ಲಂಕೆಯನ್ನು ದೂರವಿಟ್ಟು ಸಾಧಿಸುವುದಾದರೂ ಏನು?
ವಿದೇಶ ವ್ಯವಹಾರಗಳ ಇಲಾಖೆ ಅಧಿಕಾರಿಗಳು, ತಜ್ಞರು ಯಾವುದೇ ಕಾರಣಕ್ಕೂ ಪ್ರಧಾನಿ..

ವಿದೇಶ ವ್ಯವಹಾರಗಳ ಇಲಾಖೆ ಅಧಿಕಾರಿಗಳು, ತಜ್ಞರು ಯಾವುದೇ ಕಾರಣಕ್ಕೂ ಪ್ರಧಾನಿ ಈ ಭೇಟಿ ರದ್ದುಪಡಿಸಬಾರದು ಎಂದು ಸಲಹೆ ನೀಡಿದ್ದರೂ, ಸರ್ಕಾರಕ್ಕೆ ದೇಶಕ್ಕಿಂತ ಪಕ್ಷದ ಹಿತಾಸಕ್ತಿಯೇ ಪ್ರಮುಖವಾಗಿ ಕಂಡಿದ್ದು ವಿಪರ್ಯಾಸ. ಇಂತಹ ನಿಲುವು ತೆಗೆದುಕೊಂಡಿರುವುದು ಇದೇ ಮೊದಲಲ್ಲ.
ಈ ಬಾರಿಯ ಕಾಮನ್ವೆಲ್ತ್ ಸರ್ಕಾರಿ ಮುಖ್ಯಸ್ಥರ ಸಭೆ ನಡೆಸಲು ಕೊಲಂಬೊ ಸಜ್ಜಾಗಿದೆ. ಕೊಲಂಬೊಗೆ ಇಂತಹ ಒಂದು ಅವಕಾಶ ನೀಡಿದ್ದಕ್ಕಾಗಿ ಬ್ರಿಟನ್ನಿನಲ್ಲಂತೂ ವ್ಯಾಪಕ ವಿರೋಧ, ಟೀಕೆ ವ್ಯಕ್ತವಾಗಿತ್ತು. ಕಳೆದ ಬಾರಿಯ ಶೃಂಗಸಭೆಯ ಅಂತ್ಯದಲ್ಲಿ ಮುಂದಿನ ಆತಿಥ್ಯ ಕೊಲಂಬೊಗೆ ನೀಡಬೇಕೆಂಬ ಪ್ರಸ್ತಾಪ ಬಂದಾಗಲೇ ಅದನ್ನು ವಿರೋಧಿಸಬೇಕಿತ್ತು. ಇಂತಹ ಪ್ರಸ್ತಾಪ ಅಂಗೀಕಾರವಾಗದಂತೆ ಒತ್ತಡ ಹೇರಬೇಕಿತ್ತು. ಇತರ ಸದಸ್ಯರ ಮನವೊಲಿಸಬೇಕಿತ್ತು. ಇದೇನೂ ಮಾಡದೆ ಸರ್ಕಾರ ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಾನವ ಹಕ್ಕಿನ ಉಲ್ಲಂಘನೆಗೆ ಒತ್ತಾಸೆ ನೀಡಿದೆ. ತಮಿಳು ಉಗ್ರರ (ಎಲ್‌ಟಿಟಿಇ) ನಿರ್ನಾಮದ ನಂತರ ಸರ್ಕಾರಿ ಪಡೆಗಳು ಅಲ್ಲಿನ ತಮಿಳರ ಮೇಲೆ ನಡೆಸಿದ ಅಮಾನವೀಯ ಕೃತ್ಯಗಳಿಗೆ ಪರೋಕ್ಷ ಬೆಂಬಲ ನೀಡಿದಂತಾಗಿದೆ. ಮಾನವ ಹಕ್ಕುಗಳ ಪರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೋರಾಡುವ ಸರ್ಕಾರ ಕೊಲಂಬೊ ಪರವಾಗಿ ನಿಲ್ಲುವ ಮೂಲಕ ದೇಶದ ಸ್ಥಾಪಿತ ವಿದೇಶ ನೀತಿಗೆ ತಿಲಾಂಜಲಿ ನೀಡಿದೆ ಎಂದು ಬ್ರಿಟನ್ನಿನ ವಿರೋಧ ಪಕ್ಷಗಳು, ಮಾನವ ಹಕ್ಕು ಸಂಘಟನೆಗಳು ಇನ್ನಿಲ್ಲದಂತೆ ಡೇವಿಡ್ ಕೆಮರಾನ್ ನೇತೃತ್ವದ ಸರ್ಕಾರವನ್ನು ಜರಿದವು. ಸಾಲದೆಂಬಂತೆ ಈ ಶೃಂಗಸಭೆಯಿಂದ ಹೊರಗುಳಿಯುವಂತೆ, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದವು. ಕಳೆದ ಕೆಲವು ದಿನಗಳ ಹಿಂದೆ ಚಾನೆಲ್ 4 ಎಂಬ ಟಿವಿ ಚಾನೆಲ್ ಲಂಕಾ ಪಡೆಗಳ ಮಾನವ ಹಕ್ಕು ಹನನಕ್ಕೆ ಸಂಬಂಧಿಸಿದ ಹೊಸ ವಿಡಿಯೋ ಪ್ರಸಾರ ಮಾಡಿತು. ಎಲ್‌ಟಿಟಿಇ ಟಿವಿ ಚಾನೆಲ್‌ನ ನಿರೂಪಕ ಇಸೈಪ್ರಿಯಾ ಎಂಬಾಕೆಯ ಮೇಲೆ ಭದ್ರತಾ ಪಡೆಗಳು ನಡೆಸಿದ ದೌರ್ಜನ್ಯದ ವಿಡಿಯೋ ಪ್ರಸಾರವಾಗುತ್ತಿದ್ದಂತೆಯೇ ಕೆಮರಾನ್ ಸರ್ಕಾರದ ಮೇಲೆ ಒತ್ತಡ ತೀವ್ರವಾಯಿತು. ಕಾಮನ್ವೆಲ್ತ್ ಶೃಂಗಸಭೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಒತ್ತಾಯ ಮಾಡಲಾಯಿತು. ಸಂಸತ್ತಿನಲ್ಲೂ ಈ ಕುರಿತು ವ್ಯಾಪಕ ಚರ್ಚೆ ನಡೆಯಿತು. ವಿದೇಶ ವ್ಯವಹಾರಗಳ ಕುರಿತಾದ ಸಂಸದೀಯ ಸಮಿತಿ ಸಹ ಸಂಪೂರ್ಣ ಬಹಿಷ್ಕಾರ ಮಾಡುವಂತೆ ಸರ್ಕಾರಕ್ಕೆ ಹೇಳಿತು. ಸಾರ್ವಜನಿಕ ವಲಯ, ಮಾಧ್ಯಮಗಳಲ್ಲಿ ಸಹ ಇದೇ ರಾಗ. ಇದೇ ಸಮಯದಲ್ಲಿ ಕೆನಡಾ ಪ್ರಧಾನಿಯು ತಾವು ಕೊಲಂಬೊಗೆ ಹೋಗುತ್ತಿಲ್ಲವೆಂದರು. ಶ್ರೀಲಂಕಾ ಸರ್ಕಾರದ ದಮನಕಾರಿ ನೀತಿಯ ವಿರುದ್ಧ ದನಿ ಏರಿಸಿದರು. 'ಅವರೇ ಹಾಗೆ ಮಾಡಿದ ಮೇಲೆ ನಿಮಗೇನು ದರ್ದು, ನೀವೂ ಕಾಮನ್ವೆಲ್ತ್ ಶೃಂಗಸಭೆಯಿಂದ ಹೊರಗುಳಿಯುವುದಾಗಿ ಘೋಷಿಸಿ. ಆ ಮೂಲಕ ಶ್ರೀಲಂಕಾದ ಮೇಲೆ ಒತ್ತಡ ಹೇರಿ. ಅಂತಾರಾಷ್ಟ್ರೀಯ ಮಟ್ಟದ ತನಿಖೆ ಎದುರಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಿ' ಎಂಬ ಪುಕ್ಕಟೆ ಸಲಹೆಗಳು ಕೆಮರಾನ್ ಕಿವಿಗಳನ್ನು ತುಂಬಿದವು. ಈ ಒತ್ತಡಕ್ಕೆ ಸರ್ಕಾರ ಖಂಡಿತ ಮಣಿಯುತ್ತದೆ ಎಂದೇ ಎಲ್ಲರೂ ಎಣಿಸಿದ್ದರು. ಆದರೆ ಈ ಎಲ್ಲ ಒತ್ತಾಯ, ಒತ್ತಡಗಳಿಗೆ ಕೆಮರಾನ್ ಪ್ರತಿಕ್ರಿಯೆ ಮಾತ್ರ ತಣ್ಣಗಿತ್ತು. 'ಶೃಂಗಸಭೆಯಲ್ಲಿ ಒಂದು ಕುರ್ಚಿ ಖಾಲಿ ಬಿಡುವುದರಿಂದ ಯಾವುದೇ ಘನಕಾರ್ಯ ಸಾಧಿಸಿದಂತಾಗುವುದಿಲ್ಲ. ನಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಇರುವ ಅವಕಾಶ ಕಳೆದುಕೊಂಡಂತಾಗುತ್ತದೆ ಅಷ್ಟೆ. ಹಾಗಾಗಿ ಯಾವುದೇ ಕಾರಣಕ್ಕೂ ನಾವು ಕಾಮನ್ವೆಲ್ತ್ ಶೃಂಗಸಭೆ ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ' ಎಂದು ಬ್ರಿಟನ್ನಿನ ವಿದೇಶ ಸಚಿವರು ಘೋಷಿಸಿಯೇ ಬಿಟ್ಟರು.
ಅದೇ ನಮ್ಮ ಸರ್ಕಾರದ ನಡೆ ನೋಡಿ. ಬ್ರಿಟನ್ನಿಗೆ ಹೋಲಿಸಿದರೆ ಶ್ರೀಲಂಕಾ ಭಾರತದ ಪಾಲಿಗೆ ಅತಿ ಸೂಕ್ಷ್ಮ ಪ್ರದೇಶ. ಜೊತೆಗೆ ಅಲ್ಲಿನ ತಮಿಳರ ವಿಷಯವಾಗಿ ಭಾರತದ ಜೊತೆ ಅದರ ಸಂಬಂಧವೇ ಆಯಕಟ್ಟಿನದು. ತಮಿಳುನಾಡು ಕರಾವಳಿಯಾಚೆಗಿನ ಈ ಪ್ರದೇಶದ ಜೊತೆಗಿನ ಭಾರತದ ನಂಟು ಅತಿ ಪುರಾತನವಾದದ್ದು. ಅಲ್ಲಿ ತಮಿಳರ ಮೇಲಿನ ದಬ್ಬಾಳಿಕೆ ಸಹಜವಾಗಿಯೇ ಇಲ್ಲಿ (ತ.ನಾಡಲ್ಲಿ) ವಿಪರೀತ ಭಾವನೆಗಳನ್ನು ಕೆರಳಿಸುತ್ತದೆ. ಪ್ರತ್ಯೇಕ ತಮಿಳು ರಾಷ್ಟ್ರ ಸ್ಥಾಪನೆಗೆ ಲಂಕೆಯಲ್ಲಿ ನಡೆದ ಅಂತರ್ಯುದ್ಧದ ಗಾಯಗಳು ಇನ್ನೂ ಮಾಸಿಲ್ಲ. ಅಂತಹುದರಲ್ಲಿ ಎಲ್‌ಟಿಟಿಇ ನಿರ್ಮಾಮ ಮಾಡುವ ತರಾತುರಿಯಲ್ಲಿ ಲಂಕೆಯ ಭದ್ರತಾ ಪಡೆಗಳು ತಮಿಳರ ಮೇಲೆ ನಡೆಸಿದೆ ಎನ್ನಲಾದ ದೌರ್ಜನ್ಯದ ಚಿತ್ರಗಳು ತಮಿಳುನಾಡಿನಲ್ಲಿ ತಲ್ಲಣ ಮೂಡಿಸಿವೆ. ಜನರಿಗಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳ ಕಣ್ಣು ಕೆಂಪಾಗಿವೆ. ರೋಷಾವೇಶ ಕೆರಳಿಸಿದೆ. ಲಂಕೆಯ ಹೆಸರೆತ್ತಿದರೆ ಸಾಕು ಉರಿದು ಬೀಳುತ್ತವೆ. ಅದಕ್ಕೆ ಮತಬ್ಯಾಂಕ್‌ನ ಲೇಪ ಕೂಡಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಒಂದೊಂದೂ ಒಂದು ಧ್ರುವದಂತಿರುವ, ಯಾವುದೇ ಕಾರಣಕ್ಕೂ ಪರಸ್ಪರರ ಮುಖ ನೋಡಲು ಇಚ್ಛಿಸದ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಲಂಕಾ ತಮಿಳರ ವಿಷಯಕ್ಕೆ ಬಂದಾಗ ಒಂದೇ ಗೂಡಿನ ಹಕ್ಕಿಗಳಂತೆ ಚಿಲಿಪಿಲಿಗುಟ್ಟುತ್ತವೆ. ಕೇಂದ್ರದಲ್ಲಿ ಸರ್ಕಾರ ಯಾವುದೇ ಇರಲಿ, ಲಂಕಾ ತಮಿಳರ ಪರ ನಿಲುವು ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತವೆ. ಈಗಲೂ ಅಷ್ಟೆ. ಕಾಮನ್ವೆಲ್ತ್ ಶೃಂಗಸಭೆಗೆ ಯಾವುದೇ ಕಾರಣಕ್ಕೂ ತೆರಳದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಇನ್ನಿಲ್ಲದಂತೆ ಏಕಪ್ರಕಾರವಾಗಿ ಒತ್ತಡ ಹೇರಿದ್ದವು. ಒಂದೊಮ್ಮೆ ಹೋದರೆ ಯುಪಿಎಗೆ ನೀಡಿರುವ ಬಾಹ್ಯ ಬೆಂಬಲ ಹಿಂಪಡೆಯುವುದಾಗಿ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಗುಡುಗಿದರು. ಮುಖ್ಯಮಂತ್ರಿ ಜಯಲಲಿತಾ ಅವರಂತೂ ಕೊಲಂಬೊಗೆ ತೆರಳದಂತೆ ಪ್ರಧಾನಿಗೆ ಪತ್ರ ಸರಣಿ ಅಭಿಯಾನವನ್ನೇ ಕೈಗೊಂಡರು. ಇದೆಲ್ಲ ತಮ್ಮ ಸಹ ತಮಿಳರ ಬಗೆಗಿನ ಸಹಾನುಭೂತಿಯ ಪ್ರತೀಕದಂತೆ ಕಂಡರೂ ಮುಂಬರುವ ಲೋಕಸಭಾ ಚುನಾವಣೆಯ ದಟ್ಟ ಛಾಯೆ ಇದರ ಮೇಲೆ ಆವರಿಸಿತ್ತು. ಯಾವುದೇ ಒತ್ತಡ ಇಲ್ಲದ ನಿರಾಳ ಪರಿಸ್ಥಿತಿಯಲ್ಲಿಯೇ ನಿರ್ಧಾರ ಕೈಗೊಳ್ಳಲು ಎಡತಾಕುವ ಪ್ರಧಾನಿ ಸಿಂಗ್ ಈ ನಿರಂತರ ಒತ್ತಡದಿಂದಾಗಿ ನಿರ್ಧಾರವನ್ನು ಮುಂದೂಡಿದರು. ಆದರೂ ಶೃಂಗಸಭೆಗೆ ಹೋಗುವ ಇಂಗಿತವನ್ನು ನಿಕಟವರ್ತಿಗಳ ಬಳಿ ಹೇಳಿಕೊಂಡರು. ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ಎಲ್ಲ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ, ವಿದೇಶ ವ್ಯವಹಾರಗಳ ಸಚಿವಾಲಯದ ಸಲಹೆ ಪಡೆದು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇಂತಹ ವಿಷಯಗಳನ್ನು ಚರ್ಚಿಸುವ ಸಲುವಾಗಿಯೇ ಸರ್ಕಾರದ ಮಟ್ಟದಲ್ಲಿ ರಾಜಕೀಯ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಇದೆ. ರಾಜಕೀಯ ಲೆಕ್ಕಾಚಾರಗಳನ್ನು ಹೊರತುಪಡಿಸಿ ದೇಶಕ್ಕೆ ಸರಿ ಕಾಣುವಂತಹ ನಿರ್ಧಾರಗಳನ್ನು ಈ ಸಮಿತಿ ಕೈಗೊಳ್ಳಬೇಕು. ಅದು ಅದರ ಕರ್ತವ್ಯ. ಆದರೆ ಈ ವಿಚಾರವಾಗಿ ಈ ಸಮಿತಿ ಸಭೆ ಸೇರಿ ಸರ್ಕಾರದ ನಿಲುವನ್ನು ರೂಪಿಸಲೇ ಇಲ್ಲ. ಬದಲಾಗಿ ಸರ್ಕಾರದ ನಿರ್ಧಾರ ಅಖೈರಾಗಿದ್ದು ಕಾಂಗ್ರೆಸ್ ಕೋರ್ ಕಮಿಟಿಯಲ್ಲಿ! ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ!! ವಿದೇಶ ವ್ಯವಹಾರಗಳ ಇಲಾಖೆ ಅಧಿಕಾರಿಗಳು, ತಜ್ಞರು ಯಾವುದೇ ಕಾರಣಕ್ಕೂ ಪ್ರಧಾನಿ ಈ ಭೇಟಿ ರದ್ದುಪಡಿಸಬಾರದು ಎಂದು ಸಲಹೆ ನೀಡಿದ್ದರೂ, ಸರ್ಕಾರಕ್ಕೆ ದೇಶಕ್ಕಿಂತ ಪಕ್ಷದ ಹಿತಾಸಕ್ತಿಯೇ ಪ್ರಮುಖವಾಗಿ ಕಂಡಿದ್ದು ವಿಪರ್ಯಾಸ. ಮುಂದಿನ ಚುನಾವಣೆಯ ಬಳಿಕ ಪರಿಸ್ಥಿತಿ ಹೇಗೋ, ಏನೋ? ಜಯಾ-ಕರುಣಾ, ಯಾರ ಕೈ ಹಿಡಿಯಬೇಕೋ ಎಂಬುದು ಕಾಂಗ್ರೆಸ್‌ಗೆ ತಲೆನೋವಿನ ವಿಷಯ. ಹೀಗಾಗಿ ಇಬ್ಬರನ್ನೂ ಸಂತುಷ್ಟಪಡಿಸುವ ಸಲುವಾಗಿ ಕೋರ್ ಕಮಿಟಿಯು ಲಂಕಾ ಪ್ರವಾಸ ರದ್ದುಗೊಳಿಸುವಂತೆ ಪ್ರಧಾನಿಗೆ ತಿಳಿಸಿತು. ಪ್ರಧಾನಿಯೂ ತಲೆ ಅಲ್ಲಾಡಿಸಿದರು. 'ಕ್ಷಮಿಸಿ ನಾನು ಬರುತ್ತಿಲ್ಲ' ಎಂದು ಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆಗೆ ಪತ್ರವನ್ನೂ ಬರೆದರು. ಲಂಕೆಯ ವಿಚಾರದಲ್ಲಿ ರಾಜಕೀಯ ಕಾರಣಗಳಿಗಾಗಿ ಇಂತಹ ನಿಲುವು ತೆಗೆದುಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಲಂಕಾದ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ತಡೆಯಾಗಿದ್ದ ಭಾರತ ಕೆಲವು ತಿಂಗಳ ಹಿಂದೆ ಮತ್ತೆ ಇಂತಹುದೇ ಪ್ರಸ್ತಾಪ ಬಂದಾಗ ಅದನ್ನು ಬೆಂಬಲಿಸಿದ್ದಲ್ಲದೇ ಹಲವಾರು ತಿದ್ದುಪಡಿಗಳನ್ನೂ ತಂದಿತು. ಆಗಲೂ ಅದು ಮಣಿದಿದ್ದು ರಾಜಕೀಯ ಕಾರಣಗಳಿಗಾಗಿಯೇ. ಇಷ್ಟಕ್ಕೂ ಪ್ರಧಾನಿ ಕಾಮನ್ವೆಲ್ತ್ ಶೃಂಗಸಭೆಗೆ ಏಕೆ ಹೋಗಲೇಬೇಕು, ಲಂಕೆಯನ್ನು ಏಕೆ ಹತ್ತಿರದಲ್ಲಿಟ್ಟುಕೊಳ್ಳಬೇಕು?
China mania-Anglo-India phobia! (ಚೀನಾ ಪ್ರೀತಿ, ಭಾರತ-ಬ್ರಿಟನ್‌ನಿಂದ ದೂರ) ಇದು ಶ್ರೀಲಂಕಾದ ಇಂದಿನ ವಿದೇಶ ನೀತಿಯಾಗಿದೆ. ಅದರಲ್ಲೂ ರಾಜಪಕ್ಸೆ ಅಧಿಕಾರಕ್ಕೆ ಬಂದ ಮೇಲಂತೂ ಚೀನಾ ವ್ಯಾಮೋಹ ತುಸು ಹೆಚ್ಚಾಗಿಯೇ ಇದೆ. ಕ್ರಮೇಣವಾಗಿ ಈ ಎರಡು ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳ್ಳುತ್ತಿದೆ. ವ್ಯಾಪಾರ-ವಹಿವಾಟು 300 ಕೋಟಿ ಡಾಲರ್ ಮೀರಿದೆ. ಚೀನಾದಿಂದ ಲಂಕಾದ ಆಮದು ಪ್ರಮಾಣ ದುಪ್ಪಟ್ಟಾಗಿದೆ. ಪರಸ್ಪರ ಸೇನಾ ಸಹಕಾರಕ್ಕೂ ಮುಂದಾಗಿವೆ. ಚೀನಾದ ರಾಡಾರ್‌ಗಳನ್ನು ಕೊಳ್ಳಲು ಲಂಕಾ ಉತ್ಸುಕವಾಗಿದೆ. ಭಾರತದ ಗಡಿಯಲ್ಲಿ ಸದಾ ಕ್ಯಾತೆ ತೆಗೆಯುತ್ತಲೇ ತನಗೆ ಅನುಕೂಲವಾಗುವಂತಹ ಗಡಿ ಒಪ್ಪಂದಕ್ಕೂ ಮನಮೋಹನ್ ಸಿಂಗ್ ಅವರಿಂದ ಅಂಕಿತ ಹಾಕಿಸಿಕೊಂಡಿರುವ ಚೀನಾ, ಟಿಬೆಟ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಅಲ್ಲದೆ ಈಗ ಶ್ರೀಲಂಕಾವನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿರುವ ಚೀನಾ ಭಾರತವನ್ನು ನಿಜವಾದ ಅರ್ಥದಲ್ಲಿ ಸುತ್ತುವರಿಯಲು ಸಜ್ಜಾಗಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಲಂಕೆಯನ್ನು ದೂರ ಮಾಡಿಕೊಳ್ಳುವುದರಿಂದ ಭಾರತಕ್ಕೆ ನಷ್ಟವೇ ಹೆಚ್ಚು. ಇದು ಭಾರತಕ್ಕೆ ತಿಳಿಯದ ವಿಷಯವೇನಲ್ಲ. ಆದರೂ ರಾಜಕೀಯ ಕಾರಣಗಳಿಗಾಗಿ ವಾಸ್ತವಕ್ಕೆ ಕುರುಡಾಗಿ ಕುಳಿತಿದೆ. ನಿಜಕ್ಕೂ ಪ್ರಧಾನಿ ಸಿಂಗ್ ಮುತ್ಸದ್ದಿಯೇ ಆಗಿದ್ದರೆ, ದೇಶದ ದೂರಗಾಮಿ ಒಳಿತನ್ನು ಬಯಸುವವರೇ ಆಗಿದ್ದರೆ ಈ ಒತ್ತಡಗಳನ್ನು ತಾಳಿಕೊಂಡು ಕೊಲಂಬೊಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಅಲ್ಲಿಗೆ ಹೋಗದಿದ್ದ ಮಾತ್ರಕ್ಕೆ ಲಂಕಾ ಸರ್ಕಾರದ ನಿಲುವು ಬದಲಾಗುವುದಿಲ್ಲ. ಬದಲಿಗೆ ಕಾಮನ್ವೆಲ್ತ್ ವೇದಿಕೆಯಲ್ಲಿಯೇ ಅಲ್ಲಿನ ತಮಿಳರ ಮೇಲೆ ನಡೆಯುತ್ತಿರುವ ದುರಾಚಾರದ ಬಗ್ಗೆ ದನಿ ಎತ್ತಬಹುದಿತ್ತು. ಅಂತಹ ನಿಲುವು ತೆಗೆದುಕೊಳ್ಳುವುದಾಗಿ ಹೇಳಿರುವ ಬ್ರಿಟನ್ನಿಗೆ ಬೆಂಬಲ ಸೂಚಿಸಬಹುದಿತ್ತು. ಅಷ್ಟೇ ಅಲ್ಲದೆ ಅಲ್ಲಿಂದ ನೇರ ಜಾಫ್ನಾಕ್ಕೆ ತೆರಳಿ ತಮಿಳರಿಗೆ ಸಾಂತ್ವನ ಹೇಳಬಹುದಿತ್ತು. ರಾಜಪಕ್ಸೆ ಆಡಳಿತಕ್ಕೆ ಕಠಿಣ ಸಂದೇಶ ರವಾನಿಸಬಹುದಿತ್ತು. ಆದರೆ ಮುಂದಿನ ಲೋಕಸಭೆ ಚುನಾವಣೆಯ ಲೆಕ್ಕಾಚಾರದಲ್ಲಿಯೇ ಸರ್ಕಾರ ದೇಶದ ಹಿತವನ್ನು ಬಲಿಕೊಟ್ಟಿದೆ. ಇತ್ತ ಪಾಕಿಸ್ತಾನದ ರಾಜತಾಂತ್ರಿಕರು ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆ ಚರ್ಚಿಸಲು ಅನುವು ಮಾಡಿ, ಅತ್ತ ಚೀನಾದ ಜೊತೆ ಭಾರತಕ್ಕೆ ಯಾವುದೇ ರೀತಿಯಲ್ಲಿ ಅನುಕೂಲವಾಗದಂತಹ ಗಡಿ ಒಪ್ಪಂದಕ್ಕೆ ಸಹಿ ಹಾಕಿ, ಮತಲೆಕ್ಕಾಚಾರಕ್ಕೆ ಲಂಕಾವನ್ನು ಚೀನಾದ ತೆಕ್ಕೆಗೆ ತಳ್ಳುವ ಮೂಲಕ ಯುಪಿಎ ಸರ್ಕಾರ ದೇಶದ ಹಿತವನ್ನೇ ತನ್ನ ಹಿತಕ್ಕಾಗಿ ಒತ್ತೆ ಇಟ್ಟಿದೆ. ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಪಕ್ಷದಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


