ಅಂಕಣಗಳು

ಸಚಿನ್ ತೆಂಡೂಲ್ಕರ್...

ಅಂತೂ ಇಂತೂ ರಿಟೈರ್ ಆಗ್‌ಬಿಟ್ರಿ, ಮುಂದೆ ಏನು ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೀರಾ?

Hmmm... ಪಾಂಚ್ 

ಸಚಿನ್ ತೆಂಡೂಲ್ಕರ್
*   ಅಂತೂ ಇಂತೂ ರಿಟೈರ್ ಆಗ್‌ಬಿಟ್ರಿ, ಮುಂದೆ ಏನು ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೀರಾ?
ಯಾಕ್ರೀ ನಿಮಗೆ ಅಷ್ಟೊಂದ್ ಅರ್ಜೆಂಟು. ನಾನಿನ್ನೂ ರಿಟೈರ್ ಆಗಿಲ್ಲರೀ. ಆಗ್ತೀನಿ ಅಂತ ಹೇಳಿದೀನಿ ಅಷ್ಟೆ. ಅಷ್ಟರೊಳಗೆ ಯಾರಾದ್ರೂ ನಿಮ್ಮ ನಿವೃತ್ತಿ ವಾಪಸ್ ತಗೊಳ್ಳಿ ಅಂತ ಒತ್ತಾಯ ಮಾಡಬಹುದು. ಯಾರಿಗ್ಗೊತ್ತು?

*   ನಿಮ್ಮ ಸ್ಟ್ರೆಂತ್ ಬಗ್ಗೆ ಎಲ್ಲರೂ ಮಾತಾಡ್ತಾರೆ, ರಿಟೈರ್ ಆಗಿರುವ...ಸಾರಿ, ಆಗಲಿರುವ ಈ ಹೊತ್ತಲ್ಲಿ ನಿಮ್ಮ ಯಾವುದಾದರೂ ಒಂದು ವೀಕ್‌ನೆಸ್ ಬಗ್ಗೆ ನೀವೇ ಮಾತಾಡ್ತೀರಾ?
ಈ ನೈಂಟಿ ನರ್ವಸ್‌ನಿಂದ ನಂಗೆ ಒಂದಷ್ಟು ಕೆಟ್ಟ ಹೆಸರು ಬಂತು. ಆದ್ರೆ ಏನ್ ಮಾಡೋಕಾಗುತ್ತೆ. ಅದು ಕಾಮನ್. ಜೀವನದಲ್ಲಿ ಎಲ್ಲರಿಗೂ ಅರವತ್ತಕ್ಕೆ ಅರಳು ಮರಳು ಆಗುತ್ತೆ, ಆದ್ರೆ ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟ್ಸ್‌ಮನ್‌ಗೆ
ತೊಂಬತ್ತಕ್ಕೆ ಅರಳು ಮರಳು ಆಗುತ್ತೆ.

*    ಸರಿ, ಸರಿ, ನೀವು ಕ್ರಿಕೆಟ್‌ರಂಗದಲ್ಲಿ ಅರಳಿ ಈಗ ಮರಳುವ ಹೊತ್ತಾಗಿದೆ. ಈ ಟೈಮ್‌ನಲ್ಲಿ, ವಿರಾಟ್ ಕೊಹ್ಲಿ ಅವರನ್ನ ಭವಿಷ್ಯದ ತೆಂಡೂಲ್ಕರ್ ಅಂತ ಹೇಳ್ತಿದಾರೆ ಎಲ್ರೂ, ನೀವೇನಂತೀರಿ?
ಹಂಗಂದ್ರೆ? ಈವಾಗೇನು? ಅವನೂ ರಿಟೈರ್ ಆಗ್‌ಬೇಕು ಅಂತೀರಾ?
 ಅಯ್ಯೋ, ಅದು ಹಂಗಲ್ಲ. ಹೋಗ್ಲಿ ಬಿಡಿ, ನಿಮಗೆ ದೇವರ ಮೇಲೆ ನಂಬಿಕೆ ಇದೆಯಾ?
ಏ ಹಲೋ, ನನ್ ಮೇಲೆ ನಂಗೆ ನಂಬಿಕೆ ಇಲ್ಲ ಅಂದ್ರೆ ಇಷ್ಟೊಂದೆಲ್ಲಾ ಸಾಧನೆ ಮಾಡೋಕಾಗ್ತಿತ್ತಾ?

_   ಯಪ್ಪಾ, ಇದಪ್ಪಾ ಕೌಂಟರ್ರು ಅಂದ್ರೆ. ಸರಿ, ನೀವು ರಿಟೈರ್ ಆಗ್ತೀನಿ ಅಂದಿದ್ದಕ್ಕೆ, ನಿಮ್ಮನ್ನ ದೇವರು ಅಂತ ಕರೆಯೋ ನಿಮ್ಮ ಅಭಿಮಾನಿಗಳ ಮನಸ್ಸು ನಿಮ್ಮ ಬ್ಯಾಟಿನಷ್ಟೇ ಭಾರ ಆಗಿದೆಯಂತೆ?
ಅದೇನೋ ನಿಜ ಬಿಡಿ. ಆದ್ರೆ ಎಷ್ಟ್ ದಿನ ಅಂತ ಆಡೋಕಾಗುತ್ತೆ. ಅದಕ್ಕೆ, ದೇವರ ಮೇಲೆ ಭಾರ ಹಾಕಿ ಈ ನಿರ್ಧಾರ ತಗೊಂಡಿದೀನಿ.
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಇತ್ತೀಚೆಗೆ ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ಫೋನ್ ಎಂದರೆ ಆ್ಯಪಲ್‌ನ ಚೀಪ್ ಐ ಫೋನ್ ಆಗಿರುವ ಐಫೋನ್ ಸಿ. ಆ್ಯಪಲ್ ಏನೋ ಇದನ್ನು ಚೀಪ್ ಫೋನ್ ಎನ್ನುತ್ತಿದೆ. ಆದರೆ ಇದು ನಿಜಕ್ಕೂ ಎಷ್ಟು ಚೀಪ್? ಮತ್ತು ಅದನ್ನು ತಗೋಬೇಕಾ ಬೇಡ್ವಾ ಎಂಬ ಗೊಂದಲ ಇದ್ದವರಿಗೆ ಇಲ್ಲಿ ಕೆಲವು ಉತ್ತರಗಳಿವೆ.
n bit.ly/1cCxTfZ n bit.ly/1fKKP7b n bit.ly/1avh42T n bit.ly/17vwZ0r n bit.ly/H6tmId

ಹರಿ-ಕಥೆ
ಖೇಮು ಜಟಕಾ ಗಾಡಿಯಲ್ಲಿ ಹೋಗುತ್ತಿದ್ದಾಗ ಒಂದು ಟ್ರಕ್ ಗುದ್ದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿಕ್ಕಾಪಟ್ಟೆ ಖರ್ಚಾಗಿದೆ ಅಂತ ಖೇಮು ಟ್ರಕ್ ಓನರ್ ಮೇಲೆ ಕೇಸು ಹಾಕಿದ. ಕೋರ್ಟಿನಲ್ಲಿ ಅದರ ವಿಚಾರಣೆ ನಡೆಯುತ್ತಿತ್ತು. ಆದರೆ ಅವನ ವಿರುದ್ಧದ ಲಾಯರ್ ಒಂದೇ ಪಾಯಿಂಟ್ ಹಿಡ್ಕೊಂಡು ಕೂತಿದ್ದ. 'ಆಕ್ಸಿಡೆಂಟ್ ಆಗಿ ರಸ್ತೆ ಪಕ್ಕದ ಕಾಲುವೆಯ ಬಳಿ ಬಿದ್ದಿದ್ದಾಗ, ಅಲ್ಲಿನ ಪೊಲೀಸ್ ಆಫೀಸರ್ ಬಂದು ನಿನ್ನನ್ನು 'ಹೌ ಆರ್ ಯೂ?' ಅಂತ ಕೇಳಿದಾಗ, ನೀನು 'ಐ ಆ್ಯಮ್ ಫೈನ್‌' ಎಂದಿದ್ದೆ ಅಲ್ವಾ? ಈಗ ನಂಗೆ ಪೆಟ್ಟಾಗಿತ್ತು, ಮೆಡಿಕಲ್ ಬಿಲ್ ಅಂತೆಲ್ಲಾ ಹೇಳಿ ಸುಖಾಸುಮ್ಮನೆ ಕೇಸು ಹಾಕಿ ದುಡ್ಡು ಮಾಡಿಕೊಳ್ಳಲು ನೋಡ್ತಿದೀಯ' ಅಂತ ಆ ಲಾಯರ್ ಖೇಮು ಮೇಲೆ ಎಗರಾಡುತ್ತಿದ್ದ. ಆದರೆ ಖೇಮು ಪದೇ ಪದೇ 'ಅದು ಹಾಗಲ್ಲ, ನಾನು 'ಐ ಆ್ಯಮ್ ಫೈನ್‌' ಅಂದಿದ್ದು ನಿಜ. ಆದರೆ, ಅಲ್ಲಿ ಆ್ಯಕ್ಸಿಡೆಂಟ್ ಆಗಿ ಬಿದ್ದಿದ್ನಲ್ಲ ಆಗ ನನ್ನ  ಕುದುರೆ...' ಅಂತ ಹೇಳೋಕೆ ಹೋದಾಗಲೆಲ್ಲ, 'ಕುದುರೆ ವಿಷ್ಯ ಬೇಡ ನಿನ್ ವಿಷ್ಯ ಹೇಳು' ಅಂತ ಗಲಾಟೆ ಮಾಡ್ತಿದ್ದ ಲಾಯರ್. ಅವನು ಸುಮ್ನಿರಲ್ಲ. ಖೇಮು ಬಿಡಲ್ಲ ಅಂತ ವಾಗ್ವಾದ ಮುಂದುವರೀತು. ಕೊನೆಗೆ ಇವರಿಬ್ಬರ ಕಾಟ ತಾಳಲಾರದೆ ಜಡ್ಜ್ ಲಾಯರ್‌ಗೆ ಸುಮ್ನೆ ಇರೋಕೆ ಹೇಳಿ, ಖೇಮುನತ್ತ ತಿರುಗಿ 'ಸರಿ, ನೀನು ಅದೇನ್ ಹೇಳ್ತಿಯೋ ಹೇಳು' ಅಂದ್ರು. ಖೇಮು ಶುರು ಮಾಡಿದ. 'ನಾನು ಅಲ್ಲಿ ಆ್ಯಕ್ಸಿಡೆಂಟ್ ಆಗಿ ಬಿದ್ದಿದ್ನಾ. ಅಲ್ಲಿಗೆ ಪೊಲೀಸ್ ಆಫೀಸರ್ ಬಂದ್ನಾ.  ಸೀದಾ ನನ್ನ ಕುದುರೆ ಹತ್ರ ಹೋಗಿ ಒಂದೆರಡು ಸೆಕೆಂಡ್ ಅದನ್ನ ನೋಡಿ ರಿವಾಲ್ವರ್ ತೆಗೆದು ಅದನ್ನು ಶೂಟ್ ಮಾಡಿ ಸಾಯಿಸಿ ನನ್ನ ಬಳಿ ಬಂದ. ನನಗೋ, ಉಸಿರಾಡುವುದೂ ಕಷ್ಟ ಎನಿಸುವಷ್ಟು ಪೆಟ್ಟಾಗಿತ್ತು. ಅವನು ನನ್ನ ಬಳಿ ಬಂದವನೇ 'ನಿನ್ನ ಕುದುರೆ ಉಸಿರಾಡೋಕೂ ಕಷ್ಟ ಪಡ್ತಿತ್ತು. ನೋಡೋಕಾಗ್ತಿರಲಿಲ್ಲ. ಅದಕ್ಕೆ ಅದು ಬದುಕಲ್ಲ ಅನ್ನಿಸಿ ಸಾಯಿಸಿಬಿಟ್ಟೆ. ಸರಿ, ಈಗ ನೀನು ಹೇಳು 'ಹೌ ಆರ್ ಯೂ?' ಅಂದ. ಈಗ ನೀವೇ ಹೇಳಿ 'ಐ ಆ್ಯಮ್ ಫೈನ್‌' ಅಂತ ಹೇಳೋದ್ ಬಿಟ್ಟು ನಂಗೆ ಬೇರೆ ಆಪ್ಷನ್ ಇತ್ತಾ...?'

ಸ್ಕ್ಯಾಂಡಲ್‌ವುಡ್
ಅದೇನೋ ಅಂತಾರಲ್ಲ ಅಂತ ಶುರುವಾಗುವ ಫೇಮಸ್ ಮಾತುಗಳಲ್ಲಿ ಹಲ್ಲಿದ್ದೋರಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದೋರಿಗೆ ಹಲ್ಲಿಲ್ಲ ಅನ್ನೋದು ತುಂಬಾ ಫೇಮಸ್ಸು. ನಮ್ಮ ಗಾಂಧಿನಗರದಲ್ಲಿ ಸಿನಿಮಾಗಳಿಗೆ ಥಿಯೇಟರ್ ಸಿಗುವ ವಿಷಯದಲ್ಲಂತೂ ಇದು ಅತಿ ಜನಪ್ರಿಯ. ಕೆಲವು ನಿರ್ಮಾಪಕರ ಚಿತ್ರಗಳು ಚಿತ್ರಮಂದಿರಗಳನ್ನು ಲೀಸ್‌ಗೆ ಹಾಕ್ಕೊಂಡಂತಿರುತ್ತವೆ. ಅದೇನೋ, ಜನ ಬರಲಿ ಬಿಡಲಿ, 50 ದಿನ, 100 ದಿನ, 25 ವಾರ ಬೇಕಾದರೂ ಓಡಿಸುವ ಸೌಕರ್ಯ ಇವರಿಗಿರುತ್ತದೆ. ಆದರೆ ಅದೇ ಸಮಯದಲ್ಲಿ ದೊಡ್ಡ ನಿರ್ಮಾಪಕರ ಬೆಂಬಲ ಇಲ್ಲದ ಇನ್ನೊಬ್ಬ ಯಾರೋ ನಿರ್ದೇಶಕ ಮಾಡಿದ ಹೊಸ ರೀತಿಯ ಸಿನಿಮಾ, ಜನ ಎಷ್ಟೇ ಉತ್ಸಾಹ ತೋರಿಸಿದರೂ ಚಿತ್ರಮಂದಿರಗಳಿಂದ ಮೂರೇ ದಿನಕ್ಕೆ ಕಾಲು ಕೀಳುತ್ತದೆ. ವಿತರಕರು, ಚಿತ್ರಮಂದಿರದ ಮಾಲೀಕರ ಕೈ, ಕಾಲು ಹಿಡಿದು ಬಾಡಿಗೆ ಕೊಡ್ತೀವಿ ಅಂದ್ರೂ ಹೆಚ್ಚೆಂದರೆ ಅವರ ಚಿತ್ರವನ್ನು ಇನ್ನೊಂದು ವಾರ ಉಳಿಸಿಕೊಳ್ಳಬಹುದು ಅಷ್ಟೆ. ಇದಕ್ಕೆ ಕಾರಣ ಮತ್ತು ಪರಿಹಾರ ಏನು ಎನ್ನುವುದು ಗಾಂಧಿನಗರಕ್ಕೇ ಗೊತ್ತು. ಆದರೆ, ಇತ್ತೀಚೆಗೆ ಬಿಡುಗಡೆಯಾದ ತಮ್ಮ ಜಟ್ಟ ಚಿತ್ರ ಎಲ್ಲ ಕಡೆ ಎತ್ತಂಗಡಿ ಆಗುತ್ತಿದೆ ಎಂದು ನಿರ್ದೇಶಕ ಗಿರಿರಾಜ್ ನೋವಿನಿಂದ ಹೇಳಿಕೊಂಡಾಗ ಜನ ಮೆಚ್ಚೋ ಸಿನಿಮಾ ಮಾಡಬೇಕೋ ಅಥವಾ ವಿತರಕರು, ಚಿತ್ರಮಂದಿರಗಳ  ಮಾಲೀಕರನ್ನು ಕೇಳಿ ಸಿನಿಮಾ ಮಾಡಬೇಕಾ ಅನ್ನೋ ಪ್ರಶ್ನೆ ಸಿನಿಮಾ ಪ್ರೇಮಿಗಳನ್ನು ಕಾಡಿದ್ದು ಮಾತ್ರ ನಿಜ.

ಡಬ್ಕುಡಬಲ್ ತುದಾಂಡಲ್...
-ದುರದೃಷ್ಟದ ಪರಮಾವಧಿ
ಆ್ಯಂಬುಲೆನ್ಸ್‌ನಿಂದಲೇ ಆ್ಯಕ್ಸಿಡೆಂಟ್ ಆಗೋದು

* ದೇವರಿಗೂ ಸಚಿನ್ ತೆಂಡೂಲ್ಕರ್‌ಗೂ ಏನು ವ್ಯತ್ಯಾಸ?
ದೇವರನ್ನ ಯಾರೂ ಸಚಿನ್ ತೆಂಡೂಲ್ಕರ್ ಅಂತ ಕರೆಯೊಲ್ಲ.
ಹಂಗಾಗಿ ದೇವರನ್ನ ಯಾರೂ ರಿಟೈರ್ ಆಗು ಅಂತ ಒತ್ತಾಯ ಮಾಡಲ್ಲ.

ಪ್ರೀತಿ ಗೀತಿ, ಊಟ ಗೀಟ ಎನ್ನುವ ಪ್ರಯೋಗಗಳಲ್ಲಿ ಎರಡನೆ ಪದ ಉಡಾಫೆಯದು ಎನಿಸಬಹುದು. ಆದರೆ ಅದು ಕಾಂಪ್ಲಿಮೆಂಟ್ ಆಗುವ ಕೇಸ್ ಅಂದ್ರೆ - ಟೆನ್ನಿಸ್ ಕೃಷ್ಣ, 'ಗಿನ್ನಿಸ್‌' ಕೃಷ್ಣ ಅಂದಾಗ..

*ಸಿನಿಮಾರಂಗದಲ್ಲಿ ಪೂನಂ ಪಾಂಡೆ ಆಫರ್: ರೀ, ನಿಮ್ಮ ಸಿನಿಮಾ ನೂರು ದಿನ ಓಡಿದರೆ ನಾನು ಬಟ್ಟೆ ಬಿಚ್ಚಿ ಬೆತ್ತಲಾಗ್ತೀನಿ.
-ನಿರ್ಮಾಪಕ: ಅಯ್ಯೋ, ನೀವು ಮೊದಲು ಬಟ್ಟೆ ಬಿಚ್ಚಿದ್ರೆನೇ ನಮ್ ಸಿನಿಮಾ ನೂರು ದಿನ ಓಡೋದು.

*ಕನ್ನಡದಲ್ಲಿ ಬಂದ ಜನಪ್ರಿಯ 'ಪ್ರಯೋಗಾ'ತ್ಮಕ ಚಿತ್ರ ಯಾವುದು?
ನೀರಿನ ಕೆಮಿಕಲ್ ನೇಮ್ ಇಟ್ಟುಕೊಂಡ 'ಎಚ್‌ಟುಓ'.


- ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.