ದನಗ್ಳು ಮಂತ್ರಿಗೆ ಸಿಯೆಮ್ಮು ಟೋಪಿ ಹಾಕ್ಬುಟ್ರಂತೆ
ಟೋಪಿ ಬೇಕೆ ಟೋಪಿ, ಎಂಥ ಟೋಪಿ, ಎಷ್ಟು ರುಪಾಯಿ... ಅಂತೇಳಿ ಕೈ ಪಕ್ಸದ...
ಟೋಪಿ ಬೇಕೆ ಟೋಪಿ, ಎಂಥ ಟೋಪಿ, ಎಷ್ಟು ರುಪಾಯಿ... ಅಂತೇಳಿ ಕೈ ಪಕ್ಸದ ಆಪೀಸು ಮುಂದ್ಲಾಗಡೆ ವರ್ಕರ್ಸು ಟೋಪಿ ರಾಶಿ ರಾಶಿ ಹಾಕ್ಕಂಡು ಕೋರಸ್ನಾಗೆ ಹಾಡ್ಕತಾಯಿದ್ರು.
ದನುಗ್ಳು ಮಂತ್ರಿ ಜಯಚಂದ್ರಪ್ನೋರು ಮುಂದುಕ್ಕೋಗಿ ಹಂಗೇ ಹಿಂದುಕ್ಕೆ ಬಂದು, 'ಇಲ್ಲಿ ಹ್ಯಾಂಡ್ ಪಕ್ಸದ ಆಪೀಸು ಎಲ್ಲದೆ ?' ಅಂತ ಕೇಳುದ್ರು.
ವರ್ಕರ್ಸುಗೆ ಸಿಕ್ಕಾಪಟ್ಟೆ ಕ್ವಾಪ ಬಂದೋಯ್ತು. 'ನೀವು ಮಂತ್ರಿ ಆಗಿರಾದು ಕಾಂಗ್ರೆಸ್ ಸರ್ಕಾರುಕ್ಕೆ ತಾನೆ ? ಅಲ್ಲ ಸಿವನೇ, ಕೈ ಪಕ್ಸದ ಆಪೀಸು ಅಂತೇಳಿ ಮಾರುದ್ದ ಬೋಲ್ಡು ಹಾಕಿಲ್ವಾ ? ಕೆಲ್ಸುಕ್ಕೆ ಬರೋರ್ದು, ಬರ್ದೇಯಿರೋರ್ದು ಪಟಗಳು ನೇತಾಕಿಲ್ವಾ ? ಇಷ್ಟೆಲ್ಲಾ ಸೀನು ಮಡಿಕ್ಕಂಡು ಆಪೀಸು ಎಲ್ಲದೆ ಅಂತ ಕೇಳ್ತಾಯಿದ್ದೀರಲ್ಲ. ಈ ಇಸ್ಯ ಸೋನ್ಯ ಮೇಡಮ್ಮುಗಂಟ ವೋದ್ರೆ ಏನಾಯ್ತದೆ ಗೊತ್ತಾ ? ನಿಮ್ಮ ಮಂತ್ರಿ ಸೀಟ್ಗೆ ಕಾಲುಬಾಯಿ ಜರ ಬಂದೋಯ್ತದೆ ತಿಳೀತಾ ?' ಅಂದ್ರು ವರ್ಕರ್ಸು.
'ಲೇ ಸುಮ್ಕಿರಪ್ಪ, ಸಣ್ಣ ಮ್ಯಾಟ್ರನ್ನ ಡಿಲ್ಲಿ ಲೆವೆಲ್ಗೆ ಯಾಕೆ ತಕ್ಕಂಡೋತೀರಿ. ಏನೋ ರಾಶಿ ರಾಶಿ ಟೋಪಿ ಬಿದ್ದಿತ್ತಲ್ಲ. ಗಾಂಧಿ ಜಯಂತಿಗೆ ಟೋಪಿ ಮಾರೋರು ಆಂಗ್ಡಿ ಹಾಕ್ಕಂಡು ಕೂತವ್ರೆ. ಅವ್ರುಗೆ ಆಪೀಸ್ನ ಬಾಡ್ಗೆಗೆ ಬುಟ್ಟು ಕೊಟ್ಟವ್ರೆ ಅನ್ಕಂಬುಟ್ಟೆ. ಆದ್ಸರಿ, ಈ ಟೋಪಿ ಯಾಪಾರ ಇಲ್ಯಾಕೆ ?' ಅಂತ ಮಂತ್ರಿಗ್ಳು ಕೇಳುದ್ರು.
'ನಿಮ್ ತಲೆವೊಳ್ಗೆ ಸಿಕ್ಕಾಪಟ್ಟು ನುಸಿ ತುಂಬ್ಕಂಡಂಗದೆ. ಅದುನ್ನ ವಸಿ ಆಚ್ಗೆ ಹಾಕ್ಕಳಿ. ಅಲ್ಲ, ನಮ್ ಪ್ರೆಸ್ಡೆಂಟ್ರು ಏನಂತ ಯೋಳವ್ರೆ ಗೊತ್ತಾ ? ಈವಾಗ ಪವರ್ನಾಗೆ ಇರಾದು ಕೈ ಪಕ್ಸ. ಅದುಕ್ಕೆ ಎಲ್ಲಾರ್ಗೂ ಟೋಪಿ ಹಾಕಿ ಅಂದವ್ರೆ. ಅದುಕ್ಕೆ ಆಪೀಸ್ಗೆ ಬರೋರ್ಗೆ ಟೋಪಿ ಹಾಕಿ ಹಾಕಿ ಕಳುಸ್ತಾಯಿದ್ದೀವಿ. ನೀವು ಏನರ ಯೋಳಿ ಟೋಪಿ ಸೈಜು ಎಲ್ಲಾರ್ಗೂ ಅಜಸ್ಟು ಆಗೋಯ್ತದೆ' ಅಂದ್ರು ವರ್ಕರ್ಸು.
ಆಟೋತ್ಗೆ ಮೈಲಾರಿ ವೋಡೋಡಿ ಬಂದು ಮಂತ್ರಿಗ್ಳು ಮುಂದೆ ಬಿದ್ದೋದ. ಮಂತ್ರಿಗ್ಳು, 'ನನ್ ಕಾಲ್ಗೆ ಯಾಕಪ್ಪ ಬೀಳ್ತಿಯಾ ? ಎದ್ದೇಳು ವೊಳ್ಳೋದಾಗ್ಲಿ' ಅಂದ್ರು. 'ಬೇವಾರ್ಸಿಗಳು ಮಖಮುಚ್ಚ ಹಿಂದ್ಲಾಗಡೆಯಿಂದ ಯಾರೋ ತಳ್ಳಾಕುದ್ರು. ನಾನೆಲ್ಲಿ ಕಾಲ್ಗೆ ಬಿದ್ದೆ ಯೋಳಿ' ಅಂದ ಮೈಲಾರಿ.
'ವೋ ಹಂಗಾ ಇಸ್ಯ, ಅದೇನು ಎದ್ದುಬಿದ್ದು ಬಂದು ನನ್ನ ನೋಡಂಥದ್ದು ಏನಾಗದೆ. ಸಧ್ಯ ನೀನಾದ್ರೂವೆ ಬಂದ್ಯಲ್ಲ ವುಡಿಕ್ಕಂಡು. ಯೋಳು ಯೋಳು ನನ್ನಿಂದ ಏನಾಗ್ಬೇಕು ?' ಅಂದ್ರು ಮಂತ್ರಿಗ್ಳು.
'ಅಲ್ಲ ಸಾ, ನಿಮ್ ಲೆಗ್ಗು ವೊಂದ್ಕಿತ ಪರೀಕ್ಷೆ ಮಾಡಿಸ್ಕಳಿ. ಎಸ್ಸೆಂ ಕಿಸ್ನ ಸಾಹೇಬ್ರು ಸಿಯೆಮ್ಮು ಆಗಿದ್ದಾಗ ನೀವು ಹೊಲ,ಗದ್ದೆ, ತ್ವಾಟ ನೋಡ್ಕತಾಯಿದ್ರಿ ಅಲ್ವಾ ?' ಅಂತೇಳಿ ಮೈಲಾರಿ ಕೇಳ್ದ.
'ನೀನು ಯೋಳಾದು ನೋಡುದ್ರೆ ಯಾರ್ದೋ ಜಮೀನಾಗೆ ಕೆಲ್ಸ ಮಾಡ್ತಾಯಿದ್ದೆ ಅಂತ ಆಯ್ತದೆ. ನಾನು ಆವಾಗ ಕ್ರುಸಿ ಮಂತ್ರಿ ಆಗಿದ್ದೆ. ತೋಟಗಾರಿಕೆ ಸೈಡ್ನಾಗೆ ನೋಡ್ಕತಾಯಿದ್ದೆ. ಆಯ್ತು ಮುಂದುಕ್ಕೆ ಯೋಳು' ಅಂದ್ರು ಮಂತ್ರಿಗ್ಳು.
'ನೀವು ಮಂತ್ರಿ ಆದ್ರೆ ಯಾವ್ದಾರ ರ್ವಾಗ ತಗುಲ್ಕತದೆ ಯಾಕೆ. ಆವಾಗ ನುಸಿ ಪೀಡೆ ಬಂದೋಗಿತ್ತು. ಪಾಪ ರೈತ್ರು ತೆಂಗಿನಕಾಯಿ ಮರಗ್ಳು ಹಂಗೇ ಸುಟ್ಟೋಗಿದ್ವು. ಈವಾಗ ನಮ್ ದನುಗ್ಳುಗೆ ಕಾಲುಬಾಯಿ ಕಾಯ್ಲ ಬಂದದೆ. ಯಾಕಿಂಗೆ ?' ಅಂತೇಳಿ ಮೈಲಾರಿ ಕೇಳ್ದ.
'ಲೇ ಬಡ್ಡೆತ್ತದೆ, ನೀನು ಯೋಳಾದು ನೋಡುದ್ರೆ ನಾನೆ ಇರೋಬರೋ ಕಾಯ್ಲ ಕರ್ಕಂಡು ಬತ್ತೀನಿ ಅನ್ನೋ ಥರುಕ್ಕೆ ಯೋಳ್ತೀಯಲ್ಲ. ನ್ಯಾಯವಾ ?' ಅಂತ ಜಯಚಂದ್ರಪ್ನೋರು ಕೇಳುದ್ರು.
'ಅಲ್ಲ ಮಾತ್ಗೆ ಹಂಗಂದೆ. ಈವಾಗ ನಮ್ ಮನ್ಯಾಗಿರೋ ದನುಗ್ಳುಗೂ ಜರ ಬಂದದೆ ಸಿವಾ. ಯಾವ್ ಆಸ್ಪತ್ರೆಗೆ ಕರ್ಕಂಡು ವೋಗಾದು ?' ಅಂತೇಳಿ ಮೈಲಾರಿ ಕೇಳ್ದ.
'ವೋಗಪ್ಪ, ನೀನು ಏನೇನೋ ಕೇಳಿ ನನ್ ತಲೆ ಕೆಡುಸ್ಬೇಡ. ಎಸ್ಸೆಂ ಕಿಸ್ನ ಸಾಹೇಬ್ರು ಗೌರ್ಮೆಂಟ್ನಾಗೆ ನಾನು ಕ್ರುಸಿ ಮಂತ್ರಿ ಆಗಿದ್ದೆ. ಆವಾಗ್ಲೆ ಯೋಳಿಲ್ವಾ ಸೈಡ್ನಾಗೆ ತೋಟಗಾರ್ಕೆ ನೋಡ್ಕತಾಯಿದ್ದೆ. ಹಂಗಾದ್ರೂವೆ ನುಸಿ ರೋಗ ತಂದು ನನ್ ತಲೆಗೆ ಕಟ್ಟುದ್ರು. ಸಿದ್ರಾಮಣ್ಣೋರು ಸರ್ಕಾರ್ದಾಗೆ ನೀರಾವರಿ ನೋಡ್ಕಳಾವ ಅಂತಿದ್ದೆ. ದನುಗ್ಳುನ ತಂದು ಗಂಟಾಕುದ್ರು. ಬ್ಯಾಡ ಅಂದ್ರೂ ಸಿದ್ರಾಮಣ್ಣ ಕೇಳಿಲ್ಲ. ದನುಗ್ಳು ಅಂದ್ರೆ ಕಮ್ಮೀನಾ ? ದೇವ್ರು ಸಮಾನ. ಅವುನ್ನ ನೋಡ್ಕಂಡ್ರೆ ಎಲ್ಗೋ ವೊಂಟೋಯ್ತೀಯ ಅಂತೇಳಿ ಟೋಪಿ ಹಾಕ್ಬುಟ್ರು. ಈವಾಗ ನೋಡು ಕಾಲುಬಾಯಿ ಕಾಯ್ಲೆ ಬಂದೋಗದೆ. ಆಪೋಜಿಸನ್ನೋರು ಹಾಕ್ಕಂಡು ರುಬ್ತಾವ್ರೆ. ನಾನು ಏನು ಮಾಡ್ಲಿ ಯೋಳು' ಅಂತ ಪಾಪ ಮಂತ್ರಿಗ್ಳು ಸಿಕ್ಕಾಪಟ್ಟೆ ಪೀಲಿಂಗ್ನಾಗೆ ಕೇಳುದ್ರು. ಮೈಲಾರಿ ಕಣ್ಣೀರು ಹಾಕ್ಕಂಡು ವೋಬುಟ್ಟ.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

