ಮರಳಿ ಬಂದ ನೀರಿಗೆ ತೇರು ಕಟ್ಟಿದರು!
ಲಾಪೋಡಿಯಾದಲ್ಲಿ ಪ್ರತೀ ದೀಪಾವಳಿಗೆ ಸುತ್ತಮುತ್ತಲಿನ ಹಳ್ಳಿಗರೆಲ್ಲ ಸೇರಿ...

ಮೊನ್ನೆ ಮೊನ್ನೆ ಕಳೆಯಿತಲ್ಲ, ಆ ದೀಪಾವಳಿಗೆ ನಾಲ್ಕು ದಿನ ಇದೆಯೆನ್ನುವಾಗ ದೂರದ ರಾಜಸ್ಥಾನದ ಲಾಪೋಡಿಯಾದ ಜಲಸೇನಾನಿ ಲಕ್ಷ್ಮಣ ಸಿಂಗ್ ಫೋನ್ ಮಾಡಿದ್ದರು. ಶುದ್ಧ ದೇಸಿ ಹಿಂದಿಯಲ್ಲಿ 'ಈ ವರ್ಷವಾದರೂ ನಮ್ಮ ತಾಲಾಬ್ ಉತ್ಸವಕ್ಕೆ ಬರುತ್ತೀಯಾ ಗೆಳೆಯಾ' ಎಂದು ಹುಸಿ ಮುನಿಸಿನೊಂದಿಗೆ, ಅಷ್ಟೇ ಅಕ್ಕರೆಯಿಂದ ಆಹ್ವಾನಿಸಿದರು. ಕೆಟ್ಟು ಕುಲಗೆಟ್ಟು ಹೋಗಿದ್ದ, ಬೆಂದು ಬರಗೆಟ್ಟು ಕುಳಿತಿದ್ದ ಲಾಪೋಡಿಯಾದಲ್ಲಿ ಹಸಿರ ಸಂಭ್ರಮವನ್ನು ಉಮ್ಮಳಿಸಿದ ಮಹಾನ್ ಸಾಹಸಿಗ ಲಕ್ಷ್ಮಣ ಸಿಂಗ್. ಈ ವೀರ ಜಲಯೋಧನ ಬಗ್ಗೆ ನನ್ನ 'ಜಲಜನಕರು' ಹೊತ್ತಗೆಯಲ್ಲಿ ಖುಲ್ಲಂಖುಲ್ಲ ಹತ್ತು ಅಧ್ಯಾಯವನ್ನು ಬರೆದಿದ್ದೇನೆ. ಅವರ ಜಲ ಸಾಹಸಗಾಥೆಯೇ ಒಂದು ಮನೋಜ್ಞ ಕಾದಂಬರಿ. ನನ್ನ ಪಾಲಿಗಂತೂ ಲಕ್ಷ್ಮಣ ಸಿಂಗ್‌ರ ಬದುಕೇ ಒಂದು ಸ್ಫೂರ್ತಿಗಾಥೆ. ಅಲ್ಲಿ, ಲಾಪೋಡಿಯಾದಲ್ಲಿ ಪ್ರತೀ ದೀಪಾವಳಿಗೆ ಸುತ್ತಮುತ್ತಲಿನ ಹಳ್ಳಿಗರೆಲ್ಲ ಸೇರಿ ತಾಲಾಬ್‌ನಿಂದ ತಾಲಾಬ್‌ಗೆ ಭವ್ಯ ಜಲಜಾಥಾ ನಡೆಸುತ್ತಾರೆ. ಕಳೆದ ಮೂರು ವರ್ಷಗಳಿಂದ 'ಒಮ್ಮೆ ನಮ್ಮೂರಿನ ಈ ಕೃಷಿ ಹಬ್ಬವನ್ನು ಸ್ವತಃ ಬಂದು ಕಣ್ಣು ತುಂಬಿಕೊಳ್ಳೊ ಗೆಳೆಯಾ' ಎಂದು ಅಕ್ಕರೆಯ ಹಕ್ಕೊತ್ತಾಯ ಮಾಡುತ್ತಲೇ ಬರುತ್ತಿದ್ದಾರೆ. ನನ್ನ ದುರದೃಷ್ಟ, ಅಂಥ ಯೋಗ ನನಗಿನ್ನೂ ಕೂಡಿ ಬಂದಿಲ್ಲ. ಖಂಡಿತಾ, ಮುಂದಿನ ವರ್ಷ ಅಲ್ಲಿರುವ ವಿಶ್ವಾಸ, ಭರವಸೆಯನ್ನು ತುಂಬಿಕೊಂಡಿದ್ದೇನೆ.
ಲಕ್ಷ್ಮಣ್‌ಜಿ ಮಾತಿಗೆ ಸಿಕ್ಕರೆ ಕೇವಲ ಕುಶಲೋಪರಿಗೆ ಮುಗಿಯುವುದಿಲ್ಲ. ಮಾತು ನೀರು, ನಿಸರ್ಗ, ಬೇಸಾಯ ಇತ್ಯಾದಿಗಳೆಡೆಗೆ ಹೊರಳಿಯೇ ಹೊರಳುತ್ತದೆ. ಅಷ್ಟರಮಟ್ಟಿಗೆ ನಮ್ಮ ಜ್ಞಾನವೃದ್ಧಿಯ ಜತೆಗೆ ರೀಫ್ರೆಶ್‌ನೆಸ್. ಮೊನ್ನೆ ಅವರ ಮಾತು ಹೊರಳಿದ್ದು ಕೃಷಿಯ ಕಡೆಗೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಉಳಿಯಲು ನನ್ನೊಳಗಿನ ತುಡಿತ ಬಿಡಲೇ ಇಲ್ಲ. ವಾರದ ನನ್ನ ಅಂಕಣದ ಹುಡುಕಾಟಕ್ಕೆ ಅದಕ್ಕಿಂತ ಸೂಕ್ತ ವಿಷಯ ಬೇರಾವುದಿದೆ ಹೇಳಿ?
'ಭಾರತದಲ್ಲಿ ಕೃಷಿ ಎಂಬುದು ಸಮಸ್ಯೆ ಅಂತ ಅನ್ನಿಸುವುದು ಯಾಕೋ? ಸಮಸ್ಯೆಯೇ ಇಲ್ಲದ ಉದ್ಯೋಗ ಅಂತ ಈ ಜಗತ್ತಿನಲ್ಲಿ ಇರಲಿಕ್ಕಾದರೂ ಸಾಧ್ಯವೇ' ಜಲಸೇನಾನಿ ಲಕ್ಷ್ಮಣ ಸಿಂಗ್ ಅತ್ಯಂತ ಮುಗ್ಧವಾಗಿ ಪ್ರಶ್ನಿಸುತ್ತಾರೆ. 'ನನಗೆ ಈವರೆಗೆ ಇದು ಹೀಗೇಕೆ ಎಂದು ಅರ್ಥವೇ ಆಗುತ್ತಿಲ್ಲ. ಬಹುತೇಕರು ಇದೇ ಧಾಟಿಯಲ್ಲಿ ಮಾತನಾಡುತ್ತಾರೆ. ಈ ಜಗತ್ತಿನಲ್ಲಿ ಕೃಷಿಯಲ್ಲಿ ಇರುವಷ್ಟು ಸಮಸ್ಯೆ ಬೇರಾವುದರಲ್ಲೂ ಇಲ್ಲವೇ ಇಲ್ಲ. ಸಮಸ್ಯೆ ಎಂಬುದು ಇರುವುದು ಕೃಷಿಯಲ್ಲಿ ಮಾತ್ರ ಎಂಬರ್ಥದ ಅವರ ಮಾತುಗಳನ್ನು ಕೇಳಿದಾಗಲೆಲ್ಲ ಅಚ್ಚರಿಯಾಗುತ್ತದೆ. ಕೃಷಿ ಸಮಸ್ಯೆಯಾಗಿ ಕಾಡುವುದಿದ್ದರೆ ಅದಕ್ಕೆ ಅಗತ್ಯ ಸಂಪನ್ಮೂಲವನ್ನು ನಾವು ಹೊರಗಿನಿಂದ ತಂದು ಸಾಧಿಸುತ್ತೇವೆ ಎಂದು ಹೊರಟಾಗ ಮಾತ್ರ. ಅದರಲ್ಲೂ ನೀರು ಸ್ಥಳೀಯವಾಗಿ ಲಭ್ಯವಿಲ್ಲದಿದ್ದರೆ ಖಂಡಿತಾ ಕೃಷಿ ಎಂಬುದು ಸಮಸ್ಯೆಯೇ. ಆದರೆ ಅದಕ್ಕಿರುವ ಪರಿಹಾರವನ್ನು ಮಾತ್ರ ನಾವು ಸ್ಥಳೀಯವಾಗಿ ಕಂಡುಕೊಳ್ಳಲು ಹೋಗುವುದೇ ಇಲ್ಲ...'
ಲಕ್ಷ್ಮಣ್‌ಜಿ ಮಾತುಗಳಲ್ಲಿ ನಿಖರತೆ ಇದೆ. ಅನುಭವ ಜನ್ಯ ನುಡಿಗಳವು. 'ಅದು ಯಾವುದೇ ಪ್ರದೇಶವಿರಬಹುದು. ಕೃಷಿ ಸಮಸ್ಯೆಯಾಗಿ ಕಾಡುವುದೇ ಹೊರಗಿನಿಂದ ನೀರನ್ನು ಕೊಡಲು ಆರಂಭಿಸಿದಾಗಿನಿಂದ. ಹೊರಗಿನಿಂದ ಬಂದವರು ಯಾವತ್ತಿಗೂ ಶಾಶ್ವತವಾಗಿರಲು ಸಾಧ್ಯ ಇಲ್ಲ. ಕೃಷಿಯೇ ಜೀವನಾಧಾರವಾಗಿದ್ದ ಲಾಪೋಡಿಯಾ ಮಕಾಡೆ ಮಲಗಿಬಿಟ್ಟಿತ್ತಲ್ಲಾ, ಅದಕ್ಕೆ ಕಾರಣವೇ ನೀರು. ಹಾಗೆಂದು ಅಲ್ಲಿನ ಕೃಷಿಗೆ ನೀರನ್ನು ಹೊರಗಿನಿಂದ ತರುವ ಅನಿವಾರ್ಯತೆ ಇರಲೇ ಇಲ್ಲ. ಆದರೂ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತೆಂದರೆ ಕೇವಲ ನಿರ್ಲಕ್ಷ್ಯದಿಂದ. 'ಸೌಹಾರ್ದ ಅಭಿವೃದ್ಧಿ'ಯ ಪರಿಕಲ್ಪನೆ ನಮ್ಮ ಗಾಮೀಣ ಜನಮಾನಸದಿಂದ ಯಾವತ್ತು ದೂರಾಯಿತೋ ಅವತ್ತೇ ನೀರು ಊರಿಗೆ ಊರನ್ನೇ ಬಹಿಷ್ಕರಿಸಿ ಹೊರನಡೆಯಿತು. ಹೋಗುವಾಗ ಒಂಟಿಯಾಗಿ ಹೋಗಲಿಲ್ಲ. ಊರವರ ಸುಖವನ್ನು, ಕೃಷಿಯ ಸಮೃದ್ಧಿಯನ್ನು, ಪಾರಿಸಾರಿಕ ಸೌಂದರ್ಯವನ್ನು, ಜೈವಿಕ ನೆಮ್ಮದಿಯನ್ನು ...ಹೀಗೆ ಒಂದರ ಹಿಂದೆ ಒಂದರಂತೆ ಎಲ್ಲವನ್ನೂ ಕರೆದುಕೊಂಡೇ ಹೊರಟಿತ್ತು...ಅವೆಲ್ಲವೂ ಮತ್ತೆ ಊರಿನತ್ತ ಮುಖ ಮಾಡುವುದೇ ನೈಜ ಅಭಿವೃದ್ಧಿ ಎಂದು ನಿರ್ಧರಿಸಿದೆವು. ಮೊದಲು ಹೋದವರು ಮೊದಲು ವಾಪಸಾಗಬೇಕು, ಅವರು ಬಂದರೆ ಉಳಿದೆಲ್ಲರೂ ವಾಪಸಾಗುತ್ತಾರೆ ಎಂದುಕೊಳ್ಳುವ ಹಾಗೆಯೇ ಇಲ್ಲ. ಮೊದಲು ಹೋದ ನೀರನ್ನು ಕರೆತರುವ ಮೊದಲು, ಮೊದಲಿದ್ದ ಎಲ್ಲರನ್ನೂ ಮೊದಲಿನಂತೆಯೇ ಸುಸ್ಥಿತಿಗೆ ತಂದಿಡಬೇಕಾದ ಅಗತ್ಯವಿತ್ತು. ಇದಕ್ಕೆ ತಗುಲಿದ ಸಮಯ ಬರೋಬ್ಬರಿ 30 ವರ್ಷಗಳು. ಯಾವುದು ಮೊದಲು ಬಂತು, ಯಾವುದು ಕೊನೆಗೆ ಎಂಬುದಕ್ಕಿಂತ ಎಲ್ಲವನ್ನೂ ಮರಳಿ ಕರೆ ತರುವ ಹೊತ್ತಿಗೆ ಊರಿನ ಕೃಷಿ ಉತ್ಪಾದನೆ ಎಂಬುದು ಸ್ವತಃ ಕೃಷಿಕರ ಅರಿವಿಗೇ ಬಾರದಂತೆ ಐದು ಪಟ್ಟು ಹೆಚ್ಚಾಗಿತ್ತು...'
ಸುಮಾರು ಎರಡು ವರ್ಷ ಹಿಂದೆ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆವರಣದ ಕಾಫೀ ಡೆ ಮುಂದಿನ ಅರಳೀಕಟ್ಟೆಯ ನೆರಳಲ್ಲಿ ಲಕ್ಷ್ಮಣ್‌ಜಿ ನಿರರ್ಗಳವಾಗಿ ನೀರಿನ ಬಗೆಗೆ ಮಾತನಾಡುತ್ತಿದ್ದರೆ, ಎದುರಿಗಿದ್ದ ನಾನು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರ ಗ್ರಾಹಕ ಮಹೇಶ್ ಭಟ್ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ಇದೇನು ಈ ಮನುಷ್ಯನ ಕೈಲಿ ಮಾಯಾದಂಡವಿದೆಯೇ ಮನದಲ್ಲಿ ಮೂಡಿದ ಪ್ರಶ್ನೆಯನ್ನು ಎದುರಿದ್ದ ಅವರಿಗೇ ಎಸೆದರೆ ತೊಟ್ಟ ಅಂಗಿಯಷ್ಟೇ ಅಚ್ಚ ಬಿಳಿಯ ನಗು ನಕ್ಕು ಮಾತಿಗೆ ಶುರುವಿಟ್ಟುಕೊಂಡಿದ್ದರು ಲಕ್ಷ್ಮಣ್‌ಜೀ...
'ಅನ್ನ ಸಾಗರ್ (ಲಾಪೋಡಿಯಾದಲ್ಲಿ ಜಲಯೋಧರಿಂದ ಪುನರುಜ್ಜೀವನಗೊಂಡ ಬೃಹತ್ ತಲಾಬ್) ಅಭಿವೃದ್ಧಿಯಿಂದಲೇ ಆರಂಭಗೊಂಡದ್ದು ಊರಿನ ಅಭಿವೃದ್ಧಿಯ ಶಕೆ. ಇಪ್ಪತ್ತು ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಊರಿನ ಹೊಲಗಳಲ್ಲಿ ತೆನೆಯೊಡೆಯಿತು. ನೀರಾವರಿ ಜಮೀನಿನ ಪ್ರಮಾಣ 300 ಹೆಕ್ಟೇರ್‌ನಿಂದ 1500 ಹೆಕ್ಟೇರ್‌ಗೆ ಏರಿತು. ಕೃಷಿ ಉತ್ಪಾದನೆ ಏನಿಲ್ಲವೆಂದರೂ ಐದುಪಟ್ಟು ಹೆಚ್ಚಳ ಕಂಡಿತು. ಒಂದು ಕಾಲದಲ್ಲಿ ಅತ್ಯುತ್ತಮ ಮಳೆಯಾದರೆ ಮಾತ್ರ ನೇಗಿಲು ಹಿಡಿಯುತ್ತಿದ್ದ ಮಂದಿ ಆಟ ಆಡಿಕೊಂಡು ವರ್ಷಕ್ಕೆ ಎರಡು ನೀರಾವರಿ ಬೆಳೆ ತೆಗೆಯಲಾರಂಭಿಸಿದರು. ಕುಟುಂಬದ ಆದಾಯ ಹೆಚ್ಚೆಂದರೆ 500ರು. ಇದ್ದದ್ದು 17 ಸಾವಿರ ದಾಟಿತು. ಇದೆಲ್ಲ ಮಂತ್ರದಂಡದಿಂದ ಆಗುವಂಥದ್ದಲ್ಲ. ಹಾಗಾಗಿಯೂ ಇಲ್ಲ. ಆದದ್ದೆಲ್ಲ ಸಂಘಟಿತ ಪರಿಶ್ರಮದಿಂದ. ಸಾಮೂಹಿಕ ಹೊಣೆ ನಿರ್ವಹಣೆಯಿಂದ...'
ಇನ್ನೂ ಲಕ್ಷ್ಮಣ್ ಮಾತು ಮುಗಿದಿರಲಿಲ್ಲ. ಮಹೇಶ್ ಭಟ್‌ಗೆ ಏನೋ ನೆನಪಾದಂತಾಗಿ ಅವರು ಲಾಪೋಡಿಯಾದಲ್ಲಿ ಸುತ್ತಾಡಿದ ಸಂದರ್ಭದಲ್ಲಿ ಕಂಡ ನುಣುಪಾದ ಹುಲ್ಲೊಂದರ ಬಗ್ಗೆ ಕೇಳಿದರು. ಇವರಿಗೆ ಅದರ ಹೆಸರು ಮರೆತು ಹೋಗಿತ್ತು. ಅವರಿಗೆ ಯಾವುದೆಂಬುದು ತಟ್ಟನೆ ಹೊಳೆಯಲಿಲ್ಲ. ಕೊನೆಗೆ ಲಕ್ಷ್ಮಣ್ ಸಿಂಗ್‌ರಂತೆ ವಿಭಿನ್ನ ಕ್ಷೇತ್ರದಲ್ಲಿ ಹಲವು ಬಗೆಯ ಸಾಧನೆ ಮಾಡಿದವರ ಬಗೆಗೆ ಹೊರತಂದಿರುವ, ತಮ್ಮದೇ ಸಂಪಾದಕತ್ವದ ನುಡಿಚಿತ್ರಗಳ ಸಂಕಲನ 'ಅನ್ಸಂಗ್' ಅನ್ನು ಹೊರತೆಗೆದರು. ಕಪ್ಪು ಬಿಳುಪು ಸುಂದರಿಯಂತೆ ಕಂಗೊಳಿಸುತ್ತಿದ್ದ ಮುದ್ದಾದ ಆ ಪುಸ್ತಕದ ಯಾವುದೋ ಪುಟವೊಂದನ್ನು ತಿರುಗಿಸಿ ಮುಂದೆ ಹಿಡಿದರು ಮಹೇಶ್ ಭಟ್. 'ವೋ ದೂಬ್ ಹೈ' ಲಕ್ಷ್ಮಣ್ ಇಮ್ಮಡಿಯ ಉತ್ಸಾಹದೊಂದಿಗೆ ಅದರ ಬಗೆಗೆ ಹೇಳಲಾರಂಭಿಸಿದರು.
ಬರಡು ನೆಲವೂ ಹಸಿರಾಗಬೇಕು. ಊರಿನ ಜಾನುವಾರುಗಳ ಹಸಿವೂ ಇಂಗಬೇಕು. ಇದಕ್ಕೆ ಪರಿಹಾರವಾಗಿ ಕಂಡದ್ದು ದೂಬ್. ಅತ್ಯಂತ ಸಣ್ಣ ಎಳೆಯ, ಪುಟ್ಟ ಹುಲ್ಲಿನ ಜಾತಿಯ ಈ ಗಿಡ, ಅತ್ಯಂತ ಕಡಿಮೆ ನೀರಿನಲ್ಲಿ ಚಿಗುರೊಡೆಯಬಲ್ಲುದು. ಲಾಪೋಡಿಯಾದಲ್ಲಿ ಚೌಕಾಪದ್ಧತಿಯನ್ನು ಪರಿಚಯಿಸಿದ ಮೇಲೆ ಅದರ ನಡುವೆಲ್ಲ ಇಂಥ ಗರಿಕೆ ಹುಲ್ಲು ಯಥೇಚ್ಛವಾಗಿ ಬೆಳೆಯಲಾರಂಬಿಸಿತು. ಜಾನುವಾರುಗಳನ್ನು ಅಲ್ಲಿ ಸ್ವತಂತ್ರವಾಗಿ ಮೇಯಲು ಬಿಡಲಾಯಿತು. ಇದರಿಂದ ಮೇವಿನ ಸಮಸ್ಯೆ ನಿವಾರಣೆಯಾದದ್ದು ಮಾತ್ರವಲ್ಲ, ಹೈನುಗಾರಿಕೆ ನಿರೀಕ್ಷಿದ್ದಕ್ಕಿಂತ ವೇಗವಾಗಿ ಅಭಿವೃದ್ಧಿ ಕಂಡಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಐದೇ ವರ್ಷಗಳಲ್ಲಿ ಗೋತ್ಯಾಜ್ಯಗಳಿಂದ ಬರಡು ಭೂಮಿ ಹಸನಾಯಿತು. ಊರಲ್ಲಿ ವೇಸ್ಟ್‌ಲ್ಯಾಂಡ್ ಎನ್ನುವ ಮಾತೇ ಮರೆತು ಹೋಯಿತು. ಇದೇ ರೀತಿ ಸ್ವಾಭಾವಿಕ ಅರಣ್ಯಕ್ಕೆ ಇಂಬು ನೀಡಿದ ಇನ್ನೊಂದು ಬೆಳೆ ಕರೆಂಡಾ ಕಾಯಿಯದ್ದು. ತೀರಾ ಹೆಮ್ಮರವಾಗೇನೂ ಬೆಳೆಯದ, ಅತ್ಯಂತ ಕಡಿಮೆ ನೀರನ್ನು ಬೇಡುವ ಕರೆಂಡಾ ನೀರನ ಮಟ್ಟವನ್ನು ಹೆಚ್ಚಿಸಿದ್ದಲ್ಲದೇ ಕೃಷಿಗೆ ನೆರಳಾಗಿಯೂ ನಿಂತಿತು. ಸೌಹಾರ್ದ ಅಭಿವೃದ್ಧಿ ಎಂದರೆ ಇದೇ. ಒಂದಕ್ಕೊಂದು ಪೂರವಾಗಿ ಸಾಗುವುದೇ ನಿಜವಾದ ಅಭಿವೃದ್ಧಿ. ಅದೇ ಲಾಪೋಡಿಯಾದ ಪರಿವರ್ತನೆಯ ವಿಶೇಷ.
ಮತ್ತೆ ಲಕ್ಷ್ಮಣ್‌ಜಿ ಮಾತು ಕೃಷಿಯತ್ತ ಹೊರಳಿತು. ಮನಸ್ಸು ನೆನೆಪಿನಾಳಕ್ಕೆ ಜಿಗಿದಿದ್ದಿರಬೇಕು. ಮುಖದಲ್ಲಿ ಒಮ್ಮೆಲೆ ಹೊಳಪು ನುಗ್ಗಿ ಬಂತು.... ಅದು 1996ನೇ ಇಸವಿ. ಲಾಪೋಡಿಯಾದ ಪಾಲಿಗೆ ಅದು ಸುವರ್ಣ ವರ್ಷ. ಗ್ರಾಮದ ಮನೆಮನೆಗಳಲ್ಲಿನ ಕಣಜ ಮೇವು-ಧಾನ್ಯಗಳಿಂದ ಆ ವರ್ಷ ಅಕ್ಷರಶಃ ತುಂಬಿ ತುಳುಕಿತು. ನೀರೆಚ್ಚರದ ಕೆಲಸಗಳ ನಿಜವಾದ ಫಲ ಅರಿವಿಗೆ ಬಂದದ್ದು ಆ ವರ್ಷವೇ. ತೀರಾ ಕಡಿಮೆ ಮಳೆ ಸರಾಸರಿಯಲ್ಲಿ ಅವತ್ತು ಅತ್ಯಧಿಕ ಕೃಷಿ ಉತ್ಪಾದನೆಯನ್ನು ಊರಿನ ರೈತ ಕಂಡಿದ್ದ. ಅದಕ್ಕೂ ವಿಶೇಷವೆಂದರೆ ಇಷ್ಟಾಗುವ ಹೊತ್ತಿಗೆ ಇಡೀ ರಾಜ್ಯ ಸತತ ಮೂರು ವರ್ಷಗಳ ತೀವ್ರ ಬರವನ್ನು ಕಂಡಿತ್ತು. ಆದರೆ ಅದು ಒಂದಿನಿತೂ ಲಾಪೋಡಿಯಾವನ್ನು ಬಾಧಿಸಲಿಲ್ಲ. ಅಷ್ಟರ ಮಟ್ಟಿಗಿನ ಜಲ ಸಮೃದ್ಧಿಯನ್ನು ನೀರೆಚ್ಚರದ ಕ್ರಮಗಳಿಂದ ಊರು ಕಂಡಿತ್ತು. 2001 ನೇ ಇಸ್ವಿಯಲ್ಲಂತೂ ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಯ ಹೆಡ್‌ಲೈನ್‌ಗಳಲ್ಲಿ ಲಾಪೋಡಿಯಾದ ಹೆಸರು ಕಂಗೊಳಿಸಿತ್ತು. ನೀರು ಅಂಥದ್ದೊಂದು ಅವಕಾಶವನ್ನು ಸೃಷ್ಟಿ ಮಾಡಿತ್ತು. ಅದುವರೆಗೆ ಲಾಪೋಡಿಯಾದ ಬಗೆಗೆ ಇದ್ದ ಕಳಂಕವನ್ನೆಲ್ಲ ಅದೊಂದು ಬರಗಾಲ ತೊಳೆದು ಹಾಕಿಬಿಟ್ಟಿತ್ತು. ಇಡೀ ಜಿಲ್ಲೆಯಲ್ಲಿ ಆ ವರ್ಷದ ಬೇಸಿಗೆಯಲ್ಲಿ ಟ್ಯಾಂಕರ್ ನೀರನ್ನು ಮುಟ್ಟದೇ ಜೀವನ ಸಾಗಿಸಿದ್ದರೆ ಅದು ಲಾಪೋಡಿಯನ್ನರು ಮಾತ್ರ. ನಂಬಿದರೆ ನಂಬಿ, ಬಿಟ್ಟರೆ ಬಿಡಿ ಆ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಒಟ್ಟೂ ಮಳೆ 348 ಮಿ.ಮೀ. ಮಾತ್ರ. ಹಾಗಿದ್ದರೂ ಊರಿನ ಬಾವಿಗಳಲ್ಲಿ ಕೇವಲ 45 ಅಡಿಗಳಿಗೇ ನೀರು ಸಿಕ್ಕುತ್ತಿತ್ತು. ನಂತರದ ದಿನಗಳಲ್ಲಿ ಲಾಪೋಡಿಯಾದ ಈ ಮಾದರಿ ಸುತ್ತಲಿನ 90 ಹಳ್ಳಿಗಳಿಗೆ ವಿಸ್ತಾರಗೊಂಡಿತು. ತೋಂಕ್, ಜೈಪುರ ಮತ್ತು ಪಾಲಿ ಸೇರಿದಂತೆ ಹಲವು ಜಿಲ್ಲೆಗಳ 40 ಸಾವಿರ ಕುಟುಂಬಗಳಿಗೀಗ ನೀರ ನೆಮ್ಮದಿ. 30 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹಸಿರು ಬೆಳೆ ನಳನಳಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಊರಿನ ಪ್ರತಿ ಹೆಣ್ಣು ಮಗಳೂ ಸ್ವಾವಲಂಬಿಯಾಗಿದ್ದಾಳೆ...
ಲಕ್ಷ್ಮಣ್‌ಜಿ ಇನ್ನೂ ಅದೆಷ್ಟೋ ಸಂಗತಿಗಳನ್ನು ಹೇಳುವವರಿದ್ದರು. ಆದರೆ ಸಮಯ ಸಂಕೋಚ ಅದಕ್ಕೆ ಅವಕಾಶ ಕೊಡಲಿಲ್ಲ. ಲಾಪೋಡಿಯಾದ ನೀರ ಬ್ರಹ್ಮನ ಮರು ಸೃಷ್ಟಿಯನ್ನು ಕಣ್ಣಾರೆ ಕಂಡು ಬರುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ವರ್ಷದ ದೀಪಾವಳಿ ಬೆಳಕಿನಲ್ಲಿ ನಡೆಯುವ ಜಲ ತೇರಿಗೆ ತಮ್ಮೂರಿಗೆ ಅತ್ಯಂತ ಆತ್ಮೀಯವಾಗಿ ಆಹ್ವಾನಿಸಿದ್ದಾರೆ ಲಕ್ಷ್ಮಣ್‌ಜಿ. ಆ ದಿನಕ್ಕಾಗಿ ಕಾತರ ಹೆಚ್ಚುತ್ತಿದೆ. ಸದ್ಯಕ್ಕೆ ಅವರೊಂದಿಗೆ ಕಳೆದ ಕೆಲ ದಿನಗಳ ಒಡನಾಟವನ್ನು ಮೆಲಕು ಹಾಕುತ್ತಿದ್ದೇನೆ. ಲಕ್ಷ್ಮಣ್‌ಜಿಯಂಥವರ ಸಂತತಿ ಸಾವಿರವಾಗಲಿ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


