ಶಾಸನ ವಿಧಿಸಬಹುದಾದ ಎಚ್ಚರಿಕೆ: ಈ ಕತೆ, 'ವೈಚಾರಿಕತೆ'ಗೆ ಹಾನಿಕಾರಕ
ಆ ಕಾಲಕ್ಕೆ ಭಾರತದ ನಕಾಶೆಯಲ್ಲಿ ಅಸ್ತಿತ್ವ ದಲ್ಲಿದ್ದ ರಾಜ್ಯವೊಂದರ ಆಡಳಿತ ಪ್ರಮುಖ...
ಇಸ್ವಿ 2070.
ಆ ಕಾಲಕ್ಕೆ ಭಾರತದ ನಕಾಶೆಯಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯವೊಂದರ ಆಡಳಿತ ಪ್ರಮುಖನು ಅಧ್ಯಯನ ವರದಿಯೊಂದನ್ನು ಹರವಿ ಕುಳಿತಿದ್ದ. ವ್ಯವಸ್ಥೆ ನುಜ್ಜುಗುಜ್ಜಾಗಿತ್ತು. ನಾಗರಿಕರು ಎಲ್ಲವಕ್ಕೂ ಸರ್ಕಾರದ ಮೇಲೆ ಮುರಿದುಕೊಂಡು ಬೀಳುತ್ತಿದ್ದರು. ಐದು ವರ್ಷಕ್ಕೊಂದು ಸರ್ಕಾರ ಎಂಬುದು ಅದಾಗಲೇ ಇತಿಹಾಸದ ಪುಟಗಳಲ್ಲಿ ಕಾಣುತ್ತಿದ್ದ ಸುಂದರ ಪರಿಕಲ್ಪನೆ. ತಾವೇ ಆರಿಸಿದ ಮೈತ್ರಿಕೂಟ-ಸರ್ಕಾರಗಳ ಮೇಲೆ ಜನ ಯಾಕಷ್ಟು ಕ್ರುದ್ಧರಾಗಿರುತ್ತಿದ್ದರೋ ಗೊತ್ತೇ ಆಗುತ್ತಿರಲಿಲ್ಲ. ಯಾಕೆ ಜನರು ಪ್ರಕ್ಷುಬ್ಧರಾಗಿದ್ದಾರೆ? ಆಡಳಿತ ವ್ಯವಸ್ಥೆ ಈ ಮಟ್ಟದ ಒತ್ತಡದಲ್ಲಿ ಸಿಲುಕಿರುವುದೇಕೆ? ಏಕೆ ಬದುಕು ದುಬಾರಿಯಾಗಿದೆ ಹಾಗೂ ಸರ್ಕಾರಕ್ಕೆ ಅದನ್ನು ನಿಯಂತ್ರಿಸುವುದಕ್ಕಾಗುತ್ತಿಲ್ಲ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಅದಾಗ ತಾನೇ ಮುಖ್ಯಮಂತ್ರಿ ಎನ್ನಿಸಿಕೊಂಡಿದ್ದವ ಇಂಥದೊಂದು ಅವಲೋಕನ ವರದಿ ರೂಪುಗೊಳ್ಳುವುದಕ್ಕೆ ಖಾಸಗಿಯಾಗಿ ಏರ್ಪಾಟು ಮಾಡಿದ್ದ.
'ಇದೇನಪ್ಪಾ, ಎಲ್ಲಾ ಅವ್ಯವಸ್ಥೆಗಳಿಗೂ ವ್ಯವಸ್ಥೆಯೇ ಕಾರಣ ಅಂತ ಉಪಸಂಹಾರ ಬರೆದುಬಿಟ್ಟಿದ್ದೀಯಲ್ಲ! ಸರ್ಕಾರ ಇರೋದೆ ಜನಕಲ್ಯಾಣಕ್ಕಾಗಿ. ಅಂಥಾದ್ದರಲ್ಲಿ, ಸರ್ಕಾರವು ಜನಜೀವನದಲ್ಲಿ ಅತಿಯಾಗಿ ಕೈಯಾಡಿಸಿದ್ದೇ ಪ್ರಸ್ತುತದ ಎಲ್ಲ ಕ್ಷೋಭೆಗಳಿಗೆ ಕಾರಣ ಅಂದರೆ ಏನರ್ಥ?'
ಈತ ನಕ್ಕು ಹೇಳಿದ. 'ವರದಿಯನ್ನು ನೀವು ಓದಿಯೇ ಇರುತ್ತೀರಾದ್ದರಿಂದ ನಾನು ಅಂಥದ್ದೊಂದು ಗ್ರಹಿಕೆಗೆ ಬರುವುದಕ್ಕೆ ಕಾರಣ ಏನು ಎಂಬುದಕ್ಕೂ ಅಲ್ಲಿಯೇ ಉತ್ತರ ಸಿಕ್ಕಿರುತ್ತದೆ. ಅದನ್ನು ಒಪ್ಪಿಕೊಳ್ಳಬೇಕು ಎಂಬ ಹಠವಾಗಲೀ, ಇದರ ಆಧಾರದ ಮೇಲೆ ಸರ್ಕಾರ ಏನೋ ಮಾಡುತ್ತದೆ ಎಂಬ ನಿರೀಕ್ಷೆಯಾಗಲಿ ನನಗಿಲ್ಲ. ಆದರೂ ಅಧಿಕಾರದಲ್ಲಿರುವವರಿಗೆ ಎಡವಿದ್ದೆಲ್ಲಿ ಅಂತ ಕೆಲಕ್ಷಣ ಯೋಚಿಸುವ ಅಪರೂಪದ ಬಯಕೆ ಬಂದಿದ್ದರಿಂದ ಹಾಗೂ ಹಳೆ ಸ್ನೇಹವನ್ನು ನೆನಪಿಸಿದ್ದರಿಂದ ನನ್ನ ಗ್ರಹಿಕೆಗಳನ್ನು ಇಲ್ಲಿ ದಾಖಲಿಸಿದೆ ಅಷ್ಟೆ.'
'ಸಂಕ್ಷಿಪ್ತವಾಗಿ ಇಲ್ಲಿನ ಪ್ರತಿಪಾದನೆ ಇಷ್ಟೆ. ಪ್ರತಿ ಸಿದ್ಧಾಂತಕ್ಕೂ ಅದರದ್ದೇ ಮಿತಿ ಇರುತ್ತದೆ. ನಮ್ಮ ಬದುಕಿನಲ್ಲಿ ನಂಬಿಕೆಯನ್ನು ಆಧರಿಸಿದ ಸಿದ್ಧಾಂತಗಳಿವೆ, ವಿಜ್ಞಾನವನ್ನು ಆಧರಿಸಿದ ಸಿದ್ಧಾಂತಗಳು ರೂಪುಗೊಂಡಿದ್ದಿವೆ, ಆಡಳಿತದ ಅನುಕೂಲಕ್ಕೆ ರಾಜಕೀಯದ ಮೂಸೆಯಲ್ಲಿ ಅರಳಿದ ಸಿದ್ಧಾಂತಗಳಿವೆ. ಪ್ರಾರಂಭದಲ್ಲಿ ಮನುಷ್ಯನ ಬದುಕನ್ನು ರೂಪಿಸಿದ್ದು ಈ ನಂಬಿಕೆ ಆಧರಿಸಿದ ಜೀವನ ನಿಯಮಗಳು. ಒಂದಿಷ್ಟು ಅನುಭವ, ಧಾರ್ಮಿಕತೆ ಇವೆಲ್ಲ ನಂಬಿಕೆ ಆಧಾರಿತ ವ್ಯವಸ್ಥೆಯನ್ನು ಪ್ರೇರೇಪಿಸಿದವು. ಇದೇನೂ ದೋಷಮುಕ್ತವಾಗಿದ್ದುಬಿಡುವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರಾರಂಭಿಕ ಹಂತದಲ್ಲಿ ನೆಲೆಗಟ್ಟೇ ಇದಾಗಿರುವುದರಿಂದ ನಂಬಿಕೆಯ ಬೇರು ಇನ್ನೆಲ್ಲ ವ್ಯವಸ್ಥೆಗಳಿಗಿಂತ ಆಳ. ಈ ನಂಬಿಕೆಯ ನೆಲೆಯಲ್ಲೂ ಕಾಲ ಕಾಲಕ್ಕೆ ಸಮಾಜದಲ್ಲೇ ಸುಧಾರಣೆಯ ಸಂಘರ್ಷಗಳೆಲ್ಲ ಆಗುತ್ತಿದ್ದವು.
ತಾನು ನಂಬಿರುವುದು ಕಾಲಕ್ಕೆ ತಕ್ಕನಾದುದೇ ಎಂಬ ಪರಿಷ್ಕರಣೆ- ಮರು ವ್ಯಾಖ್ಯಾನಗಳೆಲ್ಲ ನಂಬಿಕೆಯ ನೆಲೆಗೆ ಎಷ್ಟು ಮುಖ್ಯವೋ ವಿಜ್ಞಾನವೂ ಅಂತೆಯೇ. ಇದೇ ಮಾತು ರಾಜಕೀಯ ಆದರ್ಶಗಳನ್ನು ಸೂಸುವ ಪರಿಕಲ್ಪನೆಗಳಿಗೂ ಲಗತ್ತಾಗುತ್ತವೆ. ಕಾನೂನಿನ ಪಾರಮ್ಯ, ಸಮತೆ ಎಲ್ಲವೂ ಉದಾತ್ತವೇ. ಆದರೆ ನಂಬಿಕೆಯೂ ಸೇರಿದಂತೆ ಎಲ್ಲ ಉದಾತ್ತ ವ್ಯವಸ್ಥೆಗಳಿಗೂ ಅವುಗಳದ್ದೇ ಆದ ಮಿತಿ ಹಾಗೂ ಪಾತ್ರಗಳುಂಟು. ಅದನ್ನು ಅರ್ಥ ಮಾಡಿಕೊಳ್ಳದಿದ್ದರೆ ಶ್ರದ್ಧೆಗೆ ಮಾತ್ರ ಅಂಧತ್ವ ಕವಿಯುವುದಲ್ಲ, ಉಳಿದವೂ ಅಂಧಕಾರದಲ್ಲಿ ಕುಣಿದುಕೊಂಡಿರುತ್ತವೆ. ಈ ಬಗ್ಗೆ ಬೆಳಕು ಚೆಲ್ಲಬೇಕೆಂದರೆ ವಿಶ್ವದಲ್ಲಿ ಅತಿವೇಗದಲ್ಲಿ ಚಲಿಸುವ ಪದಾರ್ಥ ಬೆಳಕಿನ ಬಗ್ಗೆ ವಿಜ್ಞಾನದ ಗ್ರಹಿಕೆಯನ್ನೇ ಗಮನಿಸಿದರಾಯ್ತು. 1690ರಲ್ಲಿ ಕ್ರಿಶ್ಚಿಯನ್ ಹೈಗ್ನಸ್ ಎಂಬ ವಿಜ್ಞಾನಿ ಬೆಳಕು ಈತರ್ ಎಂಬ ಕಣ್ಣಿಗೆ ಕಾಣದ ಮಾಧ್ಯಮದ ಮೂಲಕ ಪಯಣಿಸುತ್ತಿದೆ ಎಂದ. ಇದನ್ನೊಪ್ಪದ ನ್ಯೂಟನ್ 1704ರಲ್ಲಿ ಬೆಳಕು ಕಣಗಳ ರೂಪದಲ್ಲಿದೆ, ಆ ಕಣಗಳು ತುಂಬ ಚಿಕ್ಕದಿರುವುದರಿಂದಲೋ ಅಥವಾ ಅತಿವೇಗದ ಕಾರಣದಿಂದಲೋ ನಮ್ಮ ಕಣ್ಣಿಗೆ ಅವನ್ನು ಗುರುತಿಸುವುದಕ್ಕಾಗದು ಎಂಬ ಥಿಯರಿ ಮುಂದಿಟ್ಟ. ಆದರೆ ವಕ್ರೀಭವನವೇ ಮುಂತಾದ ಲಕ್ಷಣಗಳಿಗೆ ಈ ಸಿದ್ಧಾಂತ ತೃಪ್ತಿದಾಯಕ ಉತ್ತರ ಕೊಡಲಿಲ್ಲವಾದ್ದರಿಂದ ಬೆಳಕೊಂದು ಕಿರಣ (ರೇ ಥಿಯರಿ) ಎಂಬ ಸಿದ್ಧಾಂತ ಬಂತು. 1801ರಲ್ಲಿ ಥಾಮಸ್ ಯಂಗ್ ಎಂಬ ಭೌತಶಾಸ್ತ್ರಜ್ಞ 'ಡಬಲ್ ಸ್ಲಿಟ್ ಎಕ್ಸ್‌ಪರಿಮೆಂಟ್' ಎಂಬುದರ ಮೂಲಕ ಬೆಳಕೆಂಬುದು ಅಲೆ ಎಂಬ ಹೊಸ ಸಿದ್ಧಾಂತ ಮಂಡಿಸಿದ. ಆಗಲೂ ಬೆಳಕಿನ ಎಲ್ಲ ಗುಣಲಕ್ಷಣಗಳ ಬಗ್ಗೆ ಅದು ಸಮರ್ಪಕ ಉತ್ತರ ಹೇಳಲಿಲ್ಲ. 1860ರಲ್ಲಿ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್ ಎಂಬ ವಿಜ್ಞಾನಿ, ಬೆಳಕು ಬರಿ ಅಲೆಯಲ್ಲವೋ ಅಣ್ಣಾ ಎನ್ನುತ್ತ ಅದು ವಿದ್ಯುತ್ ಮತ್ತು ಕಾಂತೀಯ ಅವತರಣಿಕೆ ಹೊಂದಿರುವ ವಿಶೇಷ ಅಲೆ ಎನ್ನುತ್ತ ಎಲೆಕ್ಟ್ರೋಮ್ಯಾಗ್ನೆಟಿಸಮ್ ಸಿದ್ಧಾಂತ ಮುಂದಿಟ್ಟ. ಇದೇ ಅಂತಿಮ ಎಂದು ಹರ್ಷಗೊಂಡ ವಿಜ್ಞಾನಿಗಳ ಬಳಗ ಬೆಳಕಿನ ಸುತ್ತ ಹಲವು ವೈಜ್ಞಾನಿಕ ಪರಿಕಲ್ಪನೆಗಳನ್ನೆಲ್ಲ ಇದೇ ಸಿದ್ಧಾಂತದ ಆಧಾರದಲ್ಲಿ ನಿಲ್ಲಿಸಿಟ್ಟಿತು. ಬೆಳಕಿನ ಬಗ್ಗೆ ವಿಜ್ಞಾನ ಎಲ್ಲವನ್ನೂ ತಿಳಿದು ಕಟ್ಟೆ ಹಾಕಿಯೇಬಿಟ್ಟಿದೆ ಎಂದುಕೊಳ್ಳುತ್ತಿರುವಾಗ 1900ರಲ್ಲಿ ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ತುಂಬ ಸರಳ ತರ್ಕವೊಂದರ ಮೂಲಕ ಬೆಳಕು ಯಾವ ರೂಪದಲ್ಲಿ ಮೊದಲು ಗೋಚರಿಸಿತ್ತೋ ಅಲ್ಲಿಗೇ ಮತ್ತೆ ಎಲ್ಲರನ್ನೂ ಕರೆದೊಯ್ದುಬಿಟ್ಟ. ಬೆಳಕು ಶಕ್ತಿಯನ್ನು ಒಳಗೊಂಡಿದೆ ಎಂದಾದರೆ ಅದು ಒಂದು ಪ್ರಮಾಣದಲ್ಲಿ ಬಂದಿರಬೇಕಲ್ಲವೇ ಅಂತಂದ. ಇದೇ ಜಾಡು ಹಿಡಿದ ಮೇಧಾವಿ ಆಲ್ಬರ್ಟ್ ಐನ್‌ಸ್ಟೀನ್ ಬೆಳಕಲ್ಲಿ ಶಕ್ತಿಯ ಪ್ಯಾಕೆಟ್ಟುಗಳು ರವಾನೆಯಾಗುತ್ತವೆ ಎಂದಾದರೆ ಅದು ಚಿಕ್ಕ ಕಣವನ್ನು ಇಲ್ಲವೇ ಫೊಟಾನ್ ಅನ್ನು ಒಳಗೊಂಡಿರುತ್ತದೆ ಎಂದು ವಾದಿಸುವುದರೊಂದಿಗೆ 'ಬೆಳಕು ಕಣರೂಪಿ' ಎಂಬ ಮೊದಲ ಪ್ರತಿಪಾದನೆಗೇ ಬಂದಂತಾಯ್ತು! ಆದರೆ ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ ವಿವರಿಸುವಾಗ ಬೆಳಕನ್ನು ಫೊಟಾನ್ ಪರಿಭಾಷೆಯಲ್ಲಿ ವಿವರಿಸಿದ್ದ ಅದೇ ಐನ್‌ಸ್ಟೀನ್, ಸಾಪೇಕ್ಷ ಸಿದ್ಧಾಂತವನ್ನು ವಿವರಿಸುವಾಗ ಬೆಳಕನ್ನು ನಿರಂತರ ಅಲೆಗಳ ಪರಿಭಾಷೆಯಲ್ಲಿ ವಿವರಿಸಬೇಕಾಯಿತು. ಈ ವಿಷಯದಲ್ಲೇ ಇದೇ ಒಂದು ಸರಿಯಾದ ಉತ್ತರ ಅಂತ ಹೇಳೋಕೆ ಅಸಾಧ್ಯ ಎಂದು ಒಪ್ಪಿಕೊಂಡ ಐನ್‌ಸ್ಟೀನ್, ಬೆಳಕಿಗೆ ವೇವ್-ಪಾರ್ಟಿಕಲ್ಸ್ ದ್ವಿಮುಖಗಳಿವೆ ಅಂತ ಹೇಳಿದ ಮೇಲೆ ವಿಜ್ಞಾನ ಬೆಳಕನ್ನು ಈ ದ್ವಿಮುಖ ನೆಲೆಯಲ್ಲೇ ನೋಡುತ್ತಿದೆ. ಇನ್ನೊಂದು ಹೊಸ ಸಂಶೋಧನೆ ಮತ್ಯಾವುದೋ ವಿಸ್ಮಯದ ಬೆಳಕನ್ನು ಹೊಮ್ಮಿಸಬಹುದಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ!
ಇಷ್ಟುದ್ದದ ಬೆಳಕಿನ ಚರಿತೆ ಏಕೆ ಹೇಳಬೇಕಾಯಿತೆಂದರೆ... ನಾವು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಆಧುನಿಕ ಸಮತಾ ಸಿದ್ಧಾಂತ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸುವುದೆಲ್ಲ ಸರಿಯಾದುದ್ದೆ. ಆದರೆ ಅಂಥ ಬೊಬ್ಬೆ ಮೊಳಗಿಸುವಾಗಲೆಲ್ಲ ಇಂಥ ಮಿತಿಯ ಕತೆಗಳೆಲ್ಲ ಗೊತ್ತಿರಬೇಕಾಗುತ್ತದೆ. ಇಂಥ ನೈಜ ವೈಜ್ಞಾನಿಕ-ವೈಚಾರಿಕ ತುಡಿತಗಳಿಲ್ಲದೇ ಕಳೆದ ಐದಾರು ದಶಕಗಳಲ್ಲಿ ಎಬ್ಬಿಸಲಾದ ಸುಧಾರಣಾ ಕ್ರಾಂತಿಯ ಬೊಬ್ಬೆಯೇ ಇಂದಿನ ಗೊಂದಲಕ್ಕೆ ಕಾರಣ. ಬದಲಾಯಿಸಿಕೊಳ್ಳಬೇಕಿರುವುದೇನಿದ್ದರೂ ನಂಬಿಕೆ ಸಂಪ್ರದಾಯಗಳನ್ನು ಮಾತ್ರ ಅಂದುಕೊಂಡ ಆಡಳಿತ ವ್ಯವಸ್ಥೆ, ತನ್ನ ರಾಜಕೀಯ ಪರಿಕಲ್ಪನೆಗಳು ಚಿರಂಜೀವಿ ಎಂದುಕೊಂಡು ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿ ಮೊಳೆ ಹೊಡೆಯಿತು. ಇಲ್ಲಿ ಎಲ್ಲವೂ ಸ್ಟ್ಯಾಂಡರ್ಡೈಸ್ ಆಗಿರಬೇಕು. ಸರ್ಕಾರ ಹೇಳುವ ವೈಜ್ಞಾನಿಕ ಮಾನದಂಡಕ್ಕೆ ಒಗ್ಗಬೇಕು.
ಹಳ್ಳಿಯಲ್ಲಿ ಅಸೌಖ್ಯವಾದವನು ನಾಟಿವೈದ್ಯನ ಬಳಿ ಹೋಗುತ್ತಿದ್ದ. ಆ ವೈದ್ಯ ಕೊಡುತ್ತಿದ್ದ ಫಲಿತಾಂಶದ ಮೇರೆಗೆ ಅವನ ಬಗ್ಗೆ ನಂಬಿಕೆಯೊಂದು ರೂಪುಗೊಂಡಿರಬೇಕಲ್ಲ. ಅರೇ, ಅದ್ಹೆಂಗಾಗ್ತದೆ? ಆತನ ಬಳಿ ಯಾವ ಪ್ರಮಾಣ ಪತ್ರವಿದೆ? ದಟ್ಸ್ ಇಲ್ಲೀಗಲ್ ಅಂದಿತು ಆಡಳಿತ. ಸರಿ, ಅದಕ್ಕೆ ಪ್ರತಿಯಾಗಿ ವೈಜ್ಞಾನಿಕ ಮಾದರಿ ಆರೋಗ್ಯ ಜನಸಾಮಾನ್ಯನಿಗೆ ಸಿಗುವಂತೆ ನೋಡಿಕೊಂಡಿತಾ? ಅದು ಸಾಧ್ಯವೂ ಇರಲಿಲ್ಲ. ಸಾಂಪ್ರದಾಯಿಕ ಔಷಧವನ್ನೇ ಬೇಕಾದರೆ ನೆಚ್ಚಿಕೊಳ್ಳಿ, ಆದರೆ ಅದಕ್ಕೂ ಒಂದು ಕೋರ್ಸ್ ಮಾಡುತ್ತೇವೆ. ಅದನ್ನು ಓದಿ ಪಾಸಾದವನ ಬಳಿಯೇ ಮದ್ದು ತೆಗೆದುಕೊಳ್ಳತಕ್ಕದು ಎಂಬ ಹೊಸ ವರಸೆಯೂ ಬಂತು. ಹೀಗೆಲ್ಲ ಮುಂಡಾಸು ಬೆಳೆಸಿದ್ದರಿಂದ ಆದ ಏಕೈಕ 'ಕ್ರಾಂತಿಕಾರಿ' ಬದಲಾವಣೆ ಎಂದರೆ ಔಷಧ-ಚಿಕಿತ್ಸೆಗಳ ವೆಚ್ಚ ಸಾಮಾನ್ಯನು ಭರಿಸಲಾಗದಂತೆ ಏರಿದ್ದು. ಸರ್ಟಿಫಿಕೇಟ್ ಸಂಪಾದಿಸುವುದಕ್ಕೆ ಶ್ರಮ-ದುಡ್ಡು ಹಾಕಿರುವ ವೈದ್ಯ ಪುಡಿಗಾಸಿನಲ್ಲಿ ಹೇಗೆ ಚಿಕಿತ್ಸೆ ಕೊಟ್ಟಾನು? 2013ರಲ್ಲಿ ಸ್ತ್ರೀಸಮಾನತೆಯ ಹರಿಕಾರರೆನ್ನಿಸಿಕೊಳ್ಳುವ ಉಮೇದಿನ ಗುಂಪೊಂದು ಹೇಳಿತು- ಮುಟ್ಟಾದಾಗ ಹೆಣ್ಣನ್ನು ಹೊರಗೆ ಕೂರಿಸುವುದು ಮೇಲ್ವರ್ಗದ ಪುರೋಹಿತಶಾಹಿಗಳ ಅಂಧಶ್ರದ್ಧೆ. ಅದನ್ನು ನಿರ್ಬಂಧಿಸುವ ಕಾನೂನು ಬೇಕು. ಆ ಕಾಲಕ್ಕೆ ಅವರು ದೂರುವ ಮೇಲ್ವರ್ಗಕ್ಕೆ ಹೆಣ್ಣು ಸಿಗುವುದೇ ಕಷ್ಟವಾಗಿತ್ತು, ಇನ್ನು ಹುಡುಗಿಗೆ ಹಾಗೊಂದು ಕಂಡೀಷನ್ ಹಾಕುವ ಪ್ರಶ್ನೆ ದೂರವೇ. ಆಚರಣೆಯ ನೆಲೆಯ ಆ ಪದ್ಧತಿ ಹೇಗೂ ತಾನಾಗಿಯೇ ನೇಪಥ್ಯಕ್ಕೆ ಸರಿದಿರುವುದರಿಂದ ಕಾನೂನು ಮಾಡಿಕೊಳ್ಳಲಿ ಬಿಡಿ ಅಂತ ಎಲ್ಲರೂ ಸುಮ್ಮನಾದರು. ಕಾಯ್ದೆ ಬಂದು ಒಂದಿಪ್ಪತ್ತೈದು ವರ್ಷಗಳಾದ ಮೇಲೆ ನ್ಯಾಯಾಲಯದಲ್ಲಿ ಲೆಕ್ಕವಿಲ್ಲದಷ್ಟು ಮೈಲಿಗೆ ಕೇಸುಗಳು. ವರದಕ್ಷಿಣೆ ವಿರೋಧಿ ಕಾಯ್ದೆ, ಜಾತಿ ನಿಂದನೆ ಕೇಸುಗಳ ದುರುಪಯೋಗದ ಹಾದಿಯೇ ಅದರದ್ದಾಯಿತು. ಇನ್ಯಾವುದೋ ಕಾರಣಕ್ಕೆ ಭಾರಿ ಜಗಳವಾದಾಗಲೆಲ್ಲ ಹೆಂಡತಿ ಸುಲಭದಲ್ಲಿ ಹಾಕಬಹುದಾದ ಕೇಸು- 'ಮೈಲಿಗೆ ಎಂದು ದೂರವಿಟ್ಟ'. ವೈರುಧ್ಯವೆಂದರೆ ನಿಜಕ್ಕೂ ಆ ಆಚರಣೆಗೆ ಒಳಗಾದ ಹಳ್ಳಿ ಹೆಂಗಸು ಆ ಬಗ್ಗೆಯೆಲ್ಲ ದೂರು ನೀಡುವುದಕ್ಕೆ ನ್ಯಾಯವ್ಯವಸ್ಥೆಯನ್ನು ತಲುಪುವ ವಾತಾವರಣವೇ ಇಲ್ಲ. ಆಚರಣೆಯಲ್ಲಿರುವ ತಪ್ಪನ್ನು ಜಾಗೃತಿ ಮೂಲಕವಲ್ಲದೇ ಕಾನೂನಿನಿಂದ ಚುಚ್ಚಲು ಹೊರಟರೆ ಇಂಥ ಅಪಸವ್ಯ ಅಲ್ಲದೇ ಇನ್ನೇನಾಗುತ್ತದೆ. ಸಣ್ಣಪುಟ್ಟ ಆಸ್ತಿ ಜಗಳ, ಅಣ್ಣ-ತಮ್ಮಂದಿರ ಹೊಡೆದಾಟ ಇವೆಲ್ಲವನ್ನೂ ಹಿರಿಯರ ಮಧ್ಯಸ್ತಿಕೆ ತುಸುಮಟ್ಟಿಗೆ ಸಂಭಾಳಿಸುತ್ತಿದ್ದ ದಿನಗಳಿದ್ದವು. ಅರೆ..ಪ್ರಜಾಪ್ರಭುತ್ವದಲ್ಲಿ ಅವರ್ಯಾರು ಎಂದ ಪರಿಣಾಮ ಆಗಿದ್ದಾದರೂ ಏನು? ನ್ಯಾಯಾಲಯಗಳಲ್ಲಿ ಯಾವತ್ತಿಗೂ ಬಗೆಹರಿಯದಂತೆ ಬಿದ್ದುಕೊಂಡಿರುವ ವ್ಯಾಜ್ಯಗಳು. ಮುಂಗಾರು ಬರುವುದಕ್ಕೂ ಮೊದಲು ಸಮುದಾಯದವರೇ ಜವಾಬ್ದಾರಿ ಹಂಚಿಕೊಂಡು ಊರಿನ ಬಾವಿ ಸ್ವಚ್ಛಗೊಳಿಸುತ್ತಿದ್ದ ಕಾಲವೊಂದಿತ್ತು. ಹಳ್ಳಿಗಳಿಗೂ ಅಧಿಕಾರ ವಿಕೇಂದ್ರೀಕರಿಸಿದ್ದೇವೆ ಎಂಬ 'ಕ್ರಾಂತಿಕಾರಿ' ಆಲೋಚನೆಯಲ್ಲಿ ಹೂಳೆತ್ತುವುದಕ್ಕೆ ಫಂಡ್ ಬಿಡುಗಡೆ ಶುರುವಾದಾಗಿನಿಂದ ಬತ್ತಿನಿಂತ ಬಾವಿಗಳೂ ಹೆಚ್ಚಾಗಿವೆ. ಸರ್ಕಾರ ಮಾಡುತ್ತೆ ಬಿಡ್ರಲೇ ಎಂಬ ಸಿಂಡ್ರೋಮ್. ಈ ಜಾತಿಯವರಿಗೆ ಇಂತಿಂಥಾದ್ದು ಪುಕ್ಕಟೆ ಕೊಟ್ರೆ ಹೆಂಗೆ ಎಂಬ 'ಪ್ರಗತಿಪರತೆ', ಪ್ರತಿಯಾಗಿ ಈ ಮಠಕ್ಕೆ ಇಷ್ಟು ಕೊಟ್ರೆ ಅನ್ನೋ 'ಶ್ರದ್ಧೆ'ಯ ಲೆಕ್ಕಾಚಾರದಲ್ಲಿ ಆದ ಸಾಮಾಜಿಕ ಅವಘಡವೇನು ಕಡಿಮೆಯೇ? ಅಪ್ಪ-ಅಮ್ಮನನ್ನು ನೋಡಿಕೊಳ್ಳುವುದು, ತಂಗಿ ಮದುವೆ ಮಾಡುವುದು ಎಲ್ಲವೂ ಸರ್ಕಾರದ ಜವಾಬ್ದಾರಿ ಎಂಬ ಭಾವನೆ ಬೇರೂರಿತು. ಸಮುದಾಯದ ನಡುವೆ ಇದ್ದು, ಸ್ಥಳೀಯವಾಗಿ ಉಳ್ಳವರಿಂದ ಸ್ವೀಕರಿಸಿದ್ದನ್ನು ಇಲ್ಲದವರಿಗೆ ವಿದ್ಯೆ-ಅನ್ನದಾನಗಳಲ್ಲಿ ವ್ಯಯಿಸುತ್ತಿದ್ದ ಮಠಗಳಲ್ಲಿ ಹೆಚ್ಚಿನವು ಅಧಿಕಾರಕೇಂದ್ರದ ಫಂಡ್‌ಗೆ ಬಾಯ್ತೆರೆದುಕೊಂಡ ಪರಿಣಾಮ, ಒಂದೆರಡು ದಶಕಗಳಲ್ಲೇ ಜನರಿಗೆ ಮಠ ಎಂದರೆ ತಮ್ಮದಲ್ಲ ಎಂಬ ನಿರ್ಲಿಪ್ತತೆ ಬೆಳೆಯಿತು. ಮಂತ್ರಿ ಬಂದರೆ ನೇರ ಪೂಜಾಕೋಣೆಗೆ ಕರೆದುಕೊಂಡು ಹೋಗುವವರು ನಮ್ಮ ಗುರುಗಳು ಹೆಂಗಾಗ್ತಾರೆ ಅಂತನ್ನುತ್ತ ಅಲ್ಲಿದ್ದ ಶ್ರದ್ಧೆಯ ಗಂಟನ್ನು ಎತ್ತಿಕೊಂಡುಬಿಟ್ಟರು ಜನ. ನಂಬಿಕೆಯ ವ್ಯವಸ್ಥೆ ಧ್ವಂಸವಾದೆಡೆ ಸರ್ಕಾರ ವಿಜ್ಞಾನವನ್ನೂ ಮುಟ್ಟಿಸಲಿಲ್ಲ, ರೂಲ್ ಆಫ್ ಲಾ ಎಂದಿನಂತೆ ಕಾಗದದಲ್ಲೇ ಬಿದ್ದು ಹೊರಳಾಡಿಕೊಂಡಿತ್ತು. ನೋಡಿ, ವೈಚಾರಿಕ ವಜ್ರಾಯುಧದಲ್ಲಿ ನಾವು ಏನೆಲ್ಲ ಕೆಡವಿಬಿಟ್ಟೆವು ಅಂತ ಗಹಗಹಿಸಿದವರ ಗುಂಪು ಕಟ್ಟಿದ್ದು ಮಾತ್ರ ಶೂನ್ಯ...'
-----
ಎಲ್ಲವನ್ನೂ ಕೇಳಿಸಿಕೊಂಡ ಮುಖ್ಯಮಂತ್ರಿಗಳು ಆ ಕ್ಷಣಕ್ಕೆ ಏನು ಪ್ರತಿಕ್ರಿಯಿಸಬೇಕೋ ತಿಳಿಯದೇ, 'ನಾವು ಟೈಮ್ ಮಷಿನ್‌ನಲ್ಲಿ ಕುಳಿತು 2013-15ರ ಸಮಯಕ್ಕೆ ಹೋಗಿ ಎಲ್ಲವನ್ನೂ ಸ್ವಲ್ಪ ಸರಿಮಾಡುವಂತಿದ್ದರೆ ಚೆಂದಿತ್ತು ಅಲ್ವಾ' ಅಂತ ಪೆಚ್ಚು ನಗೆಯಾಡಿದರು. 'ಅಂಥದ್ದೊಂದನ್ನು ವಿಜ್ಞಾನ ಸಾಧ್ಯ ಮಾಡುತ್ತದೆ ಎಂದು ನಂಬೋಣ. ಸದ್ಯಕ್ಕೆ, ಜನಜೀವನದಲ್ಲಿ ನಂಬಿಕೆಯ ಪಾತ್ರ ಎಷ್ಟಿರಬೇಕು ಎಂಬುದಕ್ಕಿಂತ ಸರ್ಕಾರದ ಪಾತ್ರ ಎಷ್ಟಿರಬೇಕು ಎಂದು ಯೋಚಿಸುವುದರೊಂದಿಗೆ ಸುಧಾರಣೆ ಹೆಜ್ಜೆ ಇಡಬಹುದು' ಎಂದ ಸ್ನೇಹಿತ.
- ಚೈತನ್ಯ ಹೆಗಡೆ
cchegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

