ಅಂಕಣಗಳು

ಕೈ ಹಿಡಿದ ನಾಯಕರನ್ನು ಕಡೆಗಣಿಸಿದರೇ ಸಿದ್ದರಾಮಯ್ಯ?

ಜಾತಿಯ ಬೆಂಬಲ ಇಲ್ಲ ಎಂದಾದರೆ ಆತ ರಾಜಕಾರಣದಲ್ಲಿ ಮೇಲೆ ಬರಲು ಸಾಧ್ಯವೇ...

ಕೈ ಹಿಡಿದ ನಾಯಕರನ್ನು ಕಡೆಗಣಿಸಿದರೇ ಸಿದ್ದರಾಮಯ್ಯ?
Published On :

ರಾಜಕಾರಣ ನಡೆಯುತ್ತಿರುವುದೇ ಜಾತಿ ಆಧಾರದ ಮೇಲೆ. ಇದು ಪ್ರಜಾಪ್ರಭುತ್ವದ ದುರಂತವಾದರೂ ಗೆಲ್ಲಲೇಬೇಕು ಎಂಬ ಕಾರಣಕ್ಕಾಗಿ ರಾಜಕೀಯ ನಾಯಕರೇ ಜಾತಿ ರಾಜಕಾರಣದ ಅನಿವಾರ್ಯತೆ ಸೃಷ್ಟಿಸಿದ್ದಾರೆ. ಜಾತಿಯ ಬೆಂಬಲ ಇಲ್ಲ ಎಂದಾದರೆ ಆತ ರಾಜಕಾರಣದಲ್ಲಿ ಮೇಲೆ ಬರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಂದು ಇದು ಹೊಸ ಬೆಳವಣಿಗೆಯೇನೂ ಅಲ್ಲ. ಮೊದಲಿನಿಂದಲೂ ರಾಜ್ಯ ರಾಜಕಾರಣದಲ್ಲಿ ಈ ಗುಣ ಹಾಸುಹೊಕ್ಕಾಗಿದೆ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರೆಲ್ಲರೂ ಒಂದಲ್ಲಾ ಒಂದು ಪ್ರಬಲ ಸಮುದಾಯಕ್ಕೆ ಸೇರಿದವರಾಗಿರುವುದು ಇದರ ಪರಿಣಾಮದಿಂದಲೇ. ಯಾವುದೇ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಎಚ್.ಡಿ. ದೇವೇಗೌಡರಿಂದ ಹಿಡಿದು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರವರೆಗೆ ಜಾತಿಯೇ ಪ್ರಮುಖವಾಯಿತು. ಧರ್ಮಸಿಂಗ್ ಅವರು ಅದಕ್ಕೆ ಅಪವಾದವಾಗಿದ್ದರೂ ಅವರು ಮುಖ್ಯಮಂತ್ರಿಯಾಗುವಲ್ಲಿ ಒಂದು ಪ್ರಬಲ ಜಾತಿಯ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಸುಳ್ಳಲ್ಲ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಈ ಹಿಂದೆ ಇದ್ದ ಜನತಾದಳ ತೊರೆದು ಕಾಂಗ್ರೆಸ್ ಸೇರಲು ಕೂಡ ಇದೇ ಜಾತಿ ವಿಚಾರ ಪ್ರಮುಖ ಕಾರಣವಾಯಿತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ತಮಗೆ ಒಕ್ಕಲಿಗ ಸಮುದಾಯದ ದೇವೇಗೌಡರು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಆ ಪಕ್ಷ ತೊರೆದು ನಂತರದಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕರಾದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯೂ ಆದರು. ಸಿದ್ದರಾಮಯ್ಯ ಅವರು ಈ ಮಟ್ಟಕ್ಕೆ ಏರಲು ಕೂಡ ಜಾತಿಯೇ ಕಾರಣವಾಗಿದ್ದು ಈಗ ಇತಿಹಾಸ.
ಆದರೆ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಈ ಜಾತಿಯ ಬಲೆಯಿಂದ ದೂರ ಸರಿದರು. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಕೆಲವರ ಮೆಚ್ಚುಗೆಗೂ ಪಾತ್ರರಾದರು. ಅಧಿಕಾರದ ಸುತ್ತಲಿನ ಅಂಟುಜಾಡ್ಯವಾಗಿದ್ದ ಜಾತಿಯನ್ನು ಸಿದ್ದರಾಮಯ್ಯ ದೂರ ಸರಿಸಿದರು ಎಂದು ಕೆಲವರು ವಿಶ್ಲೇಷಣೆಯನ್ನೂ ಮಾಡತೊಡಗಿದರು. ಹಾಗೆಂದು ಸಿದ್ದರಾಮಯ್ಯ ಅವರು ಒಂದು ಜಾತಿಗೆ ಸೀಮಿತವಾದ ವ್ಯಕ್ತಿ ಅಲ್ಲ ಎಂದೇನೂ ಅಲ್ಲ. ಈ ಹಿಂದೆ ಅವರು ಉಪಮುಖ್ಯಮಂತ್ರಿಯಾಗಿದ್ದಾಗ, ಹಣಕಾಸು ಖಾತೆ ಸಚಿವರಾಗಿದ್ದಾಗ ಅವರ ಸುತ್ತಲೂ ಇದ್ದವರು ಅವರ ಸಮುದಾಯದವರೇ ಆಗಿದ್ದರು. ಆಯಕಟ್ಟಿನ ಜಾಗದಲ್ಲಿ ತಮ್ಮವರನ್ನೇ ತಂದು ಕೂರಿಸಿದ್ದರು. ಹಿಂದುಳಿದ ವರ್ಗದ ನಾಯಕರಾಗಿ ಹೊರಹೊಮ್ಮಿದರೂ ಅವರ ಆಪ್ತ ವಲಯ ಕೇವಲ ಕುರುಬ ಸಮುದಾಯದವರಿಂದಲೇತುಂಬಿಕೊಂಡಿತ್ತು. ಆದರೆ, ಮುಖ್ಯಮಂತ್ರಿಯಾಗುತ್ತಿದ್ದಂತೆ ಎಲ್ಲವೂ ಬದಲಾಯಿತು. ಅಧಿಕಾರ ವರ್ಗ ಸೇರಿದಂತೆ ತಮ್ಮ ಸುತ್ತಮುತ್ತ ಕುರುಬರು ಇರಬಾರದು ಎಂದು ನಿರ್ಧರಿಸಿದ ಅವರು ಇತರೆ ವರ್ಗದವರನ್ನು ಜತೆಗಿಟ್ಟುಕೊಂಡರು. ಮಾತ್ರವಲ್ಲ, ಸಮುದಾಯದವರನ್ನು ಬಹುದೂರ ಇಟ್ಟರು.
ಅಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ, ಸಿದ್ದರಾಮಯ್ಯ ತಾವು ಈ ಸ್ಥಾನಕ್ಕೆ ಏರಲು ಕಾರಣರಾದ ಕುರುಬ ಸಮುದಾಯದ ಮುಖಂಡರನ್ನೇ  ದೂರವಿಟ್ಟಿದ್ದಾರೆ.
ಇದನ್ನು ತಿಳಿದುಕೊಳ್ಳಬೇಕಾದರೆ ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ಸಾಕು. "ಜೆಡಿಎಸ್‌ನಲ್ಲಿ, ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ಒಕ್ಕಲಿಗ ಸಮುದಾಯದ ದೇವೇಗೌಡರು ತಮಗೆ ಅನ್ಯಾಯ ಮಾಡಿದ್ದಾರೆ. ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ್ದಾರೆ" ಎಂದು ಹೇಳಿದ್ದ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಂಡು ಶಕ್ತಿ ಪ್ರದರ್ಶನ ಮಾಡಿದರು. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರೆಲ್ಲನ್ನೂ ಒಟ್ಟುಗೂಡಿಸಿದರು. ಈ ಮೂಲಕ ಕಾಂಗ್ರೆಸ್ ಸೇರುವ ಪ್ರಯತ್ನಕ್ಕೆ ನಾಂದಿ ಹಾಡಿದರು. ಆಗ ಅವರಿಗೆ ನೆನಪಾಗಿದ್ದು ಕಾಂಗ್ರೆಸ್‌ನ ಕುರುಬ ಸಮುದಾಯದ ನಾಯಕರಾದ ಎಚ್. ವಿಶ್ವನಾಥ್ ಮತ್ತು ಎಚ್.ಎಂ. ರೇವಣ್ಣ. ಅವರ ಮುಂದೆ ಕಾಂಗ್ರೆಸ್ ಸೇರುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಅಲ್ಲಿಂದ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಕೇಂದ್ರ ಸಚಿವ ಎ.ಕೆ. ಆ್ಯಂಟನಿ ನೇತೃತ್ವದ ಸಮಿತಿ ಮುಂದೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಪ್ರಸ್ತಾಪ ಬಂತು. ಚರ್ಚೆ ನಡೆಸಿದ ಸಮಿತಿ, ಕುರುಬ ಸಮುದಾಯದ ನಾಯಕರಾಗಿರುವ ಎಚ್.ವಿಶ್ವನಾಥ್ ಒಪ್ಪಿದರೆ ಮಾತ್ರ ಸಿದ್ದರಾಮಯ್ಯ ಅವರನ್ನು ಸೇರಿಸಿಕೊಳ್ಳಬಹುದು ಎಂದು ತೀರ್ಮಾನ ಕೈಗೊಂಡಿತು. ಇದಕ್ಕೆ ಮತ್ತೊಂದು ಕಾರಣ ವಿಶ್ವನಾಥ್ ಮತ್ತು ಆ್ಯಂಟನಿ ಅವರ ನಡುವಿನ ಆತ್ಮೀಯತೆ. ಎನ್‌ಎಸ್‌ಯುಐನಿಂದಲೂ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಹೀಗಾಗಿ ಸ್ವತಃ ಆ್ಯಂಟನಿ ಅವರೇ ವಿಶ್ವನಾಥ್ ಮುಂದೆ ಸಿದ್ದರಾಮಯ್ಯ ಅವರ ವಿಚಾರವನ್ನು ಪ್ರಸ್ತಾಪಿಸಿದ್ದರು. "ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದರೆ ಮುಂದೆ ನಿನಗೆ ಕುರುಬ ಸಮುದಾಯದ ನಾಯಕತ್ವ ಕೈತಪ್ಪುತ್ತದೆ. ನಿನ್ನ ಜಾಗದಲ್ಲಿ ಸಿದ್ದರಾಮಯ್ಯ ಕಾಣಿಸಿಕೊಳ್ಳುತ್ತಾರೆ" ಎಂಬ ಎಚ್ಚರಿಕೆಯನ್ನೂ ಆ್ಯಂಟನಿ ನೀಡಿದ್ದರು. ವಿಶ್ವನಾಥ್‌ಗೆ ಅನ್ಯಾಯವಾಗಬಹುದು ಎಂಬ ಆತಂಕ ಆ್ಯಂಟನಿ ಅವರದ್ದಾಗಿತ್ತು. ಆದರೆ, ತಮ್ಮ ಸಮುದಾಯದ ಒಬ್ಬ ವ್ಯಕ್ತಿ ಪಕ್ಷದಲ್ಲಿ ಮೇಲಕ್ಕೇರುತ್ತಾನೆ ಎಂಬ ಕಾರಣಕ್ಕೆ ವಿಶ್ವನಾಥ್ ಈ ಎಲ್ಲಾ ಎಚ್ಚರಿಕೆಗಳನ್ನೂ ಬದಿಗಿಟ್ಟು ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿದರು. ಈ ಎಲ್ಲಾ ಸಂದರ್ಭದಲ್ಲಿ ಎಚ್.ಎಂ. ರೇವಣ್ಣ ಅವರು ವಿಶ್ವನಾಥ್ ಜತೆಗಿದ್ದರು.
ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ನಂತರದ ರಾಜಕೀಯದಲ್ಲಿ ಹಿಂದೆ ತಿರುಗಿ ನೋಡಲಿಲ್ಲ. ಅವರ ವಿಚಾರವಾಗಿ ಮೂಲ ಕಾಂಗ್ರೆಸ್ ನಾಯಕರಿಂದ ವಿರೋಧ ವ್ಯಕ್ತವಾದಾಗಲೆಲ್ಲಾ ಎಚ್.ವಿಶ್ವನಾಥ್ ಮತ್ತು ಎಚ್.ಎಂ. ರೇವಣ್ಣ ಅವರು ಬೆಂಗಾವಲಾಗಿ ನಿಂತು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು. ಇದೆಲ್ಲದರ ಪರಿಣಾಮವಾಗಿ ಅವರು ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದರು. ಆಗಲೇ ಅವರಲ್ಲಿ ಜಾತಿಪ್ರೇಮ ಕಡಿಮೆಯಾಗಲಾರಂಭಿಸಿತು. ಇದಕ್ಕೆ ಉದಾಹರಣೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್.ಎಂ. ರೇವಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು. ತಮ್ಮ ಆತ್ಮೀಯ ಎಂಬ ಕಾರಣಕ್ಕೆ ಕಾಂಗ್ರೆಸ್ ರಾಜ್ಯ ಘಟಕದ ವಿರೋಧದ ನಡುವೆಯೂ ಸಿ.ಎಂ. ಇಬ್ರಾಹಿಂ ಅವರಿಗೆ ಭದ್ರಾವತಿಯಿಂದ ಟಿಕೆಟ್ ಕೊಡಿಸಿದ್ದ ಸಿದ್ದರಾಮಯ್ಯ ಅವರಿಗೆ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದ ಎಚ್.ಎಂ. ರೇವಣ್ಣ ಅವರಿಗೆ ಟಿಕೆಟ್ ಕೊಡಿಸುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ಆದರೆ, ಅವರು ಆ ಪ್ರಯತ್ನವನ್ನೇ ಮಾಡಲಿಲ್ಲ. ಇದಕ್ಕೆ ಇನ್ನೂ ಒಂದು ಕಾರಣ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ಮೊಮ್ಮಗ ಹೆಬ್ಬಾಳ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದುದು. ಅವರಿಗೆ ಟಿಕೆಟ್ ತಪ್ಪಿಸಿದರೆ ಮುಂದೆ ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ಜಾಫರ್ ಷರೀಫ್ ತಮ್ಮನ್ನು ಎಲ್ಲಿ ವಿರೋಧಿಸುವರೋ ಎಂಬ ಭೀತಿಯಿಂದ ತಮ್ಮವರಿಗೆ ಅನ್ಯಾಯವಾದರೂ ಪರವಾಗಿಲ್ಲ, ಮುಖ್ಯಮಂತ್ರಿ ಹುದ್ದೆಗೆ ಅಡ್ಡಿಯಾಗಬಾರದು ಎಂದು ರೇವಣ್ಣ ಅವರನ್ನು ದೂರವಿಟ್ಟರು.
ಇದು ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾಗುವವರೆಗಿನ ವಿಚಾರ. ಮುಖ್ಯಮಂತ್ರಿಯಾದ ಬಳಿಕ ಅವರು ತಮ್ಮ ಸಮುದಾಯದವರನ್ನು ಮತ್ತಷ್ಟು ದೂರವಿಟ್ಟರು. ಅದರಲ್ಲೂ ಸಂಪುಟದಲ್ಲಿ ಇನ್ನೊಬ್ಬ ಕುರುಬ ಬಾರದಂತೆ ನೋಡಿಕೊಂಡರು. ಜಾತಿ ವಿಚಾರದಲ್ಲಿ ಜೆ.ಎಚ್. ಪಟೇಲರಂತಹ ವಿವಾದಾತೀತ ವ್ಯಕ್ತಿಯೇ ತಮ್ಮ ಸಂಪುಟದಲ್ಲಿ 18 ಮಂದಿ ಲಿಂಗಾಯತರನ್ನು ಸೇರಿಸಿಕೊಂಡಿದ್ದರೆ, ಸಿದ್ದರಾಮಯ್ಯ ಮಾತ್ರ ಸಂಪುಟದಲ್ಲಿ ಬೇರೆ ಕುರುಬರು ಏಕೆ ಎಂದು ಯೋಚಿಸಿದರು. ಇದರಿಂದಾಗಿ ಎಚ್.ವೈ. ಮೇಟಿ ಅವರಂತಹ ಹಿರಿಯರು ಕೂಡ ಮಂತ್ರಿಮಂಡಲದಿಂದ ದೂರ ಉಳಿಯಬೇಕಾಯಿತು. ಇನ್ನೊಂದೆಡೆ ಆಯಕಟ್ಟಿನ ಜಾಗದಲ್ಲಿ ಕುರುಬ ಸಮುದಾಯದ ಅಧಿಕಾರಿಗಳು ಇರಬಾರದು ಎಂದು ತೀರ್ಮಾನ ಕೈಗೊಂಡರು ಸಿದ್ದರಾಮಯ್ಯ. ಈ ಸಂದರ್ಭದಲ್ಲಿ ಹಿಂದಿನ ಮುಖ್ಯಮಂತ್ರಿಗಳ ಸುತ್ತ ಇದ್ದ ಸಮುದಾಯದವರ ಪಟ್ಟಿ ನೀಡಿದರೂ ಅದನ್ನು ಒಪ್ಪಿಕೊಳ್ಳಲು ಅವರು ಸಿದ್ಧವಿರಲಿಲ್ಲ. ಇತರರಿಗಿಂತ ನಾನು ಭಿನ್ನ ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿದರು.
ಪ್ರಸ್ತುತ ಸಿದ್ದರಾಮಯ್ಯ ಜಾತಿಯನ್ನು ಎಷ್ಟು ದೂರವಿಟ್ಟಿದ್ದಾರೆ ಎಂದರೆ, ಕುರುಬ ಸಮುದಾಯದವರು ಹೇಳಿದ ಯಾವುದೇ ಕೆಲಸವಾಗುವುದಿಲ್ಲ ಎನ್ನುವ ಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಇದೆಲ್ಲದರ ಪರಿಣಾಮವಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿ ಪ್ರತಿಪಕ್ಷ ನಾಯಕರಾಗಿ ಮತ್ತು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವವರೆಗೆ ಅವರ ಬೆಂಗಾವಲಾಗಿ ನಿಂತು ಎಲ್ಲಾ ಸಂದರ್ಭದಲ್ಲೂ ಅವರಿಗೆ ಹೆಗಲು ಕೊಟ್ಟ ಎಚ್.ವಿಶ್ವನಾಥ್ ಮತ್ತು ಎಚ್.ಎಂ. ರೇವಣ್ಣ ಕ್ರಮೇಣ ಅವರಿಂದ ದೂರವಾಗುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಅವರ ಸುತ್ತಮುತ್ತ ಇರುತ್ತಿದ್ದ ಇಬ್ಬರೂ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಆಪ್ತ ವಲಯದಲ್ಲಿ ಅವರಿಬ್ಬರ ಓಡಾಟ ಕಡಿಮೆಯಾಗಿದೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರು ಇಬ್ಬರನ್ನೂ ಹೆಚ್ಚಾಗಿ ಹಚ್ಚಿಕೊಳ್ಳುತ್ತಿಲ್ಲ ಎನ್ನುವುದು. ಅಧಿಕಾರಿಗಳ ವರ್ಗಾವಣೆ, ಆಯಕಟ್ಟಿನ ಹುದ್ದೆಗಳಿಗೆ ನೇಮಕ ಸೇರಿದಂತೆ ಯಾವುದೇ ವಿಚಾರದಲ್ಲಿ ನೀಡಿದ ಸಲಹೆಗಳನ್ನೂ ಅವರು ಸ್ವೀಕರಿಸುತ್ತಿಲ್ಲ. ಅಷ್ಟೇ ಏಕೆ, ಏನಾದರೂ ಕೆಲಸ ಹೇಳಿದರೆ "ಕುರುಬ ಸಮುದಾಯದ ವಿಚಾರ ಬಿಟ್ಟು ಬೇರೆ ಕೆಲಸ ಹೇಳಿ, ಮಾಡುತ್ತೇನೆ" ಎಂದು ನೇರವಾಗಿಯೇ ಹೇಳುತ್ತಿದ್ದಾರೆ. ಹೀಗಾಗಿ ಜತೆಗಿದ್ದರೂ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಇಬ್ಬರು ನಾಯಕರೂ ತಮ್ಮ ಪಾಡಿಗೆ ತಾವಿದ್ದಾರೆ.
ಇನ್ನೊಂದೆಡೆ ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ ನಮಗೇನೂ ಹೆಚ್ಚಿನ ಅನುಕೂಲವಾಗುತ್ತಿಲ್ಲ ಎಂಬ ಕೊರಗು ಕಾಂಗ್ರೆಸ್‌ನಲ್ಲಿರುವ ಈ ಸಮುದಾಯದ ಮುಖಂಡರಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಅನೇಕ ವರ್ಷಗಳಿಂದ ತಮ್ಮ ಜತೆಗಿದ್ದ ಕುರುಬ ಸಮುದಾಯದ ಕೆಲವು ಪ್ರಮುಖರನ್ನು ಕೂಡ ಸಿದ್ದರಾಮಯ್ಯ ಆತ್ಮೀಯವಾಗಿ ಮಾತನಾಡಿಸುತ್ತಿಲ್ಲ. ಅವರೊಂದಿಗೆ ಅಂತರ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಾಗಾಗೇ, ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏಕವಚನದಲ್ಲಿ ನಿಂದಿಸಿದಾಗ ಕಾಂಗ್ರೆಸ್ ಬಿಡಿ, ಸಮುದಾಯದ ನಾಯಕರೂ ಕೂಡ ಅವರ ನೆರವಿಗೆ ಬರಲಿಲ್ಲ.
ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರು ಜಾತಿ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ ಎಂದು ಹೇಳಬಹುದು. ಆದರೆ, ಅನ್ಯಾಯಕ್ಕೊಳಗಾಗಿದ್ದ ತಮ್ಮ ಸಮುದಾಯದ ನಾಯಕನೊಬ್ಬನಿಗೆ ನ್ಯಾಯ ಒದಗಿಸಲು  ತ್ಯಾಗ ಮಾಡಿದವರಿಗೆ ಅನ್ಯಾಯ ಮಾಡಿದರೆ ಸಿದ್ದರಾಮಯ್ಯ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಲಗೋರಿ: ತಮಗಾದವರಿಗೆ ತಾವಾಗುವುದಿಲ್ಲ ಎಂದರೆ ಇತರರು ಆಗಿಬರುತ್ತಾರೆಯೇ?

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.