ಸಿದ್ದರಾಮಯ್ಯ ಪಾಲಿಗೆ ಲಡ್ಡು ಆದ ಲಾಡ್ ರಾಜಿನಾಮೆ!
ಸಿದ್ದರಾಮಯ್ಯಅವರ ಪಕ್ಷದ ಒಳಗಿನ ಮತ್ತು ಹೊರಗಿನ ಶತ್ರುಗಳ ಸಮರಕ್ಕೆ ಲಾಡ್ ಒಂದು..

ರಾಜಕೀಯ ಕೇರಂ ಬೋರ್ಡ್ ಆಟ ಇದ್ದಂತೆ. ಕೆಲವೊಮ್ಮೆ ನೀವು ಯಾವುದೋ ಪಾನ್‌ಗೆ ಗುರಿ ಇಟ್ಟಿರುತ್ತೀರಿ, ನೋಡಿದರೆ ಅದು ಮತ್ಯಾವುದೋ ಪಾನ್ ಅನ್ನು ಪೋಚ್‌ಗೆ ತಳ್ಳಿರುತ್ತದೆ. ಕರಿ ಪಾನ್‌ಗೆ ಗುರಿ ಇಟ್ಟಾಗ, ಬಿಳಿ ಪಾನ್ ಬಿದ್ದಿರುತ್ತದೆ. ಅದೃಷ್ಟ ಚೆನ್ನಾಗಿದ್ದರೆ ಕೆಂಪು ಪಾನ್ ಗುಂಡಿಯಲ್ಲಿರುತ್ತದೆ. ಅದೃಷ್ಟ ಕೈ ಕೊಟ್ಟಿತು ಎನ್ನಿ, ಪಾನ್ ಬದಲು ಸ್ಟ್ರೈಕರೇ ಗುಂಡಿಗೆ ಬಿದ್ದು ದಂಡ ಕಕ್ಕುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೀಲಿ ಕಂಗಳ ಹುಡುಗ, ವಾರ್ತಾ ಸಚಿವ ಸಂತೋಷ್ ಲಾಡ್ ರಾಜಿನಾಮೆ ಪ್ರಹಸನದ ಸುತ್ತಮುತ್ತಲಿನ ಬೆಳವಣಿಗೆಗಳಿಗೂ ಮೇಲಿನ ಪೀಠಿಕೆಗೂ ಬಹಳ ಸಾಮ್ಯತೆ ಇದೆ. ಸಿದ್ದರಾಮಯ್ಯ ತಮ್ಮ ನೀಲಿ ಕಣ್ಣನ್ನು ಕಳೆದುಕೊಂಡಿದ್ದಾರೆ. ಆದರೆ ಅದೇ ಕಾಲಕ್ಕೆ ತಮ್ಮ ವೈರಿಗಳ ಕಣ್ಣುಗಳನ್ನು ಮತ್ತಷ್ಟು ಕೆಂಪು-ಕೆಂಪು ಮಾಡಿದ್ದಾರೆ. ಆ ಕಣ್ಣುಗಳು ಕಾರುತ್ತಿರುವ ಬೆಂಕಿಯಲ್ಲೇ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ. ವಿರೋಧಿಗಳು ಕಾವು ತಾಳಲಾರದೆ ವಿಲವಿಲ ಒದ್ದಾಡುತ್ತಿದ್ದಾರೆ.
ಹಾಗೆ ನೋಡಿದರೆ ಸಿದ್ದರಾಮಯ್ಯ, ಅವರ ಪಕ್ಷದ ಒಳಗಿನ ಮತ್ತು ಹೊರಗಿನ ಶತ್ರುಗಳ ಸಮರಕ್ಕೆ ಲಾಡ್ ಒಂದು ಸಂಕೇತಾಸ್ತ್ರ ಮಾತ್ರ. ಈ ಅಸ್ತ್ರ ಸಾಕಷ್ಟು ರಾಜಕೀಯ ತಂತ್ರ-ಪ್ರತಿತಂತ್ರ-ಕುತಂತ್ರಗಳನ್ನು ಬೇಧಿಸಿಟ್ಟಿದೆ. ಸಂತೋಷ್ ಲಾಡ್ ವಿರುದ್ಧ ಗಣಿ ಅಕ್ರಮ ಆರೋಪ ಇಂದು ನಿನ್ನೆಯದಲ್ಲ. ಲಾಡ್ ಸಿದ್ದರಾಮಯ್ಯ ಸಂಪುಟಕ್ಕೆ ಸೇರಿದ ಕ್ಷಣದಿಂದಲೂ ಅವರನ್ನು ಕೈಬಿಡಬೇಕು ಎಂಬ ಹುಯಿಲೆದ್ದಿತ್ತು. ಆದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಪರವಾಗಿ ಒಂದಷ್ಟು ಅಭ್ಯರ್ಥಿಗಳ ಪ್ರಚಾರ ಖರ್ಚನ್ನು ಲಾಡ್ ನೋಡಿಕೊಂಡಿದ್ದರು. ಮೇಲಾಗಿ ಜನತಾ ಪರಿವಾರದ ಮೂಲ, ಕರಳು-ಬಳ್ಳಿಯ ಸಂಬಂಧ. ಮೇಲಾಗಿ ಸಿದ್ದರಾಮಯ್ಯ ಅವರಿಗೆ ಪರಮಾಪ್ತ. ಹೀಗಾಗಿ ಮೊದಲಿಂದಲೂ ಲಾಡ್ ಅವರನ್ನು ಸಾರಸಗಟಾಗಿ ಸಮರ್ಥಿಸಿಕೊಂಡು ಬಂದರು. ಗಣಿ ಅಕ್ರಮದಲ್ಲಿ ಭಾಗಿಯಾಗಿಲ್ಲ, ಯಾವುದೇ ಕಾರಣಕ್ಕೂ ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು. ಆದರೆ ಪ್ರತಿಪಕ್ಷ, ಆಡಳಿತ ಪಕ್ಷದ ಒಂದು ವರ್ಗ, ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯಪಾಲರ ಒತ್ತಡ ಜೋರಾದಾಗ ಅದಕ್ಕೆ ಮಣಿದಂತೆ ನಟಿಸಿದ್ದಾರೆ. ಹಾಗೆ ನಟಿಸುತ್ತಲೇ ಲಾಡ್ ರಾಜಿನಾಮೆ ಪಡೆಯುವ ಮೂಲಕ ಏಕಕಾಲಕ್ಕೆ ತಮ್ಮೆಲ್ಲ ಶತ್ರುಗಳ ಅಸ್ತ್ರವನ್ನು ಕಿತ್ತುಕೊಂಡಿದ್ದಾರೆ. ಅವರೆಲ್ಲರಿಗೂ ಸದ್ಯಕ್ಕಂತೂ ಕಟಕಟ ಹಲ್ಲು ಕಡಿಯುವುದೊಂದೇ ಕಾಯಕ!
ಹೌದು, ಮೇಲು ನೋಟಕ್ಕೆ ಲಾಡ್ ರಾಜಿನಾಮೆ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾದಂತೆ ಗೋಚರಿಸಬಹುದು. ಆದರೆ ವಾಸ್ತವವಾಗಿ ಅವರಿಗೆ ಇದು ಮೇಲುಗೈಯೇ ಸರಿ. ರಾಜಕೀಯವಾಗಿ, ವೈಯಕ್ತಿಕವಾಗಿ ತಮ್ಮ ವರ್ಚಸ್ಸು ಕಾಪಿಟ್ಟುಕೊಳ್ಳಲು ಇದನ್ನು ವರದಾನವಾಗಿ ಪರಿವರ್ತಿಸಿಕೊಂಡಿದ್ದಾರೆ. ತಮಗೇಕೆ ಇದರ ಗೊಡವೆ ಎಂದು ಲಾಡ್ ವಿಚಾರವನ್ನು ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ದಾಟಿಸಿ ಕೈ ತೊಳೆದುಕೊಂಡಿತ್ತು. ಆದರೆ ಈ ವಿಷಯದಲ್ಲಿ ಮುಖ್ಯಮಂತ್ರಿಗಳದೇ ಪರಮಾಧಿಕಾರ ಎಂದು ಪರಮೇಶ್ವರ್ ಸುಮ್ಮನಾದರು. ಒಂದೊಮ್ಮೆ ಲಾಡ್ ರಾಜಿನಾಮೆ ಅನಿವಾರ್ಯವಾದರೆ ಅದರ ಲೇಪ ಮುಖ್ಯಮಂತ್ರಿಗೇ ಮೆತ್ತಿಕೊಳ್ಳಲಿ ಎಂಬುದು ಅವರ ಜಾಣ್ಮೆ.
ಇನ್ನೊಂದೆಡೆ ಲಾಡ್ ಸಹೋದರರ ನಡುವಣ ವೈರ. ಸಂತೋಷ್ ಲಾಡ್ ಸಹೋದರ ಅನಿಲ್ ಲಾಡ್ ಕಾಂಗ್ರೆಸ್‌ನ ಮೂಲ ನಿವಾಸಿ. ಆದರೆ ಗಣಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ಆದರೆ ಜನತಾ ಪರಿವಾರದಿಂದ ವಲಸೆ ಬಂದ ದಾಯಾದಿ ಸಂತೋಷ್ ಸಂಪುಟಕ್ಕೆ ಸೇರ್ಪಡೆ ಆದದ್ದು ಅವರ ಹೊಟ್ಟೆಯಲ್ಲಿ ಲಾವಾರಸ ಸುರಿದಂತಾಗಿಸಿತ್ತು. ಅವರು ಸಾಮಾಜಿಕ ಕಾರ್ಯಕರ್ತ ಹಿರೇಮಠ ಅವರ ಹೆಗಲ ಮೇಲೆ ಬಂದೂಕು ಇಟ್ಟೇ ಪರೋಕ್ಷ ಗುಂಡು ಹಾರಿಸುತ್ತಿದ್ದರು. ಇದೇ ರೀತಿ ನಾನಾ ಆರೋಪಸಹಿತ ಹಾಗೂ ಆರೋಪರಹಿತ ಸಚಿವ ಸ್ಥಾನ ವಂಚಿತರಾದವರೆಲ್ಲ ಒಟ್ಟುಗೂಡಿ ಸಂತೋಷ್ ಲಾಡ್ ವಿಚಾರವನ್ನೇ ಸಿದ್ದರಾಮಯ್ಯ ವಿರುದ್ಧ ಮಸಿ ಮೆತ್ತಲು ಬಳಸಿಕೊಂಡರು. ಆದರೆ ಅವರು ಮರೆಯಲ್ಲಿ ನಿಂತು 'ಶಬ್ದವೇಧಿ' ಅಸ್ತ್ರ ಪ್ರಯೋಗಿಸುತ್ತಿದ್ದುದು ಪ್ರತಿಪಕ್ಷಗಳ ಬಾಣಗಳಿಗಿಂತಲೂ ತೀಕ್ಷ್ಣವಾಗಿತ್ತು. ಕಣ್ಣಿಗೆ ಕಾಣದ ಶತ್ರುಗಳಿಗಿಂತ ಜತೆಯಲ್ಲಿರುವ ವೈರಿಗಳು, ಹೊರಗಿನವರಿಗಿಂತ ಮನೆಯೊಳಗಿನ ಚೋರರೇ ಹೆಚ್ಚು ಅಪಾಯಕಾರಿ ಎಂಬಂತೆ.
ಇದು ಒಳಗಿನವರ ಮಾತಾಯಿತು. ಇನ್ನು ಪ್ರತಿಪಕ್ಷಗಳಿಗೆ ಇದೊಂದು ರಾಮಬಾಣ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರೆಡ್ಡಿ ಸಹೋದರರು ಸೇರಿದಂತೆ ಹಿಂದಿನ ಬಿಜೆಪಿ ಸರಕಾರದ ಅನೇಕ ಘಟಾನುಘಟಿಗಳು ಅಧಿಕಾರ ಕಳೆದುಕೊಂಡದ್ದು, ಜೈಲಿಗೆ ಹೋದದ್ದು ಇದೇ ಗಣಿ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ. ಆಗೆಲ್ಲ ಪ್ರತಿಪಕ್ಷ ನಾಯಕರಾಗಿದ್ದ ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿಂದ ಬಳ್ಳಾರಿವರೆಗೂ ಪಾದಯಾತ್ರೆ, ಸಮಾವೇಶ ನಡೆಸಿದ್ದರು. ಬಿಜೆಪಿ ಸರಕಾರದ ಅವನತಿಗೆ ಕಾರಣವಾದದ್ದೇ ಗಣಿ ಅಕ್ರಮ ಆರೋಪ. ಹೀಗಿರುವಾಗ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಮಂತ್ರಿಯ ಮೇಲೆ ಇಂಥದ್ದೇ ಆರೋಪ ಬಂದರೆ ಸುಮ್ಮನೆ ಬಿಟ್ಟಾರೆಯೇ? ಅವರು ಕೂಡ ಚೆನ್ನಾಗಿಯೇ ಈ ಅವಕಾಶವನ್ನು ಬಳಸಿಕೊಂಡರು.
ಈ ಎಲ್ಲ ಪ್ರತಿಕೂಲ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ಒಡಲಲ್ಲಿ ಅವಲಕ್ಕಿ ಕುಟ್ಟುತ್ತಿದ್ದುದು ಸುಳ್ಳಲ್ಲ. ಅದರ ಜತೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು. ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಎರಡೆರಡು ಬಾರಿ ಸೂಚಿಸಿದರು ಮನ್ನಣೆ ಸಿಕ್ಕಿಲ್ಲ. ಈ ಸರಕಾರಕ್ಕಿಂತ ಹಿಂದಿನ ಯಡಿಯೂರಪ್ಪ ಸರಕಾರವೇ ಮೇಲಾಗಿತ್ತು ಎಂದುಬಿಟ್ಟರು. ಇದನ್ನು ಅರಗಿಸಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲರಿಗೂ ಅವರು ಕೊಟ್ಟ ಒಂದೇ ಸಾಲಿನ ಉತ್ತರ - ಸಂತೋಷ್ ಲಾಡ್ ರಾಜಿನಾಮೆ.
ನಿಜಕ್ಕೂ ಇದರಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಪ್ರೌಢಿಮೆ ಮೆರೆದಿದೆ. ಇತ್ತೀಚೆಗೆ ದಿಲ್ಲಿಗೆ ಕರೆಸಿಕೊಂಡ ಹೈಕಮಾಂಡ್, ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿತ್ತು. ಆದರೆ ಸಿದ್ದರಾಮಯ್ಯ ಅವರಿಗೆ ವಿಸ್ತರಣೆ ಬಿಲ್‌ಕುಲ್ ಇಷ್ಟವಿಲ್ಲ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಜಿ.ಪರಮೇಶ್ವರ್, ಡಿ.ಕೆ. ಶಿವಕುಮಾರ್, ರೋಷನ್ ಬೇಗ್, ರಮೇಶ್ ಕುಮಾರ್, ಈರಣ್ಣ ಮತ್ತಿಕಟ್ಟಿ, ಹಾಗೂ ಕೆ.ಬಿ. ಕೋಳಿವಾಡ ವಿರೋಧಿ ಪಾಳಯದವರು. ಇವರಲ್ಲಿ ಬಹುತೇಕ ಮಂದಿ ಒಂದಿಲ್ಲೊಂದು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಗಣಿ ಅಕ್ರಮದ ಆರೋಪದ ಮೇರೆಗೆ ಲಾಡ್ ರಾಜೀನಾಮೆ ಪಡೆಯುವ ಮೂಲಕ ಕಳಂಕಿತರಿಗೆ ಸಂಪುಟದಲ್ಲಿ ಅವಕಾಶವಿಲ್ಲ ಎನ್ನುವುದನ್ನು ಸಿದ್ದರಾಮಯ್ಯ ಸಾರಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಮೀಟಿಂಗ್ ಮಾಡಿ ಸುದೀರ್ಘ ಚರ್ಚೆ ನಡೆಸಿದ ನಂತರ, ರಾಜಿನಾಮೆ ನೀಡಿದ ಲಾಡ್ ಹೇಳಿಕೆಯನ್ನು ಇಲ್ಲಿ ಗಮನಿಸಬೇಕು. 'ತಮ್ಮ ಮೇಲಿನ ಆರೋಪ ಕುರಿತು ತನಿಖೆ ನಡೆಯುತ್ತಿರುವಾಗ ಸಚಿವ ಸ್ಥಾನದಲ್ಲಿ ಇರುವುದು ನೈತಿಕವಾಗಿ ಸರಿಯಲ್ಲ. ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ಆಗುವುದನ್ನು ತಪ್ಪಿಸಲು ರಾಜಿನಾಮೆ ಕೊಡುತ್ತಿದ್ದೇನೆ' ಎಂದು ಆಣಿಮುತ್ತು ಉದುರಿಸಿದ್ದಾರೆ. ಸಂಪುಟ ಸೇರಿದ ಆರು ತಿಂಗಳ ನಂತರ ಜ್ಞಾನೋದಯ ಆಗಿದೆ ಎಂಬುದು ಬೇರೆ ಮಾತು. ಆದರೆ ಲಾಡ್ ಬಾಯಿಂದ ಹೊರಬಿದ್ದ ನೈತಿಕ ಮೌಲ್ಯದ ಮಾತು ಖಂಡಿತ ಅವರದ್ದಲ್ಲ. ಅದು ಲಾಡ್ ಬಾಯಿಂದ ಬಂದ ಸಿದ್ದರಾಮಯ್ಯ ಮಾತು. ಇದರ ಹಿಂದಿನ ಉದ್ದೇಶ ಸಚಿವ ಸ್ಥಾನಾಕಾಂಕ್ಷಿ ವಿರೋಧಿಗಳನ್ನು ಸಂಪುಟದಿಂದ ಹೊರಗಿಡುವುದೇ ಆಗಿದೆ.
ಲಾಡ್ ರಾಜಿನಾಮೆ ಮೂಲಕ ಸಿದ್ದರಾಮಯ್ಯ ಒಂದೇ ಹಗ್ಗದಲ್ಲಿ ಹಲವರನ್ನು ಕಟ್ಟಿ ಹಾಕಿದ್ದಾರೆ. ಬೇರೆ ಕಳಂಕಿತರು ಸಂಪುಟಕ್ಕೆ ಬರುವಂತಿಲ್ಲ, ಅವರನ್ನು ಸೇರಿಸಿಕೊಳ್ಳಿ ಎಂದು ಹೈಕಮಾಂಡ್ ಕೂಡ ಒತ್ತಡ ಹೇರುವಂತಿಲ್ಲ. ಇದರ ಜೊತೆಗೆ ತಮ್ಮದು ಪರಿಶುದ್ಧ ಸಂಪುಟ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುವುದು. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಕುಸಿದುಬಿದ್ದಿದೆ. ಉಸಿರಾಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ಲೋಕಸಭಾ ಚುನಾವಣೆ ಬೇರೆ ಹತ್ತಿರದಲ್ಲಿದೆ. ಹೆಚ್ಚಿನ ಸ್ಥಾನ ಗಳಿಸುವ ಆಕಾಂಕ್ಷೆ ಮತ್ತು ನಿರೀಕ್ಷೆ ಎರಡೂ ಇದೆ. ಇಂಥ ಸಂದರ್ಭದಲ್ಲಿ ರಾಜ್ಯ ಹಾಗೂ ದಿಲ್ಲಿ ನಾಯಕರಿಂದ ತಮ್ಮ ಮೇಲೆ ಬರಬಹುದಾದ ಒತ್ತಡವನ್ನು ಲಾಡ್ ರಾಜಿನಾಮೆ ಪ್ರಹಸನದ ಮೂಲಕ ಸಿದ್ದರಾಮಯ್ಯ ನಿವಾರಿಸಿಕೊಂಡಿದ್ದಾರೆ.
ಹೌದು, ಸಿದ್ದರಾಮಯ್ಯ ಅವರಿಗೆ ಇದು ಒಂದು ಗೆಲುವೇ. ಲೋಕಸಭೆ ಚುನಾವಣೆ ಮುಗಿಯುವವರೆಗೂ ಪಕ್ಷದ ಆಂತರಿಕ ಸಮಸ್ಯೆ ಹತ್ತಿರ ಸುಳಿಯದಂತೆ ಪಟ್ಟುಗಳನ್ನು ಹೆಣೆದಿದ್ದಾರೆ. ಅವರ ಪಟ್ಟುಗಳು ಅವರಿಗೇ ಆಶ್ಚರ್ಯ ತಂದಿವೆ. ಪಾಪ, ಪರಮೇಶ್ವರ್ ಅವರು ವಿಧಾನ ಪರಿಷತ್ ಸದಸ್ಯರಾಗಲು ಅನುವಾಗುವಂತೆ ಮುಮ್ತಾಜ್ ಅಲಿಖಾನ್ ಅವರಿಂದ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿದ್ದರು. ಆ ಸ್ಥಾನಕ್ಕೆ ಹೋಗಲು ವೇದಿಕೆ ಸಿದ್ಧಮಾಡಿಕೊಂಡಿದ್ದರು. ಆದರೆ ಅಲ್ಪಸಂಖ್ಯಾತರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಅಲ್ಪಸಂಖ್ಯಾತರನ್ನೇ ನೇಮಕ ಮಾಡಿ ಇಕ್ಬಾಲ್ ಅಹಮದ್ ಸರಡಗಿ ಅವರನ್ನು ಈ ಸ್ಥಾನಕ್ಕೆ ಪರಿಗಣಿಸಿ ಎಂದು ಹೈಕಮಾಂಡ್ ಕಿವಿ ಕಚ್ಚಿದ್ದಾರೆ. ಅಲ್ಲಿಗೆ ಪರಮೇಶ್ವರ್ ಮೇಲ್ಮನೆ ಸೇರ್ಪಡೆ ಪ್ರಸಂಗ ನೆನೆಗುದಿಗೆ, ಸಿದ್ದರಾಮಯ್ಯ ರಣತಂತ್ರ ಮೈಲುಗೈಗೆ.
ನಿಜ, ಸಿದ್ದರಾಮಯ್ಯ ಸದ್ಯಕ್ಕೆ ಗೆದ್ದು ತೇಲುತ್ತಿದ್ದಾರೆ. ಆದರೆ ಅವರ ಈ ಬೀಗುವಿಕೆ ವಿರೋಧಿಗಳನ್ನೆಲ್ಲ ಒಂದೆಡೆ ಕಲೆಹಾಕುತ್ತಿದೆ. ಕುಸ್ತಿಯಲ್ಲಿ ಕತ್ತರಿ ಶಾಟ್ ಹೊಡೆಸಿಕೊಂಡು ನೆಲಕ್ಕೆ ಬಿದ್ದವರು ಸುಮ್ಮನೆ ಕೂರುತ್ತಾರೆಯೇ?
ಮಲ್ಲಯುದ್ಧದಲ್ಲಿ ಹೋದ ಮಾನವನ್ನು ಕತ್ತಿವರಸೆಯಲ್ಲಾದರೂ ವಾಪಸ್ಸು ಪಡೆಯೋಣ ಎಂದು ಸನ್ನದ್ಧರಾಗುತ್ತಿದ್ದಾರೆ. ಆಯುಧಗಳನ್ನು ಸಾಣೆ ಹಿಡಿಯುವ ಮನೆಯಲ್ಲಿ ಒಟ್ಟುಗೂಡಿಸಿದ್ದಾರೆ. ಅದರಲ್ಲೂ 'ಅಹಿಂದ' ಮುಂದೋಟದಲ್ಲಿ ಹಿಂದೆ ಬಿದ್ದಿರುವ ಮೇಲ್ವರ್ಗದ ನಾಯಕರು ಕತ್ತಿಯ ಜೊತೆ ಜೊತೆಗೆ ಹಲ್ಲು ಮಸೆಯುತ್ತಿದ್ದಾರೆ. ಆದರೆ ಲೋಕಸಭೆ ಚುನಾವಣೆ ಅವರ ಆಕ್ರೋಶ ಆಂತರ್ಯದಲ್ಲಷ್ಟೇ ಮಡುಗಟ್ಟುವಂತೆ ಮಾಡಿದೆ. ಚುನಾವಣೆ ಮುಗಿಯುವವರೆಗೂ ಉಸಿರೆತ್ತುವಂತಿಲ್ಲ. ಅದು ಇವರಿಗೂ ಗೊತ್ತು, ಸಿದ್ದರಾಮಯ್ಯ ಅವರಿಗೂ ಗೊತ್ತು. ಆದರೆ ಚುನಾವಣೆ ನಂತರ ಪರಿಸ್ಥಿತಿ ಹೀಗೇ ಎಂದು ಹೇಳುವಂತಿಲ್ಲ.
ಒಂದೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಸಿದ್ದರಾಮಯ್ಯ ನಾಗಾಲೋಟ ಹೀಗೆಯೇ ಮುಂದುವರಿಯಬಹುದು. ಆದರೆ ಅಧಿಕಾರ ವಂಚಿತರು ಚುನಾವಣೆಯಲ್ಲೇ ಕರಾಮತ್ತು ತೋರುವ ಸಾಧ್ಯತೆಯನ್ನು ತಳ್ಳುಹಾಕುವಂತಿಲ್ಲ. ಅದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೋ ಬೇರೇ ಮಾತು. ಆದರೆ ಅಪ್ಪಿತಪ್ಪಿ ಕಡಿಮೆ ಸ್ಥಾನಗಳು ಬಂದರೆ ಸಿದ್ದರಾಮಯ್ಯ ಪರಿಸ್ಥಿತಿ ಭಿನ್ನವಾಗುವುದರಲ್ಲಿ ಸಂಶಯವಿಲ್ಲ. ಕುದಿಮೌನ ಸ್ವರೂಪದಲ್ಲಿರುವ ಭಿನ್ನಮತಕ್ಕೆ ನಾಯಕತ್ವ ರೂಪುಗೊಳ್ಳುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆ ಕೇಂದ್ರ ಸರಕಾರಕ್ಕೆ ಮರಣ ಮೃದಂಗವೇ ಸರಿ. ಅದರ ನೇರ ಪರಿಣಾಮ ರಾಜ್ಯದ ಮೇಲೂ ಆಗುತ್ತದೆ. ಕೇಂದ್ರದಲ್ಲಿ ಸರಕಾರ ಇಲ್ಲದೇ ಹೋದಾಗ ಕರ್ನಾಟಕದಲ್ಲಿ ಚುನಾವಣಾ ಸ್ಥಾನಮಾನಗಳನ್ನು ಅಧಿಕಾರ ರಾಜಕಾರಣ ನುಂಗಿ ನೀರು ಕುಡಿಯುತ್ತದೆ. ಇಲ್ಲಿ ಗಳಿಸಿದ ಸ್ಥಾನಗಳು ಗೌಣವಾಗುತ್ತವೆ.
ದಿಲ್ಲಿ ಮತ್ತು ರಾಜ್ಯದಲ್ಲಿನ ಸಿದ್ದರಾಮಯ್ಯ ವಿರೋಧಿಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸರಕಾರದ ನಾನಾ ವಿವಾದಿತ ಯೋಜನೆಗಳು, ಹಣಕಾಸು ದುಸ್ಥಿತಿ, ಆದಾಯ ಸಂಗ್ರಹ ಕೊರತೆ, ತತ್ಪರಿಣಾಮ ಅಭಿವೃದ್ಧಿ ಕಾರ್ಯಗಳ ಹಿನ್ನಡೆ, ತಮ್ಮ ಕೆಲಸ ಆಗದ್ದಕ್ಕೆ ಶಾಸಕರ ಬೇಸರ, ಮುಖನೋಡಿ ಮಣೆ ಹಾಕುವ ಮುಖ್ಯಮಂತ್ರಿ ಬಿಗುಮಾನಕ್ಕೆ ಅಸಮಾಧಾನ- ಇವೆಲ್ಲವೂ ಪ್ರತಿಕೂಲ ಶಕ್ತಿಯಾಗಿ ಹೊರಹೊಮ್ಮುವ ಹಾದಿಯಲ್ಲಿವೆ.
ಸದ್ಯಕ್ಕೆ ಸಿದ್ದರಾಮಯ್ಯ ಗೆದ್ದ ಮಗ. ಭವಿಷ್ಯದಲ್ಲೂ ಇದೇ ಸ್ಥಾನ ಕಾಯ್ದುಕೊಳ್ಳಲು ಅವರು ಹೆಣೆಯಬಹುದಾದ ರಣತಂತ್ರಗಳು ಕುತೂಹಲ ಮೂಡಿಸಿವೆ. ಅದೇ ರೀತಿ ಅವರ ವೈರಿಗಳ ಪ್ರತಿತಂತ್ರ ಕೂಡ...!
ಲಗೋರಿ: ಒಮ್ಮೊಮ್ಮೆ ಪರರ ನೋವಲ್ಲೂ ಸುಖ ಹೊಮ್ಮಬಹುದು.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


