ಅಂಕಣಗಳು

ಕಾನ್ವೆಂಟ್‌ಗಳೆಂಬ ಸುಲಿಗೆ ಅಂಗಡಿಗಳು

Published On :

ನಮ್ಮ ದೇಶದ ಭ್ರಷ್ಟ ರಾಜಕಾರಣಿ ಮತ್ತು ಅಧಿಕಾರಿಗಳ ದಲ್ಲಾಳಿತನದ ಫಲವಾಗಿ, ಇವತ್ತು ಖಾಸಗೀಕರಣ ತನ್ನ ರಾಕ್ಷಸಬಾಹುಗಳಿಂದ ವಿಶ್ವವಿದ್ಯಾನಿಲಯಗಳನ್ನೂ ಕಬಳಿಸಲು ಸಿದ್ಧವಾಗಿದೆ. ನಮ್ಮ ದೇಶದ ಪ್ರತಿಯೊಬ್ಬ ನಾಗರೀಕನ ಮೂಲಭೂತ ಹಕ್ಕಾದ ಶಿಕ್ಷಣ, ಆರೋಗ್ಯ, ಉದ್ಯೋಗಗಳನ್ನು ಖಾಸಗಿ ಕಂಪನಿಗಳು ವ್ಯಾಪಾರೀಕರಣಗೊಳಿಸುತ್ತಿರುವ ಪರಿಯನ್ನು ನೋಡಿದರೆ, ಇನ್ನು ಕೆಲವೇ ದಿನಗಳಲ್ಲಿ ನೀರು (ಈಗಾಗಲೇ ಆಗಿದೆ), ಗಾಳಿಯನ್ನೂ ನಾವು ಹಣ ಕೊಟ್ಟುಕೊಳ್ಳಬೇಕಾಗುತ್ತದೆ.
ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಖಾಸಗೀ ಶಿಕ್ಷಣ ಸಂಸ್ಥೆ (ಕಾನ್ವೆಂಟ್)ಗಳ ಭರಾಟೆ ಅತಿ ಜೋರಾಗಿ ನಡೆಯುತ್ತಿದೆ. ಯಾವುದೇ ಶೈಕ್ಷಣಿಕ ಹಿನ್ನೆಲೆ, ಸಾಮಾಜಿಕ ಕಳಕಳಿ, ಪ್ರಗತಿಪರ ಚಿಂತನೆ, ನೈತಿಕ ಮೌಲ್ಯಗಳಿಲ್ಲದವರು, ಎಸ್ಸೆಸ್ಸೆಲ್ಸಿ, ಪಿಯುಸಿ ಫೇಲಾದವರು, ಕಳಪೆ ಗುತ್ತಿಗೆದಾರರು, ಬಡ್ಡಿ ವ್ಯವಹಾರಿಗಳು, ಭ್ರಷ್ಟ ರಾಜಕೀಯ ಪುಡಾರಿ ಹಾಗೂ ಸರ್ಕಾರಿ ನೌಕರರು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ, ಕಾನ್ವೆಂಟ್ ಎಂಬ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಾಮಮಾರ್ಗದಲ್ಲಿ ಹಣ ಮಾಡಿರುವ ವ್ಯಕ್ತಿಗಳನ್ನು ತಮ್ಮ ಶಾಲೆಯ ಸಭೆ, ಸಮಾರಂಭಗಳಿಗೆ ಆಹ್ವಾನಿಸಿ, ಗಣ್ಯವ್ಯಕ್ತಿಗಳಂತೆ ಬಿಂಬಿಸಿ, ಶಿಕ್ಷಣದ ಹೆಸರಿನಲ್ಲಿ ಅವರಿಂದ ವಂತಿಕೆ (ರೋಲ್‌ಕಾಲ್) ತೆಗೆದುಕೊಳ್ಳುತ್ತಿದ್ದಾರೆ.
ಒಂದು ಕಡೆ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ಅತ್ಯಂತ ಬುದ್ಧಿವಂತ, ನುರಿತ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ನೇಮಿಸುತ್ತಿರುವುದಲ್ಲದೆ, ಶಾಲಾ ಮಕ್ಕಳಿಗೆ ಅನೇಕ ಉಚಿತ ಸೌಲಭ್ಯ (ಮಧ್ಯಾಹ್ನದ ಬಿಸಿಊಟ, ಬಟ್ಟೆ, ಪುಸ್ತಕ) ಗಳನ್ನು ನೀಡುತ್ತಿದೆ. ಆದರೂ ಮುಗ್ಧ ಗ್ರಾಮೀಣ ಜನತೆ ತಮ್ಮ ಮಕ್ಕಳು ಶೂ, ಟೈ ಹಾಕುತ್ತಾರೆ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬಹು ಬೇಗ ಪರಿಣಿತರಾಗುತ್ತಾರೆ ಎಂಬ ಭ್ರಮೆಯಿಂದ ಕಾನ್ವೆಂಟ್‌ಗಳಿಗೆ ಸೇರಿಸುವುದು ಹೆಚ್ಚಾಗುತ್ತಿದೆ. (ಇಂಗ್ಲಿಷ್ ಎಂಬುದು ಒಂದು ಭಾಷೆಯೇ ಹೊರತು ಜ್ಞಾನವಲ್ಲ. ಮಾತೃಭಾಷೆ ಚೆನ್ನಾಗಿ ಕಲಿತ ಮಕ್ಕಳು, ಅಷ್ಟೇ ಬೇಗ ಚೆನ್ನಾಗಿ ಇಂಗ್ಲೀಷ್ ಭಾಷೆ ಕಲಿಯುತ್ತಾರೆ). ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಾನ್ವೆಂಟ್ ವ್ಯಾಪಾರಿಗಳು, ಸಂಸ್ಥೆಯ ಪ್ರತಿಯೊಂದು ಚಟುವಟಿಕೆಗಳಿಗೂ ಪೋಷಕರಿಂದ ಹಣ ಸುಲಿಗೆ ಮಾಡುವುದೂ ನಡೆಯುತ್ತಿದೆ. ಆದ್ದರಿಂದ ಯುವಜನತೆ ಇದನ್ನು ಪ್ರತಿಭಟಿಸಬೇಕಾಗಿದೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಉಚಿತ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದೆ.
ಸರ್ಕಾರ ಬಡವ-ಶ್ರೀಮಂತ, ಜಾತಿ, ಧರ್ಮಗಳೆನ್ನದೇ ಎಲ್ಲ ಮಕ್ಕಳಿಗೂ 1ರಿಂದ 10ನೇ ತರಗತಿವರೆಗೆ ಸಮಾನ ಶಿಕ್ಷಣ ಜಾರಿ ಮಾಡಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ಇರುವಷ್ಟೇ ಶುಲ್ಕವನ್ನು ಕಾನ್ವೆಂಟ್ ಮಕ್ಕಳಿಗೂ ಕಡ್ಡಾಯಗೊಳಿಸಬೇಕು. ಸರ್ಕಾರಿ ಶಾಲೆಗಳನ್ನು ಇನ್ನೂ ಉತ್ತಮಗೊಳಿಸಿ, ಕಾನ್ವೆಂಟ್‌ಗಳನ್ನು ಸರ್ಕಾರಿ ಶಾಲೆಯೊಳಗೆ ವಿಲೀನಗೊಳಿಸಬೇಕು. ಕಾನ್ವೆಂಟ್‌ಗಳ ವಂತಿಗೆ ಬಗ್ಗೆ ಸರ್ಕಾರ ಕಣ್ಗಾವಲಿಟ್ಟು, ಮಾಹಿತಿ ಹಕ್ಕು ಕಾಯ್ದೆ ಪರಿಮಿತಿಗೆ ಒಳಪಡಿಸಬೇಕು.
 
- ಎಚ್.ವಿ. ಶಿವರಾಜು ಹಿಟ್ಟನಹಳ್ಳಿ ಕೊಪ್ಪಲು, ಮಂಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.