ನಗರದ ಮತದಾರರನ್ನು ಮೂರ್ಖರನ್ನಾಗಿಸುವುದು ಸುಲಭವಲ್ಲ!
ಕೊನೆಗೂ ಗುಂಡಿಗಳಿಂದ ಆವೃತವಾಗಿರುವ ಬೆಂಗಳೂರಿನ ದುರಸ್ಥಿಗೆ 908 ಕೋಟಿ ರುಪಾಯಿಗಳ ಪ್ಯಾಕೇಜ್ ಸಿಕ್ಕಿದೆ!
ಕೊನೆಗೂ ಗುಂಡಿಗಳಿಂದ ಆವೃತವಾಗಿರುವ ಬೆಂಗಳೂರಿನ ದುರಸ್ಥಿಗೆ 908 ಕೋಟಿ ರುಪಾಯಿಗಳ ಪ್ಯಾಕೇಜ್ ಸಿಕ್ಕಿದೆ! ಕಾಗದಗಳಲ್ಲಂತೂ ಈ ಯೋಜನೆ ಅದ್ಭುತವಾಗಿ ಕಾಣುತ್ತಿದೆ. ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಆಶ್ವಾಸನೆಗಳೇನಿರಬಹುದೋ ಯೋಚಿಸಿ? 400 ಕಿ.ಮಿ. ವಿಸ್ತರಣೆಯಿರುವ 230 ಪ್ರಮುಖ ರಸ್ತೆಗಳನ್ನು ಸರಿಪಡಿಸಲು 500 ಕೋಟಿ ರುಪಾಯಿ, ಪ್ರಮುಖ ಪ್ರದೇಶಗಳ ರಸ್ತೆಗಳನ್ನು ಚೊಕ್ಕಟಗೊಳಿಸಲು 130 ಕೋಟಿ ರುಪಾಯಿ ಮತ್ತು ಟೆಂಡರ್‌ಶ್ಯೂರ್‌ನ ಅಡಿಯಲ್ಲಿ 5 ಸಿಗ್ನಲ್ ಮುಕ್ತ ಕಾರಿಡಾರ್‌ಗಳ ರಚನೆಗೆ(ವಿಧಾನಸೌಧ ಸುತ್ತಮುತ್ತಲಿನ ಪ್ರಮುಖ ರಸ್ತೆಗಳು) 613 ಕೋಟಿ ರುಪಾಯಿ, ಅಕ್ರಮ ಕಟ್ಟಡಗಳು ಮತ್ತು ಉಲ್ಲಂಘನೆಗಳ ಪ್ರತಿಯಾಗಿ ಅಕ್ರಮ-ಸಕ್ರಮ ಯೋಜನೆ ಮತ್ತು ಇದರಿಂದ ಬಂದ ದಂಡವನ್ನು ಬೆಂಗಳೂರಿನ ಅಭಿವೃದ್ಧಿಗೆ ಬಳಸುವುದು.
ಆದರೆ ಬೆಂಗಳೂರಿಗರು ಇದನ್ನೆಲ್ಲ ಅಷ್ಟು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಏಕೆಂದರೆ ಹಿಂದೆಯೂ ಬಿಬಿಎಂಪಿ ಮತ್ತು ಸರ್ಕಾರದ ಬಜೆಟ್‌ಗಳಲ್ಲಿ ಬೆಂಗಳೂರಿಗಾಗಿ ಕೋಟ್ಯಂತರ ರುಪಾಯಿಗಳನ್ನು ಮೀಸಲಿಡುವ ಮಾತನಾಡಲಾಗಿತ್ತು. ಆದರೆ ಅವೆಲ್ಲ ಕೇವಲ ಹಾಳೆಗಳ ಮೇಲಷ್ಟೇ ಉಳಿದಿದ್ದವು. ಈ ಅಭಿವೃದ್ಧಿ ಪ್ಯಾಕೇಜನ್ನು ಘೋಷಿಸುವುದಕ್ಕಿಂತ ಎರಡು ತಿಂಗಳ ಹಿಂದೆ, ಬಿಬಿಎಂಪಿಯ ಬಜೆಟ್ ಅನ್ನು ಕಳಪೆ ಆದಾಯ ಸಂಗ್ರಹಣೆಗಾಗಿ ಸುಮಾರು 900 ಕೋಟಿ ರುಪಾಯಿಗಳಷ್ಟು ಮೊಟಕುಗೊಳಿಸಿತ್ತು ಸರ್ಕಾರ. ನಗರದ ಮೂಲಸೌಕರ್ಯಾಭಿವೃದ್ಧಿಗೆ ಹಣ ಮೀಸಲಿಡುವುದನ್ನು ಜನತೆ ಸ್ವಾಗತಿಸುತ್ತಾರಾದರೂ, ಅಭಿವೃದ್ಧಿಗೆ ಸರಿಯಾದ ಗಡುವು ಇಲ್ಲದಿರುವುದರಿಂದ ಅಂಥ ಘೋಷಣೆಗಳನ್ನು ಅವರು ಗಂಭೀರವಾಗಿ ನೋಡುವುದಿಲ್ಲ.
ಸರ್ಕಾರ ನುಡಿದಂತೆ ನಡೆದು ತೋರಿಸಬೇಕು. ಸುಮ್ಮನೆ ಮಾತನಾಡುವುದರಿಂದ ಏನೂ ಉಪಯೋಗವಿಲ್ಲ. ಜನರು ಬುದ್ಧಿವಂತರು. ಸರ್ಕಾರದ ಈ ಆಟವನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇದೆಲ್ಲ 2014ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಾಡುತ್ತಿರುವ ಗಿಮಿಕ್ ಅಷ್ಟೇ ಎಂದು ಕೆಲವರು ಮಾತನಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರವೇನಾದರೂ ನಿಜವಾಗಲೂ ಬದಲಾವಣೆ ಬಯಸುತ್ತಿದ್ದರೆ ಅದು ಪ್ರತಿಯೊಂದು ಯೋಜನೆಗಳಿಗೂ ಸಮಯ ನಿಗದಿ ಪಡಿಸಬೇಕು, ಕಾಂಟ್ರಾಕ್ಟರ್‌ಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ಮಾಡಬೇಕು, ಹಣ ಬಿಡುಗಡೆ ಮಾಡಬೇಕು, ಕಾಮಗಾರಿಗಳ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸುತ್ತಿರಬೇಕು, ಭ್ರಷ್ಟ ಹಾಗೂ ನಿರ್ಲಜ್ಜ ಇಂಜಿನಿಯರ್‌ಗಳನ್ನು ಕಿತ್ತೆಸೆಯಬೇಕು ಮತ್ತು ಎಲ್ಲದಕ್ಕಿಂತಲೂ ಮುಖ್ಯವಾಗಿ ಪರಿಣತರು ಮತ್ತು ನಿವಾಸಿ ಕಲ್ಯಾಣ ಸಂಘಗಳ ಸಲಹೆಯನ್ನು ಅದು ಪಡೆಯಬೇಕು. ನಾಗರಿಕರ ಸಹಭಾಗಿತ್ವ ಉತ್ತಮ ಆಡಳಿತಕ್ಕೆ ಕೀಲಿ ಕೈ ಎಂಬುದನ್ನು ಮರೆಯಬಾರದು.
ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಎಷ್ಟೋ ಬಾರಿ ಬೆಂಗಳೂರಿನ ಸಚಿವರಿಗೆ, ಬಿಬಿಎಂಪಿ ಕಮೀಷನರರಿಗೆ ಮತ್ತು ನಗರದ ಮೇಯರ್‌ಗೆ ಗಡುವು ನೀಡಿದ್ದರು. ಆದರೆ ಇದನ್ನೆಲ್ಲ ಬಿಬಿಎಂಪಿಯ ಇಂಜಿನಿಯರುಗಳು ಕಡೆಗಣಿಸಿದರು. ಕಡೆಗೆ ರಸ್ತೆಗಳ ರಿಪೇರಿಗೂ ಅವರು ಮುಂದಾಗಲಿಲ್ಲ. ಆದರೆ ರಾಷ್ಟಪತಿಗಳು ನಗರಕ್ಕೆ ಭೇಟಿ ಕೊಟ್ಟಾಗ ಮಾತ್ರ ರಾತ್ರೋರಾತ್ರಿ ರಸ್ತೆ ರಿಪೇರಿ ಮಾಡಿಬಿಟ್ಟರು. ರಿಪೇರಿ ಅನ್ನುವುದಕ್ಕಿಂತ ತೇಪೆ ಹಚ್ಚಿದರು ಎನ್ನುವುದೊಳಿತು. ಅದೂ ಕೂಡ ವಿಮಾನನಿಲ್ದಾಣದಿಂದ ರಾಜಭವನದವರೆಗಿನ ರಸ್ತೆಗೆ ಮಾತ್ರ. ಆದರೆ ಈಗ ಆ ಮುಚ್ಚಿದ ಗುಂಡಿಗಳೂ ಮತ್ತೆ ಬಾಯಿ ತೆರೆದುಕೊಳ್ಳುತ್ತಿವೆ.
ದುರ್ದೈವವೆಂದರೆ, ಬೆಂಗಳೂರನ್ನು ಬೈಯುವುದರಿಂದ ಗ್ರಾಮೀಣ ಪ್ರದೇಶದ ಮತಗಳನ್ನು ಸೆಳೆಯಬಹುದು ಎನ್ನುವ ಭ್ರಮೆ ರಾಜಕಾರಣಿಗಳಲ್ಲಿದೆ. ಆದರೆ ಗ್ರಾಮೀಣ ಪ್ರದೇಶಗಳ ಜನಕ್ಕೆ ಇವರ ಮಾತು ಬೇಕಿಲ್ಲ. ನಗರ ಪ್ರದೇಶದ ಜನರಂತೆಯೇ ಅವರಿಗೇನಿದ್ದರೂ ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳು ಬೇಕು. ಮತದಾರರನ್ನು ಕಡೆಗಣಿಸಿದರೆ ಏನಾಗುತ್ತದೆ ಎನ್ನುವುದನ್ನು ನಾವೆಲ್ಲ ಹಿಂದೆ ನೋಡಿದ್ದೇವೆ. ಜೆಡಿಎಸ್ ಮತ್ತು ಬಿಜೆಪಿಯನ್ನು ಕರ್ನಾಟಕದ ಮತದಾರ ಕೆಳಕ್ಕಿಳಿಸಿದ್ದೂ ಇದೇ ಕಾರಣಕ್ಕೇ ಅಲ್ಲವೇ? ಇನ್ನು ಕಾಂಗ್ರೆಸ್ ಅನ್ನು ಹೆಚ್ಚು ವರ್ಷಗಳ ಕಾಲ ಮೂಲೆ ಗುಂಪು ಮಾಡಿದ್ದೂ ಇದೇ ಕಾರಣಕ್ಕೇ!
ರಾಜಕೀಯ ಪಕ್ಷಗಳ ಹಣೆಬರಹ ಗ್ರಾಮೀಣ ಭಾಗದ ಮತದಾರ ಬರೆಯುತ್ತಾನೆ, ನಗರ ಭಾಗದ ಸುಶಿಕ್ಷಿತ ಜನರೇನಿದ್ದರೂ ಮನೆಯಲ್ಲಿ ಕುಳಿತು ರಾಜಕೀಯದ ಬಗ್ಗೆ ವಟಗುಟ್ಟುವವರು ಎನ್ನುವ ಭಾವನೆ ಇತ್ತು. ಆದರೆ ಕಾಲ ಬದಲಾಗಿದೆ. 1950ರಲ್ಲಿ 70 ರಷ್ಟಿದ್ದ ನಗರದ ಲೋಕಸಭಾ ಕ್ಷೇತ್ರಗಳು ಈಗ 200ಕ್ಕೆ ಬಂದು ತಲುಪಿವೆ. ಚಿಕ್ಕ ಚಿಕ್ಕ ನಗರಗಳು ಎಲ್ಲೆಡೆಯೂ ಹುಟ್ಟಿಕೊಳ್ಳುತ್ತಿವೆ. ಮೆಟ್ರೋ ನಗರಗಳಂತೆ ಅವೂ ಕೂಡ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿವೆ, ಅಭಿವೃದ್ಧಿಗಾಗಿ ಹಪಾಹಪಿಸುತ್ತಿವೆ.
ಕೊನೆಯ ಗುಟುಕು: ಅಕ್ಟೋಬರ್ 12 ರಿಂದ ಸರ್ಕಾರಿ ರಜೆಗಳ ಸುರಿಮಳೆಯೇ ಆಗುತ್ತಿದೆ. ಬಹುತೇಕ ನೌಕರರು ಅ. 15 ಮತ್ತು ಅ. 20 ರಂದು ಲೀವ್ ಹಾಕಿದ್ದಾರೆ. ಅಂದರೆ ಅವೆರಡೇ ದಿನಗಳಂದು ಸರ್ಕಾರಿ ರಜೆಯಿಲ್ಲ. ಈಗ ಮುಂದಿನ ತಿಂಗಳು 1 ನೇ ತಾರೀಖಿನಿಂದ 4 ರವರೆಗೆ ಮತ್ತೆ ರಜೆಗಳು! ಸರ್ಕಾರ ಇಷ್ಟೊಂದು ದಿನ ರಜೆ ಘೋಷಿಸಿದರೆ ಹೇಗೆ? ಕೇಳುವವರ್ಯಾರೂ ಇಲ್ಲವೇ?
(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

