ಅಂಕಣಗಳು

ಮುಖ್ಯಮಂತ್ರಿ ಕುರ್ಚಿಗೆ ಹೂ ಹಾಕಿದ್ದು ಯಾವ ನಂಬಿಕೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ...

ಮುಖ್ಯಮಂತ್ರಿ ಕುರ್ಚಿಗೆ ಹೂ ಹಾಕಿದ್ದು ಯಾವ ನಂಬಿಕೆ?
Published On :

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ಮೂಢನಂಬಿಕೆಗಳ ಪ್ರತಿಬಂಧಕ ಕಾನೂನು ತರಲು ನಿರ್ಧರಿಸಿದಾಗ ಅದನ್ನು ಸ್ವಾಗತಿಸುವ ಮನಸ್ಸಾಗಿತ್ತು. ಆದರೆ ಅದರ ಕರಡು ಸ್ವರೂಪ ನೋಡಿದಾಗ ಮನಸ್ಸು ಯಾಕೋ ಮುರಿಯಿತು. ಯಾಕೆಂದರೆ ಅದರಲ್ಲಿ ಇರುವ ಸಾಕಷ್ಟು ಅಂಶಗಳನ್ನು ನೀವೇ ಜೀವನದಲ್ಲಿ ಪಾಲಿಸಿದ್ದೀರಾ? ನೀವು ಅಥವಾ ನಿಮ್ಮ ಸಂಚಿವ ಸಂಪುಟದ ಸದಸ್ಯರೆಲ್ಲ ಇಂತಹ ನಂಬಿಕೆಗಳಿಂದ ಹೊರತಾದವರೇ? ಎಂದು ಪ್ರಶ್ನಿಸಲೇಬೇಕಾಗಿದೆ.
ಯಾಕೆಂದರೆ...
ನೀವು ಮುಖ್ಯಮಂತ್ರಿ ಕುರ್ಚಿಮೇಲೆ ಮೊದಲು ಕುಳಿತುಕೊಳ್ಳುವಾಗ ಪಕ್ಕದಲ್ಲಿ ಹೂವಿನ ಹಾರ ಹಿಡಿದ ಅರ್ಚಕರಿದ್ದರು ಎಂಬುದು ನಿಮಗೆ ಮರೆತುಹೋಗಿದೆಯೇ? ಕುರ್ಚಿಗೆ ನೀವೇ ಹೂವು, ಅಕ್ಷತೆ ಹಾಕಿದ್ದೀರಲ್ಲಾ ಅದ್ಯಾವ ನಂಬಿಕೆ? ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಬೆಂಬಲದಿಂದ ನಾನು ಮುಖ್ಯಮಂತ್ರಿಯಾದವ. ಯಾವ ದೈವಬಲದ ಸಹಾಯದಿಂದಲೂ ಅಲ್ಲ. ಹೀಗಾಗಿ ಯಾವ ದೈವಬಲವೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದೇ ನಿಮ್ಮ ನಿಲುವಾಗಿದ್ದರೆ, ಅರ್ಚಕರ ಅಗತ್ಯವೇ ಇರಲಿಲ್ಲ. ಮುಖ್ಯಮಂತ್ರಿ ಕುರ್ಚಿಯೂ ಯಾವುದೇ ಸಾಮಾನ್ಯ ಕುರ್ಚಿಯಂತೆ ಎಂದು ಭಾವಿಸಬಹುದಿತ್ತು.
ಶ್ರಾವಣ ಮಾಸದಲ್ಲಿ ನಿಮ್ಮ ಮನೆಯಲ್ಲಿ ವರಮಪಾಲಕ್ಷ್ಮೀ ಪೂಜೆ ಮಾಡಿದ್ದು ಸುಳ್ಳೇ? ಸಂಪತ್ತು ಹೆಚ್ಚಾಗಲಿ ಎಂದು ತಾನೇ ವರಮಹಾಲಕ್ಷ್ಮೀ ಪೂಜೆ ಮಾಡುವುದು? ನೀವೇ ಅದನ್ನು ಮಾಡುವುದರಿಂದ ರಾಜ್ಯದ ಜನರಿಗೆಲ್ಲ ನೀವು ಅದನ್ನು ಮಾಡುವಂತೆ ಪ್ರೋತ್ಸಾಹ ನೀಡಿದಂತಾಗಲಿಲ್ಲವೇ?
ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ತರಲು ಹೊರಟಿದ್ದೀರಲ್ಲಾ ಅಂತಹ ನೀವು ಅಣೆಕಟ್ಟುಗಳು ತುಂಬಿದಾಗ ಬಾಗೀನ ಕೊಟ್ಟಿದ್ದೇಕೆ? ನದಿಗಳಿಗೆ ಯಾಕೆ ಬಾಗೀನ ಅರ್ಪಿಸಬೇಕು? ವೈಜ್ಞಾನಿಕ ಚಿಂತನೆ ರೂಢಿಸಿಕೊಂಡಿರುವ ನಿಮ್ಮಂಥವರ ಭೂಮಿಯಿಂದ ಆವಿಯಾದ ನೀರು, ಮೇಲೆ ಹೋಗಿ ತಂಪಾಗಿ ಮಳೆ ಸುರಿಯುತ್ತದೆ. ಮಳೆಯ ನೀರು ಸ್ವಲ್ಪ ಭೂಮಿಯಲ್ಲಿ ಇಂಗಿ, ಉಳಿದ ನೀರು ಹರಿದುಬರುತ್ತದೆ. ಅದೇ ನದಿ. ಅಷ್ಟಕ್ಕೆ ಬಾಗೀನ ಯಾಕೆ ಅರ್ಪಿಸಬೇಕು? ಕೈ ಯಾಕೆ ಮುಗಿಯಬೇಕು?
ಚಾಮರಾಜಗರಕ್ಕೆ ನೀವು ಭೇಟಿ ನೀಡಿದಾಗ ನಾವು ಮೆಚ್ಚಿಕೊಂಡಿದ್ದೆವು. ಅದೇನೋ ಬಹುತೇಕ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋದರೆ ಕುರ್ಚಿ ಹೋಗುತ್ತದೆ ಎಂದು ಅತ್ತ ಸುಳಿಯುತ್ತಿರಲಿಲ್ಲ. ಕೆಲವು ಬಾರಿ ಕಾಗೆ ಕೂರುವುದಕ್ಕೂ ಕೋಲು ಮುರಿಯುವುದಕ್ಕೂ ಸರಿಯಾಯ್ತು ಅಂತಾರಲ್ಲ ಹಾಗೆ ಕೆಲವರು ಹುದ್ದೆಯನ್ನೂ ಕಳೆದುಕೊಂಡಿದ್ದರು. ಅದನ್ನು ಮುರಿಯಲೆಂದೇ ಸಿದ್ದರಾಮಯ್ಯನವರು ಚಾಮರಾಜನಗರಕ್ಕೆ ಭೇಟಿ ನೀಡಿದರು. ಅಂತಹ ನಡೆಗಳು ಖಂಡಿತ ಸ್ವಾಗತಾರ್ಹ.
ಆದರೆ ಸಿದ್ದರಾಮಯ್ಯನವರಿಗೆ ಅತ್ಯಂತ ಆಪ್ತರಾದ ಎಚ್.ಎಂ. ರೇವಣ್ಣ ಅವರು ಚಾಮರಾಜನಗರಕ್ಕೆ ಭೇಟಿ ನೀಡುವುದರಿಂದ ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಹಾನಿಯಾಗಬಾರದು ಎಂದು ಹೋಮ ನಡೆಸಿದ್ದರು!
ಇಷ್ಟಕ್ಕೂ ವಿಜಯನಗರದಲ್ಲಿರುವ ನಿಮ್ಮ ಮನೆಯನ್ನು 2-3 ಬಾರಿ ಒಡೆದು ಕಟ್ಟಿದ್ದು ನಂಬಿಕೆಯಿಂದಲೋ? ಮೂಢನಂಬಿಕೆಯಿಂದಲೋ?
ಮೂಢನಂಬಿಕೆಯನ್ನು ಪ್ರತಿಬಂಧಕ ಕಾನೂನು ಜಾರಿ ಮಾಡುವ ಮೊದಲು ನೀವು ಇದರ ಕುರಿತೆಲ್ಲಾ ಯೋಚಿಸಿದ್ದೀರಾ? ಅದರಲ್ಲಿ ಇರುವುದನ್ನೆಲ್ಲಾ ನಿಮ್ಮದೇ ಮನೆಯಲ್ಲಿ, ಕ್ಯಾಬಿನೆಟ್ ಸಚಿವರ ಮನೆಯಲ್ಲಿ ಜಾರಿ ಮಾಡುವುದು ಸಾಧ್ಯವಾ? ಅಲ್ಲಿಯೇ ಸಾಧ್ಯವಿಲ್ಲದ ಮೇಲೆ ಸಾರ್ವಜನಿಕ ಜಾರಿ ಸಾಧ್ಯವಾ?
ಈ ಕಾನೂನಿನ ಕರಡುಪ್ರತಿಯಲ್ಲಿ ಹಿಂದು ಧರ್ಮವನ್ನು ಮಾತ್ರ ಗುರಿಯಾಗಿಸಿದ್ದೇಕೆ? ನಮ್ಮದು ಮೂಢನಂಬಿಕೆ? ಅವರದ್ದು ಧಾರ್ಮಿಕ ಭಾವನೆಯಾ? ಇದಕ್ಕೆ ಉತ್ತರ ಇಲ್ಲವೆಂದಾದರೆ ಮೂಢನಂಬಿಕೆಗಳ ಪ್ರತಿಬಂಧಕ ಕಾನೂನಿನಲ್ಲಿ ಇತರೆ ಧರ್ಮಗಳ ಮೂಢನಂಬಿಕೆಗಳ ಬಗ್ಗೇಕೆ ಪ್ರಸ್ತಾಪವಿಲ್ಲ? ಅಂತಹ ಪ್ರಸ್ತಾಪ ಮಾಡುವ ಧೈರ್ಯವೂ ನಿಮಗೆ ಅಥವಾ ನಿಮ್ಮ ಸರ್ಕಾರದ ಹೊರಗಿನ ಬುದ್ದಿಜೀವಿಗಳ ಕ್ಯಾಬಿನೆಟ್‌ಗೆ ಇಲ್ಲವಾ? ಮಸೂದೆಯಲ್ಲಿ 'ಎಲ್ಲ ಧರ್ಮದಲ್ಲೂ ಮೂಢನಂಬಿಕೆಗಳಿವೆ' ಎಂದು ಪದೇ ಪದೇ ಹೇಳಲಾಗಿದೆ. ಆದರೆ ಪ್ರತಿಯೊಂದಕ್ಕೂ ಹಿಂದು ಧರ್ಮದ ಆಚರಣೆಗಳನ್ನೇ ಉದಾಹರಿಸಲಾಗಿದೆ. ಹುಡುಕಿದರೂ ಬೇರೆ ಧರ್ಮದ ಒಂದೇ ಒಂದು ಅಂಧಾಚರಣೆ ಪ್ರಸ್ತಾಪವಿಲ್ಲ. ಹಾಗಾದರೆ ಬೇರೆ ಧರ್ಮದಲ್ಲಿ ಒಂದೇ ಒಂದು ಅಂಧಾಚರಣೆಯೂ ಇಲ್ಲವಾ?
2005-06ರಲ್ಲಿರಬೇಕು. ಮಂಗಳೂರಿನ ತೊಕ್ಕೊಟ್ಟಿನ ಸಮೀಪದ ಮನೆಯೊಂದರಲ್ಲಿ ಗಂಡಸು ಮೃತಪಟ್ಟಿದ್ದ. ಆದರೆ ಆತನ ಪತ್ನಿ ಮತ್ತು ಮಗಳು ಅವರ ಅಂತ್ಯಸಂಸ್ಕಾರ ಮಾಡಲು ಸಿದ್ಧರಿರಲಿಲ್ಲ. ಕಾರಣ ದೇವರ ಪ್ರಾರ್ಥನೆ ಮಾಡಿದರೆ ಗಂಡ ಬದುಕಿ ಬರುತ್ತಾನೆ ಎಂದು ಅವರು ನಂಬಿದ್ದರು ಅಥವಾ ಅಲಲೂಯ ಸಂಘಟನೆಯವರು ನಂಬಿಸಿದ್ದರು. ಆ ಮೇಲೆ ಪೊಲೀಸರು ಬಲವಂತವಾಗಿ ಅಂತ್ಯಸಂಸ್ಕಾರ ನೆರವೇರಿಸಿ, ತಾಯಿ-ಮಗಳನ್ನು ಕೆ.ಎಸ್. ಹೆಗಡೆ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅವರು ಕ್ರಿಶ್ಚಿಯನ್ ಧರ್ಮದವರು.
ಇದಕ್ಕೇನಂತೀರಾ ಸಿದ್ದರಾಮಯ್ಯನವರೇ? ಇದು ಮೂಢನಂಬಿಕೆಯಲ್ಲವೇ? ಇವುಗಳಬಗ್ಗೆ ಏಕೆ ಪ್ರಸ್ತಾಪವಿಲ್ಲ? ನಿಮ್ಮ ಬುದ್ದಿಜೀವಿಗಳ ಕ್ಯಾಬಿನೆಟ್‌ನಲ್ಲಿರುವವರು ಕತರ್ನಾಖ್ ಜನ. ಅವರು ಇದಕ್ಕೂ ಹಿಂದು ಧರ್ಮದ ಉದಾಹರಣೆಯನ್ನೇ ಕೊಟ್ಟಾರು. ಏಕೆಂದರೆ ಸತಿ ಸಾವಿತ್ರಿ ಕತೆಯಿದೆಯಲ್ಲ!! ಪೂಜೆ, ಪುನಸ್ಕಾರ, ಹೋಮ ಮುಂತಾದವು ಮೂಢನಂಬಿಕೆ ಎಂದಾದರೆ ಶುಕ್ರವಾರ ಮಧ್ಯಾಹ್ನ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಕೊಂಚಹೊತ್ತು ಬಿಡುವು ನೀಡಬೇಕು ಎಂಬುದು ಏನು?
ಹಿಂದು ಧರ್ಮದಲ್ಲಿ ಮೌಢ್ಯಗಳಿಲ್ಲ ಎಂದು ನಾನು ಹೇಳುತ್ತಿಲ್ಲ. ಹಿಂದು ಧರ್ಮದಲ್ಲೇ ಹೆಚ್ಚು ಮೂಢನಂಬಿಕೆಗಳಿವೆ ಎಂದರೂ ಒಪ್ಪಿಕೊಳ್ಳಬಹುದೇನೊ. ಆದರೆ ಹಿಂದು ಧರ್ಮದಲ್ಲಿ ಮಾತ್ರ ಮೂಢನಂಬಿಕೆಗಳಿವೆ ಎಂದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತುಂಬ ಹಿಂದೆ ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ ಎಂಬ ನಂಬಿಕೆಯಿತ್ತು. ಆದರೆ ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂಬುದು ಅರಿವಾದಾಗ ಮೊದಲನೆಯದು ಮೂಢನಂಬಿಕೆ ಎಂಬುದು ಗೊತ್ತಾಯ್ತು. ಸಾಕಷ್ಟು ನಂಬಿಕೆಗಳು ಹೀಗೇ. ಕಾಲಾಂತರದಲ್ಲಿ ಬದಲಾಗಿವೆ. 10 ವರ್ಷದ ಹಿಂದಿದ್ದ ನಂಬಿಕೆಗಳು ಈಗ ನಂಬಿಕೆಗಳಾಗಿ ಉಳಿದಿಲ್ಲದೇ ಇರಬಹುದು ಅಥವಾ ಇನ್ನಷ್ಟು ಗಟ್ಟಿಯಾಗಿರಲೂಬಹುದು. ರಾಮಾಯಣದಲ್ಲಿ 'ಪುಷ್ಪಕವಿಮಾನ'ದಲ್ಲಿ ರಾವಣ ಬಂದ ಎಂದರೆ ಮೂಢನಂಬಿಕೆ. ಅದೇ ಸಿದ್ಧರಾಮಯ್ಯನವರು ಹೆಲಿಕಾಫ್ಟರ್ ಮೂಲಕ ಬಂದಿಳಿದರು ಅಂದರೆ ಸತ್ಯ. ಮಹಾಭಾರತದಲ್ಲಿ ಸಂಜಯ ಅಲ್ಲೆಲ್ಲೋ ಕುಳಿತು ಯುದ್ಧನೋಡಿ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳಿದಅಂದರೆ ಮೂಢನಂಬಿಕೆ. ಸಿದ್ದರಾಮಯ್ಯನವರು ಎಲ್ಲೋ ಮಾಡಿದ ಭಾಷಣವನ್ನು ಮನೆಯಲ್ಲೇ ಕುಳಿತು ನೋಡುವುದು ಸತ್ಯ! ಒಂದು ಕಾಲದಲ್ಲಿ ಮೂಢನಂಬಿಕೆ ಎಂದು ಅನ್ನಿಸಿದ್ದು ಇಂದು ಸತ್ಯವಾಗಿರಲೂಬಹುದು.
ಅದಕ್ಕೇ ಹೇಳಿದ್ದು ನಂಬಿಕೆಗೂ ಮೂಢನಂಬಿಕೆಗೂ ಅತ್ಯಂತ ತೆಳುವಾದ ವ್ಯತ್ಯಾಸವಿದೆ. ನಂಬಿಕೆಗಳು ಖಾಸಗಿಯಾಗಿದ್ದಲ್ಲಿ ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳಬಾರದು. ಸಮಾಜಕ್ಕೆ ಮಾರಕವಾಗುವತಂಹ, ಸಾರ್ವಜನಿಕವಾದ ನಂಬಿಕೆಗಳಿದ್ದರೆ ಅದನ್ನು ಖಂಡಿತಾ ನಿಷೇಧಿಸಬೇಕು. ಆದರೆ ಅದಕ್ಕೆ ಧರ್ಮಭೇದ ಇರಬಾರದು ಎಂಬುದೂ ಅಷ್ಟೇ ಮುಖ್ಯ. ನೀವು ರೂಪಿಸಿರುವ ಮಸೂದೆ ಕರಡಿನಲ್ಲಿ ಋತುಮತಿಯಾದ ಮಹಿಳೆಯನ್ನು ಒಂಟಿಯಾಗಿರಿಸುವುದು, ಗ್ರಾಮದೊಳಗೆ ಬಾರದಂತೆ ನಿಷೇಧಿಸುವುದು ಮತ್ತು ಒಂಟಿಯಾಗಿರಿಸಲು ಅನುಕೂಲ ಕಲ್ಪಿಸುವುದು ಕೂಡ ಮೂಢ ನಂಬಿಕೆ ಎಂದಿದೆ. ಇದನ್ನು ಆಯಾ ಮಹಿಳೆ ಮತ್ತು ಮನೆಯವರ ತೀರ್ಮಾನಕ್ಕೇ ಬಿಡುವುದು ಒಳ್ಳೆಯದು ಎಂದು ನಿಮಗನ್ನಿಸುವುದಿಲ್ಲವೇ? ಜಾರಿಯಲ್ಲಿರುವ ಪ್ರತಿಯೊಂದು ಆಚರಣೆಗಳಿಗೂ ಅರ್ಥವಿದೆ. ಋತುಮತಿಯಾದ ಸಂದರ್ಭದಲ್ಲಿ ಸ್ತ್ರೀಯರಿಗೆ ಸುಸ್ತು, ಸ್ನಾಯುಸೆಳೆತ, ಅಶಕ್ತತೆ ಇರುತ್ತದೆ. ಆದ್ದರಿಂದ ಅವರಿಗೆ ಮನೆ ಕೆಲಸಗಳಿಂದ ಬಿಡುವು ನೀಡಬೇಕು ಎಂಬ ಉದ್ದೇಶದಿಂದಲೇ ಅವರು ಮನೆಯೊಳಗೆ ಬರಬಾರದು ಎಂಬ ನಿಯಮ ಏಕೆ ರೂಪಿಸಿರಬಾರದು? ಅಲ್ಲದೇ ಆಗೆಲ್ಲ ಸ್ಯಾನಿಟರಿ ಪ್ಯಾಡ್‌ಗಳು ಬಂದಿರಲಿಲ್ಲ. ಸ್ವಚ್ಛತೆಯ ದೃಷ್ಟಿಯೂ ಇರಬಹುದಲ್ಲವೇ?
ಬೆತ್ತಲೆಸೇವೆ, ಸಾರ್ವಜನಿಕವಾಗಿ ಬಲವಂತವಾಗಿ ಮಹಿಳೆಯರ ಮೇಲೆ ಬಣ್ಣ ಎರಚುವುದು, ಸಿಡಿ, ಭಾನಾಮತಿ ಇವುಗಳನ್ನೆಲ್ಲ ನಿಷೇಧಿಸಿ. ಢೋಂಗಿ ಭವಿಷ್ಯ ಹೇಳುವವರನ್ನು ಶಿಕ್ಷೆಗೆ ಗುರಿಪಡಿಸಲು ಕಾನೂನು ರೂಪಿಸಿ. ಬೇಡ ಅನ್ನುವುದಿಲ್ಲ. ಆದರೆ ನಿಜವಾಗಿ ಭವಿಷ್ಯ ಹೇಳುವವರನ್ನು ಜ್ಯೋತಿಷ್ಯಶಾಸ್ತ್ರ ಅಧ್ಯಯನ ಮಾಡಿದವರನ್ನು, ವಾಸ್ತುಶಾಸ್ತ್ರ ಅಧ್ಯಯನ ಮಾಡಿದವರನ್ನು ಶಿಕ್ಷಿಸಲು ಹೊಡುವುದು ಯಾವ ಸಾಮಾಜಿಕ ನ್ಯಾಯ?
ಹುಣ್ಣಿಮೆ-ಅಮಾವಾಸ್ಯೆಯಂದು ಗುರುತ್ವಾಕರ್ಷಣ ಶಕ್ತಿಯಲ್ಲಾಗುವ ಏರುಪೇರು ಸಮುದ್ರದ ಅಲೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಇಂದಿನ ವಿಜ್ಞಾನ ಹೇಳಿರಬಹುದು. ಆದರೆ ಅನಾದಿ ಕಾಲದಲ್ಲೇ ಈ ಹುಣ್ಣಿಮೆ ಅಮಾವಾಸ್ಯೆಗಳು ಸಮುದ್ರದ ಮೇಲಷ್ಟೇ ಅಲ್ಲ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದ್ದರಲ್ಲಾ ಅದಕ್ಕೇನು ಹೇಳುತ್ತೀರಿ ಸಿದ್ದರಾಮಯ್ಯನವರೇ? ಕೇವಲ ನಿಮ್ಮ ಬೆರಳಚ್ಚನ್ನು ಪಡೆದು, ನಿಮ್ಮ ಪೂರ್ವಾಪರ ಮತ್ತು ಭವಿಷ್ಯವನ್ನು ಕರಾರುವಾಕ್ಕಾಗಿ ಹೇಳುವ ಜನರಿದ್ದಾರೆ. ಅವರು ಹೇಳಿದ್ದು ಸತ್ಯವಾದರೂ, ಅದು ಮೂಢನಂಬಿಕೆಯಾ?
ಇತ್ತೀಚೆಗೆ ನಿಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಉತ್ತರಪ್ರದೇಶದಲ್ಲಿ ಸಾಧುವೊಬ್ಬರ ಮಾತು ಕೇಳಿ ಉತ್ಖನನಕ್ಕೆ ಮುಂದಾಗಿದ್ದು ಜಗತ್ತಿಗೇ ಗೊತ್ತಿದೆ. ಅದು ಮೂಢನಂಬಿಕೆಯಲ್ಲವೇ? ಮೂಢನಂಬಿಕೆಯನ್ನು ನಿಷೇಧಿಸಿ ಕಾನೂನು ತರಲುಹೊರಟಿರುವ ನೀವು ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ದಾಢಸಿತನವನ್ನಲ್ಲದಿದ್ದರೂ, ಒಂದು ಹೇಳಿಕೆ ನೀಡುವ ಧೈರ್ಯವನ್ನಾದರೂ ತೋರಬಹುದಿತ್ತಲ್ಲವೇ? ಆದರೆ ಆಗ ನೀವು ಹೈಕಮಾಂಡ್‌ನ ಮೂಢನಂಬಿಕೆಗೆ ಬೆಂಬಲವಾಗಿ ಸುಮ್ಮನಿದ್ದಿರಿ ತಾನೇ? ಇಷ್ಟಕ್ಕೂ ಮೂಢನಂಬಿಕೆ ಯಾವುದು ಎಂದು ನಿರ್ಧರಿಸುವವರು ಯಾರು? ಒಂದೇ ಧರ್ಮದವರನ್ನು ಹೀಗಳೆಯುವ, ಅಲ್ಪಸಂಖ್ಯಾತರದ್ದು ಮಾತ್ರ ಧಾರ್ಮಿಕ ಭಾವನೆಗಳು ಎಂದು ಬಿಂಬಿಸುವ, ಭಾಷಣ ಮಾಡುವ ಬುದ್ದಿಜೀವಿಗಳ ದಂಡಾ? ನಿಮ್ಮ ಮೂಢನಂಬಿಕೆ ನಿಷೇಧಿಸುವ ಕಾನೂನು ಕರಡು ಸಿದ್ಧಪಡಿಸಿದ ತಂಡದಲ್ಲಿದ್ದವರು ಯಾರು? ಅದೇ ದಂಡೇ ಅಲ್ಲವೇ?
ರಾಜ್ಯಪ್ರಶಸ್ತಿ ಆಯ್ಕೆಗೂ ಅದೇ ಬುದ್ದಿಜೀವಿಗಳ ದಂಡು. ಮೂಢನಂಬಿಕೆಗಳ ನಿವಾರಣೆಗೂ ಅದೇ ಬುದ್ದಿಜೀವಿಗಳ ದಂಡು. ಶಾಲೆಗಳ ಪಠ್ಯ ನಿರ್ಮಾಣಕ್ಕೂ ಅವರೇ. ಸಮಾಜದ ಮತ್ತು ಸರ್ಕಾರದ ಸಮಸ್ಯೆ, ವ್ಯಾಧಿಗಳಿಗೆಲ್ಲಬುದ್ದಿಜೀವಿಗಳ ಅಥವಾ ಒಂದು ವರ್ಗದ ಸಾಹಿತಿಗಳ ದಂಡೇ ಪರಿಹಾರ ಎಂಬುದು ನಿಮ್ಮ ಮೂಢನಂಬಿಕೆಯೇ? ಒಂದು ಧರ್ಮವನ್ನು ನಾಶಮಾಡಬೇಕೆಂದಿಲ್ಲ, ಕೇವಲ ಅದರ ಆಚರಣೆಗಳನ್ನು ನಾಶ ಮಾಡಿದರೆ ಸಾಕು. ಒಂದು ಧರ್ಮವನ್ನು ವಿರೋಧಿಸಬೇಕೆಂದಿಲ್ಲ. ಬದಲಾಗಿ ಇನ್ನೊಂದು ಧರ್ಮವನ್ನು ಓಲೈಸಿದರೆ ಸಾಕು ಎಂಬ ನೀತಿಯನ್ನು ನೀವು ಅಳವಡಿಸಿಕೊಂಡಿರುವುದು ತುಂಬ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಕುಕೃತ್ಯಕ್ಕೆ 'ಮೂಢನಂಬಿಕೆಗಳನ್ನು ನಾಶಮಾಡುವ' ಕಾಳಜಿಯ ಮುಖವಾಡ ತೊಡಿಸಲಾಗಿದೆ ಎಂಬುದಕ್ಕಷ್ಟೇ ನಮ್ಮ ವಿರೋಧ. ನಿಮಗೆ ಅರಿತೋ, ಅರಿಯದೆಯೋ ಬುದ್ದಿಜೀವಿಗಳು ಸರ್ಕಾರದ ನೀತಿನಿರೂಪಿಸುವ ಹಂತ ತಲುಪಿದ್ದಾರೆ. ಬುದ್ದಿಜೀವಿಗಳಿಗೆ ಒಂದು ವರ್ಗವನ್ನು ಮಾತ್ರ ಓಲೈಸಿಕೊಂಡರೆ ಸಾಕು. ಆದರೆ ನೀವು ರಾಜಕಾರಣಿ. ಒಬ್ಬ ಮುಖ್ಯಮಂತ್ರಿ. ಎಲ್ಲ ವರ್ಗದವರನ್ನೂ ಸಮಾನವಾಗಿ ನೋಡುವ ಪ್ರಮಾಣ ತೆಗೆದುಕೊಂಡವರು. ಪ್ರಮಾಣ ಅಂದಾಕ್ಷಣ ನೆನಪಾಯ್ತು ನೀವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಮೂಢನಂಬಿಕೆಯಲ್ಲವೇ? ನೀವು ಸತ್ಯದ ಹೆಸರಿನಲ್ಲಿ ಪ್ರಮಾಣ ಮಾಡಿರಬಹುದು. ಆದರೆ ಪ್ರಮಾಣ ಎಂಬುದೇ ಮೂಢನಂಬಿಕೆಯಲ್ಲವೇ? ಪ್ರಮಾಣದ ಪ್ರಕಾರ ನಡೆದುಕೊಂಡಿಲ್ಲವಾದರೆ ಏನೋ ಆಗುತ್ತದೆ ಎಂಬುದು ವೈಜ್ಞಾನಿಕವೇನಲ್ಲ.
ಅಂದರೆ ನೀವು, ಹಿಂದಿನವರು ಎಲ್ಲ ಪ್ರಮಾಣ ಮಾಡಿ, ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದೀರಿ ಎಂದಾಗಲಿಲ್ಲವೇ? ಹಾಗಾದರೆ ಈ ಕಾನೂನಿನ ಮೂಲಕ ಹಾಗೆ ಮಾಡಿದವರನ್ನೂ ಶಿಕ್ಷೆಗೆ ಗುರಿಪಡಿಸಬಹುದೇ?

- ವಿನಾಯಕ ಭಟ್ಟ ಮೂರೂರು
ಕನ್ನಡಪ್ರಭ

ಇದನ್ನೂ ಓದಿ...

  • ವಿಧೇಯಕ ಮೌಢ್ಯಕ್ಕೆ ಸೆಡ್ಡು
  • Follow KannadaPrabha channel on WhatsApp

      

    Subscribe to KannadaPrabha YouTube Channel and watch Videos

       

    Download the KannadaPrabha News app to follow the latest news updates

      

    Subscribe and Receive exclusive content and updates on your favorite topics

    Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.