ಅಂಕಣಗಳು

ಬಿಜೆಪಿ: ಇನ್ನೆಷ್ಟು ದಿನ ಕಾಯುವುದು?

Published On :

ಚುನಾವಣೆಯಲ್ಲಿ ಸೋತು ಸುಣ್ಣವಾಗಿ, ಆಂತರಿಕವಾಗಿ ಸ್ಥೈರ್ಯವನ್ನೇ ಕಳೆದುಕೊಂಡಿರುವ ಕರ್ನಾಟಕ ಬಿಜೆಪಿ, ಪಕ್ಷದಲ್ಲಿ ಉತ್ಸಾಹವನ್ನು ತುಂಬಲು ಹೊರಗಿನಿಂದ ಯಾವುದೋ ಶಕ್ತಿ ಬರುವುದನ್ನು ಕಾಯುತ್ತ ಕೂತಿರುವಂತಿದೆ.
ರಾಜ್ಯದಲ್ಲಿ ಬಿಜೆಪಿ ನಾಯಕರು ತಾವೇ ಹೆಣೆದುಕೊಂಡಿರುವ ಬಲೆಯಲ್ಲಿ ಸಿಕ್ಕಿಬಿದ್ದು ತಮ್ಮ ಭವಿಷ್ಯವನ್ನೆಲ್ಲ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುತ್ತಿರುವ ಯಡಿಯೂರಪ್ಪ ಅವರ ಆಗಮನದ ಜತೆಗೇ ಗಂಟು ಹಾಕಿರುವಂತಿದೆ. ಮುಂಬೈನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿಯ (ಇದೊಂದು ಹೊಸ ಆವಿಷ್ಕಾರ. ಪಕ್ಷದ ಅಂಗರಚನೆಯಲ್ಲಿ ಇದಕ್ಕೆ ಮಾನ್ಯತೆ ಇಲ್ಲ) ಸಭೆಯಲ್ಲಿ ಯಡಿಯೂರಪ್ಪ ಅವರನ್ನು "ಬರಮಾಡಿಕೊಳ್ಳುವ ವಿಚಾರದಲ್ಲಿ ಅಂತಿಮ ತೀರ್ಮಾನ ಆಗಬಹುದೆಂದು" ಬಿಜೆಪಿಯ ಜನ ಕಾಯುತ್ತಿದ್ದರು. ಪ್ರಕಟಿತ ವರದಿಗಳಂತೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿದಂತೆ ರಾಜ್ಯದ ನಾಯಕರೆಲ್ಲರೂ ಯಡಿಯೂರಪ್ಪ ಅವರನ್ನು "ಸ್ವಾಗತಿಸಲು ಸಿದ್ಧರಾಗಿದ್ದಾರೆ". ಆದರೆ ಆ ವಿಚಾರದಲ್ಲಿ ತೀರ್ಮಾನ ವರಿಷ್ಠರದ್ದೇ. ಯಡಿಯೂರಪ್ಪ ಅವರ ವಿರುದ್ಧ ಕೇಸುಗಳಿವೆ. ಒಂದೆರಡು ಪ್ರಕರಣಗಳಲ್ಲಿ ಇನ್ನೂ ಸಿಬಿಐ ತನಿಖೆ ಮುಗಿದಿಲ್ಲ. ವರಿಷ್ಠರು ತನಿಖೆಯ ವಿವರಗಳನ್ನು ಪರಿಶೀಲಿಸಿ "ಸಕಾಲದಲ್ಲಿ ಸೂಕ್ತ ನಿರ್ಧಾರವನ್ನು" ಪ್ರಕಟಿಸುತ್ತಾರಂತೆ.
ಅಲ್ಲಿಯವರೆಗೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಸ್ಥಬ್ಧ. ಯಡಿಯೂರಪ್ಪ ಅವರೇನೂ ಬಿಜೆಪಿಗೆ ಅರ್ಜಿ ಹಾಕಿ ಕೂತಿಲ್ಲ. ದಾಖಲೆಗಳ ಪ್ರಕಾರ ಅವರು ಪಕ್ಷಕ್ಕೆ ರಾಜಿನಾಮೆಯನ್ನು ನೀಡಿಲ್ಲ. ಅವರನ್ನು "ಬರಮಾಡಿಕೊಳ್ಳುವ ವಿಚಾರದಲ್ಲಿ ಆಸಕ್ತಿಯನ್ನು ತೋರಿಸದೇ ಇದ್ದ" ಆಡ್ವಾಣಿ, ಸುಷ್ಮಾ ಸ್ವರಾಜ್ ಈಗ ಅವರ ವಿಚಾರದಲ್ಲಿ ಅಪ್ರಸ್ತುತರು. ಈಗಿನ ಸನ್ನಿವೇಶದಲ್ಲಿ ರಾಜನಾಥ ಸಿಂಗ್ ಅವರ ಮಾತೇ ನಡೆಯುವುದು. ಯಡಿಯೂರಪ್ಪ ಅವರು ಇದ್ದಕ್ಕಿದ್ದಂತೆಯೇ, ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಎನ್‌ಡಿಎ ಜತೆ ಸೇರುವ ಮಾತಾಡಿದ್ದಾರೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಹತ್ತು ಕೆಜೆಪಿಗೆ, ಉಳಿದಿದ್ದು ಬಿಜೆಪಿಗೆ ಎಂದು ಅವರೇ ಹಂಚಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಬಿಟ್ಟು ಬೇರೆ ಎನ್.ಡಿ.ಎ. ಇಲ್ಲ. ಈಗ ಯಡಿಯೂರಪ್ಪ ಕೆಜೆಪಿಯ ನಾಯಕರಾಗಿ ಹೊಸ ಅಸ್ತಿತ್ವವನ್ನು ಪಡೆಯಲು ಪ್ರಯತ್ನಿಸುತ್ತಿರಲೂಬಹುದು.
ಹಿಂದೆ ಇದ್ದಂತೆ, ಯಡಿಯೂರಪ್ಪ ಇದ್ದ ಪಕ್ಷಕ್ಕೆ ಲಿಂಗಾಯಿತರ ಅಖಂಡ ಬೆಂಬಲ ಸಿಗತ್ತೆ ಎನ್ನುವ ನಂಬಿಕೆ - ವಿಶ್ವಾಸ ಈಗ ಇಲ್ಲ. ಉತ್ತರ ಕರ್ನಾಟಕದ ಪ್ರದೇಶವೂ ಈಗ ಬಿಜೆಪಿ ಹಿಡಿತದಲ್ಲಿಲ್ಲ. ಆ ಪ್ರದೇಶದ ರಾಜಕೀಯ ನಾಯಕರಲ್ಲಿ ಬಹುಮಂದಿ ಗೆದ್ದ - ಅಥವಾ ಗೆಲ್ಲುವ ಪಕ್ಷದತ್ತಲೇ ವಾಲುವುದು. ನಿಜ. ಯಡಿಯೂರಪ್ಪ ಅವರಿಗೆ ಅವರದ್ದೇ ಆದ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಇದ್ದರೂ ಆ ಪಕ್ಷದ ಆರು ಶಾಸಕರಲ್ಲಿ ಇಬ್ಬರು ಬಿಜೆಪಿಯ ಕಟ್ಟರ್ ವಿರೋಧಿಗಳು. ಮಾಜಿ ಸಮಾಜವಾದಿಗಳವರು, ಅವರಿಗಾಗಿಯೇ ಯಡಿಯೂರಪ್ಪ ಎನ್‌ಡಿಎ ಹೆಸರನ್ನು ಎಳೆದು ತಂದಿರುವುದು.

ಬಿಜೆಪಿ - ಯಡಿಯೂರಪ್ಪ ಗೊಂದಲ: ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ, ಬಿಜೆಪಿ ಎರಡೂ ಕಡೆ ಗೊಂದಲವಿದೆ. ಗೊಂದಲ ನಿವಾರಣೆಗೆ, ಸಂಧಾನ ನಡೆಸಬಹುದಾದ ಚಾಣಾಕ್ಷ ನಾಯಕರು ಬಿಜೆಪಿಯಲ್ಲಿಲ್ಲ. ಮತದಾರರ ಸಮುದಾಯಗಳನ್ನು ಶಾಶ್ವತವಾಗಿ ಬೇರೆಯಾಗಿ ಇಡುವುದು ಅಸಾಧ್ಯದ. ಒಂದು ಚುನಾವಣೆಯಲ್ಲಿ ಕಂಡು ಬಂದ ನಿಷ್ಠೆ. ಇನ್ನೂ ಹಾಗೇ ಉಳಿದಿದೆ ಎಂದು ಭಾವಿಸುವುದು ಭ್ರಮಾ ಲೋಕದ ವಿಹಾರ ಅಷ್ಟೇ.
ಆಪರೇಷನ್ ಕಮಲದ ವಿಚಾರ ಬೇರೆ. ಆಗ ಬಿಜೆಪಿಯಲ್ಲಿ ಕೊಪ್ಪರಿಗೆಯ ಹಣವಿತ್ತು. ಅಧಿಕಾರದ ಬಲವೂ ಇತ್ತು. ಈಗ ಎರಡೂ ಇದ್ದಂತಿಲ್ಲ. ಬಿಜೆಪಿಯ ಆಸ್ತಿಯಂತಿದ್ದ ನಗರ ಪ್ರದೇಶಗಳ ಮಧ್ಯಮ ವರ್ಗವೂ ಬಿಜೆಪಿ ನಾಯಕರ ಕೆಟ್ಟ ತಂತ್ರಗಾರಿಕೆಯಿಂದ ತನಗೆ ದ್ರೋಹವಾಗಿದೆ ಎಂದು ಭಾವಿಸಬಹುದಾದ ಸನ್ನಿವೇಶ ಇದು. ಲೋಕಸಭೆ ಚುನಾವಣೆಯಲ್ಲಿ ರಾಹುಲ ಗಾಂಧಿ ಕರ್ನಾಟಕ ಕಾಂಗ್ರೆಸ್ಸಿಗೆ ನಿಗದಿಪಡಿಸಿರುವ ಗುರಿ 28ರಲ್ಲಿ 25 ಸ್ಥಾನಗಳು. ಮೂರು ಸ್ಥಾನಗಳು ಬಿಜೆಪಿಗೆ ಎಟುಕದಂತಹ ಕ್ಷೇತ್ರಗಳು. (ಮಂಡ್ಯ - ಹಾಸನ - ರಾಮನಗರ) ಹೀಗಾಗಿ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿಯ ಪರಿಸ್ಥಿತಿ ನಿಜವಾಗಲೂ ಹೀನಾಯವಾಗಿಯೇ ಕಂಡು ಬರುತ್ತಿದೆ.

ಜೆಡಿಎಸ್ ಪರಿಸ್ಥಿತಿ: ಜಾತ್ಯತೀತ ಜನತಾ ದಳ ವಿಧಾನಸಭೆ ಚುನಾವಣೆ ಅನಂತರ ಹಿಂದಿಗಿಂತ ಹೆಚ್ಚು ಶಕ್ತಿಯನ್ನು ಪ್ರದರ್ಶಿಸಿದ್ದು ನಿಜ. ಪಕ್ಷದ ಶಾಸಕರ ಸಂಖ್ಯೆ ಹೆಚ್ಚಾಗಿತ್ತು, ಗಳಿಸಿದ ಮತಗಳ ಸಂಖ್ಯೆಯೂ ಹಿಗ್ಗಿತ್ತು. ರಾಜ್ಯದಲ್ಲಿ ಅಧಿಕೃತವಾಗಿ, ಮನ್ನಣೆ ಪಡೆದ ವಿರೋಧ ಪಕ್ಷವಾಗಿ ವಿಧಾನ ಸಭೆಯಲ್ಲಿ ರಾರಾಜಿಸಿದೆ, ಇದೆಲ್ಲವೂ ನಿಜ. ಅಂಕಿ - ಅಂಶಗಳನ್ನು ಯಾರೂ ನಿರಾಕರಿಸುವಂತಿಲ್ಲ.
ಆದರೆ, ಪಕ್ಷದ ಪ್ರತಿಷ್ಠೆಗೆ, ಒಂದು ಪ್ರದೇಶದಲ್ಲಿನ ಸಾರ್ವಭೌಮ ಸ್ವರೂಪದ ರಾಜಕೀಯ ಅಧಿಕಾರಕ್ಕೆ, ಮಗ್ಗುಲು ಮುರಿಯುವಂತಹ ಪೆಟ್ಟಿ ಬಿದ್ದಿದ್ದು, ಮಂಡ್ಯ - ರಾಮನಗರ (ಬೆಂಗಳೂರು ಗ್ರಾಮೀಣ) ಲೋಕಸಭೆ ಕ್ಷೇತ್ರಗಳ ಸೋಲಿನಿಂದ. ಅದು ಕೇವಲ ಚುನಾವಣೆಯಲ್ಲಿನ ಸೋಲಿನ ವಿಚಾರ ಅಲ್ಲ. ದೇವೇಗೌಡರ ಕುಟುಂಬದ ಸೊಸೆ, ಅನಿತಾ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ, ಬೆಂಗಳೂರು ಗ್ರಾಮಾಂತರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದನ್ನು ಸುಲಭವಾಗಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಈಗಲೂ ದೇವೇಗೌಡರು, ಮುಂದಿನ ಚುನಾವಣೆಗೆ ನಾವೂ ಬರ್ತೀವಿ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಆದರೆ ದೇವೇಗೌಡರಿಗೂ ಅಳುಕಿದೆ. ಒಮ್ಮೆ ಪಕ್ಷದ ಹಿಡಿತದಿಂದ ಹೊರಗೆ ಹೋದ ಜನರನ್ನು ಮತ್ತೆ ತರುವುದು ಕಷ್ಟ ಎಂದು ಅವರಿಗೂ ಗೊತ್ತು.
ಈ ಲೋಕಸಭೆ ಉಪಚುನಾವಣೆಯ ಪರಾಭವದ ಪರಿಣಾಮ ಪಕ್ಷದ ಮೇಲೆ ಆಗಿದೆ. ಯಾವ ಕಾಲಕ್ಕೂ ಅಧಿಕಾರಕ್ಕೆ ಸ್ವಂತ ಬಲದ ಆಧಾರದ ಮೇಲೆ ಬರಲಾಗದ ಪಕ್ಷವನ್ನೇ ಎಷ್ಟು ದಿನ ನಂಬಿಕೊಂಡಿರುವುದು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಈಗ ಅನಿರೀಕ್ಷಿತವೆನ್ನುವಂತೆ ಜೆಡಿಎಸ್ ತೊಳಲಾಟದಲ್ಲಿ, ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದನ್ನಾಗಿ ಮಾಡಿಕೊಂಡು, ಸಿಕ್ಕಿ ಬಿದ್ದಿದೆ. ವಿಧಾನ ಸಭೆಯಲ್ಲಿ, ವಿರೋಧ ಪಕ್ಷದ ಸಚೇತಕರ ಸ್ಥಾನ ಹಾಗೂ ಉಪನಾಯಕರ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ.
ಈ ವಿಚಾರದಲ್ಲಿ ಗೊಂದಲವಿದೆ ಎನ್ನುವುದನ್ನು ಮನಗಂಡ ಸರ್ವೋಚ್ಚ ನಾಯಕ ದೇವೇಗೌಡರು, ಪ್ರಮುಖರ ಸಭೆಯೊಂದನ್ನು ಕರೆದರೂ, ಅವರಿಗೆ ಬೇಕಾದ ರೀತಿಯಲ್ಲಿ ಒಮ್ಮತ ಮೂಡಲಿಲ್ಲ. ಆ ಸಭೆಯಲ್ಲಿ, ನಿರ್ಧಾರದ ಅಧಿಕಾರವನ್ನು ದೇವೇಗೌಡರಿಗೇ ಬಿಡಲಾಯಿತು. ನಿಜಕ್ಕೂ ಇದೊಂದು ಸಣ್ಣ ವಿಚಾರ. ಆ ಸ್ಥಾನಗಳೇನೂ ಮಹತ್ವದ ಸ್ಥಾನಗಳಲ್ಲ. ಆದರೂ ದೇವೇಗೌಡರಿಗೆ ಸೂಕ್ತ ವ್ಯಕ್ತಿಗಳನ್ನು ಆರಿಸುವುದು ಸಾಧ್ಯವಾಗಲಿಲ್ಲ. ಪಕ್ಷ ಮೂಸದ ನೆಪಹೇಳಿ ಆ ಸಮಸ್ಯೆಯ ಪರಿಹಾರಕ್ಕೆ ಮುಹೂರ್ತವನ್ನು ಆರಿಸುವ ದಿನವನ್ನೇ ಮುಂದಕ್ಕೆ ಹಾಕಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯತೀತ ಜನತಾದಳಕ್ಕೆ ಹೊರಗಿನಿಂದ ಯಾವ ಶಕ್ತಿಯೂ ಸಹಕಾರ ನೀಡಲು ಮುಂದೆ ಬರುತ್ತಿಲ್ಲ. ಆದರೆ ರಾಜ್ಯ ರಾಜಕೀಯದಲ್ಲಿ ಇಂತಹ ಏಕಾಂಗಿತನದಿಂದ ಸಿಗುವ ಲಾಭವಾದರೂ ಏನು?

ಸಿದ್ದರಾಮಯ್ಯ ಪ್ರಚಾರ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿಗೆ, ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವ ದಿನಗಳಿವು . ರಾಜಕೀಯ ಸಂಘಟನೆಯ ದೃಷ್ಟಿಯಿಂದ ಎದುರಾಳಿಗಳೆನಿಸಿದ ಬಿಜೆಪಿ ಹಾಗೂ ಜೆಡಿಎಸ್ ಆಂತರಿಕ ತುಮುಲದಿಂದ ಹತಾಶೆಯ ಗೂಡುಗಳಾಗಿವೆ. ಪಕ್ಷದಲ್ಲಿನ ಆಂತರಿಕ ಅತೃಪ್ತರು ಸುಮ್ಮನೆ ಕೂತಿಲ್ಲ ಎನ್ನುವುದು ನಿಜವಾದರೂ, ಅವರು ಕೈಗೊಳ್ಳುತ್ತಿರುವ ಕ್ರಮಗಳೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆಯೇ ಪರ್ಯವಸಾನವಾಗುತ್ತಿದೆ.
ಸಾಲದ್ದಕ್ಕೆ ಸಿದ್ಧರಾಮಯ್ಯ, ಶಾಪಗ್ರಸ್ತವಾಗಿದೆ ಎಂದು ಕೆಟ್ಟ ಹೆಸರು ಪಡೆದ ರಾಜ್ಯದ ಗಡಿನಾಡಿನ ಊರಾದ ಚಾಮರಾಜನಗರಕ್ಕೆ ಭೇಟಿ ನೀಡಲು ನವರಾತ್ರಿಯ ಶುಭಸಂದರ್ಭವನ್ನೇ ಆರಿಸಿಕೊಂಡು, ಅಂಧ-ಶ್ರದ್ಧೆಯ ವಿರುದ್ಧದ ಹೋರಾಟಗಾರ ಎನ್ನುವ ಪ್ರತಿಷ್ಠೆಯನ್ನು ಗಳಿಸಿಕೊಂಡಿದ್ದಾರೆ. ಯಾರು ಏನೇ ಹೇಳಿದರೂ ಈಗಿನ ಪರಿಸ್ಥಿತಿಯಲ್ಲಿ ಕರ್ನಾಟಕ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಅವರೇ ನಂಬರ್ ಒನ್ ಲೀಡರ್. ಅವರ ಕೈ ಕಟ್ಟಲು ಸಮನ್ವಯ ಸಮಿತಿಯ ರಚನೆಯಾಗಿದೆ, ಮಂತ್ರಿಗಳ ಕೆಲಸದ ಮೌಲ್ಯಮಾಪನದ ವ್ಯವಸ್ಥೆಗೆ ಬೇಡಿಕೆ ಬಂದಿದೆ ಎನ್ನುವುದೆಲ್ಲ ರಾಜಕೀಯದಲ್ಲಿ ಗಟ್ಟಿ ವಿಚಾರಗಳ ಅಭಾವದ ಕಾಲದಲ್ಲಿ ಕೇಳಿಬರುವ ಮಾತುಗಳಂತಿವೆ. ಆದರೂ ಸಿದ್ದರಾಮಯ್ಯ್ವುರು ಈ ವೇಳೆಗೆ ಮಾಡಿ ಮುಗಿಸಲೇ ಬೇಕಾಗಿದ್ದ ಮಂತ್ರಿ ಮಂಡಲದ ವಿಸ್ತರಣೆ, ಬೋರ್ಡು - ನಿಗಮ - ಮಂಡಳಿ - ಅಕಾಡಮಿಗಳಿಗೆ ಅಧ್ಯಕ್ಷರು, ನಿರ್ದೇಶಕರ ನೇಮಕವನ್ನು ಯಾವ ಕಾರಣಕ್ಕಾಗಿ ಮುಂದಕ್ಕೆ ಹಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ.

ಕಿಡಿಗೇಡಿತನ: ಮುಖ್ಯಮಂತ್ರಿಯ ಮುಂದೆ, ಸದ್ಯಕ್ಕೆ ಈಗ ಯಾವ ರಾಜಕೀಯ ಸವಾಲೂ ಇಲ್ಲ ಎನ್ನುವುದು ನಿಜ. ಆದರೆ, ರಾಜ್ಯದ ಸಮಸ್ಯೆಗಳೆಲ್ಲವೂ ಅವರಿಗೆ ಸವಾಲುಗಳೇ ಅಲ್ಲವೇ? ರಾಜ್ಯಾಧಿಕಾರದಲ್ಲಿ ಈಗ ಅರ್ಧಕ್ಕೂ ಹೆಚ್ಚಿನ ಭಾಗ ಮುಖ್ಯಮಂತ್ರಿಗೆ ಸೇರಿದ ಖಾತೆಗಳ ಪಟ್ಟಿಯಲ್ಲೇ ಇದೆ. ಅದನ್ನು ನಿಭಾಯಿಸುವುದೇ ಒಂದು ಸವಾಲು. ಬೇಕಾದರೆ ಪ್ರಧಾನಿ ಮನಮೋಹನ ಸಿಂಗ್ ಅವರನ್ನೇ ಕೇಳಿ ನಿಜವಾದ ಸಂಕಟದ ಸ್ವರೂಪವನ್ನು ತಿಳಿದುಕೊಳ್ಳಬಹುದು.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.