ಬೀಗ್ರೂಟದ ಸ್ಕೀಮು, ಬುದ್ಧಿಜೀವಿಗಳ್ಗೇ ನೇಮು
'ಈ ಮೂದೇವಿನ ಕಟ್ಕಂಡು ನಾನು ಹಾಳಾಬುಟ್ನಲ್ಲಪ್ಪೋ, ನನ್ ಬಾಳು...
'ಈ ಮೂದೇವಿನ ಕಟ್ಕಂಡು ನಾನು ಹಾಳಾಬುಟ್ನಲ್ಲಪ್ಪೋ, ನನ್ ಬಾಳು ಹೊಳೆನಾಗೆ ಹುಣ್ಸೆ ಹಣ್ಣು ಹಿಂಡಿದಂಗೆ ಆಗೋಯ್ತಲ್ಲಪ್ಪೋ' ಅಂತೇಳಿ ಮೈಲಾರಿ ಮಿಸ್ಸಸ್ಸು ವತ್ತಾರೆ ಎದ್ದು ಮನೆ ಮುಂದ್ಲಾಗಡೆ ಬಾಯಿ ಬಡ್ಕತಾಯಿತ್ತು.
ಏನೋ ಅಗೋಗದೆ ಅಂತೇಳಿ ನಮ್ ಆಮಾಸೆ ಎದ್ದು ವೋಡೋದ. 'ಅದ್ಯಾಕವ್ವ ಹಿಂಗೆ ಬಾಯಿ ಬಡ್ಕತಾಯಿದ್ದಿ. ಏನಾಗೋಯ್ತು ಅಂಥದ್ದು' ಅಂತ ಕೇಳ್ದ.
'ಏನಣ್ಣ ಯೋಳಾದು, ಬ್ಯಾಡ ಬ್ಯಾಡ ಅಂದ್ರೂವೆ ಈ ಮೂದೇವಿನ ತಂದು ನಮ್ಮಪ್ಪ ಗಂಟು ಹಾಕ್ದ. ಈವಾಗ ನೋಡು ಏನಾಗದೆ. ದೇವ್ರೆ ಇನ್ನ ನಂಗೆ ಯಾರು ದಿಕ್ಕು' ಅಂತೇಳಿ ಮೈಲಾರಿ ಮಿಸ್ಸಸ್ಸು ತಿರ್ಗ ಗೊಳೋ ಅಂತ ಅಳಕ್ಕೆ ಸುರು ಮಾಡ್ತು.
'ಆಯ್ಯೋ ವಸಿ ಸುಮ್ಕಿರವ್ವ, ಏನಾಯ್ತು ಅಂತ ಯೋಳು, ಮೈಲಾರಿ ಏನರ ನಿಗ್ರುಕ್ಕಂಬುಟ್ನ ಹೆಂಗೆ ?' ಅಂತ ಆಮಾಸೆ ಕೇಳ್ದ.
'ಆ ಮೂದೇವಿಗೆ ಏನಾಗದೆ, ಗುಂಡ್ಕಲ್ಲು ಇದ್ದಂಗದೆ. ಆಗಿರಾದು ನಂಗೇಯ. ಅಲ್ಲಣ್ಣ ರಾತ್ರಿಪೂರಾ ಈ ಮೂದೇವಿ ಬೇಕೇ ಬೇಕು ಶಾದಿ ಬೇಕು ಅಂತ ಕೂಗ್ತಾಯಿತ್ತು. ಮದ್ವೆ ಆಗಿ, ಮಕ್ಳೂ ಆಗಿ ಈವಾಗ ತಿರ್ಗ ಶಾದಿ ಬೇಕು ಅಂತ ಬಡ್ಕತಾ ಐತಲ್ಲ. ಇರೋ ಹೆಂಡ್ರುನ್ನೇ ಏಗ್ಸಕ್ಕೆ ಆಯ್ತಾ ಇಲ್ಲ. ಈ ಮೂತಿಗೆ ಇನ್ನೊಂದು ಬೇಕಾ ?' ಅಂತ ಮೈಲಾರಿ ಮಿಸ್ಸಸ್ಸು ಕೇಳ್ತು.
ಬಡ್ಡೆತ್ತದ್ದು ಏನೋ ಯಡ್ವಟ್ಟು ಮಾಡ್ಕಂಡಿರಂಗದೆ ಅಂತೇಳಿ ಅಮಾಸೆ ವೊಳಿಕ್ಕೆ ವೋಗಿ ನೋಡುದ್ರೆ ಮೈಲಾರಿ ಇನ್ನ ಬಿದ್ಕಂಡಿದ್ದ. 'ಆಯ್ಯೋ ಬೇವಾರ್ಸಿ ಮುಂಡೇದೆ, ಯೋಳಲೇ ಮೇಲುಕ್ಕೆ' ಅಂತೇಳಿ ಅಮಾಸೆ ತಿವ್ದು ಯೋಳುಸ್ದ. 'ಅಲ್ಲಲೇ, ಶಾದಿ ಬೇಕು ಶಾದಿ ಬೇಕು ಅಂತ ಬಡ್ಕತಾಯಿದ್ದಂತೆ. ಅವಮ್ಮ ನೋಡುದ್ರೆ ಮನೆ ಮುಂದ್ಲಾಗಡೆ ಕೂತ್ಕಂಡು ಬಾಯಿ ಬಡ್ಕತಾ ಐತೆ. ಏನಾಗದೆ ನಿಂಗೆ?' ಅಂತೇಳಿ ಅಮಾಸೆ ಕೇಳ್ದ.
'ಲೇ ಅಮಾಸೆ, ಅಂಥದ್ದು ಏನೂ ಇಲ್ಲಲೇ. ನೆನ್ನೆ ಬೆಂಗ್ಳೂರ್ಗೆ ವೋಗಿದ್ದೆ. ಹಂಗೇ ಆನಂದರಾವ್ ಸರ್ಕಲ್ ಕಡೆ ವೋಯ್ತಾಯಿದ್ನ. ನಮ್ ಯಡೂರಪ್ನೋರು ಕಂಡ್ರು. ಶಾದಿಭಾಗ್ಯ ಸ್ಕೀಮು ಎಲ್ಲ ಜಾತಿಯೋರ್ಗೆ ತಕ್ಕಂಡು ಬರ್ಕೇಕು ಅಂತ ಕೂಗ್ತಾ ಧರಣಿ ಮಾಡ್ತಾಯಿದ್ರು. ನಾನೂವೆ ಅವ್ರು ಜತೆ ಸೇರ್ಕಂಡು ಬೇಕೇಬೇಕು ಶಾದಿ ಬೇಕೇ ಬೇಕು ಶಾದಿ ಅಂತ ಕೂಗು ಹಾಕ್ದೆ. ರಾತ್ರಿ ಕನಸ್ನಾಗೆ ಅದೇ ಬಂದೋಯ್ತು. ಅದುಕ್ಕೆ ನನ್ನೆಂಡ್ರು ಗಾಬ್ರಿ ಆಗೋಗಿ ವೊಯ್ಕತಾ ಐತೆ ಅಷ್ಟೇಯ' ಅಂದ ಮೈಲಾರಿ.
'ಅಲ್ಲಲೇ ಶಾದಿ ಭಾಗ್ಯ ಅಂದ್ರೆ ಏನಲಾ?' ಅಂತ ಅಮಾಸೆ ಕೇಳ್ದ. 'ಏನೂ ಇಲ್ಲಪ್ಪ, ಮದ್ವೆ ಆಗೋರ್ಗೆ ಸಿಎಂ ಸಿದ್ರಾಮಣ್ಣ ಹಾಸ್ಗೆ, ದಿಂಬು, ಮಂಚ ಕೊಡುಸ್ತರಂತೆ. ಅದುನ್ನು ವೊಂದೇ ಜಾತಿಯೋರ್ಗೆ ಯಾಕೆ ಲಿಮಿಟ್ಟು ಮಾಡಿರಾದು. ಬ್ಯಾರೆ ಜಾತಿಯೋರು ಹಾಸ್ಗೆ ಮ್ಯಾಲೆ ಮಲುಗ್ದೆ ಮರದ ಮ್ಯಾಲೆ ಮಲುಗ್ತಾರ? ಸ್ಕೀಮು ಎಲ್ಲಾರ್ಗೂ ತಕ್ಕಂಡು ಬನ್ನಿ ಅಂತೇಳಿ ಯಡೂರಪ್ನೋರು ರೋಡ್ನಾಗೆ ಹಾಸ್ಗೆ ಹಾಸ್ಕಂಡು ಸ್ಟ್ರೈಕು ಮಾಡ್ತಾವ್ರೆ' ಅಂತ ಡೀಟೇಲಾಗಿ ಯೋಳ್ದ ಮೈಲಾರಿ.
'ನಮ್ಮಂಥೋರ್ಗೆ ಹಾಸ್ಗೆ, ಮಂಚ ಯಾಕಲಾ ಬೇಕು. ದಿನವೆಲ್ಲ ದುಡ್ದು ಮನೆಗೆ ಬಂದು ಸಿವಾ ಅಂದ್ರೆ ಸಾಕು ನಿದ್ದೆ ಬಂದೋಯ್ತದೆ. ಬೆಂಗ್ಳೂರ್ನಾಗೆ ಬುದ್ಧಿಜೀವಿಗಳು ಅಂತ ಅವ್ರಂತೆ. ಅವ್ರುತವ ವೋಗಿ ನಮ್ಗೆ ಹಾಸ್ಗೆ, ದಿಂಬು ಬ್ಯಾಡಿ, ನಮ್ಕಡೆ ಮದ್ವೆ ಖರ್ಚುಗಿಂತ ಬಿಗ್ರೂಟದ ಖರ್ಚೇ ಸ್ಯಾನೆ ಅದೆ. ಅದುಕ್ಕೆ ಬೀಗ್ರೂಟದ ಭಾಗ್ಯ ಅಂತೇಳಿ ಸ್ಕೀಮು ತಂದ್ರೆ ಸಂದಾಕಿರ್ತದೆ. ನಿಮ್ಗೂ ನೇಮು ಬತ್ತದೆ. ರಾತ್ರಿ ಸಿದ್ರಾಮಣ್ಣೋರು ಮನೆತವ ವೋದಾಗ ಈ ಇಸ್ಯಾನ ಅವ್ರು ಕಿವಿಗೆ ಹಾಕಿ ಅಂತ ಯೋಳಾವ' ಅಂದ ಅಮಾಸೆ.
'ಲೇ ಅಮಾಸೆ, ಭೂಮಿ ಮ್ಯಾಲೆ ಇರೋ ಎಲ್ಲಾ ಜೀವಿಗಳ್ಗೂ ಬುದ್ಧಿ ಇರ್ತದೆ. ಅದ್ರಾಗೆ ಬುದ್ಧಿ ಇರೋವು ಬ್ಯಾರೆ, ಇಲ್ದೇ ಇರೋವು ಬ್ಯಾರೆ ಅಂತ ಎಲ್ಲಿರ್ತವೇ?' ಅಂತೇಳಿ ಮೈಲಾರಿ ಕೇಳ್ದ.
'ಲೇ ಮೈಲಾರಿ, ಇವ್ರುಗೆ ಇರೋ ಬುದ್ಧಿ ಸ್ಯಾನೆ ಪೆಸಲ್ಲು ಅಂತೆ. ಮೊನ್ನೆ ಅಪೋಜಿಸನ್ ಲೀಡ್ರು ಕುಮಾರಣ್ಣ ಯೋಳ್ತಾಯಿದ್ರು. ಕತ್ಲು ಆಯ್ತಾಯಿದ್ದಂಗೆ ಇವ್ರುಗೆ ಬುದ್ಧಿ ಇದ್ಕಿದ್ದಂಗೆ ಸ್ಯಾನೆ ಆಗೋಯ್ತದಂತೆ. ಆ ಬುದ್ಧಿನೆಲ್ಲ ಸಿದ್ರಾಮಣ್ಣೋರು ಮುಂದೆ ವೋಗಿ ರಾಶಿ ಹಾಕ್ತಾರಂತೆ' ಅಂತ ಅಮಾಸೆ ಯೋಳ್ದ.
'ಹೌದೇನ್ಲಾ, ಲೇ ವೊಂದ್ ಕೆಲ್ಸ ಮಾಡಾವ. ನಮ್ಮೂರ್ನಾಗೆ ದಡ್‌ಬಡ್ಡಿ ಮುಂಡೇವು ಸ್ಯಾನೆ ಅವೆ. ಕತ್ಲು ಆದ್ಮೇಕೆ ನಾವು ಬಕೆಟ್ಟು ಹಿಡ್ಕಂಡು ಸಿದ್ರಾಮಣ್ಣೋರ ಮನೆಗೆ ವೊಂಟೋಗವ' ಅಂದ ಮೈಲಾರಿ. 'ಅದ್ಯಾಕಲೇ?' ಅಂತ ಅಮಾಸೆ ಕೇಳ್ದ. 'ಬಕೆಟ್ ತುಂಬ ಬುದ್ಧಿ ತುಂಬ್ಕಂಡು ಬರಕ್ಕೆ' ಅಂತೇಳಿ ಮೈಲಾರಿ ಯೋಳ್ದ. 'ಹಂಗಾದ್ರೆ ಬಕೆಟ್ಟು ತತ್ತೀನಿರು' ಅಂತೇಳಿ ಅಮಾಸೆ ಎದ್ದೋದ.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

