ದೊಡ್ಡ ಸಾಧನೆಗೆ ಚಿಕ್ಕ ಚಿಕ್ಕ ಟಿಪ್ಪಣಿಗಳು
ಮಾಡುತ್ತಿರುವ ಕೆಲಸಕ್ಕೆ ಸಿಕ್ಕಿರುವ ಯಶಸ್ಸು ಹಾಗೂ ಅಪಯಶಸ್ಸು - ಎರಡನ್ನೂ...

ಮಾಡುತ್ತಿರುವ ಕೆಲಸಕ್ಕೆ ಸಿಕ್ಕಿರುವ ಯಶಸ್ಸು ಹಾಗೂ ಅಪಯಶಸ್ಸು - ಎರಡನ್ನೂ ಆಪ್ತರೊಂದಿಗೆ ಹೇಳಿಕೊಳ್ಳಿ. ಅದೇ ವೃತ್ತಿಯಲ್ಲಿರುವ ಇತರರಿಂದ (ಅವರು -ವಯಸ್ಸು ಮತ್ತು ಅನುಭವದಲ್ಲಿ ನಿಮಗಿಂತ ಕಿರಿಯವರಾಗಿದ್ದರೂ ಪರವಾಗಿಲ್ಲ) ಕಲಿಯುವುದಿದೆ ಅನ್ನಿಸಿದಲ್ಲಿ ಸಂಕೋಚ ಬಿಟ್ಟು ಕಲಿಯಿರಿ.
ಗೆಲವು ಮತ್ತು ಯಶಸ್ಸು ಕೇಂದ್ರಿತವಾಗಿಯೇ ಮಾತನಾಡುವ ವ್ಯಕ್ತಿತ್ವ ವಿಕಸನದ ಪಾಠಗಳು ಹೆಚ್ಚಾಗುತ್ತಿವೆಯಾ ಅಂತ ಕೆಲವೊಮ್ಮೆ ಅನುಮಾನ ಕಾಡುವುದು ಸಹಜ. ಆದರೆ ಆಗಾಗ ಪ್ರೇರಕ ಟಿಪ್ಪಣಿಗಳತ್ತ ಗಮನಹರಿಸುವುದು ಹೊಸ ಹುಮ್ಮಸ್ಸೊಂದನ್ನು ಕಟ್ಟಿಕೊಡುತ್ತದೆ. ವ್ಯಕ್ತಿತ್ವ ವಿಕಸನದಲ್ಲಿ ಹೇಳುವ ಅಂಶಗಳೆಲ್ಲ ಕೇಳುವುದಕ್ಕೆ ಚೆಂದ, ಆದರೆ ಅಳವಡಿಕೆ ಕಷ್ಟ ಎನ್ನುವವರು ಬಹಳ. ಆದರೆ ಹತ್ತಂಶಗಳಲ್ಲಿ ಒಂದೆರಡನ್ನೇ ಅನುಸರಿಸುವುದಕ್ಕೆ ಸಾಧ್ಯವಾದರೂ ಬದುಕು ಅಷ್ಟರಮಟ್ಟಿಗೆ ಶಿಸ್ತಿನ ಪಥದಲ್ಲಿ ಸಾಗುತ್ತದಲ್ಲ?
ಹಾಗೆಂದೇ ವ್ಯಕ್ತಿತ್ವ ವಿಕಸನ ಗುರು ರಾಬಿನ್ ಶರ್ಮಾ ಹೇಳಿದ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಇಲ್ಲಿ ನೀಡಿದ್ದೇನೆ. ಅವುಗಳನ್ನು ಜೊತೆಗಿಟ್ಟುಕೊಂಡು ಆತ್ಮವಿಶ್ವಾಸದಿಂದ ಹೆಜ್ಜೆ ಮುಂದಿಟ್ಟರೆ ಗೆಲುವು ಕಾಣುವುದು ಸುಲಭವಾಗುತ್ತದೆ ಎಂಬುದು ರಾಬಿನ್ ಶರ್ಮಾ ಅವರ ವಾದ, ವೆರಿಸಿಂಪಲ್ ಎಂಬಂತಿರುವ ಆ 'ಗುಟ್ಟು'ಗಳ ಪಟ್ಟಿ ಇಲ್ಲಿದೆ.
- ಶಿಕ್ಷಣ, ಕೈಗಾರಿಕೆ, ಕ್ರೀಡೆ, ಉದ್ಯಮ, ರಾಜಕೀಯ... ಹೀಗೆ ಯಾವುದೇ ಕ್ಷೇತ್ರವಾಗಿರಲಿ, ಅಲ್ಲೆಲ್ಲ ದೊಡ್ಡ ಹೆಸರು ಮಾಡಿ ದಂತಕತೆಯಾಗಿ ಹೋದ ಹಲವರ ಉದಾಹರಣೆಗಳು ಇದ್ದೇ ಇರುತ್ತವೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಲು, ಸಾವಿರ ಮಂದಿ ಮೆಚ್ಚುವಂತೆ ಬದುಕಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದನ್ನು ಅಭ್ಯಾಸ ಮಾಡಿ. ಅದನ್ನೂ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
- ಮಾಡುತ್ತಿರುವ ಕೆಲಸಕ್ಕೆ ಸಿಕ್ಕಿರುವ ಯಶಸ್ಸು ಹಾಗೂ ಅಪಯಶಸ್ಸು - ಎರಡನ್ನೂ ಆಪ್ತರೊಂದಿಗೆ ಹೇಳಿಕೊಳ್ಳಿ. ಅದೇ ವೃತ್ತಿಯಲ್ಲಿರುವ ಇತರರಿಂದ (ಅವರು -ವಯಸ್ಸು ಮತ್ತು ಅನುಭವದಲ್ಲಿ ನಿಮಗಿಂತ ಕಿರಿಯವರಾಗಿದ್ದರೂ ಪರವಾಗಿಲ್ಲ) ಕಲಿಯುವುದಿದೆ ಅನ್ನಿಸಿದಲ್ಲಿ ಸಂಕೋಚ ಬಿಟ್ಟು ಕಲಿಯಿರಿ.
- ಗೆಲುವಿನ ಹಾದಿ ಅಂದ ಮೇಲೆ ಅಲ್ಲಿ ಸೋಲು ಎಂಬ ನಿಲ್ದಾಣವೂ ಇದ್ದೇ ಇರುತ್ತದೆ. ಎಂಥದೇ ಸಂದರ್ಭದಲ್ಲಿ ಸೋಲುಗಳಿಂದ ಕಂಗಾಲಾಗಬೇಡಿ. ಬದಲಿಗೆ, ನಾನು ಸೋತಿದ್ದು ಎಲ್ಲಿ, ಈ ಅಪಯಶಸ್ಸಿಗೆ ಇದ್ದ ಮುಖ್ಯ ಕಾರಣ ಯಾವುದು ಎಂದು ಪಟ್ಟಿ ಮಾಡಿಟ್ಟುಕೊಳ್ಳಿ. ಗೆಲುವಿನ ಯಾತ್ರೆಯನ್ನು ಮತ್ತೆ ಆರಂಭಿಸಿದಾಗ ಹಳೆಯ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ.
- ಮಾಡುತ್ತಿರುವ ಕೆಲಸ ಯಾವುದೇ ಆಗಿರಲಿ, ಅದರಲ್ಲಿ ನಿಮಗೆ ದಶಕಗಳ ಕಾಲದ ಅನುಭವವೇ ಇರಲಿ; ಹಾಗಂತ ನೀವು ಕೈ ಹಾಕಿರುವ ಕೆಲಸದ ಬಗ್ಗೆ ಬಂದ ಹೊಸ ಸುದ್ದಿಯನ್ನು, ಮಾಹಿತಿಯನ್ನು ತಿಳಿಯಲು ತಡ ಮಾಡಬೇಡಿ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಕ್ಷಣದ ಆಗುಹೋಗುಗಳನ್ನು ತಿಳಿದುಕೊಂಡು ನೀವೂ ಅಪ್‌ಡೇಟ್ ಆಗುತ್ತಲೇ ಇರಿ.
- ನಿಮ್ಮ ಕಣ್ಮುಂದೆ ಕೇವಲ ಗುರಿ ಇದ್ದರೆ ಸಾಲದು. ಬೆನ್ನ ಹಿಂದೆ ಒಬ್ಬ ಗುರುವೂ ಇರಬೇಕು. ಅರ್ಜುನ ಶೂರ ನಿಜ. ಆದರೆ ಕೃಷ್ಣನಂಥ ಗುರು ಮತ್ತು ಮಾರ್ಗದರ್ಶಿ ಜೊತೆಗಿದ್ದ ಕಾರಣದಿಂದಲೇ ಆತ ಕೈ ಹಾಕಿದ ಕೆಲಸದಲ್ಲೆಲ್ಲ ಗೆಲುವು ಪಡೆಯಲು ಸಾಧ್ಯವಾಯಿತು ಎಂಬುದನ್ನು ಯಾರೂ ಮರೆಯಬಾರದು. ನೀವು ಎಷ್ಟೇ ಶ್ರಮ ಜೀವಿಯಾಗಿದ್ದರೂ, ಒಬ್ಬ ಗುರುವಿನ ಸಾಂಗತ್ಯ ಮತ್ತು ಮಾರ್ಗದರ್ಶನ ಹಿಡಿದ ಕೆಲಸವನ್ನು ಸರಳವಾಗಿಸುತ್ತದೆ. ಸುಲಭವಾಗಿಸುತ್ತದೆ. ನೆನಪಿರಲಿ.
- ಒಮ್ಮೆ ಸೋತು ಹೋದರೆ ನಿರಾಶರಾಗುವುದು ಬೇಡ. ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಪ್ರಯತ್ನಿಸಿ. ಈ ಮಾತಿಗೆ ಹೀಗೊಂದು ಉದಾಹರಣೆ ಕೊಡಬಹುದು: ಥಾಮಸ್ ಆಲ್ವ ಎಡಿಸನ್ ವಿದ್ಯುತ್ ಬಲ್ಬ್ ಕಂಡು ಹಿಡಿದನಲ್ಲ; ಆತ ಒಂದೆರಡಲ್ಲ, 99 ಬಾರಿ ವಿಫಲನಾದನಂತೆ. 100ನೇ ಪ್ರಯತ್ನದಲ್ಲಿ ಆತ ಯಶಸ್ಸು ಕಂಡಾಗ, ಯಾರೋ ನೀವು 99 ಬಾರಿ ವಿಫಲರಾದಿರಾ ಎಂದು ಕೇಳಿದರಂತೆ. ಅದಕ್ಕೆ ಎಡಿಸನ್-ಖಂಡಿತ ಇಲ್ಲ. ಒಂದು ಮಹತ್ವದ ಕೆಲಸಕ್ಕೆ ನಿಂತಾಗ ಹೇಗೆಲ್ಲಾ ತಪ್ಪುಗಳಾಗಬಹುದು ಎಂದು 99 ಬಾರಿ ತಿಳಿದುಕೊಂಡೆ ಅಂದನಂತೆ! ಗೆಲುವಿನ ಗುಟ್ಟು ಅಡಗಿರುವುದೇ ಇಂಥ ಆತ್ಮವಿಶ್ವಾಸದ ಮಾತುಗಳಲ್ಲಿ ಅಲ್ಲವೆ?
- ನಿಮ್ಮ ಕೆಲಸವನ್ನು, ನಿಮ್ಮ ಸಾಹಸವನ್ನು ಪ್ರೀತಿಸುವ, ನಿಮ್ಮ ತಪ್ಪುಗಳನ್ನು ತೋರಿಸಿಕೊಟ್ಟು ಗೆಲುವಿನ ಸಡಗರಕ್ಕಾಗಿ ಚಡಪಡಿಸುವ ಗೆಳೆಯರ ಗುಂಪನ್ನು ಕಟ್ಟಿಕೊಳ್ಳಿ. ಸೋತು ಹೋದ ಸಂದರ್ಭದಲ್ಲಿ ಈ ಗೆಳೆಯರ ಸಾಂತ್ವನದ ಮಾತುಗಳು ಸಂಕಟದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಗೆಲುವು ಕಂಡ ಸಂದರ್ಭದಲ್ಲಿ ಸಂಭ್ರಮವನ್ನು ಹೆಚ್ಚಿಸುತ್ತವೆ.
- ಒಂದು ಪುಟ್ಟ ಡೈರಿಯನ್ನು ಜೊತೆಗಿಟ್ಟುಕೊಳ್ಳಿ. ಹೊಸದೊಂದು ಪ್ರಾಜೆಕ್ಟ್‌ಗೆ ಕೈ ಹಾಕಿದ ನಂತರ ಯಾವ್ಯಾವ ದಿನ ಏನೇನು ಬೆಳವಣಿಗೆ ಆಯ್ತು ಎಂಬುದನ್ನು ತಪ್ಪದೇ ಬರೆದಿಡಿ. ಒಂದು ಕೆಲಸಕ್ಕೆ ಮುಂದಾದಾಗ ಚಿಕ್ಕಪುಟ್ಟ ಗೆಲುವುಗಳು ತೀರಾ ಆಕಸ್ಮಿಕವಾಗಿ ಹೇಗೆಲ್ಲ ಜೊತೆಯಾದವು ಎಂಬುದನ್ನು ನೋಟ್ ಮಾಡಿ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಮಾಡಿದ ಕೆಲಸದ ಸಮಗ್ರ ಮಾಹಿತಿ ಮಾತ್ರವಲ್ಲ, ಹೊಸ ಕೆಲಸದಲ್ಲಿ ತಪ್ಪುಗಳ ಸಂಖ್ಯೆ ಕಡಿಮೆಯಾಗುವುದಕ್ಕೂ ನೆರವಾಗುತ್ತದೆ.
- ಗೆಲುವಿಗಾಗಿ ಪರಿತಪಿಸುತ್ತಿದ್ದೀರಿ ನಿಜ. ಆದರೆ ಅದೊಂದೇ ಕಾರಣಕ್ಕೆ ಟೆನ್ಶನ್ ಕೈಗೆ ಬುದ್ಧಿ ಕೊಡಬೇಡಿ. ಟೆನ್ಶನ್ ಎಂಬುದು ನೆಮ್ಮದಿಯನ್ನು ಹಾಳು ಮಾಡುತ್ತದೆ. ಸೋಲು ಅಥವಾ ಗೆಲುವು- ಯಾವುದೇ ಎದುರಾಗಲಿ, ಆ ಸಂದರ್ಭದಲ್ಲಿ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ.
- ಒಂದು ಪ್ರಾಜೆಕ್ಟ್ ಅಂದರೆ, ಅದು ಒಂದೆರಡಲ್ಲ; ನೂರೆಂಟು ಕೆಲಸಗಳ ಗುಚ್ಛ. ಒಂದು ಮೆಗಾಯಾತ್ರೆ- (ಅದು ಪರೀಕ್ಷೆ ಆಗಿರಬಹುದು ಅಥವಾ ಬೇರ್ಯಾವುದೇ ಕೆಲಸ ಆಗಿರಬಹುದು) ಯಶಸ್ವಿಯಾಗಬೇಕಾದರೆ, ಹಲವಾರು ಚಿಕ್ಕಪುಟ್ಟ ಕೆಲಸಗಳೂ ನಿಗದಿತ ಸಮಯದೊಳಗೆ ಆಗಿ ಹೋಗಬೇಕು. ಹಾಗಾಗಿ, ಇಂಥ ಕೆಲಸವನ್ನು ಇಷ್ಟೇ ದಿನದಲ್ಲಿ, ಇಂತಿಷ್ಟೇ ಸಮಯದಲ್ಲಿ ಮುಗಿಸುತ್ತೇನೆ ಎಂದು ಮೊದಲೇ ನಿರ್ಧರಿಸಿ. ಏನೇ ತೊಂದರೆ ಎದುರಾದರೂ ನಿಗದಿತ ಸಮಯದೊಳಗೆ ಅಂದುಕೊಂಡ ಕೆಲಸ ಮುಗಿಯುವಂತೆ ನೋಡಿಕೊಳ್ಳಿ. ಇಲ್ಲವಾದರೆ ಎಲ್ಲ ಕೆಲಸಕ್ಕೂ ಅಡೆತಡೆಗಳು ಎದುರಾಗಿ, ಯಶಸ್ಸು ಮರೀಚಿಕೆಯಾಗುವ ಸಾಧ್ಯತೆಗಳು ಬಂದು ಬಿಡುತ್ತವೆ. ಗೆಲುವಿನ ಕನವರಿಕೆಯಲ್ಲಿದ್ದವರು ಸೋಲು ಎಂಬುದನ್ನು ಹತ್ತಿರಕ್ಕೂ ಸುಳಿಯಗೊಡದಿರುವುದೇ ಜಾಣತನ. ಏನಂತೀರಿ?
ಒಂದು ಪ್ರಯೋಗ
ನಿಮ್ಮ ಹೆಂಡತಿ ಹಾಗೂ ನಾಯಿಯನ್ನು ಬೇರೆ ಬೇರೆ ಕೋಣೆಗಳಲ್ಲಿ ಕೂಡಿಡಿ. ಎರಡು-ಮೂರು ತಾಸುಬಿಟ್ಟು ಬಾಗಿಲು ತೆಗೆದಾಗ ಅವರಿಬ್ಬರಲ್ಲಿ ಯಾರು ನಿಮ್ಮನ್ನು ನೋಡಿ ಮುದಗೊಳ್ಳುತ್ತಾರೆ ಹಾಗೂ ಯಾರು ಕಚ್ಚುತ್ತಾರೆ ಎಂಬುದನ್ನು ಗಮನಿಸಿ. (ಈ ಸಾಹಸವನ್ನು ಮನೆಯಲ್ಲಿ ಪ್ರಯೋಗಿಸಬಾರದೆಂದು ಓದುಗರಿಗೆ ಸೂಚಿಸಲಾಗಿದೆ. ಇದನ್ನು ವೃತ್ತಿಪರರು ಮಾತ್ರ ಮಾಡಲು ಶಕ್ಯರಿದ್ದು, ಅಂಥವರು ವಿಚ್ಛೇದನ ಪಡೆದು ಮನೆಯಲ್ಲಿ ನಾಯಿಯೊಂದಿಗೆ ಆರಾಮವಾಗಿದ್ದಾರೆ.)
ಹುಣಸೆ ಮುಪ್ಪಾದರೆ....
ಒಂದೂರಲ್ಲಿ ಒಬ್ಬ ಮುದುಕನಿದ್ದ. ಮಹಾನ್ ರಸಿಕನೂ ಆಗಿದ್ದ. ಇಂಥ ಮಹಾರಾಯನಿಗೆ ಥರಹೇವಾರಿ ಗಿಡ-ಮರಗಳಿಂದ ಕೂಡಿದ್ದ ತೋಟವಿತ್ತು. ಅದರ ಮಧ್ಯೆ ಆಕರ್ಷಕ ಕೊಳವೊಂದಿತ್ತು.
ತೋಟದಿಂದ ಹೂ-ಹಣ್ಣು ಕೊಂಡೊಯ್ಯುವ ಉದ್ದೇಶದಿಂದ ಅದೊಂದು ಮಧ್ಯಾಹ್ನ ಮುದುಕ ಅಲ್ಲಿಗೆ ಬಂದ. ಆಗ ಅವನಿಗೆ ಕಂಡದ್ದು ಏನೆಂದರೆ- ಐದಾರು ಮಂದಿ ಏರುಜೌವ್ವನದ ಚೆಲುವೆಯರು ಸ್ನಾನ ಮಾಡಲು ಕೊಳಕ್ಕೆ ಇಳಿದಿದ್ದಾರೆ! ಅವರ ತಮಾಷೆ, ವಯ್ಯಾರ, ಸೌಂದರ್ಯ ಹಾಗೂ ಮತ್ತೆ ಮತ್ತೆ ನೋಡಬೇಕು ಅನಿಸುವಂಥ ಹಾವಭಾವವನ್ನು ಕಂಡು ಈತ ಮುಂದೆ ಹೆಜ್ಜೆ ಇಡುವುದನ್ನೂ ಮರೆತು ಶಿಲೆಯಂತೆ ನಿಂತುಬಿಟ್ಟ. ಹೀಗೇ ಐದು ನಿಮಿಷ ಕಳೆದಿರಬಹುದು. ಆ ವೇಳೆಗೆ ಕೊಳದಲ್ಲಿದ್ದ ಯುವತಿಯರ ಪೈಕಿ ಒಬ್ಬಳು ಇವನನ್ನು ನೋಡಿಬಿಟ್ಟಳು. 'ನೋಡಲು ಮುದುಕನ ಥರ ಇದ್ದಾನೆ. ಆದರೆ ಫಟಿಂಗನ ಥರ ಕಾಣಿಸ್ತಾನೆ. ಅಷ್ಟು ಹೊತ್ತಿನಿಂದ ನಮ್ಮನ್ನೇ ತಿಂದು ಹಾಕುವವನಂತೆ ನೋಡ್ತಾ ಇದಾನೆ ಕಣ್ರೇ' ಎಂದು ಆಕೆ ಗೆಳತಿಯರ ಬಳಿ ಪಿಸುಗುಟ್ಟಿದಳು. ಅರೆಬೆತ್ತಲಾಗಿ ತುಂಬ ಸಡಗರದಿಂದ ಜಲಕ್ರೀಡೆಯಾಡಲು ಸಿದ್ಧರಾಗಿದ್ದ ಎಲ್ಲ ಯುವತಿಯರಿಗೂ ದಿಢೀರನೆ ಎದುರಾದ ಮುದುಕನ ಹಾಜರಿಯಿಂದ ಕಸಿವಿಸಿಯಾಯಿತು. ಅವರೆಲ್ಲ ಎರಡೂ ಕೈಗಳಿಂದ ಮೈಮುಚ್ಚಿಕೊಂಡು ಎದೆಯ ಮಟ್ಟಕ್ಕೂ ನೀರು ಬರುವ ಸ್ಥಳಕ್ಕೆ ಓಡಿಹೋದರು. ನಂತರ ಮುದುಕನ ಕಡೆ ತಿರುಗಿ ಜೋರಾಗಿ ಹೇಳಿದರು: 'ನೀನು ಇಲ್ಲಿಂದ ಆಚೆ ಹೋಗುವ ತನಕ ನಾವ್ಯಾರೂ ಕೊಳದಿಂದ ಆಚೆ ಬರುವುದಿಲ್ಲ...'
ಚೆಂದುಳ್ಳಿ ಚೆಲುವೆಯರ ಅಂದಚೆಂದ ಕಳ್ತುಂಬ ನೋಡುವ ಅವಕಾಶ ತಪ್ಪಿಹೋಗಿದ್ದಕ್ಕೆ ಆ ಮುದುಕನಿಗೆ ಬೇಜಾರಾಯ್ತು. ಎರಡು ನಿಮಿಷ ಮೌನವಾಗಿದ್ದ ಆ ಕಿಲಾಡಿ ಮರುಕ್ಷಣವೇ ಹೇಳಿಬಿಟ್ಟ, 'ಅಯ್ಯೋ, ನಿಮ್ಮ ಜಲಕ್ರೀಡೆಯನ್ನಾಗಲೀ ಅರೆಬೆತ್ತಲೆ ಸೌಂದರ್ಯವನ್ನಾಗಲಿ ನೋಡುವ ಆಸೆಯಿಂದ ನಾನಿಲ್ಲಿಗೆ ಬಂದಿಲ್ಲ. ಕೊಳದಲ್ಲಿರುವ ಎರಡು ಮೊಸಳೆಗಳಿಗೆ ಊಟ ಹಾಕುವ ಉದ್ದೇಶದಿಂದ ಬಂದಿದೀನಿ...'
ಕೊಳದಲ್ಲಿ ಮೊಸಳೆಗಳಿವೆ ಎಂಬ ಮಾತು ಕಿವಿಗೆ ಬಿದ್ದಿದ್ದೇ ತಡ; ಎಲ್ಲ ಬೆಡಗಿಯರೂ ಹೋ ಎಂದು ಚೀರುತ್ತಾ ತಾವಿರುವ ಅವಸ್ಥೆಯ ಬಗೆಗಾಗಲೀ, ಎದುರಿಗೆ ನಿಂತಿದ್ದ ಮುದುಕನ ಕುರಿತಾಗಲಿ ಯೋಚಿಸದೇ ಛಂಗಛಂಗನೆ ಕೊಳದಿಂದ ಓಡೋಡುತ್ತ ಹೊರಬಂದರು.
ಹೌದು. ರಸಿಕತೆಯ ವಿಷಯ ಬಂದಾಗ, ಎದುರಿಗೆ ಚೆಲುವೆಯರಿದ್ದಾರೆ ಎಂಬುದು ಖಚಿತವಾದಾಗ ಗಂಡಸಿನ ಮೆದುಳಿಗೆ ಅಸಾಧಾರಣ ಐಡಿಯಾಗಳು ಬಂದುಬಿಡುತ್ತವೆ!
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


