ಅಂಕಣಗಳು

ಆನೆ ನೋಡಲು ಬಂದವರಿಗೆ 'ರೋಪ್‌' ಹಾಕಿ ಎಂದರು!

Published On :

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿದ್ದ ಆನೆಗಳನ್ನು ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಸಿದ್ಧ ಮಾಡಲಾಗುತ್ತಿತ್ತು. ಆನೆಗಳ ಹತ್ತಿರ ಯಾರೂ ಸುಳಿಯದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಆನೆಗಳಿಗೆ ಅಲಂಕಾರ ಮಾಡುತ್ತಿದ್ದನ್ನು ನೋಡಲು ಹಾಗೂ ಫೋಟೋ ತೆಗೆಯಲು ಮಾಧ್ಯಮದವರು ಅತ್ತ ಧಾವಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸನೊಬ್ಬ 'ಪ್ರೆಸ್‌ನವರು ಬಂದ್ರು, ರೋಪ್ ಹಾಕಿ...' ಅಂತಾ ಸಹೋದ್ಯೋಗಿಗಳಿಗೆ ಹೇಳಿದ. ಇದರಿಂದ ಕೆರಳಿದ ಛಾಯಾಗ್ರಾಹಕರೊಬ್ಬರು, 'ಏಯ್ ನಮಗ್ಯಾಕ್ರಿ ರೋಪ್ ಹಾಕ್ತೀರಾ. ನಾವ್ ನಮ್ ಕೆಲ್ಸ ಮಾಡಲು ಬಂದಿದ್ದೀವಿ' ಎಂದು ಜೋರಾಗಿಯೇ ರೋಪ್ ಹಾಕಿದ್ರು. ಆಗ ಆ ಪೊಲೀಸಪ್ಪ, ರೀ ಸ್ವಾಮಿ ನಾನ್ಯಾಕ್ ನಿಮ್ಗೆ ರೋಪ್ ಹಾಕ್ಲಿ. ನಾನೂ ನಮ್ ಕೆಲ್ಸ ಮಾಡಾಕೆ ಬಂದಿದ್ದೀನಿ. ನಾನ್ ಹೇಳಿದ್ದು, ಆನೆಗಳ ಹತ್ತಿರ ಯಾರನ್ನೂ ಬಿಡದಂತೆ ಸುತ್ತಲೂ ರೋಪ್ (ಹಗ್ಗ) ಹಾಕಿ ಅಂತಾ ಅಂದಾಗ ಎರಡೂ ಕಡೆಯೂ ನಗುವಿನ ಅಲೆ!

'ವೈನ್‌' ಆಗೈತೆ ಅಂತ ನೈಂಟಿ ಮೇಲೆ ಹೊಡದ್ರೆ ಡಬಲ್ ಕಿಕ್!
ಮೈಸೂರಿನಲ್ಲಿ ಕಳೆದ ವಾರ ವೈನ್ ಮೇಳ(ದ್ರಾಕ್ಷಾರಸ ಮೇಳ) ನಡೆಯಿತು. ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದ ಪತ್ರಕರ್ತರಿಗೆ ಕುಡಿಯಲು ಉಚಿತವಾಗಿ ವೈನ್ ನೀಡಲಾಗುತ್ತಿತ್ತು. ಮಾಮೂಲಿ ಪಾರ್ಟಿಗಳಲ್ಲಿ ಕುಡಿದು ಅಭ್ಯಾಸವಾಗಿದ್ದ ಕೆಲವರು ವೈನು ಸಖತ್ ವೈನಾಗಿದೆ ಎಂದು ಕುಡಿಯತೊಡಗಿದರು. ಇದರಿಂದ ಗಾಬರಿಯಾದ ಸಂಘಟಕರು, ಒಂದ್ ನಿಮಿಷ ಎಂದು ವೈನ್ ಬಾಟಲಿ ಹಿಡಿದು, ನಂತರ ಗ್ಲಾಸ್ ತೆಗೆದುಕೊಂಡು, ಅದಕ್ಕೆ ವೈನ್ ಸುರಿದುಕೊಂಡು, ಶೇಕ್ ಮಾಡಿ, ಪಾಠ ಶುರು ಮಾಡಿದರು. ಗ್ಲಾಸನ್ನು ಮಧ್ಯದಲ್ಲಿ ಹಿಡಿಯಬಾರದು. ಕೆಳಗೆ ಹಿಡಿಯಬೇಕು. ಮಧ್ಯದಲ್ಲಿ ಹಿಡಿದರೆ ಕೈ ಶಾಖ ಹೆಚ್ಚಾಗಿ ಪರಿಮಳ ಹೋಗುತ್ತದೆ. ಕೆಳಗೆ ಹಿಡಿದರೆ ಆ ರೀತಿ ಆಗುವುದಿಲ್ಲ. ಕುಡಿಯುವ ಮುನ್ನಾ ಒಮ್ಮೆ ಶೇಕ್ ಮಾಡಬೇಕು. ಇದು ಬೇರೆ ಮದ್ಯದಂತಲ್ಲ. ದಿನಕ್ಕೆ ನೈಂಟಿ ಎಂಎಲ್ ಮಾತ್ರ ಕುಡಿಯಬೇಕು. ನೈಂಟಿಗಿಂತ ಜಾಸ್ತಿ ಹೊಡೆದ್ರೆ ಲೇಟಾಗಿ ಕಿಕ್ ಹೊಡೆಯುತ್ತೆ. ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ... ಎಂದು ಹೇಳತೊಡಗಿದರು. ಇದು ಪರಿಣಾಮ ಬೀರಿತು. ಇಡೀ ಬಾಟಲಿ ಎತ್ತಿ, ಕಂಠಪೂರ್ತಿ ಕುಡಿಯಬೇಕು ಎಂದುಕೊಂಡಿದ್ದವರು ಸಹವಾಸವೇ ಬೇಡ ಎಂದು ನೈಂಟಿ ಹಾಕಿ, ಜಾಗ ಖಾಲಿ ಮಾಡಿದರು.

ಎತ್ತಿನಹೊಳೆ: ಹೇಳಿಕೆಯೇ ತಿರುವು!
ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಯುವ ವಿಚಾರದಲ್ಲಿ ದ.ಕ. ಜಿಲ್ಲಾ ಬಿಜೆಪಿಯಲ್ಲೇ ವಿಭಿನ್ನ ನಿಲುವಿದೆ. 'ಎತ್ತಿನಹೊಳೆ ಸುತ್ತಲಿನ 11 ಸಣ್ಣ ನದಿಗಳ ನೀರನ್ನು ಮಾತ್ರ ಬರಪೀಡಿತ ಜಿಲ್ಲೆಗಳಿಗೆ ಹರಿಸಲಾಗುತ್ತದೆ. ಇದರಿಂದ ಪಶ್ಚಿಮ ಘಟ್ಟಕ್ಕೆ ಬಿಡಿ, ಕರಾವಳಿ ಜಿಲ್ಲೆಗೆ ಯಾವುದೇ ತೊಂದರೆ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ನೀರಾವರಿ ತಜ್ಞರಂತೆ ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಆದರೆ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಮಾತ್ರ 'ನಾನು ಎತ್ತಿನಹೊಳೆ ಯೋಜನೆ ವಿರೋಧಿ' ಎನ್ನುತ್ತಾ ಸಭೆಗಳಲ್ಲಿ ಭಾಷಣ ಬಿಗಿಯುತ್ತಿದ್ದರು. ಇತ್ತೀಚೆಗೆ ಇಬ್ಬರೂ ಜಂಟಿಯಾಗಿ ಸುದ್ದಿಗೋಷ್ಠಿ ಮಾಡುತ್ತಿದ್ದರು. ವಿಭಿನ್ನ ನಿಲುವು ಪ್ರಸ್ತಾಪವಾಗುತ್ತಿದ್ದಂತೆ ಡೀವಿ ಕೆಂಡಾಮಂಡಲರಾದರು. ಏಕ್‌ದಂ ಸ್ವರ ಏರಿಸಿ 'ಯಾರು ಹೇಳಿದರು?' ಎಂದು ಜಿಲ್ಲಾಧ್ಯಕ್ಷರತ್ತ ಮುಖ ತಿರುಗಿಸಿದರು. ಕೂಡಲೇ ಉಲ್ಟಾ ಹೊಡೆದ ಜಿಲ್ಲಾಧ್ಯಕ್ಷರು, 'ನಾನು ಹಾಗೆ ಹೇಳಿಯೇ ಇಲ್ಲ. ಜಿಲ್ಲೆಯ ಹಿತಕ್ಕೆ ಧಕ್ಕೆಯಾದರೆ ಮಾತ್ರ ಯೋಜನೆಗೆ ವಿರೋಧ' ಎಂದು ತಮ್ಮ ನಿಲುವಿಗೆ ತಿಪ್ಪೆ ಸಾರಿಸಿದರು!

ಪಕ್ಷೇತರ ಶಾಸಕ ವರ್ತೂರು ರಿಯಲ್ ಎಸ್ಟೇಟ್ ಬ್ಯುಸಿನೆಸ್!
ಕೋಲಾರ ಶಾಸಕ ವರ್ತೂರು ಪ್ರಕಾಶ ಸದ್ದು ರಾಜಕೀಯ ವಲಯದಲ್ಲಿ ಕಡಿಮೆಯಾಗಿದೆ. ವಿಧಾನಸೌಧದತ್ತ ಸುಳಿಯುವುದೂ ಅಪರೂಪ. ಇತ್ತೀಚೆಗೆ ಕೋಲಾರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ವರ್ತೂರು ಬಳಿ ಬಂದಿದ್ದರು. ನಾನು ಜಮೀನು ಖರೀದಿಸಲು ಹೊರಟರೆ ವ್ಯಕ್ತಿಯೊಬ್ಬ ಅಡ್ಡಿಪಡಿಸುತ್ತಿದ್ದಾನೆ. ಅವನು ನಿಮಗೆ ಪರಿಚಯ. ಬುದ್ಧಿ ಹೇಳಿ ನನ್ನ ದಾರಿ ಸರಿ ಮಾಡಿಕೊಂಡಿ ಎಂದು ಕೇಳಿಕೊಂಡ. ಇದಕ್ಕೆ ಪ್ರತಿಕ್ರಿಯಿಸಿದ ವರ್ತೂರು, 'ಹೇಯ್.. ಅವ್ನ ಸಹವಾಸಕ್ ಹೋಗಬ್ಯಾಡ್. ಅವ್ನುಸರಿಯಿಲ್ಲ' ಎಂದು ಸಾಗಹಾಕಿದರು. ಅಷ್ಟಕ್ಕೆ ಸುಮ್ಮನಾಗದೇ ಭೂಮಿ ಯಾವುದು ನೋಡಲಾ ಅಂತಾ ಶಿಷ್ಯನಿಗೆ ಹೇಳಿ ಪತ್ತೆ ಹಚ್ಚಿದರು. ಮಾರನೇ ದಿನ ವ್ಯಾಜ್ಯದಲ್ಲಿದ್ದ ಭೂಮಿಯನ್ನು ತಾವೇ ಖರೀದಿ ಮಾಡಿಕೊಂಡಿದ್ದರು. ವಿಷಯ ತಿಳಿದು ವ್ಯಾಜ್ಯ ಬಗೆಹರಿಸಿಕೊಡಿ ಎಂದು ಬಂದಿದ್ದ ವ್ಯಕ್ತಿ ವರ್ತೂರು ಅವರನ್ನು ಕೇಳಿದರೆ, 'ರಾಜಕೀಯದಲ್ಲಿ ಕಾಂಗ್ರೆಸ್ಸನೂ ಹತ್ತಿರ ಸೇರಿಸಿಕೊಳ್ಳುತ್ತಿಲ್ಲ, ಬಿಜೆಪಿ ಸಹವಾಸವೂ ಸಹ್ಯವಾಗಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ದಂಧೆ ಶುರು ಮಾಡಿದ್ದೇನೆ. ನೀನು ಸುಮ್ನೆ ಹೋಗಪ್ಪ' ಎಂದು ಆವಾಜ್ ಹಾಕಿ ಕಳುಹಿಸಿದರು!

ನಾನ್ ಸಿದ್ದರಾಮಯ್ಯ, ಅವನ್ ರಾಕೇಶ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ವರುಣದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಕಳೆದ ವಾರ ನಂಜನಗೂಡು ತಾಲೂಕು ಬಿಳಿಗೆರೆಯಲ್ಲಿ ಸಮಾವೇಶ ಏರ್ಪಡಿಸಿದ್ದರು. ಅವರು ಮಾತಿಗೆ ನಿಂತಾಗ, ಸಭಿಕನೊಬ್ಬ, ಪಕ್ಕದಲ್ಲಿ ನಿಂತಿದ್ದ ರಾಕೇಶ್‌ನನ್ನು ಕಂಡು 'ಜೂನಿಯರ್ ಸಿದ್ದರಾಮಯ್ಯಗೆ ಜೈ' ಎಂದು ಘೋಷಣೆ ಹಾಕತೊಡಗಿದ. ಆಗ ಸಿದ್ದರಾಮಯ್ಯ, ಏಯ್ ಸುಮ್ನೀರೋ ಅವನ್ಯಾಕ್ ಜೂನಿಯರ್ ಸಿದ್ದರಾಮಯ್ಯ ಆದಾನು. ನಾನು ಸಿದ್ದರಾಮಯ್ಯ, ಅವ್ನು ರಾಕೇಶ ಅಷ್ಟೇಯ ಅಂದ್ರು!

ಅಧಿಕಾರಿಗಳಿಗೆ ಪತ್ರ ಬರೆದು ಪ್ರದರ್ಶನ ಮಾಡುವ ಸಂಸದ!
ರಾಜಕಾರಣಿಗಳು ಅಧಿಕಾರಿಗಳಿಗೆ ಆವಾಜ್ ಹಾಕಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ, ಬಿಜಾಪುರ ಸಂಸದ ರಮೇಶ ಜಿಗಜಣಗಿ ಮಾತ್ರ ಸ್ವಲ್ಪ ಭಿನ್ನ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯುತ್ತಾರೆ! ಪ್ರತಿದಿನ ತಪ್ಪದೆ ಕಚೇರಿಗೆ ಬರುವ ಸಂಸದರು ಜನರ ಸಮಸ್ಯೆಗಳನ್ನು ಆಲಿಸುತ್ತಾರೆ. ಯಾವ ಅಧಿಕಾರಿಯಿಂದ ಕೆಲಸ ಆಗಬೇಕೋ ಅವರಿಗೆ ಪತ್ರ ಬರೆಯುತ್ತಾರೆ. ಅದರ ಒಂದು ಪ್ರತಿಯನ್ನು ತಮ್ಮ ಕಚೇರಿಯ ಫೈಲ್‌ನಲ್ಲಿ ಇರಿಸುತ್ತಾರೆ. ಇದಕ್ಕೆ ಅಧಿಕಾರಿಗಳು ಎಷ್ಟರಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ನಿಗೂಢ! ಇತ್ತೀಚೆಗೆ ಬಿಜಾಪುರದಲ್ಲೊಂದು ವಿಮಾನ ನಿಲ್ದಾಣ ಆರಂಭಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಫೈಲ್‌ಗಳ ಮೂಟೆಯನ್ನೇ ಹೊತ್ತುಕೊಂಡು ಬಂದು ಅದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. ಕುತೂಹಲ ತಡೆಯದ ಪತ್ರಕರ್ತರು ಸಂಸತ್‌ನಲ್ಲೇ ಇದರ ಬಗ್ಗೆ ಪ್ರಸ್ತಾಪಿಸಬಹುದಿಲ್ಲ ಎಂದು ಕೇಳಿದಾಗ, 'ರೀ ಸ್ವಾಮಿ. ನಾನು ಕೆಲಸ ಮಾಡಿದ್ದೇನೋ ಇಲ್ಲವೋ ಎಂಬುದು ಜನರಿಗೆ ಗೊತ್ತಾಗಬೇಕಾದರೆ ಈ ರೀತಿ ಪತ್ರ ವ್ಯವಹಾರ ಮಾಡಲೇಬೇಕು. ಇದು ಲಿಖಿತ ಮಾಹಿತಿ ಇದ್ದಂತೆ' ಎಂದು ಧೂಳು ಜಾಡಿಸಿ ಫೈಲ್ ಮೇಲೆತ್ತಿಕೊಂಡರು!

- ನಂಬೀರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.