ಅಂಕಣಗಳು

ಅಮ್ಮನ ವಿಷಯದಲ್ಲಿ ಪವಾಡಗಳಾಗುತ್ತವೆ!

ಸೋಲು, ನಿರಾಸೆಗಳು ಜೊತೆಯಾದಾಗ ಎಲ್ಲರಿಗೂ ನೆನಪಾಗುವಾಕೆ ಅಮ್ಮ.

ಅಮ್ಮನ ವಿಷಯದಲ್ಲಿ ಪವಾಡಗಳಾಗುತ್ತವೆ!
Published On :

ಈ ಮಗು ಸತ್ತು ಹೋಗುತ್ತದೆ ಅಂದರಲ್ಲ; ಅವತ್ತು ವೈದ್ಯರು ಈ ಮಗುವನ್ನು ಒಮ್ಮೆ ಕೂಡಾ ಮುಟ್ಟಲಿಲ್ಲ.  ಬಹುಶಃ ಅವರ ಪಾಲಿಗೆ ಇದು ದಿನವೂ ನೋಡುವ ನೂರಾರು ಪೇಶೆಂಟ್‌ಗಳ ಪೈಕಿ  ಒಂದು ಎಂಬಂತೆ ಕಾಣಿಸಿತೇನೋ. ಆದರೆ, ನನ್ನ ಪಾಲಿಗೆ, ನನ್ನ ರಕ್ತ, ಪ್ರೀತಿ ಮತ್ತು ಮನಸ್ಸನ್ನು ಹಂಚಿಕೊಂಡಿದ್ದ ಜೀವವಾಗಿತ್ತು.

ಸೋಲು, ನಿರಾಸೆ, ಸಂಕಟಗಳು ಜೊತೆಯಾದಾಗ ಎಲ್ಲರಿಗೂ ನೆನಪಾಗುವಾಕೆ ಅಮ್ಮ. ಆಗೆಲ್ಲಾ, ಹೆಚ್ಚಿನವರು ಸೀದಾ ಹೋಗಿ ಅಮ್ಮನ ಮಡಿಲಲ್ಲಿ ಮುಖವಿಟ್ಟು ಬಿಕ್ಕಳಿಸುತ್ತಾರೆ. ಅಂಥ ಸಂದರ್ಭದಲ್ಲೆಲ್ಲ ಅಮ್ಮಂದಿರು ಮಾತಾಡುವುದಿಲ್ಲ. ಎಷ್ಟೋ ಸಂದರ್ಭದಲ್ಲಿ, ತಾಯ್ತನದ ಆ ಸ್ಪರ್ಶವೇ ಅದುವರೆಗಿನ ನೋವನ್ನೆಲ್ಲ ಮರೆಸಿ ಬಿಡುತ್ತದೆ. ಅಮ್ಮನ ಅಪ್ಪುಗೆಗೆ ಎಂಥ ನೋವನ್ನೂ ಮರೆಸುವಂಥ ಶಕ್ತಿಯಿದೆ ಎನ್ನುವುದೇ ಅದಕ್ಕೆ.
ಇದು ನಮ್ಮೆಲ್ಲರ ನಂಬಿಕೆಯ ಮಾತಾಯಿತು. ಅಮ್ಮನ ಅಪ್ಪುಗೆಗೆ ನೋವು ಮರೆಸುವ ಶಕ್ತಿಯಷ್ಟೇ ಅಲ್ಲ, ಜೀವ ಕೊಡುವಂಥ ಸಾಮರ್ಥ್ಯವೂ ಇದೆ ಎಂಬ ಮಾತಿಗೆ ಸಾಕ್ಷಿಯಾದ ಒಂದು ಆಪ್ತ, ಹೃದ್ಯ ಪ್ರಸಂಗವನ್ನು ನಿಮಗೆ ಹೇಳಬೇಕು. ಈ ಘಟನೆ ನಡೆದಿದ್ದು ಇಂಗ್ಲೆಂಡಿನ ವೆಸ್ಟ್ ಲೊಥಿಯಾನ್ ನಗರದಲ್ಲಿ. ಅಲ್ಲಿನ ಡೇವಿಡ್ ಎಲಿಯಟ್-ಕೆರೋಲಿನ್ ಇಸಾ- ಬೆಸ್ಟರ್ ದಂಪತಿ ಅದೊಮ್ಮೆ ಆಸ್ಪತ್ರೆಗೆ ಬಂದರು. ತಮಗೆ ಹೊಸದಾಗಿ ಜನಿಸಲಿರುವ ಮಗುವಿನ ಕುರಿತು ವೈದ್ಯರೊಂದಿಗೆ ಚರ್ಚಿಸುವುದು, ಅವರ ಸಲಹೆ ಪಡೆಯುವುದು ಆ ದಂಪತಿಯ ಉದ್ದೇಶವಾಗಿತ್ತು.
ಕೆರೋಲಿನಾ ಇಸಾ ಬೆಸ್ಟರ್‌ಳನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಹೇಳಿದರು: ನಿಮಗೆ ಹೆಣ್ಣು ಮಗು ಜನಿಸುತ್ತದೆ. ಈವರೆಗಿನ ನಿಮ್ಮ ಆರೋಗ್ಯ ಚೆನ್ನಾಗಿದೆ. ಮುಂದೆಯೂ ಖುಷಿಯಿಂದಿರಿ.
ನಿಮ್ಮ ಸಂತೋಷ ಹೆಚ್ಚಾದಷ್ಟೂ, ಅದರಿಂದ ನಿಮ್ಮ ಒಡಲಲ್ಲಿರುವ ಮಗುವಿಗೆ ಒಳ್ಳೆಯದಾಗುತ್ತದೆ ಎಂದರು. ಡಾಕ್ಟರ್ ಮಾತು -ಕೇಳಿ ಆ ದಂಪತಿಯ ಖುಷಿಗೆ ಪಾರವೇ ಇಲ್ಲ. ಮಗು ಹೆಣ್ಣಾದರೆ ಯಾವ ಹೆಸರು ಇಡಬೇಕು, ಗಂಡಾದರೆ ಏನೆಂದು ಕರೆಯಬೇಕು ಎಂಬುದನ್ನೂ ಅವರು ಮೊದಲೇ ಯೋಚಿಸಿದ್ದರು. ಅದರಂತೆ ತಮಗೆ ಹುಟ್ಟಲಿರುವ ಹೆಣ್ಣು ಮಗುವಿಗೆ ರಾಚೆಲ್ ಎಂದು ಹೆಸರಿಡುವುದೆಂದು ವೈದ್ಯಕೀಯ ತಪಾಸಣೆಗೆ ಬಂದ ದಿನವೇ ನಿರ್ಧರಿಸಿದರು.
ಅವರು ಹೀಗೆಲ್ಲಾ ಮೊದಲೇ ಲೆಕ್ಕಾಚಾರ ಹಾಕಿಕೊಂಡು ಬದುಕಿಕುತ್ತಿದ್ದಕ್ಕೂ ಒಂದು ಕಾರಣವಿತ್ತು. ಏನೆಂದರೆ, ಕೆರೋಲಿನ್ ಇಸಾಬೆಸ್ಟರ್‌ಗೆ ಇದು ಎರಡನೇ ಮದುವೆಯಾಗಿತ್ತು. ಈ ಹಿಂದೆ ಎರಡು ಬಾರಿ ಗರ್ಭಪಾತವಾಗಿತ್ತು. ಅಷ್ಟಲ್ಲದೆ ಆಕೆಯ ವಯಸ್ಸೂ 36 ವರ್ಷಕ್ಕೆ ಬಂದು ನಿಂತಿತ್ತು. ಬೈ ಛಾನ್ಸ್, ಈ ಬಾರಿ ಮತ್ತೆ ಗರ್ಭಪಾತವಾದರೆ, ಕೆರೋಲಿನ್‌ಗೆ ಮುಂದೆ ಮಕ್ಕಳಾಗುವ ಸಾಧ್ಯತೆ ತುಂಬಾ ಕಡಿಮೆಯೆಂದೂ ವೈದ್ಯರು ಹೇಳಿಬಿಟ್ಟಿದ್ದರು. ಹಾಗಾಗಿ, ಎಲ್ಲ ಬಗೆಯ ಲೆಕ್ಕಾಚಾರಗಳೊಂದಿಗೆ ಎಲಿಯಟ್ -ಕೆರೋಲಿನ್ ದಂಪತಿ ವೈದ್ಯರ ಬಳಿಗೆ ಬಂದಿದ್ದರು.
ಆನಂತರದ ಪ್ರತಿಯೊಂದು ದಿನವನ್ನೂ ಈ ದಂಪತಿ ತುಂಬ ಸಂಭ್ರಮದಿಂದಲೇ ಕಳೆದರು. ಆದರೆ ನಾಲ್ಕು ತಿಂಗಳು ತುಂಬುವುದರೊಳಗೆ ಕೆರೋಲಿನಾಳ ಆರೋಗ್ಯದಲ್ಲಿ ಏನೋ ವ್ಯತ್ಯಾಸ ಕಾಣಿಸಿಕೊಂಡಿತು. ವೈದ್ಯರ ಬಳಿಗೆ ಓಡಿ ಬಂದರೆ, ಮತ್ತೆ ಹತ್ತಾರು ಬಗೆಯ ತಪಾಸಣೆ ಮಾಡಿದ ಅವರು ಹೇಳಿದರು: ವೆರಿ ಸಾರಿ. ಇನ್‌ಫೆಕ್ಷನ್ ಆಗಿದೆ. ಅದರ ಪರಿಣಾಮವಾಗಿ, ಅವಧಿಗೂ ಮೊದಲೇ ಮಗು ಹುಟ್ಟುತ್ತದೆ. ಅದರ ದೈಹಿಕ ಪರಿಸ್ಥಿತಿ ಹೇಗಿರುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಕ್ಷಮಿಸಿ ಎಂದು ಬಿಟ್ಟರು.
ಅದುವರೆಗೂ, ಹೊಸ ಮಗುವಿನ ನಿರೀಕ್ಷೆಯಲ್ಲಿ ಬಗೆಬಗೆಯ ಕನಸುಗಳನ್ನು ಕಟ್ಟಿಕೊಂಡಿದ್ದ ಡೇವಿಡ್-ಕೆರೋಲಿನ್ ದಂಪತಿಗೆ ವೈದ್ಯರ ಮಾತು ಕೇಳಿ ಆಕಾಶವೇ ಕಳಚಿ ಬಿದ್ದಾಗ ಆಗುವಂಥ ಶಾಕ್ ಆಯಿತು. ಒಂದಷ್ಟು ಹೊತ್ತು ದುಃಖದ ಕೈಗೆ ಮನಸ್ಸು ಒಪ್ಪಿಸಿದ ಅವರು, ನಂತರ ಪರಸ್ಪರರನ್ನು ಸಮಾಧಾನಿಸಿದರು. ಮುಂದೆ ಬರಲಿರುವ ಸಂಕಟದ ಕ್ಷಣವನ್ನು ಧೈರ್ಯದಿಂದ ಎದುರಿಸಲು ಮಾನಸಿಕವಾಗಿ ಸಿದ್ಧರಾದರು.
ಕಡೆಗೊಮ್ಮೆ ಆ ದಿನವೂ ಬಂದೇ ಬಿಟ್ಟಿತು. ಕೇವಲ 650 ಗ್ರಾಂ ತೂಕವಿದ್ದ, ಅವಧಿಗೆ ಮೊದಲೇ ಜನಿಸಿದ ಮಗುವನ್ನು ಸಿಸೇರಿಯನ್ ಮೂಲಕ ಹೊರ ತೆಗೆಯಲಾಯಿತು. ಆನಂತರ ವೈದ್ಯರು ತುಂಬ ಖಚಿತ ಧ್ವನಿಯಲ್ಲಿ ಹೇಳಿದರು: ಈ ಮಗು ಸಹಜವಾಗಿ ಉಸಿರಾಡುತ್ತಿಲ್ಲ. ಮಗುವಿನ ಹೃದಯ ಪ್ರತಿ ಹತ್ತು ಸೆಕೆಂಡಿಗೆ ಒಮ್ಮೆ ಮಾತ್ರ ಬಡಿದುಕೊಳ್ಳುತ್ತಿದೆ. ಹಾಗಾಗಿ ಈ ಮಗು ಹೆಚ್ಚೆಂದರೆ ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಮಾತ್ರ ಬದುಕುತ್ತದೆ. ಹೃದಯದ ಬಡಿತವೇ ನಾರ್ಮಲ್ ಆಗಿಲ್ಲದ ಕಾರಣ, ಮಗು ಉಳಿಯುತ್ತದೆ ಎಂದು ಗ್ಯಾರಂಟಿ ಕೊಡಲು ಸಾಧ್ಯವೇ ಇಲ್ಲ. ಕೆಟ್ಟ ಸುದ್ದಿ ಕೇಳಲು ಈಗಿನಿಂದಲೇ ಸಿದ್ಧವಾಗಿರಿ...
ಡೇವಿಡ್ ತಕ್ಷಣವೇ ವೈದ್ಯರ ಮಾತಿಗೆ ಸಮ್ಮತಿ ಸೂಚಿಸಿದ. ಯಾವುದೂ ನಮ್ಮ ಕೈಯಲ್ಲಿಲ್ಲ. ಸಮಾಧಾನ ಮಾಡ್ಕೋ ಎಂದು ಹೆಂಡತಿಗೂ ಹೇಳಿದ. ಈ ಸಂದರ್ಭದಲ್ಲಿ ವೈದ್ಯರ ಬಳಿ ಕೆರೋಲಿನ್ ಪ್ರಾರ್ಥಿಸಿದಳು: ಹೇಗಿದ್ರೂ ಮಗು ಸತ್ತು ಹೋಗುತ್ತೆ ಅಂತಿದ್ದೀರಾ... ಅದು ಸಾಯುವವರೆಗಾದರೂ ನನ್ನ ಪಕ್ಕದಲ್ಲೇ ಇರಲಿ. ದಯವಿಟ್ಟು ಮಗುವನ್ನು ಕೊಡಿ...
ಹತ್ತಿಗಿಂತ ಮೆತ್ತಗಿದ್ದ ಬಟ್ಟೆಯೊಂದರಲ್ಲಿ ಸುತ್ತಲಾಗಿದ್ದ ಆ ಮಗು ಅಳುತ್ತಿರಲಿಲ್ಲ. ಪಿಳಪಿಳನೆ ಕಣ್ಣು ಬಿಡುತ್ತಿರಲಿಲ್ಲ. ಕೈಕಾಲು ಆಡಿಸುತ್ತಿರಲಿಲ್ಲ. ಸರಿಯಾಗಿ ಉಸಿರಾಡುತ್ತಲೂ ಇರಲಿಲ್ಲ. ಅದೆಲ್ಲ ತಿಳಿದ ನಂತರವೂ ಕೆರೋಲಿನ್ ಇಸಾಬೆಸ್ಟರ್‌ಗೆ ಮಗುವಿನ ಮೇಲೆ ಪ್ರೀತಿ-ಮಮಕಾರ. ವೈದ್ಯರಿಂದ ಮಗುವನ್ನು ಪಡೆದ ಆಕೆ ತುಂಬ ಅಕ್ಕರೆಯಿಂದ, ಸಂಕಟದಿಂದ, ಆಸೆಯಿಂದ ಮತ್ತು ಪ್ರೀತಿಯಿಂದ ಅದನ್ನು ತನ್ನ ಎದೆಯ ಮೇಲೆ ಇಟ್ಟುಕೊಂಡು, ಸುಮ್ಮನೆ ಆ ಮಗುವಿನ ನೆತ್ತಿ ಸವರುತ್ತ ಉಳಿದು ಬಿಟ್ಟಳು.
ವೈದ್ಯರ ಲೆಕ್ಕಾಚಾರದಂತೆ, 20 ನಿಮಿಷಗಳ ನಂತರ ಆ ಮಗು ದಿಢೀರನೆ ಉಸಿರು ನಿಲ್ಲಿಸಬೇಕಿತ್ತು. ಬೆಚ್ಚಗಿದ್ದ ಮೈ ತಣ್ಣಗಾಗಬೇಕಿತ್ತು. ಇಂಥದೊಂದು ನಿರೀಕ್ಷೆಯಲ್ಲಿಯೇ ಎಲ್ಲರೂ ಇದ್ದರು. ಶವವನ್ನು ಒಯ್ಯಲೆಂದು ಆಂಬುಲೆನ್ಸ್ ಕೂಡ ತರಿಸಲಾಗಿತ್ತು. ಆದರೆ 30 ನಿಮಿಷಗಳು ಕಳೆದರೂ ಆ ಮಗುವಿಗೆ ಪ್ರಾಣಾಪಾಯದಂಥ ಸಮಸ್ಯೆ ಎದುರಾಗಲಿಲ್ಲ. ಬದಲಿಗೆ ಅದು ಇನ್‌ಕ್ಯುಬೇಟರ್‌ನಲ್ಲಿ ಇದ್ದ ಸಂದರ್ಭಕ್ಕಿಂತ ಹೆಚ್ಚು ಸರಾಗವಾಗಿ ಉಸಿರಾಡಿದಂತೆ ಕಾಣಿಸಿತು. ಪ್ರತಿ 10 ಸೆಕೆಂಡ್‌ಗೆ ಒಮ್ಮೆ ಬಡಿದುಕೊಳ್ಳುತ್ತಿದ್ದ ಮಗುವಿನ ಹೃದಯ, ಈಗ 9 ಸೆಕೆಂಡ್‌ಗೆ ಒಮ್ಮೆ ಬಡಿದುಕೊಳ್ಳಲು ಆರಂಭಿಸಿತ್ತು.
ಈ ಅಪರೂಪದ ಬೆಳವಣಿಗೆಯಿಂದ ವೈದ್ಯರೂ ಖುಷಿಯಾದರು. ಬೆರಗಾದರು. ಮುಂದೆ ನಡೆದದ್ದೆಲ್ಲಾ ಒಂದರ್ಥದಲ್ಲಿ ಪವಾಡವೇ. ಅಮ್ಮನ ಎದೆ ನಡುವಿನ ಬೆಚ್ಚನೆಯ ಜಾಗದಲ್ಲಿ ಜಾಗ ಪಡೆದುಕೊಂಡ ರಾಚೆಲ್, ನಂತರದ ಕ್ಷಣಗಳಲ್ಲಿ ಮತ್ತಷ್ಟು ಗೆಲುವಾದಳು. ಇರಲಿ, ಏನಾಗುವುದೋ ನೋಡೋಣ ಎಂದು ನಿರ್ಧರಿಸಿದ ವೈದ್ಯರು, ಈ ತಾಯಿ-ಮಗುವನ್ನು ಒಟ್ಟಿಗಿರಲು ಬಿಟ್ಟರು. ಪರಿಣಾಮ, ಮಗುವಿನ ಹೃದಯದ ಬಡಿತದಲ್ಲಿ ಚೇತರಿಕೆ ಕಂಡು ಬಂತು. ಆನಂತರದಲ್ಲಿ ಏನಾಯಿತೆಂದರೆ -ಸತ್ತೇ ಹೋಗುತ್ತದೆ ಎಂದು ನಂಬಲಾಗಿದ್ದ ಮಗು, ಅಮ್ಮನ ಸ್ಪರ್ಶ ಮಾತ್ರದಿಂದ ಬದುಕಿ ಬಿಟ್ಟಿತು.
ಪವಾಡ ಸದೃಶ ಘಟನೆಯೊಂದಕ್ಕೆ ಸಾಕ್ಷಿಯಾದ ಮಗಳನ್ನು ಮುಂದೆ ನಿಲ್ಲಿಸಿಕೊಂಡ ಕೆರೋಲಿನ್ ಹೇಳುತ್ತಾಳೆ: 'ಈ ಮಗು ಸತ್ತು ಹೋಗುತ್ತದೆ ಅಂದರಲ್ಲ; ಅವತ್ತು ವೈದ್ಯರು ಈ ಮಗುವನ್ನು ಒಮ್ಮೆ ಕೂಡಾ ಮುಟ್ಟಲಿಲ್ಲ.  ಬಹುಶಃ ಅವರ ಪಾಲಿಗೆ ಇದು ದಿನವೂ ನೋಡುವ ನೂರಾರು ಪೇಶೆಂಟ್‌ಗಳ ಪೈಕಿ ಒಂದು ಎಂಬಂತೆ ಕಾಣಿಸಿತೇನೋ. ಆದರೆ, ನನ್ನ ಪಾಲಿಗೆ, ನನ್ನ ರಕ್ತ, ಪ್ರೀತಿ ಮತ್ತು ಮನಸ್ಸನ್ನು ಹಂಚಿಕೊಂಡಿದ್ದ ಜೀವವಾಗಿತ್ತು. ಅಂಥ ಮಗು, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸತ್ತು ಹೋಗುತ್ತದೆ ಎಂದು ತಿಳಿದಾಗ, ಆ ಕಹಿ ಮಾತನ್ನುನ ಒಪ್ಪಲು ಮನಸ್ಸು ಸಿದ್ಧವಿರಲಿಲ್ಲ. ಸತ್ತು ಹೋಗುವ ಮುಂಚೆ ಆ ಮಗುವನ್ನು ಒಮ್ಮೆ ಅಪ್ಪಿಕೊಳ್ಳೋಣ. ಅದರ ಹಸಿ ಹಸೀ ಮೈನ ಘಮ, ನನಗಷ್ಟೇ ಅರ್ಥವಾಗುವ ಹಸೀ ಮಗುವಿನ ವಿಶಿಷ್ಟ ವಾಸನೆಯನ್ನು ಕಣ್ಣೊಳಗೆ ಹಾಗೂ ಮನದೊಳಗೆ ತುಂಬಿಕೊಳ್ಳೋಣ ಅನ್ನಿಸಿತು. ಅದೇ ಕಾರಣದಿಂದ ಮಗುವನ್ನು ಪಡೆದು ಎದೆಯ ಮಧ್ಯೆ ಇಟ್ಟುಕೊಂಡೆ. ಆನಂತರದಲ್ಲಿ ನಡೆದುದೆಲ್ಲಾ ನಿನ್ನ ಪಾಲಿಗೂ ಪವಾಡವೇ. ತಾಯ್ತನದ ಸುಖ ಹೇಗಿರಬಲ್ಲದು ಎಂದು ತೋರಿಸಿಕೊಟ್ಟ ರಾಚೆಲ್‌ಗೆ ನಾನು ಋಣಿ...
--
ಹೌದಲ್ಲವಾ, ಭಾರತವಾದರೂ,  ಇಂಗ್ಲೆಂಡ್ ಆದರೂ, ಆಫ್ರಿಕಾ ಆದರೂ ಕಡೆಗೆ ಪಾಕಿಸ್ತಾನವೇ ಆದರೂ ಎಲ್ಲ ದೇಶಗಳ ತಾಯಂದಿರೂ ಒಂದೇ. ಈ ಜಗತ್ತಿನ ಎಲ್ಲ ಅಮ್ಮಂದಿರೂ ಮಕ್ಕಳ ವಿಷಯದಲ್ಲಿ ಕೆರೋಲಿನ್ ಇಸಾಬೆಸ್ಟರ್‌ಳ ಥರಾನೇ ಯೋಚಿಸುತ್ತಾರೆ. ಅಲ್ಲವಾ?
ಮೊದಲು ಯಾರು?
ಗಾಸಿಪ್ ಹರಡುವುದರಲ್ಲಿ ಪ್ರೆಸ್‌ಕ್ಲಬ್‌ಗೆ ಎರಡನೆಯ ಸ್ಥಾನ ಹಾಗೂ ವಾಟ್ಸಪ್‌ಗೆ ಮೂರನೇ ಸ್ಥಾನ ನೀಡಲಾಗಿದೆ. ಮೊದಲನೆಯ ಸ್ಥಾನವನ್ನು ಉಳಿಸಿಕೊಳ್ಳಲು ಮಹಿಳೆಯರು ಯಶಸ್ವಿಯಾಗಿದ್ದಾರೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.