ಅಂಕಣಗಳು

ಕಾಂಗ್ರೆಸ್: ಸರ್ಕಾರ ಪಿಸಿಸಿ ಮುಖ್ಯಸ್ಥರ ಸಂಬಂಧ

1960ರ ದಶಕದ ಮೊದಲ ಭಾಗದಲ್ಲಿ, ಬೆಂಗಳೂರಿನ ಸದಾಶಿವನಗರದಲ್ಲಿ...

Published On :

1960ರ ದಶಕದ ಮೊದಲ ಭಾಗದಲ್ಲಿ, ಬೆಂಗಳೂರಿನ ಸದಾಶಿವನಗರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ, ಪಕ್ಷದ ಓಬಿರಾಯನ ಕಾಲದ ಅಂಗರಚನೆಗೆ ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತಹ ಸ್ವರೂಪವನ್ನು ಕೊಡುವ ಪ್ರಯತ್ನ ನಡೆದಿತ್ತು. ಅಂಗರಚನೆಗೆ ಸೂಕ್ತ ಮಾರ್ಪಾಟುಗಳನ್ನು ರೂಪಿಸುವ ಹೊಣೆಯನ್ನು ಹೊತ್ತ ಸಮಿತಿಯ ಅಧ್ಯಕ್ಷರು ಕೆಂಗಲ್ ಹನುಮಂತಯ್ಯ. ಹನುಮಂತಯ್ಯ ಆಗ ಹಳೆಯ ಮೈಸೂರು ಸಂಸ್ಥಾನದ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನಡುವಣ ಜಗಳದಿಂದಾಗಿ ಮುಖ್ಯಮಂತ್ರಿಯ ಸ್ಥಾನವನ್ನು ಕಳೆದುಕೊಂಡಿದ್ದರು.
ಆಗಿನ ಮೈಸೂರು ಕಾಂಗ್ರೆಸ್ಸಿನಲ್ಲಿ ಕೆಂಗಲ್ಲರು ಅತ್ಯಂತ ಜನಪ್ರಿಯ ನಾಯಕ. ಆದರೂ ದೆಹಲಿಯ ಕೆಲವು ನಾಯಕರ ಕೈವಾಡ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಾಹುಕಾರ್ ಚನ್ನಯ್ಯ ಅವರ ಹಟದ ಪರಿಣಾಮವಾಗಿ ಮನೆಗೆ ಹೋಗಬೇಕಾಗಿ ಬಂದಿತ್ತು. ಅಂದಿನಿಂದಲೇ ಅವರು ಪ್ರಭುತ್ವದ ಅಧಿಕಾರ ಹಾಗೂ ಆಳುವ ಪಕ್ಷದ ರಾಜಕೀಯ ಅಧಿಕಾರಗಳ ನಡುವೆ ಇರಬೇಕಾದ ಸಂಬಂಧ ಕುರಿತು ದೀರ್ಘ ಅಧ್ಯಯನ ನಡೆಸಿದ್ದರ ಪರಿಣಾಮವಾಗಿ ಆ ಎರಡು ಬಾಹುಗಳಲ್ಲಿ, ಆ ಬಾಹುಗಳ ನಾಯಕರಲ್ಲಿ ವೈಯಕ್ತಿಕ ಸಂಘರ್ಷ ಇದ್ದರೆ ಪ್ರಭುತ್ವವೂ ಕುಸಿದು ಬಿದ್ದು, ಪಕ್ಷವೂ ದುರ್ಬಲವಾಗುತ್ತದೆ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದರು. ಮೈಸೂರು ಕಾಂಗ್ರೆಸ್ಸಿನ ಇತಿಹಾಸಿದಲ್ಲಿ ಹನುಮಂತಯ್ಯ ಹಾಗೂ ಚನ್ನಯ್ಯ ಅವರ ನಡುವಣ ಭೀಕರ ಸಮರ ತನ್ನ ಪಾಠವನ್ನು ಕಲಿಸಿತ್ತು. ಕೆಂಗಲ್ ಹನುಮಂತಯ್ಯ ಅವರು ತಮ್ಮ ಶಿಫಾರ್ಸುಗಳಲ್ಲಿ ಮುಖ್ಯಮಂತ್ರಿಯೇ ಪಕ್ಷದ ಸಂಘಟನಾಂಗದ ಅಧ್ಯಕ್ಷರೂ ಆಗಬೇಕೆಂದು ಪ್ರತಿಪಾದಿಸಿದ್ದರು.
ಮುಖ್ಯಮಂತ್ರಿ - ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನಡುವಣ ರಾಜಕೀಯ ಮೇಲಾಟ, ಸ್ಪರ್ಧೆ, ಹಾಗೂ ಜನಗಳ ಹೆಚ್ಚು ಕಡಿಮೆ ಎಲ್ಲ ರಾಜ್ಯಗಳಲ್ಲೂ ಕಂಡು ಬಂದಿತ್ತು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಬಲಪಂಥೀಯ ಸಂಪ್ರದಾಯಸ್ಥ ನಾಯಕ ಪುರುಷೋತ್ತಮ ದಾಸ್ ಟಂಡನ್ ಆಯ್ಕೆಯಾದಾಗ, ಪ್ರಧಾನಿ ಜವಹರಲಾಲ ನೆಹರೂ ಕಾರ್ಯಕಾರಿಣಿಯ ಸದಸ್ಯತ್ವಕ್ಕೇ ರಾಜಿನಾಮೆ ನೀಡಿದರು. ಸಭೆಗಳಿಗೂ ಹಾಜರಾಗಲಿಲ್ಲ. ಟಂಡನ್ ಈ ಬೆಳವಣಿಗೆಯ ದೂರಗಾಮಿ ಪರಿಣಾಮವನ್ನು ಊಹಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಕೆಲವು ತಿಂಗಳ ಕಾಲ ನೆಹರೂ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ್ರಧಾನಿಯಾಗಿದ್ದರು.
ಈ ಪರಿಸ್ಥಿತಿ ಎಲ್ಲರಿಗೂ ಗೊತ್ತಿತ್ತು. ಆದರೆ ಸದಾಶಿವನಗರ ಕಾಂಗ್ರೆಸ್ ಅಧಿವೇಶನದಲ್ಲಿ, ಅದ್ಯಾವ ಚಿತಾವಣೆಯೋ ಗೊತ್ತಿಲ್ಲ, ಹನುಮಂತಯ್ಯ ಅವರ ಕಾಂಗ್ರೆಸ್‌ಗೆ ದ್ವಂದ್ವ ನಾಯಕತ್ವ ಅಥವಾ ಎರಡು ಅಧಿಕಾರ ಕೇಂದ್ರಗಳ ವ್ಯವಸ್ಥೆ ಬೇಕಾಗಿಲ್ಲ ಎನ್ನುವ ವಿಚಾರವೇ ಪ್ರಸ್ತಾಪವಾಗಲಿಲ್ಲ. ಉಳಿದಂತೆ ಯಾವುದೋ ಒಂದೆರಡು ಸಣ್ಣ ಪುಟ್ಟ ವಿಷಯಗಳೇ ಅಂಗರಚನೆಯ ಮಾರ್ಪಾಟು ಎನಿಸಿಕೊಂಡಿದ್ದು. ರಾಜ್ಯದ ಆಗಿನ ಕಾಂಗ್ರೆಸ್ಸಿನಲ್ಲಿ, ನಿಜಲಿಂಗಪ್ಪ ಅವರ ವಿರೋಧಿ ಬಿ.ಡಿ. ಜತ್ತಿ. ಮುಖ್ಯಮಂತ್ರಿ, ಆಗ ನಿಜಲಿಂಗಪ್ಪ ಅವರ ಆತ್ಮೀಯರಾಗಿದ್ದ ಎಚ್.ಕೆ. ವೀರಣ್ಣಗೌಡರು ಅಧ್ಯಕ್ಷರು. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದರೂ, ಅನೇಕರು ಸೋತಿದ್ದರು.

ಹಿಂದಿನ ಕತೆ:  ಕೆ. ಚಂಗಲರಾಯ ರೆಡ್ಡಿ ಗ/ಡ ಕೆಂಗಲ್ ಹನುಮಂತಯ್ಯ, ಕೆಂಗಲ್ ಹನುಮಂತಯ್ಯ ಗ/ಡ ಸಾಹುಕಾರ್ ಚನ್ನಯ್ಯ, ನಂತರದ ದಿನಗಳಲ್ಲಿ ನಿಜಲಿಂಗಪ್ಪ - ಚನ್ನಯ್ಯ, ವೀರಣ್ಣಗೌಡ ನಡುವೆ ಜಟಾಪಟಿಗಳೆಲ್ಲ ಈಗ ಇತಿಹಾಸ. ಈ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಚನ್ನಯ್ಯ, ಸಿದ್ದವೀರಪ್ಪ, ಚನ್ನಬಸಪ್ಪ ಕಾಂಗ್ರೆಸ್ಸಿನಿಂದ ನಿರ್ಗಮಿಸಿದಾಗ. ನಿಜಲಿಂಗಪ್ಪ ಅವರು ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷರಾದರು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯ ಗದ್ದುಗೆಗೆ ಏರಿದಾಗ ಪಕ್ಷದಲ್ಲಿನ ಎದುರಾಳಿಗಳೆಲ್ಲ ನಿರ್ನಾಮವಾಗಿದ್ದರು.
ಇತರ ರಾಜ್ಯಗಳಲ್ಲೂ ಅದೇ ಪರಿಸ್ಥಿತಿ. ಆಗಲೂ ಹೆಚ್ಚು ಕಡಿಮೆ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಸರ್ಕಾರಗಳೇ ಇದ್ದರೂ, ಸರ್ಕಾರ ಹಾಗೂ ಪ್ರದೇಶ ಕಾಂಗ್ರೆಸ್ ಪ್ರಮುಖರ ನಡುವೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಹಾಗೂ ಮುಖ್ಯಮಂತ್ರಿಯ ಪಾತ್ರವೇನು ಎನ್ನುವ ವಿಚಾರದಲ್ಲಿ ಚರ್ಚೆಯೇ ನಡೆಯಲಿಲ್ಲ. ಅನೇಕ ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಮುಖ್ಯಮಂತ್ರಿಯನ್ನು ಪದಚ್ಯುತಿಗೊಳಿಸಲು ಸುಪಾರಿ ಪಡೆದವರಂತೆಯೇ ವರ್ತಿಸಿದ ನಿದರ್ಶನಗಳಿವೆ. ಇಂತಹ ಸಮಯದಲ್ಲಿ ಒಮ್ಮೆ ನಿಜಲಿಂಗಪ್ಪ ಅವರೇ "ನಮ್ಮಲ್ಲಿ (ಅದು ದೇಶದ ಮಾತು ರಾಜ್ಯಕ್ಕೇ ಸೀಮಿತವಲ್ಲ) ನಿಜವಾದ ವಿರೋಧ ಪಕ್ಷ ಎನ್ನುವುದೇ ಇಲ್ಲ. ಇದ್ದರೂ ಅದು ತೀರ ತೀರ ದುರ್ಬಲವಾಗಿದೆ. ಇದು ಆರೋಗ್ಯವಂತ ಜನತಾಂತ್ರಿಕ ವ್ಯವಸ್ಥೆಗೆ ಒಳ್ಳೆಯದಲ್ಲ. ನಮ್ಮಲ್ಲೇ ಕೆಲವರು ಪಕ್ಷ ಬಿಟ್ಟು ಹೋಗಿ ಪ್ರಬಲ ವಿರೋಧ ಪಕ್ಷವನ್ನು ಸ್ಥಾಪಿಸಬೇಕಾಗಬಹುದು" ಎಂದಿದ್ದರು.
ನಿಜಲಿಂಗಪ್ಪ ಅವರು ಇಂತಹ ಮಾತನ್ನು ಆಡಿದ್ದು ಕಾಂಗ್ರೆಸ್ ಭವಿಷ್ಯಕ್ಕೆ ಕೈಮರದಂತಿತ್ತು. 1969-71 ರ ಸಮಯದಲ್ಲಿ ಅವರೇ ಒಂದು ಪ್ರತ್ಯೇಕ ಕಾಂಗ್ರೆಸ್‌ನ ಮುಖಂಡರಾದರು. ಆದರೆ ಕಾಂಗ್ರೆಸ್ಸಿನ ಸ್ಥಿತಿ ಬದಲಾಗಲಿಲ್ಲ. ಕರ್ನಾಟಕದಲ್ಲಿ ಸಂಸ್ಥಾ ಕಾಂಗ್ರೆಸ್ - ಆಡಳಿತ ಕಾಂಗ್ರೆಸ್ ರಾಜಕೀಯ, ಅಕ್ಷರಶಃ ಆದರೆ ಅದು ಪರೋಕ್ಷವಾಗಿ ನಿಜಲಿಂಗಪ್ಪ - ದೇವರಾಜ ಅರಸು ನಡುವಣ ಸಮರವಾಯಿತು. ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ ಸೋತು ಸುಣ್ಣವಾಗಿ, ದೇವರಾಜ ಅರಸು ಮುಖ್ಯಮಂತ್ರಿಯಾದರು. ಅದೂ ಅಲ್ಲಿಗೇ ಮುಗಿಯಲಿಲ್ಲ. ಕೆ.ಎಚ್. ಪಾಟೀಲರಿಗೆ ನಿಜಲಿಂಗಪ್ಪ ಅವರನ್ನು ವಿರೋಧಿಸಲು ಹಲವಾರು ಕಾರಣಗಳಿದ್ದವು. ಆಗ ದೆಹಲಿಯ ನಾಯಕರು ಪ್ರದೇಶ ಕಾಂಗ್ರೆಸ್ ಗಾದಿಗೆ ಆರಿಸಿದ್ದು ಕೆ.ಎಚ್. ಪಾಟೀಲರನ್ನು. ಈ ಒಳ ಜಗಳಗಳ ಪ್ರಸ್ತಾಪ ಅನೇಕ ಸಂದರ್ಭಗಳಲ್ಲಿ ಅಲ್ಲಿ - ಇಲ್ಲಿ ಪ್ರಕಟವಾಗಿದೆ. ಆದರೆ ಆ ಜಗಳದ ಹಿಂದಿನ ಸೂತ್ರದಾರರ ವಿಚಾರ ಪ್ರಸ್ತಾಪವಾಗಿಲ್ಲ. ದೇವರಾಜ ಅರಸು, ಕೆ.ಎಚ್. ಪಾಟೀಲರ ನಡುವಣ ಸಮರವೂ ಜೋರಾಗಿಯೇ ನಡೆಯಿತು. ತುರ್ತು ಪರಿಸ್ಥಿತಿಯ ಕಾಲದಲ್ಲೂ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ಎಚ್. ಪಾಟೀಲರು ಅರಸು ಆಡಳಿತ ವೈಖರಿಯನ್ನು ಖಂಡಿಸುತ್ತಿದ್ದರು. ಅದು ಪತ್ರಿಕೆಗಳಲ್ಲಿ ಬೆಳಕು ಕಾಣದೇ ಹೋದಾಗ "ನಿಮಗೇನಾದರೂ ಸೆನ್ಸಾರ್ ನಿಯಂತ್ರಣವಿದ್ದರೆ ಹೇಳಿ ಸರಿ ಮಾಡ್ತೀನಿ" ಎನ್ನುವ ಹಂತಕ್ಕೂ ಹೋಗಿದ್ದರು. ಕೆ.ಎಚ್. ಪಾಟೀಲ್, ಕಾಂಗ್ರೆಸ್ಸಿನಿಂದ ಹೊರ ಬೀಳಬೇಕಾಯಿತು. (ಆಗ ಎಸ್.ಎಂ. ಕೃಷ್ಣ ಅವರ ಜತೆಯಲ್ಲಿದ್ದರು) ದೇವರಾಜ ಅರಸು - ಇಂದಿರಾ ಗಾಂಧಿ ನಡುವೆ ವಿರಸ ಮೂಡಿದಾಗ ಕೆ.ಎಚ್. ರಂಗನಾಥ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ. ಅರಸು, ಕಾಂಗ್ರೆಸ್ಸಿನಿಂದ ನಿರ್ಗಮಿಸಿದ ಅನಂತರ (ಆಗ ದೆಹಲಿ ಮಟ್ಟದಲ್ಲೇ ಪಕ್ಷ ಹೋಳಾಗಿತ್ತು. ಬ್ರಹ್ಮಾನಂದ ರೆಡ್ಡಿ ಕಾಂಗ್ರೆಸ್ ಉದಯವಾಗಿತ್ತು. ಕರ್ನಾಟಕದಲ್ಲಿ ಆ ಗುಂಪಿನ ನಾಯಕ ಕೆ.ಎಚ್. ಪಾಟೀಲ್), ಗುಂಡೂರಾಯರು ಮುಖ್ಯಮಂತ್ರಿ. ಆಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಕೆ.ಬಿ. ರಾಥೋಡ್  ಅವರು. ಅವರಿಬ್ಬರ ಜಗಳ ಬಗೆಹರಿಯಲಿಲ್ಲ, ರಾಥೋಡ್ ಅವರ  ಪದಚ್ಯುತಿಯಾಯಿತು.

ಅನಿಸಿಕೆಯೇ ಆಧಾರ: ಆ ಕಾಲದ ನಿಜವಾದ ಕಾಂಗ್ರೆಸ್ ಕಥೆಯನ್ನು ಹೇಳಲು ದೇವರಾಜ ಅರಸು, ಗುಂಡೂರಾವ್, ಕೊಲ್ಲೂರು ಮಲ್ಲಪ್ಪ, ಕೆ.ಎಚ್. ಪಾಟೀಲ್ ಅವರ್ಯಾರೂ ಇಲ್ಲ. ಅವರನ್ನು ಕುರಿತ ಪುಸ್ತಕದಲ್ಲಿ ಒಳಸುಳಿಗಳ ವಿವರವಿಲ್ಲ.
(ನಿಜ. ಈ ಅಂಕಣ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ, ವಿಶೇಷವಾಗಿ ಬರೆದ ಲೇಖನವಲ್ಲ. 1957 ರಿಂದಲೂ ತಿಳಿದು ಬಂದಿದ್ದ ಅನೇಕ ಘಟನೆಗಳನ್ನು ನೆನಪಿನಿಂದಲೇ ಹೆಕ್ಕಿ ಬರೆದ ಲೇಖನ. ಇದು. ಆಳುವ ಪಕ್ಷದಲ್ಲಿ ದ್ವಂದ್ವ ನಾಯಕತ್ವದ ಹಾವಳಿಯನ್ನು ಮತ್ತೆ ರಾಜ್ಯ ಎದುರಿಸಬೇಕಾಗಿ ಬರುವುದೇನೋ ಎನ್ನುವ ಅನುಮಾನ ಗಮನಿಸಿದಾಗ ಮೂಡಿದ ಅನಿಸಿಕೆಗಳೇ ಈ ಅಂಕಣಕ್ಕೆ ಆಧಾರ).

2004 ರ ಅನಂತರ: ಈಗ ಮತ್ತೆ ಕಾಂಗ್ರೆಸ್ ಅಧಿಕಾರದ ಸೂತ್ರಗಳನ್ನು ಹಿಡಿದಿದೆ. ಬಹುಜನಪ್ರಿಯತೆಯನ್ನು ಗಳಿಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ. ಅನುಭವಸ್ಥ ರಾಜಕಾರಣಿ ಡಾ॥ ಜಿ. ಪರಮೇಶ್ವರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ.
ಇವರಿಬ್ಬರ ನಡುವೆ ದೊಡ್ಡ ರೀತಿಯಲ್ಲಿ ಭಿನ್ನಾಭಿಪ್ರಾಯ ಮೂಡುವಂತಹ ಪ್ರಸಂಗ ಬಂದಿಲ್ಲ. ಆದರೂ ಎರಡು ಮೂರು ದಿನಕ್ಕೊಮ್ಮೆಯಾದರೂ, ಇವರಿಬ್ಬರಲ್ಲಿ ಒಬ್ಬರು, ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ, ಪರಸ್ಪರ ಅಪನಂಬಿಕೆ ಇಲ್ಲವೇ ಇಲ್ಲ. ವಿಶ್ವಾಸಕ್ಕೆ ಬರವಿಲ್ಲ ಎಂದು ಹೇಳಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಯಾಕೆ ಹೀಗೆ? ಪ್ರಾಯಶಃ ಇಬ್ಬರೂ ವಿಪರೀತವಾಗಿ ಮಾತನಾಡುತ್ತಿರುವುದೇ ಇರಬೇಕು.

ಕಿಡಿಗೇಡಿತನ - ಕರ್ನಾಟಕ ಕಾಂಗ್ರೆಸ್ ಸಮನ್ವಯ ಸಮಿತಿಯ ಸಭೆಗೆ ದೆಹಲಿಯ ಹಿರಿಯ ಪ್ರಭಾರಿ ದಿಗ್ವಿಜಯ ಸಿಂಗ್ ಬರಲೇ ಇಲ್ಲ, ಹಾಗಿದ್ರೆ ಆ ಸಮಿತಿಗೆ ದಿಲ್ಲಿಯ ನಾಯಕರು ಕೊಡುವ ಕಿಮ್ಮತ್ತು ಎಷ್ಟು?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.