ಮೋದಿಯ ಗಾಂಭೀರ್ಯ ಸೂತ್ರ ಹಾಗೂ ಉದಾಸೀನದ ಅಸ್ತ್ರ!
ಒಬ್ಬ ರಾಜಕಾರಣಿ ತನ್ನ ಪ್ರೌಢಿಮೆಯನ್ನು ಸಂದರ್ಭಕ್ಕೆ ಅನುಗುಣವಾಗಿ ಹೇಗೆ ಬಳಸಿ...

ರಾಜಕೀಯದಲ್ಲಿ ತಂತ್ರ-ಪ್ರತಿತಂತ್ರ ಸರ್ವೇ ಸಾಮಾನ್ಯ. ಕೆಲವೊಮ್ಮೆ ಕುತಂತ್ರವೂ ನುಸುಳಿ ಬಿಡುತ್ತದೆ. ಆದರೆ ಎಲ್ಲರೂ, ಎಲ್ಲಾ ಬಾರಿಯೂ ತಂತ್ರಗಾರಿಕೆ ಹೆಣೆಯುವುದರಲ್ಲಿ ಯಶಸ್ವಿ ಆಗಿಬಿಡುತ್ತಾರೆ ಎಂದೇನೂ ಇಲ್ಲ. ಎಣಿಕೆಗಳು ಕೈಕೊಟ್ಟು ಕುಣಿಕೆಯಲ್ಲಿ ಸಿಕ್ಕಿಸಿಬಿಡುತ್ತವೆ. ಲೆಕ್ಕಾಚಾರಗಳು ತಲೆಕೆಳಗಾಗಿ ಕೈ ಕೈ ಹಿಸುಕಿಕೊಳ್ಳುವಂತೆ ಮಾಡುತ್ತವೆ. ಎದುರಾಳಿಯ ಆಂತರ್ಯಕ್ಕೆ ಇಳಿದು ರಣತಂತ್ರ ರೂಪಿಸುವವನು ಮಾತ್ರ ಯಶಸ್ವಿ ಆಗುತ್ತಾನೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬೆಂಗಳೂರು ರ್ಯಾಲಿಯಲ್ಲಿ ಮಾಡಿದ ಭಾಷಣದ ತಿರುಳನ್ನು ಎಳೆ ಎಳೆಯಾಗಿ ಬಿಡಿಸಿದಾಗ ಮೇಲಿನ ಟಿಪ್ಪಣಿ ತನ್ನಿಂತಾನೆ ತೆರೆದುಕೊಳ್ಳುತ್ತದೆ. ಜತೆಗೆ ಒಬ್ಬ ರಾಜಕಾರಣಿ ತನ್ನ ಪ್ರೌಢಿಮೆಯನ್ನು ಸಂದರ್ಭಕ್ಕೆ ಅನುಗುಣವಾಗಿ ಹೇಗೆ ಬಳಸಿಕೊಳ್ಳಬಹುದು, ಹೇಗೆ ಮೆರೆಸಬಹುದು, ಹೇಗೆ ಅದರಲ್ಲಿ ಎದುರಾಳಿಗಳನ್ನು ಕಟ್ಟಿಹಾಕಿ ಉಸಿರಾಡದಂತೆ ಮಾಡಬಹುದು ಎಂಬುದನ್ನು ಶ್ರುತಪಡಿಸುತ್ತದೆ.
ಮೂಢನಂಬಿಕೆ ಪ್ರತಿಬಂಧಕ ವಿಧೇಯಕ, ಶಾದಿಭಾಗ್ಯ, ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ದರ್ಶನ, ಅನ್ನ ಭಾಗ್ಯ ಮತ್ತಿತರ ವಿವಾದಾತ್ಮಕ ಯೋಜನೆಗಳ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹಾಗೂ ತಮ್ಮ ಸರ್ಕಾರದ ಮೇಲೂ ಇಂಥದ್ದೇ ಪ್ರಹಾರ ನಡೆಯಬಹುದು ಎಂದು ನಿರೀಕ್ಷಿಸಿದ್ದರು. ಪ್ರತಿಪಕ್ಷಗಳಿಗೆ ಇಷ್ಟೆಲ್ಲ ಅಸ್ತ್ರಗಳನ್ನು ಕೊಟ್ಟಿರುವಾಗ ಮೋದಿಯವರು ತಮ್ಮ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳದೆ ಬಿಡುತ್ತಾರೆಯೇ ಎಂದುಕೊಂಡರು. ಅವರು ಇಷ್ಟೆಲ್ಲಾ ಲೆಕ್ಕಾಚಾರ ಹಾಕಿದರಾದರೂ, ಕಾಯ್ದು ನೋಡುವ ತಂತ್ರ ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತೇನೋ? ಆದರೆ ಎದುರಾಳಿ ತಮ್ಮ ಮೇಲೆ ಎರಗುವ ಮುನ್ನ ತಾವೇ ಮೊದಲು ದಾಳಿ ನಡೆಸಿಬಿಡುವುದು ರಾಜಕೀಯ ಜಾಣ್ಮೆ ಎಂದು ಎಣಿಸಿಬಿಟ್ಟರು. ಅವರೇ ಹಾಗೆಂದುಕೊಂಡರೋ ಅಥವಾ ಅವರ ಸುತ್ತಮುತ್ತಲಿನ ಆಪ್ತ ಮಿತ್ರರು ಈ ಸಲಹೆಯನ್ನು ಕೊಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ, ಮೋದಿ ಬೆಂಗಳೂರಿಗೆ ಬರುವ ಮೊದಲೇ ಅವರ ಮೇಲೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿಬಿಟ್ಟರು.
'ರ್ಯಾಲಿ ಘೋಷಣೆ', 'ಭಾರತ ಗೆಲ್ಲಿಸಿ' ಕೂಡ ಸಿದ್ದರಾಮಯ್ಯ ಲೇವಡಿ ವಸ್ತುವಾಯಿತು. "ಅದೇನು ಕ್ರಿಕೆಟ್ ಮ್ಯಾಚಾ, ಇಲ್ಲಾ ಹಾಕಿ ಪಂದ್ಯಾನಾ ಗೆಲ್ಲಿಸೋಕೆ? ಕರ್ನಾಟಕದಲ್ಲಿ ಮೋದಿ ಆಟ ನಡೆಯಾಕಿಲ್ಲ. 28 ಲೋಕಸಭಾ ಕ್ಷೇತ್ರಗಳಲ್ಲೂ ನಾವೇ ಗೆಲ್ತೀವಿ" ಅಂತ ಹೇಳಿದ್ದಷ್ಟೇ ಅಲ್ಲದೆ ಮೋದಿಯವರನ್ನು ನರಹಂತಕ, ಕೋಮುವಾದಿ ಎಂದೂ ಜರಿದರು. "ನನ್ನ ಹಾಗೆ ಮೋದಿ ಕೂಡ ಒಂದು ರಾಜ್ಯದ ಮುಖ್ಯಮಂತ್ರಿ ಅಷ್ಟೆ, ಆದರೆ ರಾಷ್ಟ್ರೀಯ ನಾಯಕನಾಗುವ ಕನಸು ಕಾಣುತ್ತಿದ್ದಾರೆ. ಅದು ಬರಿ ಹಗಲುಗನಸಾಗುತ್ತದೆ" ಎಂದೆಲ್ಲಾ ಟೀಕಿಸಿಬಿಟ್ಟರು.
ಸಿದ್ದರಾಮಯ್ಯ ಅವರು ಈ ರೀತಿ ವಾಗ್ದಾಳಿ ನಡೆಸಲು ಇನ್ನೂ ಒಂದು ಕಾರಣವಿದೆ. ಮೌಢ್ಯ ಪ್ರತಿಬಂಧಕ ವಿಧೇಯಕ, ಶಾದಿ ಭಾಗ್ಯ, ಅನ್ನ ಭಾಗ್ಯ, ಪ್ರವಾಸ ಭಾಗ್ಯ ಮತ್ತಿತರ ವಿವಾದಾತ್ಮಕ ಯೋಜನೆಗಳ ಕುರಿತು ಮಾಧ್ಯಮಗಳಲ್ಲಿ ಬಂದ ಟೀಕಾತ್ಮಕ ವರದಿಗಳ ಬಗ್ಗೆ ಮೋದಿ ಮಾಹಿತಿ ತರಿಸಿಕೊಂಡಿದ್ದಾರೆ, ಅವುಗಳನ್ನಾಧರಿಸಿ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲಿದ್ದಾರೆ ಎಂಬ ಊಹಾತ್ಮಕ ಸುಳಿವನ್ನು ಆಪ್ತವಲಯ ಸಿದ್ದರಾಮಯ್ಯ ಅವರ ಕಿವಿಗೆ ದಾಟಿಸಿತ್ತು. ಇದನ್ನು ನಂಬಿದ ಸಿದ್ದರಾಮಯ್ಯ ರ್ಯಾಲಿಯ ಮುನ್ನಾ ದಿನ ಮೋದಿಯವರ ಮೇಲೆ ವಾಗ್ದಾಳಿ ನಡೆಸಿಬಿಟ್ಟರು.
ಆದರೆ ಆದದ್ದಾದರೂ ಏನು? ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆದುದನ್ನು ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪ್ರಸ್ತಾಪಿಸಿದ್ದು ಬಿಟ್ಟರೆ ಮೋದಿಯವರು ರಾಜ್ಯ ಸರ್ಕಾರದ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನಾಗಲಿ ಅಥವಾ ಅವರ ಸರ್ಕಾರದ ವಿವಾದಾತ್ಮಕ ಯೋಜನೆಗಳ ಬಗ್ಗೆಯಾಗಲಿ ಅಪ್ಪಿತಪ್ಪಿಯೂ ತುಟಿ ಬಿಚ್ಚಲಿಲ್ಲ. ಕಡೆಗೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರ ಹೆಸರನ್ನೂ ಪ್ರಸ್ತಾಪಿಸಲಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪರೋಕ್ಷವಾಗಿ 'ಮೌನ, ಮೌನ, ಮೌನ' ಎಂದು ಮೂರು ಬಾರಿ ಟೀಕಿಸಿದ್ದು ಬಿಟ್ಟರೆ ನೇರವಾಗಿ ಅವರ ಹೆಸರನ್ನೂ ಹೇಳಲಿಲ್ಲ.
ಸಿದ್ದರಾಮಯ್ಯ ಹಿಂದಿನ ದಿನ ಮಾಡಿದ್ದ ವೀರಾವೇಶದ ಟೀಕೆಗೆ ನಿರ್ಲಕ್ಷ ಭಾವವನ್ನು ಪ್ರದರ್ಶಿಸುವ ಮೂಲಕ ಉತ್ತರ ನೀಡಿದರು ಮೋದಿ. ವೈರಿಗಳನ್ನು ಟೀಕಿಸುವಾಗ ಮಾತುಗಳನ್ನು ಆಡಲೇಬೇಕು ಎಂದೇನೂ ಇಲ್ಲ. ಉದಾಸೀನದ ಮೂಲಕವೂ ಪ್ರಖರ ಪ್ರತಿಕ್ರಿಯೆ ನೀಡಬಹುದು ಎಂಬುದನ್ನು ನಿರೂಪಿಸಿಬಿಟ್ಟರು. ಉದ್ದೇಶಪೂರ್ವಕವಾಗಿಯೇ ಪ್ರದರ್ಶಿಸಿದ ಈ ನಡೆಯನ್ನು ರಾಜಕೀಯ ಪ್ರೌಢಿಮೆ ಅಂತಲೂ ಕರೆಯಬಹುದು.
ಹೌದು, ಒಂದೊಮ್ಮೆ ಮೋದಿಯವರು ಸಿದ್ದರಾಮಯ್ಯ ಮಾಡಿದ್ದ ಟೀಕೆಗಳಿಗೆ ಪ್ರತಿ ವಾಗ್ದಾಳಿ ನಡೆಸಿದ್ದರು ಎಂದಿಟ್ಟಿಕೊಳ್ಳಿ, ಆಗ, ಎದುರಾಳಿಗಳು ಇದನ್ನೇ ಮುಂದಿಟ್ಟುಕೊಂಡು ಅವರ ಮೇಲೆ ನಿಸ್ಸಂಶಯವಾಗಿಯೂ ಮುಗಿಬೀಳುತ್ತಿದ್ದರು. ಆದರೆ ಈಗ..? ಎದುರಾಳಿಗಳಿಗೆ ಪ್ರತಿ ದಾಳಿ ನಡೆಸಲು ಅಸ್ತ್ರವೂ ಇಲ್ಲ, ಅವಕಾಶವೂ ಇಲ್ಲ! ಮೌನವಾಗಿಯೇ ಅವರೆಲ್ಲರ ಬಾಯಿ ಮುಚ್ಚಿಸಿಬಿಟ್ಟಿದ್ದಾರೆ ಮೋದಿ. ಅಷ್ಟೇ ಅಲ್ಲ, ಸಿದ್ದರಾಮಯ್ಯ ತಮ್ಮ ಬಗ್ಗೆ ಆಡಿದ ಮಾತುಗಳು, ಮಾಡಿದ ಟೀಕೆಗಳು ಪ್ರತಿಕ್ರಿಯೆಗೂ ಅನರ್ಹ ಎಂಬುದನ್ನು ಸಾರಿದ್ದಾರೆ. ಕೆಲವು ಸಂದರ್ಭಗಳಲ್ಲಿ ಉದಾಸೀನವೇ ಮದ್ದು ಎಂದು ಹೇಳುವುದು ಇದಕ್ಕೇ ಇರಬಹುದೇನೊ?
ಹಾಗೆ ನೋಡಿದರೆ ಮೋದಿಯವರು ಗಂಟೆಗೂ ಹೆಚ್ಚು ಕಾಲ ಮಾಡಿದ ಭಾಷಣದಲ್ಲಿ ಕೇಂದ್ರ ಸರ್ಕಾರ ಹಾಗೂ ಅದರ ಕಾರ್ಯ ವೈಖರಿಯನ್ನು ಟೀಕಿಸಿದರೇ ಹೊರತು, ಅದರಲ್ಲಿ ವ್ಯಕ್ತಿಗತ ನಿಂದನೆಯಾಗಲಿ, ದ್ವೇಷ ಅಸೂಯೆಯಾಗಲಿ, ಲೇವಡಿಯಾಗಲಿ, ಪಾಂಡಿತ್ಯ ಪ್ರದರ್ಶನವಾಗಲಿ ಇರಲಿಲ್ಲ. ಹೇಳಬೇಕಾದ್ದನ್ನು ನೇರವಾಗಿಯೇ ಹೇಳಿದರು. ಏನು ಮಾಡಬಾರದಿತ್ತು, ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಏನು ಮಾಡಬಹುದಿತ್ತು, ಏನು ಮಾಡಬಹುದು ಎಂಬುದನ್ನು ಉದಾಹರಣೆ ಸಮೇತ ವಿವರಿಸಿದರು. ರಾಜಕಾರಣಿಗಳು ಹೇಗೆ ಭಾಷಣ ಮಾಡಬಹುದು, ಹೇಗೆ ಭಾಷಣ ಮಾಡಬಾರದು ಎಂಬುದಕ್ಕೆ ಅವರ ನುಡಿಶೈಲಿ ಸಾಕ್ಷಿಯಾಗಿತ್ತು. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.
ನಿಜ, ಒಬ್ಬರನ್ನು ಮತ್ತೊಬ್ಬರು ಏಕವಚನದಲ್ಲಿ ಜರೆಯುವುದು, ತೊಡೆತಟ್ಟಿ ನಿಲ್ಲುವುದು, ಧ್ವನಿಯೇರಿಸಿ ದಾಳಿ ನಡೆಸುವುದು, ಸವಾಲು ಹಾಕುವುದು ಭಾಷಣದ ಪ್ರಭುತ್ವ ಎನಿಸಿಕೊಳ್ಳುವುದಿಲ್ಲ. ಬದಲಿಗೆ, ಬಾಯಿಗೆ ಬಂದಂತೆ ಮಾತನಾಡುವವರ ವ್ಯಕ್ತಿತ್ವ ಬೆತ್ತಲಾಗುತ್ತಾ ಹೋಗುತ್ತದೆ. ಎದುರಾಳಿಯ ಬಣ್ಣ ಬಯಲು ಮಾಡುವ ಭರದಲ್ಲಿ ತನ್ನ ಬಣ್ಣ ಕಳೆದುಕೊಳ್ಳುತ್ತಾ ಹೋಗುತ್ತಾನೆ. ಒಮ್ಮೊಮ್ಮೆ ಅದು ಮಸಿಯಾಗಿಯೂ ಪರಿವರ್ತನೆಯಾಗಬಹುದು!
ಇತ್ತೀಚೆಗೆ ಕರ್ನಾಟಕದಲ್ಲಿ ನಾನಾ ರಾಜಕೀಯ ಪಕ್ಷಗಳ ನಾಯಕರ ನಡುವಣ ವಾಗ್ವಿನಿಮಯ ಇದಕ್ಕೊಂದು ನಿರ್ದಶನ. ಗಣಿ ವಿವಾದಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ಮೇಲೆ ಸಿದ್ದರಾಮಯ್ಯ ಮಾಡಿದ ಟೀಕೆ, ಪ್ರತಿಯಾಗಿ ಅವರಿಬ್ಬರೂ ಸಿದ್ದರಾಮಯ್ಯ ಮೇಲೆ ಏಕವಚನದಲ್ಲಿ ನಡೆಸಿದ ವಾಗ್ದಾಳಿ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಣ ಮಾತಿನ ಜಟಾಪಟಿ, ಇಷ್ಟೇ ಅಲ್ಲದೆ ಸ್ವಲ್ಪ ಹಿಂದಕ್ಕೆ ಹೋಗಿ ನೋಡಿದರೆ ವಿಧಾನಸಭೆ ಅಧಿವೇಶನದಲ್ಲಿ ಬಳ್ಳಾರಿ ರೆಡ್ಡಿ ಸಹೋದರರು ಹಾಗೂ ಅಂದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವಣ ವಾಗ್ಯುದ್ಧಗಳಿಗೆ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ. ಅವರು ಬಳಸಿದ ಭಾಷೆ, ಪ್ರಯೋಗಿಸಿದ ಪದಗಳು, ರಾಜಕೀಯವೇ ನಾಚಿ ನೀರಾಗಿ ತಲೆ ತಗ್ಗಿಸುವಂತೆ ಮಾಡಿತ್ತು. ಇಂಥ ಕೆಟ್ಟ ನಿದರ್ಶನಗಳು ಸ್ಮೃತಿಪಟಲದಿಂದ ಮರೆಯಾಗುವ ಮೊದಲು ಮೋದಿಯವರು ಮಾಡಿದ ಭಾಷಣ, ಅದರ ಸ್ವರೂಪ ರಾಜಕೀಯ ಪ್ರಬುದ್ಧತೆಗೊಂದು ಸಂಕೇತ.
ಇಂಥದ್ದೇ ಪ್ರಬುದ್ಧತೆಯನ್ನು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಮತ್ತು ರಾಮಕೃಷ್ಣ ಹೆಗಡೆಯವರಲ್ಲಿ ನೋಡಬಹುದಾಗಿತ್ತು. ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವಾಗಲಾಗಲಿ ಅಥವಾ ವಿಧಾನಸಭೆಯ ಒಳ-ಹೊರಗೆಯೇ ಇರಲಿ, ಎದುರಾಳಿಗಳನ್ನು ಟೀಕಿಸುವಾಗ ಅವರೆಂದಿಗೂ ಸಂಯಮ ಮೀರಿದವರಲ್ಲ. ಒಂದೊಂದು ಪದವನ್ನು ಅಳೆದು ತೂಗಿ ಪ್ರಯೋಗಿಸುತ್ತಿದ್ದರು. ಅವರ ಟೀಕೆಗಳಿದ್ದ ಪದಾಸ್ತ್ರಗಳು ಎದುರಾಳಿಗಳನ್ನು ಹಿತವಾಗಿಯೇ ಚುಚ್ಚುತ್ತಿದ್ದವು. ಅವರ ಉದ್ದೇಶವೂ ಫಲಿಸುತ್ತಿತ್ತು. ಹೇಗೆ ಮಾತನಾಡಬೇಕು ಎನ್ನುವುದಕ್ಕೆ ಇಂಥ ನಾಯಕರು ಮಾದರಿಯಾದರೆ, ಇನ್ನೂ ಕೆಲವು ನಾಯಕರಂತೂ ಹೇಗೆ ಮಾತನಾಡಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಇಂಥವರ ಪಟ್ಟಿಗೆ ತಮ್ಮ ಹೆಸರು ಸೇರಬೇಕೆಂದು ಮುಖ್ಯಮಂತ್ರಿಗಳು ಬಯಸಿದ್ದಾರೆಯೇ?
ಸಾರ್ವಜನಿಕ ಜೀವನದಲ್ಲಿರುವವರ ಪ್ರತಿಯೊಂದು ಚಲನವಲನಗಳನ್ನೂ ಜನತೆ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿರುತ್ತಾರೆ. ಈ ಸೂಕ್ಷ್ಮ ಸಂಗತಿಯ ಅರಿವು ನಾಯರಲ್ಲಿ ಇರಬೇಕು. ಇತ್ತ ಮೋದಿಯವರ ಮಾತಿನಲ್ಲಿ ರಾಷ್ಟ್ರೀಯ ನಾಯಕನೊಬ್ಬನಿಗೆ ಇರಬೇಕಾದ ಗಾಂಭೀರ್ಯ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಚಪ್ಪಾಳೆ ಗಿಟ್ಟಿಸಿಕೊಳ್ಳುವ ಚಪಲಕ್ಕೆ ಬಿದ್ದು ನಾಲಗೆಯನ್ನು ಅವರು ಹರಿಬಿಡಲಿಲ್ಲ, ಬೆಂಕಿಯನ್ನು ಉಗುಳಲಿಲ್ಲ, ಅವರ ಮಾತಿನಲ್ಲಿ ರೋಷಾವೇಷ ಇಣುಕಲಿಲ್ಲ. ಪ್ರಧಾನಿ ಅಭ್ಯರ್ಥಿಗೆ ಇರಬೇಕಾದ ವರ್ಚಸ್ಸನ್ನು ಅವರು ಕಾಪಾಡಿಕೊಂಡರು. ಟೀಕೆಗೋಸ್ಕರ ಅವರು ಟೀಕೆ ಮಾಡಲಿಲ್ಲ. ಆ ಟೀಕೆಯಲ್ಲೂ ಸಂಯಮ, ಪ್ರಬುದ್ಧತೆ, ಸಮಚಿತ್ತ ಎದ್ದು ಕಾಣುತ್ತಿತ್ತು. ಕೇಂದ್ರ ಸರ್ಕಾರವನ್ನು ಟೀಕಿಸುವಾಗಲೂ ಆ ಟೀಕೆಯಲ್ಲಿ ರಚನಾತ್ಮಕ ಸಲಹೆಗಳು, ಸೂಚನೆಗಳು ಇದ್ದವು.
ಆದರೂ ಕರ್ನಾಟಕಕ್ಕೆ ಬಂದು ಸ್ಥಳೀಯ ಯೋಜನೆಗಳ ವಿಮರ್ಶೆ ಮಾಡದೇ ಹೋದರಲ್ಲ ಎನ್ನುವವರು ಗಮನಿಸಬೇಕೆರುವುದೇನೆಂದರೆ ಮೋದಿಯವರಿಗೆ ತಮ್ಮ ಗುರಿ ಯಾವುದು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ತನ್ನ ಗುರಿಯೆಡೆಗೆ ಜನಕೋಟಿಯ ಸಹಮತ ಮೂಡಿಸುವುದು, ತಾವು ಧೇನಿಸುತ್ತಿರುವುದನ್ನೇ ಜನಸಾಮಾನ್ಯರ ಧ್ಯಾನವನ್ನಾಗಿ ಮಾಡುವುದು ಅವರ ಇರಾದೆ. ಹೀಗಾಗಿಯೇ ಲೋಕಸಭೆ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ರಾಷ್ಟ್ರದ ಉದ್ದಗಲ ಪ್ರಯಾಣಿಸಿ ರ್ಯಾಲಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಬಿಜೆಪಿ ಹಾಗೂ ತಮ್ಮ ನಾಯಕತ್ವ ಹೇಗೆ ಪರ್ಯಾಯವಾಗಲಿದೆ ಎಂಬ ವಾದಸರಣಿ ಕಟ್ಟುತ್ತಿದ್ದಾರೆ. ಇದರ ಒಂದು ಭಾಗ ಕರ್ನಾಟಕ ಪ್ರವಾಸ ಹಾಗೂ ಇಲ್ಲಿನ ಬೃಹತ್ ರ್ಯಾಲಿ. ಹೀಗಿರುವಾಗ ಶಾದಿಭಾಗ್ಯ ಅಥವಾ ಇನ್ಯಾವುದೋ ಯೋಜನೆಯನ್ನು ಟೀಕಿಸುವುದು ಅಥವಾ ಸಿದ್ದರಾಮಯ್ಯ ಇಲ್ಲವೇ ಸ್ಥಳೀಯ ಕಾಂಗ್ರೆಸ್ಸಿಗರ ವಿರುದ್ಧ ಕಿಡಿ ಕಾರುವುದು ಎಂದರೆ ತಾವಾಗಿಯೇ ವಿಷಯಾಂತರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವವರು ಸಿದ್ದರಾಮಯ್ಯ ಸರ್ಕಾರದ ಪರವೋ ವಿರುದ್ಧವೋ ಜನಮತ ನೀಡುವವರಲ್ಲ. ಸಿದ್ದರಾಮಯ್ಯ ಆಡಳಿತದ ಆಗುಹೋಗುಗಳು ಯಕಶ್ಚಿತ ಎಂಬಂತೆ ಪರಿಣಾಮ ಬೀರಬಹುದಷ್ಟೆ. ಹೀಗಾಗಿ ಸ್ಥಳೀಯ ಚರ್ಚೆ ಎಂಬುದು ಚಪ್ಪಾಳೆ ಹೆಚ್ಚಿಸುವುದಕ್ಕೆ ಕಾರಣವಾಗಬಹುದಾದರೂ ಮೋದಿ ಉದ್ದೇಶಿಸಿರುವ ರಾಷ್ಟ್ರೀಯ ಸಹಮತದ ಯತ್ನಕ್ಕೆ ಯಾವ ಕೊಡುಗೆಯನ್ನೂ ಕೊಡುವುದಿಲ್ಲ. ಇವನ್ನೆಲ್ಲ ಅಳೆದು ತೂಗಿಯೇ ಮೋದಿ ಜಾಣ ನಡೆ ಇಟ್ಟಿದ್ದಾರೆ.
ಭಾಷಣ ಜನತೆಯಲ್ಲಿ ಅರಿವು ಮೂಡಿಸುವಂತಿರಬೇಕು, ಎದುರಾಳಿಗೆ ಸಲಹೆ ನೀಡುವಂತಿರಬೇಕು, ಅದು ರಾಜ್ಯವನ್ನು- ರಾಷ್ಟ್ರವನ್ನು ಪ್ರಗತಿಯೆಡೆಗೆ ಕೊಂಡೊಯ್ಯುವ ಆಶಾವಾದದ ಪ್ರತಿಧ್ವನಿಯಾಗಬೇಕು, ಬರೀ ಪಾಂಡಿತ್ಯ ಪ್ರದರ್ಶನಕ್ಕೆ ಅಥವಾ ಅಸಹನೆಯನ್ನು ಅನಾವರಣಗೊಳಿಸುವುದಕ್ಕೆ ಅದು ಸೀಮಿತವಾಗಬಾರದು. ಮಾತಿನ ಮೇಲೆ ಹಿಡಿತ ತಪ್ಪಿದರೆ, ಮತದಾರರ ಮೇಲೂ ಹಿಡಿತ ತಪ್ಪುತ್ತದೆ ಎನ್ನುವ ಸರಳ ಸತ್ಯ ಈಗಲಾದರೂ ನಮ್ಮ ನಾಯಕರಿಗೆ ಅರ್ಥವಾಗಲಿ.
ಲಗೋರಿ: ವಿಧಾನಸಭೆ ಚುನಾವಣೆ ಸಂದರ್ಭ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾಷಣ ಮಾಡಲಾಗದೆ ಮುಖಭಂಗ ಅನುಭವಿಸಿದ್ದ ಅನಂತಕುಮಾರ್, ಮೋದಿ ರ್ಯಾಲಿಯಲ್ಲಿ ವೇದಿಕೆ ಮೇಲಿದ್ದರೂ ಭಾಷಣ ಮಾಡದೆ ರಾಜಕೀಯ ಪ್ರೌಢಿಮೆ ಮೆರೆದಿದ್ದಾರೆ!
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


