ನಾವು ಸಿದ್ದರಾಮಯ್ಯ 'ಫ್ಯಾನ್'ಗಳು!
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಪ್ರಚಾರಕ್ಕಾಗಿ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ಅವರೊಂದಿಗೆ ನರ್ಸ್ ಜಯಲಕ್ಷ್ಮಿ ಆಗಮಿಸಿದ್ದರು. ಅದೇ ದಿನ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಆಗಮಿಸುವವರಿದ್ದರು. ಅದಕ್ಕಾಗಿಯೇ ಕಂಪ್ಲಾಪುರ ಬಳಿ ಸಹಸ್ರಾರು ಮಂದಿ ಕಾಯುತ್ತಿದ್ದರು. ಇದನ್ನು ತಪ್ಪಾಗಿ ಗ್ರಹಿಸಿದ ಜಯಲಕ್ಷ್ಮಿ ಅವರು 'ಬಿಗ್‌ಬಾಸ್' ಸ್ಟೈಲ್‌ನಲ್ಲಿ ಪೋಸ್ ನೀಡುತ್ತಾ, ನೀವೆಲ್ಲಾ ಫ್ಯಾನ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಆಗ ಅಲ್ಲಿ ಸೇರಿದ್ದ ಯುವಕರು, ನಾವೆಲ್ಲಾ ಸಿದ್ರಾಮಯ್ಯ ಫ್ಯಾನ್‌ಗಳು. ನಿಮ್ಮ 'ಫ್ಯಾನ್' ಅಲ್ಲ ಅಂದಾಗಲೇ ಜಯಲಕ್ಷ್ಮಿ ಅವರಿಗೆ ನಿಜಸಂಗತಿ ಅರಿವಾಗಿದ್ದು. ಆದ್ರೂ ಅವ್ರು ಸ್ವಲ್ಪವೂ ಬೇಜಾರು ಮಾಡಿಕೊಳ್ಳದೇ ಸಿದ್ರಾಮಯ್ಯಗೆ ಜೈ ಎನ್ನುತ್ತಾ ಮುಂದೆ ಸಾಗಿದರು.
ಪರೀಕ್ಷಾಂಗ ಕುಲಸಚಿವರಿಗೇ ಟಾಂಗ್!
ಮಂಗಳೂರು ಎಸ್‌ಡಿಎಂ ಕೇಂದ್ರದಲ್ಲಿ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಿರುಸಿನಿಂದ ನಡೆಯುತ್ತಿತ್ತು. ಅಂತಿಮ ದಿನ ಪರೀಕ್ಷಾಂಗ ಕುಲಸಚಿವ (ಮೌಲ್ಯಮಾಪನ) ಭೇಟಿ ನೀಡುವುದು ವಾಡಿಕೆ. ಅದರಂತೆ ಮೌಲ್ಯ ಮಾಪನದ ವರಿಷ್ಠ ಅಧಿಕಾರಿ ತಮ್ಮದೇ ಶೈಲಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಕೇಂದ್ರದೊಳಗೆ ಬಂದರು. ಸುತ್ತಮುತ್ತಲೂ ಮೊಬೈಲ್ ಬಳಸಬೇಡಿ ಎಂಬ ಎಚ್ಚರಿಕೆ ಫಲಕ ಹಾಕಲಾಗಿತ್ತು. ಇದನ್ನು ಲೆಕ್ಕಿಸದೆ ಮಾತನಾಡುತ್ತಿರುವುದನ್ನು ನೋಡಿದ ಅಲ್ಲಿನ ಕಿರಿಯ ಉಪನ್ಯಾಸಕರೊಬ್ಬರು ಪರೀಕ್ಷಾಂಗ ಕುಲಸಚಿವರನ್ನು ಕರೆದು, 'ಸರ್ ಇಲ್ನೋಡಿ, ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ. ಮೌಲ್ಯಮಾಪನ ವರಿಷ್ಠರಾಗಿ ಹೀಗೆ ಮಾಡಿದರೆ ಹೇಗೆ?' ಎಂದಾಗ ಅಚ್ಚರಿ, ಆಘಾತದಿಂದ ಪೆಚ್ಚಾಗುವ ಸರದಿ ಅಧಿಕಾರಿಯದ್ದು!
ಸಾಲುಂಡಿಯಲ್ಲಿ ಖಾದರ್ ಖದರ್
ಮೈಸೂರು ತಾಲೂಕಿನ ಡಿ. ಸಾಲುಂಡಿಯಲ್ಲಿ ಕಳೆದ ವಾರ ಡೆಂಘೀಗೆ ನಾಲ್ವರು ಮಕ್ಕಳು ಬಲಿಯಾಗಿ ಹಲವಾರು ಮಕ್ಕಳು ಜ್ವರದಿಂದ ಬಳಲುತ್ತಿದ್ದವು. ಅವರಿಗೆ ತುರ್ತು ಚಿಕಿತ್ಸೆ ನೀಡಲು ಗ್ರಾಮದ ಶಾಲಾ ಕಟ್ಟಡದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ತೆರೆಯಲಾಗಿತ್ತು. ನಾಲ್ವರು ಮಕ್ಕಳು ಸಾವಿಗೀಡಾದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದ ವರದಿಯನ್ನು ನೋಡಿ ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಗ್ರಾಮಕ್ಕೆ ಭೇಟಿ ನೀಡಿ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು, ನೊಂದ ಪೋಷಕರಿಗೆ ಸಾಂತ್ವನ ಹೇಳಲು ಆಗಮಿಸಿದರು. ಆದರೆ, ಅಧಿಕಾರಿಗಳು ಸಚಿವರನ್ನು ಓಲೈಸಲು ತುರ್ತು ಚಿಕಿತ್ಸಾ ಘಟಕದ ಉದ್ಘಾಟನೆ ನೆರವೇರಿಸಲು ದೀಪಾಲೆ ಕಂಬದ ವ್ಯವಸ್ಥೆ ಮಾಡಿ, ಜ್ಯೋತಿ ಬೆಳಗಿಸುವಂತೆ ಕೋರಿದರು. ಇದರಿಂದ ಕೆರಳಿದ ಖಾದರ್ ನಾನು ಬಂದಿರುವುದು ಉದ್ಘಾಟನೆ ನೆರವೇರಿಸಲು ಅಲ್ಲ. ನೊಂದವರಿಗೆ ಸಾಂತ್ವನ ಹೇಳಲು ಮತ್ತು ಯಾವ ರೀತಿಯ ವ್ಯವಸ್ಥೆ ಮಾಡಿದ್ದೀರಿ ಎಂದು ನೋಡಲು ಎಂದು ಅಧಿಕಾರಿಗಳಿಗೆ ತಮ್ಮ ಖದರ್ ತೋರಿಸಿ, ಬೆವರಿಳಿಸಿದರು.
ಮೇಟಿಯ ಮಂತ್ರಿಗಿರಿ ದೌಲತ್ತು, ನಿಷ್ಠೆ ತಣ್ಣಗಾಯ್ತು!
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರ ಪರಮಾಪ್ತರಲ್ಲಿ ಮಂತ್ರಿಗಿರಿಯ ಕನಸು ಚಿಗುರಿದ್ದು ಸಹಜ. ಕೆಲವರು ಅದಾಗಲೇ ಮಂತ್ರಿಯಾಗಿಯೇ ಬಿಟ್ಟೆ ಎಂದು ಬೀಗಿದವರುಂಟು. ಅಂಥವರಲ್ಲಿ ಸಿದ್ದು ಸಮುದಾಯದವರೇ ಆದ ಬಾಗಲಕೋಟೆ ಶಾಸಕ ಹುಲ್ಲಪ್ಪ ಮೇಟಿ ಮೊದಲಿಗರು.
ಮೇಟಿ ಮೊದಲಿನಿಂದಲೂ ಸಿದ್ದು ಅಭಿಮಾನಿ, ಕಟ್ಟಾ ಬೆಂಬಲಿಗ. ಸಿದ್ದು ಹೇಳಿದರು ಎನ್ನುವ ಕಾರಣಕ್ಕೆ ಹಿಂದೆ ಮಂತ್ರಿ ಸ್ಥಾನ ತ್ಯಜಿಸಿದವರು. ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿಷ್ಠಾವಂತ. ಆದರೆ, ಹಿಂದಿನ ಅವಧಿಯ ಸೋಲು ಅವರನ್ನು ಕಂಗೆಡಿಸಿತ್ತು. ಹಾಗಾಗಿ ಚುನಾವಣೆಯಲ್ಲಿ ಸಿದ್ದು ಅವರನ್ನು ತಮ್ಮ ಕ್ಷೇತ್ರಕ್ಕೆ ಎರಡು ಬಾರಿ ಪ್ರಚಾರಕ್ಕೆ ಕರೆಸಿಕೊಂಡಿದ್ದರು. ಗೆದ್ದರೂ ಕೂಡಾ. ಆದರೆ, ಮೇಟಿ ಅಸಲಿತನ ಅನಾವರಣವಾದದ್ದೇ ಗೆಲುವಿನ ಬಳಿಕ. ಹೀಗೆ ಗೆಲ್ಲುವವರೆಗೆ -ನಮ್ ಸಿದ್ರಾಮಯ್ಯನೋರು ಸಿಎಮ್ಮಾದ್ರೆ ಸಾಕು. ನಾಡಿನ ಬಡವರು, ಹಿಂದುಳಿದವ್ರು, ದಲಿತ್ರು, ಸಾಬ್ರು ಉದ್ದಾರ ಆಗ್ತಾರೆ. ನನಗೆ ಅಧಿಕಾರ ಸಿಕ್ಕರೂ ಅಷ್ಟೇ, ಸಿಗದಿದ್ದರೂ ಅಷ್ಟೇ' ಎಂದು ವೇದಾಂತ ಹೇಳುತ್ತಿದ್ದ ಮೇಟಿ, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಂತ್ರಿಯ ದೌಲತ್ತಿನಲ್ಲಿದ್ದರು! ಇನ್ನೂ ಅಭಿಮಾನಿಗಳು ಮೈಮೇಲೆ ಸುರಿದ ಗುಲಾಲು ಆರಿರಲಿಲ್ಲ. ಆಗಲೆ ಬೆಂಗಳೂರಿನತ್ತ, ದೆಹಲಿಯತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದರು. ಕಾರಣ - ಕಾಂಗ್ರೆಸ್ಸು ಸಾಗರ ಇದ್ದಾಂಗೆ. ಈಗ್ಲೇ ಮಂತ್ರಿಗಿರಿಗೆ ಬೇಡಿಕೆ ಇಡ್ರಿ ಎಂದು ಯಾರೋ ಹೇಳಿದರಂತೆ. ಹಾಗಾಗಿ ಮೇಟಿ ಗೂಟ ಕಿತ್ತ ಎತ್ತಿನಂತೆ ಬಾಗಲಕೋಟೆ ಬಿಟ್ಟು ಬೆಂಗಳೂರಿಗೆ ಓಡಿದರು. ಅಷ್ಟೊತ್ತಿಗೆ ಸಿದ್ದರಾಮಯ್ಯ ಅವರು ತಮ್ಮ ಪರಮಾಪ್ತರಿಗೆಲ್ಲ - 'ಸಚಿವರಾಗಲು ಭಾರಿ ಒತ್ತಡ ಐತೇ ನೀವೆಲ್ಲ ಸುಮ್ಕಿರಿ. ಕುರುಬರ ಪೈಕಿ ನಾನು ಸಿಎಮ್ಮು ಆಗಿರುವುದು ನಮ್ಮ ಸಮುದಾಯಕ್ಕೆ ಸಿಕ್ಕ ದೊಡ್ಡ ಪ್ರಾಧಾನ್ಯತೆ' ಎಂದು ಉಸುರಿದಾಗ ಮೇಟಿಗೆ ಆಕಾಶವೇ ತಲೆಯ ಮೇಲೆ ಬಿದ್ದಾಂಗಾತು. ಅಲ್ಲಿಂದ ದಡಬಡಾಯಿಸಿ ದೆಹಲಿಗೆ ಫ್ಲೈಟ್ ಹತ್ತಿದರು. ತಮ್ಮ ಆರಾದ್ಯ ದೈವ ಸಿದ್ದುವನ್ನು ಕೈ ಬಿಟ್ಟು ಹಿರಿಯ ಕೈ ಮುಖಂಡರ ಕೈ ಹಿಡಿದು ಮಂತ್ರಿಗಿರಿಗೆ ಲಾಬಿ ನಡೆಸಿದರು. ಮೊನ್ನೆ ಶನಿವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯವರಾದ ಎಂಎಲ್‌ಸಿ ಎಸ್.ಆರ್. ಪಾಟೀಲ್ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮೇಟಿಯವರಲ್ಲಿನ ಮಂತ್ರಿಗಿರಿಯ ದೌಲತ್ತಾಗಲಿ- ಸಿದ್ದು ಬಗೆಗಿನ ಪ್ರಾಣಕ್ಕೆ ಪ್ರಾಣ ಕೊಡುವ ನಿಷ್ಠೆ ಎರಡೂ ಆರಿ ತಣ್ಣಗಾಗಿದ್ದವು.
ಉಗುಳು ನುಂಗಿದ ಎಂದು ಬರೆಯಬೇಡಿ!
ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಗರಂ ಆಗಿದ್ದರು. ಶನಿವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಹಿಳಾ ಎಎಸ್‌ಐಗೆ ಲೈಂಗಿಕ ಕಿರುಕುಳದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದರೂ ಪತ್ರಕರ್ತರಿಗೆ ಪಾಠ ಹೇಳುವ ಹೊಸ ಪರಿಪಾಠ ಶುರು ಮಾಡಿದ್ದರು. ಕೆಲವು ಪತ್ರಕರ್ತರ ಪ್ರಶ್ನೆಗಳಿಗೇ ಉತ್ತರ ನೀಡಲೇ ಇಲ್ಲ. 'ಅದು ನಿನ್ನೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ್ದೇನೆ. ಪದೇ ಪದೇ ಉತ್ತರ ನೀಡಿದರೆ. ಹೇಳಿದ್ದನ್ನೇ ಹೇಳುವ ಪೂಜಾರಿ ಎಂದು ಬರೆಯುತ್ತೀರಿ. ಅದಕ್ಕೆ ಉತ್ತರ ನೀಡುವುದಿಲ್ಲ' ಎಂದರು. ಪ್ರಶ್ನೆಗೆ ಉತ್ತರ ನೀಡದಿದ್ದರೆ 'ಉಗುಳು ನುಂಗಿದ ಪೂಜಾರಿ' ಎಂದು ಬರೆಯುವ ಅಗತ್ಯ ಇಲ್ಲ ಎಂದು ಪದೇ ಪದೇ ಇದನ್ನೇ ಮೂರು ಬಾರಿ ಪೂಜಾರಿ ಹೇಳಿದ್ದು ಈ ಬಾರಿಯ ವಿಶೇಷ. ಸಿಟ್ಟಿನಲ್ಲಿ ಉಗುಳು ಹಾರಿತೊ ಗೊತ್ತಿಲ್ಲ. ಆದರೆ ಈ ಬಾರಿ ಉಗುಳು ನುಂಗಿಕೊಳ್ಳುವ ಸರದಿ ಪತ್ರಕರ್ತರದ್ದು!
-ನಂಬೀರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

