ಆಮ್ ಆದ್ಮಿ ಪಕ್ಷವನ್ನು ಪ್ರಪಂಚವೇ ಗಮನಿಸುತ್ತಿದೆ!
ಡಿಸೆಂಬರ್ 4 ರಂದು ದೆಹಲಿಯಲ್ಲಿ ಚುನಾವಣೆಗಳು ನಡೆಯಲಿರುವುದರಿಂದ ಈಗ ಎಲ್ಲರ ದೃಷ್ಟಿಯೂ ಆಮ್ ಆದ್ಮಿ ಪಕ್ಷದತ್ತ ನೆಟ್ಟಿದೆ. ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯೊಂದೇ- ಭ್ರಷ್ಟಾಚಾರ ವಿರೋಧಿ ಸಿದ್ಧಾಂತದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಧೂಳಿಪಟ ಮಾಡಲಿದೆಯೇ? ಕೆಲವು ಸಮೀಕ್ಷೆಗಳು ಹೇಳುವುದೇನೆಂದರೆ, 'ಕೇಜ್ರಿವಾಲ್ ದೆಹಲಿಯನ್ನು ಆಳುತ್ತಿರುವ ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ರ ಸರ್ಕಾರವನ್ನು ಭಾರೀ ಅಂತರದಿಂದ ಸೋಲಿಸಿಅಧಿಕಾರಕ್ಕೇರಲಿದ್ದಾರೆ' ಎಂದು. ಇನ್ನೂ ಕೆಲವು ಸಮೀಕ್ಷೆಗಳು, ಆಮ್ ಆದ್ಮಿ ಪಕ್ಷ 'ಹೇಳಿಕೊಳ್ಳುವಷ್ಟು' ಸ್ಥಾನಗಳನ್ನು ಗೆದ್ದು ಕಿಂಗ್‌ಮೇಕರ್ ಆಗಿ ಹೊರಹೊಮ್ಮಲಿದೆ ಎನ್ನುತ್ತವೆ.
ಮತದಾರರು ಆಮ್ ಆದ್ಮಿ ಪಕ್ಷ ಮತ್ತು ಅದರ ಶ್ರೀಸಾಮಾನ್ಯನ ಪರವಾದ ನೀತಿಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಜೋರ್‌ದಾರ್ ಏಳಿಗೆಯನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ.
ಟೈಮ್ಸ್ ನಿಯತಕಾಲಿಕ ಇತ್ತೀಚಿನ ತನ್ನ ಲೇಖನದಲ್ಲಿ ("India's newest political party takes on graft') ಆಮ್ ಆದ್ಮಿ ಪಕ್ಷವನ್ನು ಹೊಗಳಿದೆ. "ಭಾರತದ ದೈತ್ಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ವಿರುದ್ಧ ಸೆಣಸುವುದು ಬಹಳ ಕಷ್ಟದ ಕೆಲಸ. ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರದ ಬಜೆಟ್ ಕೇವಲ 3.3 ಮಿಲಿಯನ್ ಡಾಲರ್‌ಗಳು. ಇನ್ನೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ 17 ಮಿಲಿಯನ್ ಡಾಲರ್‌ಗಳಿಗಿಂತಲೂ ಹೆಚ್ಚು ಹಣ ಖರ್ಚು ಮಾಡಲು ಮುಂದಾಗಿವೆ. ಆಮ್ ಆದ್ಮಿ ಪಕ್ಷಕ್ಕೆ ಐಷಾರಾಮಿ ಕಚೇರಿಯಿಲ್ಲ. ಬೆಂಬಲಿಗರೊಬ್ಬರು ಕೊಟ್ಟ ಬಾಡಿಗೆ ಮನೆಯಲ್ಲಿ ಅದರ ಕಚೇರಿಯಿದೆ. ಕೇವಲ ಒಂದು ವರ್ಷ ಪ್ರಾಯದ ಈ ಪಕ್ಷ ಭಾರತದ ಚುನಾವಣೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹಣ, ಜಾತಿ, ಅಧಿಕಾರ, ಕುಟುಂಬ ರಾಜಕಾರಣದಿಂದ ಹದಗೆಟ್ಟಿರುವ ಭಾರತೀಯ ರಾಜಕೀಯದಲ್ಲಿ ಆಮ್ ಆದ್ಮಿ ಪಕ್ಷ ತನ್ನದೇ ಹಾದಿಯಲ್ಲಿ ಸಾಗುತ್ತಾ ಸ್ವಚ್ಛವಾಗಿ ಕಾಣುತ್ತಿದೆ.
ಒಂದು ಸಾಮಾಜಿಕ ಘಟಕದಿಂದ ಹೊರಬಂದು ರಾಜಕೀಯ ಪಕ್ಷವನ್ನು ಸ್ಥಾಪಿಸುವುದು ಕೇಜ್ರಿವಾಲರಿಗೆ ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ. ಇನ್ನು ಆ ಪಕ್ಷದ ಪ್ರಣಾಳಿಕೆ ಆಕರ್ಷಕವಾಗಿದೆಯಾದರೂ, ಅಷ್ಟೇ ಅದು ಅಪ್ರಾಯೋಗಿಕವಾಗಿದೆ. ಉದಾಹರಣೆಗೆ, ವಿದ್ಯುತ್ ಸುಂಕವನ್ನು ಅರ್ಧಕ್ಕಿಳಿಸುವುದು! ಆಡಳಿತದ ಬಗ್ಗೆ ಸ್ಪಷ್ಟವಾದ ದೃಷ್ಟಿಯನ್ನು ಆ ಪಕ್ಷ ಹೊಂದಿಲ್ಲ ಎಂದು ಟೀಕಾಕಾರರು ಹೇಳುತ್ತಾರೆ. ಒಮ್ಮೆ ಚುನಾವಣೆ ಮುಗಿದು ಅದು ಒಂದು ವೇಳೆ ಅಧಿಕಾರಕ್ಕೆ ಬಂದಿತೆಂದರೆ, ಆಗ ಅನೇಕ ಸವಾಲುಗಳು ಎದುರಾಗಲಿವೆ. ತಾನು ನೀಡಿರುವ ಭರವಸೆಗಳನ್ನೆಲ್ಲ ಅಷ್ಟು ಸುಲಭವಾಗಿ ಅದಕ್ಕೆ ಈಡೇರಿಸುವುದಕ್ಕೆ ಸಾಧ್ಯವಿದೆಯೇ? ಇಲ್ಲದಿದ್ದರೆ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇನೆ ಎನ್ನುವ ಅದರ ಮಾತನ್ನು ಜನ 'ಹುಸಿ ಭರವಸೆ' ಎಂದು ಭಾವಿಸುತ್ತಾರೆ.
ಆಮ್ ಆದ್ಮಿ ಪಕ್ಷ ಯುವಜನತೆಯ ಆಕ್ರೋಶವನ್ನು ಬಳಸಿಕೊಳ್ಳುತ್ತಿದೆ. ಆದರೆ ಅದಕ್ಕೆ ಈಗ ಸಿಗುತ್ತಿರುವ ಬೆಂಬಲ ಮತಗಳಾಗಿ ಪರಿವರ್ತನೆಯಾಗಲಿವೆಯೇ ಎನ್ನುವುದೇ ಮುಖ್ಯ ಪ್ರಶ್ನೆ. ಕುಟುಂಬ ರಾಜಕಾರಣದ ಹಿಂದೆಯೇ ಗಿರಕಿ ಹೊಡೆಯುವ ಸ್ಥಾಪಿತ ಯೋಚನೆಗಳನ್ನು ಕೇಜ್ರಿವಾಲ್ ತೀವ್ರವಾಗಿ ಖಂಡಿಸುತ್ತಾರೆ. ಹಾಗಾಗೇ ಉಳಿದ ರಾಜಕಾರಣಿಗಳ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನತೆ ಕೇಜ್ರಿವಾಲರತ್ತ ಆಸೆಯಿಂದ ನೋಡುತ್ತಿದ್ದಾರೆ." ಎನ್ನುತ್ತದೆ ಟೈಮ್ಸ್ ನಿಯತಕಾಲಿಕ.
"ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಶುರುಮಾಡಿದ್ದಾಗ ನಮ್ಮ ಮುಖ್ಯ ಉದ್ದೇಶ ಜನತೆಯ ಮೂಲಕ ರಾಜಕೀಯ ವರ್ಗದ ಮೇಲೆ ಹೆಚ್ಚು ಒತ್ತಡ ತಂದು ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ಜಾರಿಗೆ ತರಬೇಕು ಎನ್ನುವುದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗೇ ನಾವು ಚುನಾವಣೆಗಳಲ್ಲಿ ಗೆದ್ದು, ಸಂಸತ್ತನ್ನು ಪ್ರವೇಶಿಸಿ ನಮ್ಮ ಕನಸನ್ನು ನನಸಾಗಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದೇವೆ" ಎನ್ನುತ್ತಾರೆ ಕೇಜ್ರಿವಾಲ್.
ಭಾರತದ ರಾಜಕೀಯ ರಂಗದಲ್ಲಿ ಹೊಸ ರಂಗಿನೊಂದಿಗೆ ಮಿಂಚುತ್ತಿರುವ ಆಮ್ ಆದ್ಮಿ ಪಕ್ಷದತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಆ ಪಕ್ಷ ತಮಗೆ ಯಾವ ಹಾನಿಯನ್ನೂ ಮಾಡದು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸಾರ್ವಜನಿಕವಾಗಿ ಹೇಳುತ್ತಿದ್ದಾವಾದರೂ, ಒಳಗೊಳಗೇ ಅವು ಹೆದರುತ್ತಿವೆ. ಆಮ್ ಆದ್ಮಿ ಪಕ್ಷ ಎಲ್ಲಾ 70 ಸ್ಥಾನಗಳಿಗೂ ಸ್ಪರ್ಧಿಸುತ್ತಿದೆ. ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಸಮಸ್ಯೆಯಿರುವುದರಿಂದ ಪ್ರತಿಯೊಂದಕ್ಕೂ ಪ್ರತ್ಯೇಕ ಪ್ರಣಾಳಿಕೆಗಳನ್ನು ಸಿದ್ಧಪಡಿಸುತ್ತಿದೆ ಆ ಪಕ್ಷ.
ಉದಾಹರಣೆಗೆ, 'ಬಿಜ್ಲಿ, ಸಡಕ್, ಪಾನಿ' (ವಿದ್ಯುತ್, ರಸ್ತೆ ಮತ್ತು ನೀರು) ಮತದಾರರ ಪ್ರಮುಖ ಸಮಸ್ಯೆಯಾದರೂ, ಅವುಗಳೊಟ್ಟಿಗೆ ಅನಧಿಕೃತ ಮದ್ಯದಂಗಡಿಗಳನ್ನೂ ಮುಚ್ಚಿಹಾಕಿಸುತ್ತೇವೆ. ಪ್ರತಿಯೊಂದು ಕ್ಷೇತ್ರವೂ ತನ್ನದೇ ಆದ ಸಮಸ್ಯೆಯಿಂದ ನರಳುತ್ತಿರುತ್ತದೆ. ಕೆಲವು ಏರಿಯಾಗಳಲ್ಲಿ ದೋಷಯುಕ್ತ ವಿದ್ಯುತ್ ಮೀಟರ್‌ಗಳಿರುತ್ತವೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಪಾರ್ಕಿಂಗ್, ಸರ್ಕಾರಿ ಶಾಲೆಗಳ ಕೊರತೆ, ಶೌಚಾಲಯ/ ಪಾರ್ಕ್ ನಿರ್ವಹಣೆ...ಹೀಗೆ ಅನೇಕ ಸಮಸ್ಯೆಗಳಿರುತ್ತವೆ. ಹಾಗಾಗೇ ಬೇರು ಮಟ್ಟದಿಂದಲೇ ಇಂಥ ಸಮಸ್ಯೆಗಳನ್ನು ಗುರುತಿಸಿ ತಕ್ಕ ಪರಿಹಾರವನ್ನು ನೀಡಬೇಕೇ ಹೊರತು, ಇಡೀ ದೆಹಲಿಗೇ ಒಂದು ಯೋಜನೆ ತಂದು ಬಿಟ್ಟರೆ ಎಲ್ಲಾ ಪ್ರದೇಶಗಳಲ್ಲೂ ಅದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕಾಗದು" ಎನ್ನುತ್ತಾರೆ ಕೇಜ್ರಿವಾಲ್.
ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬೇರೇ ಆಯ್ಕೆಗಳೇ ಇಲ್ಲ. ಅವೂ ಕೂಡ ಆಮ್ ಆದ್ಮಿ ಪಕ್ಷ ಸಾಗುತ್ತಿರುವ ಹಾದಿಯನ್ನೇ ತುಳಿಯಬೇಕಾಗಿದೆ. ಆದರೂ ಅವು ಸುಮ್ಮನೇ ಕುಳಿತಿಲ್ಲ. ಆ ಪಕ್ಷಕ್ಕೆ ಏನಾದರೊಂದು ಉಪದ್ರವ ಮಾಡುತ್ತಲೇ ಇವೆ. ಆಣ್ಣಾ ಹಜಾರೆ ಮತ್ತು ಕೇಜ್ರಿವಾಲ್‌ರ ಮಧ್ಯೆ ಬಿರುಕು ಮೂಡಿಸುವುದು, ಆ ಪಕ್ಷಕ್ಕೆ ಬರುತ್ತಿರುವ ದೇಣಿಗೆಯ ಬಗ್ಗೆ ತನಿಖೆಗೆ ಆದೇಶಿಸುವುದು...ಹೀಗೆ ಕ್ಷುದ್ರ ಪ್ರಯತ್ನ ನಡೆದೇ ಇದೆ. ಮತದಾರರು ಈ ನಾಟಕವನ್ನು ಗಮನಿಸುತ್ತಿದ್ದಾರೆ. ಅವರು ಆಮ್ ಆದ್ಮಿ ಪಕ್ಷಕ್ಕೆ ಒಂದು ಚಾನ್ಸ್ ಕೊಡುವರೇ? ಒಂದು ವೇಳೆ ಅವರು ಆ ಅವಕಾಶವನ್ನು ಕೊಟ್ಟರೆಂದರೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಂದಪ್ಪಳಿಸಲಿರುವ ಅತಿ ದೊಡ್ಡ ಅಘಾತ ಇದಾಗಲಿದೆ.
ಕೊನೆಯ ಗುಟುಕು: ಆರುಷಿಯನ್ನು ಕೊಂದದ್ದು ಯಾರು? ಈ ಪ್ರಶ್ನೆ ಇಂದಿಗೂ ಮುಂದುವರಿದಿದೆ!
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

