ಅಂಕಣಗಳು

Hmmm... ಪಾಂಚ್, ವಿಶ್ವನಾಥನ್ ಆನಂದ್

ಎಷ್ಟ್ ವರ್ಷದಿಂದ ಚೆಸ್ ಆಡ್ತಾ ಇದೀರಾ. ತೆಂಡೂಲ್ಕರ್‌ನಂಥವ್ರೇ ರಿಟೈರ್ ಆದ್ರು, ನಿಮ್ಗೆ ಇನ್ನೂ ಸಾಕಾಗಿಲ್ವ?..

-ಎಷ್ಟ್ ವರ್ಷದಿಂದ ಚೆಸ್ ಆಡ್ತಾ ಇದೀರಾ. ತೆಂಡೂಲ್ಕರ್‌ನಂಥವ್ರೇ ರಿಟೈರ್ ಆದ್ರು, ನಿಮ್ಗೆ ಇನ್ನೂ ಸಾಕಾಗಿಲ್ವ?
ರೀ, ನಮ್‌ದು ಕುತ್ಕಂಡ್ ಆಡೋ ಆಟ, ಕ್ರಿಕೆಟ್ ಥರ ಓಡಾಡ್ಕೊಂಡ್ ಆಡೋ ಆಟ ಅಲ್ಲ. ಎಷ್ಟು ವರ್ಷ
ಬೇಕಾದ್ರೂ ಆಡ್‌ಬಹುದು. ಆದ್ರೆ ಈ ಸಲ ಸೋತಿದ್ದು ಬೇಜಾರಾಯ್ತು.

-ಹೋಗ್ಲಿ ಬಿಡಿ, ಎಷ್ಟ್ ಸಲ ಅಂತ ನೀವೇ 'ವಿಶ್ವ'ನಾಥನ್ ಆಗ್ತೀರಾ.. ಅದ್ಸರಿ, ಆರು ಸಲ ಚೆಸ್ ಆಸ್ಕರ್ ಅವಾರ್ಡ್ ತಗೊಂಡಿದೀರಾ, ಆದ್ರೆ ಡಾಕ್ಟರೇಟ್ ಕೊಟ್ರೆ ಯಾಕೋ ಬ್ಯಾಡ ಅಂದ್ರಂತೆ?
ಅಯ್ಯೋ ನಮ್ ಆಟಕ್ಕೆ ಜನಪ್ರಿಯತೆನೇ ಇಲ್ಲ ಅಂದಾಗ ಡಾಕ್ಟರೇಟ್ ತಗೊಂಡ್ ಏನ್ ಮಾಡ್ಲಿ. ಕ್ರಿಕೆಟ್ ಆದ್ರೆ ಜೊತೆಗೆ ಹತ್ತು ಜನ ಆಡ್ತಾರೆ, ರಿಟೈರ್ ಆದ ದಿನ ಕೊನೆ ಮ್ಯಾಚಲ್ಲಿ ಭರ್ಜರಿ ಮರ್ಯಾದೆ ಕೊಡ್ತಾರೆ. ಇಲ್ಲಿ ನಾವು ಒಬ್ರೇ ಕೂತ್ಕಂಡ್ ಆಡ್ತೀವಿ, ರಿಟೈರ್ ಆದಾಗ ಹೆಗಲ್ ಮೇಲೆ ಎತ್ಕೊಂಡ್ ಬೀಳ್ಕೊಡೋಕೆ ಯಾರೂ ಇರಲ್ಲ.

-ನಿಮ್‌ದು ಒಂಥರಾ ಲೋ ಬಜೆಟ್ ಆಟ ಅಲ್ವಾ. 50 ರುಪಾಯಿಗೆ ಒಂದ್ ಚೆಸ್‌ಬೋರ್ಡ್ ತಗೊಂಡ್ ಪ್ರಾಕ್ಟೀಸ್ ಮಾಡಿದ್ರೂ ಸಾಕು..ಕ್ರಿಕೆಟ್ ಥರಾ ಬ್ಯಾಟು, ಬಾಲು, ಪ್ಯಾಡು, ಫೀಲ್ಡು ಅಂತೆಲ್ಲಾ ಏನೂ ಬೇಡ..
ಹೌದೌದು. ಹಿಂಗಂದೂ ಅಂದೂ ನಮ್ ಆಟ ನೋಡೋಕೆ '64' ಜನನೂ ಬರದಂಗೆ ಮಾಡಿದೀರಾ. ಕ್ರಿಕೆಟ್ ಥರಾ ಇದು ಗುಂಪು ಗುಂಪಾಗಿ ಆಡೋ ಆಟ ಅಲ್ಲ, ಆನೆ, ಕುದುರೆ ಎಲ್ಲಾ ಇದ್ರೂ ಒಬ್ಬನೇ ಆಡ್‌ಬೇಕು ಗೊತ್ತಾ..

-ಸರಿ ಸರಿ, ನಿಮ್ ಪ್ರಕಾರ ಈ ಕ್ರಿಕೆಟ್‌ಗೂ ಚೆಸ್‌ಗೂ ಏನ್ ವ್ಯತ್ಯಾಸ?
ಕ್ರಿಕೆಟ್‌ನಲ್ಲಿ ಟ್ವೆಂಟಿ ಟ್ವೆಂಟಿ, ಒಂಡೇ, ಟೆಸ್ಟ್ ಅಂತೆಲ್ಲ ಇರುತ್ತೆ, ಚೆಸ್‌ನಲ್ಲಿ ನಮ್ಮಿಷ್ಟ, ಆಟನ ಒಂಡೇ, ಟೆಸ್ಟ್  ಲೆವೆಲ್‌ವರೆಗೂ ಎಳೆಯೋದು ನಮ್ ಕೈಲೇ ಇರುತ್ತೆ.

-ಹಂಗಿದ್ರೆ, ಚೆಸ್ ಆಡೋರನ್ನ '64' ವಿದ್ಯೆಯಲ್ಲಿ ಪಾರಂಗತರಾಗಿರುವವರು ಅನ್ನಬಹುದಾ?
ಅನ್‌ಬೋದು ಬಿಡಿ, ಅವ್ರೂ ಗೆಲ್ಲಲ್ಲ ನಾವೂ ಗೆಲ್ಲಲ್ಲ, ಅನ್ನೋ ಪರಿಸ್ಥಿತಿ ಬಂದು ಅಂಪೈರ್‌ಗೂ ಸಾಕಾಗಿ, 'ಏಳ್ರಿ ಮೇಲೆ' ಅಂತ 'ಆಡಿಸುವಾತ ಬೇಸರ ಮೂಡಿ ಆಟ ಮುಗಿಸಿದ' ಅನ್ನೋವರೆಗೂ ಆಡಬೇಕು ಅಂದ್ರೆ 64 ವಿದ್ಯೆ ಬರ್ಲೇಬೇಕು.

ಒಮ್ಮೆ ಭೇಟಿ ಕೊಡಿ
ತಲೆನೋವು ಬಂದಾಗ, ಮೂಡ್ ಔಟ್ ಆದಾಗ ಕಾಮನ್ ಆಗಿ ಕೇಳುವ ಪ್ರಶ್ನೆ ಕಾಫಿಗೋಗೋಣ್ವಾ? ಎಂಬುದು. ಕಾಫಿ ಕುಡಿಯುವುದರಿಂದ ಒಂದಷ್ಟು ತಲೆನೋವು ಕಡಿಮೆಯಾದರೂ, ಅತಿಯಾದ ಕಾಫಿ ಸೇವನೆಯಿಂದ ನೆಗೆಟಿವ್ ಪರಿಣಾಮಗಳೂ ಆಗುತ್ತವಂತೆ. ಇಲ್ಲಿ ಕಾಫಿ ಕುಡಿತದ ಲಾಭ, ನಷ್ಟ ಎರಡರ ಬಗೆಯೂ ಒಂದಿಷ್ಟು ವಿವರಗಳಿವೆ.
n bit.ly/I7iDxb n bit.ly/1bJwzoJ
n bit.ly/1aGfQWw n yhoo.it/c0qStS
n bit.ly/Q9iwR8

ಹರಿ-ಕಥೆ
ಬ್ಯೂಟಿಪಾರ್ಲರ್, ಚಾಕ್ಲೆಟ್, ಶಾಪಿಂಗು ಅಂತ ಅದೆಷ್ಟ್ ದುಡ್ ಖರ್ಚು ಮಾಡ್ತೀಯೇ ಅಂತ ಗಂಡ ಖೇಮು ಎಷ್ಟೇ ಬಯ್ದರೂ ಖೇಮುಶ್ರೀ ಗಂಡ ಆಫೀಸಿಗೆ ಹೋದ ತಕ್ಷಣ ಮತ್ತೆ ಶಾಪಿಂಗ್ ಹೊರಟಳು. ಶಾಪಿಂಗ್ ಮಾಲ್‌ನ ಮುಂದೆ ನೋಡಲು ವಿಕಾರವಾಗಿದ್ದ ಒಬ್ಬಳು ಭಿಕ್ಷುಕಿ ನಿಂತಿದ್ದಳು. ಟಿಪ್ ಟಾಪ್ ಆಗಿದ್ದ ಖೇಮುಶ್ರೀಯನ್ನು ನೋಡಿದ ಆಕೆ ಬಂದು ಯಥಾಪ್ರಕಾರ ಭಿಕ್ಷೆ ಬೇಡಿದಳು. ಅವಳನ್ನೊಮ್ಮೆ ಸೂಕ್ಷ್ಮವಾಗಿ ನೋಡಿದ ಖೇಮುಶ್ರೀ ಪರ್ಸ್‌ನಿಂದ 1000 ರುಪಾಯಿ ತೆಗೆದು 'ಈ ದುಡ್ಡನ್ನ ನಿಂಗೆ ಕೊಟ್ರೆ ನೀನು ಇದರಲ್ಲಿ ದುಬಾರಿ ಚಾಕ್ಲೆಟ್ ಕೊಂಡ್ಕೊತೀಯಾ?' ಅಂತ ಕೇಳಿದ್ಳು. ಭಿಕ್ಷುಕಿ ರೇಗಿದಳು 'ನಾನು ಭಿಕ್ಷುಕಿ ಅಷ್ಟೆ, ಆದ್ರೆ ಹುಚ್ಚಿ ಅಲ್ಲ ಗೊತ್ತಾ, ಅನ್ನ ತಿನ್ನೋಕೇ ಕಾಸಿಲ್ಲ, ಇನ್ನು ಚಾಕ್ಲೆಟ್ ತಿಂತೀನಾ?' ಅಂದ್ಳು. 'ಸರಿ, ಇಲ್ಲಾಂದ್ರೆ, ಈ ದುಡ್ಡಲ್ಲಿ ಶಾಪಿಂಗ್ ಮಾಡ್ತೀಯಾ ಇಲ್ಲಾ, ಬ್ಯೂಟಿಪಾರ್ಲರ್‌ಗೆ ಹೋಗ್ತೀಯಾ?' ಅಂತ ಕೇಳಿದ್ಳು ಖೇಮುಶ್ರೀ. 'ಅಯ್ಯೋ ಬದುಕಿದ್ರೆ ಸಾಕು ಅನ್ನಿಸುವಾಗ ಶಾಪಿಂಗು, ಬ್ಯೂಟಿಪಾರ್ಲರ್ ಬೇರೆ ಕೇಡು' ಅಂದ್ಳು  ಭಿಕ್ಷುಕಿ. ಅದಕ್ಕೆ ಖೇಮುಶ್ರೀ 'ಸರಿ ಹಾಗಾದ್ರೆ ಈ 1000 ರುಪಾಯಿ ನಿಂಗೆ ಕೊಡ್ತೀನಿ. ಆದ್ರೆ ನೀನು ಇವತ್ತು ರಾತ್ರಿ ನನ್ನ ಮತ್ತು ನನ್ನ ಗಂಡನ ಜೊತೆಗೆ ಹೊಟೇಲ್‌ನಲ್ಲಿ ಡಿನ್ನರ್‌ಗೆ ಬರಬೇಕು' ಅಂದ್ಳು. ಭಿಕ್ಷುಕಿಗೆ ಶಾಕ್ ಆಯ್ತು. 'ಯಾಕೆ?' ಅಂತ ಕೇಳಿದ್ದಕ್ಕೆ ಖೇಮುಶ್ರೀ ಹೇಳಿದ್ಳು 'ಏನಿಲ್ಲ, ಚಾಕೋಲೇಟ್ ತಿನ್ನದೇ ಇರೋ, ಬ್ಯೂಟಿ ಪಾರ್ಲರ್‌ಗೆ ಹೋಗದೇ ಇರೋ, ಶಾಪಿಂಗ್ ಮಾಡದೇ ಇರೋ ಹೆಂಗಸು ಹೇಗೆ ಕಾಣ್ತಾಳೆ ಅಂತ ನನ್ನ ಗಂಡಂಗೆ ಒಂದ್ ಸ್ವಲ್ಪ ತೋರಿಸಬೇಕಿತ್ತು'

ಸ್ಯಾಂಡಲ್‌ವುಡ್
ಕುಖ್ಯಾತರ ಬಗ್ಗೆ ಕಮರ್ಷಿಯಲ್ ಸಿನಿಮಾ ಮಾಡೋರು ತಮ್ಮದು ಸಾಮಾಜಿಕ ಸಂದೇಶ ಬೀರುವ ಚಿತ್ರ ಎಂದು ಹೇಳಿಕೊಳ್ಳೋದು ಕಾಮನ್. ಈಗ 'ಕಾಮ'ನ್ ಸೆನ್ಸ್ ಅನ್ನೇ ಬಂಡವಾಳವಾಗಿಟ್ಟುಕೊಂಡ ಉಮೇಶ್ ರೆಡ್ಡಿಯ ಕಥೆ ಎಂಬ ಒಕ್ಕಣಿಕೆಯೊಂದಿಗೇ ಶುರುವಾದ 'ಖತರ್‌ನಾಕ್‌' ಚಿತ್ರದ್ದೂ ಅದೇ ಕಥೆ. 'ಮಳವಳ್ಳಿ, ಮಳವಳ್ಳಿ ಮಂಚಕ್ಕೆಷ್ಟ್ ಕಾಲು' ಅಂದ್ರೆ ಮೂರು ಮತ್ತೊಂದು ಎನ್ನುವಂತೆ ನಿರ್ದೇಶಕ ಮಳವಳ್ಳಿ ಸಾಯಿಕೃಷ್ಣ ಕೂಡ ಉಮೇಶ್‌ನ ವಿಕೃತಿಗಳ ಸರಮಾಲೆ ತೋರಿಸಿ ಕೊನೆಗೆ 'ಹುಷಾರಾಗಿರಿ' ಎನ್ನುವಂಥ ಚಿತ್ರವನ್ನೇ ಮಾಡಿ, ತಮ್ಮ ಚಿತ್ರ 'ಸಮಾಜಕ್ಕೆ ಡಾಕ್ಟ್ರು' ಎಂದಿದ್ದಾರೆ. ಆದರೆ, ಉಮೇಶ್ ರೆಡ್ಡಿ ಬಗ್ಗೆ ಸಿನಿಮಾ ಮಾಡಿದ್ದರೂ ಸೆನ್ಸಾರ್ ಕಾರಣದಿಂದಾಗಿ 'ಉನ್‌ಕಾ ನಾಮ್ ಉಮೇಶಾ' ಎಂದಷ್ಟೇ ಹೇಳಿರುವ ಮಳವಳ್ಳಿ ಅಂಡ್ ಟೀಂ ಅವರ ಶ್ರಮ ಏನೇ ಇರಬಹುದು. ಆದರೆ ಇಂಥದೇ ಕಥೆ ಹೊಂದಿದ ದಂಡುಪಾಳ್ಯ ಚಿತ್ರದ ಕ್ವಾಲಿಟಿ ಖತರ್‌ನಾಕ್‌ನಲ್ಲಿಲ್ಲ ಎನ್ನುವುದು ಪ್ರೇಕ್ಷಕರ ಮಾತು. ಅದರ ಜೊತೆಗಿನ ಬೇಸರದ ಮಾತು ಎಂದರೆ ಬೇರೆ ನಿರ್ದೇಶಕರ ಚಿತ್ರಗಳಿಗೆ ಅದ್ಭುತ ಸಂಭಾಷಣೆ ಬರೆಯುವ ಸಾಯಿಕೃಷ್ಣ ತಮ್ಮ ನಿರ್ದೇಶನದ ಚಿತ್ರಕ್ಕೆ ಅದ್ಯಾಕೋ ಕೇವಲ ಭಾಷಣ ಬರೆದಿದ್ದಾರೆ ಎನಿಸುವುದರಿಂದ ಅವರ ಪ್ರತಿಭೆಯ ಬಗ್ಗೆ ನಂಬಿಕೆ ಇದ್ದವರಿಗೆ ಒಂದಿಷ್ಟು ನಿರಾಸೆ ಆಗಿದೆ. ಆದರೂ ಬಿಬಿಸಿ ನ್ಯೂಸ್‌ಗಿಂತ ಬೇಗನೆ 'ಪ್ರಸಾರ'ವಾಗುವ ಇಂಥ 'ಬಿಸಿಬಿಸಿ' ಚಿತ್ರಗಳು 'ಬಿ,ಸಿ' ಸೆಂಟರ್‌ನಲ್ಲಿ ಮೋಸ ಮಾಡುವುದಿಲ್ಲ ಎಂಬ ನಿರ್ಮಾಪಕರ ನಂಬಿಕೆಗೇನೂ ಮೋಸ ಆಗಲಿಕ್ಕಿಲ್ಲ ಬಿಡಿ.

ಡಬ್ಕುಡಬಲ್ ತುದಾಂಡಲ್...
-ಅನ್ನಭಾಗ್ಯಕ್ಕೊಂದು ಕಾಲ್ ಸೆಂಟರ್
ಹೊಟೇಲ್‌ಗಳ ಥರಾ ಫೋನ್ ಮಾಡಿದರೆ 'ಹೋಮ್ ಡೆಲಿವರಿ' ಮಾಡೋ ಸಿಸ್ಟಮ್ಮಾ?

-ಬೆಂಗಳೂರಿನ ಅಪರ್ಣ ಥಿಯೇಟರ್‌ನಲ್ಲಿ ಇತ್ತೀಚೆಗೆ ಯಾವ್ ಸಿನಿಮಾ ಹಾಕಿದ್ರೂ ಒಂದೇ ವಾರ ಅಂತೆ.
ಮೆಜೆಸ್ಟಿಕ್ ಏರಿಯಾದಲ್ಲಿರೋದ್ರಿಂದ 'ಏನ್ ತಗೊಂಡ್ರೂ ಇಪ್ಪತ್ತೇ ರುಪಾಯಿ' ಅನ್ನೋ ವ್ಯಾಪಾರಸ್ಥರ ಪ್ರಭಾವ ಅನ್ಸತ್ತೆ.

-ಏನ್ ಮಾಡ್ತಾ ಇದ್ದೀವಿ ಅನ್ನೋ ಕಲ್ಪನೆ ಇಲ್ಲದೆ ಸುಮ್ಮನೇ ಕಣ್ಣುಮುಚ್ಚಿಕೊಂಡು ತಮ್ಮ ನಾಯಕರನ್ನು ಹಿಂಬಾಲಿಸುವ ಶಿಷ್ಯಂದಿರ ಪಾಲಿಸಿ.
'ಆಗೇ' ಸುಮ್ಮನೆ

-ಮೂಢನಂಬಿಕೆಯ ನಿಷೇಧ ಮಾಡಿದ ಆದೇಶದ ಕರಡು ಪ್ರತಿ ಹೊರಡಿಸಿದರೆ ಅದು
'ಕುರುಡು' ಪ್ರತಿ

-ಬೆಂಗಳೂರು ತುಂಬಾ 'ಅಂಬಾ' ಎನ್ನುವ ಹಸು ಚಿತ್ರ ಇರುವ ಪೋಸ್ಟರ್ ಹಾಕಿ ಗೋಹತ್ಯೆ ನಿಷೇಧದ ಬಗ್ಗೆ ಹಾಲಿನಂತೆ, ಐ ಮೀನ್ ನೀರಿನಂತೆ ಹಣ ಖರ್ಚು ಮಾಡಿ ಹೋರಾಡುತ್ತಿರುವ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಅವರಿಗೊಂದು ಬಿರುದು.
'ಅಂಬಾ'ನಿ

-ಸುದ್ದಿ: ಎಟಿಎಂ ದಾಳಿ ಆರೋಪಿ ಸುಳಿವು ಕೊಟ್ರೆ 1 ಲಕ್ಷ ಬಹುಮಾನ
ಸುಳಿವು ಕೊಡುವವರ ಕಂಡೀಷನ್: ಬಹುಮಾನನಾ ಕ್ಯಾಶಲ್ಲೇ ಕೊಟ್‌ಬಿಡಿ, ಅಕೌಂಟಿಗ್ ಹಾಕ್‌ಬೇಡಿ. ಇಲ್ಲಾಂದ್ರೆ ದುಡ್ ತಗೊಳ್ಳೋಕೆ ಎಟಿಎಂಗೆ ಹೋಗ್‌ಬೇಕಾಗುತ್ತೆ.

-ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.