Hmm... ಪಾಂಚ್ ಸಿದ್ದರಾಮಯ್ಯ
ನಿಮ್ಮ ಮೂಡು ಸರಿಯಾಗಿದೆ ಅನ್ನೋ ಮೂಢನಂಬಿಕೆಯಿಂದ ಕೇಳ್ತಾ ಇದೀನಿ, ಮೂಢನಂಬಿಕೆ ಬ್ಯಾನ್ ಮಾಡೋ ನಿಮ್ಮ ಕೆಲಸದಿಂದ ಧಾರ್ಮಿಕವಾಗಿ ನಮ್ಮ ಜನಗಳ ಮೂಡ್ ಇನ್ ಇಂಡಿಯಾಗೆ ಧಕ್ಕೆ ಬರಲ್ವೇ?
-ಬೇಲೂರು ಹಳೇಬೀಡು ಪ್ರವಾಸ ಹೋಗೋ ಶಾಲಾಬಾಲಕರಿಗೂ ಶಿಲಾಬಾಲಿಕೆ ನೋಡೋ ಉದ್ದೇಶ ಇರಬಹುದಲ್ವಾ, ಅದಕ್ಕೆ ಅದನ್ನೂ ಬ್ಯಾನ್ ಮಾಡೋಣಾಂತಿದೀನಿ..
- ನೀವು ಹಿಂಗೆ ಮನಸಿಗೆ ಬಂದಿದ್ದನ್ನೆಲ್ಲಾ ಮಾಡ್ತಿರೋದ್ ನೋಡ್ತಿದ್ರೆ, ನಮ್ ಉಪೇಂದ್ರ ಅವರ ಥರ ನಿಮಗೂ ಐ ಆ್ಯಮ್ ಗಾಡ್ ಅನ್ನೋ ಮೂಢನಂಬಿಕೆ ಇದೆಯಾ ಅಂತ ಡೌಟು?
-ನೋಡ್ರೀ, ನಾನು ಗಾಡ್‌ಫಾದರ್ ಇಲ್ಲದೆ ಬಂದಿರೋನು, ಜೊತೆಗೆ ಗಾಡ್ ಇಲ್ಲ ಅನ್ನೋ ಗಾಢನಂಬಿಕೇನೂ ಇದೆ. ಅಂಥದ್ರಲ್ಲಿ ನಂಗೆ ಅಂಥ ಭ್ರಮೆಗಳಿರೋಕ್ ಸಾಧ್ಯನಾ?
- ಸರಿ, ಮುಸ್ಲಿಂ ಹುಡುಗಿಯರಿಗೆ ಶಾದಿ ಭಾಗ್ಯ ಕೊಟ್ಟಿದ್ದು ನೋಡಿ, ಹೆಣ್ಣು ಸಿಗೋದೇ ಕಷ್ಟ ಆಗಿರೋ ಹವ್ಯಕರ ಹುಡುಗರು, ನಮಗೆ ದುಡ್ಡೇನೂ ಬೇಡ, ಮದುವೆ ಆಗೋಕೆ ಒಂದ್ ಹುಡ್ಗಿ ಹುಡುಕ್ಕೊಡಿ ಅಂತ ಬೇಡಿಕೆ ಮುಂದಿಟ್ಟಿದಾರಂತೆ?
-ರೀ, ನಮ್‌ದು ಬರೀ ಶಾದಿ ಭಾಗ್ಯ. ಶಾದಿ ಡಾಟ್ ಕಾಮ್ ಭಾಗ್ಯ ಅಲ್ಲ್ಲ. ಮದುವೆ ಆಗೋಕೆ ಗಂಡು ಹೆಣ್ಣುಗಳ ಮೂಡ್ ಫಾರ್ ಈಚ್ ಅದರ್ ಇಂಪಾರ್ಟೆಂಟ್ ಕಣ್ರೀ.
-ನಿಮ್ಮ ಪ್ರಕಾರ ಮೂಢನಂಬಿಕೆಗೂ, ಮಡಿವಂತಿಕೆಗೂ ವ್ಯತ್ಯಾಸಾನೇ ಇಲ್ವಾ?
-ಅವೆಲ್ಲಾ ಗೊತ್ತಿಲ್ಲ, ಈ ವಿಷಯದಲ್ಲಿ ನಂದು ಮಾಡು ಇಲ್ಲವೆ 'ಮಡಿ' ಸೂತ್ರ, ಅಷ್ಟೇ.
-ಅದ್ಸರಿ, ನೀವು ಮುಖ್ಯಮಂತ್ರಿ ಆದಾಗ ರಾಜ್ಯ ಉದ್ಧಾರ ಆಗುತ್ತೆ ಅಂತ ಜನ ಮೂಢನಂಬಿಕೆ ಇಟ್ಕೊಂಡಿದ್ರಲ್ಲಾ ಅದಕ್ಕೇನ್ ಪರಿಹಾರ ಕೊಡ್ತೀರಿ?
-ಹಿಂಗೆಲ್ಲ ಪ್ರಶ್ನೆ ಕೇಳಿದ್ರೆ ನಾನು ನಿಮಗೆ ಬೇಕಾದಂಗೆ ಉತ್ತರ ಕೊಡ್ತೀನಿ ಅನ್ನೋ ಮೂಢನಂಬಿಕೆ ನಿಮಗಿದ್ದಂಗಿದೆ. ರೀ ಸೆಕ್ರೆಟರಿ, ಈ ಕಾಲ್ಪನಿಕ ಸಂದರ್ಶನ ಮಾಡೋದನ್ನೆಲ್ಲಾ ಬ್ಯಾನ್ ಮಾಡಿ ಒಂದು ಆದೇಶ ಹೊರಡಿಸ್ರೀ...
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಬೆಳಗ್ಗೆ ಎದ್ದು ದೇವರ ಮುಖ ನೋಡಿದ್ರೆ ಎಲ್ಲಾ ಒಳ್ಳೇದಾಗುತ್ತೋ ಇಲ್ವೋ ಆದ್ರೆ ಮುದ್ದಾದ ಮಕ್ಕಳನ್ನು, ಮಕ್ಕಳ ಪೋಟೋಗಳನ್ನು ನೋಡಿದರೆ ಮನಸ್ಸು ಮಗುವಿನಂತಾಗುವುದು ಗ್ಯಾರಂಟಿ. ಮಕ್ಕಳ ನಗು ಇರಲಿ, ಅಳು ಇರಲಿ, ಅದು ವಿಶೇಷವೇ. ನೀ ನಕ್ಕರೆ ಎಂಥಾ ಚೆಂದ, ನೀ ಅತ್ತರೆ ಇನ್ನೂ ಚೆಂದ ಎನ್ನುವಂಥದ್ದು. ಇಲ್ಲಿರುವ ಅಂಥ ಕೆಲವು ಮಕ್ಕಳ ಫೋಟೋ ನೋಡಿಕೊಂಡು ನಿಮ್ಮ ಭಾನುವಾರವನ್ನು ಹಗುರಾಗಿಸಿಕೊಳ್ಳಿ. ಈ ಭಾನುವಾರ ನಿಮ್ಮ ಕಂಪ್ಯೂಟರ್‌ನಲ್ಲಿ, ಮಕ್ಕಳಿರಲವ್ವ, ತೆರೆತುಂಬ.
bit.ly/4vqx3T
bit.ly/17U9uSF
bit.ly/QjLrmu
bit.ly/1bgt4t2
bit.ly/93FiZp
ಹರಿ-ಕಥೆ
ಖೇಮು ತಡವಾಗಿ ಮದುವೆ ಆಗಿದ್ದರಿಂದ ತಲೆ ಮೇಲಿನ ಕೂದಲು ಉದುರಿ, ಹೊಟ್ಟೆ ಬಂದು ತನ್ನ ಮಗನ ಅಜ್ಜನಂತೆ ಕಾಣುತ್ತಿದ್ದ. ಖೇತಮಾರನಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದ ಶ್ರೀಮತಿ ಖೇಮು ಮೆಟ್ರೋ ಲೈಫನ್ನೇ ನೋಡಿರಲಿಲ್ಲ. ಆಕೆ, ಒಂದು ದಿನ ಶಾಪಿಂಗ್ ಮಾಲ್‌ಗೆ ಕರೆದುಕೊಡು ಹೋಗಿ ಎಂದು ಗಂಡನಿಗೆ ದುಂಬಾಲು ಬಿದ್ದಾಗ ಖೇಮು, ಖೇಮುಶ್ರೀ ಮತ್ತು ಛೋಟಾ ಖೇಮು ಮೂವರೂ ಶಾಪಿಂಗ್ ಮಾಲ್ ಒಂದಕ್ಕೆ ಹೋದರು. ಅಲ್ಲಿ ಬರೀ ಹೆಂಗಸರ ಅಂಗಡಿಗಳಿಗೇ ಹೋಗುತ್ತಿದ್ದ ಹೆಂಡತಿಯನ್ನು ನೋಡಿ ಬೋರಾದ ಖೇಮು 'ಸರಿ ನಾನು ತಿರುಗಾಡಿಕೊಂಡು ಬರುತ್ತೇನೆ. ನೀವು ಶಾಪಿಂಗ್ ಮುಗಿಸಿ' ಎಂದು ಬೇರೆ ಕಡೆ ಹೊರಟ. ಖೇಮುಶ್ರೀ ಛೋಟಾ ಖೇಮುವನ್ನು ಕರೆದುಕೊಂಡು ಓಡಾಡುತ್ತಿರುವಾಗ ಅಲ್ಲಿ ಅವಳ ಕಣ್ಣಿಗೆ ಲಿಫ್ಟ್ ಕಾಣಿಸಿತು. ಜೀವನದಲ್ಲಿ ಎಂದೂ ಲಿಫ್ಟ್ ಅನ್ನೇ ನೋಡಿರದಿದ್ದ ಆಕೆಗೆ ಅದೇನು ಅಂತ ಗೊತ್ತಾಗಲಿಲ್ಲ. ಮಗನೊಂದಿಗೆ ಲಿಫ್ಟ್ ಅನ್ನು ನೋಡುತ್ತಾ ನಿಂತಳು. ಅಷ್ಟರಲ್ಲಿ ವೀಲ್ ಛೇರ್ ಮೇಲೆ ಬಂದ ಒಬ್ಬ ಅಜ್ಜ ತನ್ನಷ್ಟಕ್ಕೆ ತಾನು ಲಿಫ್ಟ್‌ನೊಳಕ್ಕೆ ಹೋದ. ಬಾಗಿಲು ಮುಚ್ಚಿಕೊಂಡಿತು. ನಂತರ 1,2,3,4,5 ಎಂದು ಫ್ಲೋರ್ ಸಂಖ್ಯೆ ಹೆಚ್ಚಾಗತೊಡಗಿತು. ತುಸು ಹೊತ್ತಿನ ನಂತರ, 5,4,3,2,1 ಎಂದು ಕಡಿಮೆಯಾಗುತ್ತಾ ಬಂದಿತು. ಲಿಫ್ಟ್ ಬಾಗಿಲು ಮತ್ತೆ ತೆರೆದುಕೊಂಡಿತು. ಈಗ ಲಿಫ್ಟ್‌ನಿಂದ ಥೇಟ್ ಹೃತಿಕ್ ರೋಷನ್‌ನಂತೆ ಸ್ಮಾರ್ಟ್ ಆಗಿದ್ದ ಹುಡುಗನೊಬ್ಬ ಹೊರಬಂದ. ಇದನ್ನೆಲ್ಲ ಗರಬಡಿದವಳಂತೆ ನೋಡುತ್ತಿದ್ದ ಖೇಮುಶ್ರೀ, ಆ ಕಡೆಯೇ ನೋಡುತ್ತಾ ಪಕ್ಕದಲ್ಲಿದ್ದ ಮಗನಿಗೆ ಮೆಲ್ಲನೆ ಹೇಳಿದಳು 'ಓಯ್, ಛೋಟಾ ಖೇಮು, ಹೋಗಿ ಬೇಗ ನಿಮ್ಮಪ್ಪನ್ನ ಕರ್‌ಕೊಂಡ್ ಬಾ'
ಸ್ಯಾಂಡಲ್‌ವುಡ್
ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗದೇ ಇರುವುದು ಹೊಸ ವಿಚಾರವೇನಲ್ಲ. ಆದರೆ ಇದು ಆ ಕೇಸಲ್ಲ ಬಿಡಿ. ರೋಹಿತ್ ಫಡಕಿ, ಸುಹಾಸ್, ಆದಿತ್ಯ ರವೀಶ್ ಮತ್ತೊಂದಿಷ್ಟು ಹೊಸ ಹುಡುಗರು ಸೇರಿಕೊಂಡು 'ಅಷ್ಟರಲ್ಲೇ ಜಸ್ಟ್ ಮಿಸ್ಸು' ಎಂಬ ಒಂದು ಕಿರುಚಿತ್ರ ಮಾಡಲು ಹೊರಟು ಅದು ಸ್ವಲ್ಪ ದೊಡ್ಡದಾದ ಕಾರಣ ಮತ್ತು ಅದಕ್ಕೆ ಸಿಗುತ್ತಿರುವ ಪ್ರಚಾರವೂ ದೊಡ್ಡದಾದ ಕಾರಣ, ಅದೀಗ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವ ಹಂತಕ್ಕೆ ಬಂದಿದೆ. ಆದರೆ ಇದು ಗಾಂಧಿನಗರದ ರೆಗ್ಯುಲರ್ ಸಿನಿಮಾ ಬಿಡುಗಡೆ ಅಲ್ಲ. ಒಂದಿಷ್ಟು ದೊಡ್ಡ ನಿರ್ಮಾಪಕರು, ವಿತರಕರನ್ನು ಸಂಪರ್ಕಿಸಿ ದೊಡ್ಡ ಮಟ್ಟದಲ್ಲೇ ಬಿಡುಗಡೆ ಮಾಡಬೇಕೆಂದು ಹೊರಟ ಈ ಹುಡುಗರಿಗೆ ಗಾಂಧಿನಗರದ ಕಡೆಯಿಂದ ಇನ್ನೇನು ಎಲ್ಲ ಬೆಂಬಲ ಸಿಕ್ಕಿತು ಎನ್ನುವಷ್ಟರಲ್ಲಿ ಸಿನಿಮಾ ಬಿಡುಗಡೆ ಅಷ್ಟರಲ್ಲೇ ಜಸ್ಟ್ ಮಿಸ್ ಆಗಿದೆ. ಆದರೆ ಅದರಿಂದ ವಿಚಲಿತರಾಗದ ಈ ತಂಡ ಇಂದು ಬೆಳಗ್ಗೆ 11 ಗಂಟೆಗೆ ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ತಮ್ಮ ಚಿತ್ರದ ಮೊದಲ ಸಾರ್ವಜನಿಕ ಪ್ರದರ್ಶನ ಏರ್ಪಡಿಸಿದ್ದಾರೆ. ಅಲ್ಲಿ ಗಾಂಧಿನಗರದ ಕೆಲವು ವಿಐಪಿಗಳೂ ಇರಲಿದ್ದಾರೆ. ಅಲ್ಲಿಗೆ ಹೋಗುವ ಸಿನಿಮಾ ಉತ್ಸಾಹಿಗಳಿಗೆ ಈ ಉತ್ಸಾಹಿ ಹುಡುಗರ ತಂಡವನ್ನು ಭೇಟಿ ಮಾಡುವ ಮತ್ತು ಅಷ್ಟರಲ್ಲೇ ಜಸ್ಟ್ ಮಿಸ್ಸು ಎಂಬ ಚಿತ್ರವನ್ನು ನೋಡುವ ಅವಕಾಶ.
ಡಬ್ಕುಡಬಲ್ ತುದಾಂಡಲ್...
ಮನುಷ್ಯರಿಗೆ ಮದುವೆ ಮಾಡಿದರೆ ಅದು ಪಾಣಿಗ್ರಹಣ.
ಮಳೆ ಬರ್ಲಿ ಅಂತ ಕತ್ತೆಗಳಿಗೆ ಮದುವೆ ಮಾಡಿದರೆ ಅದು ಪ್ರಾಣಿಗ್ರಹಣ
ಸರ್ದಾರ್ ಪಟೇಲ್ ನಮ್ಮವರು - ಮನಮೋಹನ್‌ಸಿಂಗ್ ಮತ್ತು ನರೇಂದ್ರ ಮೋದಿ
ಖೇಮು: ಅಂತೂ ಇಂತೂ 'ಸರ್ದಾರ್' ಜೀ ಗಳಿಗೆ ಬೆಲೆ ಬಂತು
ನರೇಂದ್ರ ಮೋದಿಯನ್ನು ಕಂಡರೆ ಆಗದ ಕೆಲವು ಕಿಡಿಗೇಡಿಗಳ ಮಾತು
ಸರ್ದಾರ್ ಪಟೇಲ್: ಉಕ್ಕಿನ ಮನುಷ್ಯ
ನರೇಂದ್ರ ಮೋದಿ: ಸೊಕ್ಕಿನ ಮನುಷ್ಯ
ಅತಿ ಸುಂದರಿಯಾದ ಹುಡುಗಿಯನ್ನು ವರ್ಣಿಸುವ ಬಗೆ
ಮಾಸ್ಟರ್ 'ಪೀಸ್'
ರೋಗಿಗೆ ಅರವಳಿಕೆ ಕೊಟ್ಟು ಅವನ ಅರಿವಿಗೆ ಬಾರದಂತೆ ನಡೆಸಲಾಗುವ ಆಪರೇಷನ್
ಸ್ಟಿಂಗ್ ಆಪರೇಷನ್
ಪ್ರೀತಿಯಲ್ಲಿ ಎಲ್ಲವೂ ಚೆನ್ನಾಗಿದ್ದರೆ ಸ್ವರ್ಗ, ಇಲ್‌ದಿದ್ರೆ ನರಕ ಎಂದು ಹೇಳುವ ಬಗೆ
ಲವ್ ಈಸ್ 'ಪಾಯಸ'ನ್
- ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

