ಪ್ರಾರ್ಥನೆಯನ್ನು ಮರೆತು ಎಷ್ಟು ದಿನಗಳಾಯಿತು?
ಗೆಳತಿ ಅಸಮಾಧಾನದಿಂದ ಹೇಳಿದಳು: 'ಆಧುನಿಕತೆಯ ಹೆಸರಲ್ಲಿ, ಬದಲಾವಣೆಯ ನೆಪದಲ್ಲಿ ನಾವು ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನೇ ಮರೆತು ಬಿಡ್ತಾ ಇದೀವಿ. ಬರೀ ಹತ್ತು ನಿಮಿಷದ ಮಟ್ಟಿಗೆ ಪ್ರಾರ್ಥನೆಗೆ ಕೂರಬೇಕು ಎಂಬ ಮನಸ್ಸೂ ಈಗಿನವರಿಗೆ ಇಲ್ಲ. ಈಗ ಎಲ್ಲರೂ ಹಣದ ಹಿಂದೆ, ಆಸೆ ಎಂಬ ಮಾಯಾಜಿಂಕೆಯ ಹಿಂದೆ ಓಡ್ತಾ ಇದ್ದಾರೆ. ನಾವು ಚಿಕ್ಕವರಿದ್ದಾಗ ಖಂಡಿತ ಹೀಗಿರಲಿಲ್ಲ ಅಲ್ವೇನೆ? ಆಗ ಮನೇಲೂ ಪ್ರಾರ್ಥನೆಗೆ ಕೂರಬೇಕಿತ್ತು. ಶಾಲೆಯಲ್ಲೂ ಮತ್ತೆ ರಿಪೀಟ್ ಮಾಡಬೇಕಿತ್ತು. ಆದರೆ ಈಗ ಎಲ್ಲರಿಗೂ ಒಂದಲ್ಲ ಒಂದು ಗಡಿಬಿಡಿ. ಎಲ್ಲರ ಜೇಬಿನ ತುಂಬಾ ಹಣವೇನೋ ಇರುತ್ತೆ. ಆದರೆ ಮನಸ್ಸಿನ ತುಂಬಾ ನೆಮ್ಮದಿ ಇರುತ್ತಾ... ? ಬಹುಶಃ ಇರೋದಿಲ್ಲ...'
ಅವಳ ಮಾತಲ್ಲಿ ಸತ್ಯವಿದೆ ಅನ್ನಿಸಿತು. ಮರುಕ್ಷಣವೇ ನೆನಪಾದದ್ದು ನನ್ನ ಬಾಲ್ಯ. ಆಗೆಲ್ಲಾ ಮೊದಲೇ ದೇವರ ಫೋಟೋ ನೋಡಿ, ಆನಂತರವೇ ಎದ್ದೇಳಬೇಕಿತ್ತು. ನಂತರ ಸ್ನಾನ ಮುಗಿಸಿ ಅಮ್ಮನ ಮುಂದೆ ನಿಂತರೆ-'ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ' ಎಂದೋ 'ಸ್ವಾಮಿ ವೆಂಕಟರಮಣಾ, ಕಾಪಾಡು ಕಾಪಾಡು...' ಎಂದೋ ಹೇಳಬೇಕಿತ್ತು. ಮನೆಮನೆಯ ಪರಿಸರಕ್ಕೆ ತಕ್ಕಂತೆ ದೇವರು ಬದಲಾಗುತ್ತಿದ್ದ. ಪ್ರಾರ್ಥನೆಯ ಸಾಲುಗಳೂ ಬದಲಾಗುತ್ತಿದ್ದವು. ಆದರೆ, ಆ ಪ್ರಾರ್ಥನೆಯಲ್ಲಿನ ಒಟ್ಟು ಭಾವ ಒಂದೇ ಆಗಿರುತ್ತಿತ್ತು. 'ದೀನ ನಾನು ಸಮಸ್ತ ಲೋಕಕೆ... ಎಂದು ಆರಂಭಿಸಿ ದೇವ ರಕ್ಷಿಸು ಎಮ್ಮನನವರತ' ಎಂದು ಮುಗಿಸುವ ಹೊತ್ತಿಗೆ, ನಮ್ಮನ್ನು ಕಾಪಾಡಲಿಕ್ಕೆಂದೇ ಒಂದು ಅಗೋಚರ ಶಕ್ತಿಯಿದೆ ಎಂಬ ನಂಬಿಕೆ ಎಲ್ಲರಿಗೂ ಬರುತ್ತಿತ್ತು. ಆದರೆ, ಈಗ ಪ್ರಾರ್ಥನೆ ಎಂಬ ಪದವೇ ಹಲವರಿಗೆ ಮರೆತಿದೆ. ಸಂಕಟ ಬಂದಾಗ ಅಯ್ಯೋ ದೇವರೇ ಎನ್ನುವುದು ಎಲ್ಲರ ಸಹಜ ನಡವಳಿಕೆಯಾಗಿದೆ. ಈ ಮಾತಿಗೆ ಸಾಕ್ಷಿಯಾಗುವ ಒಂದು ಪುಟ್ಟ ಕತೆ ಇಲ್ಲಿದೆ.
ಅದೊಮ್ಮೆ, ಸುರಸುಂದರಿಯೊಬ್ಬಳು, ಒಬ್ಬ ಯುವಕನ ಕಣ್ಣಿಗೆ ಬಿದ್ದಳು. ನೋಡಿದ ತಕ್ಷಣವೇ ಅವಳ ಮೇಲೆ ಆಸೆಯಾಯಿತು. ಈತ ತಕ್ಷಣವೇ ಕೇಳಿದ: 'ಸುಂದರೀ, ನನ್ನನ್ನು ಮದುವೆ ಆಗ್ತೀಯಾ?' ಆಕೆಯೂ ಮರುಮಾತಿಲ್ಲದೆ ಒಪ್ಪಿದಳು. ಆನಂತರ, ಅವಳು ತನಗಿಂತ ಎಂಟು ವರ್ಷ ದೊಡ್ಡವಳೆಂದು ಹುಡುಗನಿಗೆ ಗೊತ್ತಾಯಿತು. ಅವನು ತಂದೆಯ ಬಳಿ ಹೋಗಿ ನಡೆದಿದ್ದನ್ನು ವಿವರಿಸಿದ. ಮಗನ ಮನಸ್ಸು ಗೆದ್ದವಳನ್ನು ಒಮ್ಮೆ ನೋಡುವ ಮನಸ್ಸು ತಂದೆಗೂ ಬಂತು. ಸರಿ, ತಂದೆ-ಮಗನ ಸವಾರಿ ಹುಡುಗಿಯ ಬಳಿಗೆ ಬಂತು. ಅವಳನ್ನು ನೋಡಿದ ನಂತರ ತಂದೆಯ ಮನಸ್ಸೇ ಬದಲಾಗಿ ಹೋಯಿತು. ಆತ ಮಗನನ್ನು ಬದಿಗೆ ಕರೆದು ಹೇಳಿದ: ಈ ಹೆಣ್ಣು ನಿನಗಿಂತ ಹಿರಿಯವಳು. ಅಂಥವಳನ್ನು ಸಂಭಾಳಿಸಬೇಕೆಂದರೆ ಹಿರಿತನ ಬೇಕು. ಅನುಭವವೂ ಇರಬೇಕು. ಈ ಗುಣ ನನಗಿದೆ. ನೀನು ತೆಪ್ಪಗಿರು ಇವಳನ್ನು ನಾನೇ ಮದುವೆ ಆಗ್ತೇನೆ...'
ತಂದೆಯ ಮಾತು ಕೇಳಿ ಮಗನಿಗೆ ಸಿಟ್ಟು ಬಂತು. ಆತ ಪೊಲೀಸ್ ಠಾಣೆಗೆ ಹೋಗಿ ತಂದೆಯ ವಿರುದ್ಧ ದೂರು ಕೊಟ್ಟ. ಒಂದು ಹುಡುಗಿಗಾಗಿ ಅಪ್ಪ-ಮಗನೇ ಹೊಡೆದಾಟಕ್ಕೆ ನಿಂತಿರುವುದು ಕಂಡು ಇನ್ಸ್‌ಪೆಕ್ಟರ್‌ಗೂ ಕುತೂಹಲವಾಯಿತು. ಮೂವರೂ ಆ ಹುಡುಗಿಯ ಬಳಿಗೇ ಹೋಗೋಣ. ಅವಳು ಏನು ಹೇಳ್ತಾಳೋ ಅದಕ್ಕೆ ನೀವು ಒಪ್ಕೊಳ್ಳಿ ಎಂದು ಮೊದಲೇ ತಿಳಿಸಿ, ತಾನೂ ಅವರೊಂದಿಗೆ ಹೋದ ಇನ್ಸ್‌ಪೆಕ್ಟರ್. ಅವಳನ್ನು ನೋಡಿದಾಕ್ಷಣ ಅವನ ಮನದಲ್ಲೂ ಪ್ರೀತಿಯ ಗುಲಾಬಿ ಅರಳಿತು. ಆತ ಅಪ್ಪ-ಮಗನಿಗೆ ಎರಡೇಟು ಹಾಕಿ, ಗುಲ್ಡೂಗಳಾ, ಇಂಥ ಸುಂದರಿಯ ಕೈ ಹಿಡಿಯಲು ನಾನೇ ಸರಿಯಾದ ಗಂಡು. ತೆಪ್ಪಗೆ ಎದ್ದು ಹೋಗಿ ಇಲ್ಲಿಂದ... ಎಂದು ಅಬ್ಬರಿಸಿದ.
ಈ ಮಾತಿಂದ ಅಪ್ಪ-ಮಕ್ಕಳ ಸಿಟ್ಟು ನೆತ್ತಿಗೇರಿತು. ಅವರು ಮಂತ್ರಿಗೇ ದೂರು ಕೊಟ್ಟರು. ಸರಿ, ವಿಚಾರಣೆಯ ನೆಪದಲ್ಲಿ ಮಂತ್ರಿಗಳ ಸವಾರಿಯೂ ಆ ಯುವತಿಯ ಬಳಿಗೆ ಬಂತು. ಏನಾಶ್ಚರ್ಯ, ಅವಳನ್ನು ನೋಡುತ್ತಿದ್ದಂತೆಯೇ ಮಂತ್ರಿಗಳ ಮನಸ್ಸಿನ ತಾಳವೂ ತಪ್ಪಿ ಹೋಯಿತು. ಅಪ್ಪ-ಮಗ ಹಾಗೂ ಇನ್ಸ್ ಪೆಕ್ಟರ್‌ನನ್ನು ಕರೆದು-'ಈ ಕ್ಷಣದಿಂದ ಅವಳು ನನ್ನ ಸ್ವತ್ತು. ನೀವೆಲ್ಲ ಹಿಂತಿರುಗಿ ನೋಡದೆ ಇಲ್ಲಿಂದ ರೈಟ್ ಹೇಳ್ತಾ ಇರಿ' ಅಂದರು. ಮುಂದೆ ಏನಾಯಿತೆಂದರೆ, ದೂರು ರಾಜನನ್ನು ತಲುಪಿತು.
ಎಲ್ಲ ವಿಷಯ ತಿಳಿದು ಆ ಹುಡುಗಿಯಿದ್ದ ಜಾಗಕ್ಕೆ ಮಹಾರಾಜರೂ ಬಂದರು. ಅವಳ ಹಾಲುಗೆನ್ನೆ, ಜೇನುತುಟಿ, ನವಿಲುಗರಿಯಂಥಾ ಮುಂಗುರುಳು ಹಾಗೂ ಅಪ್ಸರೆಯಂಥಾ ಸೌಂದರ್ಯ ಕಂಡವರಿಗೆ ಈಕೆ ನನ್ನ ರಾಣಿಯಾಗಲು ತಕ್ಕವಳು ಅನ್ನಿಸಿಬಿಟ್ಟಿತು. ತಾವು ನ್ಯಾಯ ಹೇಳಲು ಬಂದ ಸಂಗತಿಯನ್ನು ತಕ್ಷಣವೇ ಮರೆತು-'ಈ ಸುಂದರಿ ಈಗಿನಿಂದಲೇ ನನ್ನವಳು' ಎಂದೇ ಬಿಟ್ಟರು. ಮರುಕ್ಷಣವೇ ಉಳಿದವರೆಲ್ಲ ರಾಜನೊಂದಿಗೆ ಜಗಳಕ್ಕೆ ನಿಂತರು.
ಅದುವರೆಗೂ ಸುಮ್ಮನಿದ್ದ ಹುಡುಗಿ-'ಈಗ ಒಂದು ಕೆಲ್ಸ ಮಾಡೋಣ. ನಾನು ಓಡಲು ಶುರು ಮಾಡ್ತೇನೆ. ಯಾರು ನನ್ನನ್ನು ಬೇಗ ಹಿಡೀತಾರೋ ಅವರನ್ನು ಮದುವೆ ಆಗ್ತೇನೆ' ಅಂದಳು. ಮರುಕ್ಷಣವೇ ಓಟ ಶುರುವಾಯಿತು. ಆ ಸುಂದರಿ ಮುಂದೆ ಮುಂದೆ. ರಾಜ, ಮಂತ್ರಿ, ಇನ್ಸ್‌ಪೆಕ್ಟರ್, ಅಪ್ಪ ಮತ್ತು ಮಗ ಅವಳ ಹಿಂದೆ. ಹೇಗಾದರೂ ಸರಿ, ಅವಳನ್ನು ಹಿಡಿಯಲೇಬೇಕು ಎಂದು ಓಡುತ್ತಿದ್ದಾಗಲೇ, ಈ ಐದೂ ಜನ ದಾರಿಯಲ್ಲಿದ್ದ ಒಂದು ಗುಂಡಿಯೊಳಗೆ ಬಿದ್ದು ಹೋದರು. ಒಂದೆರಡು ನಿಮಿಷದ ನಂತರ, ಅದೆಲ್ಲಿಂದಲೋ ಆ ಸುಂದರಿಯ ಮಾತು ಕೇಳಿಸಿದವು: ನಾನ್ಯಾರು ಅಂತ ಗೊತ್ತಾಯ್ತಲ್ಲ, ನಾನು ಆಸೆ! ನಾನು ಮೋಹ! ನಾನು ಕಾಮ!! ನನ್ನ ಹಿಂದೆ ಬಿದ್ದವರಿಗೆಲ್ಲ, ಈಗ ನಿಮಗೆ ಆಗಿದೆಯಲ್ಲ; ಅಂಥದೇ ಗತಿ ಒದಗುತ್ತೆ. ನೆನಪಿರಲಿ.
ಅವಳ ಮಾತು ಮುಗಿದಾಕ್ಷಣ ಎಲ್ಲರಿಗೂ ಜೀವಭಯ ಶುರುವಾಯಿತು. ತಕ್ಷಣವೇ ದೇವರ ನೆನಪಾಗಿ, ಎಲ್ಲರೂ ಕೂಗಿದರು: ಕಾಪಾಡು ದೇವರೇ...
ಈ ಕಥೆಯಲ್ಲಿ ಬಂದರಲ್ಲ; ಅವರಂಥದೇ ಮನಸ್ಥಿತಿ ಎಷ್ಟೋ ಸಂದರ್ಭಗಳಲ್ಲಿ ನಮ್ಮದೂ ಆಗಿರುತ್ತದೆ! ಸದಾ ಆಸೆಯ ಹಿಂದೆಯೇ ಅಲೆಯುವುದು, ಸಂಕಟ ಬಂದಾಗಷ್ಟೇ ವೆಂಕಟರಮಣಾ ಎನ್ನುವುದು ಯಾರಿಗೂ ಶೋಭೆ ತರುವುದಿಲ್ಲ. ನೆನಪಿಡಿ: ಹತ್ತು ನಿಮಿಷದ ಪ್ರಾರ್ಥನೆಯಿಂದ, ಧ್ಯಾನದಿಂದ, ಉಪಾಸನೆಯಿಂದ ಮನಸ್ಸಿನ ಚಾಂಚಲ್ಯ ದೂರವಾಗುತ್ತದೆ. ಪ್ರಾರ್ಥನೆಯ ಕಾರಣದಿಂದಲೇ ಧೈರ್ಯ ಜೊತೆಯಾಗುತ್ತದೆ. ರಾಗ-ದ್ವೇಷದ ಮೇಲೆ ಹತೋಟಿ ಸಾಧಿಸುವುದೂ ಸಾಧ್ಯವಾಗುತ್ತದೆ. ನಾಡೆಂಬ ನಾಡೇ ನವರಾತ್ರಿಯ ಸಡಗರಕ್ಕೆ ತೆರೆದುಕೊಂಡಿರುವ ಸಂದರ್ಭದಲ್ಲಿ ಯಾಕೋ ಹೀಗೆಲ್ಲ ಹೇಳಬೇಕು ಅನ್ನಿಸಿತು.
ಈ ನವರಾತ್ರಿ ಎಲ್ಲರಿಗೂ ಶುಭವನ್ನು ತರಲಿ.
-ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

