the prison. Iam ever grateful to cell number 5' ಇಲ್ಲೊಂದು ಪ್ರಸಂಗವನ್ನು ಹೇಳಬೇಕು. ಮಂಡೇಲ ಅವರ ಆತ್ಮಕತೆಯನ್ನು ಆಧರಿಸಿದ ಅದೇ ಹೆಸರಿನ ಚಿತ್ರದಲ್ಲಿ ಮಂಡೇಲ ಪಾತ್ರಧಾರಿ, ಖ್ಯಾತ ನಟ ಇದ್ರಿಸ್ ಎಲ್ಬಾ ಆ ಪಾತ್ರದಲ್ಲಿ ನಟಿಸಲು ಒಪ್ಪಿದ ನಂತರ ಮಂಡೇಲ ಅವರ ಹಾವಭಾವ, ನಡೆ- ನುಡಿಗಳನ್ನೆಲ್ಲ ಅಭ್ಯಸಿಸಿ ಅನುಕರಿಸಲು ಆರಂಭಿಸಿದ. ಮಂಡೇಲ ಅವರ ಮ್ಯಾನರಿಸಂ ಬಗ್ಗೆ ತಿಳಿದುಕೊಳ್ಳಲಾರಂಭಿಸಿದ. ಈ ಸಂದರ್ಭದಲ್ಲಿ ಅವನಿಗೆ ರಾಬೆನ್ ಐಲ್ಯಾಂಡಿನ ಜೈಲು ಕೋಣೆ ನೋಡಬೇಕೆನಿಸಿತು. ಅಲ್ಲಿಗೆ ಭೇಟಿ ಕೊಟ್ಟ ಬಳಿಕ, ಅದೇ ರೂಮಿನಲ್ಲಿ ಒಂದು ರಾತ್ರಿ ಕಳೆಯಲು ಅನುಮತಿ ಕೇಳಿದ. ಮಂಡೇಲ ಅವರ ಜೈಲುವಾಸದ ಸಣ್ಣ ತುಣುಕು ಅನುಭವವನ್ನು ಪಡೆಯುವುದು ಅವನ ಉದ್ದೇಶವಾಗಿತ್ತು. ಬಹಳ ಪರಿಶ್ರಮಪಟ್ಟ ಬಳಿಕ ಮಂಡೇಲ ವಾಸಿಸಿದ ಜೈಲು ಕೋಣೆಯ ಪಕ್ಕದ ಕೋಣೆಯಲ್ಲಿ ಒಂದು ರಾತ್ರಿ ಕಳೆಯಲು ಅನುಮತಿ ಸಿಕ್ಕಿತು.
    ಮರುದಿನ ಬೆಳಗ್ಗೆ ಜೈಲಿನಿಂದ ಹೊರಬಂದ ಎಲ್ಬಾ ಹೇಳಿದ್ದು-'ನನ್ನನ್ನು ಆ ಕೋಣೆಯಲ್ಲಿ ಹಾಕಿದ ವಾರ್ಡನ್ ಕೀಲಿ ಹಾಕಿಕೊಂಡು ಹೋಗಿಬಿಟ್ಟ. ಎಲ್ಲೆಡೆ ಕಗ್ಗತ್ತಲು. ಬೀಸುವ ಗಾಳಿಯ ಸದ್ದು ಭೀತಿ ಹುಟ್ಟಿಸುತ್ತಿತ್ತು. ಕುಡಿಯಲು ನೀರು ಇರಲಿಲ್ಲ. ಸಿಗ್ನಲ್ ಇಲ್ಲದ್ದರಿಂದ ನನ್ನ ಮೊಬೈಲ್ ನಿಷ್ಕ್ರಿಯವಾಗಿತ್ತು. ನೆಲ ಹಾಗೂ ನನ್ನ ಮಧ್ಯೆ ತೆಳು ಬೆಡ್ ಶೀಟ್ ಇತ್ತು. ಆ ಭೀಕರ ವಾತಾವರಣದಲ್ಲಿ  ನೆಲಕ್ಕೆ ತಲೆಕೊಟ್ಟೆ. ನಿದ್ದೆ ಹತ್ತಿರವೂ ಸುಳಿಯಲಾರದೆಂಬುದು ಖಾತ್ರಿಯಾಯಿತು. ಜೈಲಿನ ಸುತ್ತಮುತ್ತ ಹಲವರು ಸತ್ತಿದ್ದರಿಂದ ದೆವ್ವ -ಭೂತಗಳು ಇದ್ದಿರಬಹುದೆಂದು ನೆನಪಾಯಿತು. ನನ್ನ ಮುಖಕ್ಕೆ ತಣ್ಣೀರು ಸುರಿಯುವಂಥ ತಣ್ಣನೆ ಗಾಳಿ ಬೀಸುತ್ತಿತ್ತು. ಹಸಿವಿನಿಂದ ಹೊಟ್ಟೆ ತಾಳ ಹಾಕುತ್ತಿತ್ತು. ನನ್ನ ವಾಚಿನ ರೇಡಿಯಂ ಹೊರತಾಗಿ ಬೆಳಕೆಂಬುದನ್ನು ಹುಡುಕಿದರೂ ಸಿಗುತ್ತಿರಲಿಲ್ಲ. ನನ್ನ ಪಕ್ಕದ ರೂಮಿನಲ್ಲಿ ಆ ಪುಣ್ಯಾತ್ಮ ಹದಿನೆಂಟು ವರ್ಷ ಕಳೆದನಲ್ಲ. ಅದು ನನ್ನ ಕಲ್ಪನೆಗೂ ನಿಲುಕದ್ದು. ಸಿನಿಮಾದಲ್ಲಿ ಜೈಲುಕೋಣೆಯಲ್ಲಿನ ಕ್ಷಣಗಳನ್ನು ನಟಿಸುವಾಗ ಆ ರಾತ್ರಿ ಕಳೆದಿದ್ದನ್ನು ನೆನಪಿಸಿಕೊಳ್ಳುತ್ತಿದ್ದೆ. ನಾನು ನಟಿಸಲಿಲ್ಲ. ನನ್ನಲ್ಲಿ ಮಂಡೇಲ ಆವಾಹಿಸಿಕೊಂಡಿದ್ದರು.'
ಜೈಲುಕೋಣೆಯಿಂದ ನಿರ್ಗಮಿಸುವಾಗ ಹೃದಯ ಭಾರವಾಗಿತ್ತು. ಮಾತುಗಳಿಗೆ ಅರ್ಥವಿರಲಿಲ್ಲ. ಭಾವನೆಗಳು ಮುದುರಿಕೊಂಡಿದ್ದವು . ಮಂಡೆ ತುಂಬಾ ಮಂಡೇಲ!

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.