'ಮಲೆನಾಡ ಗಾಂಧಿ' ಗೋವಿಂದೇಗೌಡರೊಂದಿಗೆ ಮಧುರ ಕ್ಷಣ
ಮಲೆನಾಡಿನಲ್ಲಿ ಎಲ್ಲಿ ನೋಡಿದರೂ ಹಸುರಿನ ಚಾದರ. ಆಕಾಶ ತನ್ನೊಡಲಿನಲ್ಲಿರುವ ಎಲ್ಲ ...

ಮಲೆನಾಡಿನಲ್ಲಿ ಎಲ್ಲಿ ನೋಡಿದರೂ ಹಸುರಿನ ಚಾದರ. ಆಕಾಶ ತನ್ನೊಡಲಿನಲ್ಲಿರುವ ಎಲ್ಲ ಮಳೆಯನ್ನು ಸುರಿದು ಖಾಲಿ ಮಾಡಿಕೊಂಡು ಕುಳಿತಿದೆ. ಮಳೆ ಅಂದ್ರೆ ಜನರಿಗೆ ಮಗಚಿಟ್ಟು ಹಿಡಿಯುವುದೊಂದೇ ಬಾಕಿ. ಆ ರೀತಿ ಸುರಿದು ಬಿಟ್ಟಿದೆ. ಆದರೂ ಆಗಸಕ್ಕೆ ಸಮಾಧಾನವಿಲ್ಲ. ಅಕ್ಟೋಬರ್ ಮೆಟ್ಟಿದರೂ ದಿನಕ್ಕೆ ನಾಲ್ಕು ಸಲ ತೀರ್ಥ ಸಂಪ್ರೋಕ್ಷಿಸಿ ಹೋಗುತ್ತದೆ. ಭೂರಮೆಯ ವೈಭವ, ಹಸುರಿನ ದಟ್ಟತನ, ಮಣ್ಣಿನ ಕಂಪು, ಪರಿಸರದ ಗಮ್ಯ, ನೀರಿನ ಸಡಗರ, ಮರಗಳ ಧಿಮಾಕು, ಕೆರೆಗಳ ವಿಶಾಲ ಹೃದಯವನ್ನು ಮಲೆನಾಡೆಂಬ ಭವ್ಯ ಷೋಕೇಸ್ ಪ್ರದರ್ಶನಕ್ಕಿಟ್ಟು ಕುಳಿತುಕೊಂಡಿದೆ. ಎಷ್ಟು ನೋಡಿದರೂ ಕಣ್ಣುಗಳಲ್ಲಿ ತೀರದ ಹಸಿವು. ಪ್ರತಿ ದೃಶ್ಯವೂ ಹಸುರಿನಿಂದ ಒದ್ದೆ. ಮನಸ್ಸು ಈ ನೆನಪಿನಲ್ಲಿಯೇ ಆರ್ದ್ರ.
ಮಲೆನಾಡಿನ ಈ ಎಲ್ಲ ಚೆಲುವನ್ನು ಹೀರಿಕೊಂಡು ಬೆಳೆದ ನರಸಿಂಹರಾಜಪುರಕ್ಕೆ ಮೊನ್ನೆ ಹೋಗಿದ್ದೆ. ಅದ್ಯಾಕೋ ಗೊತ್ತಿಲ್ಲ. ರಾಜ್ಯದ ಎಲ್ಲ ತಾಲೂಕುಗಳಿಗೂ ಹೋಗಿದ್ದರೂ ಇದೊಂದು ಬಿಟ್ಟು ಹೋಗಿತ್ತು. ನರಸಿಂಹರಾಜಪುರಕ್ಕೆ ಹೋಗಬೇಕೆಂದು ಬಹಳ ದಿನಗಳಿಂದ ಅಕಲು ಹಾಕುತ್ತಿದ್ದೆ. ಆದರೆ ಆಗಿರಲಿಲ್ಲ. ಮೊನ್ನೆ ಈ ಅವಕಾಶ ಬಂದಾಗ ತಪ್ಪಿಸಿಕೊಳ್ಳಲಿಲ್ಲ. ನನ್ನ ಆತ್ಮೀಯ ಸನ್ಮಿತ್ರರಾದ ವಿಧಾನಪರಿಷತ್ ಸದಸ್ಯ ಎಂ. ಶ್ರೀನಿವಾಸ್ ಅವರಿಗೆ ಅವರ ಹುಟ್ಟೂರಾದ ನರಸಿಂಹರಾಜಪುರದಲ್ಲಿ ಪೌರ ಸನ್ಮಾನ ಕಾರ್ಯಕ್ರಮವಿತ್ತು. ಆ ಊರಿನ ಯುವಕರೆಲ್ಲ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅತ್ಯಂತ ಶಿಸ್ತು, ಪ್ರೀತಿಯಿಂದ ಸಂಘಟಿಸಿದ್ದ ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಅಭಿಮಾನದ ಸಂಗತಿಯಾಗಿತ್ತು. ಹಿರಿಯ ಸಂಸದೀಯ ಮುತ್ಸದ್ಧಿ ಹಾಗೂ ಸ್ನೇಹಿತರಾದ ಎಂ.ಸಿ. ನಾಣಯ್ಯ, ಮಂತ್ರಿ ಅಭಯಚಂದ್ರ ಜೈನ್, ಶಾಸಕ ಜೀವರಾಜ್ ಜತೆ ವೇದಿಕೆಯಲ್ಲಿದ್ದೆ. ತಮ್ಮ ಹುಟ್ಟೂರಿನ ಅಭಿವೃದ್ಧಿಗೆ ಶ್ರೀನಿವಾಸ ಅವರು ಕಳೆದ ಏಳೆಂಟು ವರ್ಷಗಳಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಊರಿನ ಮಂದಿ ಈ ಸನ್ಮಾನವನ್ನು ಏರ್ಪಡಿಸಿದ್ದರು. ಒಬ್ಬ ವ್ಯಕ್ತಿ ಅದೆಷ್ಟೇ ಸಾಧನೆ ಮಾಡಿರಲಿ, ಅದೆಷ್ಟೇ ಶ್ರೀಮಂತನಾಗಲಿ, ಎತ್ತರಕ್ಕೆ ಏರಿರಲಿ, ದೊಡ್ಡ ದೊಡ್ಡ ಪ್ರಶಸ್ತಿಗಳು ಸಂದಾಯವಾಗಿರಲಿ, ಇದು ಒಂದು ತೂಕ. ಇವನ್ನೆಲ್ಲ ಪರಿಗಣಿಸಿ ಊರಿನ ಜನ ಮಾಡುವ ಸನ್ಮಾನವಿದೆಯಲ್ಲ ಅದು ಮತ್ತೊಂದು ತೂಕ. 'ನಿಮ್ಮ ಜೀವನದ ಅವಿಸ್ಮರಣೀಯ ನೆನಪು ಯಾವುದೆಂದು ಕೇಳಿದಾಗ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಭಾರತರತ್ನ ಪ್ರಶಸ್ತಿ ಬಂದಿದ್ದು ಅಥವಾ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಎಂದು ಹೇಳಿರಲಿಲ್ಲ. 'ನನ್ನ ಹುಟ್ಟೂರಾದ ರಾಮೇಶ್ವರದ ಜನತೆ ನನಗೆ ಮಾಡಿದ ಸನ್ಮಾನ' ಎಂದಿದ್ದರು. ಹುಟ್ಟೂರಿನ ಸನ್ಮಾನದ ಕಿಮ್ಮತ್ತು ಅಂಥದ್ದು. ಕಿಮ್ಮತ್ತು ಕಟ್ಟಲು ಆಗದಂಥದ್ದು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಅವರಿಗೆ ಸಂದ ಸನ್ಮಾನ ಅರ್ಥಪೂರ್ಣವಾಗಿ ಕಂಡಿತು.
ನಾನು ನರಸಿಂಹರಾಜಪುರಕ್ಕೆ ಹೋಗಲು ಮತ್ತೊಂದು ಕಾರಣವೂ ಇತ್ತು. ಎಷ್ಟು ಜನರಿಗೆ ಗೊತ್ತಿದೆಯೋ ಕಾಣೆ. 'ಪ್ರಜಾವಾಣಿ'ಯ ಪತ್ರಿಕೆಗೆ ಸುಮಾರು ಎರಡೂವರೆ ದಶಕಗಳ ಕಾಲ ಸಂಪಾದಕರಾಗಿದ್ದ 'ಛೂಬಾಣ' ಅಂಕಣ ಖ್ಯಾತಿಯ ಟಿಎಸ್ಸಾರ್ ಎಂದೇ ಪರಿಚಿತರಾಗಿರುವ ಟಿ.ಎಸ್. ರಾಮಚಂದ್ರರಾಯರು ಮೂಲತಃ ಇದೇ ಊರಿನವರು. ಅವರ ಸಹೋದರಿಯರಾದ ಖ್ಯಾತ ಕಾದಂಬರಿಗಾರ್ತಿಯರಾದ ಎಂ.ಕೆ. ಇಂದಿರಾ ಹಾಗೂ ತ್ರಿವೇಣಿ ಸಹ ಅದೇ ಮಣ್ಣಲ್ಲಿ ಬೆಳೆದವರು. ಟಿಎಸ್ಸಾರ್ ಅವರು ಹುಟ್ಟಿ ಬೆಳೆದ ಮನೆ ಊರಿನ ಪ್ರಮುಖ ರಸ್ತೆಯಲ್ಲಿದೆ. ಆದರೆ ಇಂದು ಅದು ಅಂಗಡಿಯಾಗಿ ಪರಿವರ್ತಿತವಾಗಿದೆ. ಅದನ್ನು ಖುದ್ದಾಗಿ ನೋಡಬೇಕೆಂದಿತ್ತು. ರಾಜ್ಯದ ಪ್ರಮುಖ ದಿನಪತ್ರಿಕೆಗೆ ಅತ್ಯಂತ ಕಿರಿವಯಸ್ಸಿನಲ್ಲಿ (28 ವರ್ಷ) ಸಂಪಾದಕರಾದ ಹಾಗೂ ಅತಿ ಹೆಚ್ಚು ವರ್ಷಗಳ ಕಾಲ ಅದೇ ಹುದ್ದೆ (ಒಂದೇ ಪತ್ರಿಕೆಯಲ್ಲಿ) ಅಲಂಕರಿಸಿದ ದಾಖಲೆ ಇನ್ನೂ ಟಿಎಸ್ಸಾರ್ ಹೆಸರಿನಲ್ಲಿಯೇ ಇದೆ. ಟಿಎಸ್ಸಾರ್ ಅವರಿಗೂ ತೀರ ಆತ್ಮೀಯರಾಗಿದ್ದ ಶ್ರೀನಿವಾಸ ಅನೇಕ ಸಲ ತಮ್ಮೂರಿಗೆ ಬರುವಂತೆ ಹೇಳುತ್ತಿದ್ದುದರಲ್ಲಿ ಅವರು ವಾಸಿಸುತ್ತಿದ್ದ ಮನೆಯನ್ನೊಮ್ಮೆ ನೋಡಿ ಎಂಬ ಆಹ್ವಾನವೂ ಸೇರಿರುತ್ತಿತ್ತು. ಕಾಫಿ ಅಂಗಡಿಯಲ್ಲಿ ಕಾಫಿ ಪುಡಿ ಮಾರಾಟ ಮಾಡುತ್ತಾ, ಬೆಳಗಿನ ವೇಳೆಯಲ್ಲಿ 'ಪ್ರಜಾವಾಣಿ' ಮಾರುತ್ತಿದ್ದ ಹುಡುಗ, ಆನಂತರ ಅದೇ ಪತ್ರಿಕೆಗೆ ಸಂಪಾದಕರಾಗಿದ್ದೊಂದು ಸಾಮಾನ್ಯ ಸಾಧನೆಯಲ್ಲ.
ಸನ್ಮಾನ ಕಾರ್ಯಕ್ರಮ ಸಾಯಂಕಾಲವಿದ್ದುದರಿಂದ ಅದು ಮುಗಿಯುವ ಹೊತ್ತಿಗೆ ರಾತ್ರಿ ಹತ್ತು ಗಂಟೆಯಾಗಿತ್ತು. ಆನಂತರ ಗಂಗಾವತಿ ಪ್ರಾಣೇಶ ಹಾಗೂ ನರಸಿಂಹ ಜೋಶಿಯವರಿಂದ ನಗೆ ಕಾರ್ಯಕ್ರಮ. ಪ್ರತಿದಿನ ಟಿವಿಯಲ್ಲಿ ಪ್ರಾಣೇಶ್ ಅವರನ್ನು ನಾಲ್ಕೈದು ಬಾರಿ ನೋಡಿದರೂ ಬಹಳ ವರ್ಷಗಳ ಬಳಿಕ ಖುದ್ದಾಗಿ ನೋಡುವ ಅವಕಾಶ ತಪ್ಪಿಸಿಕೊಳ್ಳುವ ಮನಸ್ಸಾಗಲಿಲ್ಲ. ಇಡೀ ದಿನ ಕ್ರಿಕೆಟ್ ಮ್ಯಾಚ್ ನೋಡಿ, ಮನೆಗೆ ಬಂದು ಪುನಃ ಟಿವಿಯಲ್ಲಿ ನೋಡುತ್ತೇವಲ್ಲ, ಹಾಗೆ ಪ್ರಾಣೇಶ್ ಅವರ ಹಾಸ್ಯದ ಆಕರ್ಷಣೆ. ಕಳೆದ ಐದಾರು ವರ್ಷಗಳಲ್ಲಿ ಅವರ ಬೆಳವಣಿಗೆ ಬೆರಗು ಹುಟ್ಟಿಸುವಂಥದ್ದು. ಈ ಮಟ್ಟ ತಲುಪುವ ಹಿಂದೆ ಅವರ ಅಪರಿಮಿತ ಶ್ರಮವಿದೆ. ಒಬ್ಬ ಜನಪ್ರಿಯ ಸಿನಿಮಾ ನಟ, ರಾಜಕಾರಣಿಯಷ್ಟೇ ಅವರಿಗೆ ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳಿದ್ದಾರೆ. ರಾತ್ರಿ ಹನ್ನೊಂದಾಗಲಿ, ಹನ್ನೆರಡಾಗಲಿ, ಹತ್ತಾರು ಸಾವಿರ ಜನ ಪ್ರಾಣೇಶ್ ಹಾಸ್ಯಕ್ಕೆ ನಗುತ್ತಿರುತ್ತಾರೆ. ಈ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವುದೇ ಅವರ ಮುಂದಿರುವ ಸವಾಲು.
ಸ್ನೇಹಿತರಾದ ವಸಂತಕುಮಾರ ಅವರ ಮನೆಯಲ್ಲಿ ಊಟ ಮಾಡಿ ಮಲಗುವ ಹೊತ್ತಿಗೆ ಮಧ್ಯರಾತ್ರಿ ದುಮುಕಿತ್ತು.
ಬೆಳಗ್ಗೆ ಎದ್ದು ನೇರವಾಗಿ ಬೆಂಗಳೂರಿನತ್ತ ಮುಖ ಮಾಡಬಹುದಿತ್ತು. ಜತೆಯಲ್ಲಿ ಒಳ್ಳೆಯ ಕಂಪನಿಯಿತ್ತು. ಮೊನ್ನೆ ಮೊನ್ನೆಯಷ್ಟೇ ಸೇವೆಯಿಂದ ನಿವೃತ್ತರಾದ ಐಎಎಸ್ ಅಧಿಕಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಸಿದ್ದಯ್ಯ ಹಾಗೂ ಏಟ್ರಿಯಾ ಹೋಟೆಲ್ ಮಾಲೀಕರಾದ ಕೆ. ನಾಗರಾಜ್ ಜತೆಯಲ್ಲಿದ್ದರು. ಸಿದ್ದಯ್ಯ ಒಳ್ಳೆಯ ಹಾಡುಗಾರರು. ಪ್ರವಾಸದಲ್ಲಿ ಅವರು ಒಂದೋ ಹಾಡುತ್ತಿರುತ್ತಾರೆ, ಇಲ್ಲವೇ ಹಾಡು ಕೇಳುತ್ತಿರುತ್ತಾರೆ. ಇಲ್ಲದಿದ್ದರೆ ನಗಿಸುತ್ತಿರುತ್ತಾರೆ ಅಥವಾ ನಗುತ್ತಿರುತ್ತಾರೆ. ಮಧ್ಯೆ ಮಧ್ಯೆ ಸೇವಾ ಅವಧಿಯಲ್ಲಿನ ಘಟನೆಗಳ ಮೆಲುಕು, ಗಂಭೀರ ಚರ್ಚೆ. ನಾಗರಾಜ್ ಉತ್ತಮ ಕೇಳುಗರು. ಎಲ್ಲರ ಸರಕು ಖಾಲಿಯಾಗುತ್ತಿದೆಯೆಂದಾಗ ಅವರು ತುರ್ಫು ಬಿಡುತ್ತಾರೆ.
ಅಷ್ಟೊತ್ತಿಗೆ ಒಂದು ಐಡಿಯಾ ಬಂತು. ನರಸಿಂಹರಾಜಪುರದಿಂದ ಕೊಪ್ಪಕ್ಕೆ ಅರ್ಧ ಗಂಟೆ ಹಾದಿ. ಕೊಪ್ಪದಲ್ಲಿ ಮಾಜಿ ಮಂತ್ರಿ, ಹಿರಿಯ ರಾಜಕಾರಣಿ ಹಾಗೂ 'ಮಲೆನಾಡ ಗಾಂಧಿ' ಎಂದೇ ಕರೆಯಿಸಿಕೊಳ್ಳುವ ಎಚ್.ಜಿ. ಗೋವಿಂದೇಗೌಡರ ಮನಗೆ ಹೋದರೆ ಹೇಗೆ ಎಂಬ ಯೋಚನೆ ಬಂತು. ಗೋವಿಂದೇಗೌಡರ ಅಳಿಯ ದಿವಾಕರ ಹಾಗೂ ಮಗ ವೆಂಕಟೇಶ ಅವರಿಗೆ ಫೋನ್ ಮಾಡಿ ಗೌಡರ ಸವುಡು, ಮನಸ್ಸು ತಿಳಿದುಕೊಂಡು ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ ಕೊಪ್ಪಕ್ಕೆ ಹೊರಟೆವು.
ಗೋವಿಂದೇಗೌಡರು ಮನೆಯ ವರಾಂಡದಲ್ಲಿ ಕುರ್ಚಿ ಹಾಕಿಕೊಂಡು ಪಕ್ಕದ ಟೇಬಲ್ ಮೇಲೆ ಪತ್ರಿಕೆಗಳನ್ನೆಲ್ಲ ಹರಡಿಕೊಂಡು ಕುಳಿತಿದ್ದರು. ನಾವು ಹೋಗುತ್ತಿದ್ದಂತೆ ಅದೇ ನಿಷ್ಕಲ್ಮಶ ತುಂಬು ನಗು, ಸಹೃದತೆಯ ಅನಾವರಣ, ಅರಳಿದ ಅನುಭವ, ಮಾಗಿದ ದೇಹ... ನಮ್ಮನ್ನು ಪ್ರೀತಿ, ಆತ್ಮೀಯತೆಯಿಂದ ಬರ ಮಾಡಿಕೊಂಡರು. ಜೆ.ಎಚ್. ಪಟೇಲ್ ಅವರ ಮಂತ್ರಿಮಂಡಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿದ್ದಾಗ, ಅಂದರೆ 1996ರ ಸುಮಾರಿನಲ್ಲಿ ಅವರನ್ನು ನಾನು ಭೇಟಿ ಮಾಡಿದ್ದೆ. ಅಂದು ಗೌಡರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತಾಡಿದ್ದರು. ಶಿಕ್ಷಣ ಇಲಾಖೆಯಲ್ಲಿ ತಾವು ಹಮ್ಮಿಕೊಳ್ಳಬೇಕಿರುವ ಹಲವು ಸುಧಾರಣಾ ಕ್ರಮಗಳು, ಕನಸುಗಳನ್ನು ಅವರು ಹಂಚಿಕೊಂಡಿದ್ದರು. ಅದಾದ ನಂತರ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ, ಸುಮಾರು ಹದಿನೈದು ವರ್ಷಗಳ ಹಿಂದೆ, ಅವರು ನಿವೃತ್ತಿ ಘೋಷಿಸಿ ಸಕ್ರಿಯ ರಾಜಕಾರಣದಿಂದ ದೂರವಾದರು. ಅಂದಿನಿಂದ ಇಲ್ಲಿಯತನಕ ಅವರು ಸಾರ್ವಜನಿಕ ವೇದಿಕೆಗಳನ್ನು ಹತ್ತಿದ್ದು ಇಲ್ಲವೇ ಇಲ್ಲ.
'ಮಂತ್ರಿಯಾದಾಗ ನೀವು ನನ್ನ ನೋಡಿದ್ದಕ್ಕೂ, ಈಗ ನೋಡುತ್ತಿದ್ದೀರಲ್ಲ, ನನ್ನಲ್ಲಿ ಏನಾದರೂ ವ್ಯತ್ಯಾಸ ಕಾಣುತ್ತಾ ಭಟ್ರೇ?' ಎಂದು ಕೇಳಿದರು ಗೋವಿಂದಗೌಡರು. ಮಂತ್ರಿಯಾಗಿದ್ದಾಗ ಅವರನ್ನು ನೋಡಿದ್ದಕ್ಕೂ, ಸಕ್ರಿಯ ರಾಜಕಾರಣದಿಂದ ದೂರಸರಿದು ಹದಿನೈದು ವರ್ಷಗಳ ನಂತರವೂ ಅವರಲ್ಲಿ ನನಗೆ ಯಾವುದೇ ಫರಕು ಕಾಣಲಿಲ್ಲ. ಅದೇ ಮೃದು ಮಾತು, ಸೌಮ್ಯ ಸ್ವಭಾವ, ಬಾಯ್ತುಂಬಾ ನಗು, ಆತ್ಮೀಯ ಹಾವಭಾವ, ಬಹುಬೇಗ ಆವರಿಸಿಕೊಳ್ಳುವ ಆಪ್ತತೆ, ಸಲುಗೆ. 'ವಯಸ್ಸಿಗೆ ಸಹಜವಾಗಿ ದೇಹದ ಬಿರುಸು ತುಸು ನಿಧಾನವಾಗಿದೆಯೆಂಬುದನ್ನು ಬಿಟ್ಟರೆ ನನಗೆ ನಿಮ್ಮಲ್ಲಿ ಮತ್ಯಾವ ವ್ಯತ್ಯಾಸವೂ ಕಾಣುತ್ತಿಲ್ಲ ಗೌಡರೇ' ಅಂದೆ.
ಅಂದಹಾಗೆ ಗೌಡರಿಗೆ ಎಂಬತ್ತೊಂಬತ್ತು ಮೆಟ್ಟಿದೆ. ಏಳುವಾಗ ತುಸು ಆಸರೆ ಬೇಕೆಂಬುದನ್ನು ಬಿಟ್ಟರೆ ಅವರು ಊರುಗೋಲಿನಿಂದ ಮನೆಯಲ್ಲಿ, ಅಂಗಳದಲ್ಲಿ ನಿಧಾನವಾಗಿ ನಡೆದಾಡುತ್ತಾರೆ, ಕಣ್ಣು, ಕಿವಿ, ನೆನಪು ಕೈಕೊಟ್ಟಿಲ್ಲ. ದಿನಾ ಎಲ್ಲ ಪತ್ರಿಕೆಗಳನ್ನೂ ಓದುತ್ತಾರೆ, ಟಿವಿ ನೋಡುತ್ತಾರೆ. ಬಂದು ಹೋಗುವವರ ಜತೆ ಮಾತಾಡುತ್ತಾರೆ. ಸೋಮವಾರ ಊರಿನ ವೀರಭದ್ರ ದೇವಾಲಯಕ್ಕೆ ಹೋಗಿ ಬರುತ್ತಾರೆ. ರಾಜಕಾರಣದ ಗೊಡವೆ ಇಲ್ಲ. ಹೆಚ್ಚಾಗಿ ಅದರ ಬಗ್ಗೆ ಯೋಚಿಸುವುದೂ ಇಲ್ಲ. ಸಭೆ, ಸಮಾರಂಭ ಸಂಪೂರ್ಣ ವರ್ಜ್ಯ. ಮನೆಯೇ ಅವರ ಪಾಲಿನ ಜಗತ್ತು. ಹಾಗೆಂದು ಜಗತ್ತಿನ ವಿದ್ಯಮಾನಗಳು ಗೊತ್ತಿಲ್ಲ ಎಂದಲ್ಲ, ಅವೂ ಗೊತ್ತು. ಗೌಡರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದಾಗ ಎಪ್ಪತ್ತೈದು ವರ್ಷ. ರಾಜಕಾರಣಿಗಳಿಗೆ ನಮ್ಮ ದೇಶದಲ್ಲಿ ನಿವೃತ್ತಿಯೆಂಬುದು ಇಲ್ಲದ್ದರಿಂದ ಅವರು ಹಾಗೆ ಮಾಡಬೇಕಿರಲಿಲ್ಲ. ಅವರು ಮನಸ್ಸು ಮಾಡಿದ್ದರೆ, ಚುನಾವಣೆಗೆ ಸ್ಪರ್ಧಿಸಬಹುದಿತ್ತು. ಯಾರೂ ಬೇಡ ಅಂತಿರಲಿಲ್ಲ. ಆದರೆ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. 1989ರಿಂದಲೇ ಗೌಡರು ನಿವೃತ್ತಿಯ ಮಾತನ್ನಾಡುತ್ತಿದ್ದರು. ಯುವಕರಿಗೆ ಅವಕಾಶ ಸಿಗಲಿ ಎಂದು ನಿವೃತ್ತರಾಗಿ ಬಿಟ್ಟರು. ತಾವು ತೆಗೆದುಕೊಂಡ ಈ ನಿರ್ಧಾರ ಎಷ್ಟು ಸರಿಯಾದುದಾಗಿತ್ತು ಎಂದು ಗೌಡರು ಹೇಳಿದರು.
ನಮ್ಮನ್ನು ಕೈಹಿಡಿದು ಒಳಮನೆಗೆ ಕರೆದುಕೊಂಡು ಹೋದರು ಗೌಡರು. ತಮ್ಮ ಹುಟ್ಟು, ವಿದ್ಯಾಭ್ಯಾಸ, ರಾಜಕೀಯ ಪ್ರವೇಶ, ಕಡಿದಾಳು ಮಂಜಪ್ಪನವರೊಂದಿಗಿನ ಒಡನಾಟ, ಚುನಾವಣೆಯ ಸೆಣಸು, ಹೆಗಡೆ, ಗೌಡ, ಬೊಮ್ಮಾಯಿ, ಪಟೇಲರ ಸಂಪುಟದಲ್ಲಿನ ಆಡಳಿತ ಅನುಭವ, ಶಿಕ್ಷಣ ಸಚಿವರಾಗಿ ಮಾಡಿದ ಕೆಲಸ-ಕಾರ್ಯ, ಆಗಿನ ಕಾಲದ ರಾಜಕಾರಣ, ಈಗಿನ ಕಾಲದ ವರಸೆಗಳು... ಎಲ್ಲವುಗಳ ಬಗೆಗೆ ಗೌಡರು ಮಾತಾಡುತ್ತಿದ್ದರೆ, ಮನಸ್ಸು ಅರವತ್ತು-ಎಪ್ಪತ್ತು ವರ್ಷಗಳ ಹಿಂದಿನಿಂದ ಪಯಣ ಆರಂಭಿಸಿತ್ತು. ಎಲ್ಲ್ಲೂ ತಮ್ಮ ಹೆಚ್ಚುಗಾರಿಕೆಯ ವೈಭವದ ಪ್ರದರ್ಶನವಿಲ್ಲ, ಆಡಂಬರವಿಲ್ಲ. ವಿಶೇಷಣ, ವ್ಯಂಜನಗಳೂ ಇಲ್ಲ. ಎಲ್ಲ ವಿವರಗಳೂ ಗೌಡರ ಮನಸ್ಸಿನಲ್ಲಿ ಮಲೆನಾಡಿನಂತೆ ಹಸುರು.
ಈ ಸಂದರ್ಭದಲ್ಲಿ ಸಿದ್ದಯ್ಯನವರು, 'ಪಟೇಲರು ತಮ್ಮ ಇಡೀ ಸಂಪುಟದ ಮಂತ್ರಿಗಳ ಪೈಕಿ ಅತಿಯಾಗಿ ಗೌರವಿಸುತ್ತಿದ್ದುದು, ಮರ್ಯಾದೆ ಕೊಡುತ್ತಿದ್ದುದು ಗೋವಿಂದೇಗೌಡರಿಗೆ ಮಾತ್ರ. ಮಿಕ್ಕವರನ್ನೆಲ್ಲ್ಲ ಏಕವಚನದಲ್ಲಿ ಸಂಬೋಧಿಸುತ್ತಿದ್ದರು. ಒಮ್ಮೊಮ್ಮೆ ದೇವೇಗೌಡರನ್ನೂ ಹಾಗೇ ಸಂಬೋಧಿಸುತ್ತಿದ್ದರು. ಆದರೆ ಗೋವಿಂದೇಗೌಡರನ್ನು ಮಾತ್ರ ಸದಾ ಯಜಮಾನರೇ ಎಂದೇ ಕರೆಯುತ್ತಿದ್ದರು. ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಗೌಡರು ಮಾತಾಡಿದರೆ, ಪಟೇಲರು ಉಳಿದವರನ್ನು ಸುಮ್ಮನಿರಿಸಿ ಅವರ ಸಲಹೆಗೆ ಕಿವಿಯಾಗುತ್ತಿದ್ದರು.' ಎಂದು ಹೇಳಿದಾಗ, ಗೌಡರು 'ಅದು ಪಟೇಲರ ದೊಡ್ಡ ಗುಣ' ಎಂದು ತೀರಾ ಸಂಕೋಚದಿಂದ ನುಡಿದರು.
ಗೋವಿಂದೇಗೌಡರು ಈ ರಾಜ್ಯ ಕಂಡ ಅತ್ಯಂತ ನಿಸ್ಪೃಹ ರಾಜಕಾರಣಿ. ಯಾವುದಾದರೂ ರಾಜಕಾರಣಿಗೆ 'ಪ್ರಾಮಾಣಿಕ' ಎಂಬ ಪದವನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬಹುದಾದರೆ ಅದು ಗೋವಿಂದೇಗೌಡರಿಗೆ ಬಳಸಬಹುದು. ಈಗ ಸ್ಯಾಂಪಲ್ಲಿಗೂ ಪ್ರಾಮಾಣಿಕ, ಸ್ವಚ್ಛ ರಾಜಕಾರಣಿಗಳು ಸಿಗುವುದಿಲ್ಲ. ಅವರು ಶಿಕ್ಷಣ ಸಚಿವರಾಗಿದ್ದಾಗ ಒಂದು ಲಕ್ಷದ ಹತ್ತು ಸಾವಿರ ಶಿಕ್ಷಕರ ನೇಮಕವಾದವು. ಆದರೆ ಒಬ್ಬೇ ಒಬ್ಬ ಹಣ ಕೊಟ್ಟು, ಪ್ರಭಾವ ಬೀರಿ ನೇಮಕಗೊಳ್ಳಲಿಲ್ಲ. ಬೇರೆಯವರಾಗಿದ್ದರೆ ಈ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಕನಿಷ್ಠ ನೂರಾರು ಕೋಟಿ ರೂಪಾಯಿ ಲಪಟಾಯಿಸುತ್ತಿದ್ದರು. ಸಮಾಜದಲ್ಲಿ ಶಿಕ್ಷಕರ ಸ್ಥಾನ ಗುರುತರವೂ, ಪವಿತ್ರವೂ ಆಗಿರುವುದರಿಂದ ಅವರ ಆಯ್ಕೆಯ ವಿಧಾನವೂ ಶುದ್ಧವಾಗಿರಬೇಕೆಂದು ಮೆರಿಟ್, ರೋಸ್ಟರ್ ಹಾಗೂ ಕೌನ್ಸೆಲಿಂಗ್ ಮೂಲಕ ನೆರವೇರಿಸಿದರು. ಆ ಪೈಕಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ. ಇದು ಅತ್ಯಂತ ಕ್ರಾಂತಿಕಾರಕ ಕ್ರಮ ಎಂಬ ಪ್ರಶಂಸೆಗೆ ಪಾತ್ರವಾಯಿತು. ಸಮಗ್ರ ಶಿಕ್ಷಣ ಮಸೂದೆಯ ಅನುಷ್ಠಾನ, ನೇಮಕಾತಿ ಹಾಗೂ ವರ್ಗಾವಣೆಯಲ್ಲಿ ಕೌನ್ಸೆಲಿಂಗ್, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮೌಲ್ಯಮಾಪನದ ಬಗ್ಗೆ ಅನುಮಾನ ಬಂದರೆ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಒದಗಿಸುವುದು. ಇಲಾಖಾ ಪುನಾರಚನೆ, ಟಿಸಿಎಚ್ ಹಾಗೂ ಬಿಎಡ್ ಪ್ರವೇಶಾವಕಾಶ ಕುರಿತು ನೀತಿ ನಿರೂಪಣೆ...ಗೌಡರು ಕೈಗೊಂಡ ಕೆಲವು ಮಹತ್ವದ ನಿರ್ಧಾರಗಳು. ಸದ್ದಿಲ್ಲದೇ, ಅಬ್ಬರದ ಪ್ರಚಾರವಿಲ್ಲದೇ ಎಂಥಾ ಗುಣಾತ್ಮಕ ಪರಿವರ್ತನೆ ತರಬಹುದೆಂಬುದಕ್ಕೆ ಗೌಡರೇ ನಿದರ್ಶನ.
'ಸಾರ್ವಜನಿಕ ಜೀವನದಲ್ಲಿ ಗೋವಿಂದೇಗೌಡರು ಗಾಂಧೀಜಿಯವರಂತೆ ಬದುಕಿದವರು. ನಾನಂತೂ ಗಾಂಧೀಜಿಯವರನ್ನು ನೋಡಿಲ್ಲ. ಆದರೆ ಗೋವಿಂದೇಗೌಡರಲ್ಲಿ ಅವರನ್ನು ಕಾಣುತ್ತೇನೆ' ಎಂದರು ಶ್ರೀನಿವಾಸ. ಗೌಡರಿಗೆ ಬಹಳ ಸಂಕೋಚವೆನಿಸಿತು. 'ದೊಡ್ಡ ಮಾತು' ಎಂದರು. ಗೋವಿಂದಗೌಡರಿಗೆ ಮಾತಾಡುವ ಕುಬಿ ಇತ್ತು. ನನಗೆ ಅವರ ಮಾತುಗಳಿಗೆ ಕಿವಿಯಾಗುವ ಕುತೂಹಲವಿತ್ತು. ಮಾಗಿದ ದೇಹಕ್ಕೆ ಎಲ್ಲಿ ಆಯಾಸವಾಗಬಹುದೋ ಎಂಬ ಹಿಂಜರಿಕೆಯಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಹೊರಡಲು ಅನುವಾದೆವು. 'ಗೌಡರು ಮನೆ ಹೊರಗಡೆ ಬಂದು ಬೀಳ್ಕೊಟ್ಟರು. ಬಾಗಿಲಲ್ಲಿ ಅವರ ಪತ್ನಿ, ಮಗ, ಸೊಸೆ ನಿಂತಿದ್ದರು.
ಒಂದು ವೇಳೆ ಗೌಡರನ್ನು ಭೇಟಿ ಮಾಡದೇ ಹೋಗಿದ್ದರೆ ನನ್ನ ಜೀವನದ ಒಂದು ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡು ಬಿಡುತ್ತಿದ್ದೆ ಅನಿಸಿತು. ಬೆಂಗಳೂರಿಗೆ ಬರುತ್ತಿದ್ದಂತೆ ಗಾಂಧಿ ಜಯಂತಿ ದಿನ ಗೋವಿಂದಗೌಡರ ಮನೆಯಲ್ಲಿ ಬಿಡುಗಡೆಯಾದ ಗಿರೀಶ್ ಜಕಾಪುರೆ ಬರೆದ 'ಮಲೆನಾಡ ಗಾಂಧಿ' ಪುಸ್ತಕ ಸಿಕ್ಕಿತು. ಗೆಳೆಯರಾದ ಅಭಿನವ ಪ್ರಕಾಶನದ ನ. ರವಿಕುಮಾರ ಹಾಗೂ ನಾಗತಿಹಳ್ಳಿ ರಮೇಶ ಈ ಪುಸ್ತಕ ಕಳಿಸಿಕೊಟ್ಟಿದ್ದರು. ಅನಂತಮೂರ್ತಿಯವರು ಮುನ್ನುಡಿಯಲ್ಲಿ ಒಂದೆಡೆ ಹೀಗೆ ಬರೆದಿದ್ದಾರೆ-'ಗೆಳೆಯ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿ ಅವರ ಪಕ್ಷದವರ ಚಿತಾವಣೆಯಿಂದ ಮುಖ್ಯಮಂತ್ರಿ ಸ್ಥಾನವನ್ನು ಇನ್ನೇನು ಕಳೆದುಕೊಂಡು ಬಿಡುತ್ತಾರೆ ಎನ್ನುವ ಕಾಲದಲ್ಲಿ ಅವರನ್ನು ನೋಡಲು ಹೋಗಿದ್ದೆ. ಪಟೇಲರು ತಮ್ಮ ಗೆಲುವನ್ನು ಕಳೆದುಕೊಂಡಿರಲಿಲ್ಲ. 'ಖುಷಿಯಿಂದಲೇ ಮಂತ್ರಿಸ್ಥಾನ ಬಿಟ್ಟುಕೊಡುತ್ತೇನೆ; ಆದರೆ ನನ್ನ ಮಂತ್ರಿ ಮಂಡಲದಲ್ಲಿನ ಅತ್ಯಂತ ಸ್ವಚ್ಛ ರಾಜಕಾರಣಿ ಗೋವಿಂದೇಗೌಡರು ಆ ಸ್ಥಾನವನ್ನು ಒಪ್ಪಿಕೊಳ್ಳುವುದಾದರೆ ಮಾತ್ರ' ಎಂದು ಹೇಳಿದ್ದರು.'
ಗೋವಿಂದೇಗೌಡರು ಪದೇ ಪದೆ ನೆನಪಾದರು.
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


