ಫೀಲಿಂಗ್ ಲೋನ್ಲಿ ಅಂದಳು ಹಳೆಯದೆಲ್ಲಾ ನೆನಪಾಯ್ತು
ಕೆಲವು ಜೋಡಿಗಳನ್ನು ನೋಡಿದಾಗ, ವಾಹ್ ಎಂದು ಉದ್ಗರಿಸುವಷ್ಟು ಸಂತೋಷವಾಗುತ್ತದೆ. ಏಕೆಂದರೆ, ಗಂಡನಿಗಿಂತ ಹೆಂಡತಿ ಮುದ್ದಾಗಿರುತ್ತಾಳೆ. ಹೆಂಡತಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂಬಂತೆ ಗಂಡ ಮಿಂಚುತ್ತಿರುತ್ತಾನೆ. ಇಂಥವರನ್ನು ಯಾವುದೋ ಮದುವೆಯಲ್ಲಿ, ಜಾತ್ರೆಯಲ್ಲಿ, ಸಿನಿಮಾ ಥಿಯೇಟರಿನಲ್ಲಿ ಕಂಡವರು- 'ಮೇಡ್ ಫಾರ್ ಈಚ್ ಅದರ್ ಅಂದ್ರೆ ಇವರೇ' ಎಂದು ತೀರ್ಪು ನೀಡಿಯೇ ಬಿಡುತ್ತಾರೆ. ಆದರೆ, ಹೊರ ನೋಟಕ್ಕೆ ಮುದ್ದುಮುದ್ದಾಗಿ ಕಾಣುವ ಜೋಡಿಗಳು ನಿಜ ಜೀವನದಲ್ಲೂ ಹತ್ತು ಮಂದಿ ಹೊಟ್ಟೆ ಉರಿ ಪಡುವಂತೆಯೇ ಬದುಕುತ್ತಾರಾ ಎಂದು ಯಾರಾದರೂ ಕೇಳಿದರೆ, ಹೌದು ಎಂದು ಉತ್ತರಿಸಲು ಹೆಚ್ಚಿನ ಸಂದರ್ಭದಲ್ಲಿ ಮನಸ್ಸೇ ಬರುವುದಿಲ್ಲ.
ಈ ಮಾತು ಹೇಳುವಾಗ ನನ್ನ ಕಣ್ಮುಂದೆ ಇರುವಾಕೆ ಶ್ಯಾಮಲಾ. ಈಕೆ ಕಾಲೇಜು ದಿನಗಳಲ್ಲಿ ನನ್ನ ಸೀನಿಯರ್. ಚಿಕ್ಕಮಗಳೂರಿನ ಹುಡುಗಿ. ಯಾವ ಹೀರೋಯಿನ್‌ಗೂ ಕಡಿಮೆಯಿಲ್ಲದಂಥ ಸುಂದರಿ. ಓದುವುದರಲ್ಲೂ ಮುಂದಿದ್ದಳು. ಹುಡುಗರ ಮಾತು ಹಾಗಿರಲಿ; ಕೆಲವು ಲೆಕ್ಚರರ್‌ಗಳೇ ಆಕೆಯ ಹಿಂದೆ ಬಿದ್ದಿದ್ದರು. ಹೆಚ್ಚಿನ ಅಧ್ಯಾಪಕರು ಅವಳ ಕಡೆಗೆ ನೋಡುತ್ತಲೇ ಪಾಠ ಮಾಡ್ತಾರೆ ಎಂದೆಲ್ಲಾ ಹುಡುಗರು ಕ್ಯಾಂಪಸ್‌ನಲ್ಲಿ ಸುದ್ದಿ ಹಬ್ಬಿಸಿದ್ದರು. 'ಹುಡುಗರು ಏನಾದ್ರೂ ಹೇಳಿಕೊಂಡು ಸಾಯ್ಲಿ. ಅದರ ಬಗ್ಗೆ ಯೋಚಿಸಲಿಕ್ಕೆ ನನಗೆ ಟೈಂ ಇಲ್ಲ' ಎಂದು ಬಿಟ್ಟಿದ್ದಳು ಶ್ಯಾಮಲಾ.
ಇಂಥ ಶ್ಯಾಮಲೆಗೆ, ಕುಡಿಯುವ ಅಭ್ಯಾಸವಿತ್ತು. 'ಅಯ್ಯೋ, ಇದೇನೇ ಹೀಗೆ? ಎಂದು ಯಾರಾದರೂ ಗಾಬರಿಯಿಂದ ಕೇಳಿದರೆ-ಕೊಡಗು, ಚಿಕ್ಕಮಗಳೂರಿನ ಕಡೆಯಿಂದ ಬಂದ ಹುಡುಗೀರ್ಗೆ ಡ್ರಿಂಕ್ಸ್ ಅಭ್ಯಾಸ ಆಗಿರುತ್ತೆ. ಆ ಸೀಮೆಯಲ್ಲಿ ವಿಪರೀತ ಚಳಿ ಇರುತ್ತೆ. ಹಾಗಾಗಿ ಚಳಿಯಿಂದ ಪಾರಾಗಲಿಕ್ಕೆ ಅಂತ ಚಿಕ್ಕಂದಿನಿಂದಲೇ ಸ್ವಲ್ಪ ಸ್ವಲ್ಪ ಡ್ರಿಂಕ್ಸ್ ತಗೊಳ್ಳೋದನ್ನು ಮನೆಯಲ್ಲೇ ಅಭ್ಯಾಸ ಮಾಡಿಸಿರ್ತಾರೆ. ಬೆಳೆಯುತ್ತಾ ಹೋದಂತೆಲ್ಲಾ ಕೆಲವರು ಡ್ರಿಂಕ್ಸ್‌ನ ಬಿಟ್ಟು ಬಿಡ್ತಾರೆ. ಮತ್ತೆ ಕೆಲವರು ಬಿಡೋದಿಲ್ಲ. ನಾನು ಎರಡನೇ ಗುಂಪಿಗೆ ಸೇರ್ತೇನೆ. ಆದ್ರೆ ಯಾವ ಸಂದರ್ಭದಲ್ಲೂ ಜಾಸ್ತಿ ತಗೊಳ್ಳಲ್ಲ. ಉಳಿದವರೆಲ್ಲ ಕಾಫೀ ಕುಡೀತಾರಲ್ಲ, ಅಷ್ಟೇ ಸಹಜವಾಗಿ, ಅಷ್ಟೇ ಪ್ರಮಾಣದಲ್ಲಿ ಡ್ರಿಂಕ್ಸ್ ತಗೋತೇನೆ ಅಷ್ಟೇ ಅಂದಿದ್ದಳು. ಈ ವಿಷಯ ಕ್ಯಾಂಪಸ್‌ನಲ್ಲಿ ಕೆಲವು ಹುಡುಗರಿಗೆ ಗೊತ್ತಾದಾಗ -'ಅವಳಿಗೆ ಅದೆಂಥ ದುರಭ್ಯಾಸ ಇದ್ರೂ ಪರವಾಗಿಲ್ಲ. ನಾವು ಸಹಿಸಿಕೊಳ್ತೇವೆ. ಅವ್ಳು ನಮ್ಮನ್ನು ಒಪ್ಪಿಕೊಂಡ್ರೆ ಸಾಕು' ಅಂದು ಬಿಟ್ಟಿದ್ದರು. ಇಂಥ ಹಿನ್ನೆಲೆಯ ಶ್ಯಾಮಲಾ, ಶ್ರೀಮಂತರ ಏಕೈಕ ಪುತ್ರಿಯಾದ ಶ್ಯಾಮಲಾ, ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಅಂತರ್ ಧರ್ಮೀಯ ವಿವಾಹವಾದಳು. ಅವಳ ಗಂಡ, ಹಿಂದಿ ಚಿತ್ರರಂಗದ ಹೀರೋಗಳನ್ನು ನೀವಾಳಿಸಿ ಎಸೆಯಬೇಕು; ಅಷ್ಟೊಂದು ಚೆಂದಕ್ಕಿದ್ದ. ಅವನೂ ಶ್ರೀಮಂತ ಕುಟುಂಬದ ಹಿನ್ನೆಲೆಯವನೇ. ಈ ಮದುವೆಗೂ ಎರಡೂ ಕುಟುಂಬದಿಂದ ಪ್ರಬಲ ವಿರೋಧ ವ್ಯಕ್ತವಾಯಿತು.
ಈ ಹುಡುಗ -ಹುಡುಗಿ ಅದಕ್ಕೆ ಕೇರ್ ಮಾಡಲಿಲ್ಲ. ಗೆಳೆಯರ ಸಮ್ಮುಖದಲ್ಲಿ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆಯಾಗಿ ಬಿಟ್ಟರು. ಆರು ತಿಂಗಳು ಕಳೆಯುವುದರೊಳಗೆ, ಎರಡೂ ಕುಟುಂಬದ ಹಿರಿಯರ ಮನಸ್ಸು ಮೃದುವಾಯಿತು. ಎರಡೂ ಕಡೆಯವರಿಗೆ ಪ್ರತಿಷ್ಠೆಯ ಪ್ರಶ್ನೆ. ಅದರ ಪರಿಣಾಮವಾಗಿ, ತಂತಮ್ಮ ಧರ್ಮದ ಪ್ರಕಾರ ಈ ಹುಡುಗ-ಹುಡುಗಿಗೆ ಮತ್ತೆ ಎರಡು ಬಾರಿ ಮದುವೆ ಮಾಡಿದರು. ಮೂರು ಬಾರಿ, ಮೂರು ಭಿನ್ನ ಪರಿಸರದಲ್ಲಿ ಮದುವೆಯಾದ ಹೆಗ್ಗಳಿಕೆ ಶ್ಯಾಮಲೆಯದ್ದಾಯಿತು.
ಮದುವೆಯ ನಂತರದ ಒಂದು ವರ್ಷದ ಅವಧಿಯಿತ್ತಲ್ಲ: ಅದು ಶ್ಯಾಮಲೆಯ ಬದುಕಿನ ರಮ್ಯ ಚೈತ್ರ ಕಾಲ. ಯಾವುದಾದರೂ ಮದುವೆಗೆ ಜೋಡಿ ಹೋದರೆ ಸಾಕು; ಎಲ್ಲರ ದೃಷ್ಟಿಯೂ ಇವರತ್ತಲೇ ತಿರುಗುತ್ತಿತ್ತು. ಇವರು ಸಿನಿಮಾಕ್ಕೋ, ಭಾನುವಾರಗಳಲ್ಲಿ ಊಟಕ್ಕೆಂದು ಹೋಟೆಲಿಗೋ ಹೋದರೆ ಸಾಕು: ಸುತ್ತಲೂ ಇದ್ದವರು ಇವರನ್ನೇ ಮೆಚ್ಚುಗೆಯಿಂದ, ಅಸೂಯೆಯಿಂದ ನೋಡುತ್ತಿದ್ದರು. ಕೆಲವರಂತೂ ಅವರಿಬ್ಬರು ಗಂಡ-ಹೆಂಡತಿ ಅಲ್ಲವೆಂದೂ, ಲವರ್‌ಗಳೆಂದೂ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು. ಮತ್ತೆ ಕೆಲವರು ತುಂಬಾ ಸೂಕ್ಷ್ಮವಾಗಿ ಶ್ಯಾಮಲೆಯ ಕಾಲನ್ನೇ ಗಮನಿಸುತ್ತಾ, ಅಲ್ಲಿ ಕಾಲುಂಗರವಿದೆಯೇ ಎಂದು ಹುಡುಕುತ್ತಿದ್ದರು. ಒಂದೇ ಮಾತಲ್ಲಿ ಹೇಳಬೇಕೆಂದರೆ, ಆದರ್ಶ ದಂಪತಿಗಳು ಎಂಬ ಮಾತಿಗೆ ಚೆಂದದ ಉದಾಹರಣೆಯಂತಿತ್ತು ಶ್ಯಾಮಲೆಯ ದಾಂಪತ್ಯ.
ಆದರೆ, ಎರಡೇ ವರ್ಷಗಳ ನಂತರ ಶ್ಯಾಮಲೆಯ ಮನೆಯಿಂದಲೂ ಅಪಸ್ವರದ ಸದ್ದು ಕೇಳಿ ಬಂತು. ಹೆಂಡತಿಯ ತುಂಬು ಸೌಂದರ್ಯವೇ ಆ ಹುಡುಗನ ಅಸಹನೆಗೆ ಕಾರಣವಾಯಿತು. ಅವಳು ಯಾರೊಂದಿಗಾದರೂ ಫೋನ್ ಮಾಡಿದರೆ ಅನುಮಾನ, ಪೇಟೆಯಿಂದ ಅರ್ಧ ಗಂಟೆ ತಡವಾಗಿ ಬಂದರೆ, ಎಲ್ಲಿಗೆ ಹೋಗಿದ್ದೆ ಎಂಬ ಪ್ರಶ್ನೆ, ಸಂಜೆಯ ವೇಳೆ ಅವಳು ಚೆನ್ನಾಗಿ ಅಲಂಕರಿಸಿಕೊಂಡರೆ, ಇದೆಲ್ಲಾ ಯಾರನ್ನು ಮೆಚ್ಚಿಸಲಿಕ್ಕೆ ಎಂಬ ಸಿಡಿಮಿಡಿ! ಇಂಥವೇ ಮಾತುಗಳು ಮೇಲಿಂದ ಮೇಲೆ ಕೇಳಿಬಂದಾಗ ಶ್ಯಾಮಲಾ ಹೇಳಿಬಿಟ್ಟಳು: 'ನನ್ನಿಷ್ಟದಂತೆ ನಾನು ಇರ್ತೇನೆ. ಇಷ್ಟವಿದ್ರೆ ಜೊತೇಲಿರು. ಕಷ್ಟ ಆದ್ರೆ ಬೇರೆ ಇರು. ಅನುಮಾನದ ಮಾತುಗಳಿಂದ ನನ್ನನ್ನು ಹೀಗೆಲ್ಲಾ ಹಿಂಸಿಸಬೇಡ ಪ್ಲೀಸ್...
ಹೆಂಡತಿಯಾದವಳು ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಎಂಬ ಮನೋಭಾವವಿದ್ದ ಶ್ಯಾಮಲೆಯ ಗಂಡ, ಇಂಥ ಮಾತುಗಳನ್ನು ಖಂಡಿತ ನಿರೀಕ್ಷಿಸಿರಲಿಲ್ಲ. ಆ ಕ್ಷಣದಲ್ಲಿ ಅವನೂ ಸಂಯಮ ಮರೆತ. ನನಗೇನು ರೂಪವಿಲ್ಲವೆ? ಆಸ್ತಿಯಿಲ್ಲವೆ? ಸಮಾಜದಲ್ಲಿ ಒಳ್ಳೆಯ ಹೆಸರಿಲ್ಲವೆ? ಇವಳಲ್ಲದಿದ್ದರೆ ಇನ್ನೊಬ್ಬಳನ್ನು ಮದುವೆ ಆಗ್ತೇನೆ ಎಂಬ ಹಮ್ಮಿನಲ್ಲಿ ಡೈವೋರ್ಸ್‌ಗೆ ಅರ್ಜಿ ಹಾಕಿಯೇ ಬಿಟ್ಟ. ಈ ಸಂದರ್ಭದಲ್ಲಿ ತಾನೂ ತಾಳ್ಮೆ ಕಳೆದುಕೊಂಡ ಶ್ಯಾಮಲಾ, ನನ್ನ ಬದುಕನ್ನ ನಾನೇ ಕಟ್ಕೋತೇನೆ ಹೋಗಯ್ಯ ಅಂದು ಬಿಟ್ಟಳು. ಇದಾಗಿ ನಾಲ್ಕು ವರ್ಷದ ನಂತರ ಕಾನೂನುಬದ್ಧವಾಗಿ ಡೈವೋರ್ಸ್ ಸಿಕ್ಕಿತು. ಈ ವೇಳೆಗೆ ಇಬ್ಬರಿಗೂ ತಂತಮ್ಮ ತಪ್ಪಿನ ಅರಿವಾಗಿತ್ತು ನಿಜ. ಆದರೆ, ಸೋಲಲು ಯಾರೂ ಸಿದ್ಧವಿಲ್ಲದ ಕಾರಣ, ಒಂದು ಕಾಲದ ಆದರ್ಶ ದಾಂಪತ್ಯ, ಹಾದಿಬದಿಯಲ್ಲಿ ಮಾತಾಡುವವರ ಪಾಲಿಗೆ ಗೇಲಿಯ ವಿಷಯವಾಗಿ ಹೋಯಿತು.
ಮೊನ್ನೆ ಫೇಸ್‌ಬುಕ್‌ನಲ್ಲಿ 'ಫೀಲಿಂಗ್ ಲೋನ್ಲಿ' ಎಂದು ಬರೆದುಕೊಂಡಿದ್ದಳು ಶ್ಯಾಮಲಾ. ತಕ್ಷಣ ಇದೆಲ್ಲಾ ನೆನಪಾಯಿತು...
- ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

