ಮೊನ್ನೆ ಸೋಲುವ ಮುನ್ನ ಆನಂದ್ ಸಾಧಿಸಿದ್ದೇನು ಕಡಿಮೆಯೇ?
END of an era! ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 10ನೇ ಪಂದ್ಯದಲ್ಲಿ..

END of an era!
ಚೆನ್ನೈನಲ್ಲಿ ಮೊನ್ನೆ ಶನಿವಾರ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 10ನೇ ಪಂದ್ಯದಲ್ಲಿ ವಿಶ್ವನಾಥನ್ ಆನಂದ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತು ಶರಣಾದಾಗ ಮಾಧ್ಯಮಗಳು ಅದನ್ನು ಬಣ್ಣಿಸಿದ್ದು ಹೀಗೆ. ಗೆದ್ದ ಆಟಗಾರನ ಬಗ್ಗೆ ಸಹಜವಾದ ಒಲವು ವ್ಯಕ್ತವಾಯಿತು. ಭಾರತದಲ್ಲೇ ಆನಂದ್‌ರನ್ನು ಸೋಲಿಸುವ ಮೂಲಕ ಕಾರ್ಲ್‌ಸನ್ ಅಪರೂಪದ ಸಾಧನೆ ಮಾಡಿದ್ದಾನೆ ಎಂದೆಲ್ಲ ಹಾಡಿ ಹೊಗಳಲಾಯಿತು. ಇನ್ನೂ 22 ವರ್ಷದ ಕಾರ್ಲ್‌ಸನ್ ತೋರಿದ ಕುಶಾಗ್ರತೆ ಮತ್ತು ಚಾಣಾಕ್ಷತನ ಜಾಗತಿಕ ಚೆಸ್‌ನಲ್ಲಿ ಹೊಸ ಅಧ್ಯಾಯ ಸೃಷ್ಟಿಸುವ ಎಲ್ಲ ಲಕ್ಷಣಗಳನ್ನು ಹೊಂದಿವೆ. ಸರಿಸುಮಾರು ಇದಕ್ಕೆ ಒಂದು ವಾರದ ಹಿಂದಷ್ಟೇ ಭಾರತದ ಅತಿ ಜನಪ್ರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 24 ವರ್ಷಗಳ ಸುದೀರ್ಘ ಕೃಷಿಯಿಂದ ನಿವೃತ್ತಿ ಘೋಷಿಸಿದ್ದರು. ಕಾಕತಾಳೀಯ ಎಂಬಂತೆ ಆನಂದ್ ಸೋಲು ಅವರ ವೃತ್ತಿ ಬದುಕಿನ ಬಗ್ಗೆ ವಿಶ್ಲೇಷಣೆಗೂ ದಾರಿಯಾಯಿತು. ನಿವೃತ್ತಿ ಬೆನ್ನಲ್ಲೇ ಸಚಿನ್‌ಗೆ 'ಭಾರತ ರತ್ನ' ಗೌರವ ಸಿಕ್ಕಿದಾಗ ಆನಂದ್‌ಗೂ ಕೊಡಬಹುದಿತ್ತು ಎಂಬ ಅನಗತ್ಯ ವಾದಗಳನ್ನು ಮಂಡಿಸಲಾಯಿತು. ಆದರೆ, ಈ ಅಪ್ರಸ್ತುತ ವಾದ-ವಿವಾದಗಳಲ್ಲಿ ಕಳೆದು ಹೋದ ವಿಷಯವೆಂದರೆ ಈ ಇಬ್ಬರೂ ಅವರವರ ಕ್ಷೇತ್ರದಲ್ಲಿ ಭಾರತದ 'ರತ್ನ'ಗಳೇ ಎಂಬುದು. ಏಕೆಂದರೆ,
2011 ವಿಶ್ವನಾಥನ್ ಆನಂದ್ ಪಾಲಿಗೆ ಪರ್ವಕಾಲ. ಒಂದು ರೀತಿಯಲ್ಲಿ ಆನಂದ್ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರಿಗೂ ಇದು ಅತಿ ಮಹತ್ವದ ವರ್ಷವೇ ಸರಿ. ಭಾರತದಲ್ಲಿಯೇ ನಡೆದ ಕ್ರಿಕೆಟ್ ವಿಶ್ವಕಪ್ ಗೆದ್ದು ಸಚಿನ್ ತಮ್ಮ ಎರಡು ದಶಕಗಳ ಕನಸು ನನಸಾಗಿಸಿಕೊಂಡರೆ, ಆನಂದ್, ವಿಶ್ವ ಚೆಸ್ ಚಾಂಪಿಯನ್ ಆಗಿದ್ದೇ ಅಲ್ಲದೆ ಚೆಸ್ ಆಟಗಾರರಿಗೆ ಜಾಗತಿಕ ಮಟ್ಟದಲ್ಲಿ ನೀಡಲಾಗುವ (ELO) ರೇಟಿಂಗ್‌ನಲ್ಲಿ ತಮ್ಮ ಗರಿಷ್ಠ ಸಾಧನೆ (2877) ಮಾಡುವ ಮೂಲಕ ಆ ವರ್ಷವನ್ನು ಅತ್ಯಂತ ಸ್ಮರಣೀಯವಾಗಿಸಿಕೊಂಡರು.
ಕಳೆದ ಎರಡೂವರೆ ದಶಕದಲ್ಲಿ ಭಾರತೀಯ ಕ್ರೀಡೆಯನ್ನು ಮೂರು ಹೆಸರುಗಳು ಆವಾಹಿಸಿಕೊಂಡಿವೆ. ಈ ಮೂವರ ಏಳಿನಲ್ಲಿ ಹಿಗ್ಗಿ, ಬೀಳಿನಲ್ಲಿ ಕುಗ್ಗಿದ ಅಸಂಖ್ಯ ಕ್ರೀಡಾಪ್ರೇಮಿಗಳಿದ್ದಾರೆ. ಹಾಗೆ ನೋಡಿದರೆ ಹಿರಿಹಿರಿ ಹಿಗ್ಗಿದ ಅಭಿಮಾನಿಗಳೇ ಹೆಚ್ಚು. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಎಂಬ ತಾರೆ ಉದಯಿಸಿದ ಬೆನ್ನಲ್ಲೇ ಟೆನಿಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ಇವರಿಬ್ಬರಿಗೂ ತುಸು ಮುನ್ನ ವಿಶ್ವನಾಥನ್ ಆನಂದ್ ಚೆಸ್‌ನಲ್ಲಿ ಅವತರಿಸಿದ್ದರು. ಒಂದು ರೀತಿ ಎರಡೂವರೆ ದಶಕದಲ್ಲಿ ಈ ಮೂರು ರಂಗಗಳಲ್ಲಿ ಭಾರತ ಏನೇ ಸಾಧಿಸಿದ್ದರೂ ಅದರಲ್ಲಿ ಈ ಮೂವರು ಅತ್ಯಂತ ಪ್ರಧಾನ ಪಾತ್ರ ವಹಿಸಿದ್ದರು. ಕ್ರಿಕೆಟ್‌ನಲ್ಲಂತೂ ಭಾರತ ಎಂದರೆ ಸಚಿನ್ ಎಂಬಷ್ಟರ ಮಟ್ಟಿಗೆ ಆತನ ಪ್ರಭಾವಳಿ ವ್ಯಾಪಿಸಿದರೆ, ಟೆನಿಸ್‌ನಲ್ಲಿ ಲಿಯಾಂಡರ್ ಪೇಸ್ ಸಹ ಅದೇ ಎತ್ತರಕ್ಕೆ ಬೆಳೆದಿದ್ದ. ಅದರಲ್ಲೂ 1996ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಮುಡಿಗೇರಿಸಿ ಪೇಸ್ ಒಂದು ಹೆಜ್ಜೆ ಮುಂದೆಯೇ ಹೋಗಿದ್ದ. ಸಚಿನ್‌ಗಾದರೆ ಆತನ ಜೊತೆ 11 ಜನರ ತಂಡವೇ ಇತ್ತು, ಇನ್ನೂ ಪೇಸ್ ಒಲಿಂಪಿಕ್ ಕಂಚು ಹೊರತುಪಡಿಸಿ ಇತರ ಯಶಸ್ಸು ಸಾಧಿಸಿದ್ದು ಮತ್ತೊಬ್ಬ ಜೊತೆಗಾರನ ಸಂಗಡವೆ. ಆದರೆ, ಆನಂದ್ ಮಾತ್ರ ಯಶಸ್ಸಿನ ಹಾದಿಯಲ್ಲಿ ಏಕಾಂಗಿ ಒಂದೆತ್ತಿನ ಗಾಡಿಯ ಹಾಗೆ ಆತನ ಪಯಣ. ಯಶಸ್ಸಿಗೂ ವೈಫಲ್ಯಕ್ಕೂ ಆತನ ಧೀಶಕ್ತಿಯೇ ಪ್ರೇರಣೆ. ಸೋತಾಗ ಸಾಂತ್ವನ ಹೇಳಲು ಕುಟುಂಬ ಇತ್ತು ಮತ್ತು ಅದೇ ಸೋಲನ್ನೇ ಪ್ರೇರಣೆಯಾಗಿಸಿಕೊಂಡು ಯಶಸ್ಸಿನ ಶಿಖರ ಏರಿದಾಗಲೂ ಅದನ್ನು ಹಂಚಿಕೊಳ್ಳಲು ಆನಂದ್‌ಗೆ ಇದ್ದದ್ದು ಆತನ ಕುಟುಂಬ ಮಾತ್ರ. ಆದರೆ, ಇದಾವುದೂ ಆನಂದ್‌ರನ್ನು ಧ್ರುತಿಗೆಡಿಸಲಿಲ್ಲ. ಏಕೆಂದರೆ ಚೆಸ್ ಆನಂದ್ ಪಾಲಿಗೆ ಎರಡನೇ ಬದುಕೇ ಆಗಿತ್ತು. ಐದು-ಆರನೇ ವಯಸ್ಸಿನಲ್ಲಿಯೇ ಆತನ ತಾಯಿ ಆನಂದ್‌ನನ್ನು ಚೆಸ್ ಲೋಕಕ್ಕೆ ತಳ್ಳಿದ್ದರು. ಅದರಲ್ಲಿಯೇ ಬದುಕು ರೂಪಿಸಿಕೊಳ್ಳುವಂತೆಯೂ ಪ್ರೇರೇಪಿಸಿದ್ದರು. ಆ ಗೀಳು ಆನಂದ್‌ರನ್ನು ಇನ್ನೂ ಬಿಟ್ಟಿಲ್ಲ. 1980ರ ದಶಕದ ದ್ವಿತೀಯಾರ್ಧದಲ್ಲಿ ಆನಂದ್ ಮೊದಲು ಜೂನಿಯರ್ ಮಟ್ಟದಲ್ಲಿ ಕ್ರಮೇಣ ಹಿರಿಯರ ಸಂಗಡ ಸೆಣಸಾಟದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದ ಸಂದರ್ಭದಲ್ಲಿ ಆತನ ಪ್ರಶ್ನೆಗಳಿಗೆ ಉತ್ತರಿಸಲು, ಕುತೂಹಲಗಳನ್ನು ತಣಿಸಲು, ಹೊಸ ಹೊಸ ನಡೆಗಳ ಬಗ್ಗೆ ಮಾಹಿತಿ ನೀಡಲು, ವಿವರಿಸಲು ಭಾರತದಲ್ಲಿ ಮೇಧಾವಿ ಚೆಸ್ ಪಟುಗಳು ಯಾರೂ ಇರಲಿಲ್ಲ. ಅಷ್ಟೇಕೆ, 1988ರಲ್ಲಿ ಆನಂದ್ ಗ್ಯ್ರಾಂಡ್ ಮಾಸ್ಟರ್ ಆಗುವವರೆಗೆ ಭಾರತದಲ್ಲಿ ಯಾರೂ ಗ್ರ್ಯಾಂಡ್ ಮಾಸ್ಟರ್‌ಗಳಿರಲಿಲ್ಲ! ಆನಂದ್ ಚೆಸ್ ರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಷ್ಯಾ ಜಾಗತಿಕ ಚೆಸ್ ಕ್ಷೇತ್ರವನ್ನು ಆಳುತ್ತಿತ್ತು. ಹೆಚ್ಚೆಂದರೆ ಒಂದೆರಡು ಐರೋಪ್ಯ ದೇಶಗಳ ಆಟಗಾರರು ಬಿಟ್ಟರೆ ಚೆಸ್ ರಷ್ಯಾದವರ ಆಟವೇನೊ ಎನಿಸುವಂಥಾ ಪರಿಸ್ಥಿತಿ ಇತ್ತು. ಕಾರ್ಪೋವ್, ಕ್ಯಾಸ್ಪರೋವ್‌ಗಳ ಕಬಂಧ ಹಿಡಿತದಿಂದ ಬಿಡಿಸಿಕೊಳ್ಳಲು ಚೆಸ್‌ಗೆ ಸಾಧ್ಯವಿರಲಿಲ್ಲ. ರಷ್ಯಾದಲ್ಲಂತೂ ಚೆಸ್ ಮನೆ ಮನೆಯ ಆಟ. ನಮ್ಮಲ್ಲಿ ಮೊದಲು ಚೌಕಾಬಾರ ಆಟ ಇದ್ದಂತೆ. ಅಥವಾ ತೀರಾ ಹಿಂದೆ ನಮ್ಮದೇ ಪಗಡೆ (ಚೆಸ್‌ನ ಪೂರ್ವಾವತಾರ) ಇದ್ದಿದ್ದ ಹಾಗೆ. ರಷ್ಯಾದಲ್ಲಿ ಆಗ ನೂರರ ಸಂಖ್ಯೆಯಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳು, ಡಜನ್‌ಗಟ್ಟಲೇ ಲೆಕ್ಕದಲ್ಲಿ ಗ್ರ್ಯಾಂಡ್ ಮಾಸ್ಟರ್‌ಗಳು ತುಂಬಿ ಹೋಗಿದ್ದರು. ಅದೊಂದು ರೀತಿ ಅಭೇದ್ಯ ಕೋಟೆಯೇ ಆಗಿತ್ತು. ಆ ಕೋಟೆಗೆ ಕಲ್ಲು ಹೊಡೆಯುವುದೆಂದರೆ ಅದೇನೂ ಸಾಮಾನ್ಯ ಕೆಲಸವಾಗಿರಲಿಲ್ಲ. ಆದರೆ, ಆನಂದ್ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಚೆಸ್ ಬಿಟ್ಟರೆ ಆನಂದ್‌ಗೆ ಬೇರೆ ಹವ್ಯಾಸವೂ ಇರಲಿಲ್ಲ.
ಆರಂಭದ ದಿನಗಳಲ್ಲಿ ಆನಂದ್ ತೀರಾ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದರು. ಪಟಪಟನೆ ಕಾಯಿ ನಡೆಸಿ ಎದುರಾಳಿಯನ್ನು ದಂಗುಬಡಿಸಿ ವಿಜಯದ ನಗೆ ಬೀರುವಲ್ಲಿ ಸಿದ್ಧಹಸ್ತರೆನಿಸಿದ್ದರು. ಭಾರತದಲ್ಲಿ ಈತನಿಗೆ ಸಮನಾಗಿ ಕಾಯಿ ನಡೆಸುವ ಯಾವುದೇ ಸವಾಲುದಾರ ಇರಲಿಲ್ಲ. ಆಗೆಲ್ಲ ಆನಂದ್ ನೆರವಿಗೆ ಬಂದದ್ದು ಚೆಸ್ ಕುರಿತಾದ ಪುಸ್ತಕಗಳು ಹಾಗೂ ವಿಡಿಯೋಗಳು. ಗಂಟೆಗಟ್ಟಲೆ ಆನಂದ್ ಈ ಪುಸ್ತಕ, ವಿಡಿಯೋಗಳಲ್ಲಿ ಕಳೆದು ಹೋಗಿದ್ದಿದೆ. ಅವುಗಳನ್ನು ಮುಂದಿಟ್ಟುಕೊಂಡೇ ಚೆಸ್ ಬೋರ್ಡ್ ಮೇಲೆ ಕಾಯಿ ನಡೆಸಿದ್ದಿದೆ. ಒಂದು ರೀತಿಯಲ್ಲಿ ಇವುಗಳೇ ಆನಂದ್‌ನ ಎದುರಾಳಿಗಳು! ಹೀಗೆ ಒಂದೊಂದೇ ಮೆಟ್ಟಿಲೇರಿ ಅಗತ್ಯವಾದ (ELO) ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತ ಸಾಗಿದ ಆನಂದ್ 1990ರ ದಶಕದಲ್ಲಿ ಇನ್ನಿಲ್ಲದಂತೆ ರಷ್ಯಾದ ಭದ್ರಕೋಟೆಗೆ ಲಗ್ಗೆ ಹಾಕತೊಡಗಿದ. ಜಾಗತಿಕ ಮಟ್ಟದ ಪಂದ್ಯಾಟಗಳಲ್ಲಿ, ಸರ್ಕ್ಯೂಟ್‌ಗಳಲ್ಲಿ ತನ್ನ ಛಾಪು ಮೂಡಿಸಿ ಕ್ರಮೇಣ ಎದುರಾಳಿಗಳ ಗೌರವ ಸಂಪಾದಿಸುವಲ್ಲಿ ಯಶಸ್ವಿಯೂ ಆದ. ಇದೇ ಜೋಶ್‌ನಲ್ಲಿ 1995ರಲ್ಲಿ ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕೇಂದ್ರ (2001ರ ಭಯೋತ್ಪಾದನಾ ದಾಳಿಯಲ್ಲಿ ಧರೆಗುರುಳಿದ ಕಟ್ಟಡ)ದಲ್ಲಿ ನಡೆದ ಭಾರೀ ಕುತೂಹಲದ ಪಂದ್ಯದಲ್ಲಿ ಆನಂದ್, ಚೆಸ್ ದಂತಕಥೆ ಗ್ಯಾರಿ ಕ್ಯಾಸ್ಪರೋವ್ ವಿರುದ್ಧ ತೊಡೆ ತಟ್ಟಿದ. ಈ ಪಂದ್ಯ ಜಗತ್ತಿನಾದ್ಯಂತ ಭಾರಿ ಕುತೂಹಲ ಕೆರಳಿಸಿತ್ತು. ಕಾರ್ಪೋವ್ ಎಂಬ ಹೆಮ್ಮರವನ್ನು ಉರುಳಿಸಿ ಏಕಮೇವಾದ್ವಿತೀಯನಂತೆ ಮೆರೆಯುತ್ತಿದ್ದ ಕ್ಯಾಸ್ಪರೋವ್ ಆಗಿನ್ನೂ 25ರ ವಯಸ್ಸಿನ ಆನಂದ್‌ರನ್ನು ಎಷ್ಟು ಬೇಗ ಹಿಮ್ಮೆಟ್ಟಿಸಬಹುದು ಎಂಬುದೇ ಎಲ್ಲರ ಕುತೂಹಲವಾಗಿತ್ತು. ಆದರೆ, ಆನಂದ್ ಸುಲಭಕ್ಕೆ ಸೋಲಲಿಲ್ಲ, ಪ್ರತಿ ನಡೆಯಲ್ಲಿಯೂ ಕ್ಯಾಸ್ಪರೋವ್‌ಗೆ ತಕ್ಕುದಾದ ಸವಾಲನ್ನೇ ಒಡ್ಡಿದ್ದರು. ಅತ್ತ ಕ್ಯಾಸ್ಪರೋವ್‌ಗಾದರೂ ದೊಡ್ಡ ದಂಡೇ ಇತ್ತು. ಕೂತರೆ, ನಿಂತರೆ ಮುಂದಿನ ನಡೆಯ ಬಗ್ಗೆ ಕಿವಿಯಲ್ಲಿ ಉಸುರುವವರಿದ್ದರು. ಅದೇ ಆನಂದ್‌ಗೆ ಆ ಪರಿಯ ಬೆಂಬಲ, ಆಸರೆ ಯಾವುದೂ ಇರಲಿಲ್ಲ. ಅಂದು ಆತನ ಬಳಿ ಇದ್ದದ್ದು ಈ ಹಿಂದೆ ಗಳಿಸಿದ್ದ ಅಲ್ಪ ಅನುಭವ ಮತ್ತು ಚೆಸ್ ಪುಸ್ತಕ, ವಿಡಿಯೋಗಳನ್ನು ನೋಡಿ ಕಲಿತಿದ್ದ ತಂತ್ರಗಾರಿಕೆ ಮಾತ್ರ. ಅವು ಕೂಡ ಅಂದು ಆನಂದ್ ಕೈಹಿಡಿಯಲಿಲ್ಲ. ಅಂದು ಆನಂದ್ ಆ ದೈತ್ಯ ಆಟಗಾರನೆದುರು ಸೋತರೂ ರಷ್ಯಾದ ಭದ್ರಕೋಟೆಯ ಅವನತಿಗೆ ನಾಂದಿ ಹಾಡಿದ್ದರು. ಅದಾಗಿ ಕೆಲ ವರ್ಷಗಳಲ್ಲಿ ಜಾಗತಿಕ ಚೆಸ್ ಸಂಸ್ಥೆ ಇಬ್ಭಾಗವಾಗಿ ಆನಂದ್ ಈ ಬಾರಿ ಕಾರ್ಪೋವ್ ವಿರುದ್ಧ ಸೆಣಸಬೇಕಾಯಿತು. ಅಂದು ಚೆಸ್ ಸಂಸ್ಥೆಯ ಆಪದ್ಧದಿಂದಾಗಿ ರಷ್ಯನ್ ಅಧಿಪತ್ಯದ ದೊಡ್ಡ ಸಂಕೇತವಾಗಿದ್ದ ಕಾರ್ಪೋವ್ ಸೋತು ಸುಣ್ಣವಾಗುವುದು ತಪ್ಪಿತು. ಕುಡಿದ ನೀರಲುಗದಂತೆ ನೇರವಾಗಿ ವಿಶ್ವಕಪ್ ಫೈನಲ್ ಆಡುವ ಹಿರಿತನ ಕಾರ್ಪೋವ್ ಪಾಲಿಗೆ ಒಲಿಯಿತು. ಅದೇ ತಿಂಗಳಾನುಟ್ಟಲೆ ನಿರಂತರವಾಗಿ ಆಡಿ ಬಸವಳಿದು ಕೂಡಲೇ ವಿಶ್ವ ಕಿರೀಟಕ್ಕಾಗಿ ಸೆಣಸಬೇಕಾದ ಪಾಡು ಆನಂದ್‌ರದ್ದಾಯಿತು. ಇಡೀ ಚೆಸ್ ಜಗತ್ತು ಅಂದು ಆನಂದ್ ಪರ ಸಹಾನುಭೂತಿ ವ್ಯಕ್ತಪಡಿಸಿತು. ನಿಜ, ಅಂದು ಆನಂದ್ ಗೆಲ್ಲಲಿಲ್ಲ, ಆದರೆ, ಗೆದ್ದ ಆಟಗಾರನಿಗಿಂತ ಹೆಚ್ಚಿನ ಮರ್ಯಾದೆ, ಮೆಚ್ಚುಗೆ ಗಳಿಸಿದ್ದರು. ಈ ಎರಡೂ ಪಂದ್ಯಗಳ ಮೂಲಕ ರಷ್ಯದ ಅಧಿಪತ್ಯಕ್ಕೆ ಸವಾಲೆಸೆದ ಆನಂದ್ 2000ದ ದಶಕದಲ್ಲಿ ಅದನ್ನು ಹೊಡೆದುರುಳಿಸಿ ತಮ್ಮದೇ ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯಾದರು. ಸುಮಾರು 15 ವರ್ಷಗಳ ಈ ಹೋರಾಟದಲ್ಲಿ ಆನಂದ್ ಸಂಪೂರ್ಣ ಏಕಾಂಗಿ.
ಇಂದು ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಅದರ ಔನ್ನತ್ಯ, ಜನಪ್ರಿಯತೆಗೆ 1983ರ ವಿಶ್ವಕಪ್ ವಿಜಯವನ್ನು ಅಳತೆಗೋಲಾಗಿ ತೆಗೆದುಕೊಳ್ಳಲಾಗುತ್ತದೆ. ಅದೊಂದು ಗೆಲುವು ಹೇಗೆ ಕ್ರಿಕೆಟ್ ಅನ್ನು ಗಲ್ಲಿ-ಗಲ್ಲಿಗೆ ಕೊಂಡೊಯ್ಯಿತು, ಹೇಗೆ ಈ ಆಟ ದೇಶವಾಸಿಗಳನ್ನು ಸಮೂಹ ಸನ್ನಿಯಂತೆ ಆವರಿಸಿಕೊಂಡಿತು, ಹೇಗೆ ನೂರಾರು ಸಮರ್ಥ ಆಟಗಾರರನ್ನು ರೂಪಿಸಿತು ಎಂದೆಲ್ಲ ವ್ಯಾಖ್ಯಾನಿಸಲಾಗುತ್ತದೆ. ದೇಶದ ಕ್ರಿಕೆಟ್ ಇತಿಹಾಸವನ್ನು 1983ರ ಪೂರ್ವ ಮತ್ತು ನಂತರದ ಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಒಂದು ವೇಳೆ ಇದೇ ಅಳತೆಗೋಲನ್ನು ಭಾರತೀಯ ಚೆಸ್‌ಗೆ ತರುವುದಾದರೆ ಅದು ಆನಂದ್‌ರ ಸುತ್ತಲೇ ತಿರುಗುತ್ತದೆ. ಆನಂದ್ ಬರುವ ಮುನ್ನ ಚೆಸ್ ಆಟ ಭಾರತದಲ್ಲಿ ಒಂದು ವರ್ಗಕ್ಕೆ ಸೀಮಿತವಾಗಿತ್ತು. ಯಾವುದೇ ಗ್ರ್ಯಾಂಡ್ ಮಾಸ್ಟರ್‌ಗಳಿರಲಿಲ್ಲ. ಆದರೆ, ಆನಂದ್ ಬಂದ ನಂತರ ನೋಡಿ, ಇಂದು ಭಾರತದಲ್ಲಿ 30ಕ್ಕೂ ಹೆಚ್ಚು ಗ್ರ್ಯಾಂಡ್ ಮಾಸ್ಟರ್‌ಗಳಿದ್ದಾರೆ. ಇವರಲ್ಲಿ ಯಾರನ್ನು ಬೇಕಾದರೂ ಕೇಳಿ ನೋಡಿ. ಎಲ್ಲರೂ ಆನಂದ್ ಜೊತೆಗಿನ ಒಡನಾಟ, ಅವರ ನಡೆಗಳನ್ನು ನೋಡಿ, ಅಭ್ಯಸಿಸಿ ತಮ್ಮ ಹೆಜ್ಜೆ ಕಂಡುಕೊಂಡಿರುವುದಾಗಿ ಹೇಳುತ್ತಾರೆ. ಈ ಹಿಂದೆ ರಷ್ಯಾ ನೀಡಿದಂತೆ ಭಾರತದಲ್ಲಿ ಚೆಸ್‌ಗೆ ಯಾವುದೇ ಪೂರಕ ಒತ್ತಾಸೆ, ಬೆಂಬಲ ಇಲ್ಲ. ಇಲ್ಲಿ ಚೆಸ್ ಒಂದು ವೃತ್ತಿ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಂತಹುದರಲ್ಲಿ ಆನಂದ್ ಒಂದು ತಲೆಮಾರಿನ ಚೆಸ್ ಆಟಗಾರರನ್ನು ಪರೋಕ್ಷವಾಗಿ ರೂಪಿಸಿದ್ದಾರೆಂದರೆ ಅದು ಕೇವಲದ ವಿಷಯ ಅಲ್ಲ. ನಿಜ, ಇಂದು ಆನಂದ್ ನಾರ್ವೆಯ ಕಿರಿಯ ಆಟಗಾರನ ಮುಂದೆ ಸೋತಿರಬಹುದು, ಸಾಮ್ರಾಜ್ಯ ಕಳೆದುಕೊಂಡಿರಬಹುದು. ಆದರೆ, ಅವರ ಪ್ರಭಾವಳಿ ಮಾಸಿಲ್ಲ. ಜಾಗತಿಕ ಚೆಸ್ ರಂಗದಲ್ಲಿ ನಾವೂ ತಲೆ ಎತ್ತಿನಿಲ್ಲುವಂತೆ ಮಾಡಿದ ಈ ಆನಂದ ನಿಜವಾಗಲೂ ಭಾರತ'ರತ್ನ'ವೇ ಸರಿ. ಏನನ್ನುತ್ತೀರಿ?
- ಕೆ.ಎಸ್. ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


