ಅಂಕಣಗಳು

ಕಾಂಗ್ರೆಸ್ ಕಂಗೆಡಿಸಿರುವ ಸಿದ್ದು-ಪರಮೇಶ್ವರ ಕದನ

ದ್ವೇಷ ಹಾಗೂ ತ್ವೇಷ ಎಂಬುದು ಬೇರೆ ಬೇರೆಯಾದರೂ ಅದು ಮಡುಗಟ್ಟುವ...

ಕಾಂಗ್ರೆಸ್ ಕಂಗೆಡಿಸಿರುವ ಸಿದ್ದು-ಪರಮೇಶ್ವರ ಕದನ
Published On :

ದ್ವೇಷ ಹಾಗೂ ತ್ವೇಷ ಎಂಬುದು ಬೇರೆ ಬೇರೆಯಾದರೂ ಅದು ಮಡುಗಟ್ಟುವ ರೀತಿ ಒಂದೆ. ಯಾವುದೋ ಒಂದು ಚಿಕ್ಕ ಘಟನೆ, ಮಾತು ಅಥವಾ ಚಿಂತನೆ ವ್ಯಕ್ತಿ ಅಥವಾ ಸಮುದಾಯದ ಆಂತರ್ಯದೊಳಗೆ ಹುದುಗಿ ಸದ್ದಿಲ್ಲದೇ ಬೆಳೆಯುತ್ತದೆ. ಬೇಳೆ ಬೇಯಿಸಿಕೊಳ್ಳುವವರ ಬಣ್ಣದ ಮಾತು ಬಿದ್ದರಂತೂ ಅದು ಇನ್ನಷ್ಟು ಪೋಷಣೆಗೊಂಡು ಹೆಮ್ಮರವಾಗಿ ಬಿಡುತ್ತದೆ. ರಾಜಕೀಯದಲ್ಲಂತೂ ಇದಕ್ಕೆ ಇನ್ನಷ್ಟು ಕಾರಣಗಳು ಸೇರಿಕೊಂಡು ವ್ಯಕ್ತಿ-ವ್ಯಕ್ತಿಗಳು ಮುಖ ನೋಡಿಕೊಳ್ಳದಂಥ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ.
ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿದ್ದ ಐದು ವರ್ಷಗಳ ಕಾಲವಂತೂ ಈ ದ್ವೇಷ ಹಾಗೂ ತ್ವೇಷ ಪರಿಸ್ಥಿತಿ ನಾಯಕರ ನಡುವೆ ತುರೀಯಾವಸ್ಥೆಯನ್ನು ತಲುಪಿತ್ತು. ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆಯಲ್ಲಿ ಮತದಾರ ಮಗ್ಗುಲು ಬದಲಿಸಿದ. ಸರ್ಕಾರ ಬದಲಾಯ್ತು. ಆದರೆ ಹೊಸದಾಗಿ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲೂ ಈಗ ಹಳೆ ರಾಗ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳೂ ತುಂಬಿಲ್ಲ. ಆಗಲೇ ಪಕ್ಷ ಒಂದು ಕಡೆ, ಸರ್ಕಾರ ಒಂದು ಕಡೆ ಎಳೆಯಲಾರಂಭಿಸಿದೆ. ಪಕ್ಷ ಹಾಗೂ ಸರ್ಕಾರದ ನಡುವೆ ಸದ್ದಿಲ್ಲದೇ ಬಿದ್ದ ತ್ವೇಷ ಹಾಗೂ ದ್ವೇಷದ ಬೀಜ ಮೊಳಕೆಯೊಡೆದು ಚಿಗುರುತ್ತಿರುವುದು ಈಗ ಬಹಿರಂಗ ಸ್ವರೂಪವನ್ನು ಪಡೆದಿದೆ.
ಹೌದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಮುನಿಸು ಈಗ ಕೆಪಿಸಿಸಿ ಪಡಸಾಲೆಯನ್ನು ದಾಟಿ ಬಂದಿದೆ. ಸಮನ್ವಯ ಸಮಿತಿ ರಚನೆ, ಸಚಿವರ ಮೌಲ್ಯಮಾಪನ ಸೇರಿದಂತೆ ಹಲವು ಆಯಾಮಗಳಲ್ಲಿ ಟಿಸಿಲೊಡೆದ 'ಭಿನ್ನ' ಧೋರಣೆ ಈಗ ಬಹಿರಂಗ ಕದನವಾಗುವ ಎಲ್ಲ ಮುನ್ಸೂಚನೆ ತೋರಲಾರಂಭಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವ ಹಣಕಾಸು ವೇದಿಕೆ ಆಶ್ರಯದಲ್ಲಿ ಚೀನಾದಲ್ಲಿ ನಡೆದ ಹೂಡಿಕೆದಾರರ ಸಮಾವೇಶಕ್ಕೆ ಹೋಗಿ ಬಂದಾಗಿನಿಂದ ಸರ್ಕಾರ ಹಾಗೂ ಪಕ್ಷದ ನಡುವಿನ ವ್ಯತ್ಯಾಸ ಪದೇ ಪದೇ ಚರ್ಚೆಗೆ ಬರುತ್ತಿದೆ. ಅದು ಈಗ ಬಹಿರಂಗ ಹೇಳಿಕೆ ಹಾಗೂ ಪತ್ರ ರಾಜಕೀಯದವರೆಗೆ ಬಂದು ನಿಂತಿದೆ. ಪರಮೇಶ್ವರ ಪರವಾಗಿ ದಲಿತ ಸಮುದಾಯಕ್ಕೆ ಸೇರಿದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆ ನೀಡಿದರೆ, ಸಚಿವರ ಮೌಲ್ಯಮಾಪನದಿಂದ ನೀವು ದೂರ ಇರಿ ಎಂದು ಸಿದ್ದರಾಮಯ್ಯ ಪರವಾಗಿ ಸಾಹಿತಿಗಳು ಡಾ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ. ಇದೆಲ್ಲವೂ ಮುಂದೇನಾಗುವುದೋ ಎಂಬ ಸ್ಥಿತಿ ನಿರ್ಮಿಸಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಸಿದ್ದರಾಮಯ್ಯ ಅವರಿಗೆ ಅಪಥ್ಯವಾಗುವ ಎರಡು ವಿಚಾರಗಳನ್ನು ಸಿಡಿಸಿದ್ದರು. ಮೊದಲನೆಯದಾಗಿ ಚುನಾವಣೆಗೆ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ್ದ ಭರವಸೆಗಳ ಮೇಲ್ವಿಚಾರಣೆ ನಡೆಸಲು ಪ್ರಣಾಳಿಕೆ ಅನುಷ್ಠಾನ ಸಮಿತಿ ಮತ್ತು, ಪಕ್ಷ-ಸರ್ಕಾರದ ನಡುವೆ ಹೊಂದಾಣಿಕೆ ಸ್ಥಾಪಿಸಲು ಸಮನ್ವಯ ಸಮಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ರಚಿಸಲಿದೆ ಎಂದಿದ್ದರು. ಆಗ ತಾನೇ ಸರ್ಕಾರದ ಚುಕ್ಕಾಣಿ ಹಿಡಿದ ಯಾವ ಮುಖ್ಯಮಂತ್ರಿಗೂ ಇದು ಇರಸು-ಮುರಸು ತರಿಸುವಂತದ್ದೇ. ಏಕೆಂದರೆ ತನ್ನ ಮೇಲೆ ಪರೋಕ್ಷ ಹಿಡಿತ ಸಾಧಿಸುವ ವ್ಯವಸ್ಥೆಯನ್ನು ಯಾರೂ ಬಯಸುವುದಿಲ್ಲ. ಅದರಲ್ಲಿಯೂ ಜನತಾ ಪರಿವಾರದಲ್ಲಿ ಬೆಳೆದು ಬಂದ ಸಿದ್ದರಾಮಯ್ಯನವರಿಗಂತೂ ಇದು ಒಪ್ಪಿಗೆಯಾಗದ ವಿಚಾರವೇ !
ಆದರೆ ಪರಮೇಶ್ವರ ಸಿಡಿಸಿದ ಈ ಮಾತೇ ಈಗ ಇಬ್ಬರ ಮನಸಿನಲ್ಲೂ ಪ್ರಕ್ಷುಬ್ಧ ವಾತಾವರಣವನ್ನೇ ನಿರ್ಮಿಸಿದೆ. ಬಹಿರಂಗ ವೇದಿಕೆಗಳಲ್ಲಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡರು, ಆಂತರ್ಯದಲ್ಲಿ ಹಲ್ಲು ಮಸೆಯುವ ಸ್ಥಿತಿ ಸೃಷ್ಟಿಸಿದೆ. ವಿಚಿತ್ರವೆಂದರೆ ಈ ಸಮನ್ವಯ ಸಮಿತಿ ಕಲ್ಪನೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಕ್ಕೆ ಹೊಸತಲ್ಲ. ಜತೆಗೆ ಇಂಥ ಸಮಿತಿಯನ್ನು ರಚಿಸುವುದು ಕಾಂಗ್ರೆಸ್ ಹೈಕಮಾಂಡ್‌ನ ಹಳೆ ಚಾಳಿಯೂ ಹೌದು. ಹಿಂದೆ ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾದ ಸಂದರ್ಭದಲ್ಲೂ ಸಮನ್ವಯ ಸಮಿತಿ ಇತ್ತು. ಆಗಲೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಚ್.ಪಾಟೀಲ್ ಜತೆ ಅರಸು ಅವರಿಗೆ ಭಿನ್ನ ಧೋರಣೆ ಇತ್ತು. ಆಗ ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಸಾಧಿಸಲು ಹುಟ್ಟಿಕೊಂಡ ಸಮನ್ವಯ ಸಮಿತಿಗೆ ಸಭೆ ನಡೆಸುವುದಕ್ಕೂ ಮುಹೂರ್ತ ಸಿಗುತ್ತಿರಲಿಲ್ಲ. ಈ ಸತ್ಯ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರಿಗೂ ಗೊತ್ತು. ಆದರೂ ಇವರಿಬ್ಬರು ಬದಲಾದ ಪರಿಸ್ಥಿತಿಯಲ್ಲಿ 'ಕೋತಿ ಗಾಯ ಕೆರೆದು ಹುಣ್ಣು ' ಮಾಡಿಕೊಂಡ ಸ್ಥಿತಿ ತಂದಿಟ್ಟಿಕೊಂಡಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದರೂ ಚುನಾವಣೆಯಲ್ಲಿ ಸೋತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಯಂತ್ರಿಸುವ ವಾಂಛೆ ಮೊದಲ ದಿನದಂದಲೇ ಹುಟ್ಟಿಕೊಂಡಿತ್ತು. ಜತೆಗೆ ಸಚಿವ ಸ್ಥಾನ ವಂಚಿತರಾದ ಕೆಲ ಮೂಲ ಕಾಂಗ್ರೆಸಿಗರು ಇದಕ್ಕೆ ಸಾತ್ ನೀಡಿದರು. ಕೆಪಿಸಿಸಿ ಕಡೆಯಿಂದ ಸಮನ್ವಯ ಸಮಿತಿ ರಚನೆ ಒತ್ತಡ ಹೈಕಮಾಂಡ್ ಮೇಲೆ ಆಗಾಗ ಬೀಳುತ್ತಲೇ ಇತ್ತು. ಇದಕ್ಕೆ ಸಮಬಲವಾಗಿ ಎಐಸಿಸಿ ಮಟ್ಟದಲ್ಲಿ ಪ್ರಬಲರಾಗಿರುವ ಸಿದ್ದರಾಮಯ್ಯ ಬೆಂಬಲಿಗರು ಅದನ್ನು ತಡೆಯುವ ಪ್ರಯತ್ನ ನಡೆಸುತ್ತಲೇ ಇದ್ದರು. ಮಾತ್ರವಲ್ಲ ಸಮನ್ವಯ ಸಮಿತಿಯಲ್ಲಿ ಸರ್ಕಾರ ಹಾಗೂ ಪಕ್ಷದ ತಲಾ ಇಬ್ಬರು ಪ್ರತಿನಿಧಿಗಳು ಇರಬೇಕು ಎಂಬ ವಾದ ಮುಂದಿಡಲಾಗಿತ್ತು. ತಮಗೆ ನಿಷ್ಠರಾದ ಸಚಿವರೇ ಆ ಸದಸ್ಯರಾಗಿರಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಎರಡೂ ಕಡೆಯಿಂದಲೂ ಹಗ್ಗಜಗ್ಗಾಟ ತೀವ್ರವಾದಾಗ ಅನಿವಾರ್ಯವಾಗಿ ಸಮನ್ವಯ ಸಮಿತಿ ರಚನೆಯನ್ನೇ ಹೈಕಮಾಂಡ್ ತಾತ್ಕಾಲಿಕವಾಗಿ ಬದಿಗಿಟ್ಟಿತ್ತು. ಆ ಮೂಲಕ ಸಿದ್ದರಾಮಯ್ಯ ತಮ್ಮ 'ಕೈ' ನಿಮಗಿಂತ ಮೇಲಿದೆ ಎಂಬ ಸಂದೇಶವನ್ನು ಪರಮೇಶ್ವರ ಬಣಕ್ಕೆ ನೀಡಿದ್ದರು.
ಕಾಕತಾಳೀಯವೋ, ಮತಹಾಕಿದ ಜನತೆಯ ಪುಣ್ಯವೋ ಎಂಬಂತೆ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಎದುರಾಗಿದ್ದರಿಂದ ಪಕ್ಷ ಹಾಗೂ ಸರ್ಕಾರದ ನಡುವಿನ ವಿಮುಖ ಚಲನೆ ಒಂದು ಹಂತಕ್ಕೆ ಬಂತು. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವೂ ಲಭಿಸಿತು. ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೂ ಹೊರಟರು. ಆದರೆ ಅವರು ಬರುವಷ್ಟರಲ್ಲಿ ವಾತಾವರಣ ಮೊದಲಿನ ಸ್ಥಿತಿಗೆ ಬಂದಿತ್ತು. ಚೀನಾದಿಂದ ರಾಜ್ಯಕ್ಕೆ ಹಿಂತಿರುಗುವ ವೇಳೆಗೆ ಡಾ.ಪರಮೇಶ್ವರ ಇನ್ನೊಂದು ಇಕ್ಕಟ್ಟು ಸೃಷ್ಟಿಸಿಟ್ಟಿದ್ದರು. ಸಿದ್ದರಾಮಯ್ಯ ಸಂಪುಟದ ಎಲ್ಲ ಸಚಿವರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕೆಪಿಸಿಸಿ ಮೌಲ್ಯಮಾಪನ ಪರೀಕ್ಷೆ ನಡೆಸುತ್ತಿದೆ. ಇದಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಫರ್ಮಾನು ನೀಡಿದ್ದಾರೆ. ಹೈಕಮಾಂಡ್ ಆದೇಶ ಪಾಲಿಸುವುದು, ಅದನ್ನು ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ತಿಳಿಸುವುದಷ್ಟೇ ನನ್ನ ಕೆಲಸ ಎಂದು ಘೋಷಿಸಿ ಬಿಟ್ಟಿದ್ದರು.
ಸಿದ್ದರಾಮಯ್ಯನವರ ಪ್ರವಾಸದ ಸೊಬಗನ್ನೆಲ್ಲ ಈ ಹೇಳಿಕೆ ತಿಂದು ಹಾಕಿತ್ತು. ' ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕ್ಯಾಬಿನೆಟ್ ನಮ್ಮದು, ಪಕ್ಷ ಅವರದು. ಸಚಿವರ ಮೌಲ್ಯಮಾಪನಕ್ಕೆ ಕನಿಷ್ಠ ಒಂದು ವರ್ಷವಾದರೂ ಬೇಕು. ಇದು ಸಕಾಲವಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ವ್ಯಗ್ರ ಮನಸಿನಿಂದ ಘೋಷಿಸಿಬಿಟ್ಟರು. ಸಾಲದಕ್ಕೆ ಮೂಲ ಕಾಂಗ್ರೆಸಿಗರೂ ಸೇರಿದಂತೆ ಸಚಿವರಿಗೂ ಇದು ಬೇಡವಾಗಿತ್ತು. ಆದರೆ ಇದು ಎಐಸಿಸಿ ಆದೇಶ ಎಂಬುದು ಖಚಿತವಾಗುತ್ತಿದ್ದಂತೆ ಎಲ್ಲರೂ ಮಾತು ಬದಲಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅಲ್ಲಿಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ ಸಂಬಂಧ ಅಧಿಕೃತವಾಗಿ ಹಳಸಿತು.
ಇದರ ಬೆನ್ನಲ್ಲೇ ಹೊರಬಿದ್ದ ಸಮನ್ವಯ ಸಮಿತಿ ಪ್ರಕಟಣೆ ಸಿದ್ದರಾಮಯ್ಯ ಅವರನ್ನು ಒಂದು ಹಂತದ ಬೇಸರಕ್ಕೆ ದೂಡಿದ್ದು ಸುಳ್ಳಲ್ಲ. ಏಕೆಂದರೆ ಈ ಸಮಿತಿಯಲ್ಲಿ ಅವರು ಬಯಸಿದ ಒಬ್ಬನೇ ಒಬ್ಬ ವ್ಯಕ್ತಿಗೆ ಸ್ಥಾನ ಕಲ್ಪಿಸಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಂಪುಟದಲ್ಲಿ ಸ್ಥಾನ ಸಿಗದೇ ಸಿಟ್ಟುಗೊಂಡಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಸಮನ್ವಯ ಸಮಿತಿಯಲ್ಲಿ ಪಕ್ಷದ ಪ್ರತಿನಿಧಿಯಾಗಿ ನೇಮಿಸಲಾಗಿತ್ತು. ಸಂಚಾಲಕನ ಸ್ಥಾನ ಡಾ.ಪರಮೇಶ್ವರ ಅವರಿಗೆ ದಕ್ಕಿತ್ತು.
ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ನಾಟಕ. ಹೇಳಿಕೆ, ಟೀಕೆ, ಪತ್ರ ವ್ಯವಹಾರಗಳ ಪ್ರಹಸನ ಆರಂಭಗೊಂಡಿದೆ. ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಹೊತ್ತಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಹಿಂದ ಮತ್ತು ದಲಿತ- ಅಲ್ಪಸಂಖ್ಯಾತರ ಓಲೈಕೆಯೊಂದಿಗೆ ಮೂಲ ಕಾಂಗ್ರೆಸ್ ಬಣ ಶಸ್ತ್ರಸಜ್ಜಿತರಾಗಿ ಎದ್ದು ನಿಂತಿದೆ. ಡಾ.ಪರಮೇಶ್ವರ ಅವರಂತೂ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವುದು ತಮ್ಮದೇ ಸರ್ಕಾರ ಎಂಬುದನ್ನು ಮರೆತು ಟೀಕೆಗೆ ಇಳಿದಿದ್ದಾರೆ. ಬಜೆಟ್‌ನಲ್ಲಿ ನಿಗದಿಯಾದ ಹಣ ಖಜಾನೆಯಲ್ಲಿ ಭದ್ರವಾಗಿರಬಾರದು. ಅದರ ಲಾಭ ಜನರಿಗೆ ತಲುಪಬೇಕು ಎನ್ನುವ ಮೂಲಕ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಟೀಕಿಸಿದ್ದಾರೆ. ಇದು ಹತಾಶೆಯ ಹೇಳಿಕೆಯೋ, ದ್ವೇಷದ ಮಾತೋ, ಪ್ರಜೆಗಳ ಮೇಲಿನ ಸದ್ಭಾವನೆಯೋ ಗೊತ್ತಿಲ್ಲ !
ಇದರ ನಡುವೆ ನಡೆದ ಇನ್ನೊಂದು ಬೆಳವಣಿಗೆ ಗಮನಾರ್ಹ. 'ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪರಮೇಶ್ವರ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾನು ಸುಮ್ಮನಿದ್ದೆ. ಈದರೆ ಈಗ ದಲಿತರಿಗೆ ಅನ್ಯಾಯವಾಗಿದೆ. ನನಗೆ ಸೋಲಾದರೂ ಚಿಂತೆಯಿಲ್ಲ ಕಾಂಗ್ರೆಸ್‌ನ್ನು ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳುಹಿಸಿ' ಎಂದು ಚಿಕ್ಕೋಡಿಯ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆ ನೀಡಿದ್ದಾರೆ. ಇದು ಜಿಗಜಿಣಗಿ ಅವರ ಸಹಜ ಕೋಪವೋ, ಬೇರೆ ಯಾವುದಾದರೂ ಸಂಗತಿ ಕೆಲಸ ಮಾಡಿದೆಯೋ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಇದರ ಬೆನ್ನಲ್ಲೇ ಡಾ.ಯು.ಆರ್.ಅನಂತಮೂರ್ತಿ, ಸುರೇಶ್ ಹೆಬ್ಳೀಕರ್, ಪ.ಮಲ್ಲೇಶ್, ಎಸ್.ಜಿ.ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ ಅವರನ್ನು ಒಳಗೊಂಡ ನಾಡಿನ 'ಪ್ರಜ್ಞಾವಂತ' ಸಾಹಿತಿಗಳ ಬಳಗ ಬಹಿರಂಗ ಪತ್ರ ಬರೆದಿದೆ. ಸರ್ಕಾರದ ಸಚಿವರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದಕ್ಕೆ ಐಐಎಂಬಿ ಸಲಹೆ ಪಡೆಯುವುದಾಗಿ ಡಾ.ಪರಮೇಶ್ವರ ಪ್ರಕಟಿಸಿದ್ದಾರೆ. ಈ ಐಐಎಂಬಿ ಅವರು ಸ್ವರ್ಗದಿಂದ ಇಳಿದು ಬಂದಿದ್ದಾರೆಯೇ ? ಹಾಗಾದರೆ ಅವರನ್ನು ಮೌಲ್ಯಮಾಪನ ಮಾಡುವವರು ಯಾರು ? ಸಚಿವರ ಕಾರ್ಯಕ್ಷಮತೆ ಪರೀಕ್ಷಿಸುವ ಪಕ್ಷದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಾಮರ್ಥ್ಯ ಪರೀಕ್ಷೆ ಮಾಡುವವರು ಯಾರು ? ರಾಜನೀತಿ ಬಲ್ಲವರಿಂದ ಮೌಲ್ಯಮಾಪನ ಮಾಡಿಸಿ. ಜತೆಗೆ ಕಳೆದ ಚುನಾವಣೆಯಲ್ಲಿ ಸೋತವರು ಈ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರ ಇರಬೇಕು' ಎಂದು ತಾಕೀತು ಮಾಡಿದ್ದಾರೆ.
ಇದು ನೇರವಾಗಿ ಪರಮೇಶ್ವರ ಅವರನ್ನು ಉದ್ದೇಶಿಸಿ ಹೇಳಿದ್ದೆಂದು ಬೇರೆ ಹೇಳಬೇಕಿಲ್ಲ. ಜತೆಗೆ ಡಾ. ಅನಂತಮೂರ್ತಿಯವರಂತೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದನ್ನು ನೋಡುವುದಕ್ಕಾಗಿಯೇ ನಾನು ವಿಧಾನಸೌಧಕ್ಕೆ ಬಂದಿದ್ದೇನೆ ಎಂದು ಹಿಂದೊಮ್ಮೆ ಹೇಳಿದ್ದರು. ಹೀಗಾಗಿ ಈ ಪತ್ರ ಯಾರು ಬರೆಸಿರಬಹುದು? ಅಥವಾ ಯಾರ ಪರವಾಗಿ ಬರೆದಿರಬಹುದು? ಎಂಬುದೂ ನಿಚ್ಚಳವಾಗಿದೆ.
ಈ ಎರಡು ವಿದ್ಯಮಾನ ಕಾಂಗ್ರೆಸ್ ವಲಯದಲ್ಲಿ ಮೊತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಹಾಗೂ ಪರಮೇಶ್ವರ ನಡುವೆ ಮಡುಗಟ್ಟಿದ್ದ 'ದ್ವೇಷ ಹಾಗೂ ತ್ವೇಷ'ಮಯ ವಾತಾವರಣಕ್ಕೆ ಇದು ತುಪ್ಪ ಸುರಿದಿದೆ.
ಈಗ ನಿಜಕ್ಕೂ ಕಾಂಗ್ರೆಸ್‌ಗೆ ಸಮನ್ವಯ ಸಮಿತಿ ಅಗತ್ಯ. ಆದರೆ ಅದು ಪಕ್ಷ ಹಾಗೂ ಸರ್ಕಾರದ ನಡುವೆ ಹೊದಾಣಿಕೆ ಸೃಷ್ಟಿಸುವುದಕ್ಕಲ್ಲ. ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಪರಮೇಶ್ವರ ನಡುವೆ ಸಮನ್ವಯ ಸಾಧಿಸುವುದಕ್ಕೆ. ವಿಚಿತ್ರವೆಂದರೆ ಈ ಕೆಲಸ ಮಾಡುವುದಕ್ಕೆ ಪಕ್ಷದ ಯಾವೊಬ್ಬ ನಾಯಕನಿಗೂ ಮನಸ್ಸಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸೃಷ್ಟಿಯಾದ ಈ ಕಂದರ ಪಕ್ಷದ ಮೇಲೆ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಅದು ಪ್ರತಿಕೂಲವಾಗಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಆಗ ಹೈಕಮಾಂಡ್ ಕ್ರಮ ತೆಗೆದುಕೊಳ್ಳುವುದೂ ಸುಳ್ಳಲ್ಲ. ಅಲ್ಲಿಗೆ ದ್ವೇಷ-ತ್ವೇಷ ಬಿತ್ತಿದ್ದವರ ಉದ್ದೇಶ ಗೆದ್ದಂತೆ.

ಲಗೋರಿ: ಅಸಮನ್ವಯ ಹುಟ್ಟು ಹಾಕುವುದಕ್ಕೆ ಕಾಂಗ್ರೆಸ್ ಸೃಷ್ಟಿಸುವ ವ್ಯವಸ್ಥೆಗೆ ಸಮನ್ವಯ ಸಮಿತಿ ಎನ್ನಬಹುದು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.