ಜೈಲ್ನಾಗೆ ಪಾರ್ಟಿ ಆಪೀಸು ವೋಪನ್ ಮಾಡ್ತಾರಂತೆ
'ಏನ್ಲಾ ಜೈಲು-ಗೀಲು ಅಂತಾಯಿದ್ದೀಯ. ಜೈಲು ಅಂತಂದ್ರೆ ಅಷ್ಟು ಕಮ್ಮಿ ಆಗೋಗದ ನಿಂಗೆ...
'ಏನ್ಲಾ ಜೈಲು-ಗೀಲು ಅಂತಾಯಿದ್ದೀಯ. ಜೈಲು ಅಂತಂದ್ರೆ ಅಷ್ಟು ಕಮ್ಮಿ ಆಗೋಗದ ನಿಂಗೆ. ಅಲ್ಲಲೇ ಎಂತೆಂಥ ಲೀಡ್ರುಸುಗೆ ಜಾಗ ಕೊಟ್ಟದೆ ಜೈಲು. ಮೇವು ತಿಂದಿರೋ ಲಾಲುನಿಂದ ಮಣ್ಣು ತಿಂದಿರೋ ರೆಡ್ಡಿವರ್ಗೂ ಅಲ್ಲೇ ಅವ್ರೆ ತಿಳೀತೇನ್ಲಾ ಬಡ್ಡೆತ್ತದೆ' ಅಂದ ಮೈಲಾರಿ.
'ಲೇ ಅಮಾಸೆ, ಮೈಸೂರು ದಸ್ರಾ ನೋಡಕ್ಕೆ ವೋಗಾವೇನ್ಲಾ?' ಅಂತೇಳಿ ಮೈಲಾರಿ ಕೇಳ್ದ. 'ಇಲ್ಲಪ್ಪ ಆ ಪಾಟಿ ಜನ ಇರ್ತರೆ. ವೋಗಿ ಆ ಜನ್ರು ತಲೆ ನೋಡ್ಕಂಡು ಬರ್ಬೇಕಾಯ್ತದೆ ಅಷ್ಟೆ. ನಾನು ಬರಾಕಿಲ್ಲ ನೀನು ವೋಯ್ತಾಯಿದ್ದೀಯ ?' ಅಂತ ಅಮಾಸೆ ಕೇಳ್ದ.
'ವೂ ಕಣ್ಲಾ, ನನ್ ದರ್ಬಾರ್ನಾಗೆ ಮೈಸೂರು ದಸ್ರಾ ಹೆಂಗೆ ನಡೀತದೆ ಅಂತ ನೋಡೀವಂತೆ ಬಾರ್ಲಾ ಅಂತ ಸಿದ್ರಾಮಣ್ಣ ಕರ್ದವ್ರೆ. ವೋಗಿಲ್ಲ ಅಂತಂದ್ರೆ ಮಾತು ಇದ್ದೋಯ್ತದೆ. ತಿರ್ಗಿ ಯಾವಾಗ್ಲಾದ್ರೂ ಸಿದ್ರಾಮಣ್ಣ ಸಿಕ್ಕುದ್ರೆ ಯಾಕ್ಲಾ ಬರ್ಲಿಲ್ಲ ಅಂತೇಳಿ ಬ್ಯಾಸ್ರ ಮಾಡ್ಕಂಬುಡ್ತರೆ ಅದುಕ್ಕೆ ವೋಯ್ತಾಯಿದ್ದೀನಿ. ಬರಂಗಿದ್ರೆ ನೋಡ್ಲಾ' ಅಂದ ಮೈಲಾರಿ.
'ನೀನು ಮೈಸೂರು ಮಹಾರಾಜ್ರು ಮೊಮ್ಮಗು ನೋಡು. ನೀನು ವೋಗಿಲ್ಲ ಅಂತಂದ್ರೆ ಸಿದ್ರಾಮಣ್ಣ ಬ್ಯಾಸ್ರ ಮಾಡ್ಕಂಬುಡ್ತರೆ ಅಲ್ವಾ ? ನೀನೇನರ ವೋದ್ರೆ ನಿನ್ ಮುಸುಡಿ ನೋಡಿ ಗೇಟಿಂದ ವೊಳಿಕ್ಕೂ ಬುಡಾಕಿಲ್ಲ ಅಂತೇಳ್ದ ಅಮಾಸೆ. ಏನಾಗದೆ ಕಣ್ಲಾ ನನ್ ಮುಸುಡಿಗೆ ಏನಾಗದೆ ಅಂತೀನಿ ಅಂದ ಮೈಲಾರಿ. ಈವಾಗ್ತಾನೆ ಜೈಲಿಂದ ಬಂದಿರಗಂದೆ. ವೋಗಿ ಕನ್ನಡಿ ನೋಡ್ಕ' ಅಂತಂದ ಆಮಾಸೆ.
'ಏನ್ಲಾ ಜೈಲು-ಗೀಲು ಅಂತಾಯಿದ್ದೀಯ. ಜೈಲು ಅಂತಂದ್ರೆ ಅಷ್ಟು ಕಮ್ಮಿ ಆಗೋಗದ ನಿಂಗೆ. ಅಲ್ಲಲೇ ಎಂತೆಂಥ ಲೀಡ್ರುಸು ಜಾಗ ಕೊಟ್ಟದೆ ಜೈಲು. ಮೇವು ತಿಂದಿರೋ ಲಾಲುನಿಂದ ಮಣ್ಣು ತಿಂದಿರೋ ರೆಡ್ಡಿವರ್ಗೂ ಅಲ್ಲೇ ಅವ್ರೆ ತಿಳೀತೇನ್ಲಾ ಬಡ್ಡೆತ್ತದೆ' ಅಂದ ಮೈಲಾರಿ. 'ಅಲ್ಲಲೇ ಮೈಲಾರಿ ಈ ಲೀಡ್ರುಸು ಹಿಂಗೆ ಲೆಫ್ಟು-ರೈಟು ಅಂತ ಜೈಲ್ಗೆ ವೋಯ್ತಾಯಿದ್ರೆ ಪಾರ್ಟಿ ನಡ್ಸೋರು ಯಾರು. ? ಪಾಪ, ಜನುಗ್ಳು ಲೀಡ್ರುಸುನ ಭೇಟಿಯಾಗಾದು ಹೆಂಗೆ ಅಂತೀನಿ' ಅಂದ ಅಮಾಸೆ. 'ಅದುಕ್ಕೆ ಈವಾಗ ಏನು ಮಾಡಾಣ ಅಂತೀಯ ?' ಅಂದ ಮೈಲಾರಿ. 'ಏನಿಲ್ಲ, ವೂರ್ನಾಗೆ ಎಲ್ಲ ಪಾರ್ಟಿಗೂ ವೊಂದೊಂದು ಅಪೀಸು ಅಂತ ಇರ್ತದೆ. ಹಂಗೇಯ ಜೈಲ್ನಾಗೂ ವೊಂದೊಂದು ಪಾರ್ಟಿನೋರ್ಗೆ ವೊಂದೊಂದು ಆಪೀಸು ಮಾಡ್ಕೋಟ್ಟುಬುಟ್ರೆ ಸಂದಾಕಿ ಇರ್ತದೆ. ಕಾರ್ಯಕರ್ತರು, ಬ್ಯಾರೆ ಮುಖಂಡ್ರು ಆವಾಗಾವಾಗ ವೋಗಿ ಈಟಿಂಗು, ಮೀಟಿಂಗು ಮಾಡ್ಕಂಡು ಬತ್ತಾಯಿರ್ಬೋದು. ಏನಂತೀಯ ?' ಅಂದ ಆಮಾಸೆ. 'ನೀನು ಯೋಳಾದು ಸಂದಾಕೇ ಐತೆ. ಪಾಪ ಆ ಲೀಡ್ರುಸೂವೆ ನಮ್ ಪಕ್ಸ ಹೆಂಗದೋ ಏನೋ ಅಂತ ಪೀಲಿಂಗು ಮಾಡ್ಕತಾಯಿರ್ತರೆ. ಈ ಸ್ಕೀಮು ಜಾರಿಗೆ ತಕ್ಕಂಡು ಬನ್ನಿ ಅಂತೇಳಿ ನಾವೇ ಸರ್ಕಾರುಕ್ಕೆ ವೊಂದು ಪತ್ರ ಬರ್ದಾಕವ' ಅಂತೇಳ್ದ ಮೈಲಾರಿ.
'ವೋಗ್ಲಿ ಬುಟ್ಟಾಕ್ಲಾ. ಅಲ್ಲಲೇ ಈ ಕೈ ಪಕ್ಸುದೋರ್ಗೆ ಏನಾಗದೆ. ಸರ್ಕಾರ ಈಟುದ್ದು ಈಟಗ್ಲ ಕೆಲ್ಸ ಮಾಡ್ತಾ ಐತೆ ಅಂತ ಸಿದ್ರಾಮಣ್ಣ ಯೋಳ್ತಾವ್ರೆ. ಪಕ್ಸದ ಪ್ರೆಸ್ಡೆಂಟ್ರು ನೋಡುದ್ರೆ ಸರ್ಕಾರ ಮಲಿಕ್ಕಂಬುಟ್ಟದೆ ಅಂತ ವೋದ್ಕಡೆ, ಬಂದ್ಕಡೆ ಚುಚ್ಚುತಾವ್ರೆ. ಸರ್ಕಾರ್ದಾಗೆ ತಾಳಮೇಳ ತಪ್ಪೋಗದಲ್ವಾ ?' ಅಂತೇಳಿ ಆಮಾಸೆ ಕೇಳ್ದ. 'ಈ ಕೈ ಪಕ್ಸುದಾಗೆ ಕೆಮ್ಮಕ್ಕೂ ಹೈಕಮಾಂಡ್ ಪರ್ಮಿಸನ್ನು ತಕ್ಕಬೇಕು. ಸಿದ್ರಾಮಣ್ಣ ವೊರಿಜಿನಲ್ ಕಾಂಗ್ರೆಸ್ಸಾ ? ಅಲ್ಲ, ಜನ್ತಾದಿಂದ ಬಂದೋರು. ಇನ್ನಾ ಅದೇ ಗುಂಗ್ನಾಗೆ ಇದ್ದಂಗವ್ರೆ. ಅಯಪ್ಪುಂಗೆ ವೊಂದೊಂದ್ಕಿತ ನಾನು ಕೈ ಪಕ್ಸದವ ಅನ್ನೋದೇ ಮರ್ತೋಯ್ತದೆ'.
'ಸುತ್ತಮುತ್ತ ಕೈ ಪಕ್ಸುದೋರು ಇದ್ರೆ ಗೆಪ್ತಿಗೆ ಬತ್ತದೆ. ಏನ್ಮಾಡೋದೇಳು, ಜನ್ತಾ ಪಾರ್ಟಿಯಿಂದ ಬಂದೋರೆ ನವಗ್ರಹಗಳ ಥರ ಸುತ್ತ ಸುತ್ತುತಾಯಿರ್ತರೆ. ಕೈ ಪಕ್ಸುದೋರ್ಗೂ ಇದೇನು ನಮ್ ಸರ್ಕಾರ್ವೋ, ಜನ್ತಾ ಸರ್ಕಾರ್ವೋ ಅಂತ ಡೌಟು ಬಂದೋಯ್ತದೆ. ವೊಟ್ಟೆ ವುರಿ ತಡ್ಕಳಕ್ಕೆ ಆಗ್ದೆ ಬೆಂಕಿನಾ ಆವಾಗಾವಾಗ ಹಿಂಗೆ ಅಚ್ಗೆ ಹಾಕ್ತಾಯಿರ್ತರೆ. ಅಷ್ಟೇ ಬುಡ್ಲಾ. ಸ್ಯಾನೆ ತಲೆ ಕೆಡಿಸ್ಕಳಂಥದ್ದು ಇದ್ರಾಗೆ ಏನೇನೂ ಇಲ್ಲ' ಅಂತ ಮೈಲಾರಿ ಯೋಳ್ದ.
'ಅದ್ರೂವೆ ನಮ್ ಇಬ್ರಾಯಿಮ್ಮು ಇತ್ತಿತ್ಲಾಗೆ ಕಾಣುಸ್ತಾಯಿಲ್ಲ ನೋಡ್ಲಾ ಅಂದ ಅಮಾಸೆ. ಅವಯ್ಯನ ಕೋಟಾ ಮುಗ್ದೋಗದೆ. ಅಶೆಂಬ್ಲಿ ಎಲೆಕ್ಸನ್ಗೆ ಬ್ಯಾಡ ಬ್ಯಾಡ ಅಂದ್ರೂ ಆವಯ್ಯ ನಿಂತ್ಕಂತು. ಭದ್ರಾವತಿ ಜನ್ರು ತಲೆಗೆ ಥೈಲ ತಿಕ್ಕಕ್ಕೆ ವೋಯ್ತು. ಜನ ವುಸಾರಾಗಿ ಹಣೆಗೆ ನಾಮ ತಿಕ್ಬುಟ್ಟು ಕಳುಸ್ಬುಟ್ರು. ಇನ್ನೇನರ ಗೆದ್ದೇಬುಟ್ಟಿದ್ರೆ ಕಥೆ ಮುಗ್ದು ಕಾದಂಬರಿ ಆಗ್ತಾಯಿತ್ತು' ಅಂದ ಮೈಲಾರಿ.
'ವೊಟ್ನಾಗೆ ಇದು ಸಮ್ಮಿಸ್ರ ಸರ್ಕಾರ ಇದ್ದಂಗದೆ. ಪಾಪ, ಕೈ ಪಕ್ಸದ ಪ್ರೆಸ್ಡೆಂಟ್ರುನ್ನ ನೋಡುದ್ರೆ ಕಳ್ಳು ಕಿತ್ಕಂಡು ಬತ್ತದೆ' ಅಂದ ಆಮಾಸೆ. 'ಕಿತ್ಕಂಡು ಬಂದ್ರೆ ಕೊಳ್ಳಾಗೆ ನೇತಾಕ್ಕಂಡು ವೋಡಾಡು' ಅಂತೇಳಿ ಮೈಲಾರಿ ಮೈಸೂರು ಬಸ್ ಹತ್ಕಳಕ್ಕೆ ವೊಂಟ.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

