ಅಂಕಣಗಳು

ಈ ರಾಧೆಯ ಕೂಗು ಆ ಕೃಷ್ಣನಿಗೆ ಕೇಳಿಸಲೇ ಇಲ್ಲ

ಸಾವಿನ ಮನೆಯಲ್ಲಿ ಕಾಣುವಂಥ ಬಿಕ್ಕಳಿಕೆ, ಅಳು, ಚೀತ್ಕಾರ.. ಇಂಥ ಯಾವ ದೃಶ್ಯವೂ...

ಈ ರಾಧೆಯ ಕೂಗು ಆ ಕೃಷ್ಣನಿಗೆ ಕೇಳಿಸಲೇ ಇಲ್ಲ
Published On :

ಎಂಟು ತಿಂಗಳ ಹಿಂದಿನ ಮಾತು. ಬೆಂಗಳೂರಿನ ಹೊರವಲಯದಲ್ಲಿದ್ದ ಆಶ್ರಮಕ್ಕೆ ಭೇಟಿ ಕೊಡಬೇಕಿತ್ತು. ಅಲ್ಲಿಗೆ ಕರೆದೊಯ್ಯುವ ಜವಾಬ್ದಾರಿಯನ್ನು ಗೆಳೆಯ ವಹಿಸಿಕೊಂಡಿದ್ದ. ಬೈಕ್‌ನಲ್ಲಿ ಅಷ್ಟು ದೂರ ಭರ್ರನೆ ಹೋಗುವುದು, ಎದುರಾದವರನ್ನು ನಿಲ್ಲಿಸಿ-'ಆಶ್ರಮಕ್ಕೆ ಇಲ್ಲಿಂದ ಎಷ್ಟು ದೂರ ಆಗುತ್ತೆ?' ಎಂದು ಪ್ರಶ್ನೆ ಹಾಕುವುದೇ ಕೆಲಸವಾಯಿತು. ಹೀಗೆ ವಿಚಾರಿಸಿಕೊಂಡೇ ಕಡೆಗೊಮ್ಮೆ ಆಶ್ರಮದ ಎದುರು ನಿಂತೆವು. ಅದೇ ವೇಳೆಗೆ ಮೃತದೇಹವನ್ನು ಹೊತ್ತಿದ್ದ ಮೆಟಡಾರೊಂದು ಹೊರಬಂತು. ಸಾವಿನ ಮನೆಯಲ್ಲಿ ಕಾಣುವಂಥ ಬಿಕ್ಕಳಿಕೆ, ಅಳು, ಚೀತ್ಕಾರ... ಇಂಥ ಯಾವ ದೃಶ್ಯವೂ ಅಲ್ಲಿ ಕಾಣಲಿಲ್ಲ. ವ್ಯಾನ್‌ನ ಒಳಗೆ ಕೂತಿದ್ದವರೆಲ್ಲ ನಿರ್ಲಿಪ್ತರಂತೆ ಇದ್ದರು.
ಒಂದು ಸಾವನ್ನು ಅಷ್ಟೊಂದು ನಿರ್ಲಿಪ್ತರಾಗಿ ಸ್ವೀಕರಿಸಿದರಲ್ಲ; ಅಂಥ ಗಟ್ಟಿ ಮನಸ್ಸು ಹೊಂದಿದವರನ್ನು ಒಮ್ಮೆಯಾದರೂ ಮಾತಾಡಿಸಲೇಬೇಕು ಅನಿಸಿದ್ದೇ ಆಗ. ತಿಂಗಳ ನಂತರ ಅದೇ ಆಶ್ರಮಕ್ಕೆ ಹೋಗಿ, ಅಲ್ಲಿನ ಮುಖ್ಯಸ್ಥರನ್ನು ಕಂಡಾಗ ಅವರು ಹೇಳಿದರು: 'ನಮ್ಮಲ್ಲಿ ಪೇಷೆಂಟ್ಸ್ ಅಂತ ಇರುವವರೆಲ್ಲ ಎಚ್‌ಐವಿ ಪಾಸಿಟಿವ್ ಜನ.  ನಾವು ಯಾವತ್ತು ಬೇಕಾದ್ರೂ ಸತ್ತು ಹೋಗುತ್ತೇವೆ ಅಂತ ಅವರಿಗೆ ಚೆನ್ನಾಗಿ ಗೊತ್ತಿರುತ್ತೆ. ಅಂಥದೇ ಅಂದಾಜು ನಮಗೂ ಇರುತ್ತೆ. ತಿಂಗಳಿಗೆ ನಾಲ್ಕೈದು ಸಾವು ನೋಡುವುದು ಅಭ್ಯಾಸ ಆಗಿಬಿಟ್ಟಿದೆ. ಪೇಷೆಂಟ್ಸ್ ಜೊತೆ ರಕ್ತ ಸಂಬಂಧ ಇರೋದಿಲ್ಲ ನೋಡಿ; ಹಾಗಾಗಿ ಗೋಳಾಡಿ ಅಳುವವರ ಸೀನ್ ಇಲ್ಲಿ ಕಾಣಿಸೋದಿಲ್ಲ. ಸಾವಿನ ಸಮ್ಮುಖದಲ್ಲಿ ಇದ್ದಾರಲ್ಲ; ಅವರಿಗೆ, ಇರುವಷ್ಟು ದಿನ ನೆಮ್ಮದಿಯ ಬದುಕು ಕೊಡಬೇಕು ಎಂಬುದಷ್ಟೇ ನಮ್ಮ ಗುರಿ. ಧ್ಯಾನ, ಪೂಜೆ, ಪಾಸಿಟಿವ್ ವಿಷಯಗಳ ಪ್ರವಚನ... ಎಲ್ಲವೂ ಇಲ್ಲಿ ನಡೆಯುತ್ತೆ. ಬಿಡುವು ಸಿಕ್ಕಾಗಲೆಲ್ಲ ಬರ್ತಾ ಇರಿ...'
ಆನಂತರದಲ್ಲಿ ಅಲ್ಲಿಗೆ ಹೋಗಿ ಬರುವುದು 'ಕರ್ತವ್ಯ'ದಂತೆ ಆಯಿತು. ಹೀಗೆ ಹೋದಾಗಲೆಲ್ಲ ಆ ಹುಡುಗಿ ಕಣ್ಣಿಗೆ ಬೀಳುತ್ತಿದ್ದಳು. ಹೆಚ್ಚಿನ ಸಂದರ್ಭದಲ್ಲಿ ಆಕೆ ಪೂಜಾಗೃಹದಲ್ಲಿ ಇರುತ್ತಿದ್ದಳು. ಸುತ್ತಲಿನ ಪರಿವೆಯೇ ಇಲ್ಲದಂತೆ ಕೃಷ್ಣನಿಗೆ ಸಂಬಂಧಿಸಿದ ಹಾಡುಗಳನ್ನು ಗುನುಗುತ್ತಾ ಕೂತಿರುತ್ತಿದ್ದಳು. ಅಕಸ್ಮಾತ್ ಎದುರಾದರೂ, ಆಕೆ ನಗುತ್ತಿರಲಿಲ್ಲ. ನಮಸ್ತೆ ಅನ್ನುತ್ತಿರಲಿಲ್ಲ. ಕಾಣಿಸಿಕೊಂಡಷ್ಟೇ ವೇಗವಾಗಿ ಮಾಯವಾಗುತ್ತಿದ್ದಳು. ಬಹುಶಃ ಯಾವುದೋ ಎನ್‌ಜಿಒದಿಂದ ಇಂಟರ್ನ್‌ಶಿಪ್‌ಗೆ ಬಂದವಳಿರಬೇಕು. ಅದಕ್ಕೆ ಇಷ್ಟೊಂದು ಬಿಗುಮಾನ, ಒಣಜಂಭ ಎಂದುಕೊಂಡು, ಆಶ್ರಮದ ಮುಖ್ಯಸ್ಥರಿಗೂ ಅದನ್ನೇ ಹೇಳಿದಾಗ ಅವರೆಂದರು: ' ನಿಮ್ಮ ಲೆಕ್ಕಾಚಾರ ತಪ್ಪಾಗಿದೆ. ಅವಳ ಹೆಸರು ರಾಧಾ. ಆಕೆ ಎನ್‌ಜಿಒ ಕಡೆಯ ಹುಡುಗಿಯಲ್ಲ. ಎಚ್‌ಐವಿ ಪಾಸಿಟಿವ್ ಇರುವವರ ಪೈಕಿ ಅವಳೂ ಒಬ್ಬಳು. ಆಕೆ ಶ್ರೀಕೃಷ್ಣನ ಪರಮಭಕ್ತೆ. ಏನಾಡ್ಮೋಣ ಸಾರ್? ಈ ಅಮಾಯಕಿಯ ವಿಷಯದಲ್ಲಿ ದೇವರು ಕರುಣಮಾಯಿಯಾಗಲಿಲ್ಲ...'
ಆಶ್ರಮದ ಮುಖ್ಯಸ್ಥರೇ ಆ ಹುಡುಗಿಯ ಪರ ವಹಿಸಿ ಮಾತಾಡಿದಾಗ, ಅವಳ ಬದುಕಿನ ಕಥೆ ಕೇಳಬೇಕು ಅನ್ನಿಸಿತು. ಮುಖ್ಯಸ್ಥರ ಒತ್ತಾಯದ ಮೇರೆಗೆ ಕಡೆಗೊಂದು ದಿನ ಎದುರು ಕೂತ ರಾಧಾ, ತನ್ನ ಬದುಕಿನ ಕಥೆಯನ್ನು ಹೇಳಲು ಶುರುವಿಟ್ಟಳು. ಅದು ಮುಂದುವರಿದಿದ್ದು ಹೀಗೆ:
'ಅಪ್ಪ, ಅಮ್ಮ, ಮಗಳು-ಹೀಗೆ ಮೂರೇ ಜನರಿದ್ದ ಪುಟ್ಟ ಕುಟುಂಬ ನಮ್ಮದು. ವಾಸಕ್ಕೆ ಬಾಡಿಗೆ ಮನೆಯಿತ್ತು. ಅಮ್ಮನಿಗೆ ಹೂಗಿಡಗಳನ್ನು ಬೆಳೆಸುವ ಖಯಾಲಿ. ಎಂಟನೇ ತರಗತಿಗೇ ಓದು ನಿಲ್ಲಿಸಿದ್ದ ಆಕೆಗೆ ಸುಶ್ರಾವ್ಯ ಕಂಠವಿರಲಿಲ್ಲ. ಆದರೂ ಹಾಡುತ್ತಿದ್ದಳು. ಹಾಡು ಮುಗಿಯುತ್ತಿದ್ದಂತೆಯೇ, ಮೌನವಾಗಿ ಕಣ್ಣೀರು ಸುರಿಸುತ್ತಿದ್ದಳು. ಯಾಕಮ್ಮಾ, ಏನಾಯ್ತಮ್ಮಾ ಎಂದು ಗಾಬರಿಯಿಂದ ಪ್ರಶ್ನಿಸಿದರೆ, ಹಳೆಯದೇನೋ ನೆನಪಾಯ್ತು ಕಂದಾ, ಕಣ್ಣಿಗೆ ಕಸ ಬಿದ್ದು ಬಿಡ್ತು ಮಗಳೇ ಎನ್ನುತ್ತಾ ಮಾತು ಮರೆಸುತ್ತಿದ್ದಳು. ಆನಂತರದಲ್ಲಿ ಗೊತ್ತಾಗಿದ್ದು ಏನೆಂದರೆ, ಅಪ್ಪ-ಅಮ್ಮನ ಮಧ್ಯೆ ಮಧುರ ಬಾಂಧವ್ಯವಿರಲಿಲ್ಲ. ಹೊಂದಾಣಿಕೆಯೂ ಇರಲಿಲ್ಲ. ಅವರ ಮಧ್ಯೆ ಮೇಲಿಂದ ಮೇಲೆ ಜಗಳಗಳಾಗುತ್ತಿದ್ದವು. ವಾಸ್ತವ ಹೀಗಿದ್ದರೂ, ಅವರ ಪ್ರೀತಿಯ ಫಲವಾಗಿ ನಾನು ಹುಟ್ಟಿಬಿಟ್ಟಿದ್ದೆ. ಅಮ್ಮ, ತನ್ನ ಹಣೆ ಬರಹವನ್ನು ಹಳಿದುಕೊಂಡು ಬಿಕ್ಕಳಿಸುತ್ತಿದ್ದಳೋ ಅಥವಾ ನನ್ನ ಭವಿಷ್ಯವನ್ನು ನೆನಪಿಸಿಕೊಂಡು ಅಳುತ್ತಿದ್ದಳೋ ಅರ್ಥವಾಗುತ್ತಿರಲಿಲ್ಲ.
ಅಮ್ಮನಿಗೆ ಹೂಗಿಡಗಳನ್ನು ಬೆಳೆಸುವ ಖಯಾಲಿಯಿತ್ತು ಅಂದೆನಲ್ಲವೇ? ಆ ನೆಪದಲ್ಲಿ ನನಗೊಂದು ವಿಸ್ಮಯಲೋಕದ ಪರಿಚಯ ಮಾಡಿಕೊಟ್ಟಳು ಅಮ್ಮ. ಮನೆಯ ಮುಂದಿನ ಅಂಗಳದಲ್ಲಿ ಮಲ್ಲಿಗೆ, ಕನಕಾಂಬರ, ಸಂಪಿಗೆ, ದಾಸವಾಳ, ಬೆಟ್ಟತಾವರೆ, ಪಾರಿಜಾತ, ದೇವಕಣಗಲೆ...ಹೀಗೆ ಎಲ್ಲ ಹೂಗಳೂ ಇದ್ದವು. ಅಮ್ಮ ಅವುಗಳನ್ನು ಬಿಡಿಸುತ್ತಿರಲಿಲ್ಲ. ಗಿಡದಲ್ಲಿಯೇ ಉಳಿಸುತ್ತಿದ್ದಳು. ಎಲ್ಲಾ ಹೂಗಳ ಸುವಾಸನೆಯೂ ಆ ಭಗವಂತನನ್ನು ಸೇರಲಿ ಎನ್ನುತ್ತಿದ್ದಳು. ಸಮಯ ಸಿಕ್ಕಾಗಲೆಲ್ಲ ಹೂ ಗಿಡಗಳೊಂದಿಗೆ ಮಾತಾಡುತ್ತಿದ್ದಳು. ನಾವು ಹೇಳುವುದನ್ನೆಲ್ಲ ಗಿಡಗಳು ಮೌನವಾಗಿ ಕೇಳಿಸಿಕೊಳ್ತವೆ. ನಂತರ ತಮ್ಮದೇ ರೀತಿಯಲ್ಲಿ ಉತ್ತರ ಹೇಳುತ್ತವೆ ಅನ್ನುತ್ತಿದ್ದಳು. ನೀನೂ ಮಾತಾಡು ಮಗಳೇ ಎಂದು ಹುರಿದುಂಬಿಸುತ್ತಿದ್ದಳು. ಇಡೀ ದಿನ ನಾವು ಹೂ ಗಿಡಗಳ ಧ್ಯಾನದಲ್ಲೇ ಖುಷಿಪಡುತ್ತಿದ್ದೆವು.
ರಾತ್ರಿಯಾದರೆ ಸಾಕು; ಮನೆ ರಣರಂಗವಾಗುತ್ತಿತ್ತು. ಅಪ್ಪ, ದಿನವೂ ಕುಡಿದು ಬರುತ್ತಿದ್ದ. ವಿನಾಕಾರಣ ಜಗಳ ತೆಗೆಯುತ್ತಿದ್ದ. ಅಮ್ಮನಿಗೆ, ದನಕ್ಕೆ ಬಡಿದಂತೆ ಬಡಿಯುತ್ತಿದ್ದ. ಫುಟ್‌ಬಾಲ್ ಥರಾ ಒದೆಯುತ್ತಿದ್ದ. ಬಿಡಿಸಿಕೊಳ್ಳಲು ಹೋದರೆ, ನನಗೂ ಏಟು ಬೀಳುತ್ತಿದ್ದವು. ನೆರೆಹೊರೆಯವರು ಐದಾರು ಬಾರಿ ಬುದ್ಧಿ ಹೇಳಿದರು. ಆನಂತರ, ಇವ್ನು ಸರಿ ಹೋಗುವ ಆಸಾಮಿಯಲ್ಲ ಅಂದುಕೊಂಡು ಸುಮ್ಮನಾದರು. ಮುಂದೆ ಏನಾಯಿತೆಂದರೆ, ಅದೊಂದು ರಾತ್ರಿ ಕಂಠಪೂರ್ತಿ ಕುಡಿದು ಬಂದ ಅಪ್ಪ, ಹೊಡೆಯುವ ಭರದಲ್ಲಿ ಅಮ್ಮನನ್ನು ಗೋಡೆಯ ಕಡೆಗೆ ಬಲವಾಗಿ ನೂಕಿದ. ಗೋಡೆಗೆ ಡಿಕ್ಕಿ ಹೊಡೆದ ಅಮ್ಮ, ನಂತರ ಅಂಗಾತ ಬಿದ್ದು ಹೋದಳು. ಆನಂತರ ಆಕೆ ಚೀರಲಿಲ್ಲ. ಬಿಕ್ಕಳಿಸಲಿಲ್ಲ. ತಡವರಿಸಿಕೊಂಡು ಎದ್ದು ನಿಲ್ಲಲಿಲ್ಲ. ಆಕೆ ಸತ್ತು ಹೋಗಿದ್ದಳು.
ಹೀಗೆಲ್ಲಾ ಆದಾಗ ನನಗಿನ್ನೂ ಹನ್ನೆರಡು ವರ್ಷ. ಕ್ರೌರ್ಯ ಮತ್ತು ಸಾವನ್ನು ಪ್ರತ್ಯಕ್ಷವಾಗಿ ನೋಡಿದೆನಲ್ಲ; ಆ ಶಾಕ್‌ನಿಂದ ಮಾತುಗಳು ಮರೆತು ಹೋಗಿದ್ದವು. ಅಮ್ಮನ ನೆನಪಾದಾಗಲೆಲ್ಲಾ ಬವಳಿ ಬಂದು ಬೀಳುತ್ತಿದ್ದೆ. ಈ ಮಧ್ಯೆಯೇ ಅಪ್ಪ ಬೃಹನ್ನಾಟಕವನ್ನಾಡಿದ್ದ. ಪೊಲೀಸರನ್ನು ಬುಟ್ಟಿಗೆ ಹಾಕಿಕೊಂಡು ಅರೆಸ್ಟ್ ಆಗುವುದನ್ನು ತಪ್ಪಿಸಿಕೊಂಡಿದ್ದ. ಅಮ್ಮ ತೀರಿಕೊಂಡು ಎಂಟು ತಿಂಗಳು ಕಳೆದಿರಲಿಲ್ಲ: ಆಗಲೇ ಮತ್ತೊಂದು ಮದುವೆಯಾದ.
ಮಲತಾಯಿಯ ಕಾಟವನ್ನು ವಿವರಿಸಬೇಕಿಲ್ಲ ತಾನೆ? ಅಮ್ಮನನ್ನು ಕಳೆದುಕೊಂಡ ಮೇಲೆ ಪರದೇಸಿಯಂತಾದೆ. ಓದುವ ಮನಸ್ಸಾಗಲಿಲ್ಲ. ಕುಡುಕ ತಂದೆ, ಕೆಟ್ಟ ಮಲತಾಯಿಯಿಂದ ದೂರ ಹೋಗಿ ಬಿಡಬೇಕು ಅನಿಸುತ್ತಿತ್ತು. ನಾನು ಏಕಾಂಗಿ ಅನ್ನಿಸಿದಾಗಲೆಲ್ಲ ಎದ್ದು ಬಂದು ಹೂಗಿಡಗಳೊಂದಿಗೆ ಮಾತಾಡುತ್ತಿದ್ದೆ. ಬಿಕ್ಕಳಿಸುತ್ತಿದ್ದೆ. ಹೂಗಿಡದ ಮಧ್ಯೆಯೇ ಅಮ್ಮನ ಮುಖವೂ ಕಂಡಂತಾಗಿ ಎಲ್ಲವನ್ನೂ ಮರೆತು 'ಅಮ್ಮಾ' ಎಂದು ಚೀರುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಮಲತಾಯಿ ಸೈಲೆಂಟಾಗಿ ನಡೆದು ಬಂದಳು. ಹೂ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿ ಒಳಗೆ ಹೋಗಿಬಿಟ್ಟಳು.
ಇವರೆಲ್ಲರಿಂದ ತಪ್ಪಿಸಿಕೊಂಡು ಬಹಳ ದೂರದ ಜಾಗಕ್ಕೆ ಹೋಗಿ ಬಿಡಬೇಕು. ಅಲ್ಲಿ ನೆಮ್ಮದಿಯಿಂದ ಬದುಕಬೇಕು ಎಂದೆಲ್ಲ ನಾನು ಕನಸು ಕಾಣುತ್ತಿದ್ದಾಗಲೇ ಚಿಗುರು ಮೀಸೆಯ ತರುಣನೊಬ್ಬ ಪರಿಚಯವಾದ. ಅವನ ಹೆಸರು ವಸಂತ್. ಆತ ತುಂಬ ಸೌಜನ್ಯದಿಂದ ಮಾತಾಡಿಸಿದ. ತನ್ನ ಕುರಿತೂ ಹೇಳಿಕೊಂಡ. ಅವನ ಮಾತುಗಳಲ್ಲಿ ಎಂಥದೋ ಆಕರ್ಷಣೆಯಿತ್ತು. ಕುಡುಕ ಅಪ್ಪನಿಂದ, ಕ್ರೂರಿ ಚಿಕ್ಕಮ್ಮನಿಂದ ಪಾರಾಗಬೇಕು ಎಂಬ ಆಸೆಯಿತ್ತಲ್ಲ; ಅದನ್ನೆಲ್ಲ ಅವನೊಂದಿಗೆ ಹೇಳಿಕೊಂಡೆ. ಸಂಕಟ ತಡೆಯಲಾರದೆ ಬಿಕ್ಕಳಿಸಿದೆ. ಆತ ಧೈರ್ಯ ಹೇಳಿದ. ಸಮಾಧಾನ ಮಾಡಿದ. ತನ್ನೂರಿಗೆ ಕರೆದೊಯ್ದು ಯಾವುದಾದರೂ ಕೆಲಸಕ್ಕೆ ಸೇರಿಸುವುದಾಗಿ ಆಶ್ವಾಸನೆ ನೀಡಿದ. ಮೊದಲು ಕೆಲಸಕ್ಕೆ ಸೇರಿಕೋ. ಸಂಬಳ ದೊರೆತ ಮೇಲೆ ನಿಮ್ಮ ಮನೇಲಿ ವಿಷಯ ತಿಳಿಸು ಎಂದ. ನಾನು ಅದೆಂಥ ಪೆದ್ದಿಯಾಗಿದ್ದೆ ಅಂದರೆ ಅವನು ಹೇಳಿದ್ದನ್ನೆಲ್ಲ ನಂಬಿದೆ. ಕಡೆಗೊಂದು ದಿನ ಪುಟ್ಟ ಲಗೇಜಿನೊಂದಿಗೆ ಅವನೊಂದಿಗೆ ಬಸ್ ಹತ್ತಿ ಬಿಟ್ಟೆ. ಪ್ರತಿ ಅರ್ಧ ಗಂಟೆಗೊಮ್ಮೆ-'ನೀನು ನಂಗೆ ಮೋಸ ಮಾಡಲ್ಲ ತಾನೆ? ನನ್ನ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಲ್ಲ ತಾನೆ ಎಂದು ಪ್ರಶ್ನೆ ಹಾಕಿದೆ. ಎಲ್ಲ ದೇವರುಗಳ ಮೇಲೂ ಆಣೆ-ಪ್ರಮಾಣ ಮಾಡಿಸಿದೆ. ಪ್ರತಿ ಬಾರಿಯೂ ಆತ ನಾನು ಹೇಳಿದಂತೆಯೇ ಕೇಳಿದ. ನನ್ನ ಸಡಗರಕ್ಕೆ ಪಾರವೇ ಇರಲಿಲ್ಲ. ನನ್ನ ಬದುಕಿಗೂ ವಸಂತಕಾಲ ಬಂತೆಂದು ನಿಂತಲ್ಲೇ ನಲಿದಾಡಿದೆ.
ನನ್ನ ಕನಸಿನ ಬಲೂನು ಒಡೆದು ಚೂರಾಗಲು ಬಹಳ ಹೊತ್ತು ಬೇಕಾಗಲಿಲ್ಲ. ಗೆಳೆಯನೊಂದಿಗೆ ನಾನು ತಲುಪಿಕೊಂಡದ್ದು ಮುಂಬಯಿಯನ್ನು. ನಾಲ್ಕೈದು ದಿನ ಒಂದು ಹೋಟೆಲ್‌ನಲ್ಲಿ ತಂಗಿದ್ದೆವಲ್ಲ, ಆಗಲೂ ಅವನು ಕೆಟ್ಟದಾಗಿ ವರ್ತಿಸಲಿಲ್ಲ. ಐದನೇ ದಿನ-'ನಾಳೆಯಿಂದ ಕೆಲಸಕ್ಕೆ ಹೋಗು. ನಾಲ್ಕು ದಿನ ಟ್ರೈನಿಂಗ್. ತಿಂಗಳ ಕೊನೆಗೆ ಸಂಬಳ. ಆಗ ಮತ್ತೆ ಭೇಟಿಯಾಗೋಣ' ಎಂದ. ನನ್ನನ್ನು ಕರೆದೊಯ್ಯಲು ಹೆಂಗಸೊಬ್ಬಳು ಬಂದಿದ್ದಳು. ಮೊದಲು ನಾಲ್ಕು ದಿನ ಏನೇನೂ ಕೆಲಸ ಹೇಳಲಿಲ್ಲ. ಐದನೇ ದಿನ ಎದೆಯೊಡೆಯುವಂಥ ವಿಷಯ ತಿಳಿಯಿತು. ಹೊಸ ಬದುಕಿಗೆ ದಾರಿ ತೋರುವುದಾಗಿ ಹೇಳಿದ್ದ ಗೆಳೆಯ ಕೆಲವೇ ಸಾವಿರ ರೂಪಾಯಿಗೆ ನನ್ನನ್ನು ಮಾರಿಬಿಟ್ಟಿದ್ದ! ನಾನು ವೇಶ್ಯಾವಾಟಿಕೆಯ ಪಾಲಾಗಿದ್ದೆ. ಈ ವಿಷಯ ತಿಳಿದಾಕ್ಷಣ ನಾನು ಪ್ರತಿಭಟಿಸಿದೆ. ಗೊಳೋ ಎಂದು ಅತ್ತೆ. ನನ್ನನ್ನು ಖರೀದಿಸಿದ್ದಳಲ್ಲ, ಆಕೆಯ ಕಾಲು ಹಿಡಿದೆ. ನನ್ನನ್ನು ಬಿಟ್ಟು ಬಿಡಿ ಎಂದು ಪ್ರಾರ್ಥಿಸಿದೆ. ನನ್ನ ಮಾತು ಕೇಳಿಸಲೇ ಇಲ್ಲ ಎಂಬಂತೆ ಆಕೆ ನಿಷ್ಠುರವಾಗಿ ಹೇಳಿದಳು: 'ನಿನ್ನಂಥವರು ಇಲ್ಲಿ ನೂರಾರು ಜನ ಇದ್ದಾರೆ. ಎಲ್ಲರನ್ನೂ ಪರಿಚಯ ಮಾಡ್ಕೋ. ನಾವು ಹೇಳಿದಂತೆ ಕೇಳಿಕೊಂಡು ಬದುಕೋದನ್ನ ಕಲಿತುಕೋ...'
ಉಳಿದವರಂತೆ ಬದುಕಲು ನಾನು ತಯಾರಿರಲಿಲ್ಲ. ತಿರುಗಿ ಬಿದ್ದೆ. ಆಗ, ಒಂದು ಕತ್ತಲು ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಿದರು. ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಎರಡು ದಿನ ಕುಡಿಯಲು ನೀರನ್ನೂ ಕೊಡಲಿಲ್ಲ. ಮೂರನೇ ದಿನ, ಊಟ ಕೊಡುವ ನೆಪದಲ್ಲಿ ಮಧ್ಯವಯಸ್ಕನೊಬ್ಬ ಬಂದ. ಅವನನ್ನು ಗಟ್ಟಿಯಾಗಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದೆ. ಆಗಲೇ ಅನಾಹುತ ನಡೆದು ಹೋಯಿತು. ಆ ದುಷ್ಟ, ನನ್ನ ಸಂಕಟವನ್ನು ಲೆಕ್ಕಿಸದೆ ಹಿಂಸ್ರಪಶುವಿನಂತೆ ನನ್ನ ಮೇಲೆ ಏರಿ ಬಂದ. ನಂತರದ ನಾಲ್ಕೈದು ವರ್ಷ ಕತ್ತಲೆಯ ಮಧ್ಯೆಯೇ ನಾನು ಕಳೆದು ಹೋದೆ. ಪ್ರತಿ ಬಾರಿಯೂ ಒಂದೇ ಒಂದು ಸಮಾಧಾನದ ಮಾತಿಗಾಗಿ, ತಲೆ ನೇವರಿಸುವ ಸ್ಪರ್ಶಕ್ಕಾಗಿ ಹಂಬಲಿಸುತ್ತಿದ್ದೆ. ಆದರೆ ಯಾರೊಬ್ಬರೂ ನನ್ನ ಕಂಬನಿ ಒರೆಸಲಿಲ್ಲ. ನಿನ್ನ ಕಥೆ ಹೇಳು ಎನ್ನಲಿಲ್ಲ. ಕ್ಷೇಮ ಸಮಾಚಾರ ವಿಚಾರಿಸಲಿಲ್ಲ. ಊಟ ಆಯ್ತಾ ಎಂದು ಕೇಳಲಿಲ್ಲ. ಬದಲಾಗಿ, ಥೇಟ್ ಕಾಡು ಪ್ರಾಣಿಗಳಂತೆಯೇ ನುಗ್ಗಿ ಬಂದರು. ನನ್ನ ಮೈ ಮತ್ತು ಮನಸ್ಸಿನ ತುಂಬಾ ಎಂದೆಂದೂ ವಾಸಿಯಾಗದಂಥ ಗಾಯ ಮಾಡಿ ಹೋಗಿ ಬಿಟ್ಟರು. ಈ ಸಂದರ್ಭದಲ್ಲೆಲ್ಲ, ಕಳೆದು ಹೋದ ಅಮ್ಮನನ್ನು, ಕ್ರೂರಿ ತಂದೆಯನ್ನು ನಿಷ್ಕರುಣಿ ದೇವರನ್ನು ನೆನೆದು ಅಳುತ್ತಿದ್ದೆ. ಹೀಗೆ ಅತ್ತೂ ಅತ್ತೂ ಕಣ್ಣೀರೂ ಬತ್ತಿ ಹೋದವು.
ಕಡೆಗೊಂದು ದಿನ ಪೊಲೀಸ್ ರೇಡ್ ನಡೆಯಿತು. ನರಕದಿಂದ ಕಡೆಗೂ ಮುಕ್ತಿ ದೊರೆಯಿತು. ವೇಶ್ಯಾವಾಟಿಕೆಯಲ್ಲಿದ್ದ ಎಲ್ಲ ಹುಡುಗಿಯರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ನಮಗೆಲ್ಲಾ ಏಡ್ಸ್ ಇದೆ. ಸಾವು ಬೆನ್ನ ಹಿಂದೆಯೇ ಅಡಗಿ ನಿಂತಿದೆ ಎಂಬ ಸತ್ಯ ಅವತ್ತೇ ತಿಳಿಯಿತು. ನಂಬ್ತೀರಾ? ಹೀಗೆಲ್ಲಾ ಆಗಿ ಹೋದಾಗ ನನಗೆ ಬರೀ 23 ವರ್ಷವಾಗಿತ್ತು! ಮುಂದೆ ಯಾರೋ ಪುಣ್ಯಾತ್ಮರು ಬೆಂಗಳೂರಿನ ದಾರಿ ತೋರಿದರು. ಈ ಆಶ್ರಮದಲ್ಲಿ ಕಣ್ಣೀರು ಒರೆಸುವ, ಸಮಾಧಾನ ಹೇಳುವ ಜನ ಕಾಣಿಸಿದರು. ಇರುವಷ್ಟು ದಿನ ಖುಷಿಯಿಂದಲೇ ಬಾಳಬೇಕು ಎಂಬ ಮಹದಾಸೆಯಿಂದಲೇ ಬದುಕ್ತಾ ಇದೀನಿ. ಸಾವಿನ ಸಮ್ಮುಖದಲ್ಲಿ ನಿಂತಿರುವಾಗ ನನ್ನ ಪ್ರಾರ್ಥನೆ ಏನು ಗೊತ್ತಾ? ಈಗ, ಒಂದೇ ಒಂದು ದಿನದ ಮಟ್ಟಿಗೆ ಕಾಲವೆಂಬುದು ಸರ್ರನೆ ಹಿಂದಕ್ಕೆ ಹೋಗಿ ಬಿಡಬೇಕು. ಸತ್ತು ಹೋಗಿರುವ ನನ್ನಮ್ಮ, ಐದೇ ಐದು ನಿಮಿಷ ಮಾತಿಗೆ ಸಿಕ್ಕಬೇಕು. ಆಕೆಯ ಹಾಡು ಕೇಳುತ್ತಾ ಹೂ ಗಿಡಗಳ ಮಧ್ಯೆ ನಾನು ಕುಣಿದಾಡಬೇಕು. ಅಪ್ಪ ಅನ್ನಿಸಿಕೊಂಡಾತ ಎದುರಾಗಿ, ಕ್ಷಮಿಸು ಮಗಳೇ ಎನ್ನುತ್ತಾ ಕಣ್ಣೀರು ಹಾಕಬೇಕು. ನನ್ನ ಗೆಳೆಯ, ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸುತ್ತಾ ತಲೆ ಬಗ್ಗಿಸಬೇಕು. ಎಲ್ಲ ಸೌಭಾಗ್ಯವೂ ಮರಳಿ ದೊರಕಿದ ಸಂಭ್ರಮದಲ್ಲಿ ಹೂಗಳ ಮಧ್ಯೆ ಜಿಗಿದಾಡುತ್ತಾ ನಾನು ಹೊಸ ಬದುಕು ಆರಂಭಿಸಬೇಕು. ಹೌದು ಸರ್, ನನಗೆ ಬದುಕಬೇಕೆಂಬ ಆಸೆ ಇದೆ. ಈಗಿನ್ನೂ 26 ವರ್ಷ ನಂಗೆ. ಈ ಚಿಕ್ಕ ವಯಸ್ಸಿಗೇ ಸಾಯೋಕೆ ಯಾರಿಗೆ ತಾನೆ ಮನಸ್ಸು ಬರ್ತದೆ ಸಾರ್? ನನ್ನದು ಒಂದೇ ಪ್ರಶ್ನೆ: ದಯಾಮಯಿ, ದುಷ್ಟ ಶಿಕ್ಷಕ ಎಂದೆಲ್ಲಾ ಕರೆಸಿಕೊಳ್ಳುವ ದೇವರು, ನನ್ನಂಥ ಅಮಾಯಕಿಗೆ ಯಾಕಿಂಥ ಕಷ್ಟ ಕೊಟ್ಟ? ನನ್ನ ಮೈ ಮೇಲೆ ಏರಿ ಬಂದ ಕ್ರೂರಿಗಳನ್ನು ಯಾಕೆ ಸುಮ್ಮನೆ ಬಿಟ್ಟ?'
ಈ ಪ್ರಶ್ನೆಯೊಂದಿಗೆ ತನ್ನ ಬದುಕಿನ ಕಥೆಗೆ ಫುಲ್‌ಸ್ಟಾಪ್ ಹಾಕಿ, ದೇವರ ಕೋಣೆಗೆ ಹೋಗಿ ಬಿಟ್ಟಳು ರಾಧೆ. ಈ ಅಮಾಯಕಿಗೆ ಎಲ್ಲಿಯಾದರೂ ಕೆಲಸ ಕೊಡಿಸಿ, 10 ವರ್ಷಗಳ ಮಟ್ಟಿಗಾದರೂ ಅವಳ ಸಾವನ್ನು ಮುಂದೂಡುವಂಥ ಚಿಕಿತ್ಸೆ ಕೊಡಿಸಬೇಕು ಎಂದೆಲ್ಲ ಆಶ್ರಮದ ಮುಖ್ಯಸ್ಥರು ಆಸೆಪಟ್ಟರು. ಅದನ್ನೆಲ್ಲ ರಾಧೆಯ ಮುಂದೆಯೂ ಹೇಳಿದರು. ಮುಂದಿನ 10 ವರ್ಷಗಳವರೆಗೂ ಬದುಕುತ್ತೇನೆ ಎಂಬ ಮಾತು ಕೇಳಿದಾಕ್ಷಣ ಆ ಹುಡುಗಿ ಓಡೋಡಿ ಹೋಗಿ ಕೃಷ್ಣನ ಸಮ್ಮುಖದಲ್ಲಿ ಕೂತು ಮೈ ಮರೆತು ಹಾಡಿದಳಂತೆ...
----
ಎಲ್ಲವೂ ಸರಿ ಹೋಯಿತು. ರಾಧೆಯ ಬದುಕಲ್ಲಿ ವಸಂತಾಗಮನವಾಯಿತು ಎಂದುಕೊಳ್ಳುತ್ತಿದ್ದಾಗಲೇ, ವಾರದ ಹಿಂದೆ ಫೋನ್ ಮಾಡಿದ ಆಶ್ರಮದ ಮುಖ್ಯಸ್ಥರು ಹೇಳಿದರು: 'ಇದ್ದಕ್ಕಿದ್ದಂತೆ ಜ್ವರ ಬಂತು. ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ವಿ. ಮೂರನೇ ದಿನದ ಹೊತ್ತಿಗೆ ಮೈ ತಣ್ಣಗಾಯ್ತು. ರಾಧೆ ತೀರಿಕೊಂಡಳು!' ಆಶ್ರಮದ ಮುಖ್ಯಸ್ಥರ ಮಾತುಗಳನ್ನು ಕೇಳಿದ ನಂತರ ಅನಿಸಿದ್ದು:
ಕೆಲವರ ವಿಷಯದಲ್ಲಿ ದೇವರು ಯಾಕೆ ಅಷ್ಟೊಂದು ಕ್ರೂರಿಯಾಗುತ್ತಾನೆ?

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.