ದೇಶದ ಸೇವೆಗೆ ಅವರು ಮತ್ತೆ ಸನ್ನದ್ಧ... ದಾರಿ ಬಿಡಿ!
ಡಿನ್ನರ್ ಸೆಟ್ ಬಗ್ಗೆ ವರದಿಗಾರನೊಬ್ಬ ಪ್ರಶ್ನಿಸಿದಾಗ, ಆ ಅಭ್ಯರ್ಥಿ ಮುಗುಳ್ನಕ್ಕು..
ಭಾರತದ ಪ್ರಜಾಪ್ರಭುತ್ವದಂಥ ಪ್ರಜಾಸತ್ತೆ ವ್ಯವಸ್ಥೆ ಜಗತ್ತಿನ ಬೇರೆಲ್ಲೂ ಇಲ್ಲ. ಮಧ್ಯಪ್ರದೇಶದ ಬಿಜೆಪಿ ಅಭ್ಯರ್ಥಿ ಯಶೋಧರಾ ರಾಜೇ ಸಿಂಧಿಯಾ ತನ್ನ ಬಳಿ 1.54 ಕೋಟಿ ರುಪಾಯಿ ಮೌಲ್ಯದ ಡಿನ್ನರ್ ಸೆಟ್ ಇರುವುದಾಗಿ ಚುನಾವಣೆ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಶೆಫರ್ ಪೆನ್ನೊಂದಕ್ಕೆ 3 ಕೋಟಿ ರುಪಾಯಿಗೂ ಹೆಚ್ಚು ಬೆಲೆ ಘೋಷಣೆಯಾದ ದೇಶವೊಂದರಲ್ಲಿ ಇದೇನೂ ಅಷ್ಟು ವಿಶೇಷ ಎಂದೆನಿಸದು. ಡಿನ್ನರ್ ಸೆಟ್ ಬಗ್ಗೆ ವರದಿಗಾರನೊಬ್ಬ ಪ್ರಶ್ನಿಸಿದಾಗ, ಆ ಅಭ್ಯರ್ಥಿ ಮುಗುಳ್ನಕ್ಕು ಹೇಳಿದ್ದೇನು ಗೊತ್ತೇ? 'ಅದರಲ್ಲೇನಿದೆ ಅಚ್ಚರಿ? ಎಷ್ಟಾದರೂ ನಾವು ರಾಜಮನೆತನದವರಲ್ಲವೇ?'.
ಸರಿಯಾಗಿಯೇ ಹೇಳಿದಿರಿ ರಾಣಿಯವರೇ! ರಾಜರ ಆಡಳಿತ ಮತ್ತು ದೈವದತ್ತ ಹಕ್ಕುಗಳ ದಿನಗಳಲ್ಲಿ ನೀವು ನಿಮ್ಮ ಪ್ರಜೆಗಳ ಬದುಕಿನ ಮೇಲೆ ಅಧಿಕಾರ ಚಲಾಯಿಸುತ್ತಿದ್ದಿರಿ. ಗಣರಾಜ್ಯ ಅಸ್ತಿತ್ವಕ್ಕೆ ಬಂದಾಗ, ಸರ್ದಾರ್ ಪಟೇಲ್ ನಿಮಗೆ ಸಾಕಷ್ಟು ಖಾಸಗಿ ಭತ್ಯೆ ಸೌಲಭ್ಯವನ್ನು ಒದಗಿಸಿದರು. 1971ರಲ್ಲಿ ಇಂದಿರಾಗಾಂಧಿ ಆ ಸೌಲಭ್ಯವನ್ನು ಕಿತ್ತುಕೊಂಡರು. ನಿಮ್ಮ ಬಳಿ ನಿಮ್ಮ ಅರಮನೆ, ನಿಮ್ಮ ಆಭರಣಗಳು ಮತ್ತು ನಿಮ್ಮ ಡಿನ್ನರ್ ಪ್ಲೇಟ್‌ಗಳು ಮಾತ್ರ ಉಳಿದವು. ಈ ಅಮೂಲ್ಯ ಆಸ್ತಿಗಳೊಂದಿಗೆ ನೀವು ಚುನಾವಣಾ ಕಣಕ್ಕಿಳಿದಿರಿ. ಸರ್ದಾರ್ ಪಟೇಲ್ ನಿಮ್ಮ ಕೈಯಿಂದ ಕಿತ್ತುಕೊಂಡಿದ್ದ ರಾಜಕೀಯ ಅಧಿಕಾರವನ್ನು ಮತ್ತೆ ಗಳಿಸಿಕೊಂಡಿರಿ. ಪ್ರಜಾಪ್ರಭುತ್ವದ ಪ್ರಯೋಜನ ಬಹಳಷ್ಟು. ಅಲ್ಲವೇ?
ಆ ಡೈನಿಂಗ್ ಟೇಬಲ್‌ನ ಮೌಲ್ಯದ ಬಗ್ಗೆ ಸ್ವಲ್ಪ ಲೆಕ್ಕಾಚಾರ ಮಾಡೋಣವೇ? ಯೋಜನಾ ಆಯೋಗದ ಅಹ್ಲುವಾಲಿಯಾ ಪ್ರಕಾರ, ನಗರದ ಒಬ್ಬ ನಾಗರಿಕನಿಗೆ ಊಟ- ತಿಂಡಿಗೆ ದಿನವೊಂದಕ್ಕೆ ಕೇವಲ 32 ರುಪಾಯಿ ಸಾಕು. ಅದರ ಅರ್ಥವೇನೆಂದರೆ, ಕೈಯಲ್ಲಿ 11,680 ರುಪಾಯಿ ಉಳ್ಳ ನಾಗರಿಕನೊಬ್ಬ ಇಡೀ ವರ್ಷ ಸುಲಭವಾಗಿ ಜೀವನ ಸಾಗಿಸಬಲ್ಲ. ಇನ್ನು, ಅವನ ಬಳಿ 1.54 ಕೋಟಿ ರುಪಾಯಿ ಇದ್ದರೆ, ಆತ 1318.49 ವರ್ಷಗಳ ಕಾಲ ಊಟತಿಂಡಿಗೆ ಕಷ್ಟಪಡಬೇಕಿಲ್ಲ. 1318.49 ವರ್ಷ ಕಾಲ ಆತನಿಗೆ ಹೆಚ್ಚುವರಿ ಆಹಾರ ಅಗತ್ಯ ಇಲ್ಲದಿರುವುದರಿಂದ ಭಾರಿ ಪ್ರಮಾಣದ ಆಹಾರ ವಸ್ತು ಉಳಿಯಬಲ್ಲದು. ಆದ್ದರಿಂದ ಬಡತನ ನಿವಾರಣೆಗೆ ಅತ್ಯುತ್ತಮ ಮಾರ್ಗವೆಂದರೆ, ರಾಜಮನೆತನವು ಬಂಗಾರದ ಡಿನ್ನರ್ ಸೆಟ್‌ಗಳನ್ನು ಹೊಂದಿರುವುದು. ವಿಚಿತ್ರ ವಾದ ಎನಿಸುತ್ತದೆ ಅಲ್ಲವೇ?
ಈ ಚುನಾವಣೆಯಲ್ಲಿ ವಂಶಪರಂಪರೆ ಸಂಸ್ಕೃತಿ ಮತ್ತೆ ಕಾಣಿಸಿಕೊಂಡಿದೆ. ನಮ್ಮ ಪ್ರಜಾಪ್ರಭುತ್ವಕ್ಕೆ ಅಂಟಿದ ಈ ಶಾಪ ಸೋಂಕು ರೋಗದಂತೆ ಹರಡಿಕೊಳ್ಳುತ್ತಿದೆ. ದೇಶದಲ್ಲಿ, ವಿಶೇಷವಾಗಿ ಕೋಮು ವಿಚಾರದಲ್ಲಿ ಸೂಕ್ಷ್ಮವೆನಿಸಿದ ಪ್ರದೇಶಗಳಲ್ಲಿ ಹಿಂಸಾಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವಲ್ಲಿ ಪಕ್ಷಗಳು ಹೆಚ್ಚು ಆಸಕ್ತಿ ವಹಿಸುತ್ತಿವೆ. ನಾಳೆ ಏನಾಗಬಹುದು ಎಂಬ ಬಗ್ಗೆ ಯಾರೂ ಯೋಚಿಸುವುದಿಲ್ಲ. ಎಲ್ಲರಿಗೂ ಇಂದಿನ ಬಗ್ಗೆ ಮಾತ್ರ ಚಿಂತೆ.
ರಾಜರ ಆಡಳಿತ ಕೊನೆಗೊಂಡ ಬಳಿಕ, ಸಿಂಧಿಯಾಗಳು ಚುರುಕಾದರು. ರಾಜಮನೆತನದ ಪುರುಷರು ಕಾಂಗ್ರೆಸ್‌ನತ್ತ ವಾಲಿದರೆ, ಮಹಿಳೆಯರು ಬಿಜೆಪಿ ಸೇರಿಕೊಂಡರು. ಹಾಗಾಗಿ, ಜಯವೆಂಬುದು ಯಾವ ಪಕ್ಷಕ್ಕೆ ಒಲಿದರೂ ರಾಜವಂಶಕ್ಕೆ ಗೆಲವು ಖಚಿತವಾಗಿತ್ತು. ಸಚಿವ ಮಾಧವರಾವ್ ಸಿಂಧಿಯಾ ಅವರ ಪುತ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಗ ಮಹಾನಾರ್ಯಮಾನ್ ಸಿಂಧಿಯಾ ಕೂಡ ಮಧ್ಯಪ್ರದೇಶದಲ್ಲಿ ಪ್ರಚಾರದಲ್ಲಿ ತೊಡಗಿದರು. ಲಂಡನ್‌ನಲ್ಲಿ ಜನಿಸಿ ಅಮೆರಿಕದಲ್ಲಿ ವಾಸ್ತವ್ಯ ಹೂಡಿದ್ದ ಯಶೋಧರಾ ರಾಜೇ ಭಾರತದ ರಾಜಕೀಯದಲ್ಲಿ ಪಾತ್ರ ವಹಿಸಲು 1994ರಲ್ಲಿ ಭಾರತಕ್ಕೆ ಮರಳಿದರು. ಮಧ್ಯಪ್ರದೇಶ ಭಾಗದಲ್ಲಷ್ಟೇ ಚಾಲ್ತಿಯಲ್ಲಿರುವ 'ಶ್ರೀಮಂತ್' ಎಂಬ ಪದವನ್ನು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವ ಬೇಡಿಕೆಯಿಟ್ಟಳು ಆಕೆ. ಆಕೆಯ ಬೇಡಿಕೆಗೆ ಬಿಜೆಪಿ ಅಸ್ತು ಎಂದಿತು! ಆಕೆಯ ಪುತ್ರ ಅಕ್ಷಯ್ ಕೂಡ ನ್ಯೂಯಾರ್ಕ್‌ನಿಂದ ಧಾವಿಸಿಬಂದ, ಮತದಾರರಿಂದ ಹೊಗಳಿಸಿಕೊಂಡ. ಎಲ್ಲವೂ ಪ್ರಜಾಸತ್ತಾತ್ಮಕ ಮಾರ್ಗಗಳೇ! ನಿಜ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶಗಳಿವೆ. ಕೇಂದ್ರ ಸಚಿವ ಕಮಲ್‌ನಾಥ್ ಅವರ ಪುತ್ರ, ಕಾಂಗ್ರೆಸ್ ನಾಯಕ ಸತ್ಯವ್ರತ ಚತುರ್ವೇದಿಯವರ ಪುತ್ರ, ಹಿಮಾಚಲ ಪ್ರದೇಶ ರಾಜ್ಯಪಾಲರಾದ ಊರ್ಮಿಳಾ ಸಿಂಗ್ ಅವರ ಮಗ, ದಿಗ್ವಿಜಯ ಸಿಂಗ್ ಮಗ, ಅಶೋಕ್ ಗೆಹ್ಲೋಟ್‌ರವರ ಪುತ್ರ, ಅಷ್ಟೇ ಏಕೆ, ಸಣ್ಣಪುಟ್ಟ ಸಂಸದರು ಮತ್ತು ಮಾಜಿ ಸಚಿವರ ಮಕ್ಕಳು ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಾರೆ. ಅಜಿತ್ ಜೋಗಿಯ ಪುತ್ರ ಮತ್ತು ಪತ್ನಿ ಹಾಗೂ ಮೋತಿಲಾಲ್ ವೋರಾ ಅವರ ಮಗ ಛತ್ತೀಸ್‌ಗಡದಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿದ್ದೂ ಆಗಿದೆ.
ಬಿಜೆಪಿ ಹಿಂದೆಯೇನೂ ಉಳಿದಿಲ್ಲ. ಮದನ್‌ಲಾಲ್ ಖುರಾನಾ ಅವರ ಪುತ್ರ, ಸಾಹಿಬ್‌ಸಿಂಗ್ ವರ್ಮಾರವರ ಪುತ್ರ ದೆಹಲಿಯಲ್ಲಿ ಕಣಕ್ಕಿಳಿದಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಯ ಮಾಜಿ ಮುಖ್ಯಸ್ಥ ಘನಶ್ಯಾಮ ತಿವಾರಿಯವರ ಪುತ್ರ ಮತ್ತು ಜಸ್ವಂತ್ ಸಿಂಗ್ ಅವರ ಪುತ್ರ ಜಯದ ನಿರೀಕ್ಷೆಯಲ್ಲಿದ್ದಾರೆ. ಪಕ್ಷಭೇದವಿಲ್ಲದೆ, ಈ ಎಲ್ಲ ಪುತ್ರರು ಹೇಳುವ ಮಾತು ಒಂದೇ. ತಾವು ತಮ್ಮ ಸಾಮರ್ಥ್ಯದ ಬಲದಿಂದಲೇ ಕಣಕ್ಕಿಳಿದಿದ್ದು, ದೇಶದ ಸೇವೆ ಮಾಡುವ ಅರ್ಹತೆ ತಮಗಿದೆ ಎಂದು. ತಮಗೆ ಟಿಕೆಟ್ ದೊರೆತಿದ್ದು ತಂದೆಯ ಪ್ರಭಾವದಿಂದಲ್ಲ ಎಂದೂ ವಾದಿಸುತ್ತಾರೆ ಅವರು. ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಸುಶಿಕ್ಷಿತ ಯುವಕ ಯುವತಿಯರು ಇದ್ದಾರೆ. ಅವರಲ್ಲಿ ಎಷ್ಟೋ ಮಂದಿ ದೇಶದ ಸೇವೆಗೂ ಸಿದ್ಧರಿದ್ದಾರೆ. ಆದರೆ ಅವರನ್ನು ಸ್ವೀಕರಿಸುವವರು ಯಾರು? ವಂಶಾಡಳಿತ ಪ್ರಾಬಲ್ಯ ಸಾಧಿಸಿದಾಗ ಪ್ರಜಾಪ್ರಭುತ್ವ ಸೋಲು ಕಾಣುತ್ತದೆ. ಅದೇನೇ ಇರಲಿ, ಕೋಮುವಾದ ಮತ್ತು ಗಲಭೆಗಳಿಗಿಂತ ರಾಜವಂಶ ಮತ್ತು ವಂಶಾಡಳಿತ ಎಷ್ಟೋ ಮೇಲು! ಮುಜಾಫರ್‌ನಗರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ತನ್ನ ಇಬ್ಬರು ಶಾಸಕರನ್ನು ಬಿಜೆಪಿ ಸಾರ್ವಜನಿಕವಾಗಿ ಸನ್ಮಾನಿಸಿತು. ಪ್ರಚೋದನಾತ್ಮಕ ಭಾಷಣ ಮಾಡುವ ಮುಸ್ಲಿಂ ಧರ್ಮಗುರುವೊಬ್ಬರನ್ನು ಮುಲಾಯಂ ಸಿಂಗ್ ಸನ್ಮಾನಿಸಿದರು. ಅಷ್ಟೇ ಅಲ್ಲ, ಅವರ ಸರ್ಕಾರ ಮುಸ್ಲಿಮರಿಗಾಗಿ ಪರಿಹಾರ ಯೋಜನೆಯೊಂದನ್ನೂ ಘೋಷಿಸಿತು. ಅದು ಎಷ್ಟು ತಾರತಮ್ಯದಿಂದ ಕೂಡಿತ್ತ್ತು ಎಂದರೆ, ಸುಪ್ರೀಂಕೋರ್ಟ್ ಕೂಡ ಆ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಯೋಜನೆಯನ್ನು ವಾಪಸ್ ಪಡೆಯುವಂತೆ ಆದೇಶ ನೀಡಿತು. ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಮೂಲಕ ಮತ ಗಳಿಸುವಂಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಬೆಳೆಸಿದ್ದೇವೆ ಎಂದಾದಲ್ಲಿ ಅಂಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಟ್ಟುಪಾಡಿಗೊಳಪಡಿಸಲೇಬೇಕಾಗಿದೆ. ಅಂಥ ವ್ಯವಸ್ಥೆಗೆ ಕಡಿವಾಣ ಹಾಕಲು ಇದು ಸಕಾಲವೆಂದೇ ಹೇಳಬೇಕು.
- ಟಿಜೆಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

