ಸವಾರ ಬದಲಾಗಿದ್ದಾರೆ: ಕುದುರೆ ಬದಲಾಗಿಲ್ಲ
ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು- ಆಗಷ್ಟೇ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಎಲ್ಲ ಹೊಸ ಮುಖ್ಯಮಂತ್ರಿಗಳಂತೆ ಅವರೂ...
ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು- ಆಗಷ್ಟೇ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಎಲ್ಲ ಹೊಸ ಮುಖ್ಯಮಂತ್ರಿಗಳಂತೆ ಅವರೂ ಒಂದು ಭರ್ಜರಿ ಪತ್ರಿಕಾಗೋಷ್ಠಿ ಕರೆದು ತಮ್ಮ ಕನಸಿನ ಸಾಮಾಜಿಕ ಅನ್ಯಾಯ, ಆರ್ಥಿಕ ಅಸಮತೆಗಳ ವಿರುದ್ಧ ಅಧಿಕಾರದ ಸ್ಥಾನದಿಂದಲೇ ಹೋರಾಡುವ ಪ್ರತಿಜ್ಞೆಯನ್ನೂ ಬಹಿರಂಗವಾಗಿಯೇ ಮಾಡಿದರು.
ನಿಜಕ್ಕೂ ಅದು ಬದಲಾವಣೆಯ ಕಾಲ. ಇಂದಿರಾ ಗಾಂಧಿ ಅವರ ಗರೀಬಿ ಹಟಾವೋ ಘೋಷವಾಕ್ಯ ಮೊಳಗುತ್ತಿದ್ದಂತೆ, ರಾಜದಂಡ ಮೇಲ್ವರ್ಗಗಳಿಂದ ಕೆಳವರ್ಗಗಳಿಗೆ ಹಸ್ತಾಂತರವಾಗಿತ್ತು. ದೇವರಾಜ ಅರಸು ಆಗಿನ ಕಾಲದಲ್ಲಿ "ಕೊಟ್ಟಿಗೆಯ ಕನಸುಗಾರರೇ".
ಮೊಟ್ಟಮೊದಲ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ಹೇಳಿದ್ದನ್ನೆಲ್ಲ ಆಸಕ್ತಿಯಿಂದ ಗಮನವಿಟ್ಟು ಕೇಳಿಸಿಕೊಂಡ ಒಬ್ಬ ಪತ್ರಕರ್ತನ ಪ್ರಶ್ನೆ:
ನಿಮ್ಮ ನೌಕರಷಾಹಿ ದರ್ಬಾರನ್ನು ಅಧಿಕಾರಿಗಳ ಮನೋಧರ್ಮವನ್ನು ರಾತ್ರಿ ಕಳೆದು ಬೆಳಗಾಗುವುದರ ಒಳಗಾಗಿ ಬದಲಾಯಿಸುವ ವಿಶ್ವಾಸ ನಿಮಗಿದೆಯಾ? ಎಲ್ಲಿಂದ ಬಂತದು? ಆಗ ಅರಸು ಕೊಟ್ಟ ಉತ್ತರ: ಅಧಿಕಾರಷಾಹಿ ಕುದುರೆ ಇದ್ದಂತೆ. ಮುಖ್ಯಮಂತ್ರಿ ಸವಾರ. ಸವಾರ ಸರಿಯಾದ ರೀತಿಯಲ್ಲಿ ಆದೇಶ ನೀಡಿದರೆ (ಲಗಾಮಿನ ಮೂಲಕ) ಸವಾರಿ ಸುಲಭ.
ಈಗ ಮತ್ತೊಮ್ಮೆ, ಇನ್ನೊಬ್ಬ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ, ಅದೇ ಸ್ಥಿತಿಯಲ್ಲೇ ನಿಂತಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸರ್ಕಾರದ ನೀತಿಯನ್ನು ಬೇರುಮಟ್ಟದಲ್ಲಿ ಜಾರಿಗೆ ತರಬೇಕಾದ ಅಧಿಕಾರಿಗಳ ಸಭೆಯಲ್ಲೇ, ತಮ್ಮ ನಿಲವು, ಆಯ್ಕೆ ಹಾಗೂ ಉದ್ದೇಶ ಕುರಿತಂತೆ, ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಮಾತಾಡಿದ್ದಾರೆ. ಒಂದು ರೀತಿಯಲ್ಲಿ ಸಾಮಾನ್ಯರ ಆಡುಮಾತಿನಲ್ಲಿ "ಕ್ಲಾಸನ್ನು ತೆಗೆದುಕೊಂಡಿದ್ದಾರೆ."
ಸಿದ್ದರಾಮಯ್ಯ ಅವರ ಪ್ರಕಾರ 2013ರ ವಿಧಾನ ಸಭೆ, ಚುನಾವಣೆಯಲ್ಲಿ ಜನ ಬದಲಾವಣೆಗೆ ಓಟು ಕೊಟ್ಟಿದ್ದಾರೆ. ಸರ್ಕಾರ ಬದಲಾಗಿದೆ. ಅಧಿಕಾರಿಗಳು, ನೌಕರರೂ ಬದಲಾಗಬೇಕು. ಜನ ಕಲ್ಯಾಣ ಕಾರ್ಯಕ್ರಮಗಳೆಲ್ಲವೂ ಶೀಘ್ರ ಗತಿಯಲ್ಲಿ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೇ ಕಾರ್ಯಗತಿಯಾಗಿ, ಬಡಜನವರ್ಗಗಳಿಗೆ, ಶೋಷಿತ ಸಮಾಜಕ್ಕೆ ಪ್ರಭುತ್ವದ ಕೊಡುಗೆ ನೇರವಾಗಿ ಮುಟ್ಟಬೇಕು.
ಈ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ ಅಧಿಕಾರವೆಲ್ಲ ದೆಹಲಿಯಲ್ಲಿ ಹೆಪ್ಪುಗಟ್ಟಿ ಕೂತಿರುವ ಸನ್ನಿವೇಶದಲ್ಲಿ, ಮೇಲಿನಿಂದ ಹರಿದು ಬಂದ ಷರತ್ತುಗಳೊಡನೆ ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಅಧಿಕಾರಿ ಷಾಹಿ- ನೌಕರಷಾಹಿ ಮಾತ್ರ ಹಿಂದೆ ಬಿದ್ದಿದೆಯೇ ಅಥವಾ ಅದರ ಜತೆಯಲ್ಲೇ ಎಲ್ಲ ಹಂತಗಳ ರಾಜಕೀಯ ಅಧಿಕಾರವನ್ನು, (ಅದರಿಂದ ಬರುವ ಕಾಯಿದೆಬದ್ಧ ಕಾಯಿದೆ ಬಾಹಿರ ಸೌಲಭ್ಯಗಳನ್ನು) ಹಂಚಿಕೊಂಡಿರುವವರ ಪಾತ್ರವೂ ಇದೆಯೋ ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಹುಡುಕಬೇಕು. ಅದನ್ನೂ ಬೇರು ಮಟ್ಟದ ರಾಜಕಾರಣಿಗಳ ಸಭೆಯಲ್ಲೇ ಹೇಳಬೇಕು. ಮುಖ್ಯಮಂತ್ರಿಯ ಉದ್ದೇಶವಂತೂ ಈಗ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿರಬೇಕು. ಆದರೆ ಜನರಲ್ಲೂ ಅವರದ್ದೇ ಆದ ಅನಿಸಿಕೆಗಳೂ ಇರುತ್ತಲ್ಲ! ಈಗಿನ ಜನಜನಿತ ನಂಬಿಕೆಯಂತೆ, ಸಿದ್ದರಾಮಯ್ಯ ಅವರಿಗೆ ವರಿಷ್ಠರ ಸಂಪೂರ್ಣ ಬೆಂಬಲವಿದೆ. ಅದು ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಹೆಚ್ಚಿಸಿದೆ. "ಇತರರಂತೆ" ಸಿದ್ದರಾಮಯ್ಯ ಅವರಿಗೆ ಹೊರಗಿನ ಒತ್ತಡಗಳನ್ನು ದೂರುವುದಕ್ಕೆ ಯಾವ ಅವಕಾಶವೂ ಇಲ್ಲ. ಅದನ್ನು ಅವರೂ ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ.
ಮಹತ್ವದ ನಿರ್ಧಾರ: ಆದ್ದರಿಂದಲೇ ಅವರು ಮುಖ್ಯಮಂತ್ರಿಯಾದ ಕೂಡಲೇ, ಇನ್ನೂ ಸಚಿವ ಸಂಪುಟದ ರಚನೆಯಾಗುವುದಕ್ಕೆ ಮುಂಚೆಯೇ ರುಪಾಯಿಗೊಂದು ಕೇಜಿ ಅಕ್ಕಿಯ ಪೂರೈಕೆ ಹಾಗೂ ಇತರ ಕೆಲವು ಮಹತ್ವದ ನಿರ್ಧಾರಗಳನ್ನು ಧೈರ್ಯವಾಗಿ ಪ್ರಕಟಿಸಿದ್ದು, ಆ ನಿರ್ಧಾರಗಳಿಗೆ ಅವು ಪ್ರಕಟವಾದ ಅನಂತರ ವಿಧಿವತ್ತಾಗಿ ರಚನೆಯಾದ ಸಚಿವ ಸಂಪುಟದ ಒಪ್ಪಿಗೆಯೂ ದೊರಕಿದೆ. ಆದರೆ ಅಗ್ಗದ ಮಧ್ಯದ ಪೂರೈಕೆಯ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿದ ಮಾತನ್ನು ಅರ್ಧದಷ್ಟು ನುಂಗಿ ಅದು ನಿರ್ಧಾರವಲ್ಲ, ಪರಿಶೀಲನೆಯಲ್ಲಿದೆ ಎಂದು ವಿವರಣೆ ನೀಡಲೇ ಬೇಕಾಯಿತು. ಹೊಸ ಸರ್ಕಾರ, ಹೊಸ ಮುಖ್ಯಮಂತ್ರಿ ಹಲವು ಹೊಸ ನೇಮಕಗಳನ್ನು ಮಾಡಲೇಬೇಕು. ಸಿದ್ದರಾಮಯ್ಯ ಅವರು ರವಿವರ್ಮ ಕುಮಾರ್ ಅವರನ್ನು ಅಡ್ವೊಕೇಟ್ ಜನರಲ್ ಆಗಿ ನೇಮಿಸಿದ್ದಾರೆ. ಅದಕ್ಕೂ ಮಂತ್ರಿಮಂಡಲದ ಅನುಮತಿಯನ್ನು ಪ್ರಕಟನೆಯ ಅನಂತರ ಪಡಿದುಕೊಂಡಿದ್ದಾರೆ. ಮಾಧ್ಯಮ ಸಲಹೆಗಾರರ ನೇಮಕ ಅವರಿಗೇ ಬಿಟ್ಟಿದ್ದು. ರಾಜ್ಯದಲ್ಲಿ ಪ್ರತಿಯೊಬ್ಬ ಮುಖ್ಯಮಂತ್ರಿಯೂ ತಮ್ಮ ವಾಸ್ತವ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಮನೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ವಾಸ್ತು ಶಾಸ್ತ್ರವನ್ನು ನಂಬಿದ್ದರೆ, ಉಳಿದವರ ಪಾಲಿಗೆ ಅದು ಅನುಕೂಲದ ವಿಚಾರ. ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡಿರುವುದು ಒಂದು ಚಿಕ್ಕಮನೆ. ಅದಕ್ಕೇ ಪಕ್ಕದ ಮನೆಯನ್ನೂ ಮುಖ್ಯಮಂತ್ರಿಯೇ ಬಳಸುವುದಕ್ಕೂ ವ್ಯವಸ್ಥೆಯಾಗಿದೆ. ಆ ಮನೆಗೆ ಈಗ ಮುಖ್ಯಮಂತ್ರಿಯ ಸ್ಥಾನ ಗೌರವ- ಪ್ರತಿಷ್ಠೆಗೆ ತಕ್ಕಂತೆ ಭದ್ರತೆಯ ವ್ಯವಸ್ಥೆಯಾಗಬೇಕು. ಅದನ್ನೆಲ್ಲ ಅಧಿಕಾರಿಗಳು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಅವರಿಗೆ ಅದರ ಅನುಭವವಿದೆ. ನಿಜ. ಇದ್ಯಾವುದೂ ಮಹತ್ವದ ವಿಚಾರವಲ್ಲ. ಆದರೆ ನೂತನ ಮುಖ್ಯಮಂತ್ರಿಯ ಮೊದಲ ಹೆಜ್ಜೆಗಳನ್ನು ಒಂದೇ ಕಡೆ ಸಾಲಾಗಿ ಬರೆದು ಜೋಡಿಸಿದಾಗ ಸಿಗುವ ಚಿತ್ರ ನಿಜಕ್ಕೂ ಆಹ್ಲಾದಕರವಾದದ್ದೇನೂ ಅಲ್ಲ. ಇವೆಲ್ಲ ಕೆಲಸವನ್ನು ಸದ್ದುಗದ್ದಲವಿಲ್ಲದೇ, ಟೀಕೆ- ಟಿಪ್ಪಣಿಗಳಿಗೆ ಅವಕಾಶವಿಲ್ಲದಂತೆ ಮಾಡಿಕೊಳ್ಳಬಹುದಿತ್ತು. ಹೊಸ ಮುಖ್ಯಮಂತ್ರಿಯ ಆರಂಭದ ದಿನಗಳನ್ನು ಜನ, ಮಾಧ್ಯಮದವರು ಸೂಕ್ಷ್ಮವಾಗಿ, ಗಂಭೀರವಾಗಿ ಪರೀಕ್ಷಿಸಿ ನೋಡುತ್ತಾರೆ. ಕಾಲ ಚಕ್ರದ ಉರುಳಲ್ಲಿ ಮುಂದೆ ಎಲ್ಲವೂ ಯಥಾಪ್ರಕಾರ ಎನ್ನುವಂತಾಗಲೂಬಹುದು.
ಮಂತ್ರಿಗಳು- ಖಾತೆಗಳು: ಮಂತ್ರಿ ಮಂಡಲದ ರಚನೆಯ ವಿಧಾನ, ಅದರ ಸ್ವರೂಪ ಸರ್ಕಾರದ ವ್ಯವಸ್ಥೆಯ ದೃಷ್ಟಿಯಿಂದ ತುಂಬಾ ಮುಖ್ಯವಾದವು. ಈ ವಿಚಾರದಲ್ಲಿ ಎಷ್ಚು ಎಚ್ಚರಿಕೆ ವಹಿಸಿದರೂ, ಅದು ಕಡಿಮೆಯೇ. ಮಂತ್ರಿಮಂಡಲದ ರಚನೆ, ಖಾತೆಗಳ ಹಂಚಿಕೆಯ ಪ್ರಕ್ರಿಯೆಯಲ್ಲಿ ಹಲವಾರು ವ್ಯಕ್ತಿಗಳು, ಶಕ್ತಿಗಳ ಪಾತ್ರ ಇದ್ದೇ ಇರುತ್ತದೆ. ಇಲ್ಲಿ ಪ್ರಾದೇಶಿಕ ಪ್ರಾತಿನಿಧ್ಯದ ಪ್ರಶ್ನೆ ಇದೆ. ಜಾತಿ ಪ್ರಾತಿನಿಧ್ಯದ ಪ್ರಶ್ನೆ ಮಹತ್ವವಾದದ್ದು. ಹಾಗೇ ಇತರ ಕೆಲವು ವಿಚಾರಗಳೂ ತಮ್ಮದೇ ಆದ ರೀತಿಯಲ್ಲಿ ಪ್ರಾಮುಖ್ಯತವಾದವೇ. ಆದರೆ ಎಲ್ಲಕ್ಕಿಂತ ಹೆಚ್ಚು ಪ್ರಾಮುಖ್ಯ ಸಿಗಬೇಕಾಗಿದ್ದು ಸರ್ಕಾರದ ಕೆಲಸ ನಡೆಯಬೇಕಾದ ದಿಕ್ಕು-ದೆಸೆ ಹಾಗೂ ರೀತಿ- ನೀತಿಗೆ. ಅಲ್ಲೇ ಕಂಡು ಬಂದಿರುವುದು ಕೊರತೆ.
ಯಾರನ್ನು ಬೇಕಾದರೂ ಮಂತ್ರಿ ಸ್ಥಾನದಲ್ಲಿ ಕೂಡಿಸಬಹುದು. ಯಾರಿಗೆ ಯಾವ ಖಾತೆ ನೀಡಿದರೂ ನಡೆಯುತ್ತೆ ಎನ್ನುವ ಧೋರಣೆಯಿಂದ ಭವಿಷ್ಯದಲ್ಲಿ ಎಡರು-ತೊಡರುಗಳನ್ನು ಎದುರಿಸಲೇಬೇಕಾಗುತ್ತದೆ. ಮಂತ್ರಿಗಳ ಅರ್ಹತೆ, ಪ್ರತಿಭೆ ಅವರ ಪ್ರಾತಿನಿಧಿಕ ಸ್ವರೂಪವೇ ಸೀಮಿತವಾಗುವುದಿಲ್ಲ. ಮಂತ್ರಿಯಾದವರು ಎಲ್ಲರೂ ರಾಜ್ಯದ ಮಂತ್ರಿಗಳೇ ಅಲ್ಲವೇ. ಆ ದೃಷ್ಟಿಯಿಂದ ನೋಡಿದರೆ ಸಿದ್ದರಾಮಯ್ಯ ಅವರ ಸಚಿವ ಸಂಪುಟಕ್ಕೆ ಅಖಿಲ ಕರ್ನಾಟಕ ಪ್ರಾತಿನಿಧಿಕ ಸ್ವರೂಪ ಸಂಪೂರ್ಣವಾಗಿಲ್ಲ ಎನಿಸುತ್ತದೆ.
ಉತ್ತರ ಕರ್ನಾಟಕ ತಬ್ಬಲಿ: ತುಂಗಭದ್ರಾ, ಕೃಷ್ಣಾ ನದಿಗಳ ವಿಶಾಲವಾದ ಬಯಲಿನ ಸೀಮೆಯಲ್ಲಿ ಎಚ್.ಕೆ. ಪಾಟೀಲರನ್ನು ಬಿಟ್ಟರೆ ನಾಯಕತ್ವದ ಅಭಾವ ಎದ್ದು ಕಾಣುತ್ತಿದೆ. ಅಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಬಲ ಸಮಾಜ ಎಂದರೆ ವೀರಶೈವ ಸಮಾಜವೇ.
ಸಿದ್ದರಾಮಯ್ಯ ಅವರು ಈಗಾಗಲೇ ಮಠ ಮಾನ್ಯಗಳಿಗೆ ಸರ್ಕಾರ ನೀಡುವ ಅಥವಾ ನೀಡದೇ ಇರುವ ನೆರವಿನ ವಿಚಾರದಲ್ಲಿ ತಮ್ಮ ನಿಲವನ್ನು ಪ್ರಸ್ತಾಪಿಸಿದ್ದಾಗಿದೆ. ಸ್ಥೂಲವಾಗಿ, ಯಾರಿಗೂ ಸುಮ್ಮನೆ ಸರ್ಕಾರದ ಹಣ ಸಿಗುವುದಿಲ್ಲ, ನಿರ್ದಿಷ್ಟವಾದ ಯೋಜನೆಗಳಿಗೆ ಅಗತ್ಯವಾದರೆ, ಮಠಗಳು ಕೇಳಿದರೆ, ಕಾಯಿದೆಯ ಚೌಕಟ್ಟಿನಲ್ಲಿ ನೆರವನ್ನು ನೀಡಲಾಗುವುದು ಎನ್ನುವುದೇ ಹೊಸ ನೀತಿ. ಅದು ಅರ್ಥಪೂರ್ಣವಾದ ನೀತಿಯೂ ಹೌದು. ಹಿಂದಿನ ವರ್ಷಗಳಲ್ಲಿ ಪಡೆದ ನೆರವಿನ ಬಳಕೆಗೆ ಸೂಕ್ತ ರೀತಿಯ ಲೆಕ್ಕ ಪತ್ರಗಳನ್ನು ಒದಗಿಸದೇ ಹೋದರೆ, ಈ ವರ್ಷದ ನೆರವು ಸಿಗಲಿಕ್ಕಿಲ್ಲ. ಇಂತಹ ನೀತಿಯಿಂದ ವೀರಶೈವ ಮಠಾಧೀಶರಿಗೆ ಸಿಟ್ಟು ಬಂದರೂ, ಅವರನ್ನು ಸಮಾಧಾನಪಡಿಸಬಲ್ಲ ವ್ಯಕ್ತಿತ್ವವಿರುವ ಸಮಾಜದ ಹಿರಿಯರು ಮಂತ್ರಿ ಮಂಡಲದಲ್ಲಿ ಇಲ್ಲ- ಶ್ಯಾಮನೂರು ಶಿವಶಂಕರಪ್ಪ ಅವರು ಅದಕ್ಕೆಲ್ಲ ಹೋಗುವುದಿಲ್ಲ. ಈಗಿನ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಾಜ್ಯದ ಸದ್ಯದ ಭವಿಷ್ಯದ ರಾಜಕೀಯ ಸ್ವರೂಪ, ಉತ್ತರ ಕರ್ನಾಟಕದಲ್ಲಿ ವೀರಶೈವರ ಪ್ರಾಬಲ್ಯದ ವಿರುದ್ಧ ಅಹಿಂದ ಶಕ್ತಿಗಳ ಸೆಣಸಾಟ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು- ಅಹಿಂದ ಸಂಘರ್ಷ ಎನ್ನುವ ರೀತಿಯಲ್ಲಿರಬಹುದು ಎನಿಸುತ್ತಿದೆ. ಹಿಂದುಳಿದ (ಅಹಿಂದ- ಅಲ್ಪಸಂಖ್ಯಾತ, ದಲಿತ). ಆದರೆ ಅದೇ ಸಮಯದಲ್ಲೇ, ರಾಜ್ಯದ ಎಲ್ಲ ಕಡೆ ಇತರೆ ಹಿಂದುಳಿದ ಜಾತಿಗಳು, ದಲಿತರ ನಡುವಣ ಮೇಲಾಟಕ್ಕೂ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎನ್ನುವ ಭಾವನೆಯೂ ಮೂಡುತ್ತಿದೆ. ಮಂತ್ರಿಗಳ ಖಾತೆಗಳ ಹಂಚಿಕೆಯಲ್ಲಿ ಅರವತ್ತಾರು ವಯಸ್ಸಿನ ಹಿರಿಯ ಎಸ್.ಆರ್. ಪಾಟೀಲರನ್ನು ಐಟಿ-ಬಿಟಿ ಸಚಿವರನ್ನಾಗಿ ನೇಮಿಸಿದ್ದನ್ನು ಆಧುನಿಕ- ಔದ್ಯಮಿಕ ವಲಯದ ಆ ವಿಭಾಗದ ಪ್ರಮುಖರು ಸ್ವಾಗತಿಸುವುದು ಸಾಧ್ಯವೇ ಇಲ್ಲ. ಈಗಾಗಲೇ ಐಟಿ ಬಿಟಿ ದಿಗ್ಗಜರೇ ಈ ವಿಚಾರದಲ್ಲಿ ತಮ್ಮ ಧ್ವನಿಯನ್ನು ಎತ್ತಿದ್ದಾರೆ. ಅವರ ಮಾತು ದೆಹಲಿಯನ್ನು ಮುಟ್ಟಲಿಕ್ಕೆ ಬಹುಕಾಲ ಬೇಕಾಗಿಲ್ಲ. ಅಭಯ ಚಂದ್ರ ಚೈನ್ ಅವರಿಗೆ ಕರಾವಳಿಯ ಮಂತ್ರಿ ಎಂದು ಕರೆದು, ಮೀನುಗಾರಿಕೆಯ ಇಲಾಖೆಯ ಹೊಣೆಗಾರಿಕೆಯನ್ನು ಹೊರಿಸಿರುವುದು ಒಂದು ವಿಪರ್ಯಾಸವೇ ಸರಿ. ಇನ್ನು ನಾಲ್ವರು ಮಂತ್ರಿಗಳ ನೇಮಕವಾಗಬೇಕಾದರೆ ಆ ಸಮಯದಲ್ಲಿ ಈಗ ನುಸುಳಿರುವ ಕೆಲವು ಲೋಪಗಳನ್ನು ಸರಿಪಡಿಸಿಕೊಳ್ಳುವುದೇನೂ ಕಷ್ಟವಲ್ಲ.
ಕಿಡಿಗೇಡಿತನ: ಲೋಕಸಭೆ ಚುನಾವಣೆಗೆ ಇನ್ನು ಉಳಿದಿರುವುದು ಹನ್ನೊಂದೇ ತಿಂಗಳು. ದೆಹಲಿಯಲ್ಲಿ ಈಗಾಗಲೇ ಶಂಖನಾದ, ರಣದುಂದುಭಿ ಮೊಳಗಿದೆ. ಕರ್ನಾಟಕದಲ್ಲಿ ಆಡಳಿತದ ಸುಧಾರಣೆ ಯಾವಾಗ?
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

