ಅಪರಾಧ ನಗರಿ ಬೆಂಗಳೂರನ್ನು ಅಪಾಯದಿಂದ ರಕ್ಷಿಸುವವರ್ಯಾರು?
ಅರೆಮಂಪರಿನ ನಗರಿಯಿಂದ ಅವ್ಯವಸ್ಥಿತವಾಗಿ ಬೆಳೆಯುತ್ತಿರುವ ಮಹಾನಗರವಾಗಿ, ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿಯಾಗಿ, ಐಟಿ ನಗರಿಯಿಂದ ತಗ್ಗು ಗುಂಡಿಗಳ ನಗರವಾಗಿ, ಭಾರತದಲ್ಲಿ ಮೊದಲ ಬಾರಿ ವಿದ್ಯುತ್ ಪಡೆದ ನಗರಿಯಿಂದ ನಿರಂತರವಾಗಿ ವಿದ್ಯುತ್ ಕೈ ಕೊಡುವ ನಗರವಾಗಿ, ಶಾಂತ ನಗರಿಯಿಂದ ಅಶಾಂತ ನಗರವಾಗಿ ಬೆಂಗಳೂರು ಬದಲಾಗಿದೆ. ಈ ಬದಲಾವಣೆಯಿಂದ ಬೆಂಗಳೂರಿನ ವರ್ಚಸ್ಸಿಗೆ ಭಾರೀ ಹೊಡೆತ ಬಿದ್ದಿದೆ.
ಈ ನಗರವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳದ ಅಧಿಕಾರ ವರ್ಗ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದೆ. ಪೌರಾಡಳಿತ ಸಂಸ್ಥೆಗಳು ಈ ಗಲಾಟೆಯಲ್ಲಿ ಏನು ಮಾಡಬೇಕೋ ಎಂದು ತೋಚದೆ ನಿಂತಲ್ಲೇ ಗಿರಕಿ ಹೊಡೆಯುತ್ತಿವೆ. ಅವುಗಳ ನಡುವೆ ಸಮನ್ವಯವೇ ಇಲ್ಲ. ನಿರ್ಲಜ್ಜ ಗುತ್ತಿಗೆದಾರರು ಮತ್ತು ಭ್ರಷ್ಟ ಇಂಜಿನಿಯರುಗಳ ಅಪವಿತ್ರ ಮೈತ್ರಿಯಿಂದಾಗಿ ಅವು ಸೊರಗಿಹೋಗುತ್ತಿವೆ. ಕಾರ್ಪೊರೇಟರ್‌ಗಳು ಮತ್ತು ಅಧಿಕಾರಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ನಗರದ ಮೇಯರ್‌ಗೆ ಅಧಿಕಾರವೇ ಇಲ್ಲ! ನಗರದ ಶಾಸಕರು ಸುಮ್ಮನೇ ಕುಳಿತು ಸಮಯ ವ್ಯರ್ಥ ಮಾಡುತ್ತಿದ್ದಾರೆ. ನಗರದ ಪೊಲೀಸ್ ವ್ಯವಸ್ಥೆಗೆ ಬಲವೇ ಇಲ್ಲದಾಗಿದೆ. ಅದು ಬಹುತೇಕ ಬಾರಿ ಅಸಹಾಯಕವಾಗಿ ಕಾಣಿಸುತ್ತದೆ. ನಿವಾಸಿ ಕಲ್ಯಾಣ ಸಂಘಗಳು, ಪರಿಣತರು ಸೂಚಿಸುವ ಪರಿಹಾರ ಮಾರ್ಗಗಳನ್ನೆಲ್ಲ ಸರ್ಕಾರ ಕಸದಬುಟ್ಟಿಗೆ ಎಸೆಯುತ್ತಿದೆ.
ಇತ್ತೀಚೆಗೆ ಅಸಹಾಯಕ ಮಹಿಳೆಯೊಬ್ಬರ ಮೇಲೆ ಎಟಿಎಂನಲ್ಲಾದ ದಾಳಿಯನ್ನೇ ನೋಡಿ. ಆ ಸಿಸಿಟಿವಿ ದೃಶ್ಯಗಳನ್ನು ನೋಡಿದರೆ ಬೆನ್ನಹುರಿಯಲ್ಲಿ ನಡುಕ ಹುಟ್ಟುತ್ತದೆ. ಬರೀ ಬೆಂಗಳೂರಷ್ಟೇ ಅಲ್ಲ, ಇಡೀ ದೇಶವೇ ಈ ಘೋರ ಘಟನೆಯನ್ನು ನೋಡಿ ಮರುಗಿತು. ಆ ಪಾತಕಿ ಎಟಿಎಂ ಪ್ರವೇಶಿಸಿ, ಶಟರ್ ಎಳೆದು, ಹಣ ನೀಡುವಂತೆ ಆ ಮಹಿಳೆಯನ್ನು ರಿವಾಲ್ವರ್ ಮತ್ತು ಮಚ್ಚು ತೋರಿಸಿ ಬೆದರಿಸಿದ. ಆಕೆ ಒಪ್ಪದಿದ್ದಾಗ ತಲೆಗೆ ಮತ್ತು ಮುಖಕ್ಕೆ ಮಚ್ಚಿನಿಂದ ಹೊಡೆದು ಆಕೆಯ ಪರ್ಸ್‌ನಲ್ಲಿದ್ದ ತುಸು ಹಣವನ್ನು ಮತ್ತು ಮೊಬೈಲನ್ನು ಎತ್ತಿಕೊಂಡು ಓಡಿಹೋದ. ಆ ಮಹಿಳೆ ಮೂಲೆಯಿಂದ ಮೆಲ್ಲಗೆ ತೆವಳುತ್ತಾ ಬಾಗಿಲವರೆಗೆ ಬರಲು ಪ್ರಯತ್ನಿಸಿ ಕೊನೆಗೆ ಎಚ್ಚರ ಕಳೆದುಕೊಂಡ ದೃಶ್ಯಗಳೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಶಾಲಾ ಮಕ್ಕಳಿಬ್ಬರು ಹರಿದುಬಂದ ರಕ್ತ ನೋಡಿ, ಪೊಲೀಸರಿಗೆ ಮತ್ತು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದರು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಆಕೆಯ ಮಿದುಳಿನಲ್ಲಿ ಸಿಲುಕಿದ್ದ ಮೂಳೆಯನ್ನು ಹೊರತೆಗೆದು ಸೂಕ್ತ ಚಿಕಿತ್ಸೆ ನೀಡಿದ್ದಾರಾದರೂ, ಆಕೆಯ ದೇಹದ ಒಂದು ಭಾಗ ಈಗ ನಿಷ್ಕ್ರಿಯಗೊಂಡಿದೆ.
ನಿನ್ನೆ ಆ ಮಹಿಳೆ, ನಾಳೆ ನಾನು ಅಥವಾ ನೀವೂ ಇಂಥ ದಾಳಿಗೆ ತುತ್ತಾಗಬಹುದು. ಇವತ್ತು ಬೆಂಗಳೂರು, ನಾಳೆ ದೆಹಲಿ ಅಥವಾ ಮುಂಬೈಯಲ್ಲೂ ಇಂಥ ಘಟನೆ ನಡೆಯಬಹುದು. ಇದರಿಂದ ನಮಗೆ ಹೆದರಿಕೆಯಾಗುವುದಿಲ್ಲವೇ? ನಾವು ಸುರಕ್ಷಿತವಾಗಿದ್ದೀವಾ? ನಮಗೆ ಭದ್ರತೆ ಎಲ್ಲಿದೆ? ಈ ಘಟನೆ ನಡೆದ ಎಟಿಎಂಗೆ ಸೆಕ್ಯುರಿಟಿಯಿರಲಿಲ್ಲ ಎನ್ನುವ ಕಾರಣಕ್ಕಾಗಿ, ಆದ ತಪ್ಪನ್ನು ಕ್ಷಮಿಸಿಬಿಡಬೇಕೇ? ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಎಟಿಯಂಗಳಲ್ಲಿ ನಿರಂತರವಾಗಿ ಕಳ್ಳತನಗಳು, ದರೋಡೆಗಳು ನಡೆಯುತ್ತಿವೆ. ಇಷ್ಟಾದರೂ ಬ್ಯಾಂಕ್‌ಗಳು ಎಚ್ಚೆತ್ತಿಲ್ಲ.
ಈ ನೋವಿಗೆ ಇನ್ನಷ್ಟು ಉಪ್ಪು ಹಚ್ಚುವಂತಿದೆ ಗೃಹ ಸಚಿವರು ನೀಡಿದ ಹೇಳಿಕೆ! ಬೆಂಗಳೂರಿನ ಪ್ರತಿ 4 ಎಟಿಂಗಳಲ್ಲಿ ಒಂದು ಎಟಿಎಂ ಕೇಂದ್ರಕ್ಕೆ ಭದ್ರತಾ ವ್ಯವಸ್ಥೆಯಿಲ್ಲ ಎಂದು ಅವರು ಹೇಳಿದ್ದಾರೆ. ಅಂದರೆ ಬೆಂಗಳೂರಿನ 2580 ಎಂಟಿಯಂಗಳಲ್ಲಿ 600 ಕೇಂದ್ರಗಳಿಗೆ ಸೆಕ್ಯುರಿಟಿ ಇಲ್ಲ ಎಂದಂತಾಯಿತು. 'ಗಾರ್ಡ್‌ಗಳನ್ನು ನೇಮಿಸಿ ಇಲ್ಲದಿದ್ದರೆ ಆ ಕೇಂದ್ರಗಳನ್ನು ಮುಚ್ಚಿಬಿಡಿ" ಎಂದು ಗೃಹ ಸಚಿವರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಇಷ್ಟು ದಿನ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು? ಜನತೆಗೆ ಭದ್ರತೆ ಒದಗಿಸುವುದು ಪೊಲೀಸರ ಪ್ರಮುಖ ಕರ್ತವ್ಯವಲ್ಲವೇ? ಬ್ಯಾಂಕ್‌ಗಳಿಗೆ ಅದೇಕೆ ಎಚ್ಚರಿಕೆ ಕೊಡಲಿಲ್ಲ? ಬೆಂಗಳೂರು ಈಗ ದಕ್ಷಿಣದ 'ಅಪರಾಧ ರಾಜಧಾನಿ'ಯಾಗಿ ಬದಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ನಿರ್ದೇಶನಾಲಯದ ಪ್ರಕಾರ, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ದೆಹಲಿಯ ನಂತರದ ಸ್ಥಾನ (ಕುಖ್ಯಾತಿ) ಬೆಂಗಳೂರಿಗೆ ಸಿಕ್ಕಿದೆ! ಒಂದು ನಗರ ವೇಗವಾಗಿ ಬೆಳೆಯಿತೆಂದರೆ, ಅಲ್ಲಿ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತದೆ. ಆದರೆ ಇದನ್ನು ನಿರಾಕರಿಸುವ ಬದಲು ಪೊಲೀಸರು ಸತ್ಯವನ್ನು ಒಪ್ಪಿಕೊಳ್ಳಬೇಕಿದೆ. ತಮ್ಮ ಪಡೆಯಲ್ಲಿ ಸುಧಾರಣೆ ತರುವ, ಆಧುನಿಕ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವ, ಎಲ್ಲಾ ಪೊಲೀಸರಿಗೂ ಸರಿಯಾದ ತರಬೇತಿ ನೀಡುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಸದ್ಯಕ್ಕೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದೆ. ಇರುವ ಅಲ್ಪ ಸಿಬ್ಬಂದಿಗೆ ಅತಿಯಾದ ಕೆಲಸ, ಅಲ್ಪ ಸಂಬಳ! ಇಷ್ಟು ಸಾಲದೆಂಬಂತೆ ಮೇಲಿಂದ ಮೇಲೆ ವರ್ಗಾವಣೆಯೆಂಬ ಕಿರಿಕಿರಿಯನ್ನು ಅವರು ಸಹಿಸಿಕೊಳ್ಳುತ್ತಿದ್ದಾರೆ. ಇದು ಮೊದಲು ನಿಲ್ಲಬೇಕು. ಬೆಂಗಳೂರು ಉತ್ತಮ ಪೊಲೀಸ್ ವ್ಯವಸ್ಥೆಗೆ ಸಾಕ್ಷಿಯಾಗಲು ಕಾಯುತ್ತಾ ಕುಳಿತಿದೆ.
ಕೊನೆಯ ಗುಟುಕು: ಪ್ರವೀಣ್ ಸೂದ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹೇಳುತ್ತಾರೆ, "ಒಂದು ಚರ್ಚ್ ಮೇಲೆ ದಾಳಿಯಾಯಿತು ಎಂದಿಟ್ಟುಕೊಳ್ಳಿ, ಆಗ ಸಹಜವಾಗಿ ಬರುವ ಪ್ರತಿಕ್ರಿಯೆಯೆಂದರೆ ಎಲ್ಲಾ ಚರ್ಚ್‌ಗಳಿಗೂ ಪೊಲೀಸ್ ಭದ್ರತೆ ಒದಗಿಸಬೇಕು ಎನ್ನುವುದು. ಇದೇ ರೀತಿ ಮಂದಿರದ ಮೇಲೆ ದಾಳಿಯಾಯಿತೆಂದರೆ ಎಲ್ಲಾ ಮಂದಿರಗಳಿಗೂ ಭದ್ರತೆ ಒದಗಿಸಿ ಎನ್ನುತ್ತಾರೆ. ನಂತರ ಆಸ್ಪತ್ರೆಯ ಮೇಲೆ ದಾಳಿಯಾಗುತ್ತದೆ, ಹೊಟೇಲ್‌ಗಳಲ್ಲಿ ಅಪರಾಧ ನಡೆಯುತ್ತದೆ. ಅಲ್ಲಿಯೂ ಪೊಲೀಸರನ್ನು ನಿಲ್ಲಿಸಬೇಕು ಎನ್ನುವ ಕೂಗು ಹೆಚ್ಚಾಗುತ್ತದೆ. ಆದರೆ ಅಷ್ಟೊಂದು ಪೊಲೀಸರು ಎಲ್ಲಿದ್ದಾರೆ? ಅಪರಾಧಗಳನ್ನು ತಡೆಗಟ್ಟಲು ಸರಿಯಾದ ಮಾರ್ಗವೊಂದಿದೆ- ಅಪರಾಧಿಗಳಿಗೆ ಶೀಘ್ರ ಹಾಗೂ ಕಠಿಣ ಶಿಕ್ಷೆಯನ್ನು ನೀಡುವುದು. ಪೊಲೀಸರು ಮತ್ತು ಗಾರ್ಡ್‌ಗಳ ನಡುವೆ ಬಹಳ ವ್ಯತ್ಯಾಸವಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇದು ಸೂಕ್ತ ಸಮಯ"
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

