ಇಸ್ರೋ ಉಡ್ಡಯನ ಮಾಡಿದ್ದು ಉಪಗ್ರಹವನ್ನಲ್ಲ, ಭಾರತದ ಪ್ರತಿಷ್ಠೆಯನ್ನು!
ಹೂಂ... ಸ್ವಲ್ಪ ಸಮಾಧಾನವಾಗಿದೆ, ಹೆಚ್ಚು ಅಭಿಮಾನ, ಹೆಮ್ಮೆ ಮೂಡಿದೆ. ಬರೀ...

ಹೂಂ... ಸ್ವಲ್ಪ ಸಮಾಧಾನವಾಗಿದೆ, ಹೆಚ್ಚು ಅಭಿಮಾನ, ಹೆಮ್ಮೆ ಮೂಡಿದೆ. ಬರೀ ಕೆಟ್ಟ ಕಾರಣಗಳಿಗೆ ಮಾತ್ರ ಸುದ್ದಿಯಾಗುತ್ತಿದ್ದೆವು. ನಮ್ಮ ಹಣೆಬರಹವೇ ಇಷ್ಟು, ನಮ್ಮ ಜನ್ಮಕ್ಕಿಷ್ಟು...ಎಂದು ನಮ್ಮನ್ನು ಹಳಿಯುವ ಹಂತವನ್ನು ನಾವು ತಲುಪಿಬಿಟ್ಟಿದ್ದೆವು. ನಮ್ಮ ಪ್ರತಿಷ್ಠೆ, ಹಿರಿಮೆಯನ್ನು ಹಿಡಿದೆತ್ತುವ ಸಣ್ಣ ಪುಟ್ಟ ಸಂಗತಿಗಳು ಸಹ ನಡೆಯುತ್ತಿರಲಿಲ್ಲ. ಪ್ರತಿದಿನ ಪತ್ರಿಕೆ, ಟಿವಿ ನೋಡಿದರೆ ಬರೀ ಭ್ರಷ್ಟಾಚಾರ, ಹಗರಣ, ಕರ್ಮಕಾಂಡ, ಗ್ಯಾಂಗ್‌ರೇಪ್, ಅಪಘಾತ, ಕೊಲೆ, ಸುಲಿಗೆ, ಲಫಡಾ ಸುದ್ದಿಯೇ ಮನಸ್ಸನ್ನು ಕಲ್ಲವಿಲಗೊಳಿಸುತ್ತಿತ್ತು. ಕ್ರೀಡೆಯಲ್ಲಿ ಪದಕ ಗಳಿಸಿದರೆ ಉದ್ದೀಪನ ಮದ್ದು ಸೇವಿಸಿರಬಹುದಾ, ವಿಶ್ವಕಪ್ ಗೆದ್ದರೂ ಮ್ಯಾಚ್‌ಫಿಕ್ಸಿಂಗ್ ಆಗಿರಬಹುದಾ ಎಂದು ಸಂದೇಹಪಡುವವರೆಗೆ ನಮ್ಮ ಸಾಮಾಜಿಕ ಸ್ವಾಸ್ಥ್ಯ ಗಾಳುಮೇಳಾಗಿತ್ತು. ದುಡ್ಡಿಗೆ ಎಂಬಿಬಿಎಸ್ ಸೀಟು, ಡಿಗ್ರಿಯನ್ನು ಮಾರುವ ಜನರಿರುವಾಗ, ಆಸ್ಪತ್ರೆಗೆ ಹೋದಾಗ ಡಾಕ್ಟರ್‌ರು ಚುಚ್ಚಿದ ಇಂಜೆಕ್ಷನ್ ದೇಹದ ಹೊರಗೆ ಬರುವ ತನಕ ಸಮಾಧಾನವಿರುತ್ತಿರಲಿಲ್ಲ. ಅಂಥ ಸಕಾರಾತ್ಮಕ, ವಿಷಾದ ತುಂಬಿದ ಪರಿಸರದ ನಡುವೆ ಒಂದು ಸಂತಸದ ಸುದ್ದಿ ನಮ್ಮಲ್ಲೊಂದು ಪುಳಕ ಮೂಡಿಸಿದೆ. ಇಸ್ರೋದ ವಿಜ್ಞಾನಿಗಳು ನಮ್ಮಲ್ಲೊಂದು 'ಗರ್ವ' ಉಕ್ಕುವಂತೆ ಮಾಡಿದ್ದಾರೆ. ಸೌರಮಂಡಲದ ಮಂಗಳನ ಅಂಗಳಕ್ಕೆ ಮೊದಲ ಕೃತಕ ಉಪಗ್ರಹ ಕಳಿಸಿ ಸಮಸ್ತ ವಿಶ್ವದ ಮುಂದೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇದು ಬರೀ ಉಪಗ್ರಹ ಉಡ್ಡಯನ ಅಲ್ಲ, ಇದು ಭಾರತದ ಉಡ್ಡಯನ! ನಮ್ಮ ಸಾಧನೆಯನ್ನು ಮಂಗಳ ಗ್ರಹಕ್ಕೆ ಸಾರಿ ಹೇಳಲು ಕಳಿಸಿದ ಮಹಾಯಾನ!
ನಿಜಕ್ಕೂ ಸಂತಸವಾಗುತ್ತಿದೆ, ಇಸ್ರೋ ವಿಜ್ಞಾನಿಗಳ ಮಹಾನ್ ಸಾಧನೆಗೆ, ದೇಶಪ್ರೇಮಕ್ಕೆ, ಅಪರಿಮಿತ ಪರಿಶ್ರಮಕ್ಕೆ ವಿನೀತರಾಗಿ ವಂದೇ ಎನ್ನೋಣ. ಮೊನ್ನೆ ದೀಪಾವಳಿಯ ದಿನದಂದು ನೂರು ಮೀಟರ್ ಎತ್ತರಕ್ಕೆ ರಾಕೆಟ್ ಪಟಾಕಿಯನ್ನು ಹಾರಿಸಲು ಸುರುಸುರು ಬತ್ತಿಯಿಂದ ಬೆಂಕಿ ಹಚ್ಚಲು ಕೈ ನಡುಗುವಾಗ, ಸುಮಾರು ಮೂವತ್ತು ಕೋಟಿ ಕಿಮೀ ದೂರ ಕ್ರಮಿಸಬಲ್ಲ ಉಪಗ್ರಹವನ್ನು ಹಾರಿಸಿದರಲ್ಲ, ಅದೇನು ಹುಡುಗಾಟಿಕೆಯಾ? ಈ ಬಾಹ್ಯಾಕಾಶ ನೌಕೆ ನಭೋ ಮಂಡಲದಲ್ಲಿ ಅಷ್ಟು ಎತ್ತರಕ್ಕೆ ಹಾರುತ್ತಿದ್ದರೆ, ಅದನ್ನು ಇಲ್ಲಿಯೇ ಕುಳಿತು ನಿಯಂತ್ರಿಸಬಹುದು, ವೇಗ ಕುಗ್ಗಿಸಬಹುದು, ಕಿವಿ ಹಿಂಡಬಹುದು, ಅಲ್ಲಿನ ವಾಸನೆ ಮೂಸುವಂತೆ, ತಾಪಮಾನ ಹೇಳುವಂತೆ ಆದೇಶ ಕೊಡಬಹುದು. ಆ ಮೂಲಕ ಬೇಕಾದ ಮಾಹಿತಿ ತರಿಸಿಕೊಳ್ಳಬಹುದು. ಕೈಗೆಟಕುವುದಕ್ಕಿಂತ ತುಸು ಎತ್ತರದಲ್ಲಿ ಒಣಗಿ ಹಾಕಿದ ಬನೀನು, ಒಣಗಿಸಿದ ತಂತಿಗೆ ಸಿಕ್ಕಿಬಿದ್ದಾಗ ಅದನ್ನು ತೆಗೆಯಲು ಹರಸಾಹಸ ಮಾಡುವ ಸಾಮಾನ್ಯರಿಗೂ ಈ ಮಂಗಳಯಾನ ಅದೆಂಥ ಅದ್ಭುತ ಸಾಧನೆ ಎಂಬುದು ಅರ್ಥವಾಗುತ್ತದೆ, ಅರ್ಥವಾಗಬೇಕು. ಪ್ರತಿಸಲ ಮುನ್ನೂರು, ನಾನೂರು ಜನರನ್ನು ತುಂಬಿಕೊಂಡು, ಅವರಿಗೆ ಬೇಕಾದ ಎರಡು ಹೊತ್ತು ಊಟ, ತಿಂಡಿ, ಕಾಫಿ, ಟೀ, ಪೇಯಗಳನ್ನೆಲ್ಲ ಹೇರಿಕೊಂಡು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಾರುವ ವಿಮಾನಯಾನದ ಬಗ್ಗೆಯೇ ಇನ್ನೂ ಅಂತಪಾರು ಗೊತ್ತಿಲ್ಲದಿರುವಾಗ, ಈ ಮಂಗಳಯಾನ ಒಂದು ಪವಾಡದಂತೆ, ಕಲ್ಪನೆಗೂ ನಿಲುಕದ 'ಚಂದಮಾಮ'ದ ಕತೆಯಂತೆ, ಒಂದು ವಿಸ್ಮಯದಂತೆ ಭಾಸವಾಗುತ್ತದೆ.
ಇದು ಇಸ್ರೋ ವಿಜ್ಞಾನಿಗಳಿಗೆ ಸುಲಭವಾಗಿ ದಕ್ಕಿದ ಸಾಧನೆಯಾ? ಉಹುಂ... ಖಂಡಿತ ಇಲ್ಲ. ಅದಕ್ಕಾಗಿ ಅವರನ್ನು ಎಷ್ಟು ಅವಮಾನಿಸಿದ್ದೇವೆ, ಟೀಕಿಸಿದ್ದೇವೆ, ಹಂಗಿಸಿದ್ದೇವೆ ಎಂಬುದನ್ನು ನೆನಪು ಮಾಡಿಕೊಂಡರೆ ಅವರ ಸಾಧನೆ ಅರ್ಥವಾಗುತ್ತದೆ. ಪ್ರತಿಸಲ ಉಪಗ್ರಹ, ರಾಕೆಟ್‌ಗಳನ್ನು ಹಾರಿಸಿದಾಗ, ಅಷ್ಟೊಂದು ಹಣವನ್ನು ವ್ಯಯ ಮಾಡುವ ಬದಲು, ಬಡವರ ಕಲ್ಯಾಣಕ್ಕೆ ಉಪಯೋಗಿಸಬಹುದಿತ್ತಲ್ಲ, ಅದರಿಂದ ಜನಸಾಮಾನ್ಯರಿಗೇನು ಉಪಯೋಗ ಎಂದು ಜರೆದವರು ನಾವು. ಕೆಲವೊಮ್ಮೆ ಆಗಸಕ್ಕೆ ಚಿಮ್ಮಬೇಕಾದ ಉಪಗ್ರಹ, ಬಂಗಾಳಕೊಲ್ಲಿಗೆ ಬಿದ್ದಾಗ ಇದೇ ವಿಜ್ಞಾನಿಗಳ ಆತ್ಮವಿಶ್ವಾಸ ಉಡುಗಿಹೋಗುವಂತೆ ಅವರನ್ನು ಹಿಗ್ಗಾಮುಗ್ಗಾ ಮೂದಲಿಸಿದವರು ನಾವು . ಇಂದಿಗೂ ಅದೊಂದು ದುಂದು ವೆಚ್ಚದ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬ ರೀತಿಯ ತಾತ್ಸಾರದ ಮನೋಭಾವವಿಟ್ಟುಕೊಂಡವರು ನಾವು. ಲಕ್ಷಾಂತರ ಜನರ ಅನ್ನ ಕಸಿದು ಒಂದು ಉಪಗ್ರಹ ಹಾರಿಸಿದರೆ ಅದರಿಂದ ಲಾಭವೇನು ಎಂದು ಇದೇ ವಿಜ್ಞಾನಿಗಳ ನಂಬಿಕೆ, ಭರವಸೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದವರು ನಾವು.
ಈ ಮೂದಲಿಕೆಗಳು ಮೊನ್ನೆಯ 'ಮಂಗಳಯಾನ'ದ ತನಕ ಸಹ ಕೇಳಿ ಬಂದಿತು. ಮಂಗಳನೌಕೆಯ ಉಡ್ಡಯನದ ಹಿಂದಿನ ದಿನ ಇಸ್ರೋ ಅಧ್ಯಕ್ಷರು ಅದರ ಪ್ರತಿಕೃತಿಯನ್ನು ತಿರುಪತಿ ತಿಮ್ಮಪ್ಪನ ಮುಂದಿಟ್ಟು, 'ವೆಂಕಟೇಶ್ವರಾ, ಯಾವುದೇ ಅಡೆ-ತಡೆಯಿಲ್ಲದೇ ಈ ಉಡ್ಡಯನ ಯಶಸ್ವಿಯಾಗುವಂತೆ ಹರಸು' ಎಂದು ಪ್ರಾರ್ಥಿಸಿಕೊಂಡಿದ್ದು ಸಹ ಕೆಲವರಿಗೆ ಅಪಥ್ಯವಾದೀತು. 'ಆಕಾಶಕ್ಕೆ ಏಣಿ ಹಾಕಿದರೂ ಪಾತಾಳದ ಮೌಢ್ಯದಲ್ಲಿದ್ದೇವೆ ಎಂಬುದನ್ನು ಇಸ್ರೋ ಅಧ್ಯಕ್ಷರು ತೋರಿಸಿಕೊಟ್ಟಿದ್ದಾರೆ, ವಿಜ್ಞಾನಿಗಳ ಪರಿಶ್ರಮ, ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿರ್ಮಿಸಿದ ಉಪಗ್ರಹವನ್ನು ದೇವರ ಮುಂದಿಟ್ಟು ದೈವ ಬಲಕ್ಕೆ ಒಪ್ಪಿಸಿದ್ದಾರೆ' ಎಂದು ಕೆಲವರು ಟೀಕಿಸಿದರು. ಇಷ್ಟಕ್ಕೆ ಸುಮ್ಮನಾಗದೇ, ಇಸ್ರೋ ಅಧ್ಯಕ್ಷ ಡಾ. ರಾಧಾಕೃಷ್ಣನ್ ಅವರನ್ನು ಕೋರ್ಟಿನ ಕಟಕಟೆಗಳಿಗೆ ಎಳೆದರೂ ಆಶ್ಚರ್ಯವಿಲ್ಲ. ಒಬ್ಬ ದೈವಭಕ್ತನಾಗಿರುವುದಕ್ಕೂ, ವೈಜ್ಞಾನಿಕ ಮನೋಭಾವ ಹೊಂದಿರುವುದಕ್ಕೂ, ಮೂಢನಂಬಿಕೆಯನ್ನು ಆಚರಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ವಿಜ್ಞಾನಿಯಾದ ಮಾತ್ರಕ್ಕೆ ದೇವರಲ್ಲಿ ನಂಬಿಕೆ ಕಳೆದುಕೊಳ್ಳಬೇಕಿಲ್ಲ. ಒಂದು ವೇಳೆ ಈ ಮಂಗಳಯಾನವೇನಾದರೂ ವಿಫಲವಾಗಿದ್ದರೆ, ಜನ ಸುಮ್ಮನೆ ಬಿಡುತ್ತಿದ್ದರಾ? ಇಸ್ರೋ ಅಧ್ಯಕ್ಷರನ್ನೊಬ್ಬರನ್ನೇ ಅಲ್ಲ, ತಿರುಪತಿ ತಿಮ್ಮಪ್ಪನನ್ನೂ ಬಿಡುತ್ತಿರಲಿಲ್ಲ. ಈ ಭಯದಿಂದ ಇಸ್ರೋ ಅಧ್ಯಕ್ಷರು ನಲುಗಿ ತಿಮ್ಮಪ್ಪನ ಮೊರೆ ಹೋಗಿರಬಹುದು.
ಕಳೆದ ಎರಡು ದಶಕಗಳಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ, ಒಪ್ಪಲೇಬೇಕು. ಆದರೆ ಆ ಸಾಧನೆ ಅತ್ಯಲ್ಪ. ನಾವು ನಮ್ಮ ಮಟ್ಟಕ್ಕೆ ದೊಡ್ಡ ಸಾಧನೆ ಮಾಡಿದ್ದೇವೆಂದು ಹೇಳುತ್ತಾ, 'ಮೇರಾ ಭಾರತ್ ಮಹಾನ್' ಎಂದು ಬೀಗುತ್ತಿದ್ದೇವೆ. ಅಷ್ಟಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಧನೆ ವಿಜೃಂಭಿಸಿದ್ದು ಯಾವಾಗ? ಎಲ್ಲಿ? ಯಾವುದು? ಇಂದಿಗೂ ಭಾರತವನ್ನು ಪುಂಗಿ ಊದುವವರ, ಹಾವಾಡಿಗರ, ಕಂದಾಚಾರಿಗಳು ತುಂಬಿರುವ ದೇಶ ಎಂಬ ಭಾವನೆ ಕೆಲವರಲ್ಲಿದೆ. ಪಾಶ್ಚಿಮಾತ್ಯ ದೇಶಗಳ ಪತ್ರಿಕೆಗಳಂತೂ ಭಾರತ ಬಡತನ, ರೋಗರುಜಿನ, ಹಸಿವು, ಅನಕ್ಷರತೆಯಿಂದ ತುಂಬಿರುವ ದೇಶ ಎಂದೇ ಬಿಂಬಿಸಿ ಬರೆಯುತ್ತವೆ. ನಮ್ಮ ಜನಸಂಖ್ಯೆಯ ಗಾತ್ರ ಕಂಡು ಅಣಕಿಸುತ್ತವೆ. ವರದಿಗಾರನೊಬ್ಬನನ್ನು ಭಾರತಕ್ಕೆ ವರ್ಗ ಮಾಡಿದರೆ ಅದೊಂದು ಶಿಕ್ಷೆ ಎಂಬ ಅಭಿಪ್ರಾಯ ಅಮೆರಿಕದ ಪ್ರಮುಖ ಪತ್ರಿಕೆಗಳ ಸುದ್ದಿಮನೆಯಲ್ಲಿದೆ.
ನೂರಾ ಇಪ್ಪತ್ತು ಕೋಟಿ ಜನರನ್ನು ಹೊಂದಿಯೂ ನಮಗೆ ಒಲಿಪಿಂಕ್ಸ್‌ನಲ್ಲಿ ಒಂದು ಚಿನ್ನದ ಪದಕ ಗಳಿಸಲು ಆಗಿಲ್ಲ. ವಿಶ್ವ ಭೂಪಟದಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಕಾಣದ ದೇಶಗಳು ಪಾರಮ್ಯ ಮೆರೆದರೂ, ಅಂಥ ಹಿರಿಮೆ ಗಳಿಸಲು ನಮಗೆ ಸಾಧ್ಯವಾಗಿಲ್ಲ. ಪಾಕ್‌ನಲ್ಲಿ ತರಬೇತಿ ಪಡೆದ ಭಯೋತ್ಪಾದಕರು ನಮ್ಮ ದೇಶದ ಮೇಲೆ ಪದೇಪದೆ ಆಕ್ರಮಣ ಮಾಡಿದರೂ ಅವರಿಗೆ ನೆಟ್ಟಗೆ ಆವಾಜು ಹಾಕಲು ನಮ್ಮಿಂದ ಸಾಧ್ಯವಾಗಿಲ್ಲ. ಐದಾರು ಮಂದಿ ಪಡಪೋಶಿ ಭಯೋತ್ಪಾದಕರು ಮುಂಬೈ ನಗರಿ ಮೇಲೆ ದಾಳಿ ನಡೆಸಿದಾಗ, ವಿಶ್ವದ ಪತ್ರಿಕೆಗಳು ಝಿಜ ಖಜ್ಝ್ಜಜ ಎಂದು ಬರೆದವು. ಇಡೀ ದೇಶಕ್ಕೆ ದೇಶವೇ ಒತ್ತೆಯಾಳಾದ ದೈನೇಸಿ ಭಾವನೆ ಆ ಎರಡು ದಿನ ಮೂಡಿತ್ತು. ಅದಕ್ಕೆ ಸಣ್ಣ ಪ್ರತೀಕಾರವನ್ನೂ ಕೈಗೊಳ್ಳಲಾಗದ ಹತಾಶ ಸ್ಥಿತಿ ನಮ್ಮದಾಯಿತು. ಆ ದಾಳಿಯ ಸಂಚನ್ನು ರೂಪಿಸಿದವರನ್ನು ಇಲ್ಲಿ ತನಕ ಎಳೆತರಲು ನಮ್ಮಿಂದ ಸಾಧ್ಯವಾಗಿಲ್ಲ. ಎರಡು ದಶಕಗಳ ಹಿಂದೆ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣನಾದ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಹೃದಯಭಾಗದಲ್ಲಿ, ಅಲ್ಲಿನ ಸರ್ಕಾರದ ಮೂಗಿನ ಕೆಳಗೆ ಬಿಂದಾಸ್ ಆಗಿ ಕುಳಿತಿದ್ದಾನೆಂಬುದು ಎಲ್ಲರಿಗೂ ಗೊತ್ತಿರುವ ರಹಸ್ಯ. ಅವನನ್ನು ತನಗೊಪ್ಪಿಸಿ ಎಂದು ಭಜನೆ ಮಾಡುವುದೊಂದು ಬಾಕಿ. ಆದರೂ ಪಾಕ್ ಸರ್ಕಾರ ಜಪ್ಪಯ್ಯ ಅಂದಿಲ್ಲ.
ಪಾಕ್ ಹೇಳುವ ಕಾಕಣ್ಣ, ಗುಬ್ಬಣ್ಣ ಕತೆಗಳಿಗೆ ಭಾರತ ಸರ್ಕಾರ ಇನ್ನೂ ತಲೆಯಾಡಿಸುತ್ತಲೇ ಇದೆ. ನಮ್ಮ ಪಾರ್ಲಿಮೆಂಟಿನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವನ್ನು ನೇಣಿಗೇರಿಸಲು ಎಷ್ಟೆಲ್ಲ 'ಸರ್ಕಸ್' ನಡೆಯಿತೆಂಬುದು ಗೊತ್ತೇ ಇದೆ. ಇಂದಿಗೂ ಸಹ ಭಾರತ ಅದೆಷ್ಟು ಅಸುರಕ್ಷಿತ ದೇಶ ಅಂದ್ರೆ, ದೇಶದ ಯಾವುದೇ ಭಾಗದಲ್ಲಿ ಬಾಂಬ್ ಸಿಡಿಯಬಹುದು, ಭಯೋತ್ಪಾದಕರು ದಾಳಿ ಮಾಡಬಹುದು. ಭಯೋತ್ಪಾದಕ ಮುಸ್ಲಿಂ ಆದರೆ ಅವನಿಗೆ ವಿಚಾರಣೆಯ ನೆಪದಲ್ಲಿ ಶಿಕ್ಷೆಕೊಡಬೇಡಿ, ಹಿಂಸಿಸಬೇಡಿ ಎಂದು ಈ ದೇಶದ ಗೃಹಸಚಿವರೇ ಖುದ್ದಾಗಿ ಪೊಲೀಸರಿಗೆ ಸೂಚನೆ ಕೊಡುತ್ತಾರೆ. ಇದನ್ನು ವಿರೋಧಿಸಿದರೆ ಮುಸ್ಲಿಂ ವಿರೋಧಿ ಅಂತಾರೆ, ಕೋಮುವಾದಿ ಅಂತಾರೆ. ಎಲ್ಲಿಗೆ ಬಂತು ದೇಶ?! ಹೆಜ್ಜೆ ಹೆಜ್ಜೆಗೆ ದೇಶದ ಆಂತರಿಕ ಭದ್ರತೆ, ಸುವ್ಯವಸ್ಥೆ ಜತೆ ರಾಜಿ ಮಾಡಿಕೊಳ್ಳುತ್ತಲೇ ಬಂದರೆ ಯಾವ ದೇಶ ಸುರಕ್ಷಿತವಾಗಿರಲು ಸಾಧ್ಯ?
ನಮ್ಮ ರಕ್ಷಣಾ ಬಜೆಟ್‌ನ ಹಕೀಕತ್ತು ಗೊತ್ತಾ? ನಮ್ಮ ದೇಶದ ರಕ್ಷಣೆಗೆ ಖರ್ಚುಮಾಡುವ ಹಣವನ್ನು ನಾವು ಕಾಗದದ ಮೇಲೆ ಬರೆದು, ಏಕ್ಕಂ, ದಹಂ, ಶತಂ, ಸಾವಿರ, ಎಂದು ಎಣಿಸಲು ಆರಂಭಿಸಿದರೆ ಕೋಟಿ, ದಶಕೋಟಿ, ಶತಕೋಟಿ ಕಳೆದರೂ ಮುಂದೆ ಸಾಗುತ್ತಲೇ ಇರುತ್ತದೆ. ಅಮೆರಿಕದ ಡಾಲರ್‌ಗಳಲ್ಲಿ 37.4 ಶತಕೋಟಿ! ರುಪಾಯಿಗಳಲ್ಲಿ 2,03,672.1 ಕೋಟಿ (ಡಾಲರ್ ಹಣ 48 ರುಪಾಯಿ ಇದ್ದಾಗಿನ ಅಂಕಿ-ಸಂಖ್ಯೆಯಿದು). ಇದು ಹಿಂದಿನ ವರ್ಷಕ್ಕಿಂತ ಶೇ. 5.3ರಷ್ಟು ಹೆಚ್ಚು. ವಿಷಯ ಇದಲ್ಲ, ರಕ್ಷಣೆಗಾಗಿ ನಾವು ಈ ಪರಿ ಭಾರಿ ಮೊತ್ತವನ್ನು ತೆಗೆದಿಟ್ಟರೂ, ನಮಗಿನ್ನೂ ಶಸ್ತ್ರಾಸ್ತ್ರ, ಯುದ್ಧವಿಮಾನ, ಟ್ಯಾಂಕರ್‌ಗಳನ್ನು ತಯಾರಿಸಲು ಸಾಧ್ಯವಾಗಿಲ್ಲ. ಈ ದಿಸೆಯಲ್ಲಿ ಸಣ್ಣ ಪ್ರಯತ್ನವೂ ನಮ್ಮಿಂದಾಗಿಲ್ಲ. ಇವೆಲ್ಲವುಗಳನ್ನೂ ನಾವು ಬೇರೆ ದೇಶಗಳಿಂದ, ದಲ್ಲಾಳಿಗಳ ಮೂಲಕ, ದುಬಾರಿ ಬೆಲೆ ತೆತ್ತು ತರಿಸಿಕೊಳ್ಳುತ್ತಿದ್ದೇವೆ. ನಾವು ಖರೀದಿಸಿದ ಯುದ್ಧವಿಮಾನ, ಟ್ಯಾಂಕರ್‌ಗಳನ್ನು ಪಾಕಿಸ್ತಾನವೂ ಖರೀದಿಸಬಹುದು. ಹೀಗಿರುವಾಗ ನಾವು ಅವರಿಗಿಂತ ಬಲಾಢ್ಯರಾಗಲು ಹೇಗೆ ಸಾಧ್ಯ? ಈ ಸಂಗತಿಯನ್ನು ಸ್ವತಃ ಭಾರತೀಯ ರಕ್ಷಣಾ ಇಲಾಖೆಯೇ ಒಪ್ಪಿಕೊಂಡಿದೆ. ನಮ್ಮಲ್ಲಿರುವ ಯುದ್ಧ ವಿಮಾನಗಳೆಲ್ಲಾ ಪಾಕ್ ಬಳಿಯೂ ಇದೆ. ತಮ್ಮ ಅಣುಕೋಠಿಗೂ, ಪಾಕ್ ಕೋಠಿಗೂ ಹೆಚ್ಚು ಫರಕು ಇಲ್ಲ. ನಮಗೆ ಇನ್ನೂ ಏಕೆ-47, ಏಕೆ-57ನಂಥ ಗನ್‌ಗಳನ್ನು ತಯಾರಿಸಲು ಸಾಧ್ಯವಾಗಿಲ್ಲ? ಸೈನಿಕರ ಬೂಟು, ಬಟ್ಟೆ, ಮದ್ದು ಗುಂಡುಗಳು, ಗ್ಲೌಸು, ಕನ್ನಡಕವನ್ನೂ ಹೊರದೇಶಗಳಿಂದ ತರಿಸಿಕೊಳ್ಳುತ್ತಿದ್ದೇವೆ. ಯುದ್ಧದಲ್ಲಿ ಮಡಿದ ಸೈನಿಕರ ಮೃತದೇಹ ಸಾಗಿಸುವ ಶವಪೆಟ್ಟಿಗೆಗಳನ್ನೂ ಹೊರದೇಶಗಳಿಂದ ತರುವ ಸ್ಥಿತಿಯಿದೆ. ಶಸ್ತ್ರಾಸ್ತ್ರಗಳನ್ನು ಬೇರೆ ದೇಶಗಳಿಂದ ತರಿಸಿಕೊಂಡರೆ ಕಿಕ್‌ಬ್ಯಾಕ್ ಸಿಗುತ್ತದೆ, ದಲ್ಲಾಳಿಗಳಿಗೆ ನೂರಾರು ಕೋಟಿ ರೂಪಾಯಿ ಕಮಿಶನ್ ಸಿಗುತ್ತದೆ, ಹಣ ಹೊಡೆಯಬಹುದು. ಆದರೆ ಅವನ್ನೆಲ್ಲ ನಾವೇ ಇಲ್ಲಿ ತಯಾರಿಸಿದರೆ ಅಷ್ಟೊಂದು ಹಣ ದೋಚಲು ಆಗುವುದಿಲ್ಲ. ಉಪಗ್ರಹ ಹಾರಿಸಿದವರಿಗೆ ಟ್ಯಾಂಕರ್, ಶವಪೆಟ್ಟಿಗೆಗಳನ್ನು ತಯಾರಿಸಲು ಏನು ಧಾಡಿ? ಆದರೆ ಛ್ಠಟಡ ಜಜಛಟ ಎಂಬುದು ಬಹುಕೋಟಿ ದಂಧೆ. ಅದೊಂದು ಅಂತಾರಾಷ್ಟ್ರೀಯ ಮಾಫಿಯಾ. ಹೀಗಾಗಿ ನಾವು ರಷ್ಯಾ, ಕೋರಿಯಾಗಳು ಉಪಯೋಗಿಸಿದ ಹಳಸಲು ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಬೆಲೆ ತೆತ್ತು ಖರೀದಿಸುತ್ತಿದ್ದೇವೆ.
ಹಾಗಾದರೆ ನಾವು ಬಡಾಯಿಕೊಚ್ಚಿಕೊಳ್ಳುವ ಸಾಧನೆಯಾದರೂ ಏನು? ಅರ್ಥವಾಗುತ್ತಿಲ್ಲ. ಇಸ್ರೇಲಿನಂಥ ದೇಶ ಐದು ಪರಮವೈರಿ ರಾಷ್ಟ್ರಗಳನ್ನು ಗಡಿಯಲ್ಲಿಟ್ಟುಕೊಂಡು ಹೇಗೆ ಎಲ್ಲರನ್ನೂ ತನ್ನ ಮುಷ್ಟಿಯೊಳಗೆ ಇಟ್ಟುಕೊಂಡಿದೆಯೆಂಬುದನ್ನು ನೋಡಿದರೆ ಆ ದೇಶದ ಬಗ್ಗೆ ಅಭಿಮಾನ ಮೂಡುತ್ತದೆ. 'ಮುಟ್ಟಿದರೆ ತಟ್‌ಬಿಡ್ತೀನಿ' ಎಂಬುದು ಅದರ ನಿಲುವು. 'ಭಯೋತ್ಪಾದಕರಿಗೆ ಕಿರುಕುಳ ಕೊಡಬೇಡಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದಿದ್ದರೆ ಇಸ್ರೇಲ್ ಎಂದೋ ಹೇಳಹೆಸರಿಲ್ಲದೇ ಹೋಗುತ್ತಿತ್ತು. ತನ್ನ ತಂಟೆಗೆ ಬಂದ ಯಾರನ್ನೂ ಸುಮ್ಮನೆ ಬಿಡುವ ಜಾಯಮಾನ ಆ ರಾಷ್ಟ್ರದಲ್ಲ. ಒಂದು ಗತಿ ಕಾಣಿಸಿಯೇ ಸಿದ್ಧ. ಅಲ್ಲಿಯ ತನಕ ವಿರಮಿಸಿ ಗೊತ್ತಿಲ್ಲ. ಅಂಥ ದೇಶ ಕೃಷಿಯಲ್ಲಿ ಮಾಡಿದ ಸಾಧನೆ ವಿಶ್ವವೇ ಬೆರಗಾಗುವಂಥದ್ದು.
ಹಾಗೆ ನೋಡಿದರೆ ಇಸ್ರೇಲಿನ ಶೇ. ಅರವತ್ತರಷ್ಟು ಭೂಭಾಗ ಮರುಭೂಮಿ, ಕುರುಚಲು, ಮುಳ್ಳುಕಂಟೆ. ಜಾಲಿಗಿಡಗಳೂ ಬೆಳೆಯದ ಶತ ಬರಡುಭೂಮಿ. ಲವಣಾಂಶ ಹೆಚ್ಚಿರುವ ಅಲ್ಲಿನ ನೀರು ಕೃಷಿಗೆ ಸ್ವಲ್ಪವೂ ಲಾಯಕ್ಕಲ್ಲ. ದೇಶದ ಶೇ. ಇಪ್ಪತ್ತರಷ್ಟು ಭೂಮಿ ಮಾತ್ರ ಕೃಷಿಗೆ ಯೋಗ್ಯವಾಗಿದೆ. ಅಂಥ ಭೂಮಿಯನ್ನಿಟ್ಟುಕೊಂಡು ಇಸ್ರೇಲ್ ಇಡೀ ವಿಶ್ವವೇ ಬೆರಗಾಗುವಂಥ ಸಾಧನೆ ಮಾಡಿದೆ. ನೀರಿನ ಕೊರತೆ, ಮಳೆ ಅಭಾವ, ಬರಡುಭೂಮಿಯನ್ನು ಹೊಂದಿಯೂ ಕೃಷಿಯಲ್ಲಿ ನಂಬರ್ ಒನ್ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. 1948ರಲ್ಲಿ ಇಸ್ರೇಲಿನಲ್ಲಿ 78 ಸಾವಿರ ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿತ್ತು. ಇಂದು ನಾಲ್ಕು ಲಕ್ಷದ ಅರವತ್ತು ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಿಸಿದೆ. ಹಾಗೆಂದು ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಲೇ ಇದೆ.
ಇಂದಿಗೂ ಭಾರತದ ಹೊಲಗದ್ದೆ, ತೋಟ, ಪ್ಲಾಂಟೇಶನ್‌ಗಳಲ್ಲಿ ಬಳಕೆಯಾಗುವ ಬಹುತೇಕ ಕೃಷಿ ಉಪಕರಣಗಳೆಲ್ಲ ಇಸ್ರೇಲಿನವು. ಕೃಷಿ ತಂತ್ರಜ್ಞಾನವನ್ನೂ ಅಲ್ಲಿಂದ ಎರವಲು ತಂದಿದ್ದು. 'ಭಾರತ ಕೃಷಿ ಪ್ರಧಾನ ದೇಶ' ಎಂದು ಹೇಳಿಕೊಳ್ಳುವ ನಮಗೆ ಕೃಷಿಯಲ್ಲೂ ನಮ್ಮದೇ ತಂತ್ರಜ್ಞಾನ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂದಿಗೂ ಡ್ರಿಪ್ಸ್, ಸ್ಪ್ರಿಂಕ್ಲರ್, ಕೊಳಾಯಿಗಳೆಲ್ಲ ಇಸ್ರೇಲಿನಿಂದಲೇ ಬರುತ್ತವೆ. ಇಸ್ರೇಲಿಗಳು ತಾವು ಬೆಳೆದ ಹಣ್ಣನ್ನು ನಮಗೆ ತಿನಿಸಿದ್ದಲ್ಲದೇ, ತಾವು ತಯಾರಿಸಿದ ಕೃಷಿ ಉಪಕರಣಗಳನ್ನೂ ಮಾರಾಟ ಮಾಡಿ ಹೋಗುತ್ತಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಇಸ್ರೋದ 'ಮಂಗಳಯಾನ'ವನ್ನು ನೋಡಬೇಕು. ಆಗ ಗೊತ್ತಾಗುತ್ತದೆ, ಇದರ ಮಹತ್ವ, ಅನಿವಾರ್ಯತೆ ಹಾಗೂ ಅಗತ್ಯ. ಭಾರತಕ್ಕೆ ಇಂಥದ್ದೊಂದು ಸಾಧನೆಯ ಶಹಭಾಷ್‌ಗಿರಿಯ ಅಗತ್ಯವಿತ್ತು. ವಿಶ್ವಕ್ಕೆ ನಮ್ಮಿಂದ ಒಂದು ಸಂದೇಶ ರವಾನೆಯಾಗಬೇಕಿತ್ತು. ಅದು ಈಗ ರವಾನೆಯಾಗಿದೆ. ಹೀಗಿರುವಾಗ ಅದರಲ್ಲಿ ಕೊಂಕು ಹುಡುಕುವುದು ಬೇಡ. ಭಾರತದ 'ಮಂಗಳಯಾನ' ಸಾಧನೆಗೆ ಚೀನಾವೇ ಮೂಕವಿಸ್ಮಿತವಾಗಿದೆ. ಹೀಗಿರುವಾಗ 'ಕುಡಿಯಲು ಸ್ವಚ್ಛ ನೀರನ್ನು ಕೊಡಲು ಸೋತ ದೇಶ ಮಂಗಳಲ್ಲಿ ನೀರು ಇದೆಯೋ ಇಲ್ಲವೋ ಎಂದು ಹುಡುಕಲು ಹೊರಟಿದ್ದು ಶತಮೂರ್ಖತನ' ಎಂದು ನಮ್ಮ ವಿಜ್ಞಾನಿಗಳಿಗೆ ಅಪಮಾನ ಮಾಡುವುದು ಖಂಡಿತ ಶೋಭೆ ಅಲ್ಲ. ಕಾಲಿಗೆ ಚಪ್ಪಲಿ ಇಲ್ಲವೆಂದು ತಲೆಗೆ ಮುಂಡಾಸು ಸುತ್ತಬಾರದು ಎಂದೇನೂ ಇಲ್ಲ. ಕಾಲೊಂದನ್ನೇ ಅಲ್ಲ, ಬೋಳನ್ನೂ ಬಿಸಿಲಲ್ಲಿ ಕಾಯಿಸಿ ಸಜ್ಜುಕೊಳ್ಳಬೇಕೆಂದಿಲ್ಲ. ಗೊಣಗುವವರು ತಮ್ಮ ಕೆಲಸವನ್ನು ಮಾಡುತ್ತಿರುತ್ತಾರೆ. ಅವರಿಗೆ ಅವರ ಕೆಲಸವನ್ನು ಮುಂದುವರಿಸಲು ಬಿಡಬೇಕು. ನಮ್ಮ ಕೆಲಸವನ್ನು ಮಾಡುತ್ತಿರಬೇಕು.
ಮತ್ತೊಮ್ಮೆ ಹೇಳುತ್ತೇನೆ, ಇಸ್ರೋ ಉಡ್ಡಯನ ಮಾಡಿದ್ದು ಉಪಗ್ರಹವನ್ನಲ್ಲ, ಭಾರತದ ಮರ್ಯಾದೆ, ಪ್ರತಿಷ್ಠೆಯನ್ನು!
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


