ಕಾಡನ್ನೇ ಆಳಿದವರು ಕಾತಕರಿಗಳು, ಕೇಳುವವರಿಲ್ಲ ಅವರ ಗೋಳು
ಹಣ, ಅಂತಸ್ತು, ಆಸ್ತಿಪಾಸ್ತಿ ಎಂದು ಒದ್ದಾಡುವ ಜನರೇ ತುಂಬಿ ಹೋಗಿರುವ ಈ ಸಮಾಜದಲ್ಲಿ...

ಹಣ, ಅಂತಸ್ತು, ಆಸ್ತಿಪಾಸ್ತಿ ಎಂದು ಒದ್ದಾಡುವ ಜನರೇ ತುಂಬಿ ಹೋಗಿರುವ ಈ ಸಮಾಜದಲ್ಲಿ ಆ ಯಾವುದರ ಗೊಡುವೆಯೂ ಇಲ್ಲದೆ ಗುಡಿಸಲೆಂಬ ಅರಮನೆಯಲ್ಲಿ ಇದ್ದುಕೊಂಡು ಜೀವನ ನಡೆಸುತ್ತಾ, ಕಾಡುಮೇಡು ಅಲೆದು ಹೊಟ್ಟೆ ತಂಬಿಸಿಕೊಳ್ಳುತ್ತಾ, ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡು ನೆಮ್ಮದಿಯಿಂದ ಬದುಕು ನಡೆಸುತ್ತಿದೆ ಒಂದು ಸಮುದಾಯ.
ಅದುವೆ ಕಾತಕರಿ ಎಂಬ ಅಲೆಮಾರಿ ಸಮುದಾಯ. ಅಧುನಿಕ ಜಗತ್ತಿನ ಗೊಡುವೆಗೆ ಹೋಗದೆ ತಮ್ಮದೇ ಆದ ರೀತಿ ರಿವಾಜುಗಳನ್ನು ನಂಬಿಕೊಂಡು ಬದುಕು ನಡೆಸುತ್ತಿದೆ ಈ ಜನಾಂಗ. ಸರ್ಕಾರದ ಸಹಾಯ ಮತ್ತು ಸೌಲಭ್ಯಗಳ ನೆರಳೂ ಇವರ ಮೇಲೆ ಅಷ್ಟಾಗಿ ಬಿದ್ದಿಲ್ಲ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಕಾಡುಗಳ ಸಮೀಪದಲ್ಲಿ ನೆಲೆ ಊರಿರುವ ಕಾತಕರಿಗಳು ಮೂಲತ: ಅರಣ್ಯವಾಸಿಗಳು. ಅರಣ್ಯ ಕಾಯಿದೆ ಜಾರಿಗೆ ಬಂದ ಬಳಿಕ ಕಾಡಿನಿಂದ ಹೊರಗೆ ಬಂದು ನೆಲೆಸಿದ್ದಾರೆ. ತೀರಾ ಕಷ್ಟದಲ್ಲಿರುವ ಈ ಜನಾಂಗದ ಆಚಾರ ವಿಚಾರ, ಸಂಪ್ರದಾಯಗಳು ತೀರಾ ಭಿನ್ನವಾಗಿವೆ. ಊರಿನಲ್ಲಿದ್ದರೂ ಕಾಡಿನ ನಂಟು ಬಿಡಲು ಇವರ ಮನಸ್ಸು ಒಪ್ಪುತ್ತಿಲ್ಲ. ಬುಡಕಟ್ಟು ಸಮುದಾಯಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಡಾ. ಕೆ.ಎಂ. ಮೈತ್ರಿ ಅವರ ಸಹಕಾರದೊಂದಿಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಕಾತಕರಿ ಸಮುದಾಯದ ಬಗ್ಗೆ ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾತಕರಿ ಸಮುದಾಯದ ಜನರಿದ್ದಾರೆ. ಕಟ್ಟಿಗೆಯಲ್ಲಿ ಭಟ್ಟಿ ಇಳಿಸಿ ಕಾತಾ ತಯಾರು ಮಾಡುವುದು ಇವರ ಮೂಲ ಕಸುಬು. ಮಂಗ್ಯಾಮಾರಿ, ಮಾಕಡಮಾರಿ, ವಾಂಗರ್‌ಮಾರಿ, ಡೋಚ ಕಥೋಡಿ, ಡೋರ ಕಾಟಕರಿ, ಸೋನ್ ಕಥೋಡಿ, ಸೋನ್ ಕಾಟಕರಿ ಎಂಬ ಹೆಸರುಗಳಿಂದಲೂ ಇವರನ್ನು ಕರೆಯುವುದುಂಟು ಎಂದು ಮೈತ್ರಿ ಅವರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ.
ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಕಥೋಡಿ, ಕಟಕರಿ ಎಂಬ ಹೆಸರಲ್ಲಿ ಇವರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿತ್ತು. 1950ರ ಬಳಿಕ ಇವರು ಪರಿಶಿಷ್ಟರ ಪಟ್ಟಿಗೆ ಸೇರ್ಪಡೆಯಾದರು. ಈ ಸಮುದಾಯದ ಜನ ಸಂಖ್ಯೆ 500ರ ಗಡಿ ದಾಟುವುದಿಲ್ಲ. 1970ರ ದಶಕದಲ್ಲಿ ಇದ್ದವರು 244 ಮಂದಿ. ಮಹಾರಾಷ್ಟ್ರದಲ್ಲಿ ಮಾತ್ರ 1.74 ಲಕ್ಷಕ್ಕಿಂತ ಹೆಚ್ಚಿನ ಜನರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ರಾಜಸ್ಥಾನ, ಗುಜರಾತ್, ಕರ್ನಾಟಕ, ಗೋವಾ ಮತ್ತು ಹವೇಲಿ-ದಾದರ್‌ನಲ್ಲಿ ಕಾತಕರಿ ಸಮುದಾಯದ ಕುಟುಂಬಗಳಿವೆ ಎಂಬುದಕ್ಕೆ ದಾಖಲೆಗಳಿವೆ.
ಜೀವನ ಅತ್ಯಂತ ಸರಳ: ಅಧುನಿಕ ಜಗತ್ತಿನ ನಂಟು ಇಲ್ಲದ ಕಾರಣ ಕಾತಕರಿಗಳ ಜೀವನ ಅತ್ಯಂತ ಸರಳವಾದದ್ದು. ಇವರಲ್ಲಿ ಪ್ರಮುಖ ಪಾತ್ರ ವಹಿಸುವುದು ಅಡ್ಡ ಹೆಸರುಗಳು. ಪ್ರತಿಯೊಬ್ಬರಿಗೂ ಒಂದೊಂದು ಅಡ್ಡ ಹೆಸರು ಇರುತ್ತದೆ. ಬಾಹಿರಿ, ಚವಾಣ, ಧಾರಕ, ನಾಯಕವಾಡ, ಜಾಧವ, ಮೋಣ, ವಾಲೇಕರ, ಪಟಕ, ಸೌರ, ಸಾವದ ಎಂಬ ಅಡ್ಡ ಹೆಸರುಗಳಿವೆ. ಇವರಲ್ಲಿ ನಾನಾ ಬೆಡಗುಗಳಿವೆ.
ಈ ಹಿಂದೆ ಕಾಡಿನಲ್ಲಿದ್ದುಕೊಂಡು ಜೀವನ ಸಾಗಿಸುತ್ತಿದ್ದಾಗ ಗೆಡ್ಡೆ, ಗೆಣಸುಗಳೇ ಇವರ ಪಾಲಿಗೆ ಆಹಾರ ಆಗಿತ್ತು. ಭೂಮಿ ಅಗೆದು ಗೆಡ್ಡೆ, ಗೆಣಸು ತೆಗೆದು ಅದನ್ನು ಬೇಯಿಸಿ ತಿನ್ನುತ್ತಿದ್ದರು. ತಾವೇ ತಯಾರು ಮಾಡಿದ ಬಿಲ್ಲು ಬಾಣಗಳನ್ನು ಹೆಗಲಿಗೇರಿಸಿಕೊಂಡು ಅರಣ್ಯ ಪ್ರದೇಶಕ್ಕೆ ಹೋಗುತ್ತಿದ್ದ ಕಾತಕರಿಗಳು ಸಣ್ಣಪುಟ್ಟ ಪ್ರಾಣಿಗಳನ್ನು ಭೇಟೆಯಾಡುತ್ತಿದ್ದರು. ನದಿ, ನಾಲೆ ಸೇರಿದಂತೆ ನೀರು ಇರುವ ಪ್ರದೇಶಗಳನ್ನೇ ಅವರು ತಮ್ಮ ವಾಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮಂಗಗಳನ್ನು ಭೇಟೆಯಾಡುವುದು ಇವರ ಮತ್ತೊಂದು ಹವ್ಯಾಸವಾಗಿತ್ತು. ಹೀಗಾಗಿಯೇ ಮಾಕಡ ಎಂಬ ಹೆಸರು ಇವರಿಗೆ ಬಂತು. ಮರಾಠಿ ಭಾಷೆಯಲ್ಲಿ ಮಾಕಡ ಎಂದರೆ ಮಂಗ ಎಂದರ್ಥವಂತೆ.
ಕಾತಕರಿಗಳು ಬೆಸ ಬಳಿಗಳಲ್ಲಿ ಮಾತ್ರ ವಿವಾಹ ಸಂಬಂಧ ಬೆಳೆಸುತ್ತಿದ್ದರು. ಏಕೆಂದರೆ ಸಮ ಬಳಿಗಳಲ್ಲಿ ಸಹೋದರ ಭಾವನೆ ಇರುವುದೇ ಇದಕ್ಕೆ ಕಾರಣ. ಕಾತಕರಿಗಳಲ್ಲಿ ತೆರ ಪದ್ಧತಿಯೂ ಇತ್ತು. ಜೊತೆಗೆ ಹೆಣ್ಣು ಮತ್ತು ಗಂಡು ಮಕ್ಕಳು ದೈಹಿಕವಾಗಿ ಬೆಳವಣಿಗೆ ಕಾಣುವ ಮೊದಲೇ ವಿವಾಹ ಮಾಡುತ್ತಿದ್ದರು. ಅದರೆ, ಈಗ ಬಾಲ್ಯ ವಿವಾಹ ಪದ್ಧತಿ ಇಲ್ಲ.
ಮದುವೆಯಲ್ಲಿ ಹಾಡು, ಕುಣಿತ: ಇವರ ಮದುವೆ ಸಹ ಅತ್ಯಂತ ಸರಳವಾಗಿ ನಡೆಯುತ್ತದೆ. ಮಹೂರ್ತದ ವೇಳೆ ಗಂಡಿನ ತಲೆಗೆ ರುಮಾಲು ಸುತ್ತುತ್ತಾರೆ. ಹೆಣ್ಣಿಗೆ ಸೀರೆ ಉಡಿಸುತ್ತಾರೆ. ಹಾಡುತ್ತಾ, ಕುಣಿಯುತ್ತಾ ಸಂಭ್ರಮಿಸುತ್ತಾರೆ. ಹಿರಿಯರು ವಧು-ವರರ ತಲೆಯ ಮೇಲೆ ಅಕ್ಷತೆ ಹಾಕಿ ಆಶೀರ್ವದಿಸುತ್ತಾರೆ. ಮತ್ತೊಂದು ವಿಶೇಷ ಎಂದರೆ ಮದುವೆಗೆ ಬಂದವರು ಹೆಣ್ಣು-ಗಂಡನ್ನು ಎತ್ತಿ ಕುಣಿಯುತ್ತಾರೆ. ಬಳಿಕ ನವ ವಧು-ವರ ಹಿರಿಯರ ಆಶೀರ್ವಾದ ಪಡೆದು ದೇವರನ್ನು ಪೂಜಿಸುತ್ತಾರೆ. ಎಲ್ಲ ಪ್ರಕ್ರಿಯ ನಂತರ ಅನ್ನ ಮತ್ತು ಪಾಯಸದ ಅಡುಗೆಯನ್ನು ಎಲ್ಲರಿಗೂ ಉಣ ಬಡಿಸುತ್ತಾರೆ. ಅಲ್ಲಿಗೆ ಮದುವೆ ಮುಕ್ತಾಯ.
ಕಾತಕರಿಗಳಿಗೆ ಅವರದ್ದೇ ಆದ ಭಾಷೆ ಇದೆ. ಪೂಜಿಸಲು ಅವರಿಗೆ ನಿರ್ದಿಷ್ಟವಾದ ದೇವರಿಲ್ಲ. ಶಂಕರ, ಭೋಲೆನಾಥ, ಕಾಳಿ, ಹನುಮಂತ, ರಾಮ, ಸೀತೆ ಮತ್ತಿತರ ದೇವರುಗಳನ್ನು ಜನ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ದೇವರ ಮೇಲೆ ಇವರಿಗೆ ನಂಬಿಕೆ ಹೆಚ್ಚು. ಇನ್ನು ಹೋಳಿ, ದಸರಾ, ದೀಪಾವಳಿ ಮತ್ತಿತರ ಹಬ್ಬಗಳನ್ನು ಕಾತಕರಿಗಳು ಆಚರಿಸುತ್ತಾರೆ. ಹಬ್ಬ, ಹರಿದಿನಗಳ ವೇಳೆ ಸಾರಾಯಿ ಕುಡಿದು ಕುಣಿದು ಕುಪ್ಪಳಿಸುತ್ತಿದ್ದ ಆಮಾಯಕ ಜನರು ಇವರು. ಹೋಳಿ ಹುಣ್ಣಿಮೆಯಂದು ಬೆಂಕಿಯಲ್ಲಿ ಆಹಾರ ಬೇಯಿಸಿ ಸೇವಿಸುವ ಪದ್ಧತಿಯನ್ನು ಇಂದಿಗೂ ಆಚರಣೆಯಲ್ಲಿಟ್ಟುಕೊಂಡಿದ್ದಾರೆ. ದೇವರಿಗೆ ಕೋಳಿಯನ್ನು ಬಲಿಕೊಟ್ಟು ಮಾಂಸದೂಟ ಮಾಡುವ ಸಂಪ್ರದಾಯವೂ ಇದೆ.
ಕಾಡು ಹಸನು ಮಾಡುವ ಕಾಯಕ: ಕಾತಕರಿಗಳು ವೇಷಭೂಷಣ, ಆಚಾರ-ವಿಚಾರಗಳು ಗಮನ ಸೆಳೆಯುತ್ತವೆ. ಅರಣ್ಯದಿಂದ ಹೊರಬಿದ್ದ ಬಳಿಕ ಕುಲ ಕಸುಬು ಕಡಿಮೆ ಆಗಿದೆ. ಆದರೆ, ಜೀವನ ನಡೆಯಬೇಕಲ್ಲ. ಹೀಗಾಗಿ ಅರಣ್ಯ ಇಲಾಖೆ ನೆರಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಾಡುಗಳನ್ನು ಹಸನು ಮಾಡುವ ಕೆಲಸದಲ್ಲಿ ಕಾತಕರಿಗಳು ತೊಡಗಿದ್ದಾರೆ. ಹಾಗೆಯೇ ಖಾಸಗಿಯವರ ಫಾರಂಗಳಲ್ಲಿಯೂ ದುಡಿಯುತ್ತಿದ್ದಾರೆ. ಮಳೆಗಾಲ ಹೊರತುಪಡಿಸಿದ ಉಳಿದ ಎಲ್ಲ ಅವಧಿಯಲ್ಲೂ ಇವರು ಕಾಡಿನಲ್ಲೇ ಕಾಲ ಕಳೆಯುತ್ತಾರೆ. ಇವರಿಗೆ ಮನೆ ಎಂಬುದಿಲ್ಲ. ನಾಲ್ಕು ಕಡ್ಡಿ ನೆಟ್ಟು ಅದರ ಮೇಲೆ ಸೊಪ್ಪು ಹಾಕಿದರೆ ಅದೇ ಮನೆ ಎಂದುಕೊಳ್ಳುತ್ತಾರೆ. ಬೆಂಕಿ ಮತ್ತು ನೀರು ಇದ್ದರೆ ಸಾಕು ಇವರ ಜೀವನ ನಡೆದು ಹೋಗುತ್ತದೆ. ಕಾಡಿನಲ್ಲೇ ಇರಬೇಕು ಎಂಬುದು ನಮ್ಮ ಆಸೆ. ಆದರೆ, ಸರ್ಕಾರ ಬಿಡಬೇಕಲ್ಲ ಎನ್ನುತ್ತಾರೆ ಕಾತಕರಿಗಳು.
ಈ ಸಮುದಾಯದಲ್ಲಿ ಕಡು ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಅನಕ್ಷರಸ್ಥರೂ ಹೆಚ್ಚು. ಇತ್ತೀಚೆಗೆ ಮಕ್ಕಳು ಶಾಲೆ ಮೆಟ್ಟಿಲು ತುಳಿಯುತ್ತಿದ್ದಾರೆ. ತಮ್ಮದೇ ಭಾಷೆಯಲ್ಲಿ ಮಾತನಾಡುವ ಈ ಮಂದಿ ಮರಾಠಿ ಭಾಷೆಯನ್ನೂ ಬಳಸುತ್ತಾರೆ. ಕನ್ನಡ ಅರ್ಥವಾಗುತ್ತದೆ ಅಷ್ಟೆ.
ಇವರ ಮತ್ತೊಂದು ವೈಶಿಷ್ಟ್ಯ ಎಂದರೆ ಕಾಡಿನಲ್ಲಿ ಯಾವುದೇ ಪ್ರಾಣಿ ಕೂಗು ಹಾಕಿದರೂ ಇದು ಇಂಥದ್ದೇ ಪ್ರಾಣಿಯ ಧ್ವನಿ ಎಂದು ಹೇಳುತ್ತಾರೆ ಹೆಜ್ಜೆಗಳ ಜಾಡು ನೋಡಿ ಯಾವ ವನ್ಯಮೃಗದ್ದು ಎಂದು ಹೇಳಬಲ್ಲ ನಿಪುಣತೆ ಇವರಿಗಿದೆ. ಕಾಡಿನಲ್ಲಿ ಸಿಗುವ ಔಷಧ ಸಸ್ಯಗಳನ್ನು ಗುರುತಿಸಿ ಕಾಯಿಲೆ ಕಸಾಲೆಗಳಿಗೆ ಅದನ್ನು ಬಳಸುವ ಜಾಣ್ಮೆಯೂ ಕಾತಕರಿಗಳಿಗೆ ಇದೆ.
ಕಾಡಿನ ರಾಜರಾಗಿದ್ದವರು: ಒಂದು ಕಾಲದಲ್ಲಿ ಕಾಡಿನ ರಾಜರಾಗಿದ್ದ ಕಾತಕರಿಗಳ ಪಾಲಿಗೆ ಅರಣ್ಯವೇ ಎಲ್ಲವೂ ಆಗಿತ್ತು. ಏನೇ ಕಷ್ಟ ಬಂದರೂ ಕಾಡಿನಿಂದ ಹೊರಗೆ ಬಂದವರಲ್ಲ ಈ ಜನ. ಇದ್ದುದರಲ್ಲೇ ನೆಮ್ಮದಿ ಕಂಡುಕೊಂಡವರು. ಅರಣ್ಯ ಕಾಯಿದೆ ಜಾರಿಗೆ ಬಂದು ಸರ್ಕಾರ ಒಕ್ಕಲೆಬ್ಬಿಸಿದ ಬಳಿಕ ಕಾತಕರಿಗಳು ಕಾಡಿನಿಂದ ಹೊರಗೆ ಬಂದಿದ್ದಾರೆ. ಕುಲಕಸುಬು ಇಲ್ಲದ ಕಾರಣ ನಿರುದ್ಯೋಗ ಕಾಡುತ್ತಿದೆ. ಅನಕ್ಷರತೆ, ಬಡತನದಿಂದಾಗಿ ಬದುಕು ಕಷ್ಟವಾಗಿದೆ. ಸರ್ಕಾರದ ಸೌಲಭ್ಯಗಳೂ ಇವರ ಬಳಿಗೆ ಸುಳಿಯುತ್ತಿಲ್ಲ. ಸಂವಿಧಾನಬದ್ಧವಾಗಿ ಸಿಗಬೇಕಿದ್ದ ಸವಲತ್ತು ದೊರೆತಿಲ್ಲ. ಕೇಳೋಣ ಎಂದರೆ ಧ್ವನಿ ಎತ್ತುವ ಶಕ್ತಿಯೂ ಕಾತಕರಿಗಳಿಗೆ ಇಲ್ಲವಾಗಿದೆ. ಕಾರಣ, ಸಂಘಟನೆಯ ಕೊರತೆ. ಆದರೆ, ಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ರಾಜಕೀಯ ನಾಯಕರು ಸಮುದಾಯದವರ ನೆರವಿಗೆ ಬರುತ್ತಿದ್ದಾರೆ. ಅದುವೇ ಸಮಾಧಾನದ ಸಂಗತಿಯಾಗಿದೆ ಕಾತಕರಿಗಳಿಗೆ.
- ಕೆ.ವಿ.ಪ್ರಭಾಕರ
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


