ಬಾಗಿಲಿಗೆ ಬಂದಿರುವ ಕಪಿಸೇನೆ, ಹುಲುಮಾನವ ಸಂಧಾನಕ್ಕೆ ಸಿದ್ಧನೇ?
ಕುವೆಂಪು ಅವರ ಮಕ್ಕಳ ಪದ್ಯ 'ಬೊಮ್ಮನಹಳ್ಳಿ ಕಿಂದರಿಜೋಗಿ'ಯ ಕೆಲ ಸಾಲುಗಳೆಲ್ಲ ಉಕ್ಕುಕ್ಕಿ ನೆನಪಿಗೆ ಬರುತ್ತಿವೆ.

ಕುವೆಂಪು ಅವರ ಮಕ್ಕಳ ಪದ್ಯ 'ಬೊಮ್ಮನಹಳ್ಳಿ ಕಿಂದರಿಜೋಗಿ'ಯ ಕೆಲ ಸಾಲುಗಳೆಲ್ಲ ಉಕ್ಕುಕ್ಕಿ ನೆನಪಿಗೆ ಬರುತ್ತಿವೆ. ಕವಿ ಕಲ್ಪನೆಯಲ್ಲಿ ತುಂಗಾತೀರದ ಬಲಗಡೆಯಲ್ಲಿ ಹಿಂದೆ ಯಾವಾಗಲೋ ಇದ್ದ ಬೊಮ್ಮನಹಳ್ಳಿಯಲ್ಲಿ ಫನ್ನಿ ಎಂದೆನಿಸಬಹುದಾದ್ದೊಂದು ಗಂಭೀರ ಸಮಸ್ಯೆ! 'ಅಲ್ಲೇನಿಲಿಗಳ ಕಾಟವೆ ಕಾಟ, ಅಲ್ಲಿನ ಜನಗಳ ಗತಿಗೋಳಾಟ'.
ಇಲಿಗಳು ಬೆಕ್ಕು-ನಾಯಿಗಳನ್ನೇ ಬಡಿದು ಹಿಂಬಾಲಿಸಿ ಹೆದರಿಸಿದವಂತೆ. ಅವುಗಳ ಸಂಖ್ಯೆ ಮಿತಿಮೀರಿ ಅವು ಕೊಡದ ಉಪದ್ರಗಳೇ ಇಲ್ಲ ಎಂಬಂತಾಯಿತು. ರೇಷ್ಮೆಸೀರೆ- ರವಿಕೆ ಕಣಗಳನ್ನೇ ಹರಿದುಹಾಕಿದ ಇಲಿಗಳಿಗೆ ಯಾವ ಗತಿ ತೋರಿಸುವುದು ಎಂಬುದು ತಿಳಿಯದೆ, 'ಮುಂಗಾಣದೆ ಜಟ್ಟಕ್ಕನು ಹೋಗಿ ಬತ್ತಿದ ಕೆರೆಯನು ಹಾರಿದಳು, ಸತ್ತೇ ಎನ್ನುತ ಚೀರಿದಳು..''ಭೃಂಗಾಮಲಕದ ತೈಲವ ಹಚ್ಚಿದ ಶೇಷಕ್ಕನ ನುಣ್ಣನೆ ಫಣಿವೇಣಿ, ಬೆಳಗಾಗೇಳುತ ಕನ್ನಡಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ'. ಸಮಸ್ಯೆ ಮೈಮೇಲೆ ಮುರಿದುಕೊಂಡುಬಿದ್ದಿದ್ದಾಗ ಎಷ್ಟು ಬೆಲೆ ತೆತ್ತಾದರೂ, ಯಾವ ಷರತ್ತಿಗೆ ಒಪ್ಪಿಯಾದರೂ ಅದನ್ನು ಬಗೆಹರಿಸಿಕೊಳ್ಳುವ ಮಾತನಾಡುತ್ತೇವೆ. ಆದರೆ ಸಮಸ್ಯೆ ತುಸುವೇ ಕರಗುತ್ತಲೇ ನಮ್ಮೆಲ್ಲ ಬದ್ಧತೆಯನ್ನೂ ಮರೆಯುತ್ತೇವೆ. ಹಾಗೊಂದು ಸಮಸ್ಯೆ ಇದ್ದಿದ್ದೇ ಸುಳ್ಳಾಗಿತ್ತೇನೊ ಎಂಬಂತೆ ಮುಖ ತಿರುವಿ ಇಲ್ಲಿಗೀಕತೆ ಮುಗಿಯಿತು ಎಂದು ಕೃತಘ್ನರಾಗುತ್ತೇವೆ. ಆ ಕತೆಯಲ್ಲೂ ಆಗಿದ್ದು ಅದೆ. ಇಲಿಗಳ ಸಮಸ್ಯೆ ಬಗೆಹರಿಸಿದರೆ, 'ಊರೇ ನಿನ್ನದು, ನಾ ನಿನ್ನಾಳು' ಎಂದಿದ್ದ ಗೌಡ, ಜೋಗಿಯು ಕಿಂದರಿ ನುಡಿಸಿ ಇಲಿಗಳನ್ನೆಲ್ಲ ಸೆಳೆದು ನದಿಯಲ್ಲಿ ಮುಳುಗಿಸಿ ಬಂದಾದಮೇಲೆ, 'ಕಾಸೈದಾರನು ತೆಗೆದುಕೊ ಜೋಗಿ, ಪುರಿಗಡಲೆಯನು ಕೊಂಡುಕೊ ಹೋಗಿ' ಎನ್ನಬೇಕೆ? ಕ್ರುದ್ಧನಾದ ಕಿಂದರಿಜೋಗಿ ಮತ್ತೊಮ್ಮೆ ಕಿಂದರಿನಾದದ ಮೂಲಕ ಊರ ಮಕ್ಕಳನ್ನೆಲ್ಲ ಸಮ್ಮೋಹಗೊಳಿಸಿ ಕರೆದೊಯ್ದುಬಿಟ್ಟ ಎಂಬಲ್ಲಿಗೆ ಕತೆ ಅಂತ್ಯ ಕಾಣುತ್ತದೆ. ಮಾತು ಮತ್ತು ಸಂಕಲ್ಪಗಳಿಗೆ ನಿಷ್ಠರಾಗಬೇಕಿರುವ ಬದ್ಧತೆಯ ಪಾಠವನ್ನು ಹಿರಿಕಿರಿಯರೆಲ್ಲರಿಗೆ ಮನಮುಟ್ಟಿಸುತ್ತದೆ ಈ ಪದ್ಯ.
---
ಈ ಕ್ಷಣಕ್ಕೆ ತೀರ ಚರ್ಚೆಯಾಗಬೇಕು ಎಂದೆನಿಸದ, ಸುಮ್ಮನೇ ಗಮನಿಸಿದರೆ ಮಿಕ್ಕಿ-ಮೌಸ್ ಧಾರಾವಾಹಿಯ ಥರದ್ದೇ ರಂಜನೆ ಕೊಡಬಹುದಾದ ಸಮಸ್ಯೆಯೊಂದು ವಾಸ್ತವದಲ್ಲಿ ಕಾಡುತ್ತ ಅನೇಕ ಬೊಮ್ಮನಹಳ್ಳಿ- ಬೊಮ್ಮನಪಟ್ಟಣಗಳನ್ನು ನಿರ್ಮಿಸುತ್ತ ಸಾಗಿದೆ!
ಹಳ್ಳಿಮನೆಯ ಅಂಗಳ. ಅಲ್ಲಿರುವ ತುಳಸಿಕಟ್ಟೆಗೆ ಪೂಜೆ ಮಾಡುವುದಕ್ಕೆ ಯಜಮಾನರು ಎಲ್ಲ ಪರಿಕರಗಳೊಂದಿಗೆ ಹೊರಬಂದಿದ್ದಾರೆ. ಕಾಯಿ ಒಡೆಯುವುದಕ್ಕೆ ಕತ್ತಿಯನ್ನೇ ತಂದಿಲ್ಲವಲ್ಲ ಎಂಬುದು ಗಮನಕ್ಕೆ ಬಂದೊಡನೆ ತಂದಿದ್ದನ್ನು ತುಳಸಿಕಟ್ಟೆ ಬಳಿಯೇ ಇಟ್ಟು ಮತ್ತೊಮ್ಮೆ ಒಳಮನೆಗೆ ಹೋಗಿದ್ದಾರೆ. ಅರೆಕ್ಷಣದಲ್ಲಿ ತಿರುಗಿಬಂದು ನೋಡಿದರೆ ಪೂಜಾತಟ್ಟೆ ಅಸ್ತವ್ಯಸ್ತ. ತೆಂಗಿನಕಾಯನ್ನೇ ಎತ್ತಿಕೊಂಡು ಮರವೇರಿ ಕುಳಿತಿರುವ ಮಂಗ, ನಾನು ಕತ್ತಿ-ಗಿತ್ತಿ ಇಲ್ದೆ ಹೇಗೋ ಒಡಕೊಂಡು ತೀಂತೀನಿ ಎಂಬಂತೆ ಕರ್ಕಶ ಧ್ವನಿಯಲ್ಲಿ ಇವರನ್ನು ಅಣಕಿಸುತ್ತಿದೆ.
ಇದೊಳ್ಳೆ ಮಂಗನಾಟ ಅಂತ ನೀವು ನಕ್ಕು ಹಗುರಾಗುವಂತಿಲ್ಲ. ಇದೊಂದು ತುಂಬ ಚಿಕ್ಕ ಉದಾಹರಣೆ ಅಷ್ಟೆ. ಆನೆದಾಳಿ, ಚಿರತೆ ದಾಳಿ ಇಂಥ ವಿದ್ಯಮಾನಗಳ ನಡುವೆ ಮಂಗಗಳದ್ದೇನು ಮಹಾವಾರ್ತೆ ಎಂದುಕೊಂಡರೆ ಈ ಅಪಾಯವನ್ನು ಅತಿಯಾಗಿ ಕಡೆಗಣಿಸಿದಂತೆಯೇ ಸರಿ. ಹಳ್ಳಿಯಿಂದ ದಿಲ್ಲಿಯವರೆಗೆ ಅಕ್ಷರಶಃ ಕಪಿಸೇನಾ ಜಮಾವಣೆಯೇ ಆಗುತ್ತಿದೆ. ಉಳಿದ ಪ್ರಾಣಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳು ಕೆಲ ಪ್ರದೇಶಗಳಿಗೆ ಸೀಮಿತ. ಕ್ರೂರಪ್ರಾಣಿಗಳ ಸಂಖ್ಯೆಯೂ ತುಲನಾತ್ಮಕವಾಗಿ ಕಡಿಮೆ ಇರುವುದರಿಂದ ಅವನ್ನು ಮನುಷ್ಯ ಹೇಗೋ ಜಯಿಸಿಬಿಟ್ಟಾನು. ಆದರೆ ಈ 'ಮಂಗ್ಯಾನನ್‌ಮಗನವು' ಸಾಮಾನ್ಯ ಮನುಷ್ಯನ ಸರಾಸರಿ ಹೋರಾಟಗಳಿಗೆಲ್ಲ ಸ್ಪರ್ಧೆ ಕೊಡುತ್ತಿವೆ ಎಂಬುದು ಗಮನಾರ್ಹ. ಎಷ್ಟೆಂದರೂ ಪೂರ್ವಿಕರು! ಮನುಷ್ಯನನ್ನು ಬಿಟ್ಟರೆ ಸಾಧನ- ಪರಿಕರಗಳನ್ನು ಉಪಯೋಗಿಸುವ ಸಾಮರ್ಥ್ಯವನ್ನು ತುಸುಮಟ್ಟಿಗೆ ಹೊಂದಿರುವ ಪ್ರಾಣಿವರ್ಗವೆಂದರೆ ಮರ್ಕಟ ಜಾತಿ ಎನ್ನುತ್ತದೆ ಜೀವವಿಕಾಸದ ಪಾಠ. ಅದರ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಮಲೆನಾಡಿನ ಹಳ್ಳಿಗಳಲ್ಲಿ ಆಗುತ್ತಿದೆ. ಕಳ್ಳನ್ಯಾರೋ ಬಂದು ಬೀಗ ಒಡೆಯುತ್ತಾನೆ ಎಂಬ ಆತಂಕ ಅನುಭವಿಸುತ್ತಿರುವ ಊರುಗಳು ಕಡಿಮೆ ಇದ್ದಿರಬಹುದು. ಆದರೆ ಮನೆಯ ಮಾಡನ್ನು ಏರಿ, ಹೆಂಚುಗಳನ್ನು ಎತ್ತಿ ಮನೆಯೊಳಗೆ ತಮ್ಮದಾಗಿಸಿಕೊಳ್ಳಬಹುದಾದವುಗಳು ಯಾವುದೆಲ್ಲ ಅಂತ ವಿಚಾರಿಸಿಕೊಳ್ಳುವ ಕೌಶಲವನ್ನು ಮಂಗಗಳು ಅವೆಷ್ಟು ಚೆನ್ನಾಗಿ ಕರಗತ ಮಾಡಿಕೊಂಡಿವೆ ಅಂತೀರಾ. ಮನೆ ಹತ್ತಿರದ ಖಾಲಿ ಜಾಗದಲ್ಲಿ, ಅಂಗಳದಲ್ಲಿ ತಮ್ಮ ಬಳಕೆಗೆ ಬೇಕಾಗುವ ತರಕಾರಿ- ಸೊಪ್ಪುಗಳನ್ನು ಬೆಳೆದುಕೊಳ್ಳುವ ಪರಿಪಾಠ ಮಲೆನಾಡಿನ ಹೆಚ್ಚಿನ ಹಳ್ಳಿಗಳಲ್ಲಿತ್ತು. ಹೆಚ್ಚಿನವರು ಈಗ ಆ ಗೋಜಿಗೆ ಹೋಗುತ್ತಿಲ್ಲ. 'ಮಂಗ ಮೊಳಕೆಯನ್ನೇ ಇರಗೊಡುವುದಿಲ್ಲ, ಏನು ಬೆಳೆಸೋದು' ಎಂಬುದು ಎಲ್ಲರ ಪ್ರಶ್ನೆ. ಕೆಲ ವರ್ಷಗಳ ಹಿಂದೆ ತೋಟಕ್ಕೆ ಮಂಗಗಳು ದಾಳಿ ಇಟ್ಟರೆ ಅಲ್ಲಿಗೆ ಹೋಗಿ ಹಾ..ಹೂ.. ಎಂದು ಕೂಗಿದ್ದರೆ ಹೆದರಿ ಹಿಂದಕ್ಕೆ ಸರಿಯುತ್ತಿದ್ದವು. ಈಗ ಅವು ಮನುಷ್ಯರನ್ನೇ ಹೆದರಿಸಿ ಹಿಮ್ಮೆಟ್ಟಿಸುತ್ತಿದ್ದಾವೆ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಅವುಗಳ ಸಂಖ್ಯೆ ಹಾಗೂ ಆಕ್ರಮಣಶೀಲ ಪ್ರವೃತ್ತಿ ದಿನೇ ದಿನೆ ಹೆಚ್ಚುತ್ತಿದೆ. ನಿಜದಲ್ಲಿ ಇದು ಎಲ್ಲೂ ದೂರು ಕೊಡಲಾಗದ ಅಸಹಾಯಕತೆ ಹುಟ್ಟಿಸಿರುವ ಕಾನೂನು-ಸುವ್ಯವಸ್ಥೆ ಸಮಸ್ಯೆ! ನಮ್ಮದೇ ನಾಡಿನ ಎಷ್ಟೋ ಪ್ರವಾಸಿ ತಾಣಗಳಲ್ಲಿ ಅವು ಅಕ್ಷರಶಃ ನಿಮ್ಮನ್ನು ಅಡ್ಡಗಟ್ಟಿ ಅಸಹಾಯಕರನ್ನಾಗಿಸುತ್ತವೆ. ಕೈಗೆ ಸಿಕ್ಕಿದ್ದನ್ನು ದೋಚಿ, ತಿನ್ನಲು ಬಾರದ್ದನ್ನು ಎಲ್ಲೋ ಎಸೆದ ಉದಾಹರಣೆಗಳು ಢಾಳಾಗಿವೆ.
ವಿಕಾಸದ ಹಾದಿಯಲ್ಲಿ ಮಂಗಗಳು ಮನುಷ್ಯನನ್ನು ಕಾಪಿ ಮಾಡುವುದಕ್ಕೆ ಹೊರಟಿವೆಯೋ ಎಂಬ ಅನುಮಾನವೂ ಉಂಟಾಗುವುದು ಅವುಗಳ ನಗರ ವಲಸೆಯನ್ನು ನೋಡಿದಾಗ. ನಾವೆಲ್ಲ ಹಳ್ಳಿಗಳನ್ನು ತೊರೆದು ಉದ್ಯೋಗ ಅರಸಿಕೊಂಡು ನಗರಗಳನ್ನು ಸೇರುತ್ತಿರುವಂತೆಯೇ ಮಂಗಗಳ ಹಿಂಡೂ ನಾನಾ ನಗರಗಳನ್ನು ಆಹಾರಕ್ಕಾಗಿ, ಜಾಗಕ್ಕಾಗಿ ಆಕ್ರಮಿಸಿಕೊಳ್ಳುತ್ತಿವೆ. ಇಲ್ಲೊಂದು ವ್ಯಂಗ್ಯ ಸಾಮ್ಯವಿದೆ. ಹೊಟ್ಟೆಪಾಡಿಗೆ ನಗರಕ್ಕೆ ಕಾಲಿರಿಸಿರುವ ನಾವು ದಿನ ಹೋದಂತೆ ಇದೇ ಟ್ರಾಫಿಕ್ಕಿನ ಕಿಷ್ಕಿಂದೆಗೆ, ಬದುಕು ಎಷ್ಟೇ ದುಬಾರಿಯಾದರೂ ಬೆಂಗಳೂರಿನ ಹೊರವಲಯದಲ್ಲಾದರೂ ಚಿಕ್ಕದೊಂದು ಸೈಟು ಸಿಗಬಹುದಾ ಎಂಬ ಆಸೆಗೆ ಬೀಳುತ್ತೇವೆ. ತಕ್ಕಮಟ್ಟಿಗೆ ಹಣಸಂಗ್ರಹವಾದರೂ ಮತ್ತೆ ಹಳ್ಳಿಗೆ ಹಿಂತಿರುಗುವುದು ಯಾರ ಆಯ್ಕೆಯೂ ಅಲ್ಲ. ಹಳೆನೆನಪಿನ ನೆಲೆಯಲ್ಲಿ ಹಳ್ಳಿ ರಂಜಿಸಬಹುದಾದರೂ ಶಾಶ್ವತವಾಗಿ ಅಲ್ಲಿಗೆ ಮರಳಿ ನೆಲೆಯೂರುವ ಕಲ್ಪನೆ ಹೆಚ್ಚಿನವರನ್ನು ಹೆದರಿಸಿ ಹಿಮ್ಮೆಟ್ಟಿಸುತ್ತದೆ. ಈ ಮಂಗ್ಯಾಗಳ ಪಾಡೂ ಹೀಗೇ ಆಗಬೇಕಾ? ಒಮ್ಮೆ ನಗರಕ್ಕೆ ಕಾಲಿರಿಸಿ ಅಲ್ಲಿ ಹೆದರಿಸಿ-ಬೆದರಿಸಿ ಆಹಾರ ಗಿಟ್ಟಿಸುವುದನ್ನು ಕಲಿತ ಮಂಗಗಳು ಮತ್ತೆ ಕಾಡಿಗೆ ಹೋಗುವುದನ್ನು ಸುತಾರಾಂ ಒಪ್ಪುವುದಿಲ್ಲ. ಪರಿಣಾಮವೆಂದರೆ, ಹೆಚ್ಚಿನ ಪಟ್ಟಣಗಳ ಹೊಟೇಲ್ ರೂಮುಗಳಲ್ಲಿ ತೂಗುತ್ತಿರುವ ಫಲಕ, 'ಹೊರಗೆ ತೆರಳುವಾಗ ಕಿಟಕಿ-ಬಾಗಿಲುಗಳನ್ನು ಭದ್ರಪಡಿಸಿ. ನಿಮ್ಮ ಸರಂಜಾಮುಗಳನ್ನು ತಿಜೋರಿಯಲ್ಲಿ ಭದ್ರಪಡಿಸಿ. ಇಲ್ಲಿ ಕೋತಿಗಳಿವೆ ಎಚ್ಚರ.'
ಬಹುಶಃ ಕೋತಿ ಹಾವಳಿ ದೆಹಲಿಯಂಥ ನಗರಗಳಿಗೆ ತಾಗದಿದ್ದರೆ ಅಧಿಕಾರದಲ್ಲಿರುವವರು ಹೀಗೊಂದು ಸಮಸ್ಯೆ ಎದುರಾಗಿದೆ ಎಂಬ ಬಗ್ಗೆಯೇ ಕುರುಡಾಗಿ ಇರುತ್ತಿದ್ದರೇನೋ. ಆದರೆ ದೆಹಲಿಯ ಜನವಸತಿ ಪ್ರದೇಶಗಳಲ್ಲಿ ಮಂಗಗಳ ಹಾವಳಿ ಯಾವ ಮಟ್ಟಕ್ಕೆ ತಲುಪಿತೆಂದರೆ- 2009ರಿಂದೀಚೆಗೆ 15 ಸಾವಿರ ಕೋತಿಗಳನ್ನು ಹಿಡಿದು ಹತ್ತಿರದ ಅಸೋಲಾ ಭಟ್ಟಿ ವನ್ಯಧಾಮಕ್ಕೆ ಬಿಡಲಾಗಿದೆ. ಅಲ್ಲಿನ ಅರಣ್ಯ ಇಲಾಖೆ ಮಂಗಗಳಿಗಾಗಿಯೇ 20 ಆಹಾರ ನೆಲೆಗಳನ್ನು ಕಲ್ಪಿಸಿ, ವಾರ್ಷಿಕ 12-14 ಲಕ್ಷ ರುಪಾಯಿಗಳನ್ನು ವ್ಯಯಿಸುತ್ತಿರುವುದಾಗಿ ಹೇಳುತ್ತಿದ್ದರೂ ದೆಹಲಿ ನಿವಾಸಿಗಳು ಮಂಗಗಳ ಉಪಟಳದ ಬಗ್ಗೆ ದೂರುವುದು ಮಾತ್ರ ನಿಂತಿಲ್ಲ. ಸಂಸತ್ ಭವನದ ಬಳಿ ಮಂಗಗಳನ್ನು ಹೆದರಿಸುವುದಕ್ಕೆ ಲಂಗೂರ್‌ಗಳನ್ನು (ಕರಿಮುಖದ ದೊಡ್ಡಮಂಗ) ನಿಯೋಜಿಸುವ ಪ್ರಯತ್ನವೂ ಆಯಿತು. ಕ್ರಮೇಣ ಈ ಕಪಿಸೇನೆ ಲಂಗೂರ್‌ಗಳ ಮೇಲೂ ದಾಳಿ ಶುರುಮಾಡಿತು. ಅಲ್ಲದೇ ವನ್ಯಜೀವಿ ಕಾಯ್ದೆ ಅನ್ವಯ ಲಂಗೂರ್‌ಗಳು ಅಳಿವಿನಂಚಿನ ಪ್ರಭೇದ. ಅವನ್ನು ಸರ್ಕಾರವೇ ಇಂಥ ಅಪಾಯಗಳಿಗೆ ಬಳಸಿಕೊಳ್ಳೋದು ಅಂದ್ರೆ? ಹೀಗಾಗಿ ಆ ಯೋಜನೆ ಬರ್ಖಾಸ್ತಾಗಿ, ಈಗ ಮಂಗಗಳ ಸಂತಾನಶಕ್ತಿ ಹರಣಕ್ಕೆ ವಿದೇಶಿ ಸಂಸ್ಥೆಯೊಂದರ ಸಹಾಯ ಪಡೆದುಕೊಳ್ಳುವುದು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ವಿದೇಶಿ ಕಿಂದರಿಜೋಗಿ ಏನೇ ಮ್ಯಾಜಿಕ್ ಮಾಡಿದರೂ ಅದು ತತ್ಕಾಲದ ಪರಿಹಾರವಾಗುತ್ತದೆ ಎಂದೇ ಪರಿಸರದ ಅರಿವಿನ ಮಂದಿ ಹೇಳುತ್ತಿದ್ದಾರೆ. ಮಂಗಗಳನ್ನು ಹಿಡಿದು ಅವಕ್ಕೆ ಸಂತಾನಹರಣ ಮಾಡುವುದು ಹಾಗೂ ಅವುಗಳ ಆಹಾರದಲ್ಲಿ ಸಂತಾನಹರಣದ ಮದ್ದು ಬೆರೆಸುವುದು ಹೀಗೆ ಎರಡು ಹಂತದ ಯೋಜನೆಗಳಿವೆ. ದೆಹಲಿ ಮಟ್ಟದಲ್ಲಿ ಅಂಥದೆಲ್ಲ ಒಂದು ಹಂತದಲ್ಲಿ ಯಶಸ್ವಿಯೇ ಆಗಬಹುದಾದರೂ ಹಳ್ಳಿಗಳ ಗೋಳನ್ನು ಕೇಳುವವರ್ಯಾರಿಲ್ಲ.
ಸಮಸ್ಯೆಯ ಮೂಲ ಎಲ್ಲಿ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಭಾರಿ ವಿಜ್ಞಾನದರಿವೇನೂ ಬೇಕಿಲ್ಲ. ಅರಣ್ಯ ಎಂದರೆ ಅಕೇಶಿಯಾ ನೆಡುತೋಪು ಅಂತ ಸರ್ಕಾರ ನಂಬಿಸಿದ್ದನ್ನು ಎಲ್ಲರೂ ಒಪ್ಪಿಕೊಂಡಿರುವುದರ ದುರಂತ. ಈ ಗಿಡಗಳು ಚಿಕ್ಕ ಅಳಿಲಿಗೂ ಹೊಟ್ಟೆ ತುಂಬುವಂಥ ಏನನ್ನೂ ಕೊಡಲಾರವು. ಕೆಲವರ್ಷಗಳ ನಂತರ ಕಟಾವಿಗೆ ಬಂದು ಖಜಾನೆ ತುಂಬಿಸಿಕೊಂಡರಾಯಿತು ಎಂಬ ಯೋಚನೆ ಎಷ್ಟೋ ಜೀವಿಗಳ ಆಹಾರವನ್ನೇ ಕಿತ್ತುಕೊಂಡಂತಿದೆ. ಯಾವೆಲ್ಲ ಕಾಡುಹಣ್ಣು, ಸೊಪ್ಪುಗಳು ಈ ಮಂಗಗಳ ಹೊಟ್ಟೆ ತುಂಬಿಸುತ್ತಿದ್ದವೋ ಅಷ್ಟರಮಟ್ಟಿಗೆ ನಾಡಲ್ಲಿ ಅವುಗಳ ಲಗ್ಗೆ ಇರಲಿಲ್ಲ. ನಿಸರ್ಗದಲ್ಲಿ ಪ್ರಾಣಿಸಂಖ್ಯೆ ನಿಯಂತ್ರಣದಲ್ಲಿಡುವ ಬೇಟೆಯ ವ್ಯವಸ್ಥೆ ಎಲ್ಲರಿಗೂ ಪರಿಚಿತ. ಚಿಕ್ಕ ಪ್ರಾಣಿ ಇನ್ಯಾವುದೋ ಮೃಗದ ಬೇಟೆಯಾಗಿರುತ್ತದೆ. ಮಂಗಗಳಿಗೆ ಪ್ರಮುಖ ಬೇಟೆಗಾರ ಪ್ರಾಣಿ ಎಂದು ಯಾವುದೂ ಕಂಡುಬರದಿದ್ದರೂ, ನಿಸರ್ಗವನ್ನು ಹತ್ತಿರದಿಂದ ಗಮನಿಸುತ್ತಿದ್ದ ಹಿರಿಯರ ಪ್ರಕಾರ ಹದ್ದಿನ ಜಾತಿಗೆ ಸೇರಿದ ಪಕ್ಷಿಗಳು ಮಂಗಗಳನ್ನು ಸ್ವಲ್ಪ ನಿಯಂತ್ರಣದಲ್ಲಿಡುತ್ತಿದ್ದವಂತೆ. ಕಳೇಬರವನ್ನೇ ತಿಂದು ಜೀವಿಸುತ್ತಿದ್ದ ಈ ಬೃಹತ್ ಪಕ್ಷಿಗಳಿಗೆ ಎಲ್ಲ ಕಾಲದಲ್ಲೂ ಮೃತಪ್ರಾಣಿಗಳು ಸಿಗುತ್ತಿರಲಿಲ್ಲ. ಹಸಿವು ತಾರಕಕ್ಕೇರಿದಾಗ ಅವು ಮರಿಕೋತಿಗಳ ಮೇಲೆ ದಾಳಿ ಮಾಡುತ್ತಿದ್ದವು. ದನಗಳ ಚಿಕಿತ್ಸೆಗೆ ಡಿಕ್ಲೊಫೆನಾಕ್ ಎಂಬ ಔಷಧ ಉಪಯೋಗಿಸಿದ ಪರಿಣಾಮವಾಗಿ, ಸತ್ತ ರಾಸುಗಳನ್ನು ತಿಂದ ಹದ್ದುಗಳೆಲ್ಲ ನಾಮಾವಶೇಷವಾಗಿಹೋದವು. ಹೀಗೆಯೇ ಇನ್ನೂ ಎಂಥೆಂಥ ಕೊಂಡಿಗಳು ಕಳಚಿವೆಯೋ, ಮಂಗಗಳ ಸಂತಾನ ಮನುಷ್ಯರಿಗೆ ಸ್ಪರ್ಧೆ ನೀಡುತ್ತಿದೆ.
ನಾವೇ ಹಾಳುಗೆಡವಿರುವ ವನ್ಯಕೋಟೆಯನ್ನು ಹಂತಹಂತವಾಗಿ ಕಟ್ಟಿಕೊಡುವುದೇ ಮಂಗಾಟದ ಅಂತ್ಯಕ್ಕಿರುವ ಸೂತ್ರ. ಆದರೆ ಅದಕ್ಕೆಲ್ಲ ಸಂಕಲ್ಪ, ಬದ್ಧತೆ ಬೇಕು. ಈಗ ನೆಟ್ಟರೆ ಇನ್ಯಾವುದೋ ಪೀಳಿಗೆಗೆ ಫಲಕೊಡುವ ಹಲಸು-ಹೆಬ್ಬಲಸುಗಳನ್ನು ನೆಡುವ ಆಸಕ್ತಿ ಅರಣ್ಯ ಇಲಾಖೆಗೆ ಖಂಡಿತ ಇಲ್ಲ. ತಮ್ಮ ಪಾಲಿಗೊಂದು ಬೆಟ್ಟವಿದ್ದರೆ ಅದರಲ್ಲಿ ತಾವೇ ಈ ಕೆಲಸ ಮಾಡೋಣ ಎಂಬ ಔದಾರ್ಯ ನಾಗರಿಕರಿಗೂ ಇಲ್ಲ. ದರಿದ್ರ ಮಂಗಗಳ ಉಪಟಳ ಯಾಕಿಷ್ಟು ಹೆಚ್ಚಾಯಿತೋ ಎಂಬುದಷ್ಟೇ ನಮ್ಮ ಕಳವಳ. ಮಂಗಗಳ ದಾಳಿ ತಪ್ಪಿಸಿಕೊಳ್ಳುವುದಕ್ಕೆ ಓಡಿ ಕಾಲು ಮುರಿದುಕೊಂಡ ಬಾಲಕಿ, 2007ರಲ್ಲಿ ಮಂಗಗಳ ಆಕ್ರಮಣ ಎದುರಿಸುವಾಗ ಬಾಲ್ಕನಿಯಿಂದ ಬಿದ್ದು ಪ್ರಾಣ ಕಳೆದುಕೊಂಡ ದೆಹಲಿ ಉಪ ಮೇಯರ್... ಇವೆಲ್ಲ ವರದಿಯಾಗಿರುವ ವಿದ್ಯಮಾನಗಳು, ಕವಿ ಕಲ್ಪನೆಯಲ್ಲ. ಸಮುದಾಯ ಮತ್ತು ಸರ್ಕಾರ, ಪರಿಸರ ರಿಪೇರಿಯ ದೀರ್ಘಾವಧಿ ಹೆಜ್ಜೆ ಇಡದಿದ್ದರೆ ಇಂಥ ವಿದ್ಯಮಾನಗಳು ಹಳ್ಳಿಯಲ್ಲೂ ದಿಲ್ಲಿಯಲ್ಲೂ ತೀವ್ರವಾಗುತ್ತಲೇ ಹೋಗುವುದರಲ್ಲಿ ಸಂಶಯವಿಲ್ಲ.
- ಚೈತನ್ಯ ಹೆಗಡೆ
cchegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


