ಅಂಕಣಗಳು

ಏಳುಬೀಳುಗಳೊಂದಿಗೆ ಗುದ್ದಾಡುತ್ತಲೇ ಬದುಕು ಕಟ್ಟಿಕೊಂಡ ಲಾಡರು

ಸಮುದಾಯ ಯಾವುದೇ ಆದರೂ ಅದರ ಹಿಂದೆ ಭಾರಿ ಇತಿಹಾಸವೇ ಅಡಗಿರುತ್ತದೆ...

Published On :

ಸಮುದಾಯ ಯಾವುದೇ ಆದರೂ ಅದರ ಹಿಂದೆ ಭಾರಿ ಇತಿಹಾಸವೇ ಅಡಗಿರುತ್ತದೆ. ಶ್ರೀಮಂತ ಇತಿಹಾಸ ಇದ್ದರೂ ಏಳುಬೀಳು ಸಹ ಹಿನ್ನೆಲೆಯಲ್ಲಿರುತ್ತದೆ. ಅಂತಹ ಸಮುದಾಯಗಳ ಸಾಲಿನಲ್ಲಿ ಕೇಳಿ ಬರುವ ಹೆಸರು 'ಲಾಡ'.
ಲಾಡ ಎಂಬುದು ಈಗ ಲಾಡ್ ಎಂದು ಪರಿವರ್ತನೆಯಾಗಿದೆ. ಅಂದಹಾಗೆ ಅತ್ಯಂತ ಶ್ರೀಮಂತ ಇತಿಹಾಸ ಹೊಂದಿರುವ ಸಮುದಾಯವೂ ಇದಾಗಿದೆ. ದೇಶದ ನಾನಾ ಭಾಗಗಳಲ್ಲಿ ಕಂಡು ಬರುವ ಸಮುದಾಯಗಳ ಹಿಂದೆ ವಲಸೆ ಎಂಬ ಕಥೆ ಇದ್ದೇ ಇರುತ್ತದೆ. ಲಾಡ ಸಮಾಜವೂ ಅದರಿಂದ ಹೊರತಾಗಿಲ್ಲ.
ಒಂದು ಪ್ರದೇಶದಲ್ಲಿ ನೆಲೆಸಿದ್ದ ಕುಟುಂಬಗಳು ಜೀವನೋಪಾಯ ಸೇರಿದಂತೆ ನಾನಾ ಕಾರಣಗಳಿಗೆ ವಲಸೆ ಹೋಗುತ್ತವೆ. ಹಾಗೆಯೇ ಲಾಡ ಸಮುದಾಯದ ಜನ ಮೂಲತ: ಗುಜರಾತ್‌ನವರು. ಅಲ್ಲಿಯ ಲಾಠ ಎಂಬ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದವರು. ಹಲವಾರು ಕಾರಣಗಳಿಂದ ಇವರು ಅಲ್ಲಿಂದ ವಲಸೆ ಹೊರಟು ದೇಶದ ನಾನಾ ಭಾಗಗಳಲ್ಲಿ ನೆಲೆಯೂರಿದ್ದಾರೆ. ಕರ್ನಾಟಕದಲ್ಲೂ ಈ ಸಮುದಾಯದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಸಣ್ಣಪುಟ್ಟ ವ್ಯಾಪಾರ ಇವರ ಕುಲ ಕಸುಬು ಆಗಿತ್ತು.  
ಅದರಲ್ಲೂ ಸುಂಗಧ ದ್ರವ್ಯಗಳ, ಎಲೆ, ಅಡಕೆ, ಹೊಗೆಸೊಪ್ಪು, ಅರಿಶಿಣ, ಕುಂಕುಮ ಮತ್ತಿತರ ವಸ್ತುಗನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವರು. ಇಂದಿಗೂ ಈ ಸಮುದಾಯದಲ್ಲಿ ಬಹುತೇಕ ಮಂದಿ ವ್ಯಾಪಾರಿಗಳಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಎಲ್ಲಿಯೋ ಕೆಲವರು ಮಾತ್ರ ಭಾರಿ ಪ್ರಮಾಣದಲ್ಲಿ ವ್ಯಾಪಾರ-ವಹಿವಾಟು ಮಾಡಿಕೊಂಡು ಸ್ಥಿತಿವಂತರಾಗಿದ್ದಾರೆ ಎನ್ನುತ್ತಾರೆ ಸಮಾಜದ ಹಿರಿಯರು. ಒಂದು ಅಧ್ಯಯನದ ಪ್ರಕಾರ ಈ ಲಾಡರು ಯೋಧರಾಗಿಯೂ ದೇಶಸೇವೆ ಸಲ್ಲಿಸಿದ್ದರಂತೆ. ಇದನ್ನು ಜಿ.ಎ. ಗ್ರಿಯರ್‌ಸನ್ ಎಂಬ ವಿದ್ವಾಂಸರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ.

ವಿಶಿಷ್ಟವಾದ ಆಚರಣೆಗಳು
ಜಯಪ್ರಕಾಶ್ ಎನ್.ಡಿ. ಲಾಡ್ ಎಂಬ ಲೇಖಕರು ಈ ಸಮುದಾಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಜೊತೆಗೆ ಸಮಾಜದ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರ ಪ್ರಕಾರ, ಲಾಡ ಜನಾಂಗ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ. ಅದರಲ್ಲೂ ಹೆಣ್ಣು ಮಕ್ಕಳು ಶಾಲೆ ಮೆಟ್ಟಿಲು ತುಳಿದವರಲ್ಲ. ಈಗೀಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಶಿಕ್ಷಣದ ಬಗ್ಗೆ ಅರಿವು ಮೂಡಿರುವುದರಿಂದ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿದೆ.
ನೂರಾರು ವರ್ಷಗಳ ಹಿಂದೆ ಲಾಡ ಸಮುದಾಯದಲ್ಲಿ ಹಲವಾರು ಆಚರಣೆಗಳು ಜಾರಿಯಲ್ಲಿದ್ದವು. ಅದರಲ್ಲಿ ಪ್ರಮುಖವಾಗಿದ್ದುದು ಘೋಷಾ ಪದ್ಧತಿ. ಸತಿ ಸಹಗಮನಕ್ಕೂ ಇವರಲ್ಲಿ ಅವಕಾಶ ಇತ್ತು. ಆದರೆ, ವಿಧವೆಯರು ಮರು ಮದುವೆ ಮಾಡಿಕೊಳ್ಳುವಂತಿರಲಿಲ್ಲ. ಇತರ ಸಮುದಾಯಗಳಂತೆ ಲಾಡರಲ್ಲೂ ಬಾಲ್ಯ ವಿವಾಹ ಪದ್ಧತಿ ಆಚರಣೆಯಲ್ಲಿತ್ತು. ನಿಲುವಂಗಿ, ಕಚ್ಚೆ ಪಂಚೆ, ತಲೆಗೆ ರುಮಾಲು ಇದು ಲಾಡ ಸಮುದಾಯದ ಪುರುಷರ ವಸ್ತ್ರ ವಿಶೇಷ. ಎಂದು ಜಯಪ್ರಕಾಶ್ ಎನ್.ಡಿ. ಲಾಡ್ ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಆರಾಧಿಸುವ ದೇವರುಗಳು
ಅಂಬಾ ಭವಾನಿ, ರೇಣುಕಾದೇವಿ, ಸವದತ್ತಿ ಎಲ್ಲಮ್ಮ, ಮೈಲಾರ ಲಿಂಗೇಶ್ವರ, ಸಿದ್ದೇಶ್ವರ, ಭೈರವ, ಆಂಜನೆಯ, ಲಕ್ಷ್ಮೀನರಸಿಂಹ, ಶ್ರೀನಿವಾಸ, ದತ್ತಾತ್ರೇಯ ಮತ್ತಿತರ ದೇವರುಗಳನ್ನು ಲಾಡರು ಪೂಜಿಸುತ್ತಾರೆ. ಎಲ್ಲ ಹಬ್ಬ, ಹರಿದಿನಗಳಲ್ಲೂ ಭಾಗಿ ಆಗುತ್ತಾರೆ. ಜಾತ್ರೆ, ರಥೋತ್ಸವಗಳಲ್ಲಿಯೂ ಇವರ ಪಾಲುದಾರಿಕೆ ಉಂಟು. ಅದರಲ್ಲೂ ಗ್ರಾಮ ದೇವತೆಗಳ ಉತ್ಸವಗಳಲ್ಲಿ ಸಕ್ರಿಯವಾಗಿ ಲಾಡರು ಭಾಗವಹಿಸುತ್ತಾರೆ. ಈ ಹಿಂದೆ ಲಾಡರಲ್ಲಿ ಅವಿಭಜಿತ ಕುಟುಂಬ ವ್ಯವಸ್ಥೆ ಜಾರಿಯಲ್ಲಿತ್ತು. ಅಂದರೆ, ಅಣ್ಣ-ತಮ್ಮಂದಿರು, ದಾಯಾದಿಗಳು, ಚಿಕ್ಕಪ್ಪಂದಿರು ಒಟ್ಟಾಗಿ ಒಂದೇ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರಂತೆ. ಅದಕ್ಕಾಗಿ 10-12 ಕೋಣೆಗಳ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರಂತೆ.

ವಿವಾಹ ಎಂಬ ಸಂಭ್ರಮ
ವಿಶೇಷ ಎಂದರೆ ಇವರಲ್ಲಿ ಮದುವೆ ಎಂಬುದು ಅತಿ ಮುಖ್ಯವಾದ ಘಟ್ಟ. ಹೀಗಾಗಿ ವಿವಾಹ ಆಚರಣೆ 10-12 ದಿನಗಳವರೆಗೆ ನಡೆಯುತ್ತಿತ್ತು. ಈಗ ಅದು ಒಂದೆರಡು ದಿನಗಳಿಗೆ ಬಂದು ನಿಂತಿದೆ. ಮದುವೆ ಸಂದರ್ಭದಲ್ಲಿ ಪ್ರತಿ ಶಾಸ್ತ್ರವನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿತ್ತು. ನಿಶ್ಚಿತಾರ್ಥ, ಲಗ್ನ ಶಾಸ್ತ್ರ, ವಧುವನ್ನು ಮನೆ ತುಂಬಿಸಿಕೊಳ್ಳುವುದು ಸೇರಿದಂತೆ ಹಲವಾರು ಅಚರಣೆಗಳಿತ್ತು. ಇದಲ್ಲದೆ, ಹೋಮ, ಹವನವೂ ಈ ಸಂದರ್ಭದಲ್ಲಿ ನಡೆಯುತ್ತಿತ್ತು.
ಮತ್ತೊಂದು ವಿಚಾರ ಎಂದರೆ ಲಾಡ ಸಮುದಾಯದಲ್ಲೂ ಒಂದೇ ಗೋತ್ರದವರು ಮದುವೆ ಆಗುವಂತಿಲ್ಲ. ಗಂಡು ಮತ್ತು ಹೆಣ್ಣಿನ ಜಾತಕ ಹೊಂದಾಣಿಕೆ ಆದರೆ ಮಾತ್ರ ವಿವಾಹಕ್ಕೆ ಸಮ್ಮತಿ ಸಿಗುತ್ತಿತ್ತು. ಜೊತೆಗೆ ಮದುವೆ ವೇಳೆ ಹಿರಿಯರು ವಿಧಿಸಿದ ಕಟ್ಟುಪಾಡುಗಳನ್ನು ಚಾಚೂತಪ್ಪದೆ ಪಾಲಿಸಬೇಕಿತ್ತು. ಒಂದೊಮ್ಮೆ ನಿಶ್ಚಯವಾದ ವಿವಾಹವೇನಾದರೂ ಮುರಿದು ಬಿದ್ದರೆ ಅದನ್ನು ಅಪರಾಧವೆಂಬಂತೆ ಪರಿಗಣಿಸಲಾಗುತ್ತಿತ್ತು ಎಂಬ ಅಂಶವನ್ನು ಜಯಪ್ರಕಾಶ್ ಅವರು ತಮ್ಮ ಅಧ್ಯಯನ ವರದಿಯಲ್ಲಿ ವಿವರಿಸಿದ್ದಾರೆ.
ಲಾಡರಲ್ಲಿಯೂ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ದಲಿತರು, ಕುಂಬಾರರು, ಅಕ್ಕಸಾಲಿಗರು, ಒಕ್ಕಲಿಗರು, ಪಾಟೀಲರು,ಮಲ್ಹಾರರು, ಗೋಸಾವಿಗಳು ಎಂಬ ವರ್ಗಗಳಿವೆ. ಗೋಸಾವಿ ಲಾಡರು, ಲಾಡ ಬ್ರಾಹ್ಮಣರು, ಮಹಾನುಭಾವ ಲಾಡರು, ಲಾಡ ವೈಶ್ಯರು, ಕೊಂಕಣದ ವೈಶ್ಯ ಲಾಡರು, ಸಿಂಧಿ ಲೋಹಾಣ ಲಾಡರು, ಸೋನಾರರು, ಶಿವಲಾಡರು, ಪ್ರಜಾಪತಿಗಳು ಎಂಬಿತ್ಯಾದಿ ಉಪ ಪಂಗಡಗಳನ್ನು ಸಮಾಜದಲ್ಲಿ ಗುರುತಿಸಲಾಗಿದೆ. ಒಂದೊಂದು ಪಂಗಡ ಒಂದೊಂದು ಪ್ರದೇಶದಲ್ಲಿ ಗುರುತಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಬೀದರ್, ಗುಲ್ಬರ್ಗ, ಬಿಜಾಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಮೈಸೂರು, ಮಂಡ್ಯ, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಲಾಡ ಕುಟುಂಬಗಳನ್ನು ಕಾಣಬಹುದು.

ಮೂಲ ಭಾಷೆ ಚೌರಾಸಿ
ಲಾಡ ಸಮುದಾಯದ ಮೂಲ ಭಾಷೆ ಚೌರಾಸಿ. ಆದರೆ, ಇದಕ್ಕೆ ಲಿಪಿ ಇಲ್ಲ. ಕರ್ನಾಟಕದಲ್ಲಿ ನೆಲೆಸಿರುವ ಮಂದಿ ಮಾತ್ರ ಈ ಭಾಷೆ ಬಳಸುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಈ ಜನಾಂಗದ ಗಣ್ಯರಿದ್ದಾರೆ. ರಾಜಕೀಯ, ಶಿಕ್ಷಣ, ರಂಗಭೂಮಿ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿದ್ದಾರೆ. ಉದ್ಯಮಿಗಳಾಗಿ ನಾನಾ ಮಂದಿ ಹೆಸರು ಮಾಡಿದ್ದಾರೆ. ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡಿದವರು ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ಅನಿಲ್ ಲಾಡ್. ಇವರು ಈ ಹಿಂದೆ ರಾಜ್ಯಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅನಿಲ್ ಮತ್ತು ಸಂತೋಷ್ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.

ಜನಸಂಖ್ಯೆ ಹೆಚ್ಚೇನೂ ಇಲ್ಲ
ಸಮುದಾಯದ ಮುಖಂಡರಾದ ಬೆಳಗಾವಿಯ ಅನಂತ ಲಾಡ್ ಅವರ ಪ್ರಕಾರ ಸಮುದಾಯದಲ್ಲಿ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತೆಯೇ ಶ್ರೀಮಂತ ಕುಟುಂಬಗಳೂ ಇವೆ. ಹೆಚ್ಚಿನವರು ವ್ಯಾಪಾರ ಮತ್ತು ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಜೀವನೋಪಾಯಕ್ಕೆ ಕೃಷಿಯನ್ನು ಅವಲಂಬಿಸಿದ ಕುಟುಂಬಗಳೂ ಇವೆ. ಬೆಳಗಾವಿಯಲ್ಲಿ ಈ ಜನಾಂಗದ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಜನಸಂಖ್ಯೆ ಪ್ರಮಾಣವೂ ಹೇಳಿಕೊಳ್ಳುವಂತಿಲ್ಲ. ಹೆಚ್ಚೆಂದರೆ 15-20 ಸಾವಿರ ಇರಬಹುದು. ಸರ್ಕಾರದ ಜಾತಿ ಪಟ್ಟಿಯಲ್ಲಿ ಲಾಡ ಸಮುದಾಯವನ್ನು ಸಾಮಾನ್ಯ ವರ್ಗಕ್ಕೆ ಸೇರಿಸಲಾಗಿದೆ ಎನ್ನುತ್ತಾರೆ ಅವರು. ಮೊದಲು ಹೆಣ್ಣು ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಿದ್ದರು. ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ.
ಶ್ರೀಮಂತ ಇತಿಹಾಸ ಹೊಂದಿದ್ದರೂ ಸಂಘಟನೆಯಲ್ಲಿ ಲಾಡ ಸಮುದಾಯದ ಜನ ಹಿಂದೆ ಬಿದ್ದಿದ್ದಾರೆ ಎಂದು ಹೇಳಬಹುದು. ಸಂಘಟನೆ ಎಂಬುದು ತಾಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿದೆಯೇ ಹೊರತು ರಾಜ್ಯ ಮಟ್ಟಕ್ಕೆ ವಿಸ್ತಾರವಾಗಿಲ್ಲ. ಮುಂದಿನ ದಿನಗಳಲ್ಲಾದರೂ ಮುಖಂಡರಿಂದ ಆ ಕೆಲಸವಾಗಲಿ ಎನ್ನುವುದು ಸಮಾಜದ ಹಲವರ ಅನಿಸಿಕೆ.

- ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.