ರಾಹುಲ್ ಗಾಂಧಿ: ನಿರ್ಣಾಯಕ ನಿಯಂತ್ರಣ
ಕಾಂಗ್ರೆಸ್ಸಿಗರಲ್ಲಂತೂ ಆ ಸಭೆ ತಮ್ಮ ಎಲ್ಲ ಸಮಸ್ಯೆಗಳಿಗೂ ಉತ್ತರವನ್ನು ಒದಗಿಸುವ..
ಕರ್ನಾಟಕದಲ್ಲಿ, ಆರು ತಿಂಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಬಂದಾಗಲೇ ರೂಪಗೊಳ್ಳಬೇಕಾಗಿದ್ದ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಮಂತ್ರಿಮಂಡಲದ ನಡುವಣ ಸಮನ್ವಯ ಸಮಿತಿಯ ಮೊದಲ ಸಭೆ ನಡೆದಿದ್ದು ಈಗಲೇ. ಅದೂ ದೆಹಲಿಯಲ್ಲಿ.
ಆ ಸಭೆ ನಡೆಯುವುದಕ್ಕೆ ಮುಂಚೆ, ಅಲ್ಲಿ ಪ್ರಸ್ತಾಪವಾಗಬಹುದಾದ ವಿಚಾರಗಳು ವಿವಾದಗಳ ಪಟ್ಟಿ ದೊಡ್ಡದಾಗಿತ್ತು. ಕಾಂಗ್ರೆಸ್ಸಿಗರಲ್ಲಂತೂ ಆ ಸಭೆ ತಮ್ಮ ಎಲ್ಲ ಸಮಸ್ಯೆಗಳಿಗೂ ಉತ್ತರವನ್ನು ಒದಗಿಸುವ ಆಸೆ ಇತ್ತು. ಆದರೆ ಆ ಸಭೆ ಸಾಧಿಸಿದ್ದಾದರೂ ಏನು?
ಅಧಿಕೃತವಾಗಿ ಪ್ರಕಟವಾದ ಹೇಳಿಕೆಯಂತೆ, ಲೋಕಸಭೆ ಚುನಾವಣೆಯ ಸಿದ್ಧತೆಯ ವಿಚಾರವನ್ನು ಬಿಟ್ಟು ಬೇರೆ ಯಾವ ವಿಷಯವನ್ನೂ ಚರ್ಚಿಸಲಿಲ್ಲ. ಲೋಕಸಭೆ ಚುನಾವಣೆ ಕುರಿತ ಚರ್ಚೆಗೆ ಈಗಲೇ ಏನು ಅವಶ್ಯಕತೆ ಇತ್ತು? ಇನ್ನೂ ಆರು ತಿಂಗಳಿದೆಯಲ್ಲಾ? ಆ ಪ್ರಶ್ನೆಯಲ್ಲೇ ಉತ್ತರವೂ ಅಡಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಕಟಿಸಿದ ಕೆಲವು ನಿರ್ಧಾರಗಳು, ಮಾಡಿರುವ ನೇಮಕಗಳು ಅನೇಕ ಕಾಂಗ್ರೆಸ್ಸಿಗರಿಗೆ ಹಿಡಿಸಿಲ್ಲ. ಆ ವಿಚಾರದಲ್ಲಿ ಪಿಸುಮಾತಿನ ಪ್ರಚಾರ ನಡೆದಿತ್ತು. "ಒನ್ ಮ್ಯಾನ್ ಷೋ" ನಡೆದಿದೆ ಎನ್ನುವ ವಾಕ್ಯ ಅಲ್ಲಿ - ಇಲ್ಲಿ ಕೇಳಿ ಬಂದಿತ್ತು. ಏಕಪಕ್ಷೀಯ ನಿರ್ಧಾರಗಳು ಮಾರಕ ಎನ್ನುವ ಖಾರವಾದ ಮಾತೂ ಕೇಳಿ ಬಂದಿತ್ತು. ಇಂತಹ ಮಾತಿನಿಂದಲೇ ಪಕ್ಷದಲ್ಲಿ ಭಿನ್ನಮತದ ಗರ್ಭಧಾರಣೆಯಾಗುವುದು. ಒಮ್ಮೆ ಗರ್ಭಧರಿಸಿದರೆ ಅದು ಬೆಳೆಯುತ್ತಲೇ ಹೋಗಬೇಕಲ್ಲವೇ? ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಕೇಂದ್ರ ನಾಯಕರು ರೂಪಿಸಿದ ತಂತ್ರ, ದೆಹಲಿಯಲ್ಲೇ ಸಮನ್ವಯ ಸಮಿತಿಯನ್ನು ಕರೆದು, ಸಮನ್ವಯದ ಪಾಠವನ್ನು ಹೇಳಿ ಕಳಿಸುವುದು. ಆ ಕೆಲಸ ಆಯಿತು.
ಅಷ್ಟೇ ಅಲ್ಲ. ಕಾಂಗ್ರೆಸ್ಸಿನಲ್ಲಿ ಈಗ ನಿರ್ಣಾಯಕವಾಗಿ ನಿಯಂತ್ರಣ ಅಧಿಕಾರವನ್ನು ರಾಹುಲ್ ಗಾಂಧಿ ಹೊಂದಿರುವುದನ್ನು ಪ್ರದರ್ಶಿಸಬೇಕಾಗಿತ್ತು. ಆ ಕೆಲಸವೂ ಆಯಿತು. ಹಿಂದಿನಂತೆ ದೂರದ ಊರುಗಳಿಂದ ಬಂದ ನಾಯಕರು ಮೊದಲು ಅಹಮದ್ ಪಟೇಲ್ ಅವರಂತಹವರನ್ನು ಭೇಟಿ ಮಾಡಿ, ಅನಂತರವೇ ಗರ್ಭಗುಡಿಯ ಪ್ರವೇಶ ಸಿಗುವ ವ್ಯವಸ್ಥೆ ಈಗಿಲ್ಲ.
ನೇರವಾಗಿ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ, ಅವರಿಂದ ತಿಳಿದುಕೊಳ್ಳಬೇಕಾಗಿದ್ದ ವಿಷಯಗಳನ್ನೆಲ್ಲ ತಿಳಿದುಕೊಂಡು ಅನಂತರ ಸಮನ್ವಯ ಸಮಿತಿಯ ಸಭೆಯಲ್ಲಿ ಎಲ್ಲರೂ ಒಟ್ಟಿಗೇ ಹೊಂದಿಕೊಂಡು ಹೋಗಿ ಎನ್ನುವ ಸಂದೇಶವನ್ನು ತಲುಪಿಸಿದರು. ಸದ್ಯಕ್ಕೆ ಮಂತ್ರಿಮಂಡಲದ ವಿಸ್ತರಣೆ ಬೇಡ, ನಿಗಮ - ಮಂಡಳಿಗಳ ನೇಮಕದ ಪ್ರಕ್ರಿಯೆಯ ಆರಂಭದ ಶಾಸ್ತ್ರ ನಡೆಯಲಿ ಉಳಿದೆಲ್ಲ ವಿಚಾರಗಳನ್ನೂ ಮುಂದಕ್ಕೆ ಹಾಕೋಣ ಎನ್ನುವುದೇ ಒಂದು ನಿರ್ಧಾರ ಎನ್ನುವ ಮಾತಿಗೆ ನಿದರ್ಶನದಂತಿತ್ತು ಈಗಿನ ಕಸರತ್ತು. ರಾಹುಲ್ ಗಾಂಧಿ ಅವರ ಪ್ರಕಾರ, ಕಾಂಗ್ರೆಸ್ ರಾಜ್ಯದಲ್ಲಿ 28ರಲ್ಲಿ 25 ಲೋಕಸಭೆ ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಅದನ್ನು ಕಳೆದು ಕೊಳ್ಳಬಾರದು ಎಂದಿದ್ದಾರೆ. ಆ ಸಾಧನೆಗೆ ಬೇಕಾದ ಪ್ರಯತ್ನಕ್ಕೆ ಕಾಂಗ್ರೆಸ್ ಸಂಘಟನೆ ಸಿದ್ಧವಾಗಿದೆಯೇ? ಸದ್ಯಕ್ಕೆ ಇದ್ದಂತಿಲ್ಲ, ಆರು ತಿಂಗಳ "ಕಾಯುವಿಕೆ" ಕಾಂಗ್ರೆಸ್ಸಿಗರಲ್ಲಿ ಜೋಬದ್ರತನವನ್ನು ಮೂಡಿಸಿದೆ. ಅವರನ್ನು ಚುರುಕುಗೊಳಿಸಲು ಸಿದ್ದರಾಮಯ್ಯ ಪರಮೇಶ್ವರ ಈಗ ಏನನ್ನಾದರೂ ಮಾಡಲೇಬೇಕು. ಅದಕ್ಕೆ ಕ್ಷೇತ್ರವಾರು ಸಮ್ಮೇಳನಗಳ ಸಂಘಟನೆ ಒಂದು ಒಳ್ಳೆಯ ಸಲಹೆ.
ನಾಯಕರ ಸಂತೃಪ್ತಿ ಪ್ರಯತ್ನ: ಇನ್ನೇನು ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದ ಸಮಯ ಬಂದಿದೆ. ರಾಜಕೀಯವಾಗಿ ಕಾಂಗ್ರೆಸ್ಸಿನಲ್ಲಿ ಯಾವುದೇ ರೀತಿಯ ಬಿಕ್ಕಟ್ಟೂ ಇಲ್ಲ, ಹಿನ್ನಡೆಯೂ ಆಗಿಲ್ಲ. ಆದ್ದರಿಂದ ಎಲ್ಲ ಬಗೆಯ ಸಣ್ಣ ಪುಟ್ಟ ಕಿರಿಕಿರಿಯ ಸಮಸ್ಯೆಗಳ ಪರಿಶೀಲನೆಯನ್ನು ಮುಂದಕ್ಕೆ ಹಾಕುವುದು ಕಷ್ಟವೇನೂ ಅಲ್ಲ. ಅದನ್ನು ಬಿಟ್ಟರೆ, ಉಳಿದಿರುವ ಒಂದು ನಿರಂತರ ಸಮಸ್ಯೆ ಎಂದರೆ, ಪ್ರಭಾರಿ ಕಾರ್ಯಕರ್ತರಿಗೆ, ಶಾಸಕರಿಗೆ, ಯಾವುದಾದರೊಂದು ರೀತಿಯಲ್ಲಿ ಸಂತೃಪ್ತಿಯನ್ನು ಒದಗಿಸುವುದು.
ಅದಕ್ಕೆ ಈಗ ನಾಯಕರ ಬತ್ತಳಿಕೆಯಲ್ಲಿ ಇರುವುದು ಒಂದೇ ಒಂದು ಉಪಾಯ. ಬೋರ್ಡು, ನಿಗಮ, ಮಂಡಳಿಗಳಲ್ಲಿ ಅಧ್ಯಕ್ಷರು, ನಿರ್ದೇಶಕರ ನೇಮಕ. ಇಲ್ಲೇ ಬರುವುದು ತಕರಾರು. ನೂರಾರು ಜನರ ಆಯ್ಕೆ ಎಂದರೆ ದೊಡ್ಡ ತಲೆನೋವೇ. ವಿಳಂಬ ಮಾಡಿದಷ್ಟೂ ಸಮಸ್ಯೆ ಹೆಚ್ಚು ಹೆಚ್ಚು ಕಗ್ಗಂಟಾಗುತ್ತದೆ. ಜಾತಿ, ಪ್ರದೇಶ, ಹಿಂದಿನ ಚರಿತ್ರೆ, ಈಗಿನ ಉಪಯುಕ್ತತೆ, ವಿಶ್ವಾಸಾರ್ಹತೆ ಎಲ್ಲವನ್ನೂ ನೋಡಿ ವ್ಯಕ್ತಿಗಳನ್ನು ಆರಿಸಬೇಕು. ಒಬ್ಬರನ್ನು ಆರಿಸಿದರೆ ಕನಿಷ್ಠ ಐವರು ಅತೃಪ್ತರು ಹುಟ್ಟಿಕೊಳ್ಳುತ್ತಾರೆ. ಅದನ್ನು ನಿಭಾಯಿಸುವುದೇ ರಾಜಕೀಯ ತಂತ್ರಗಾರಿಕೆಯ ಪರೀಕ್ಷೆ. ವಾಸ್ತವದಲ್ಲಿ ಜನರ ದೃಷ್ಟಿಯಲ್ಲಿ ಈ ನಿಗಮಗಳ ಅಗತ್ಯ ನಿಜವಾಗಿಯೂ ಇಲ್ಲ. ಒಂದು ಕಾಲದಲ್ಲಿ ವಿಶಿಷ್ಟವಾದ ಉದ್ದೇಶಕ್ಕೆ ಬ್ಯಾಂಕ್‌ಗಳು ಸರ್ಕಾರಕ್ಕೆ ಸಾಲ ಕೊಡುವುದಕ್ಕೆ ನಿಷೇಧ ಇದ್ದಾಗ, ಸ್ವಾಯತ್ತ ನಿಗಮಗಳ ಮೂಲಕ ಬ್ಯಾಂಕ್ ನೆರವು ಪಡೆಯಲು ಉದ್ದೇಶಿಸಿದ್ದು ನಿಜ. ಆಗ ವಿದ್ಯುತ್ ಮಂಡಳಿ, ಸಾರಿಗೆ ಸಂಸ್ಥೆ, ಔದ್ಯಮಿಕ ಸಾಲ ನೀಡಿಕೆ ನಿಗಮಗಳೂ ಖಾಸಗಿ (ಆಳುವ ಪಕ್ಷದ ಮುಖಂಡರು) ವ್ಯಕ್ತಿಗಳ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಆ ವ್ಯವಸ್ಥೆಯಲ್ಲಿ ಕಂಡು ಬಂದ ಅವಾಂತರಗಳ ಅನಂತರ ಎಲ್ಲ ಕಡೆ ಅಧಿಕಾರಿಗಳನ್ನೇ ನೇಮಿಸುವ ಪದ್ಧತಿ ಜಾರಿಗೆ ಬಂದಿದೆ. ಈಗ ಈ ನಿಗಮಗಳು ಒಂದು ಅಗತ್ಯ - ಅನಿವಾರ್ಯವಾದ ಪೀಡೆಗಳು ಎನಿಸಿವೆ.
ಬಿಜೆಪಿಯ ತೊಳಲಾಟ: ಭಾರತೀಯ ಜನತಾ ಪಾರ್ಟಿಗೆ ಈಗ ಯಾವುದೇ ರೀತಿಯ ರಾಜಕೀಯ ಕಾರ್ಯಕ್ರಮ ಇದ್ದಂತಿಲ್ಲ. ಚುನಾವಣೆಯಲ್ಲಿ ಹೀನಾಯವಾಗಿ ಸೋತ ಅನಂತರ, ಇನ್ನೇನನ್ನು ಮಾಡಲಿಕ್ಕೆ ಆಗದಿದ್ದರೂ ಪಕ್ಷದ ಸ್ಥಿತಿಗತಿಗಳ ಪರಿಶೀಲನೆ, ಸಾಧ್ಯವಾದರೆ ನೂತನ ಸನ್ನಿವೇಶಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಪುನಾರಚನೆಯ ಪ್ರಯತ್ನವಾದರೂ ಆಗಬೇಕಾಗಿತ್ತು, ಆಗಿಲ್ಲ. ಚುನಾವಣೆಯಲ್ಲಿ ಸೋತ ಅನಂತರವೂ ಪಕ್ಷದ ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರೇನರ್ಥ? ಹಿಂದೆ ಮಂತ್ರಿಗಳಾಗಿದ್ದವರು, ಶಾಸಕರಾಗಿದ್ದವರಲ್ಲಿ ಬಹುಮಂದಿ ನಿಷ್ಕ್ರಿಯರಾಗಿದ್ದಾರೆ. ಪಕ್ಷ ಯಾವುದಾದರೊಂದು ರೀತಿಯ ಕಾರ್ಯಕ್ರಮವನ್ನು ಪ್ರಕಟಿಸಿದರೆ ತಾನೆ ಕಾರ್ಯಕರ್ತರು ಏನಾದರೂ ಮಾಡುವುದು? ಪ್ರದೇಶ ಸಮಿತಿ ಈ ವಿಚಾರದಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ವಿಫಲವಾಗಿದೆ. ಎಲ್ಲವನ್ನೂ ಪ್ರದೇಶ ಸಮಿತಿಯ ನಾಯಕತ್ವವೇ ನಿಭಾಯಿಸಬೇಕು, ಅಂತಹ ಸಮರ್ಥರು ಅಲ್ಲಿ ಈಗ ಇಲ್ಲ. ಆಡಳಿತದ ಸುಖದ ಅನುಭವ ಅದರ ರಕ್ತವನ್ನು ತೆಳುವಾಗುವಂತೆ ಮಾಡಿದೆ. ಹೋರಾಟದ ಮಾತೇ ಇಲ್ಲ.
ಯಡಿಯೂರಪ್ಪ ಏನ್ಮಾಡ್ತಾರೆ?: ರಾಜ್ಯ ಬಿಜೆಪಿಯ ಈಗಿನ ಸಮಸ್ಯೆ ಎಂದರೆ, ಯಾವ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಯಡಿಯೂರಪ್ಪ ಅವರ ಮುಂದಿನ ಕ್ರಮಕ್ಕಾಗಿ ಕಾಯಬೇಕು. ಈಗ ಅವರು ನೇರವಾಗಿ ಮಾತನಾಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಪ್ರಚಾರ ಮಾಧ್ಯಮಕ್ಕೆ ತಮ್ಮ ಅನುಯಾಯಿಗಳ ಮೂಲಕ (ಆತ್ಮೀಯರು ಅನ್ನಿ) ಏನೇನೋ ಹೇಳಿ ಕಳುಹಿಸಿ, ಅನಂತರ ಅದಕ್ಕೆ ಪ್ರಚಾರ ಸಿಕ್ಕಾಗ ಹಾಗಲ್ಲ - ಹೀಗೆ ಎನ್ನುವ ವಿವರಣೆಯೂ ಅದೇ ರೀತಿಯಲ್ಲಿ ಸಿಗಬೇಕು. ಆ ವ್ಯವಸ್ಥೆ ಜಾರಿಗೆ ಬಂದಂತಿದೆ. ಯಡಿಯೂರಪ್ಪ ಅವರ ಅಭಿಪ್ರಾಯ ಈಗ ಪ್ರಕಟವಾಗುತ್ತಿರುವುದು ಬಲ್ಲ ಮೂಲಗಳ ಮೂಲಕ. ಅವರ ಆತ್ಮೀಯರು ತಿಳಿಸುವ ವಿಚಾರಗಳೇ ಗಂಭೀರ ರಾಜಕೀಯ ವಿಶ್ಲೇಷಣೆಗೆ ಆಧಾರ. ವಾಸ್ತವದಲ್ಲಿ ಸ್ಥಿತಿ ಏನು?
ರಾಜ್ಯ ಮಟ್ಟದ ನಾಯಕರಲ್ಲಿ ಹಿಂದಿನ ವಿರೋಧ, (ಯಡಿಯೂರಪ್ಪ ಪ್ರವೇಶಕ್ಕೆ) ಈಗ ಇಲ್ಲ. ಅವರಿಗೆ ಯಡಿಯೂರಪ್ಪ ಬೇಕು. ಈಗಲೇ ಬಂದರೆ, ಆ ಘಟನೆಯೇ ಪಕ್ಷದಲ್ಲಿ ಹೊಸ ಉತ್ಸಾಹವನ್ನು ಚಿಮ್ಮಿಸಬಹುದು. ಆದರೆ ಪಕ್ಷದ ಕೇಂದ್ರ ನಾಯಕರಿಗೆ ಒಂದು ಪೇಚು; ಈಗ ಯಡಿಯೂರಪ್ಪ ಅವರು ಸೇರಿಕೊಂಡರೆ, ಮುಂದೆ ಯಾವುದಾದರೂ ಹಳೆಯ ಹಗರಣಗಳ ಭೂತ ಕಾಡುವಂತಾದರೆ ಅದನ್ನು ಎದುರಿಸುವುದು ಹೇಗೆ? ಆ ಭೀತಿಯನ್ನು ನಿವಾರಿಸುವುದು ಸಾಧ್ಯವೇ ಇಲ್ಲ. ರಾಜಕೀಯ ಅಂದ್ರೆ ಅದೇ.
ದೇವೇಗೌಡರ ಮಹತ್ವಾಕಾಂಕ್ಷೆ: ಈಗ ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಗ್ರೇಸರ ದೇವೇಗೌಡರು ತಮ್ಮ ಪಕ್ಷದ ಎಲ್ಲ ವ್ಯವಹಾರದ ನಿರ್ಣಯದ ಅಧಿಕಾರವನ್ನೂ ತಾವೇ ಪಡೆದುಕೊಂಡಿದ್ದಾರೆ, ಪಕ್ಷದ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಅವರೇ ನೇಮಿಸಿದ ಸೋಮಣ್ಣ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅವರೆಲ್ಲರೂ ನಿಮಿತ್ತ ಮಾತ್ರ ಎನ್ನುವಂತೆ ಆಗಿದ್ದಾರೆ.
ರಾಜ್ಯದಲ್ಲಿ ಈಗ ತೃತೀಯ ರಂಗ ಎಂದರೆ ಜಾತ್ಯತೀತ ಜನತಾದಳ ಮಾತ್ರ. ಉಳಿದ ಪಕ್ಷಗಳ ಹೆಸರುಗಳನ್ನು ಚಪಲಕ್ಕೆ ಹೇಳಬೇಕು ಅಷ್ಟೇ. ಮೂರನೆಯ ರಂಗದ ಮಾತು ರಾಜ್ಯದಲ್ಲಿ ಯಾರಿಗೂ ಬೇಡ. ಆದರೆ ದೇವೇಗೌಡರಿಗೆ ರಾಷ್ಟ್ರೀಯ ಪ್ರತಿಷ್ಠೆಯ ರಕ್ಷಣೆ, ಅಥವಾ ರಾಷ್ಟ್ರೀಯ ಮಹತ್ವಾಕಾಂಕ್ಷೆ ಮುಖ್ಯವಾಗಿರುವಂತಿದೆ.
ರಾಜ್ಯದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳಕ್ಕೆ ದೊಡ್ಡ ಪಾತ್ರವೇನೂ ಇಲ್ಲ. ಕೇಂದ್ರದ ಸಿಂಹಾಸನದಲ್ಲಿ ಕೂಡಲು ಬಯಸಿರುವ ಮುಲಾಯಂ ಸಿಂಗ್ ಯಾದವ್ ಅವರೇ ಮುಂದಿನ ಹೆಜ್ಜೆ ಇಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸದ್ಯಕ್ಕೆ ಅವರದ್ದು ಇಬ್ಬಂದಿಯ ನೀತಿ. ದೇವೇಗೌಡರ ಪಾಲಿಗೆ ಇದು ನುಂಗಲಾರದ ತುತ್ತು.
ಕಿಡಿಗೇಡಿತನ- ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರ ರ್ಯಾಲಿಯ ಪ್ರಚಾರ ಭರ್ಜರಿಯಾಗಿತ್ತು. ಆದರೆ ಅವರು ಊರಿಗೆ ಹೋದ ಮರುದಿನ ಮೋದಿ ಭಾಷಣದಲ್ಲಿನ ಬಹುಮುಖ್ಯವಾದ ಅಂಶ ಯಾವುದು ಎಂದು ಕೇಳಿದಾಗ ಬಹುಜನರು ತಬ್ಬಿಬ್ಬಾದರು. ಅವರ ಭೇಟಿ ಬೀಸಿ ಹೋದ ಬಿರುಗಾಳಿಯಂತಿತ್ತು.
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

