ಅಂಕಣಗಳು

ಪುಟ್ಟಣ್ಣಯ್ಯ ಮಾತುಗಾರಿಕೆಗೆ ಇಲ್ಲಿ ಅವಕಾಶ ಇಲ್ಲ!

ರೈತ ಸಂಘದ ಅಧ್ಯಕ್ಷ, ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಮೈಸೂರು ವಿವಿಯ ಶಿಕ್ಷಣ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಪುಟ್ಟಣ್ಣಯ್ಯ ಮಾತುಗಾರಿಕೆಗೆ ಇಲ್ಲಿ ಅವಕಾಶ ಇಲ್ಲ!
Published On :

ರೈತ ಸಂಘದ ಅಧ್ಯಕ್ಷ, ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಮೈಸೂರು ವಿವಿಯ ಶಿಕ್ಷಣ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಅವರು ಕಳೆದ ವಾರ ನಡೆದ ಶಿಕ್ಷಣ ಮಂಡಳಿಯ ಸಭೆಗೆ ಹಾಜರಾದ ಕೂಡಲೇ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರು ಸ್ವಾಗತಿಸಿ, ಪುಟ್ಟಣ್ಣಯ್ಯ ಅವರ ಮಾತುಗಳನ್ನು ಕೇಳಲು ಚೆಂದ. ಯಾವುದೇ ವಿಚಾರವಾದರೂ ಆಳವಾಗಿ ಮಾತನಾಡುತ್ತಾರೆ. ಆದ್ರೆ ಅವ್ರು ಇಲ್ಲಿ ಮಾತನಾಡೋದು ಬೇಡ ಅಂದ್ರು. ಆದ್ರೂ ಪುಟ್ಟಣ್ಣಯ್ಯ ಸುಮ್ನೆ ಇರಲಿಲ್ಲ. ಮುಂದಿನ ವರ್ಷದಿಂದ ಐದು ಹೊಸ ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸುವುದಾಗಿ ಕುಲಪತಿ ಹೇಳಿದಾಗ, ಕೃಷಿ ಸಂಬಂಧಿ ಕೋರ್ಸ್ ಆರಂಭಿಸಿ ಎಂಬ ಸಲಹೆ ನೀಡಿದರು. ಆಗ ಕುಲಪತಿ, ಸಾರ್, ಅದಕ್ಕಾಗಿಯೇ ಕೃಷಿ ವಿವಿ ಇದೆ ಎಂದು ಮಾರುತ್ತರ ನೀಡಿದರು. ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಸರ್ಕಾರ ಅನುಮತಿ ನೀಡಿದೆ ಎಂಬ ಕಾರಣಕ್ಕಾಗಿ ಸರ್ಕಾರಿ ಕಾಲೇಜುಗಳಿಗೆ ಸಂಯೋಜನೆ ನೀಡಲಾಗಿದೆ ಎಂದು ಕುಲಪತಿ ಹೇಳಿದಾಗಲೂ ಪುಟ್ಟಣ್ಣಯ್ಯ ಕೆಲವು ಖಾಸಗಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಅಂದು ನಡುವೆ ಬಾಯಿ ಹಾಕಿದರು. ಸಾರ್, ಸರ್ಕಾರಿ ಕಾಲೇಜುಗಳಿಗೆ ಹೋಲಿಸಿದರೆ ಪ್ರೈವೇಟ್ ಕಾಲೇಜುಗಳಲ್ಲೇ ಸೌಲಭ್ಯ ಚೆನ್ನಾಗಿರೋದು ಎಂದು ರಂಗಪ್ಪ ಹೇಳಿದ ನಂತರ ಪುಟ್ಟಣ್ಣಯ್ಯ ಮರು ಮಾತನಾಡಲಿಲ್ಲ!

ಮಿರ್ಚಿ ಬಜಿ ಎಂದು ಚಿಕನ್ ಪೀಸ್‌ ತಿಂದ ಸಸ್ಯಾಹಾರಿ ಪತ್ರಕರ್ತರು!
ಕಮರ್ಷಿಯಲ್ ಪ್ರೆಸ್ ಮೀಟ್‌ಗಳಲ್ಲಿ ಪತ್ರಕರ್ತರಿಗೆ ಒಂದಿಷ್ಟು ಹೆಚ್ಚಿನ ಗೌರವಾತಿಥ್ಯ ಸಿಗುತ್ತದೆ. ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಒಂದಾದ 'ತಾಜ್ ದಿ ಗೇಟ್ ವೇ'ನಲ್ಲಿ ಕಂಪನಿಯೊಂದರ ಪ್ರಾಡೆಕ್ಟ್ ಬಿಡುಗಡೆಗಾಗಿ ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಗೋಷ್ಠಿ ಮುಗಿದ ಕೂಡಲೇ ಚಹಾ ಸೇವನೆಗೆ ಪತ್ರಕರ್ತರು ಮುಂದಾದರು. ಈ ಸಮಯದಲ್ಲಿ ಅಚಾನಕ್ ಆಗಿ ಚಿಕನ್ ಡಿಶ್ ಹೆಸರು ಬರೆದಿಟ್ಟ ಚೀಟಿ ಮುಗುಚಿ ಬಿದ್ದಿತ್ತು. ಸರತಿಯಲ್ಲಿ ಬಂದ ಪತ್ರಕರ್ತರು ಒಂದೊಂದೇ ಡಿಶ್ ಪ್ಲೇಟ್‌ನಲ್ಲಿ ಹಾಕಿಕೊಳ್ಳುತ್ತಾ ಮುಂದೆ ನುಗ್ಗಿದರು. ಅದರಲ್ಲೂ ಕೆಲವು ವೆಜಿಟೇರಿಯನ್ ಪತ್ರಕರ್ತರು ಮಿರ್ಚಿ ಬಜಿ ಹೋಲುತ್ತಿದ್ದ ಚಿಕನ್ ತಿಂಡಿ ಪ್ಲೇಟಿಗೆ ಹಾಕಿಕೊಂಡು ತುಂಬಾ ಚೆನ್ನಾಗಿದೆ ಎಂದು ಜಗಿಯಲಾರಂಭಿಸಿದರು. ಈ ಮಧ್ಯೆ ಚಿಕನ್ ಬಜಿ ಸೂಪರ್ ಎಂದಾಗ, ಚಿಕನ್ ಹೊಟ್ಟೆಗಿಳಿಸಿದ್ದ ವೆಜಿಟೇರಿಯನ್ ಪತ್ರಕರ್ತರಲ್ಲಿ ತಳಮಳ. ಯಾರೋ ಕುಶಾಲಿ ಮಾಡುತ್ತಿರಬೇಕೆಂದು ಸಂಯೋಜಕರಲ್ಲಿ ಈ ಬಗ್ಗೆ ವಿಚಾರಿಸಿದರೆ ಅವರೂ ಹೌದು ಇದು ಚಿಕನ್ ಎಂದಾಗ ಎದ್ನೋ ಬಿದ್ನೋ ಎನ್ನುತ್ತಾ ವಾಶ್ ಬೇಸಿನ್‌ತ್ತ ಓಡಿ ಹೋದರು! ಇದನ್ನು ಇನ್ನುಳಿದ ಪತ್ರಕರ್ತರು 'ಚಾ ಜೋಡಿ ಚೂಡಾದಂಗ' ಎನ್ನುವುದನ್ನು 'ಚಾ ಜೋಡಿ ಚಿಕನ್ ಹ್ಯಾಂಗ್‌' ಎಂದು ಕಾಲೆಳೆದರು!

ಜೈಕಾರ ಹಾಕುವರಿಗೆ ಬುದ್ಧಿ ಹೇಳಲು ಹೋಗಿ ಮಂಕಾದರು!
ಕಳೆದ ವಾರ ಮೈಸೂರಿನ ಕಲಾಮಂದಿರದಲ್ಲಿ ಕನಕ ಜಯಂತಿ ಸಮಾರಂಭ ನಡೆಯುತ್ತಿತ್ತು. ಸಭಿಕರಲ್ಲಿ ಕೆಲವರು ಆಗಾಗ ಕನಕದಾಸರಿಗೆ, ಸಿದ್ದರಾಮಯ್ಯಗೆ ಜೈಕಾರ ಹಾಕುತ್ತಿದ್ದರು. ಆಗ ಶಾಸಕ ಎಂ.ಕೆ. ಸೋಮಶೇಖರ್ ಅವರು ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕುತ್ತಿದ್ದವರನ್ನು ಸುಮ್ಮನಿರಿಸಲು ಮುಂದಾದರು. ಆ ಗುಂಪು ಕನಕದಾಸ, ಸಿದ್ದರಾಮಯ್ಯ ಜತೆ ಸೋಮಶೇಖರ್‌ಗೂ ಜೈ ಎಂದಾಗ ಪೇಚಿಗೀಡಾದ ಶಾಸಕರು ಯಾರಿಗಾದ್ರೂ ಜೈಕಾರ ಹಾಕ್ಲಿ ಅಂತಾ ಮೌನವಾದರು!

ವಾಜಪೇಯಿ ಜತೆ ಕೆಲಸ ಮಾಡಿದ್ದೇ ಪುಣ್ಯ ಎಂದ ಪೂಜಾರಿ 'ಬಂಟ'ರು!
ಮಂಗಳೂರಲ್ಲಿ ಟಿಕೆಟ್‌ಗಾಗಿ ಹರ್ಷ ಮೊಯ್ಲಿ ಬಣ ಮತ್ತು ಪೂಜಾರಿ ಬಣ ರಣತಂತ್ರ ರೂಪಿಸುತ್ತಿರುವಂತೆಯೇ ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ, ನರೇಂದ್ರ ಮೋದಿ ಟೀಕಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಮೋದಿ ಪತ್ನಿ ವಿಚಾರ ಬಗ್ಗೆ ಪೂಜಾರಿ ಸುದ್ದಿಗೋಷ್ಠಿ ಕರೆದಿದ್ದರು. ಗೋಷ್ಠಿ ಮುಗಿದ ಬಳಿಕ ಪೂಜಾರಿ ಬಲಗೈ ಬಂಟರು ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಪೂಜಾರಿ ಬಲಗೈ ಬಂಟ ಹರಿಕೃಷ್ಣ ಬಂಟ್ವಾಳ್ ಒಂದು ಹೆಜ್ಜೆ ಮುಂದೆ ಹೋಗಿ 'ನೀವು ಮೋದಿ ಬಗ್ಗೆ ಪ್ರಚಾರ ಅಭಿಯಾನ ಎಷ್ಟೇ ಮಾಡಿ, ಮೋದಿ ಸೋಲು ಖಚಿತ, ಅವರಿಗಿಂತ ವಾಜಪೇಯಿ ಎಷ್ಟೋ ಮೇಲು. ನಾನು ವಾಜಪೇಯಿ ಜತೆ ಒಂದು ತಿಂಗಳು ಜತೆಯಾಗಿದ್ದು ಕೆಲಸ ಮಾಡಿದ್ದೇನೆ, ಅವರಿಗೆ ಓಟ್ ಕೂಡಾ ಹಾಕಿದ್ದೇನೆ, ಪತ್ರಕರ್ತರೇ ನಿಮ್ಮ ಯೋಗ್ಯತೆ ಏನು?' ಎಂದು ಸವಾಲ್ ಎಸೆದರು! ವಾದ ಸರಣಿ ಆರಂಭಿಸುವಾಗ ಕಟ್ಟಾ ಕಾಂಗ್ರೆಸಿಗನಾಗಿದ್ದ ಹರಿಕೃಷ್ಣ ಬಂಟ್ವಾಳ್ ಮುಗಿಯುವಾಗ ಬಿಜೆಪಿ ಪಾಳಯದಲ್ಲಿದ್ದರು!

ಕ್ಯಾಮರಾ ಜತೆ ಇನ್ನು ಎಳನೀರು ಹಿಡಿದುಕೊಂಡೇ ಹೋಗ್ಬೇಕು!
ಇತ್ತೀಚೆಗೆ ಕುದುರೆ ಮೇಲಿಂದ ಬಿದ್ದು ಇಂದಿನ ಸ್ಟಾರ್ ನಟನೊಬ್ಬ ಗಾಯ ಮಾಡಿಕೊಂಡಿದ್ದರು. ಅದೃಷ್ಟವೋ ದುರದೃಷ್ಟವೋ ಟಿವಿ ಚಾನೆಲ್ ವರದಿಗಾರನೊಬ್ಬ ಅವನ ಸಂದರ್ಶನ ಮಾಡಲು ಹೊರಟಿದ್ದರು. ಆ ಹೀರೋಗೆ ಮಾತ್ರ 'ಜರ್ನಲಿಸ್ಟ್‌ಗಳನ್ನ ನಮ್ ಮನೆ ಕಾಂಪೌಂಡ್ ಒಳಗೂ ಬಿಟ್ಟುಕೊಳ್ಳಲ್ಲ ಸರ್‌' ಅಂತ ನೇರವಾಗಿ ಹೇಳುವಷ್ಟು ನಿಯತ್ತು. ಅಂಥ ನಟನ ಮನೆ ಬಾಗಿಲಿಗೆ ಹೋಗುತ್ತಿದ್ದಂತೆ ಹತ್ತಿರದಲ್ಲೇ ಎಳನೀರು ಕಾಣಿಸಿತು. ಹೇಗೂ ನಮ್ ಹೀರೋಗೆ ಹುಷಾರಿಲ್ಲ ಎಂದು ಒಂದೆರಡು ಎಳನೀರು ಖರೀದಿಸಿ ಒಳ ನಡೆದ. 'ಎಳನೀರು ಪತ್ರಕರ್ತ'ನನ್ನು ನೋಡುತ್ತಿದ್ದಂತೆ ಹೀರೋ ದಿಲ್‌ಖುಷ್ ಆಗಿ ಸ್ವಾಗತಿಸಿದ. ಆದರೆ, ಅದಾಗಲೇ ಇನ್ನೊಂದು ಟಿವಿ ಚಾನೆಲ್ ವರದಿಗಾರ ಅವರ ಬಳಿ ಬಂದು ಕುಳಿತಿದ್ದ. ಎಳನೀರು ನೋಡಿದ ಹೀರೋ ಮೊದಲು ಬಂದು ಕೂತಿದ್ದ ಪತ್ರಕರ್ತನತ್ತ ಮುಖ ಮಾಡಿ 'ನೋಡು ನೀನೂ ಇದೀಯಾ, ಯಾವತ್ತಾದ್ರೂ ಹಿಂಗೆ ಎಳನೀರು ತಗೊಂಡ್ ಬಂದಿದೀಯ?' ಎಂದು ಮೂದಲಿಸಿದ. ಆತ 'ಇನ್ಮೇಲೆ ಮೈಕ್, ಕ್ಯಾಮರಾ ಜತೆ ಎಳನೀರನ್ನೂ ಕೈಯಲ್ಲಿಟ್‌ಕೊಂಡೇ ಅಡ್ಡಾಡ್‌ಬೇಕು ನಾವು' ಎಂದು ಗೊಣಗಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ!

- ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.