ಅಂಕಣಗಳು

ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಮಾಡಬೇಡಿ ಎಂದವರೇ ಗಿಟ್ಟಿಸಿಕೊಂಡರು!

ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಮಾಡಬೇಡಿ ಎಂದವರೇ ಗಿಟ್ಟಿಸಿಕೊಂಡರು!
Published On :

'ರಾಜ್ಯೋತ್ಸವ ಪ್ರಶಸ್ತಿಯನ್ನು ವ್ಯವಸ್ಥಿತವಾಗಿ ಕೊಡಿ. ಅದರಲ್ಲೂ ಕನ್ನಡ ಪರ ಹೋರಾಟಗಾರರನ್ನು ಗುರುತಿಸಿ' ಎಂದವರೇ ಪ್ರಶಸ್ತಿ ಎತ್ತಾಕಿಕೊಂಡು ಬಂದರೆ? ಮಂಗಳೂರಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಚಾರದಲ್ಲಿ ಹೀಗೆಯೇ ಆಗಿದೆ. ಪಾರದರ್ಶಕ, ಲಾಬಿ ರಹಿತಅರ್ಹರಿಗೆ ಮಾತ್ರ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಹೊಸದಾಗಿ ಹುಟ್ಟಿಕೊಂಡ 'ಕನ್ನಡ ಕಟ್ಟೆ' ಎಂಬ ಸಂಘಟನೆ ಇತ್ತೀಚೆಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಮನವಿಯಲ್ಲಿನ ಬೇಡಿಕೆಗೆ ಜಿಲ್ಲಾಧಿಕಾರಿ ಅಸ್ತು ಎಂದಿದ್ದರು. ಗುರುವಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ಅಚ್ಚರಿ ಕಾದಿತ್ತು. ಲಾಬಿ ರಹಿತ ಆಯ್ಕೆಗೆ ಆಗ್ರಹಿಸಿದ ಕನ್ನಡ ಕಟ್ಟೆ ಸ್ಥಾಪಕ ಅಧ್ಯಕ್ಷರಿಗೇ ಪ್ರಶಸ್ತಿ ಬಂದಿತ್ತು! ಇದನ್ನು ನೋಡಿ ದಂಗಾದ ಸಂಘಟನೆಯ ಪದಾಧಿಕಾರಿಗಳು ತಮಗೆ ಗೊತ್ತಿಲ್ಲದೆ ಒಳಗೊಳಗೇ ಲಾಬಿ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡ ಸ್ಥಾಪಕ ಅಧ್ಯಕ್ಷರ ಬಗ್ಗೆ ಮೈಪರಚಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಮನವಿ ಕೊಡಲು ಹೋದವರು ಈಗ ಸ್ಥಾಪಕ ಅಧ್ಯಕ್ಷರ ಪರ ಪ್ರಶಸ್ತಿಗೆ ಲಾಬಿ ಮಾಡಿದ್ದಾರೆ ಎಂಬ ವೃಥಾ ಆರೋಪವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನಮ್ಮ ಮರ್ಯಾದೆ ಹೋಯ್ತು 'ಅಣ್ಣಯ್ಯಾ' ಎಂದು ಅಂಗಲಾಚುತ್ತಿದ್ದಾರೆ!

ಸಿದ್ದು ಮಾತು ಲೆಕ್ಕಕ್ಕಿಲ್ಲ ರಾಹುಲ್ ಮಾತೇ ಸಾಕಲ್ಲ!
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಮೈ ಕೊಡವಿ ಮೇಲೆದ್ದಿದ್ದಾರೆ. ಮೋದಿ ಅಲೆಯ ನಡುವೆ ಕಾಂಗ್ರೆಸ್ ಟೀಕಿಸುವ ಅಸ್ತ್ರ ಬಳಕೆಗೆ ಸಿದ್ಧವಾಗಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ಕರೆದಿದ್ದರು. ಪಟನಾ ಬಾಂಬ್ ಸ್ಫೋಟ ಅದೂ ಇದೂ ಮಾತಾಡಿದ ಮೇಲೆ ಚುನಾವಣೆ ವಿಷಯ ಪ್ರಸ್ತಾಪಿಸಿದರು. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ನಮಗೆ ವಿಷಯಕ್ಕೇನೂ ಕಮ್ಮಿಯಿಲ್ಲ. ಕೇಂದ್ರ ಸರ್ಕಾರ ಹಗರಣದ ಪಟ್ಟಿಯನ್ನೇ ಕೊಟ್ಟಿದೆ. ಅದಕ್ಕೆ ಪೂರಕವಾಗಿ ರಾಹುಲ್ ಗಾಂಧಿ ದಿನಕ್ಕೊಂದು ವಿವಾದಿತ ಹೇಳಿಕೆ ಕೊಡುತ್ತಿದ್ದಾರೆ. ಅವುಗಳನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಸಮರ ಸಾರುತ್ತೇವೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಏನೇ ಮಾತಾಡಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು!

ಸುದ್ದಿಗೋಷ್ಠಿ ಕರೆದು ಪ್ರಶ್ನೆಗೆ ಹೆದರಿ ಎದ್ದು ಹೋದರು!
ಕೆಲವರಿಗೆ ಸದಾ ಸುದ್ದಿಯಲ್ಲಿರಬೇಕು ಎಂಬ ಹಪಾಹಪಿ. ಆದರೆ ಯಾವ ವಿಷಯಕ್ಕೆ ಎಂದು ಗೊತ್ತಿರುವುದಿಲ್ಲ! ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನರಾಜ್ ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದರು. ನರೇಂದ್ರ ಮೋದಿ, ರಾಜ್ಯೋತ್ಸವ ಪ್ರಶಸ್ತಿ, ರೇಣುಕಾಚಾರ್ಯ, ಕೆಎಸ್‌ಎಫ್‌ಸಿ, ಅಬಕಾರಿ ಲಾಬಿ, ಆರೋಗ್ಯ ಇಲಾಖೆ ಅವ್ಯವಹಾರ, ಮಂಗಳೂರು ಮೀನುಮಾರುಕಟ್ಟೆ ಕಾಮಗಾರಿವರೆಗೆ ಸುದ್ದಿಗೋಷ್ಠಿ ವಿಷಯ ಇತ್ತು. ಯಾವುದನ್ನೂ ಅಧಿಕೃತವಾಗಿ ಮಾತನಾಡದೆ ಅಡ್ಡಗೋಡೆ  ಮೇಲೆ ಎಂಬಂತೆ ಹೇಳುತ್ತಿದ್ದರು. ಇದರಿಂದ ರೋಸಿ ಹೋದ ಪತ್ರಕರ್ತರು ಪದೇ ಪದೇ ಪ್ರಶ್ನಿಸತೊಡಗಿದರು. ಉತ್ತರಿಸಲು ತಿಣುಕಾಡಿ ಕಂಗೆಟ್ಟು ಕೊನೆಗೆ ಸುದ್ದಿಗೋಷ್ಠಿಯಿಂದ ಎದ್ದೆನೋ ಬಿದ್ದೆನೋ ಎಂದು ಹೊರನಡೆದರು. ಇದನ್ನು ನೋಡಿದ ಪತ್ರಕರ್ತರು ತಮ್ಮಲ್ಲೇ 'ಜೈ ಧನರಾಜ್‌' ಎನ್ನುತ್ತಿದ್ದರು!

ಮೆಂಬರ್ ಆದ್ರೆ ತೆಂಗಿನಕಾಯಿ ಫ್ರೀ ಎಂದಿದ್ದೆ ತಡ ಫಾರ್ಮ್ ಖಾಲಿ
ಮೈಸೂರು ನಗರಪಾಲಿಕೆಯಲ್ಲಿ ಪ್ರಮುಖವಾದ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರಾಗಲು ತೀವ್ರ ಪೈಪೋಟಿ. ಅದರಲ್ಲೂ ನಗರ ಯೋಜನೆ ಮತ್ತು ಆರೋಗ್ಯ ಸ್ಥಾಯಿ ಸಮಿತಿಗಳಿಗೆ ಭಾರಿ ಡಿಮ್ಯಾಂಡ್. ಆದರೆ ರಂಗಾಚಾರ್ಲು ಪುರಭವನ ಸಮಿತಿ, ಅಂಬಳೆ ಅಣ್ಣಯ್ಯ ಪಂಡಿತ್ ವಿದ್ಯಾರ್ಥಿ ನಿಲಯ ಸಮಿತಿ, ಸುಯೇಜ್ ಫಾರ್ಮ್ ಸಮಿತಿಗಳನ್ನು ಕೇಳುವವರೇ ಇರುವುದಿಲ್ಲ. ಕಳೆದ ವಾರ ಈ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ವಿಶೇಷ ಸಭೆ ಕರೆಯಲಾಗಿತ್ತು. ಫಾರ್ಮ್ ಸಮಿತಿಯ ಸದಸ್ಯತ್ವಕ್ಕೆ ಫಾರಂ ತುಂಬುವವರೂ ಗತಿ ಇರಲಿಲ್ಲ. ಆಗ ಜೆಡಿಎಸ್‌ನ ಹಿರಿಯ ಸದಸ್ಯರಾದ ಕೆ.ಟಿ. ಚಲುವೇಗೌಡ ಅವರು, ರೀ ಫಾರ್ಮ್ ಸಮಿತಿಗೆ ಫಾರ್ಮ್ ತುಂಬ್ರಿ ಎಂದು ಕೇಳಿದರು. ಯಾರೊಬ್ಬರೂ ಆಸಕ್ತಿ ತೋರಿಸದಿದ್ದಾಗ, ರೀ ಫಾರ್ಮ್ ಸಮಿತಿ ಅಂದ್ರೆ ಸುಮ್ಮೆ ಅಲ್ಲ. 100 ಎಕರೆ ತೆಂಗಿನತೋಟ ಇದೆ. ಮೆಂಬರ್ ಆದ್ರೆ ಮನೆಗೆ ತೆಂಗಿನಕಾಯಿ ಫ್ರೀ... ಎಂಬ ಸತ್ಯವನ್ನು ಬಯಲು ಮಾಡಿದರು. ಆಗ ಕೆಲ ಸದಸ್ಯರು ಫಾರ್ಮ್ ತುಂಬಲು ಮನಸ್ಸು ಮಾಡಿದರು.

ಜಂಬೋ ಸರ್ಕಸ್ ಎದುರು ಪ್ರತಿಭಟನೆಯ ಸರ್ಕಸ್
ಮೈಸೂರಿನಲ್ಲಿ ಜಂಬೋ ಸರ್ಕಸ್ ನಡೆಯುತ್ತಿದೆ. ಅಲ್ಲಿ ಆನೆ, ಒಂಟೆ, ಕತ್ತೆ, ಕುದುರೆ, ನಾಯಿ, ವಿವಿಧ ಪಕ್ಷಿಗಳನ್ನು ಬಳಸಲಾಗುತ್ತಿದೆ. ಇದನ್ನು ವಿರೋಧಿಸಿ ಪೀಪಲ್ ಫಾರ್ ಅನಿಮಲ್ ಸಂಘಟನೆಯವರು ಕಳೆದ ವಾರ ಸರ್ಕಸ್ ಎದುರು ಪ್ರತಿಭಟಿಸಿದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಪರ- ವಿರೋಧ ಪ್ರತಿಭಟನೆಗಳಿಂದಾಗಿ ಸರ್ಕಸ್ ಎದುರು ಸರ್ಕಸ್ ನಡೆದು, ಜನ ಪುಕ್ಕಟೆ ಮನರಂಜನೆ ಪಡೆದರು.

ದಕ್ಷಿಣ ಕನ್ನಡ ಡಿಸಿಗೆ ಪ್ರಶಸ್ತಿ ಆಯ್ಕೆ ಮಾನದಂಡ ಗೊತ್ತಿಲ್ಲವಂತೆ!
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾನದಂಡ ಗೊತ್ತಿಲ್ಲವಂತೆ! ಇತ್ತೀಚೆಗೆ ಪ್ರಶಸ್ತಿ ಪಟ್ಟಿ ಪ್ರಕಟ ವೇಳೆ ಸ್ವತಃ ಜಿಲ್ಲಾಧಿಕಾರಿಗಳೇ ಹೇಳಿ ಮಾಧ್ಯಮದರಿಗೆ ಅಚ್ಚರಿ ಮೂಡಿಸಿದರು. ಕೆಲವರನ್ನು ಯಾವ ಸಾಧನೆಗೆ, ಯಾವ ಮಾನದಂಡದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನಿಸಿದಾಗ, 'ಅವರ ಸಾಧನೆಗೆ ಪ್ರಶಸ್ತಿ ನೀಡಲಾಗಿದೆ' ಎಂದರು. ಯಾವ ಸಾಧನೆ, ಏನು ಮಾನದಂಡ ಎಂಬ ಪ್ರಶ್ನೆಗೂ ಜಿಲ್ಲಾಧಿಕಾರಿ ಬಳಿ ಉತ್ತರ ಇರಲಿಲ್ಲ. 'ಪ್ರಶಸ್ತಿ ಆಯ್ಕೆಗೆ ಯಾವುದೇ ಮಾನದಂಡ ಇಲ್ಲ' ಎಂದು ಬಿಟ್ಟರು. ಆದರೂ ಮಾಧ್ಯಮದವರು ಬಿಡಬೇಕಲ್ಲ. ಇದರಿಂದ ರೋಸಿಹೋದ ಡಿಸಿ ಕೊನೆಗೆ ಹೇಳಿದ್ದು, 'ನನಗೆ ಐಎಎಸ್‌ನಲ್ಲಿ ಐದು ನಿಮಿಷ ಪ್ರಶ್ನೆಯನ್ನೂ ಕೇಳಿರಲಿಲ್ಲ, ನೀವು ಕಾಲು ಗಂಟೆಯಿಂದ ಪ್ರಶ್ನೆಗೆ ಉತ್ತರಿಸಿದರೂ ಸುಮ್ಮನಿರುವುದಿಲ್ಲ' ಎನ್ನಬೇಕೇ!

ಕೆಲಸ ಮಾಡಿಕೊಡಲಿಲ್ಲವೆಂದು ಕಚೇರಿ ಎದುರು ಕಸ ಸುರಿದರು
ಅತ್ತೆ ಮೇಲಿನ ಕೋಪ ಕೊತ್ತಿಯ ಮೇಲೆ ಎಂಬ ಗಾದೆ ಇದೆ. ಮೈಸೂರಿನಲ್ಲಿ ಚುನಾಯಿತ ಪ್ರತಿನಿಧಿಯೊಬ್ಬರು ಈ ರೀತಿ ನಡೆದುಕೊಂಡಿದ್ದಾರೆ. ಯಾವುದೋ ಕೆಲಸಕ್ಕೆಂದು ಸಮೀಪದ ಸಾರ್ವಜನಿಕ ಸ್ವಾಮ್ಯದ ಕಚೇರಿಯೊಂದಕ್ಕೆ ಹೋಗಿದ್ದರು. ಅಲ್ಲಿನ ಅಧಿಕಾರಿ ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಕಚೇರಿ ಎದುರು ತ್ಯಾಜ್ಯ ಸುರಿಸಿದರು. ಆ ಅಧಿಕಾರಿ ನಗರಪಾಲಿಕೆಗೆ ಹೇಳಿ ತ್ಯಾಜ್ಯ ತೆಗೆಸಿದರು. ಆದರೆ ಮರುದಿನ ಮತ್ತೆ ಅಲ್ಲಿ ಕಸ ಪ್ರತ್ಯಕ್ಷ. ಇದು ಈಗ ಆ ಕಚೇರಿಯವರಿಗೆ ತಲೆನೋವಾಗಿದೆ!

- ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.