ಅಂಕಣಗಳು

ಎಲ್ಲವೂ ದೇವರ ಇಚ್ಛೆಯಂತೆ ಆಗುತ್ತದೆ

ಮನೆಯ ಯಜಮಾನ ಮತ್ತು ಕಾವಲುಗಾರನ ಮುಂದೆ 'ಎ' ಗ್ರೇಡ್ ಉಳಿಸಿಕೊಳ್ಳಬೇಕೆಂಬ..

ಎಲ್ಲವೂ ದೇವರ ಇಚ್ಛೆಯಂತೆ ಆಗುತ್ತದೆ
Published On :

ಮನೆಯ ಯಜಮಾನ ಮತ್ತು ಕಾವಲುಗಾರನ ಮುಂದೆ 'ಎ' ಗ್ರೇಡ್ ಉಳಿಸಿಕೊಳ್ಳಬೇಕೆಂಬ ಆಸೆಯಿಂದ ತನ್ನ ಸಂಕಟವನ್ನು ಕತ್ತೆ ಹೇಳಿಕೊಳ್ಳಲೇ ಇಲ್ಲ. ಈಗ ಏನಾಗಿದೆಯೆಂದರೆ ಅತಿಯಾದ ದುಡಿಮೆಯ ಕಾರಣದಿಂದ ತುಂಬ ಚಿಕ್ಕ ವಯಸ್ಸಿಗೇ ಕತ್ತೆ ಬಳಲಿ ಬೆಂಡಾಗಿ ಹೋಗಿದೆ.

ಅದು, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನ ಮನೆ. ಅಲ್ಲಿ ಮಾಲೀಕನಷ್ಟೇ ಅಲ್ಲದೆ ವಾಚ್‌ಮನ್ ಕೂಡ ಇದ್ದ. ಜೊತೆಗೆ, ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು.
ವಾಚ್‌ಮನ್ ಸ್ವಲ್ಪ ಉಡಾಫೆ ಸ್ವಭಾವದವನು. ಯಾವುದನ್ನೂ ಆತ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ಏನಾದರೂ ಯಡವಟ್ಟು ಆಗಬೇಕಾದಾಗ ಆಗಿಯೇ ತೀರುತ್ತದೆ. ಯಾವುದೂ ನಮ್ಮ ಕೈಯ್ಯಲ್ಲಿಲ್ಲ ಎಂದೇ ಆತ ವಾದಿಸುತ್ತಿದ್ದ. ಕಾವಲುಗಾರನ ಕಥೆ ಹೀಗಾದರೆ ನಾಯಿಯ ವಾದವೇ ಬೇರೊಂದಿತ್ತು. ಯಜಮಾನ ತನ್ನ ವಿಷಯವಾಗಿ ವಿಶೇಷ ಕಾಳಜಿ ತೋರುತ್ತಿಲ್ಲ. ಹಾಗಾಗಿ ಸಮಯ ಬಂದಾಗ ಆತನಿಗೆ ಪಾಠ ಕಲಿಸಬೇಕು ಎಂದು ಅದು ಆಗಿಂದ್ದಾಗ್ಗೆ ಗುರುಗುಡುತ್ತಲೇ ಇತ್ತು. ಈ ಇಬ್ಬರ ಮಧ್ಯೆ ಒಡೆಯನ ಹಿತಚಿಂತನೆಯನ್ನಷ್ಟೇ ಬಯಸುತ್ತಿದ್ದ ಕತ್ತೆಯ ಮಾತುಗಳು ಯಾರನ್ನೂ ತಲುಪಲೇ ಇಲ್ಲ.
ಹೀಗಿರುವಾಗ, ಅದೊಮ್ಮೆ ಏನಾಯಿತೆಂದರೆ-ಮನೆಯನ್ನು ದೋಚುವ ಉದ್ದೇಶದಿಂದ ಕಳ್ಳನೊಬ್ಬ ನುಗ್ಗಿ ಬಂದ. ಈ ಸಂದರ್ಭದಲ್ಲಿ ಕಾವಲುಗಾರ, ಮೈಮರೆತು ನಿದ್ರಿಸುತ್ತಿದ್ದ. ಯಜಮಾನನ ಮೇಲೆ ಅಸಮಾಧಾನವಿತ್ತಲ್ಲ: ಅದೇ ಕಾರಣದಿಂದ ನಾಯಿ, ಕಳ್ಳನನ್ನು ಕಂಡರೂ, ಅವನ ಉದ್ದೇಶ ಏನೆಂದು ಅರ್ಥವಾದರೂ ಅದು ಕಮಕ್ ಕಿಮಕ್ ಎನ್ನದೆ ಸೈಲೆಂಟಾಗಿ ಉಳಿದುಬಿಟ್ಟಿತು. ಪಕ್ಕದಲ್ಲಿಯೇ ಇದ್ದ ಕತ್ತೆ, 'ಗೆಳೆಯಾ, ನೀನು ಹೀಗೆ ಸೈಲೆಂಟಾಗಿ ನಿಂತು ಬಿಟ್ಟರೆ ನಮ್ಮ ಒಡೆಯನ ಮನೆ ಲೂಟಿಯಾಗಿ ಬಿಡುತ್ತದೆ. ಹಾಗಾಗುವುದು ಬೇಡ. ದಯವಿಟ್ಟು ಒಮ್ಮೆ ಬೊಗಳಿ, ಯಜಮಾನನನ್ನು ಎಚ್ಚರಿಸು. ಒಂದು ವೇಳೆ ನೀನು ಹಾಗೆ ಮಾಡದಿದ್ದರೆ, ಯಜಮಾನನನ್ನು ಎಚ್ಚರಿಸುವ ಕೆಲಸವನ್ನು ನಾನೇ ಮಾಡುತ್ತೇನೆ' ಎಂದಿತು.
ಕತ್ತೆಯ ಮಾತುಗಳಿಗೆ ನಾಯಿ ಕೇರ್ ಮಾಡಲಿಲ್ಲ. ಅದು ದಿವ್ಯ ಉದಾಸೀನದಿಂದ 'ನೀನು ಏನು ಮಾಡ್ಕೋತೀಯೋ ಮಾಡಿಕೋ. ಈಗ ನಾನಂತೂ ಬೊಗಳುವುದಿಲ್ಲ. ಈ ಮನೆಯೆಲ್ಲಾ ಸೂರೆ ಹೋಗಲಿ. ಆಗಲಾದರೂ ಈ ಯಜಮಾನನಿಗೆ ನಮ್ಮ ಮಹತ್ವ ಗೊತ್ತಾಗಲಿ' ಎಂದು ಪಿಸುಗುಟ್ಟಿ ಮತ್ತೆ ಸೈಲೆಂಟಾಯಿತು. ಈ ವೇಳೆಗೆ ಕಳ್ಳ ಉಪ್ಪರಿಗೆಯ ಮೇಲೆ ಹತ್ತಿ ನಿಂತಿದ್ದ. ಇನ್ನು ತಡ ಮಾಡಿದರೆ ಏನಾದರೂ ಅನಾಹುತವಾಗಬಹುದು ಎಂದು ಊಹಿಸಿದ ಕತ್ತೆ, ಜೋರು ದನಿಯಲ್ಲಿ ಕಿರುಚಿ ಬಿಟ್ಟಿತು. ಈ ದಿಢೀರ್ ಸದ್ದಿನಿಂದ ಕಂಗಾಲಾದ ಕಳ್ಳ, ಕಾಂಪೌಂಡಿನ ಆಚೆಗೆ ಜಿಗಿದು ಪರಾರಿಯಾಗಿಬಿಟ್ಟ.
ವಿಕಾರದನಿಯ ಗಾರ್ದಭ ಗಾನದಿಂದ ಮನೆ ಮಾಲೀಕನ ನಿದ್ರಾಭಂಗವಾಯಿತು. ನಡುರಾತ್ರಿಯಲ್ಲಿ ವಿಕಾರವಾಗಿ ಕೂಗಿದ ಕತ್ತೆಯ ಮೇಲೆ ವಿಪರೀತ ಸಿಟ್ಟು ಬಂತು. ಆತ ಬಡಿಗೆಯೊಂದಿಗೆ ಬಂದು, ಕತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ. ನಂತರ, ಸುಮ್ ಸುಮ್ನೇ ಕಿರುಚಾಡಿ ನಮ್ಮ ನಿದ್ರೆ ಹಾಳು ಮಾಡ್ತೀಯ ಎಂದೆಲ್ಲಾ ಬೈದು, ಮತ್ತೆ ಎರಡೇಟು ಹಾಕಿದ.
ಇಂತಿಂಥವರು ಇಂತಿಂಥ ಕೆಲಸವನ್ನೇ ಮಾಡಬೇಕು ಎಂದು ಕೆಲವೊಮ್ಮೆ 'ಫಿಕ್ಸ್‌' ಆಗಿಬಿಟ್ಟಿರುತ್ತೆ. ಅದನ್ನು ಬಿಟ್ಟು ಬೇರೆ ಕೆಲಸಕ್ಕೆ ನಾವು ಕೈ ಹಾಕಬಾರದು ಎಂಬ ಮಾತಿಗೆ ಉದಾಹರಣೆ ಕೊಡುತ್ತಾ, ತುಂಬ ಹಿಂದೆ ಹೇಳುತ್ತಿದ್ದ ಕಥೆ ಇದು.
ಈಗ ಕಾಲ ಬದಲಾಗಿದೆ. ಹಾಗೆಯೇ ಈ ಕತೆಯೂ ಹೊಸದೊಂದು ಲುಕ್ ಪಡೆದುಕೊಂಡಿದೆ. ಬದಲಾದ ಕಾಲಘಟ್ಟದಲ್ಲೂ ಅದೇ ಕತೆ. ಅದೇ ಪಾತ್ರಧಾರಿಗಳು. ಆದರೆ ಕತೆ ಮುಂದುವರಿಯುವ ವಿಧಾನ ಮಾತ್ರ ಬೇರೆ. ಅದು ಹೀಗೆ:
ಆ ಶ್ರೀಮಂತನ ಮನೆಗೆ ವಾಚ್‌ಮನ್ ಆಗಿ ಬಂದಿದ್ದವನು ಕಾರ್ಪೋರೇಟ್ ಕಲ್ಚರ್‌ನ ಪರಿಚಯವಿದ್ದ ಆಸಾಮಿ. ಮನೆಯ ಸುತ್ತ ಸಿಸಿ ಟಿವಿಗಳನ್ನು ಅಳವಡಿಸಿ ಬಿಟ್ಟರೆ ಟೆನ್ಶನ್ ಇಲ್ಲದೆ ಕೆಲಸ ಮಾಡಲು ಸಹಾಯವಾಗುತ್ತದೆ ಎಂದೇ ಆತ ಯೋಚಿಸುತ್ತಿದ್ದ. ಹೀಗಿರುವಾಗಲೇ, ಅದೊಂದು ಮಧ್ಯರಾತ್ರಿಯಲ್ಲಿ ನಾಲ್ಕಾರು ನಿಮಿಷಗಳ ಕಾಲ ಕತ್ತೆಯು ಏಕಪ್ರಕಾರವಾಗಿ ಕೂಗಿದ್ದನ್ನು ಕೇಳಿ ಅವನಿಗೆ ಆಶ್ಚರ್ಯವಾಯಿತು. ವಿಶೇಷ ಕಾರಣವಿಲ್ಲದೆ ಕತ್ತೆಯೊಂದು ಹೀಗೆ ಕಿರುಚಲಾರದು ಅನ್ನಿಸಿತು. ತಕ್ಷಣ ಎದ್ದವನೇ, ಕುತೂಹಲದಿಂದಲೇ, ಬ್ಯಾಟರಿ ಹಿಡಿದುಕೊಂಡು ಮನೆಯ ಸುತ್ತ ಒಂದು ರೌಂಡ್ ಬಂದ. ಆಗಲೇ ಅವನಿಗೆ ಅವಸರದಲ್ಲಿ ಓಡಿ ಹೋಗಿದ್ದ ವ್ಯಕ್ತಿಯೊಬ್ಬನ ಹೆಜ್ಜೆ ಗುರುತುಗಳು ಕಾಣಿಸಿದವು.
ಅದನ್ನು ನೋಡುತ್ತಿದ್ದಂತೆಯೇ, ಮನೆಗೆ ಬಂದಿದ್ದವನು ಕಳ್ಳ. ಅವನ ಉದ್ದೇಶ ಸಂಪತ್ತು ಲೂಟಿಯೆಂದು ಅರ್ಥವಾಗುತ್ತಿದ್ದಂತೆಯೇ, ಕತ್ತೆ ಜೋರಾಗಿ ಅರಚಿ ಎಲ್ಲರನ್ನೂ ಎಚ್ಚರಿಸಿದೆ. ಆ ಮೂಲಕ ಮನೆಯ ಸಂಪತ್ತು ಕಳ್ಳನ ಪಾಲಾಗದಂತೆ ನೋಡಿಕೊಂಡಿದೆ. ಅಷ್ಟೇ ಅಲ್ಲ, ತನ್ನ ನೌಕರಿಯನ್ನೂ ಉಳಿಸಿದೆ ಎಂಬುದು ವಾಚ್‌ಮನ್‌ಗೆ ಅರ್ಥವಾಗಿ ಹೋಯಿತು. ಕತ್ತೆಯ ಸಮಯ ಪ್ರಜ್ಞೆ ಕಂಡು ಅವನಿಗೆ ವಿಪರೀತ ಖುಷಿಯಾಯಿತು. ಅಂದಿನಿಂದಲೇ ಆತ ಕತ್ತೆಯ ಮೇಲೆ ವಿಪರೀತ ಆಸಕ್ತಿ ಬೆಳೆಸಿಕೊಂಡ. ಮಾರ್ಕೆಟ್‌ಗೆ ಹೋದಾಗ ಬಗೆಬಗೆಯ ತಿನಿಸುಗಳನ್ನು ತಂದು ಕತ್ತೆಗೆ ತಿನ್ನಿಸುತ್ತಿದ್ದ. ರಾತ್ರಿಯಾಗುತ್ತಿದ್ದಂತೆಯೇ ಕತ್ತೆಯ ಬಳಿ ಬಂದು, ಅದರ ಕೊರಳು ಸವರಿ, ಕಳ್ಳರು ಬರಬಹುದು. ಎಚ್ಚರಿಕೆಯಿಂದ ಕಾವಲು ಕಾಯಬೇಕು ಎಂದು ಹೇಳಿ, ತಾನು ಆರಾಮಾಗಿ ನಿದ್ರೆಗೆ ಜಾರುತ್ತಿದ್ದ! ಕಾವಲುಗಾರ, ವಾರಕ್ಕೆ ಮೂರು ಬಾರಿಯಾದರೂ ಬಗೆಬಗೆಯ ತಿನಿಸುಗಳನ್ನು ಕೊಡುತ್ತಿದ್ದನಲ್ಲ; ಆ ಋಣಭಾರಕ್ಕಾಗಿ ಇಡೀ ರಾತ್ರಿ ಎಚ್ಚರವಿದ್ದು ಕಾವಲು ಕಾಯಲೇಬೇಕಾದ ಅನಿವಾರ್ಯತೆ ಕತ್ತೆಯ ಪಾಲಿಗೆ ಬಂತು. ದಿನಗಳು ಕಳೆದಂತೆಲ್ಲಾ ಕಾವಲುಗಾರ ಮತ್ತು ಕತ್ತೆಯ ಗೆಳೆತನ ಗಾಢವಾಯಿತು.
 ಈ ಮನೆಯಲ್ಲಿಯೇ ನಾಯಿ ಇತ್ತಲ್ಲ: ಅದರ ಬದುಕಿನಲ್ಲಿ ಅಂಥ ಯಾವ ಬದಲಾವಣೆಯೂ ಆಗಲಿಲ್ಲ. ಅದರ ವಿಷಯದಲ್ಲಿ ಮನೆಯ ಯಜಮಾನನೂ ವಿಶೇಷ ಮುತುವರ್ಜಿ ತೋರಲಿಲ್ಲ. ಅದು ಯಜಮಾನ ಹಾಕಿದ್ದಷ್ಟನ್ನೇ ತಿಂದುಕೊಂಡು ಯಾವುದೇ ಉಸಾಬರಿಗೂ ಹೋಗದೆ ತನ್ನ ಪಾಡಿಗೆ ತಾನು ನಿರುಮ್ಮಳವಾಗಿತ್ತು. ಈ ಸಂದರ್ಭದಲ್ಲಿಯೇ, ಕಾರ್ಪೋರೇಟ್ ಸಂಸ್ಕೃತಿಯ ಹಿನ್ನೆಲೆ ಹೊಂದಿದ್ದ ಕಾವಲುಗಾರ-ಶ್ರಮದ ದುಡಿಮೆ ಮತ್ತು ನಿಷ್ಠೆಯ ವಿಷಯಲ್ಲಿ ಕತ್ತೆಗೆ 'ಎ' ಗ್ರೇಡ್ ಹಾಗೂ ನಾಯಿಗೆ 'ಬಿ' ಗ್ರೇಡ್ ನೀಡಿ ಈ ಸಂಬಂಧವಾಗಿ ಪುಟ್ಟ ವರದಿ ತಯಾರಿಸಿ ಅದನ್ನು ಮನೆಯ ಯಜಮಾನನಿಗೆ ತಲುಪಿಸಿಬಿಟ್ಟ.
ತನಗೆ 'ಬಿ' ಗ್ರೇಡ್ ನೀಡಲಾಗಿದೆ ಎಂದು ತಿಳಿದ ಮೇಲಂತೂ ಕೆಲಸದ ವಿಷಯದಲ್ಲಿ ನಾಯಿ ಸಂಪೂರ್ಣ ನಿರಾಸಕ್ತಿ ತೋರಿಸಿತು. ಹೇಳಿ ಕೇಳಿ ಕಾರ್ಪೋರೇಟ್ ಸಂಸ್ಕೃತಿಯ ಹಿನ್ನೆಲೆಯವನಲ್ಲವೆ? ಆ ಕಾವಲುಗಾರ ಕತ್ತೆಗೆ ದಿನವೂ ಅದರ ಗ್ರೇಡ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಆದೇಶಿಸುತ್ತಲೇ ಇದ್ದ. ಆಮೇಲೆ ಏನಾಯಿತೆಂದರೆ, ಅತಿಯಾದ ನಿರೀಕ್ಷೆ ಮತ್ತು ವಿಪರೀತ ದುಡಿಮೆಯ ಕಾರಣದಿಂದ ಆ ಕತ್ತೆ ಕೃಶವಾಗಿ ಹೋಗಿದೆ. ಒಂದೆರಡು ಕಾಯಿಲೆಗಳು ಕತ್ತೆಯನ್ನು ಅಮರಿಕೊಂಡಿವೆ. ಆದರೆ ಮನೆಯ ಯಜಮಾನ ಮತ್ತು ಕಾವಲುಗಾರನ ಮುಂದೆ 'ಎ' ಗ್ರೇಡ್ ಉಳಿಸಿಕೊಳ್ಳಬೇಕೆಂಬ ಆಸೆಯಿಂದ ತನ್ನ ಸಂಕಟವನ್ನು ಕತ್ತೆ ಹೇಳಿಕೊಳ್ಳಲೇ ಇಲ್ಲ.
ಈಗ ಏನಾಗಿದೆಯೆಂದರೆ ಅತಿಯಾದ ದುಡಿಮೆಯ ಕಾರಣದಿಂದ ತುಂಬ ಚಿಕ್ಕ ವಯಸ್ಸಿಗೇ ಕತ್ತೆ ಬಳಲಿ ಬೆಂಡಾಗಿ ಹೋಗಿದೆ. ತನ್ನ ಜವಾಬ್ದಾರಿ ಹೊರಲು ಬೇರೆ ಯಾರಾದರೂ ಬಂದರೆ ಸಾಕು ಎಂಬ ಆಸೆಗಣ್ಣಿಂದ ದಿನಗಳನ್ನು ದೂಡುತ್ತಿದೆ!
ನೀತಿ: ಯಾವತ್ತೂ ಅಷ್ಟೇ. ನಮ್ಮ ಪಾಲಿನ ಕೆಲಸ ಎಷ್ಟಿರುತ್ತದೋ ಅಷ್ಟನ್ನು ಮಾತ್ರ ಮಾಡಬೇಕು. ಕೆಲಸ ಗೊತ್ತಿದೆ ಎಂದು ಬೇರೆಯವರ ಕೆಲಸವನ್ನು ಮಾಡಲು ಯಾವತ್ತೂ ಮುಂದಾಗಬಾರದು! ಹಾಗೇನಾದರೂ ಮಾಡಿದರೆ, ಈ ಕತೆಯಲ್ಲಿ ಕತ್ತೆಗೆ ಒದಗಿದ ಸ್ಥಿತಿಯೇ, ತನ್ನದಲ್ಲದ ಕೆಲಸಕ್ಕೆ ಹೆಗಲು ಕೊಡುವ ಮಂದಿಗೂ ಬರುತ್ತದೆ!
ಜೋಕನ್ನು ಪೂರ್ತಿ ಓದಬೇಕು

ನೀವೇಕೆ ಪೋಲಿ ಜೋಕುಗಳನ್ನು ಬರೆಯುವುದಿಲ್ಲ. ಸದಾ 'ಸೀರಿಯಸ್‌' ಜೋಕನ್ನೇ ಪ್ರಸ್ತಾಪಿಸುತ್ತೀರಿ ಎಂದು ಕೆಲವು ಓದುಗರು ಆಗಾಗ ಕೇಳುವುದುಂಟು. 'ಲೈಫ್ ಅಂದ್ರೆ ಎಲ್ಲವೂ ಇರಬೇಕು. ಅಪರೂಪಕ್ಕೊಮ್ಮೆ ಅಂಥ ಜೋಕು ಹೇಳಿದರೆ ಪರವಾಗಿಲ್ಲ. ನಿಮ್ಮ ಇಮೇಜ್‌ಗೆ ಧಕ್ಕೆಯಾಗೊಲ್ಲ ಬಿಡಿ' ಎಂಬುದು ಅವರ ವಾದ. 'ಆಯ್ತು ಬಿಡಿ' ಎಂದು ಓದುಗ ಮಿತ್ರರಾದ ಭೃಗೇಂದ್ರ ಹೇಳಿದ ಜೋಕನ್ನು ಹೇಳುತ್ತಿದ್ದೇನೆ. ಹಾಗೆ ನೋಡಿದರೆ ಇದು ಪೋಲಿ ಜೋಕಲ್ಲ. ಹಾಗೆ ಭಾವಿಸುವ ಅಪಾಯವಿದೆ. ಈ ಸನ್ನಿವೇಶದಲ್ಲಿ ಹಾಗೆ ಭಾವಿಸಿದರೆ ಮಾಫಿ.
ಕನ್ನಡದ ಗೌಡರ ಹುಡುಗಿ ಸ್ಪಾನಿಶ್ ಹುಡುಗನನ್ನು ಮದುವೆಯಾಗಿ ಸ್ಪೇನ್‌ಗೆ ಹೋದಳು. ಅವಳಿಗೆ ಸ್ಪಾನಿಷ್ ಭಾಷೆ ಗೊತ್ತಿಲ್ಲ. ಪ್ರತಿಸಲ ಚಿಕನ್ ಲೆಗ್ ಖರೀದಿಸಲೆಂದು ಹೋದಾಗ ತನ್ನ ಸೀರೆ ಎತ್ತಿ ತೊಡೆ ತೋರಿಸುತ್ತಿದ್ದಳು. ಮಾಂಸದ ಅಂಗಡಿಯವ ಚಿಕನ್ ಲೆಗ್‌ಪೀಸ್ ಕೊಡುತ್ತಿದ್ದ. ಇದು ಮೂರ್ನಾಲ್ಕು ತಿಂಗಳುಗಳವರೆಗೆ ನಡೆಯಿತು.
ಒಂದು ದಿನ ಅವಳಿಗೆ ಬಾಳೆಹಣ್ಣನ್ನು ತಿನ್ನಬೇಕೆಂದು ಅನ್ನಿಸಿತು. ತನ್ನ ಗಂಡನನ್ನು ಕರೆದುಕೊಂಡು ಅಂಗಡಿಗೆ ಹೋದಳು.
(ದಯವಿಟ್ಟು ನಗಬೇಡಿ. ಪೂರ್ತಿ ಓದಿ)
ಗಂಡನನ್ನು ಕರೆದುಕೊಂಡು ಹೋಗಿದ್ದು ಯಾಕೆ ಗೊತ್ತಾ?
ಯಾಕೆಂದರೆ ಗಂಡನಿಗೆ ಸ್ಪಾನಿಷ್ ಭಾಷೆ ಬರುತ್ತಿತ್ತು. ಬಾಳೆಹಣ್ಣು ಕೊಡುವಂತೆ ಆತನೇ ಅಂಗಡಿಯವನಿಗೆ ಹೇಳಲಿ ಎಂದು ಅವನನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದಳು.
ದೀರ್ಘ ಹೆಸರು

ಕೆಲ ವಾರಗಳ ಹಿಂದೆ ವ್ಯಕ್ತಿಗಳ ದೀರ್ಘ ಹೆಸರಿನ ಬಗ್ಗೆ ಪ್ರಸ್ತಾಪಿಸಿದ್ದೆ. ನಮ್ಮ ಮಣಿಕಾಂತ ಪುಟ್ಟ ಮಾಹಿತಿ ಕೊಟ್ಟಿದ್ದಾರೆ. ಈಗ ನಿವೃತ್ತಿ ಘೋಷಿಸಿರುವ ಶ್ರೀಲಂಕಾ ಆಟಗಾರ ಚಮಿಂದಾ ವಾಸ್ ಅವರ ಪೂರ್ತಿ ಹೆಸರು Warnakulasuriya PatabendigeUshantha Joseph Chaminda Vaas. ಈ ಹೆಸರಿನಲ್ಲಿ ಒಟ್ಟು 52 ಅಕ್ಷರಗಳಿವೆ. ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳ ಎರಡುಪಟ್ಟು!

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.