ಸರಿ, ಹಾಗಾದರೆ ಇನ್ನೇಕೆ ತಡ?
ಅವನ ಬಗ್ಗೆ ಇಲ್ಲಿ ಸಿಕ್ಕಿದ ಲೇಖನ, ಪುಸ್ತಕ ಗಳನ್ನು ಓದಿಕೊಂಡು, ಅವನ...

ಅವನ ಬಗ್ಗೆ ಅಲ್ಲಿ ಇಲ್ಲಿ ಸಿಕ್ಕಿದ ಲೇಖನ, ಪುಸ್ತಕಗಳನ್ನು ಓದಿಕೊಂಡು, ಅವನ ಹುಚ್ಚು ಸಾಹಸ, ಪರಿಶ್ರಮ, ಮುನ್ನುಗ್ಗುವಿಕೆ, ಯಶಸ್ಸುಗಳಿಗೆ ಬೆರಗಾಗಿ, ಈ ಕಾರಣಗಳಿಂದ ಅವನನ್ನು ಮೆಚ್ಚುತ್ತಾ, ನನಗೆ ಅಂಟಿದ ಗೀಳನ್ನು ನನ್ನ ಓದುಗರಿಗೂ ಅಂಟಿಸಿ, ಅವರಲ್ಲೂ ಅವನ ಬಗ್ಗೆ ಉಮ್ಮೇದು ಮೂಡಿಸಿದ ಬಳಿಕ, ನಾನು ಬರೆಯದಿದ್ದರೆ ಮುನಿಸಿಕೊಳ್ಳುವ, ಚಿಕ್ಕಧಮಕಿ ಹಾಕುವ, ಪ್ರೀತಿಯಿಂದ ಗದರುವ ಓದುಗರು ಹುಟ್ಟಿಕೊಂಡಿದ್ದಾರೆ. ಅವರ 'ಧಮಕಿ'ಗೆ ನಾನು ಪದೇ ಪದೆ ಶರಣಾಗತನಾಗುತ್ತಿದ್ದೇನೆ.
ನಾನು ಹೇಳುತ್ತಿರುವುದು ರಿಚರ್ಡ್ ಬ್ರಾನ್‌ಸನ್ ಬಗ್ಗೆ ಎಂಬುದು ನಿಮಗೂ ಗೊತ್ತು. ಅವನ ಬಗ್ಗೆ ಇನ್ನು ಬರೆಯಲೇಬಾರದೆಂದು ಹತ್ತಾರು ಸಲ ಅಂದುಕೊಂಡಿದ್ದರೂ, ಪದೇ ಪದೆ ಉಲ್ಲಂಘಿಸುತ್ತಿದ್ದೇನೆ. ಇದೆಲ್ಲವೂ ನಿಮ್ಮಿಂದಾಗಿಯೇ. ನೀವೇ ಇದಕ್ಕೆ ಕಾರಣ. ಮೊನ್ನೆ ಸುಮ್ಮನೆ ಕುಳಿತು ಬ್ರಾನ್‌ಸನ್ ಕುರಿತು ಈ ತನಕ ಬರೆದ ಬರಹಗಳನ್ನೆಲ್ಲ ಒಟ್ರಾಶಿ ಹಾಕಿ ನೋಡಿದರೆ ಭರ್ಜರಿ ಒಂದು ಪುಸ್ತಕಕ್ಕಾಗುವಷ್ಟು ಜಮಾ ಆಗಿತ್ತು. ಇತ್ತೀಚೆಗೆ ಓದಿದ ಬ್ರಾನ್‌ಸನ್ ವಿಚಾರಗಳನ್ನು ಸೇರಿಸಿ 'ರಿಚರ್ಡ್ ಬ್ರಾನ್‌ಸನ್‌ನ ವರ್ಜಿನಲ್ ವಿಚಾರಗಳು' ಎಂಬ ಪುಸ್ತಕವನ್ನು ಸದ್ಯದಲ್ಲಿ ನಿಮ್ಮ ಕೈಗಿಡಲಿದ್ದೇನೆ. ಸರಿ, ಹಾಗಾದರೆ ಇನ್ನೇಕೆ ತಡ? ಬ್ರಾನ್‌ಸನ್ ನಿಮ್ಮೊಂದಿಗಿರುವಾಗ.
----
ಅವರು ಯಾರೇ ಆಗಿರಲಿ, ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, 'ನೋಡೋಣ, ಯೋಚಿಸುತ್ತೇನೆ, ಪರಿಶೀಲಿಸುತ್ತೇನೆ, ಸ್ವಲ್ಪ ಕಾಲಾವಕಾಶ ಕೊಡಿ, ಆನಂತರ ತಿಳಿಸುತ್ತೇನೆ, ಅಷ್ಟಕ್ಕೂ ಅವಸರ ಏಕೆ?' ಎಂದೆಲ್ಲ ಹೇಳಿದರೆ ತಕ್ಷಣ ಒಂದು ನಿರ್ಧಾರಕ್ಕೆ ಬರುತ್ತೇನೆ, ಒಂದೋ, ಅವನಿಗೆ ಈ ಕೆಲಸ ಮಾಡಲು ಮನಸ್ಸಿಲ್ಲ. ಎರಡೋ, ಅವನಲ್ಲಿ ಏನೋ ದೋಷವಿದೆ. ಈ ಕಾರಣಕ್ಕಾಗಿ ನಾನು ಅವರನ್ನು ತುಸು ದೂರವಿಡಲು ಪ್ರಯತ್ನಿಸುತ್ತೇನೆ. ಕಾರಣ ಇಂಥ ವ್ಯಕ್ತಿಗಳು ನನ್ನ ಮೇಲೆ ಪ್ರಭಾವ ಬೀರಬಾರದು, ಇವರ ಈ ಗುಣದ ಸೋಂಕು ನನಗೆ ತಟ್ಟಬಾರದು. ಈ ಮಾತುಗಳನ್ನು ಯಾರೇ ಹೇಳಲಿ, ನಾನು ನಿರ್ದಾಕ್ಷಿಣ್ಯವಾಗಿ ಅದನ್ನು ನನ್ನದೇ ಆದ ಧಾಟಿಯಲ್ಲಿ ಮೃದುವಾಗಿ ಪ್ರತಿಭಟಿಸುತ್ತೇನೆ ಅಥವಾ ಗೇಲಿ ಮಾಡುತ್ತೇನೆ. ನನ್ನ ದೃಷ್ಟಿಯಲ್ಲಿ ಯಾವ ನಿರ್ಧಾರವೂ ನಾಳೆ, ಮುಂದಿನ ತಿಂಗಳವರೆಗೆ ಕಾದು, ಆನಂತರ ತೆಗೆದುಕೊಳ್ಳುವಷ್ಟು ಕಷ್ಟ, ಜಟಿಲವಾಗಿರುವುದಿಲ್ಲ. ನನ್ನ ಮಾತನ್ನು ಎಲ್ಲರೂ ಒಪ್ಪಲಿಕ್ಕಿಲ್ಲ. ಒಪ್ಪ ಬೇಕಾಗಿಯೂ ಇಲ್ಲ. ಜೀವನವಿಡೀ ಒಬ್ಬ ವ್ಯಕ್ತಿ ಜತೆ ಸಂಗಾತಿಯಾಗಿ, ಹೆಂಡತಿಯಾಗಿ ಬಾಳಬೇಕಾದ ಹೆಣ್ಣು ಮೊದಲ ನೋಟದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತಾಳಲ್ಲ, ಅವಳಿಗೆ ಅವಳ ನಿರ್ಧಾರದ ಮೇಲೆ ಅದೆಂಥ ವಿಶ್ವಾಸ, ಭರವಸೆ, ನಂಬಿಕೆ ಇದ್ದಿರಬಹುದು? ಅದ್ಯಾವ ಶಕ್ತಿ ಅವಳನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿರಬಹುದು? ಅದೆಂಥ ದೊಡ್ಡ, ನಿರ್ಣಾಯಕ ಸಂಗತಿಯೇ ಆಗಿರಬಹುದು, ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ. ಆದರೆ ನಾವು ಬಹಳ ಬ್ಯೂರೋಕ್ರೆಟಿಕ್ ಆಗಿ ಯೋಚಿಸುತ್ತೇವೆ. 'ನಾಳೆ ಹೇಳ್ತೇನೆ, ಮಂದಿನ ತಿಂಗಳು ಹೇಳ್ತೇನೆ' ಎಂದು ವಿಳಂಬ ನೀತಿ ಅನುಸರಿಸುತ್ತೇವೆ, ಉದ್ದೇಶಪೂರ್ವಕವಾಗಿ ಮುಂದೂಡುತ್ತೇವೆ.
ನನ್ನ ಪ್ರಕಾರ, ನೀವು ಯಾವುದಾದರೂ ನಿರ್ಧಾರಕ್ಕೆ ಬರಲಾಗದೇ, ಸಮಯ ಬೇಡುತ್ತಿದ್ದೀರಿ ಅಂದ್ರೆ ನಿಮ್ಮ ಕೊರತೆ, ಅಸಾಮರ್ಥ್ಯ, ಅಷ್ಟರ ಮಟ್ಟಿಗೆ ಅದು ನಿಮ್ಮ ವೈಫಲ್ಯ. ಮಾಡ್ತೇನೆ, ಮಾಡೊಲ್ಲ, ಬರ್ತೇನೆ, ಬರೊಲ್ಲ ಅಂತ ಹೇಳಲು ನಾಳೆವರೆಗೆ, ಮುಂದಿನ ವಾರದವರೆಗೆ ಯಾಕೆ ಕಾಯಬೇಕು? ನನಗೆ ಅರ್ಥವೇ ಆಗುವುದಿಲ್ಲ. ಕೆಲವು ವರ್ಷಗಳ ಹಿಂದೆ, ನಾನು ಬೋಯಿಂಗ್ ವಿಮಾನ ಖರೀದಿಸಿದಾಗ ಅದರ ಉದ್ಘಾಟನೆಗೆ ಬರುವಂತೆ ಆ ಕಂಪನಿಯ ಮುಖ್ಯಸ್ಥರನ್ನು ಆಮಂತ್ರಿಸಿದೆ. ಆ ಮನುಷ್ಯ ತಕ್ಷಣ ತನ್ನ ಸೆಕ್ರೆಟರಿಯನ್ನು ಕರೆದು, ನಾನು ವಿನಂತಿಸಿದ ದಿನಾಂಕದಂದು ತನ್ನ ಕಾರ್ಯಕ್ರಮ ತಿಳಿದುಕೊಂಡು ಸ್ಥಳದಲ್ಲಿಯೇ 'ಆಯಿತು, ನಾನು ಬರುತ್ತೇನೆ' ಎಂದರು. ನನಗೆ ಅವರ ಬಗ್ಗೆ ಅತೀವ ಗೌರವ ಮೂಡಿತು. 'ನಿಮ್ಮ approach ನನಗೆ ಇಷ್ಟವಾಯಿತು' ಎಂದೆ. ಅದಕ್ಕೆ ಅವರು ಹೇಳಿದ್ದೇನು ಗೊತ್ತಾ?
'ಮೂರು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಿ ಬ್ರಾನ್‌ಸನ್. ನಾನು-ನೀವು ನ್ಯೂಯಾರ್ಕಿನಲ್ಲಿ ಭೇಟಿ ಮಾಡಿದಾಗ, ನಮ್ಮ ಹೊಸ ವಿಮಾನದ ವೈಶಿಷ್ಟ್ಯಗಳ ಬಗ್ಗೆ ಊಟ ಮಾಡುವಾಗ ವಿವರಿಸಿದೆ. ಅದರ ಕಾರ್ಯಕ್ಷಮತೆ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ನೀವು ಕೇಳಿದಿರಿ. ತಕ್ಷಣ ನೀವು ಆರು ವಿಮಾನಗಳನ್ನು ಬುಕ್ ಮಾಡಿದಿರಿ. ಸುಮಾರು ಮೂರು ಸಾವಿರ ಕೋಟಿ ರೂ. ವ್ಯವಹಾರಕ್ಕೆ ಮೂರು ನಿಮಿಷಗಳ ಕಾಲಾವಧಿಯಲ್ಲಿ ನಿರ್ಧಾರ ತೆಗೆದುಕೊಂಡಿರಿ. ಇದು ನನ್ನ ಜೀವನದ ಗತಿಯನ್ನೇ ಬದಲಿಸಿತು. ನಾನು ಯೋಚನೆ ಮಾಡುವ ರೀತಿಯೇ ಬದಲಾಯಿತು. ನೀವು ಜೀವನದಲ್ಲಿ ಯಶಸ್ಸು ಗಳಿಸಿದ್ದು ಹೇಗೆಂಬುದು ನನಗೆ ಮನವರಿಕೆಯಾಯಿತು. ನಾನು ಜಗತ್ತಿನಾದ್ಯಂತ ನೂರಾರು ಏರ್‌ಲೈನ್ಸ್ ಮಾಲೀಕರೊಂದಿಗೆ ವ್ಯವಹರಿಸಿದ್ದೇನೆ. ಒಂದು ವಿಮಾನ ಖರೀದಿಗೆ ಆರೇಳು ತಿಂಗಳು ಯೋಚಿಸುತ್ತಾರೆ. ಕೋಟೇಶನ್, ಇನ್‌ಸ್ಪೆಕ್ಷನ್, ರಿವಿಶನ್ ಅಂತ ಸುಮ್ಮನೆ ಕಾಲ ತಳ್ಳುತ್ತಾರೆ. ಆರು ತಿಂಗಳ ಬಳಿಕ ಫಿಸಿಬಿಲಿಟಿ ರಿಪೋರ್ಟ್‌ನಂತೆ ವಿಮಾನ ಖರೀದಿಸಬಾರದು ಅಂತ ನಿರ್ಧರಿಸಿದ್ದೇವೆಂದು ತಿಳಿಸುತ್ತಾರೆ. ಆದರೆ ನೀವು ಹಾಗಲ್ಲ. ನಿಂತಲ್ಲೇ ತಾಪ್ಡ್ ತೋಪ್ಡ್ ನಿರ್ಧಾರ ತೆಗೆದುಕೊಳ್ಳುತ್ತೀರಿ. ನಿಮ್ಮ ಬಗ್ಗೆ ನಿಮಗೆ ಅದೆಷ್ಟು ವಿಶ್ವಾಸ? ಇದೊಂದು ನಿರ್ಧಾರದಿಂದ ನನ್ನಲ್ಲೂ ಜ್ಞಾನೋದಯವಾಯಿತು. ಅಂದಿನಿಂದ ಈ ಗುಣವನ್ನು ನಾನೂ ಮೈಗೂಡಿಸಿಕೊಂಡೆ. ನಾಳೆ ಮಾಡ್ತೇನೆ ಎಂದು ಹೇಳುವುದೇ ಇಲ್ಲ. ಅದಕ್ಕೆಲ್ಲ ನೀವೇ ಕಾರಣ.'
ನನ್ನ ನಂಬಿಕೆಯೇನೆಂದರೆ, ಬೋಯಿಂಗ್ ವಿಶ್ವದಲ್ಲಿಯೇ ಪ್ರತಿಷ್ಠಿತ ವಿಮಾನ ತಯಾರಿಕ ಸಂಸ್ಥೆ. ಅಂಥ ಸಂಸ್ಥೆಯ ಮಾಲೀಕ ಸುಳ್ಳು ಹೇಳಲಾರ, ಹೇಳಿದರೂ ಅದನ್ನು ನಂಬುವಷ್ಟು ದಡ್ಡ ನಾನಲ್ಲ. ಈ ಜಗತ್ತು ನಿಂತಿರುವುದೇ ನಂಬಿಕೆ, ವಿಶ್ವಾಸದ ಮೇಲೆ. ಒಂದು ವೇಳೆ ಆತ ನನಗೆ ಮೋಸ ಮಾಡಿದರೆ ಮುಂದೆಂದೂ ಆತ ನನ್ನಿಂದ ಬಿಜಿನೆಸ್ ಪಡೆಯಲಾರ. ಅಷ್ಟಕ್ಕೂ ವಿಮಾನದ ಬಗ್ಗೆ ಅದನ್ನು ಬಳಸುವವರಿಗಿಂತ ತಯಾರಿಸುವವರಿಗೇ ಹೆಚ್ಚು ಗೊತ್ತಿರುತ್ತದೆ. ಇನ್ನು ವಿಮಾನದ ರೇಟಿನ ಬಗ್ಗೆ ಚೌಕಾಶಿ ಮಾಡಬಹುದಿತ್ತು. ನಾನು ಉದ್ದೇಶಪೂರ್ವಕವಾಗಿ ಮಾಡಲಿಲ್ಲ. ಕಾರಣ ನಾನು ಕೆಲವು ಕೋಟಿ ರೂ.ಗಳಿಗೆ ತಿಕ್ಕಿ ತಿಕ್ಕಿ ಚೌಕಾಶಿ ಮಾಡಿ ನನ್ನ ಕಿಮ್ಮತ್ತನ್ನು ಅಷ್ಟರಮಟ್ಟಿಗೆ ಇಳಿಸಿಕೊಳ್ಳಲು ಸಿದ್ಧನಿರಲಿಲ್ಲ. 'ನಾವು ಚೌಕಾಶಿ ಮಾಡಿ ಉಳಿಸಿದ ಮೊತ್ತವೇ ಆ ವ್ಯವಹಾರದಲ್ಲಿ ನಮ್ಮ ವ್ಯಕ್ತಿತ್ವದ ಕಿಮ್ಮತ್ತು' ಎಂಬುದನ್ನು ನಾನು ಎಂದೋ ಮನಗಂಡಿದ್ದೇನೆ. ನಾನು ಯಾವಾಗ ಚೌಕಾಶಿ ಮಾಡಲಿಲ್ಲವೋ, ಬೋಯಿಂಗ್ ಕಂಪನಿಯ ಮುಖ್ಯಸ್ಥನೇ 150 ಕೋಟಿ ರುಪಾಯಿ ರಿಯಾಯಿತಿ ಕೊಟ್ಟ. ಚೌಕಾಶಿ ವ್ಯವಹಾರದಲ್ಲಿ ತಾವು ಹಣ ಗಳಿಸಿದ್ದೇವೆಂದು ಬಹುತೇಕ ಮಂದಿ ತಿಳಿದುಕೊಳ್ಳುತ್ತಾರೆ. ಆದರೆ ಅವರ ಕಿಮ್ಮತ್ತು ಹೋಗಿದೆಯೆಂಬುದು ಅವರಿಗೆ ಅರ್ಥವಾಗುವುದಿಲ್ಲ, ಇರಲಿ.
ಕೆಲವೊಮ್ಮೆ ನನ್ನ ಸಹಾಯಕರು, ಬಿಜಿನೆಸ್ ಸಲಹೆಗಾರರು ನನ್ನ ಮುಂದೆ ಹೊಸ ಬಿಜಿನೆಸ್ ಪ್ಲಾನ್ ಮಂಡಿಸುತ್ತಾರೆ. ಅವರು ಸಾಕಷ್ಟು ಹೋಮ್‌ವರ್ಕ್ ಮಾಡಿಕೊಂಡು ಆ ಪ್ಲಾನ್‌ನ್ನು ಸಿದ್ಧಪಡಿಸಿದ್ದಾರೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತೇನೆ. ಅದಕ್ಕೆ ನನಗೆ ತಗಲುವ ಸಮಯ, ಹದಿನೈದು ನಿಮಿಷ. ಅವರು ಪ್ರಸೆಂಟೇಶನ್ ಮುಗಿಸುವ ಹೊತ್ತಿಗೆ, ಅದನ್ನು ಜಾರಿಗೊಳಿಸಬೇಕೋ, ಬೇಡವೋ ಎಂಬ ನಿರ್ಧಾರವನ್ನು ಅಲ್ಲಿಯೇ ತಿಳಿಸಿರುತ್ತೇನೆ. 'ನಾಳೆ ಹೇಳ್ತೇನೆ, ಸ್ವಲ್ಪ ಟೈಮ್ ಕೊಡಿ, ಯೋಚಿಸಿ ತಿಳಿಸುತ್ತೇನೆ' ಎಂದು ನಾನು ಹೇಳುವುದೇ ಇಲ್ಲ. ಅದು ನನ್ನ ಜಾಯಮಾನವೂ ಅಲ್ಲ.
ನಾನು 'ವರ್ಜಿನ್' ಹೆಸರಿನಲ್ಲಿ ಮುನ್ನೂರಕ್ಕೂ ಬೇರೆ ಬೇರೆ ಕಂಪನಿ ವ್ಯವಹಾರಗಳನ್ನು ಮಾಡುತ್ತಿದ್ದೇನೆ. ಆ ಎಲ್ಲ ಕಂಪನಿಗಳನ್ನು ಆರಂಭಿಸುವಾಗ ನಾನು spot decision ತೆಗೆದುಕೊಂಡಿದ್ದೇ ಹೆಚ್ಚು. ಒಂದೊಂದು ಕಂಪನಿ ಆರಂಭಿಸುವಾಗ ಐದಾರು ತಿಂಗಳು ಸಮಯ ತೆಗೆದುಕೊಂಡಿದ್ದರೆ, ಬಿಜಿನೆಸ್ ಪ್ಲಾನ್, ಪವರ್ ಪಾಯಿಂಟ್ ಪ್ರಸೆಂಟೇಶನ್ ಎಂದು ನಿರ್ಧಾರವನ್ನು ಮುಂದೂಡುತ್ತಾ ಕುಳಿತಿದ್ದರೆ, ನಾನು ಹೆಚ್ಚೆಂದರೆ ಐವತ್ತು ಕಂಪನಿಗಳಷ್ಟೇ ಹುಟ್ಟು ಹಾಕಲು ಸಾಧ್ಯವಾಗುತ್ತಿತ್ತೇನೋ?
ನಾವು ತೆಗೆದುಕೊಳ್ಳುವ ತೀರ್ಮಾನಗಳೆಲ್ಲ ಸರಿಯಾಗಿಯೇ ಇರುತ್ತವೆ ಎಂದಲ್ಲ. ಕೆಲವೊಮ್ಮೆ ತರಾತುರಿ ನಿರ್ಧಾರ, ಆ ಕ್ಷಣದ ತೀರ್ಮಾನದಿಂದ ತಪ್ಪುಗಳಾಗಬಹುದು. ಅದರಿಂದ ಹಾನಿಯಾಗಬಹುದು. ಈ ಅಪಾಯ ಗೊತ್ತಿದ್ದೇ ನಾನು ಆ ತೀರ್ಮಾನಕ್ಕೆ ಬಂದಿರುತ್ತೇನೆ. ಇಪ್ಪತ್ತೈದರಲ್ಲಿ ಒಂದೆರಡು ನಿರ್ಧಾರಗಳನ್ನು ಕೈಕೊಡಬಹುದು. ಪರವಾಗಿಲ್ಲ. ಹಾಗಂತ ನಿರ್ಧಾರವನ್ನೇ ಕೈಗೊಳ್ಳದಿರಲು ಸಾಧ್ಯವಾ? ವರ್ಜಿನ್ ಬುಕ್ಸ್ ಸಂಸ್ಥೆ ಆರಂಭಿಸಿದಾಗ, ಕೆಲವು ಲೇಖಕರ ಪುಸ್ತಕಗಳನ್ನು ನಾವೇ ಪ್ರಕಟಿಸಲು ನಿರ್ಧರಿಸಿದೆವು. ಡಿಸ್ಟ್ರಿಬ್ಯೂಷನ್‌ಗೆ ಟೆಂಡರ್ ಕರೆದು ಅಂತಿಮವಾಗಿ ಒಬ್ಬರನ್ನು ಅಖೈರುಗೊಳಿಸಿದೆವು. ಆದರೆ ಆತ ನಿಜವಾದ ಆಪರೇಷನ್ ಶುರು ಮಾಡಲು ಮೂರು ತಿಂಗಳು ಬೇಕು ಎಂದ. ಕಾರಣ ಕೇಳಿದಾಗ ಆತ ಉತ್ತಮ ಮುಹೂರ್ತಕ್ಕೆ ಕಾದು ಕುಳಿತಿದ್ದ. ನಾನು ತಕ್ಷಣ ಆ ಟೆಂಡರನ್ನು ರದ್ದುಗೊಳಿಸುವಂತೆ ಹೇಳಿದೆ. ನನ್ನಿಂದ wait ಮಾಡಲು ಸಾಧ್ಯವೇ ಇಲ್ಲ. ಕಾರಣ ನನಗಾಗಿ, ನಿಮಗಾಗಿ ಸಮಯ wait ಮಾಡುವುದಿಲ್ಲವಲ್ಲ? ನಾನು ಯಾರನ್ನೂ ಕಾಯಿಸುವುದಿಲ್ಲ. ನನ್ನನ್ನು ಬೇರೆಯವರು ಕಾಯಿಸುವುದನ್ನು ಇಷ್ಟಪಡುವುದಿಲ್ಲ. ಈ ಜಗತ್ತು ಸದಾ ಚಲನಶೀಲ. ಸಮಯವಂತೂ ಓಡುತ್ತಿರುತ್ತದೆ. ನೀವು ತುಸು ಹೊತ್ತು ನಿಂತುಕೊಂಡರೆ, ನಿಷ್ಕ್ರಿಯರಾದರೆ, ನಿಮ್ಮನ್ನು ಬಿಟ್ಟು ಜಗತ್ತು, ಸಮಯ ಮುಂದೆ ಮುಂದಕ್ಕೆ ಹೋಗುತ್ತಿರುತ್ತದೆ. ಅಷ್ಟರಮಟ್ಟಿಗೆ ನೀವು ಹಿಂದೆ ಬಿದ್ದಿರುತ್ತೀರಿ.
ನಾವು ಯಾವಾಗ ನಿಧಾನರಾಗುತ್ತೇವೆ ಅಂದ್ರೆ ಓಡಿಓಡಿ ಸುಸ್ತಾದಾಗ ಅಥವಾ ಬಹಳ ದೂರ ಓಡಿದೆ ಎಂದು ಸಂತೃಪ್ತರಾದಾಗ. ಓಡಿಓಡಿ ಸುಸ್ತಾದಾಗ ತುಸು ವಿಶ್ರಾಂತಿ ಪಡೆದರೆ ಪುನಃ ಓಡುವ ಕುಬಿ ಅರಳುತ್ತದೆ. ಬಹಳ ದೂರ ಓಡಿದೆ ಎಂದು ಬೀಗುವಾಗ ಓಡುವುದು ಇನ್ನೂ ಇದೆ ಅಂದುಕೊಂಡರೆ ಪುನಃ ಓಡಲು ಎದ್ದು ನಿಲ್ಲುತ್ತೇವೆ. ಈ ಜೀವನದಲ್ಲಿ ಸಾಧಿಸುವುದು ಇನ್ನೂ ಇದೆ, ಅದು ನನ್ನಿಂದ ಸಾಧ್ಯವೂ ಇದೆ ಎಂದು ಅನಿಸಿದಾಗಲೆಲ್ಲ ನಾನು ಹೊಸ ಸಾಹಸದ ಹಿಂದೆ ಓಡಲಾರಂಭಿಸುತ್ತೇನೆ. Future starts now not tomorrow and future is now ಎಂಬುದು ನನಗೆ ಎಂದೋ ಮನವರಿಕೆಯಾಗಿದೆ. ಅನೇಕರು ನನ್ನನ್ನು ಕೇಳುವುದುಂಟು, ಛೇಡಿಸುವುದೂ ಉಂಟು. 'ನೀವ್ಯಾಕೆ ಎಲ್ಲವೂ ಈಗಲೇಬೇಕು, ನಿಂತ ಮೆಟ್ಟಿನಲ್ಲೇ ಬೇಕು ಎಂದು ಹಠ ಹಿಡಿಯುತ್ತೀರಿ? ನಿಮಗೇಕೆ ಸ್ವಲ್ಪವೂ ಕಾಯುವ ಸಹನೆ ಇಲ್ಲವಲ್ಲ?' ಎಂದು ಕೇಳುತ್ತಾರೆ. ನಿಜ. ನಾನು ವರ್ತಿಸುವುದೇ ಹಾಗೇ. ನಾನು ನಾಳೆ ತನಕ ಕಾದರೆ, ಮುಂದೂಡಿದರೆ ಅದನ್ನು ಸಹಿಸಿಕೊಳ್ಳುವ ಗುಣವನ್ನು ಬೆಳೆಸಿಕೊಂಡರೆ ಅದೇ ಮುಂದೆ ನಾಳೆ ತನಕ ಕಾಯುವ ಗುಣ ಒಂದು ವಾರ, ಒಂದು ತಿಂಗಳು ಕಾಯುವ ಸಹನೆಯನ್ನು ನನ್ನಲ್ಲಿ ಬೆಳೆಸಬಹುದು. ಇದು ಅಂಟು ಜಾಡ್ಯ. ಹಾಗೆಂದು ಸಹನೆ ಬೇಡ ಎಂದು ಹೇಳುತ್ತಿಲ್ಲ. ಆದರೆ ಅದು ನಮ್ಮಲ್ಲಿ ಮನೆ ಮಾಡಿ ಸಂಸಾರ ಮಾಡುವುದಕ್ಕೆ ಬಿಡಬಾರದು.
ನಾನು ಆಗಾಗ ದುಬೈಗೆ ಬಿಜಿನೆಸ್ ಕೆಲಸದ ನಿಮಿತ್ತ ಹೋಗುತ್ತಿರುತ್ತೇನೆ. ದುಬೈ ನಲವತ್ತು ವರ್ಷಗಳಲ್ಲಿ ಬೆಳೆದ ರೀತಿ ನನ್ನಲ್ಲಿ ಅಚ್ಚರಿ ಮೂಡಿಸಿದೆ. ಈ ನಗರವನ್ನು ನಿರ್ಮಿಸಿದವರು ನನ್ನಂಥ ಹುಚ್ಚರೇ. ಕುಳಿತಲ್ಲಿ ಕುಳಿತಿರದ, ನಿಂತಲ್ಲಿ ನಿಂತಿರದ, ಸದಾ ಏನಾದರೂ ಮಾಡುತ್ತಲೇ ಇರುವ, ಮೈ ತುಂಬಾ ಕೆಲಸ ಕಾರ್ಯ ಸುರಿದುಕೊಂಡಿರುವ ಮಹಾ ತಿಕ್ಕಲುಗಳೇ.
ಒಂದು ಕೆಲಸವನ್ನು ಈಗಲೇ ಮಾಡಿ ಮುಗಿಸಬಹುದು, ಅದೇ ಕೆಲಸವನ್ನು ಒಂದು ವರ್ಷದ ಬಳಿಕವೂ ಮಾಡಬಹುದು. ನನಗೆ ಕ್ಟಿಡಡಿಠ್ಟಟಿಜ ಮಾಡುವುದೆಂದರೆ ಗೊತ್ತಿಲ್ಲ. ಒಂದೊಂದು ಸಾಧನೆಯ ಮೈಲಿಗಲ್ಲನ್ನು ಕ್ರಮಿಸಿದ ಬಳಿಸ ಸಾಧಿಸುವುದು ಇನ್ನೂ ಎಷ್ಟಿವೆ ಎಂಬುದು ಗೊತ್ತಾಗುತ್ತದೆ.
ಇತ್ತೀಚೆಗೆ ದುಬೈಯ ಆಡಳಿತಗಾರ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ಭೇಟಿಯಾಗಿದ್ದೇ. ಅವರೂ ನನ್ನ ಹಾಗೆ ಕಾಯಕಜೀವಿ, ಕಾಯದ ಜೀವಿ. ಎಲ್ಲವೂ ಥಟ್ ಅಂತ ಆಗಿಬಿಡಬೇಕು. ನಾಳೆ ಎಂಬುದಿಲ್ಲ. ಅದನ್ನು ಯಾರೂ ನೋಡಿಲ್ಲ ಎಂದು ಬಲವಾಗಿ ನಂಬಿರುವ ಮನುಷ್ಯ. ಈ ವಿಷಯದಲ್ಲಿ ನಾವಿಬ್ಬರೂ ಪೈಪೋಟಿಗೆ ಬೀಳುತ್ತೇವೆ. ಅವರೊಂದಿಗಿನ ಪೈಪೋಟಿ ಇಷ್ಟ. ಯಾಕೆಂದರೆ ನಾನು ಪ್ರತಿಸಲ ಅವರ ಗತಿ, ವೇಗಕ್ಕೆ ಸೋತರೂ, ಅವರೊಂದಿಗಿನ ಓಟದಿಂದಾಗಿ ನನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದೇನೆ. ಮಕ್ತೌಮ್ ನನಗೊಂದು ಸಣ್ಣ ಪ್ರಸಂಗವನ್ನು ಹೇಳಿದರು. ಒಮ್ಮೆ ಪತ್ರಕರ್ತೆಯೊಬ್ಬಳು 'ಮಕ್ತೌಮ್ ಅವರೇ, ನಿಮ್ಮ ಕನಸುಗಳ ಪೈಕಿ ಎಷ್ಟನ್ನು ನನಸಾಗಿಸಿದ್ದೀರಿ? ದಯವಿಟ್ಟು ಪರ್ಸೆಂಟೇಜ್‌ನಲ್ಲಿ ಹೇಳಿ' ಎಂದಳಂತೆ. ಅದಕ್ಕೆ ಅವರು 'ನನ್ನ ಕನಸು ದೊಡ್ಡದು. ಜನರ ನಿರೀಕ್ಷೆ ಇನ್ನೂ ದೊಡ್ಡದು. ಆದರೂ ಈ ತನಕ ನನ್ನ ಕನಸುಗಳ ಪೈಕಿ ಶೇ.10ರಷ್ಟನ್ನು ಮಾತ್ರ ನನಸಾಗಿಸಲು ಸಾಧ್ಯವಾಗಿದೆ' ಅಂದರಂತೆ.
ಒಂದೆರಡು ವರ್ಷಗಳ ಬಳಿಕ ಅದೇ ಪತ್ರಕರ್ತೆ ಮಕ್ತೌಮ್ ಅವರನ್ನು ಭೇಟಿಯಾದಾಗ ಇದೇ ಪ್ರಶ್ನೆಯನ್ನು ಕೇಳಿದಳಂತೆ. ಈ ಎರಡು ವರ್ಷಗಳಲ್ಲಿ ದುಬೈಯಲ್ಲಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ತಲೆಯೆತ್ತಿ ನಿಂತಿತ್ತು. ದುಬೈ ಮೆಟ್ರೋ ಯೋಜನೆ ಆರಂಭವಾಗಿತ್ತು. ಮೇದನ್ ಸಿಟಿ ಯೋಜನೆ ಘೋಷಣೆಯಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಆ ಪತ್ರಕರ್ತೆಯ ಪ್ರಶ್ನೆಗೆ ಮಕ್ತೌಮ್, 'ನನ್ನ ಕನಸಿನ ಪೈಕಿ ಶೇ. ಏಳರಷ್ಟನ್ನು ಮಾತ್ರ ಸಾಧಿಸಲು ಸಾಧ್ಯವಾಗಿದೆ' ಅಂದರಂತೆ. ತಕ್ಷಣ ಆಕೆ 'ಎರಡು ವರ್ಷಗಳ ಹಿಂದೆ ಶೇ. ಹತ್ತರಷ್ಟು ಕನಸು ನನಸಾಗಿದೆ ಅಂತ ಹೇಳಿದ್ದೀರಿ. ಈಗ ಶೇ. ಏಳರಷ್ಟು ಮಾತ್ರ ಅಂತ ಹೇಳುತ್ತಿದ್ದೀರಲ್ಲ, ಏನು ಕತೆ?' ಎಂದು ಪ್ರಶ್ನಿಸಿದಳಂತೆ.
ಅದಕ್ಕೆ ಮಕ್ತೌಮ್ ನುಡಿದರಂತೆ-'ನಾವು ಸಾಧಿಸುತ್ತಾ ಹೋದಂತೆ ನಮ್ಮ ದೃಷ್ಟಿ ಇನ್ನಷ್ಟು ಹರವಾಗುತ್ತದೆ. ತಿಳಿವಳಿಕೆ ವಿಸ್ತಾರವಾಗುತ್ತದೆ. ಕಲ್ಪನೆಗಳು ಸ್ಪಷ್ಟವಾಗುತ್ತದೆ. ಕನಸುಗಳು ಹಿರಿದಾಗುತ್ತವೆ. ನಮ್ಮ ಜೀವನವಿದೆಯಲ್ಲ, ಅದಕ್ಕೆ ಅಂತಿಮ ಗುರಿ ರೇಖೆ ಎಂಬುದಿಲ್ಲ. ಪ್ರತಿ ಸಲವೂ ಈ ರೇಖೆಯನ್ನು ಮುಂದಕ್ಕೆ ತಳ್ಳುತ್ತಾ ಹೋಗಬಹುದು. ನಾವು ಒಂದು ಕೆಲಸವನ್ನು ಬೇಗ ಮುಗಿಸಿದರೆ ಅದರ ಲಾಭ, ಸುಖ ಲಕ್ಷಾಂತರ ಮಂದಿಗೆ ಸಿಗುತ್ತದೆ. ನನ್ನ ದೇಶವಾಸಿಗಳ ನೆಮ್ಮದಿಗಾಗಿ ನಾನು ಕಾಯುವುದಕ್ಕೆ ಸಿದ್ಧನಿಲ್ಲ. ಆಡಳಿತಗಾರರಾದ ನಾವು ಕೆಲವು ಮಂದಿ ಬೇಗ ಬೇಗ ನಿರ್ಧಾರ ತೆಗೆದುಕೊಂಡರೆ ಕೋಟ್ಯಂತರ ಜನರಿಗೆ ಅದರ ಫಲ ಸಿಗುತ್ತದೆ. ಅದಕ್ಕೆ ನಿದರ್ಶನ ದುಬೈ.'
ಮಕ್ತೌಮ್ ಅವರನ್ನು ಪ್ರತಿಸಲ ಭೇಟಿ ಮಾಡಿದಾಗಲೂ ಅವರ ವೇಗ, ಸಾಧನೆ ಕಂಡು ನಾನು ಫುಲ್ ಛಾರ್ಜ್ ಆಗುತ್ತೇನೆ. ಪ್ರತಿಸಲ ಕಂಡಾಗ ಅವರ ಮುಂದಿರುವ ಹೊಸ ಯೋಜನೆಗಳನ್ನು ಕಂಡು ಬೆರಗಾಗುತ್ತೇನೆ. ನಾನು ನನ್ನ ಓಟದ ವೇಗವನ್ನು ಹೆಚ್ಚಿಸಿಕೊಳ್ಳಲು ಪ್ರೇರಣೆ ಪಡೆಯುತ್ತೇನೆ. ಅಷ್ಟೇ ಅಲ್ಲ, ಇಂದಿನ ಕೆಲಸವನ್ನು ಈಗಲೇ ಮುಗಿಸಲು, ನಾಳೆಯ ಕೆಲಸವನ್ನು ಇಂದಿಗೇ ಮುಗಿಸಲು ಸಂಕಲ್ಪ ತೊಡುತ್ತೇನೆ. ಪರ್ವತದ ಒಂದೊಂದು ಮೆಟ್ಟಿಲನ್ನು ಏರುತ್ತಾ ಹೋದಂತೆ ಸುತ್ತಲಿನ ಜಗತ್ತು ವಿಶಾಲವಾಗಿ ಕಾಣುತ್ತಾ ಹೋಗುತ್ತದೆ. ಕುಳಿತವನಿಗೆ, ಮಲಗಿದವನಿಗೆ ಆ ಕೋಣೆಯೇ ಜಗತ್ತಿನಂತೆ ಕಾಣುತ್ತದೆ.
ನನ್ನ ಈ ಎಲ್ಲ ಮಾತುಗಳನ್ನು ನೀವು ಮೈಗೂಡಿಸಿಕೊಂಡಿದ್ದೇ ಆದರೆ ನೀವು ನನ್ನೊಂದಿಗೂ ಪೈಪೋಟಿಗೆ ಇಳಿಯಬಹುದು!
ಹಾಂ... ಸರಿ. ಹಾಗಾದರೆ ಇನ್ನೇಕೆ ತಡ?
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


