ಸ್ಲಂಥಿಂಗ್ ಸ್ಪೆಷಲ್ ಎನಿಸುವ ತಿರುಚ್ಚಿ ಪ್ರದೇಶ
ತಿರುಚ್ಚಿಯಲ್ಲಿನ ಸ್ವಸಹಾಯ ಗುಂಪಿನ ಒಬ್ಬೊಬ್ಬ ಸದಸ್ಯೆಯೂ ಒಂದೊಂದು ಕ್ರಾಂತಿಗೆ ನಾಂದಿ..

ತಿರುಚ್ಚಿಯಲ್ಲಿನ ಸ್ವಸಹಾಯ ಗುಂಪಿನ ಒಬ್ಬೊಬ್ಬ ಸದಸ್ಯೆಯರೂ ಒಂದೊಂದು ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅದು ಸಾಮಾನ್ಯ ಕ್ರಾಂತಿಯಲ್ಲ. ಬಾಪೂಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸಿನ ಕ್ರಾಂತಿಯದು. ಅಲ್ಲಿನ ಶೌಚಾಲಯಗಳು ಹೈಟೆಕ್ ಟಾಯ್ಲೆಟ್‌ಗಳನ್ನೂ ನಾಚಿಸುವ ಪರಿಯಲ್ಲಿ ಥಳಥಳಿಸುತ್ತಿವೆ.
ಮೊನ್ನೆ ಮೊನ್ನೆ ಮುಗಿದದ್ದು ಪುರುಷರ ದಿನ. ನವೆಂಬರ್ 19ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೊಂದು ದಿನ ಆಚರಣೆಯಲ್ಲಿದೆ. ಅವತ್ತೇ ಶೌಚಾಲಯ ದಿನವೂ ಹೌದು. ಶೌಚದ ವಿಷಯಕ್ಕೆ ಬಂದರೆ ಹೆಚ್ಚು ಸಂತ್ರಸ್ತರು ಹೆಣ್ಣುಮಕ್ಕಳೇ. ಪುರುಷರನ್ನು ಇದು ಅಷ್ಟಾಗಿ ಬಾಧಿಸಿಲ್ಲ. ಏಕೆಂದರೆ ಭಾರತದ ಮಟ್ಟಿಗೆ ಸ್ವಚ್ಛತೆ ಇಂದಿಗೂ ಮೂಲಭೂತ ಹಕ್ಕೆಂದು ಪರಿಗಣನೆಯಾಗಿಲ್ಲ. ಸ್ವಚ್ಛತೆಯ, ಆರೋಗ್ಯದ ಪರಿಕಲ್ಪನೆಯಿಂದ ಇಂದಿಗೂ ನಾವು ದೂರವೇ. ಸ್ವಚ್ಛತೆಗಿಂತ ಸಂಕೋಚ, ಭದ್ರತೆ ಇತ್ಯಾದಿ ಹತ್ತು ಹಲವು ಸಮಸ್ಯೆಗಳು ನಮ್ಮ ಗ್ರಾಮೀಣರನ್ನು ಕಾಡುತ್ತಿವೆ. ಹೀಗಾಗಿ ಮಹಿಳೆಯೇ ಇದರ ಮೊದಲ ಸಂತ್ರಸ್ತೆ. ಈ ದೃಷ್ಟಿಯಿಂದ ನಾವು ಆಚರಿಸಲೇಬೇಕಿರುವ ದಿನ ಎಂದರೆ ಶೌಚಾಲಯ ದಿನ. ಸ್ವಚ್ಛ ಭಾರತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಆದರೆ, ಇಲ್ಲಿನ ಗ್ರಾಮಗಳ ಸ್ಥಿತಿ ಇಂದಿಗೂ ಬದಲಾಗಿಲ್ಲ. ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಬಹಿರ್ದೆಸೆಗೆ ಬಯಲನ್ನೋ, ಪೊದೆಗಳ ಮರೆಯನ್ನೋ ಅವಲಂಬಿಸಿರುವುದು ತಪ್ಪಿಲ್ಲ. ನಗರಗಳಲ್ಲಿನ ಶೇ90ರಷ್ಟು ಕೊಳೆಗೇರಿಗಳಿಗೂ ಶೌಚಾಲಯ ಕನಸೇ ಆಗಿ ಉಳಿದಿದೆ. ಇಂಥ ಸನ್ನಿವೇಶವನ್ನು ಬದಲಿಸುವ ಪಣ ತೊಟ್ಟು ನಮ್ಮ ಗ್ರಾಮೀಣಾಭಿವೃದ್ಧಿ ಸಚಿವರು ಹೊರಟಿದ್ದಾರೆ. ರಾಜ್ಯದಲ್ಲಿ ಶೌಚಾಲಯ ಕ್ರಾಂತಿಗೆ ಮುನ್ನುಡಿ ಹಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನೆನಪಾದದ್ದು 'ಅಲೆ'ಗಳು. ಹೌದು, ನಗರದ ಕೊಳೆಯೆಲ್ಲವೂ ಈ ಅಲೆಯ ಅಬ್ಬರದಲ್ಲಿ ಕೊಚ್ಚಿ ಹೋಗಿವೆ ತಿರುಚ್ಚಿಯಲ್ಲಿ. ಅವೀಗ ಇತರ ಬಡಾವಣೆಗಳಿಗಿಂತ ಹೆಚ್ಚು ನಳನಳಿಸತೊಡಗಿ ವರ್ಷಗಳೇ ಕಳೆದಿವೆ.
ತಮಿಳಿನಲ್ಲಿ ಅವರದನ್ನು 'ಅಲೈಗಳ್' ಎಂದೇ ಕರೆದುಕೊಳ್ಳುತ್ತಾರೆ. ಕನ್ನಡದಲ್ಲೂ ಅದು ಅಲೆಗಳೇ. ವಿಮೆನ್ ಆ್ಯಕ್ಷನ್ ಫಾರ್ ವಿಲೇಜ್ ಎಂಪವರ್‌ಮೆಂಟ್- ಢಿಛಢಜ) ಎಂಬುದು ಆ ಗುಂಪಿನ ಹೆಸರು. ನಿಜಕ್ಕೂ ಅವು ಬರಿ ಅಲೆಗಳಲ್ಲ. ಕ್ರಾಂತಿಯ ಅಲೆಗಳು. ಆ ಅಲೆಯಲ್ಲಿನ ಪ್ರತಿ ಹನಿಯೂ ಎದೆಯುಬ್ಬಿಸಿ ಹೇಳಿಕೊಳ್ಳುತ್ತದೆ 'ನಾಂಗ ತಿರುಚ್ಚಿಯಿಲ್ ಪುರುಚ್ಚಿ ಅಲೈಗಳ್' (ನಾವು ತಿರುಚ್ಚಿಯಲ್ಲಿನ ಕ್ರಾಂತಿಯ ಅಲೆಗಳು).
ಹೌದು, ತಿರುಚ್ಚಿಯಲ್ಲಿನ ಸ್ವಸಹಾಯ ಗುಂಪಿನ ಒಬ್ಬೊಬ್ಬ ಸದಸ್ಯೆಯರೂ ಒಂದೊಂದು ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅದು ಸಾಮಾನ್ಯ ಕ್ರಾಂತಿಯಲ್ಲ. ಬಾಪೂಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸಿನ ಕ್ರಾಂತಿಯದು. ಸ್ವಚ್ಛ ಬಾನ್ದಳವನ್ನು ನೆಲದ ಮೇಲೆ ಪ್ರತಿಫಲಿಸಿ ಬಿಡಬೇಕೆಂಬ ಅದಮ್ಯ ಬಯಕೆಯ ಕ್ರಾಂತಿ. 1999ರಲ್ಲಿ ತಿರುಚ್ಚಿಯ ಮೇಲೆ ಬೀಸಿ ಬರಲಾರಂಭಿಸಿದ ಈ ಕ್ರಾಂತಿಯ ಅಲೆ ಇಂದಿಗೂ ನಿಂತಿಲ್ಲ. ಪರಿಣಾಮ ಅಂದು ನೀವು ನೋಡಿರಬಹುದಾದ ತಿರುಚ್ಚಿಯ ಗಬ್ಬುನಾರುವ ಸ್ಲಂಗಳು, ನಾತ ಬೀರುವ ಓಣಿಗಳು, ಅಸಹನೀಯವೆನಿಸುವ ಶೌಚಾಲಯಗಳು ಇಂದು ತೀರಾ ಸುಶಿಕ್ಷಿತರು ವಾಸಿಸುವ ಬಡಾವಣೆಗಳೇನೋ ಎಂಬಷ್ಟರ ಮಟ್ಟಿಗೆ ಬದಲಾಗಿವೆ. ಹಾಗೆಂದು ಆ ಸ್ಲಂಗಳಲ್ಲಿ ವಾಸಿಸುವ ಜನರನ್ನೇನೂ ಒಕ್ಕಲೆಬ್ಬಿಸಿಲ್ಲ. ಆ ಹರಕು ತಡಿಕೆ, ಒಡಕು ಕುಡಿಕೆಗಳ ಜಾಗದಲ್ಲಿ ಐಷಾರಾಮಿ ಬಂಗಲೆಗಳು, ಆಧುನಿಕ ಉಪಕರಣಗಳೇನೂ ಪ್ರತಿಷ್ಠಾಪನೆಗೊಂಡಿಲ್ಲ. ಅವೆಲ್ಲ ಹಾಗೆಯೇ ಇವೆ. ಆದರೆ, ಕೊಳೆಗೇರಿಗಳನ್ನು ಹಾಗೆಂದು ಕರೆಯುವ ಮನಸ್ಸು ಮಾತ್ರ ನಿಮಗಿಂದು ಬರುವುದಿಲ್ಲ.
ಕೊಳೆಯೆಲ್ಲವೂ ಅಲೆಯ ಅಬ್ಬರದಲ್ಲಿ ಕೊಚ್ಚಿ ಹೋಗಿವೆ ತಿರುಚ್ಚಿಯಲ್ಲಿ. ಅವೀಗ ಇತರ ಬಡಾವಣೆಗಳಿಗಿಂತ ಹೆಚ್ಚು ನಚ್ಚಗೆ ನಳನಳಿಸತೊಡಗಿವೆ. ಅಲ್ಲಿನ ಶೌಚಾಲಯಗಳು ಹೈಟೆಕ್ ಟಾಯ್ಲೆಟ್‌ಗಳನ್ನೂ ನಾಚಿಸುವ ಪರಿಯಲ್ಲಿ ಥಳಥಳಿಸುತ್ತಿವೆ. ಫಿನಾಯಿಲ್‌ನ ಘಮ ಸುತ್ತಲಿನ ಅಸಹನೀಯತೆಯನ್ನು ಹೊಡೆದೋಡಿಸಿದೆ. ನಿವಾಸಿಗಳು ನಿಯತ್ತಾಗಿ 50 ಪೈಸೆ ಕೊಟ್ಟು ಚೀಟಿ ಪಡೆದು ಒಪ್ಪವಾಗಿ ಟಾಯ್ಲೆಟ್‌ನ ಒಳಹೋಗಿ ಕೆಲಸ ಮುಗಿಸಿಕೊಂಡು ಬಿಂಕದಿಂದ ಹೊರಬರುತ್ತಾರೆ. ಇದನ್ನು ಕಂಡು ಅಲ್ಲಿಯೇ ನಿಂತು ಇವೆಲ್ಲವನ್ನು ನಿರ್ವಹಿಸುವ ಆ ಕ್ರಾಂತಿಯ ಹನಿ ವಯ್ಯಾರವಾಗೊಮ್ಮೆ ನಕ್ಕು ಮತ್ತೆ ಲೆಕ್ಕಾಚಾರದಲ್ಲಿ ಮುಳುಗುತ್ತದೆ.
ತುಸು ತಪ್ಪಿ ನೀವು ಅಲ್ಲೇ ಅಕ್ಕಪಕ್ಕದಲ್ಲೇನಾದರೂ ಗೋಡೆಗೆ ಹಾರಿಸಲು ಹವಣಿಸಿದಿರೋ ಮುಗಿದೇ ಹೋಯಿತು. ಆ ಅಲೆ ಅಬ್ಬರಿಸುತ್ತಾ ನಿಮ್ಮ ಮೇಲೆ ಹಾಯ್ದುಬಿಡುತ್ತದೆ. ಅಷ್ಟೆ, ಆ ಕ್ಷಣಕ್ಕೆ ನಿಮ್ಮಲ್ಲಿನ 'ಕಂಡಕಂಡಲ್ಲಿ ಕಾಲೆತ್ತುವ' ಬುದ್ಧಿ ತೊಳೆದು ಹೋಗಿ ಬಿಟ್ಟಿರುತ್ತದೆ. ಮುಂದೆಂದೂ ನೀವು ಆ ರೀತಿ ಅಸಂಸ್ಕೃತರಾಗಲು ಅವಕಾಶವೇ ಇಲ್ಲದಂತೆ ನಿಮ್ಮ ಮೇಲೆ ಚತುರೋಪಾಯಗಳನ್ನು ಪ್ರಯೋಗಿಸಿ ನಿಮ್ಮ ಮನ ಪರಿವರ್ತಿಸಿ ಬಿಟ್ಟಿರುತ್ತಾರೆ ಅವರು.
ಅಸಲಿಗೆ ಈ ಅಲೆ ಎಬ್ಬಿಸಿದ್ದೇ ತಿರುಚ್ಚಿಯ 'ಗ್ರಾಮಾಲಯ' ಎಂಬ ಸ್ವಯಂ ಸೇವಾ ಸಂಸ್ಥೆ. ಇಂಗ್ಲೆಂಡಿನ ವಾಟರ್ ಏಡ್ಸ್ ಸಹಯೋಗದೊಂದಿಗೆ ನಗರದ ಅಸಹನೀಯ ಸ್ಲಂಗಳನ್ನು ಹೊಕ್ಕ ಗ್ರಾಮಾಲಯ, ಇಂದು ಅಲ್ಲಿ ನಿರಂತರ ಸ್ವಚ್ಛತೆ ಕ್ರಾಂತಿಯ ಕಹಳೆಯನ್ನು ಮೊಳಗಿಸುತ್ತಿದೆ. ಒಮ್ಮೆ ನೀವು ತಿರುಚ್ಚಿಯ ಕಲ್ಮಂದೈ ಎಂಬ ಸ್ಲಂಗೋ, ವಿರಗ್‌ಪೇಟೆಗೋ, ಕರುವಾಟ್ಟುಪೇಟೆಗೋ, ನೇಟುಪಟ್ಟಿ, ಚೋಳಮಪಟ್ಟಿ, ಕಲ್ಪಾಲ್ಯಂ ಅಥವಾ ಮರಾಚಿ ಪಟ್ಟಿಗೋ ಹೋಗಿ ನೋಡಿದಾಗ ಅಲ್ಲಿನ ಕೆಲಸ ಅರಿವಿಗೆ ಬರುತ್ತದೆ.
ಆಕೆ ವಿರಗ್ ಪೇಟೆಯ ಆಶಾ ಇರಬಹುದು, ನೇಟುಪಟ್ಟಿಯ ವಲ್ಲಿಯಮ್ಮ ಇರಬಹುದು, ಕಲ್ಮಂದೈನ ಇಲಂಜಿಯಾಳೇ ಇರಬಹುದು. ಎಲ್ಲರಲ್ಲೂ ಆ ಪರಿಯ ವಿಶ್ವಾಸ ಇಂದು ತುಂಬಿ ತುಳುಕುತ್ತಿದ್ದರೆ, ಅದಕ್ಕೆ ಕಾರಣ ಅವರಲ್ಲಿ ಜಾಗೃತಗೊಂಡಿರುವ ಸ್ವಚ್ಛ ಜೀವನದ ಪರಿಕಲ್ಪನೆ ಮಾತ್ರ. ಬದಲಾಗಿ ಯಾವುದೇ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನಗಳಿಂದಲ್ಲ. ನೀವು ಕಲ್ಮಂದೈನ ಇಲಂಜಿಯಾಳೊಬ್ಬಳನ್ನೇ ನೋಡಿದರೆ ಸಾಕು. ಸ್ತ್ರೀ ಶಕ್ತಿ ಎಂಥದೆಂಬುದು ಅರಿವಿಗೆ ಬರುತ್ತದೆ. ಆಕೆ ಅಲ್ಲಿನ ಸ್ವಸಹಾಯ ಗುಂಪಿನ ಮುಖ್ಯಸ್ಥೆ. ತುಸು ಧಡೂತಿಯೇ ಎನ್ನಬಹುದಾದ ದೇಹ. ಆದರೆ ಅತ್ಯಂತ ಹಗುರ ಮನಸ್ಸು. ಅತ್ಯಂತ ನಿಖರ ಹಾಗೂ ನೇರ ಮಾತಿನ ಶೈಲಿ. ಎದುರಿನವ ಅದೆಷ್ಟೇ ದೊಡ್ಡವನಾಗಿರಬಹುದು, 'ಐ ಡೋಂಟ್ ಕೇರ್' ಎನ್ನುವ ಪ್ರವೃತ್ತಿ. ಅದೇ ಹಂತದಲ್ಲಿ ತೀರಾ ಸಭ್ಯತೆ, ತೀರಾ ವಿನಯಶೀಲ ನಡವಳಿಕೆ ತೋರಬಲ್ಲ ಸುಸಂಸ್ಕೃತೆ. ಕರೆದು, ಕುಳ್ಳಿರಿಸಿ ಉಪಚರಿಸುವ ಔದಾರ್ಯ. ಇವೆಲ್ಲವನ್ನೂ ಉದ್ದೀಪಿಸಿದ್ದು ಅದೇ 'ಅಲೈಗಳ್'.
ಸ್ಲಂನಲ್ಲಿನ ಆಕೆಯ ಸ್ವಚ್ಛತಾ ಆಂದೋಲನದ್ದೊಂದು ದೊಡ್ಡಕತೆ. ಆರಂಭದಲ್ಲಿ ಗ್ರಾಮಾಲಯದ ಪ್ರತಿನಿಧಿಯಾಗಿ ಶೌಚಾಲಯ ನಿರ್ಮಿಸಲು ಹೊರಟಾಗ ಆಕೆಗೆ ಬೃಹತ್ ಸಮಸ್ಯೆಯೊಂದು ಧುತ್ತನೆ ಎದುರಾಯಿತು. ಪರಿಶಿಷ್ಟರೇ ಹೆಚ್ಚಾಗಿ ವಾಸಿಸುವ ಆ ಸ್ಲಂನಲ್ಲಿ ಅವರಲ್ಲೇ ಒಳಜಾತಿಗಳವರು 'ಅವರು ಶೌಚಾಲಯಕ್ಕೆ ಬಂದರೆ ಇವರು ಬಾರರು, ಇವರು ಬಂದರೆ...' ಎನ್ನುವ ಸ್ಥಿತಿ ತಲೆದೋರಿತು. ಇದು ಭಿನ್ನಾಭಿಪ್ರಾಯದಿಂದ ಭಿನ್ನ ಸ್ವರೂಪ ಪಡೆದು ಠಾಣೆಯ ಮೆಟ್ಟಿಲನ್ನೂ ಏರಿಬಿಟ್ಟಿತು. ದಿಟ್ಟೆ ಇಲಂಜಿಯಮ್ಮ ಕೈ ಕಟ್ಟಿ ಕೂರಲಿಲ್ಲ. ಎಲ್ಲ ಪಂಗಡಗಳವರನ್ನೂ ಸೇರಿಸಿ ಪಂಚಾಯಿತಿ ಮಾಡಿದಳು. ಬುದ್ಧಿಮಾತು ಹೇಳಿದಳು. ಕೇಳದಿದ್ದಾಗ ಕೆರಳಿದಳು. ಕೊನೆಗೂ ಹಾದಿಗೆ ತಂದಳು. ಇಂದು ಅಲ್ಲಿನ ಸಾಮೂಹಿಕ ಶೌಚಾಲಯದ ದಿನದ ಆದಾಯ 600ರಿಂದ 800 ರೂ.ಗಳು. ಎಲ್ಲ ಹಣ ನೇರ ಸ್ವಸಹಾಯ ಗುಂಪಿಗೆ, ಅಲ್ಲಿಂದ ಬ್ಯಾಂಕ್ ಖಾತೆಗೆ. ಆ ಹಣದಿಂದ ಸುಸಜ್ಜಿತ ಶೌಚಾಲಯದ ಎದುರು ಸುಂದರ ಕೈತೋಟ, ಸಮುದಾಯ ಭವನ, ಮಳೆನೀರು ಸಂಗ್ರಹ, ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ... ಇತ್ಯಾದಿ ಕನಸುಗಳ ಮೂಟೆ ಹೊತ್ತು ಇಡೀ ಸಮುದಾಯವನ್ನು ಮುನ್ನಡೆಸುತ್ತಿದ್ದಾಳಾಕೆ. ನೀರು-ಶುಚಿತ್ವ ಆಕೆಯ ಇಡೀ ದಿನಚರಿಯಾಗಿದೆ.
ಗಂಡ ರಾಜಕಾರಣಿ, ಒಂದಷ್ಟು ಮುಂಗೋಪಿ. ಆ ಮುಂಗೋಪ ಆತನಿಂದ ಮಾಡಬಾರದ್ದನ್ನು ಮಾಡಿಸಿ ಜೈಲು ಸೇರಿಸಿದೆ. ಇಲಂಜಿಯಮ್ಮ ಕಂಗೆಟ್ಟಿಲ್ಲ. ಸೇವೆಯಲ್ಲಿ ಸಾರ್ಥಕ್ಯ ಕಾಣುತ್ತಿದ್ದಾಳೆ. ಆಕೆಯಂತಲೇ ಅಲ್ಲ. ಗ್ರಾಮಾಲಯ ಪರಿವರ್ತಿಸಿರುವ 8 ಸ್ಲಂಗಳ ಎಲ್ಲ ಮಹಿಳಾ ಸ್ವಸಹಾಯ ಗುಂಪಿನದ್ದೂ ಇಂಥದೇ ಯಶೋಗಾಥೆ. ಆ ಎಲ್ಲ ಸ್ಲಂಗಳಲ್ಲೂ ಇಂದು ಅಲ್ಲಿನ ಸಾಮೂಹಿಕ ಶೌಚಾಲಯದ ದಿನದ ಆದಾಯ 600ರಿಂದ 800 ರೂ.ಗಳು. ಬಂದ ಹಣವೆಲ್ಲ ಸಂಘದ ಖಾತೆಗೆ ಜಮಾ ಆಗುತ್ತದೆ.
ಇದಕ್ಕಿಂತ ಭಿನ್ನ, ರೋಚಕ ಸಾಹಸ ಮೆರೆದವರು ಇದ್ದಾರೆ. ತಿರುಚ್ಚಿಯಲ್ಲಿ 186 ಅಧಿಕೃತ ಸ್ಲಂಗಳಿವೆ. 80 ಅಥವಾ ಅದಕ್ಕಿಂತ ಹೆಚ್ಚು ಅನಧಿಕೃತ ಕೊಳೆಗೇರಿಗಳು ತಲೆ ಎತ್ತಿವೆ, ಎತ್ತುತ್ತಲೇ ಇವೆ. ಈ ಪೈಕಿ ಬಹಳಷ್ಟು ಕಡೆ ಗ್ರಾಮಾಲಯ ಅಂದುಕೊಂಡಿದ್ದನ್ನು ಮಾಡಿ ತೋರಿಸಿದೆ. ನಗರ ಪ್ರದೇಶದ್ದು ಹೀಗಾದರೆ, ಇನ್ನು ಗ್ರಾಮಗಳದ್ದು ಇದಕ್ಕಿಂತ ಕಡಿಮೆ ಇಲ್ಲದ ಸಾಧನೆ. ತಿರುಚ್ಚಿ ಜಿಲ್ಲೆಯ ತಾಂಡವಪಟ್ಟಿ ಗ್ರಾಮ ಶೇ. 100ರಷ್ಟು ಶೌಚಾಲಯ ಹೊಂದಿರುವ ಏಷ್ಯಾದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಿರುಚ್ಚಿಯ ಈ ಅಲೈಗಳಿಗೆ 'ವಣಕ್ಕಂ'. ಅಂಥ ಅಲೆ ರಾಜ್ಯದಲ್ಲೂ ಬೀಸುವ ವಿಶ್ವಾಸ ಇದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್ಕೆ ಪಾಟೀಲರ ಇಚ್ಛಾಶಕ್ತಿ ಅದನ್ನು ಕೈಗೂಡಿಸಲಿ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


