ಹುಡುಗಿಯರ ಮನಸ್ಸು ಒಡೆದುಹೋಗುವ ಕ್ಷಣ...
ಹುಡುಗ, ಸಿಟ್ಟು ಮತ್ತು ಅಸಹನೆಯಿಂದ ಹೇಳುತ್ತಾನೆ: 'ಅವಳು ವಂಚಕಿ. ಮೋಸಗಾತಿ.
ಹುಡುಗ, ಸಿಟ್ಟು ಮತ್ತು ಅಸಹನೆಯಿಂದ ಹೇಳುತ್ತಾನೆ: 'ಅವಳು ವಂಚಕಿ. ಮೋಸಗಾತಿ. ಶುದ್ಧ ಫ್ಲರ್ಟ್. ನನ್ನ ಮನಸ್ಸು ಕದ್ದವಳೂ ಅವಳೇ. ಹೃದಯವ ಕೊಂದವಳೂ ಅವಳೇ. ಅವಳಿಗಾಗಿ ನಾನು ಏನೇನು ಮಾಡಲಿಲ್ಲ ಹೇಳಿ? ಅವಳಿಗಾಗಿ ಹಠ ಬಿಟ್ಟೆ. ಸಿಗರೇಟು ಬಿಟ್ಟೆ. ಫ್ರೆಂಡ್ಸ್‌ಗಳನ್ನು ಕಳಕೊಂಡೆ. ಹೆತ್ತವರಿಂದ, ಬಂಧುಗಳಿಂದ ಛೀಮಾರಿ ಹಾಕಿಸಿಕೊಂಡೆ. ಯಾವುದಾದ್ರೂ ಕೆಲಸ ಹುಡುಕಿಕೋ ಅಂದ್ಳು. ಅರ್ಜಿ ಹಾಕಿದೆ. ಡೀಸೆಂಟ್ ಆಗಿರೋದನ್ನು ಕಲಿತುಕೊ ಅಂದ್ಳು. ಒಪ್ಪಿಕೊಂಡೆ. ಹೀಗೆ, ಅವಳು ಹೇಳಿದ್ದಕ್ಕೆಲ್ಲಾ ಕೋಲೆ ಬಸವನಂತೆ ತಲೆಯಾಡಿಸುತ್ತಾ ನಾನು ಹೊಸ ಬದುಕಿನ ಕನಸು ಕಾಣುತ್ತಿದ್ದಾಗಲೇ ಅವಳು ಯಾವುದೋ ಕುಂಟು ನೆಪ ಹೇಳಿ ಎದ್ದು ಹೋಗಿಬಿಟ್ಲು. ಇದಾಗಿ ಕೆಲವೇ ದಿನಕ್ಕೆ ಬೇರೆ ಹುಡುಗನನ್ನು ಮದುವೆ ಆಗಿಬಿಟ್ಳು. ಹೀಗೆಲ್ಲ ವಂಚಿಸಲಿಕ್ಕೆ ಹುಡುಗೀರ್ಗೆ ಹೇಗಾದ್ರೂ ಮನಸ್ಸು ಬರುತ್ತೋ?'
ಈ ಮೇಲಿನ ಮಾತುಗಳಲ್ಲಿ ಸತ್ಯವಿದೆ ಎಂದು ಬಹಳಷ್ಟು ಮಂದಿ ವಾದ ಮಂಡಿಸುತ್ತಾರೆ. ಆಟೋ ಡ್ರೈವರ್‌ಗಳಂತೂ ಈ ಸಂಬಂಧವಾಗಿ ವಿವರಿಸಲು ಹೋಗದೆ, ತಂತಮ್ಮ ಆಟೋಗಳ ಹಿಂದೆ-'ಪ್ರೀತಿಯ ಹುಡುಗ, ಮೋಸದ ಹುಡುಗಿ' ಎಂದು ಬರೆಸಿಕೊಂಡು ದಕ್ಕದೇ ಹೋದ ಹುಡುಗಿಯ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಆದರೆ ವಾಸ್ತವ ಏನೆಂದರೆ, ಪ್ರೀತಿಸಿದ ಹುಡುಗನಿಗೆ ಮೋಸ ಮಾಡಬೇಕು, ಅವನಿಂದ ದಿಢೀರನೆ ಕಳಚಿಕೊಂಡು ಮತ್ತೊಬ್ಬನೊಂದಿಗೆ ಸಂಸಾರ ನಡೆಸಬೇಕು ಎಂಬ ಮನಸ್ಸು ಹೆಚ್ಚಿನ ಹುಡುಗಿಯರಿಗೆ ಇರುವುದೇ ಇಲ್ಲ. ಎಲ್ಲವೂ ಒಂದು ನಾಟಕದ ದೃಶ್ಯದಂತೆ ನಡೆದು ಹೋಗುತ್ತದೆ. ಪಾಪ, ಅಸಹಾಯಕ ಹುಡುಗಿಯರು ಅಲ್ಲಿ ಖಳನಾಯಕಿಯರಾಗುತ್ತಾರೆ ಅಥವಾ ಬಲಿಪಶುಗಳಾಗುತ್ತಾರೆ.
ಹೌದು ತಾನೆ? ಹುಡುಗರ ಬದುಕಲ್ಲಿ ಹೇಗೋ ಹಾಗೆಯೇ ಹುಡುಗಿಯರ ಬದುಕಲ್ಲೂ ಹರೆಯವೆಂಬುದು ಹೇಳದೇ ಕೇಳದೆ ಬಂದುಬಿಡುತ್ತದೆ. ಹರಟೆಗೆ, ಪಿಸುಮಾತಿಗೆ, ಸರಸಕ್ಕೆ, ಜಗಳಕ್ಕೆ, ಮುನಿಸಿಗೆ ಮತ್ತು ರಾಜಿ ಆಗಲಿಕ್ಕೆ ಒಬ್ಬ ಜೊತೆಗಾರ ಬೇಕು ಎಂದು ಮನಸ್ಸು ಹಂಬಲಿಸುವುದೇ ಆಗ. 'ಐ ಲವ್ ಯೂ' ಎಂದು ಹೇಳಲು ಹುಡುಗರಿಗೆ ಸಾವಿರ ಮಾರ್ಗಗಳಿವೆ. ಇಷ್ಟವಾದವಳ ಮುಂದೆ ನಿಂತು ತಮ್ಮ ಮನಸ್ಸಿನ ಮಾತು ಹೇಳಲು ಅವರಿಗೆ ನಾಚಿಕೆ, ಕಟ್ಟುಪಾಡು, ಸಂಕೋಚ, ಹೆದರಿಕೆ... ಇಂಥ ಯಾವ ಹಂಗೂ ಇಲ್ಲ. ಆದರೆ ಹುಡುಗಿಯರಿಗೆ ಅಂಥ ಅನುಕೂಲವಿಲ್ಲ. ಮನಸ್ಸಿನ ಮಾತನ್ನು ಮುಕ್ತವಾಗಿ ಹೇಳುವಂಥ ಸ್ವಾತಂತ್ರ್ಯವೂ ಇಲ್ಲ. ವಾಸ್ತವ ಹೀಗಿದ್ದರೂ, ಅದೊಂದು ದಿನ ಪ್ರೀತಿಯ ಹೂವು ಅರಳುತ್ತದೆ. ಅಂದಿನಿಂದ ಹುಡುಗಿ ತನ್ನಷ್ಟಕ್ಕೆ ತಾನೇ ನಗುತ್ತಾಳೆ. ಒಬ್ಬಳೇ ಮಾತಾಡಿಕೊಳ್ಳುತ್ತಾಳೆ. ಮನೆಯವರಿಗೆ ಸುಳ್ಳು ಹೇಳಲು ಕಲಿಯುತ್ತಾಳೆ. ಏನಾದರೂ ಹೆಚ್ಚು ಕಡಿಮೆಯಾದರೆ... ಎಂದು ಕಲ್ಪಿಸಿಕೊಂಡು ನಡುಗುತ್ತಾಳೆ. ಅಂಥದೇನೂ ಆಗುವುದಿಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಾಳೆ. ಈ ಮಧ್ಯೆ ಪ್ರೀತಿಸಿದ ಹುಡುಗನ ಕುರಿತು ಒಂದೊಂದೇ ವಿಷಯಗಳು ಆಕೆಗೆ ತಿಳಿಯುತ್ತಾ ಹೋಗುತ್ತವೆ. ಮೊದಲ ನೋಟದಲ್ಲಿ ಕನಸಿನ ರಾಜಕುಮಾರನಂತೆ ಕಾಣಿಸಿದ್ದವನು, ದಿನಕಳೆದಂತೆ ಸ್ವಲ್ಪ ಉಡಾಫೆ, ಸ್ವಲ್ಪ ಅಸಹಾಯಕತೆ, ಸ್ವಲ್ಪ ಅಹಂಕಾರ ಮತ್ತು ಜಾಸ್ತಿಯೇ ಅನುಮಾನ ತುಂಬಿಕೊಂಡ ಇತರೆ ಹುಡುಗರಂತೆಯೇ ಗೋಚರಿಸುತ್ತಾನೆ.
ಈ ಮಧ್ಯೆಯೇ ಹುಡುಗನ ಜಾತಿ ಬೇರೆ ಎಂಬ ಶಾಕಿಂಗ್ ಸುದ್ದಿ ತಿಳಿಯುತ್ತದೆ. ಇಲ್ಲವಾದರೆ, ಹುಡುಗನ ಕುಟುಂಬದಲ್ಲಿ ದಾಯಾದಿ ಕಲಹವಿದೆ ಎಂದೋ, ಅಥವಾ ಹುಡುಗನ ಅಕ್ಕಂದಿರು ತನ್ನನ್ನು ಒಪ್ಪುವುದಿಲ್ಲ ಎಂಬ ಸುದ್ದಿಯೋ, ಹುಡುಗಿಯನ್ನು ತಲುಪುತ್ತದೆ. ಓಹ್, ಕಂಡಿದ್ದ ಕನಸುಗಳೆಲ್ಲಾ ಚದುರಿ ಹೋಗುತ್ತಿವೆ ಎಂಬ ಸಂಕಟದಲ್ಲಿ ನಡೆದುದನ್ನೆಲ್ಲ ಅಮ್ಮನೊಂದಿಗೆ ಹೇಳಿಕೊಂಡರೆ, ಆಕೆ ಹತ್ತೇ ನಿಮಿಷದಲ್ಲಿ ಈ ಸುದ್ದಿಯನ್ನು ಕುಟುಂಬದ ಯಜಮಾನರಿಗೆ, ಅಂದರೆ ಹುಡುಗಿಯ ತಂದೆಗೆ ಹೇಳಿಬಿಡುತ್ತಾಳೆ. ಅಥವಾ ಈ ಪ್ರೀತಿಯ ವಿಷಯ ಅವರಿವರ ಮೂಲಕ ತಂದೆ-ತಾಯಿಯ ಕಿವಿ ತಲುಪಿಬಿಡುತ್ತದೆ.
ಆನಂತರದಲ್ಲಿ ಹುಡುಗಿಯರಿಗೆ ಎದುರಾಗುವ ಸಂಕೋಲೆಗಳು ಒಂದೆರಡಲ್ಲ: 'ಅಲ್ಲಮ್ಮಾ, ಹೋಗಿ ಹೋಗಿ ಲವ್ ಮ್ಯಾರೇಜ್ ಆಗ್ತೇನೆ ಅಂತೀಯಲ್ಲ, ಇಷ್ಟು ದಿನ ನಿನ್ನನ್ನು ಹೆತ್ತು-ಹೊತ್ತು ಸಲಹಿದ್ದಕ್ಕೆ ಬಹುದೊಡ್ಡ ಮರ್ಯಾದೆ ಕೊಡ್ತಾ ಇದೀಯ ಕಣೇ. ಸಾರ್ಥಕ ಆಗೋಯ್ತು ಬಿಡು' ಎನ್ನುತ್ತ ಬಿಕ್ಕಳಿಸುವ ಅಮ್ಮ. ಇದನ್ನೆಲ್ಲಾ ನೋಡಬೇಕು ಅಂತಾನೇ ಆ ದೇವರು ಇನ್ನೂ ಬದುಕಿಸಿದ್ನಾ? ಇಂಥ ಕೆಲಸ ಮಾಡ್ತೀಯ ಅಂತ ಗೊತ್ತಿದ್ದರೆ ಹುಟ್ಟಿದಾಗ್ಲೇ ಸಾಯಿಸಿ ಬಿಡ್ತಿದ್ನಲ್ಲೇ ಎಂದು ಘರ್ಜಿಸುವ ಅಪ್ಪ, ನಿಂಗೆ ತಂಗಿಯರು ಇದ್ದಾರೆ ಕಣಮ್ಮಾ. ನೀನಿವತ್ತು ದುಡುಕಿ ಬಿಟ್ರೆ ಆ ಹುಡುಗೀರ್ನ ಕೇಳಲಿಕ್ಕೆ ನಾಳೆ ಯಾರೂ ಬರೋದಿಲ್ಲ ಎಂದು ಬ್ಲಾಕ್‌ಮೇಲ್ ಮಾಡುವ ಬಂಧುಗಳು ಹುಡುಗಿಯನ್ನು ಕಂಗಾಲು ಮಾಡಿ ಬಿಡುತ್ತಾರೆ. ಕೆಲವು ಪೋಷಕರು-'ನೀನೇನಾದ್ರೂ ಲವ್ ಮ್ಯಾರೇಜ್ ಆಗಿಬಿಟ್ಟೆ ಅಂತಾದ್ರೆ ಅವತ್ತೇ ನಾವು ವಿಷ ಕುಡಿದು ಸತ್ತು ಹೋಗ್ತೇವೆ' ಎಂದು ಘೋಷಿಸುತ್ತಾರೆ. ಪ್ರೀತಿಸಿದ ಹುಡುಗನನ್ನು ಮರೆತೇಬಿಡಬೇಕು ಎಂಬ ಆತುರದ ನಿರ್ಧಾರಕ್ಕೆ ಹುಡುಗೀರು ಬರುವುದೇ ಆಗ. ಹೆತ್ತವರು, ಬಂಧುಗಳು ಹಾಗೂ ಆತ್ಮೀಯರ ಸಮಾಧಾನಕ್ಕಾಗಿ ಆಕೆ ತನ್ನ ಸಡಗರಕ್ಕೆ ಬೆಂಕಿ ಹಚ್ಚಿಕೊಳ್ಳುತ್ತಾಳೆ. ಅದುವರೆಗೂ ನಳನಳಿಸುತ್ತಿದ್ದ ಪ್ರೀತಿಯ ಗುಲಾಬಿಯನ್ನು ಚಿವುಟಿ ಹಾಕಿ, ಹೊಸದೊಂದು ಮೊಗ್ಗಾಗಲು ಸಿದ್ಧಳಾಗುತ್ತಾಳೆ.
ಇನ್ನು ಕೆಲ ಸಂದರ್ಭಗಳಲ್ಲಿ ಪ್ರೀತಿಸಿದ ಹುಡುಗನೇ ಸಮಸ್ಯೆಯಾಗುತ್ತಾನೆ. ಅವಳನ್ನು ಹೆಜ್ಜೆ ಹೆಜ್ಜೆಗೂ ಅನುಮಾನಿಸುತ್ತಾನೆ. ಬೇರೆ ಹುಡುಗರೊಂದಿಗೆ ಮಾತಾಡಬೇಡ ಎಂದು ಕಂಡೀಷನ್ ಹಾಕುತ್ತಾನೆ. ಐ ಲವ್ ಯೂ ಎಂದು ಹೇಳಿ ನಾಲ್ಕು ತಿಂಗಳು ಕಳೆವ ಮೊದಲೇ ಸಿನಿಮಾಕ್ಕೆ ಕರೆಯುತ್ತಾನೆ. ಪಿಕ್‌ನಿಕ್‌ಗೆ ಆಹ್ವಾನಿಸುತ್ತಾನೆ. ಅವನ ಇಷ್ಟದಂತೆ ನಡೆಯದೇ ಹೋದರೆ ಸಿಡಿ ಸಿಡಿ ಅನ್ನುತ್ತಾನೆ. ಬೇಕೆಂದೇ ಮೈ ಮುಟ್ಟುತ್ತಾನೆ. ಈಕೆ ಆಸಹನೆಯಿಂದ ಮಾತಾಡಿದರೆ, ಏನಾಯ್ತೀಗ ಮಹಾ? ಯಾರೂ ಮಾಡಬಾರದ್ದನ್ನು ನಾನು ಮಾಡಲಿಲ್ವಲ್ಲ ಅಂದುಬಿಡುತ್ತಾನೆ. ಹುಡುಗಿಯರ ಮನಸ್ಸು ಒಡೆದು ಹೋಗುವುದೇ ಇಂಥ ಸಂದರ್ಭಗಳಲ್ಲಿ. ಹಸಿಹಸಿ ಪ್ರೀತಿ ಮತ್ತು ಅಹಮಿಕೆಯನ್ನಷ್ಟೇ ತುಂಬಿಕೊಂಡಿರುವ ಇವನೊಂದಿಗೆ ಹೆಣಗುವ ಬದಲು ದೂರ ಇದ್ದು ಬಿಡೋದೇ ಮೇಲು ಎಂದು ಆಗಲೇ ನಿರ್ಧರಿಸುತ್ತಾರೆ. ಯಾವುದಾದರೂ ನೆಪ ಹೇಳಿ ಅವನಿಂದ ಕಳಚಿಕೊಳ್ಳುತ್ತಾರೆ.
ಪ್ರೀತಿಯ ಹುಡುಗ, ಮೋಸದ ಹುಡುಗಿ ಎಂಬಂಥ ಸಾಲು ಕಾಣಿಸುವುದೇ ಆಗ. ವಾಸ್ತವ ಏನೆಂದರೆ, ಹುಡುಗ ಎಲ್ಲರಿಗೂ ಕಾಣುವಂತೆ ಅಳುತ್ತಾನೆ. ಹುಡುಗಿ ಯಾರಿಗೂ ಕಾಣಿಸದಂತೆ ಕಣ್ಣೊರೆಸಿಕೊಳ್ಳುತ್ತಾಳೆ! ಹೌದಲ್ವಾ?
- ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

